(ಇಂದು ಅಪ್ಪನ ದಿನ)
ಅಪ್ಪ ಎಂದರೆ ಅಗಾಧ ಅವಕಾಶ ತೋರುವ ಆಕಾಶ. ಸದಾ ನೆರಳಾಗುವ ವಿಶಾಲ ಹೆಮ್ಮರ. ಆತ್ಮೀಯ ಗೆಳೆಯ, ದಾರಿ ತೋರುವ ಗುರು, ಶಿಸ್ತಿನ ರಿಂಗ್ ಮಾಸ್ಟರ್, ಆಪ್ತ ಸಮಾಲೋಚಕ ಹೀಗೆ ಮಕ್ಕಳ ಪಾಲಿಗೆ ಅಪ್ಪ ಬಹುಪಾತ್ರಧಾರಿ. ಇಂಥ ಅಪ್ಪನ ಜೊತೆಗಿನ ಭಾವನಾತ್ಮಕ ಸನ್ನಿವೇಶಗಳನ್ನು ಅಪ್ಪನ ದಿನಕ್ಕೆ ಹಂಚಿಕೊಳ್ಳುವಂತೆ ವಿಜಯ ಕರ್ನಾಟಕ ನೀಡಿದ ಕರೆಗೆ ಸಾವಿರಾರು ಓದುಗರು ಪ್ರತಿಕ್ರಿಯಿಸಿದ್ದಾರೆ. ಅಪ್ಪನ ಒಡನಾಟ, ಅಪ್ಪನ ಸೂರ್ತಿ, ಪ್ರೇರಣೆ, ಹೃದಯಸ್ಪರ್ಶಿ ಸನ್ನಿವೇಶ… ಹೀಗೆ ಅನೇಕ ಸಂಗತಿಗಳನ್ನು ಹೊರ ಹಾಕಿದ್ದಾರೆ. ಆಯ್ದ ಪತ್ರಗಳನ್ನು ಇಲ್ಲಿ ಪ್ರಕಟಿಸಲಾಗಿದೆ.
ಕೆಲಸ ಬಿಟ್ಟಾಗ ನನ್ನ ಜತೆ ನಿಂತರು : ನಾನು ಎಂಜಿನಿಯರಿಂಗ್ ಡಿಸ್ಟಿಂಕ್ಷನ್ನಲ್ಲಿ ಪಾಸ್ ಮಾಡಿ ಇನ್ಫೋಸಿಸ್ನಲ್ಲಿ ಕೆಲಸ ಗಿಟ್ಟಿಸಿಕೊಂಡಾಗ ಬಹಳ ಖುಷಿ ಪಟ್ಟಿದ್ದರು ನಮ್ಮ ತಂದೆ. ಹಾಗೆಯೇ ಅದನ್ನು ಬಿಟ್ಟು ಸಿನಿಮಾ ಮಾಡುತ್ತೇನೆ ಎಂದು ಬಂದಾಗ ನನ್ನ ಜತೆ ನಿಂತು, ನೀನು ಏನಾದರೂ ಸಾಧನೆ ಮಾಡುತ್ತೀಯಾ ಹೋಗು ಎಂದಿದ್ದರು. ಹೀಗೆ ನಿರ್ದೇಶಕರೊಬ್ಬರ ಬಳಿ ಸೇರಿಕೊಂಡಾಗ ಅವರು ಹೇಳಿದ ಮಾತೊಂದನ್ನು ನಾನು ಮರೆಯಲು ಸಾಧ್ಯವಿಲ್ಲ. ‘‘ಸುಖಾಸುಮ್ಮನೇ ನಾಲ್ಕೈದು ಕಡೆ ತಿರುಗಾಡಬೇಡ. ಒಬ್ಬರ ಬಳಿ ಎರಡು ವರ್ಷ ಕೆಲಸ ಮಾಡು. ಆಗ ನಿನಗೆ ಅನುಭವ ಹೆಚ್ಚಾಗಿ ಸಿಗುತ್ತದೆ,’’ ಎಂದಿದ್ದರು. ನಾನು ಚಿಕ್ಕವನಿದ್ದಾಗ ಆಗಾಗ ಆರೋಗ್ಯ ಕೆಡುತ್ತಿತ್ತು. ಆಗೆಲ್ಲ ನನ್ನನ್ನು ಹೆಗಲ ಮೇಲೆ ಹೊತ್ತುಕೊಂಡು ಲೆಕ್ಕವಿಲ್ಲದಷ್ಟು ಆಸ್ಪತ್ರೆಗಳಿಗೆ ಅಲೆದಿದ್ದಾರೆ ಅಪ್ಪ. ನನ್ನಪ್ಪ ಒಬ್ಬ ಶಿಕ್ಷಕ ಎನ್ನುವುದು ನನಗೆ ಮತ್ತೊಂದು ಹೆಮ್ಮೆಯ ವಿಚಾರ. – ಡಾಲಿ ಧನಂಜಯ ಚಿತ್ರ ನಟ.
ಸರಳವಾಗಿರಲು ಅವರೇ ಸೂರ್ತಿ : ವಾಸುಕಿ ವೈಭವ್ ಸರಳ ವ್ಯಕ್ತಿ ಎಂದು ಜನ ಹೇಳುತ್ತಾರೆ. ಅದಕ್ಕೆ ಮುಖ್ಯ ಕಾರಣ ನನ್ನ ತಂದೆ ಜಯರಾಮ್. ಮಕ್ಕಳು ಎಂಜಿನಿಯರ್ ಆಗಲಿ, ಡಾಕ್ಟರ್ ಆಗಲಿ ಎಂದು ಆಸೆ ಪಡುವ ಈ ಕಾಲದಲ್ಲಿ ನಾನು ಹಾಡುಗಾರ, ಸಂಗೀತ ನಿರ್ದೇಶಕನಾಗಲು ಅವರೇ ಸ್ಫೂರ್ತಿ ನೀಡಿದರು. ನನಗೆ ಮರೆಯಲಾಗದ ಘಟನೆ ಎಂದರೆ ಒಮ್ಮೆ ನನಗೆ ಸೈನಸ್ನಿಂದಾಗಿ ಮೂಗು ಆಪರೇಷನ್ ಆಗಿತ್ತು. ಆಗ ಮೂಗಿಗೆ ಪೂರ್ಣ ಹತ್ತಿ ತುಂಬಿದ್ದರು. ಬಾಯಿಯಲ್ಲೇ ಉಸಿರಾಡಬೇಕಿತ್ತು. ಊಟ ಮಾಡಲು ತೊಂದರೆಯಾಗುತ್ತಿತ್ತು. ನನ್ನ ಕಷ್ಟ ನೋಡಿದ ಅಪ್ಪ ಒಂದು ಟೆಕ್ನಿಕ್ ಹೇಳಿಕೊಟ್ಟು ಊಟ ಮಾಡಿಸಿದರು. ಅವರು ಆ ಟೆಕ್ನಿಕ್ ಕಲಿತುಕೊಂಡದ್ದು ತಾವು ಒಂದು ಪ್ಲೇಟ್ ಇಡ್ಲಿ ತೆಗೆದುಕೊಂಡು ಅದನ್ನು ಮೂಗು ಮುಚ್ಚಿಕೊಂಡು ತಿಂದು ಅಭ್ಯಾಸ ಮಾಡುವ ಮೂಲಕ ಎಂದು ನನಗೆ ಆಗ ತಿಳಿಯಿತು. ಈ ಸನ್ನಿವೇಶವನ್ನು ನಾನು ಎಂದಿಗೂ ಮರೆಯಲ್ಲ. ಇಂಥ ಸಾಕಷ್ಟು ನೆನಪುಗಳು ನನ್ನಪ್ಪನೊಂದಿಗೆ ನನಗಿವೆ. -ವಾಸುಕಿ ವೈಭವ್, ಸಂಗೀತ ನಿರ್ದೇಶಕ.
ಸ್ಫೂರ್ತಿ ತುಂಬಿದ ಬಿಂದಾಸ್ ಅಪ್ಪ : ನನ್ನ ಎರಡನೇ ಪಿಯುಸಿ ಪರೀಕ್ಷೆಯ ಹಿಂದಿನ ದಿನ ರಾತ್ರಿ ಹನ್ನೆರಡೂವರೆಗೆ ಅಮ್ಮನನ್ನ ಎಬ್ಬಿಸಿದೆ. ನನಗೆ ವಾಂತಿ ಬರುವ ಹಾಗೆ ಆಗುತ್ತಿದೆ ಎಂದೆ. ಅಣ್ಣನೂ ಎದ್ದು ಪಕ್ಕ ಬಂದು ಕುಳಿತು ಏನಾಯ್ತು ಎಂದರು. ‘‘ಬೆನ್ನ ಮೇಲೆ ಕೈಯಿಟ್ಟು ನಿನಗೆ ನಾಳೆ ಎಕ್ಸಾಮ್ ಇದೆಯಲ್ಲ ಅದರ ಆತಂಕ ಅಷ್ಟೇ ಅದಕ್ಕೆ ಹೀಗಾಗುತ್ತಿದೆ. ಆರಾಮಾಗಿರಯ್ಯಾ. ನಪಾಸಾದರೆ ಆಮೇಲೆ ಮತ್ತೆ ಪಾಸಾಗಬಹುದು,’’ ಎಂದರು. ಸಮಾಧಾನವಾಯಿತು. ಬೆಳಗ್ಗೆ ಬೇಗ ಎದ್ದು ಬರೆಯಲು ಪೆನ್ನು ಹಿಡಿಯಲು ಹೋದರೆ ಕೈ ನಡುಗುತ್ತಿದೆ! ಮತ್ತೆ ಅಣ್ಣ-ಅಮ್ಮನನ್ನ ಎಬ್ಬಿಸಿದೆ. ಅಣ್ಣ ಅಮ್ಮನಿಗೆ ಕಾಫಿ ಮಾಡಲು ಹೇಳಿ, ಬಾರಯ್ಯ ಅಂತ ಮನೆಯಿಂದ ಹೊರಗೆ ಕರೆ ತಂದರು. ಆರಾಮಾಗಿ ಕಾಫಿ ಕುಡಿದು ಸ್ನಾನ ಮಾಡಿ, ದೇವರ ಪ್ರಾರ್ಥನೆ ಮಾಡು, ನಿನ್ನಿಷ್ಟದ ತಿಂಡಿ ಮಾಡಿಸಿಕೊಂಡು ತಿಂದು ಪರೀಕ್ಷೆಗೆ ಹೋಗು. ಎಷ್ಟು ಬರುತ್ತೋ ಅಷ್ಟು ಬರಿ ಸಾಕು ಅಂದರು. ಪುಸ್ತಕ, ಪೆನ್ನು ಮುಟ್ಟಲು ಬಿಡಲಿಲ್ಲ. ಪರೀಕ್ಷೆ ಮುಗಿದು ಫಲಿತಾಂಶ ಬಂತು. ಕಾಲೇಜಿಗೆ ಫಸ್ಟ್ ಬಂದಿದ್ದೆ. ಅಣ್ಣ ಯಾವತ್ತೂ ಬಿಂದಾಸ್! ಪರಿಸ್ಥಿತಿ ಮತ್ತು ಸನ್ನಿವೇಶಕ್ಕೆ ತಕ್ಕಂತೆ ನಾವು ಹೊಂದಿಕೊಂಡು ಹೋದರೆ ಸಾಕು ಎಂಬ ಜೀವನೋತ್ಸಾಹ ಅವರದ್ದು.-ರಂಗಸ್ವಾಮಿ ಮೂಕನಹಳ್ಳಿ, ಬೆಂಗಳೂರು.
ಬಿಕ್ಕಿ ಬಿಕ್ಕಿ ಅಳುತ್ತಿದ್ದರು : ಅದು ನನ್ನ ಮದುವೆ ಸಮಯ. ಅರಿಯದ ಮನೆಗೆ ಹೋಗಬೇಕೆಂಬ ಅವ್ಯಕ್ತ ಭಯ. ಆಗ ಅಪ್ಪ ನನ್ನ ಹತ್ರ ಬಂದು ‘‘ರಾಯರ ಅನುಗ್ರಹದಿಂದ ನೀ ಹುಟ್ಟಿರೋದು. ಹಾಗಾಗಿ ಏನೂ ಆಗಲ್ಲ,’’ ಎಂದು ಧೈರ್ಯ ತುಂಬಿದರು. ಮದುವೆಯ ಮಾರನೆ ದಿನ ನನ್ನ ಕರೆದುಕೊಂಡು ಹೋಗುವ ಸಮಯ. ಎಲ್ಲರಿದ್ದರೂ ಅಷ್ಟೊತ್ತು ಇದ್ದ ಅಪ್ಪ ಕಾಣಿಸಲೇ ಇಲ್ಲ. ತುಂಬಾ ದುಃಖವಾಯ್ತು. ಅಪ್ಪ ಯಾಕೆ ಈ ಸಮಯದಲ್ಲಿ ಕಾಣ್ತಾ ಇಲ್ಲ ಅಂತ ಹುಡುಕಿದಾಗ, ಕಲ್ಯಾಣ ಮಂಟಪದ ಒಂದು ಕೋಣೆಯಲ್ಲಿ ಅಳ್ತಾ ಇದ್ದಾರೆ ಅಂತ ಯಾರೋ ಹೇಳಿದರು. ಓಡಿ ಹೋಗಿ ನೋಡಿದಾಗ ಬಿಕ್ಕಿ ಬಿಕ್ಕಿ ಅಳ್ತಾ ಇದ್ರು. ಯಾಕಪ್ಪ ಅಂದಾಗ, ನನ್ನ ಅಮ್ಮನಂತೆ ನೀನು ಕಣ್ಣೀರು ತುಂಬ್ಕೊಂಡು ನನ್ನತ್ತ ನೋಡಿದಾಗ ತಡೆಯಲಾರದೇ ಹೋದೆ. ಎಂದಿಗೂ ಅವರ ಕಣ್ಣೀರು ನೋಡದ ನಾನು ಆದ್ರ್ರಳಾಗಿದ್ದೆ. – ಚಂದ್ರಿಕಾ ಚಂದ್ರಕಾಂತ್, ಬಳ್ಳಾರಿ.
ಆತ್ಮವಿಶ್ವಾಸ ತುಂಬಿದ ಮಾರ್ಗದರ್ಶಕ : ನನ್ನ ತಂದೆ ತುತ್ತು ಕೊಟ್ಟು ಬೆಳೆಸಲಿಲ್ಲ; ತಿನ್ನಲು ಕಲಿಸಿದರು, ನನ್ನನ್ನು ಕೈಹಿಡಿದು ನಡೆಸಲಿಲ್ಲ; ನಾನೇ ಸ್ವತಃ ನಡೆಯುವಂತೆ ಮಾಡಿದರು. ಹಾಗೆಯೇ ಬದುಕನ್ನು ನೋಡಿ ಕಲಿ ಎಂದು ಪರೋಕ್ಷವಾಗಿ ತೋರಿಸಿದರು. ಆ ದಿವಸ ಇನ್ನೂ ಚೆನ್ನಾಗಿ ಜ್ಞಾಪಕವಿದೆ. ‘‘ಪೂರ್ಣಿ, ಉಪ್ಪಿಟ್ಟು ಮಾಡ್ಬಿಡು ಇನ್ನೇನ್ಬೇಡ,’’ ಎಂದದ್ದು ಬಹುಶಃ ಇನ್ನು ಮುಂದೆ ಪ್ರಪಂಚವೇ ಬೇಡ ಎಂಬುದರ ಅರ್ಥವೇನೊ! ಬೆಳಗ್ಗೆ ಮಾಡಿದ್ದ ಉಪ್ಪಿಟ್ಟನ್ನು ರಾತ್ರಿಗೂ ಇದೇ ಇರಲಿ ಮತ್ಯಾಕೆ ಬೇರೆ ಅಡುಗೆ ಮಾಡ್ತೀಯ ನಾಳೆಗೆ ವೇಸ್ಟು ಎಂದು ತಿಂದು ಮಲಗಿದಷ್ಟೇ, ಬೆಳಗ್ಗೆ ಅಮ್ಮ ಎಬ್ಬಿಸಿದಾಗ ಅಲುಗಾಡಲೇ ಇಲ್ಲದೇ ನಿಸ್ತೇಜವಾಗಿ ಮುಗುಳ್ನಗೆಯೊಂದಿಗೆ ಮಲಗಿತ್ತು ಅವರ ದೇಹ. ಯಾರು ಇರಲಿ, ಬಿಡಲಿ. ಇಂದು ನಾನು ಧೈರ್ಯದಿಂದ ಈ ಸಮಾಜವನ್ನು ಎದುರಿಸುವಂತೆ ಮಾಡಿದ್ದು ಅಪ್ಪನೇ.-ಆರ್. ಪೂರ್ಣಶ್ರೀ, ಬೆಂಗಳೂರು.
ಅಪ್ಪ ಮಾಡಿದ ಮಾಸ್ಟರ್ಪ್ಲ್ಯಾನ್! : ನನ್ನಪ್ಪ ವೃತ್ತಿಯಿಂದ ಹಮಾಲಿ ಕೆಲಸ ಮಾಡಿ ರಟ್ಟೆ ಮುರಿದು ದುಡಿದ ಕಾಯಕ ಯೋಗಿ. ನಾಲ್ಕು ದಶಕದ ಹಿಂದಿನ ಘಟನೆ ನನ್ನ ಸ್ಮೃತಿ ಪಟಲದಲ್ಲಿ ಇನ್ನು ಹಾಗೆಯೇ ಇದೆ. ನಾನು ಯೌವನಕ್ಕೆ ಕಾಲಿಡುತ್ತಿದ್ದ ದಿನಗಳು. ಶಾಲೆ ಬಿಟ್ಟಿದ್ದೆ. ಊಟ, ನಿದ್ದೆ ನಿತ್ಯದ ದಿನಚರಿಯಾಗಿತ್ತು. ಇದು ನನ್ನ ಅಪ್ಪನಿಗೆ ಕಾಡುತ್ತಿತ್ತು. ಅದೊಂದು ದಿನ ಊಟ ಮಾಡಿ ಮಧ್ಯಾಹ್ನ ಗಡದ್ದಾಗಿ ಮಲಗಿದ್ದೆ. ನನಗೆ ಬುದ್ಧಿ ಕಲಿಸಲು ಅಪ್ಪ ಮಾಸ್ಟರ್ ಪ್ಲ್ಯಾನ್ ಮಾಡಿದ್ದ. ಮಲಗಿದಲ್ಲಿಯೇ ನಾನು ಕೊನೆಯ ಉಸಿರು ಬಿಟ್ಟಿದ್ದೇನೆ ಅಂತ ಓಣಿಯ ಕೆಲ ಜನರನ್ನು ಮನೆಗೆ ಕರೆತಂದ. ಆಗ, ಅಗಸರ ಬಸಪ್ಪ ಮೈದಡವಿ ಎಬ್ಬಿಸಿದ. ಎಚ್ಚರಗೊಂಡೆ. ‘‘ನಿಮ್ಮ ಅಪ್ಪ ದುಡಿಯಾಕ ಹತ್ಯಾರ, ನೀವು ಹರೆಯದವರಾಗಿ ಬಾಳೆ ಬದುಕಿನ ಚಿಂತೆ ಬಿಟ್ಟು ಹಿಂಗ ಮಲಗಿದರ ಹೆಂಗ?,’’ ಅಂತ ಛೀಮಾರಿ ಹಾಕಿದರು. ಆವತ್ತೇ ಕೊನೆ. ನನ್ನಲ್ಲಿರುವ ಜಡತ್ವಕ್ಕೆ ಮಂಗಳ ಹಾಡಿದೆ. ಶಾಲೆ ಬಿಟ್ಟ 8 ವರುಷದ ನಂತರ ಎಸ್ಸೆಸ್ಸೆಲ್ಸಿ 3ನೇ ಚಾನ್ಸ್ಗೆ ಬಾಹ್ಯ ವಿದ್ಯಾರ್ಥಿಯಾಗಿ ಪಾಸ್ ಮಾಡಿಕೊಂಡೆ. ಡಿಗ್ರಿ ಓದದಿದ್ದರೂ ವಿಶ್ವವಿದ್ಯಾಲಯಕ್ಕೆ ನನ್ನ ಕವಿತೆ ಪಠ್ಯಪುಸ್ತಕವಾಯ್ತು. -ಎ ಎಸ್ ಮಕಾನದಾರ, ಗದಗ.
ಡಾಕ್ಟರ್ ಆದ್ಮೇಲೇನೇ ಮದುವೆ ಅಂದ್ರು : ನಾನು ಇವತ್ತು ವೈದ್ಯೆ ಆಗಲು ನನ್ನ ಅಪ್ಪನೇ ಕಾರಣ. ಒಂದನೇ ತರಗತಿಯಿಂದ ವೈದ್ಯೆ ಆಗಬೇಕೆಂದು ಬಯಸಿದ್ದೆ. ಸೆಕೆಂಡ್ ಪಿಯುಸಿ ಮುಗಿದ ಮೇಲೆ ಮೇಲೆ ಎಲ್ಲರೂ ಡಿಗ್ರಿ ಓದಿಸಿ, ನಂತರ ಮದುವೆ ಮಾಡಿ ಕೈ ತೊಳೆದುಕೊಳ್ಳಿ ಅಂದಾಗ ಎಲ್ಲರಿಗೂ ಬೈದು ನನ್ನ ಕನಸಿಗೆ ನೀರು ಎರೆದು ಬಿಎಎಂಎಸ್ ಮಾಡಿಸಿ, ನಂತರ ಎಂಡಿ ಆಗೋ ತನಕ ಅವಳಿಗೆ ಮದುವೆ ಮಾಡಲ್ಲ ಅಂತ ಹೇಳಿ ನನ್ನ ಹಿಂದೆ ಬೆಂಗಾವಲಾಗಿ ನಿಂತ ನನ್ನಪ್ಪನಿಗೆ ಶತಕೋಟಿ ನಮನಗಳು.-ಡಾ. ಚಂದ್ರಕಲಾ ಎಸ್.ಪುತ್ರನ್, ಆಯುವೇದ ತಜ್ಞೆ, ಬೆಂಗಳೂರು.
ಅಮ್ಮನ ಕಾಳಜಿ ತೋರಿದ ಅಪ್ಪ : ಆಗ ನನಗೆ 13 ವರ್ಷ. ತಿಂಗಳ ಋುತುಚಕ್ರ ಶುರುವಾದಾಗ ವಿಪರೀತ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿತ್ತು. ಆಗೆಲ್ಲ ನಮ್ಮ ತಂದೆ ‘‘ಶಾಲೆಯ ಹೋಮ್ ವರ್ಕ್ ಏನೂ ಬೇಡ. ಬೇಗ ಊಟ ಮಾಡಿ ಮಲ್ಕೋ. ಎಷ್ಟು ಹೊಟ್ಟೆ ನೋಯ್ತಾ ಇದೆಯೋ ಏನೋ? ಏಯ್, ವಸಂತಿ… ಅವಳಿಗೆ ಬೇಗ ಊಟ ಹಾಕು. ಪಾಪ, ಮಲಗಲಿ,’’ ಎಂದು ಸಂಜೆಯ ವೇಳೆಗೆ ಹೇಳುತ್ತಿದ್ದರು. ತಾಯಿಯ ಅಂತಃಕರಣ ಅವರಲ್ಲಿತ್ತು. -ರಾಧಿಕಾ ***616.
ಉಪನ್ಯಾಸಕಿಯಾಗಲು ಅವರೇ ಪ್ರೇರಕ : ನಮ್ಮ ತಂದೆಗೆ ನಾವಿಬ್ಬರೇ ಹೆಣ್ಣುಮಕ್ಕಳು. ಇಬ್ಬರೂ ಸದಾ ಪ್ರಥಮ ವರ್ಗದಲ್ಲಿ ಪಾಸಾಗುತ್ತಿದ್ದೆವು. 9ನೇ ತರಗತಿಯಲ್ಲಿದ್ದಾಗ ಮೊದಲಿನ ಸ್ಥಾನ ತಪ್ಪಿತು. ನಾನು ಹೈಸ್ಕೂಲಿಗೆ ಹೋಗಲಾರೆ ಎಂದು ಹಟ ಹಿಡಿದು ಕುಳಿತಾಗ ತಂದೆಯವರು ‘‘ಮಗಳೇ ಜೀವನದಲ್ಲಿ ಏಳು ಬೀಳು ಸಾಮಾನ್ಯ. ಇಂದು ನಿನ್ನನ್ನು ಕೆಳಗೆ ಮಾಡಿ, ನಿಲ್ಲಿಸಿದವರ ಮುಂದೆ ಧೈರ್ಯದಿಂದ ಬೆಳೆದು ತೋರಿಸು,’’ ಎಂದು ಹುರಿದುಂಬಿಸಿದರು. ಉನ್ನತ ಶಿಕ್ಷ ಣ ಪಡೆದು ಇಂದು ರಸಾಯನ ಶಾಸ್ತ್ರ ವಿಷಯದ ಉಪನ್ಯಾಸಕಿಯಾಗಿ ಗ್ರಾಮೀಣ ಮಕ್ಕಳಿಗೆ ಸೇವೆಸಲ್ಲಿಸುವಾಗೆಲ್ಲ ಅಪ್ಪನ ಮಾತುಗಳು ನೆನಪಾಗುತ್ತವೆ. -ಗಾಯತ್ರಿ ವಿ. ಹುದ್ದಾರ್, ಧಾರವಾಡ.
ನಮ್ಮ ಅಪ್ಪನ ಗಾಂಧಿಗಿರಿ! : 6ನೇ ತರಗತಿಯಲ್ಲಿ ಓದುತ್ತಿದ್ದ ದಿನಗಳಲ್ಲಿ ನಡೆದ ಘಟನೆ ಇದು. ಖಾಸಗಿ ವಾಹನದಲ್ಲಿ ನಾವು ಹತ್ತು ಮಕ್ಕಳು ಹೋಗುತ್ತಿದ್ದವು. ಅದರಲ್ಲಿ ಬರುತ್ತಿದ್ದ ಹಿರಿಯ ಹುಡುಗ ಪ್ರತಿ ದಿನ ಹೊಡೆದು, ಚಿವುಟಿ ಉಪಟಳ ಕೊಡುತ್ತಿದ್ದ. ನನಗೆ ಅಳುತ್ತಾ ಬರುವುದೇ ದಿನಚರಿಯಾಯಿತು. ಇದನ್ನು ಗಮನಿಸಿದ ಅಪ್ಪ ಸಮಾಧಾನ ಮಾಡಿದರು. ಮರು ದಿನ ವಾಹನದಲ್ಲಿ ಬಂದು ಆ ಬಾಲಕನಿಗೆ ‘‘ನೀನು ಮಾಡುತ್ತಿರುವುದು ಸರಿಯಲ್ಲ. ಆತ ನಿನಗೂ ಗೆಳೆಯನಲ್ಲವೇ. ಆತನೊಂದಿಗೆ ಸರಿಯಾಗಿರು,’’ ಎಂದು ಮನಮುಟ್ಟವ ಹಾಗೆ ಹೇಳಿದರು. ಕಿರುಕುಳ ಕೊಡುತ್ತಿದ್ದ ಹುಡುಗನಿಗೂ ಆತನ ತನ್ನ ತಪ್ಪು ಅರಿವಾಗಿತ್ತು. ಮತ್ತೆಂದೂ ಆತ ಉಪಟಳ ಕೊಡಲಿಲ್ಲ. -ಪ್ರಣೀತ್ ರಾವ್, ಮಂಗಳೂರು.
ಅಪ್ಪ ನೀವೇ ನಮ್ಮ ಸೂಪರ್ ಹೀರೋ : ನಮ್ಮ ತಂದೆಯೇ ನಮ್ಮ ಮೊದಲ ಸೂಪರ್ ಹೀರೋ. ನಮ್ಮ ಸೂರ್ತಿ ಅವರು. ನಮ್ಮೆಲ್ಲ ನಿರ್ಧಾರ ಮತ್ತು ಆಸೆ, ಆಕಾಂಕ್ಷೆಗಳಿಗೆ ಬೆಂಗಾವಲಾಗಿ ನಿಂತಿದ್ದಾರೆ. ಅವರಿರುವ ಇಂದಿನ ಸ್ಥಾನಕ್ಕೆ ಅವರ ಕಠಿಣ ಪರಿಶ್ರಮವೇ ಕಾರಣ ಮತ್ತು ಅದೇ ನಮಗೆ ಸೂರ್ತಿಯಾಗಿದೆ. ನಾವು ಎಲ್ಲೇ ಹೋದರೂ ಡಾ.ರಾಮಚಂದ್ರ ಅವರ ಮಕ್ಕಳು ಎಂದು ಗುರುತಿಸುತ್ತಾರೆ ಮತ್ತು ಅದು ನಮಗೆ ಹೆಮ್ಮೆ ಮೂಡಿಸುತ್ತದೆ. ಪಪ್ಪಾ, ನಾವು ಕೇಳುವುದಕ್ಕಿಂತ ಮುಂಚೆಯೇ ಅತ್ಯುತ್ತಮವಾದುದ್ದನ್ನೇ ನಮಗೆ ಕೊಟ್ಟಿದ್ದೀರಿ. ಅಂಥ ಅದ್ಭುತ ಅಪ್ಪ ನೀವು. ವಿ ಲವ್ ಯೂ ಅಪ್ಪಾ.- ಶಮಿತಾ ಮತ್ತು ಅನ್ವಿತಾ, ಬೆಂಗಳೂರು (ಕಿದ್ವಾಯಿ ಆಸ್ಪತ್ರೆ ನಿರ್ದೇಶಕ ಡಾ. ಸಿ ರಾಮಚಂದ್ರ ಅವರ ಪುತ್ರಿಯರು)
ಹಾಸ್ಟೆಲ್ನಿಂದ ಬಂದಾಗ ತಬ್ಬಿ ಜೋರಾಗಿ ಅತ್ತರು : ನಾನು ಪದವಿ ವಿದ್ಯಾಭ್ಯಾಸಕ್ಕೆಂದು ಹಾಸ್ಟೆಲ್ಗೆ ಸೇರಿದ್ದೆ. ರಜೆಯಲ್ಲಿ ಮನೆಗೆ ಬಂದಾಗ ದಿವಾನದಲ್ಲಿ ಮಲಗಿದ್ದ ಅಪ್ಪ ದಡಕ್ಕನೆ ಎದ್ದು, ‘‘ನಿನ್ನ ಬಿಟ್ಟು ಒಂದು ಕ್ಷಣ ಇರಲಾರೆ ಮಗು. ನೀನು ಯಾವ ಹಾಸ್ಟೆಲ್ಗೂ ಹೋಗುವುದು ಬೇಡ,’’ ಅಂಥ ನನ್ನ ಹಣೆಗೆ ಮುತ್ತನ್ನು ಇಟ್ಟು ನನ್ನನ್ನು ಅಪ್ಪಿಕೊಂಡು ಜೋರಾಗಿ ಅತ್ತುಬಿಟ್ಟರು. 25 ವರ್ಷದ ಬಳಿಕವೂ ಆ ಒಂದು ಸನ್ನಿವೇಶ ನನ್ನ ಮನಸ್ಸಿನಲ್ಲಿ ಮರೆಯಲಾರದೆ ಸದಾ ಅಚ್ಚೊತ್ತಿ ಉಳಿದಿದೆ.-ಬಿ. ಶೀಲಾ ಪ್ರಶಾಂತ್ ಕಾಟಕೇರಿ ಗ್ರಾಮ, ಮಡಿಕೇರಿ.
ಎಂಥಾ ಶ್ರೀಮಂತ ನಮ್ಮಪ್ಪ! : ಅಪ್ಪ. ಇವೆರಡು ಅಕ್ಷರ ನನ್ನ ಬದುಕಿನ ಉಸಿರು, ಅಪ್ಪನಿಲ್ಲದ ನಾನು ಮತ್ತು ನನ್ನ ತಂಗಿ ಏನೆಂದರೆ ಏನೂ ಅಲ್ಲ, ಅವನೊಬ್ಬ ಎಂದೂ ಬತ್ತದ ಉತ್ಸಾಹದ ಬುಗ್ಗೆ, ನಮ್ಮಪಾಲಿನ ಪ್ರೇರಣೆಯ ಗಣಿ, ಅಪ್ಪ ಎನ್ನುವುದಕ್ಕಿಂತ ಅತ್ಯಂತ ಆಪ್ತ ಗೆಳೆಯನಂತೆ ನಮ್ಮೊಂದಿಗೆ ಬೆರೆಯಬಲ್ಲ ಜೀವವದು. ನಮ್ಮ ಪ್ರಾಣವದು! ಓದುವ ವಿಚಾರ ಬಂದರೆ ನನ್ನಪ್ಪ ಹೇಳುತ್ತಾನೆ; ನೀವು ರ್ಯಾಂಕ್ ಬರದಿದ್ದರೂ ಚಿಂತೆಯಿಲ್ಲ, ಸಜ್ಜನ ಸಮಾಜದ ಕೀರ್ತಿವಂತ ಮಕ್ಕಳಾಗಿ ಬೆಳೆದರಷ್ಟೇ ಸಾಕು. ನನಗೆ ಬೇಕಿರುವುದು ರ್ಯಾಂಕ್ ಅಲ್ಲ, ಸದಾ ಖುಷಿಯಲ್ಲಿರುವ ನನ್ನ ಮಕ್ಕಳು. ಎಂಥಾ ಶ್ರೀಮಂತ ವಿಚಾರ ಅಲ್ಲವೇ? – ಶ್ರದ್ಧಾ ಮತ್ತು ಶ್ರೇಯಾ ದಿನೇಶ್ ಜೈನ್, ಹುಬ್ಬಳ್ಳಿ.
ಮತ್ತೆ ಅಂಥ ತಪ್ಪು ಮಾಡಲಿಲ್ಲ : ನನಗೆ 12 ವರ್ಷ ಇರಬಹುದು. ಹೀಗೆ ಒಂದು ದಿನ ಬೆಳಗ್ಗೆ ಅಂಗಡಿಗೆ ಕಳ್ಸಿದ್ರು ನಾನು ಹೋಗಿ ಬರ್ತಾ ಸ್ನೇಹಿತರು ಆಟ ಆಡ್ತಾ ಇದ್ರು ಅಂತ ನಾನು ಆಟ ಆಡೋಕೆ ಹೋದೆ. ಅದು ಸ್ಕೂಲ್ಗೆ ಹೋಗೋ ಟೈಂ. ಇನ್ನೂ ಬರ್ಲಿಲ್ಲ ಅಂತ ಅಪ್ಪನೇ ನನ್ನ ಹುಡುಕಿಕೊಂಡು ಬಂದ್ರು. ನನ್ನ ಚೆನ್ನಾಗಿ ಹೊಡೆದುಕೊಂಡು ಮನೆಗೆ ಕರ್ಕೊಂಡು ಹೋದ್ರು. ಅಳ್ತಾ ಇದ್ದೆ. ನನ್ನ ಕೈ ಕಾಲು ತೊಳೆದು ಸ್ಕೂಲ್ ಯೂನಿಫಾರ್ಮ್ ಹಾಕಿ ಜಡೆ ಹಾಕ್ ಬೇಕಾದ್ರೂ ಅಳ್ತಾನೇ ಇದ್ದೆ. ಆದರೆ, ಹಿಂದೆ ನೋಡಿದ್ರೆ ಅಪ್ಪನೂ ನನ್ನ ಜೊತೆ ಅಳ್ತಾ ಇದ್ರು. ನಂಗೆ ಹೊಡೆದೆ ಅಂತ. ಅದೇ ಅಲ್ವಾ ತಂದೆ ಪ್ರೀತಿ? ನಾನು ಮತ್ತೆ ಅಂಥ ತಪ್ಪು ಮಾಡಲಿಲ್ಲ. ಅವರು ಟೈಮ್ಗೆ ಏನು ಮಾಡಬೇಕೋ ಅದರ ಕಡೆ ನಮ್ಮ ಗಮನ ಇರ್ಬೇಕು ಅಂತ ಹೇಳಿ ಕೊಟ್ಟರು. ಆಗಿನಿಂದ ಸಮಯಪಾಲನೆ ನಾನು ತಪ್ಪಿಸಿಲ್ಲ. -ಸರಸ್ವತಿ ಬಿ. ಯಲಹಂಕ, ಬೆಂಗಳೂರು.