ಬೇರೆ ರಾಜ್ಯಗಳಲ್ಲಿ ಹೇಗಿದೆ ಭೂ ಖರೀದಿ?

ಕರ್ನಾಟಕದಲ್ಲಿ ಕೃಷಿಕರಲ್ಲದವರಿಗೆ ಕೃಷಿಭೂಮಿ ಕೊಳ್ಳಲು ಅನುಕೂಲವಾಗುವಂತೆ 1961ರ ಭೂ ಸುಧಾರಣೆ ಕಾಯಿದೆಗೆ ತಿದ್ದುಪಡಿ ತರಲು ರಾಜ್ಯ ಸರಕಾರ ಇತ್ತೀಚಿಗೆ ನಿರ್ಧರಿಸಿದೆ. ಈ ಬೆಳವಣಿಗೆ ಸಂಚಲನ ಸೃಷ್ಟಿಸಿರುವ ಸಂದರ್ಭ ದೇಶದ ಇತರ ರಾಜ್ಯಗಳ ಭೂ ಸುಧಾರಣೆ ನೀತಿಗಳ ಅವಲೋಕನ ಇಲ್ಲಿದೆ.

1. ತಮಿಳುನಾಡು
ತಮಿಳುನಾಡಿನಲ್ಲಿ 1961ರ ಭೂಸುಧಾರಣೆ ಕಾಯಿದೆಗೆ ಹಲವಾರು ಸಲ ತಿದ್ದುಪಡಿಗಳಾಗಿದೆ. ಕೃಷಿಕರಲ್ಲದವರೂ ಕೃಷಿ ಭೂಮಿ ಖರೀದಿಸಬಹುದು. ಕೃಷಿ ಉದ್ದೇಶಕ್ಕಾಗಿಯೇ ಕೊಳ್ಳುವುದಿದ್ದರೆ ಕುಟುಂಬವೊಂದು ಗರಿಷ್ಠ 59.95 ಎಕರೆಯಷ್ಟು ಪಡೆಯಬಹುದು. ಬಂಜರು ಭೂಮಿಯಾಗಿದ್ದರೆ ಜಿಲ್ಲಾಧಿಕಾರಿ ಅನುಮೋದನೆ ಪಡೆದು ಕೃಷಿಯೇತರ ಉದ್ದೇಶಕ್ಕೆ ಪರಿವರ್ತಿಸಬಹುದು. ಅಲ್ಲದೇ, ಕೃಷಿ ಉದ್ದೇಶಕ್ಕಾಗಿ ಕನಿಷ್ಠ 10 ವರ್ಷ ಬಳಸಬಾರದು ಎಂಬ ಷರತ್ತಿದೆ.

2. ಆಂಧ್ರಪ್ರದೇಶ
ಆಂಧ್ರಪ್ರದೇಶದಲ್ಲಿ ಕೃಷಿ ಭೂಮಿಯ ಮೇಲೆ ಯಾರು ಬೇಕಾದರೂ ಹೂಡಿಕೆ ಮಾಡಬಹುದು. ಮೊದಲ ದರ್ಜೆಯ ಗರಿಷ್ಠ 10 ಎಕರೆ ಕೃಷಿ ಭೂಮಿಯನ್ನು ಕುಟುಂಬವೊಂದು ಖರೀದಿಸಬಹುದು. ಆದರೆ, ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಜಾತಿಯವರಿಗೆ ಸೇರಿದ ಕೃಷಿ ಭೂಮಿ ಖರೀದಿಸಲು ನಿರ್ಬಂಧಗಳಿವೆ. ಅದೇ ಸಮುದಾಯದ ಸದಸ್ಯರು ಮತ್ತು ಸೊಸೈಟಿಗಳು ಕೊಳ್ಳಬಹುದು. ಒಣ ಭೂಮಿಯಾಗಿದ್ದರೆ ಗರಿಷ್ಠ 54 ಎಕರೆ ಹೊಂದಬಹುದು. ತೆಲಂಗಾಣದಲ್ಲೂ ಇದೇ ರೀತಿ ಮುಕ್ತವಾಗಿ ಖರೀದಿಸಬಹುದು.

3. ಮಹಾರಾಷ್ಟ್ರ
ಮಹಾರಾಷ್ಟ್ರದಲ್ಲಿ 2016ರಲ್ಲಿ ರಾಜ್ಯ ಸರಕಾರ ಹಳೆಯ ಕಾಯಿದೆಗೆ ತಿದ್ದುಪಡಿ ತಂದು ಕೃಷಿಕರಲ್ಲದವರಿಗೂ ಕೃಷಿ ಭೂಮಿ ಖರೀದಿಸಲು ಅನುಮತಿ ನೀಡಿತು. ಇದಕ್ಕೂ ಮೊದಲು ಕೃಷಿಕರೇ ಖರೀದಿಸಬೇಕು ಎಂಬ ನಿಯಮವಿತ್ತು. ಮಹಾರಾಷ್ಟ್ರದಲ್ಲಿ ಕೃಷಿ ಭೂಮಿ ಖರೀದಿಗೆ 54 ಎಕರೆಗಳ ಮಿತಿಯನ್ನು ವಿಧಿಸಲಾಗಿದೆ. ಕಳೆದ ವರ್ಷ ಅಫರ್ಡಬಲ್ ಹೌಸಿಂಗ್ ಯೋಜನೆಗಳಿಗೆ ಸಂಬಂಧಿಸಿ ಭೂಮಿ ಖರೀದಿಸುವ ಡೆವಲಪರ್‌ಗಳಿಗೆ ಈ 54 ಎಕರೆಗಳ ಮಿತಿಯನ್ನೂ ಕೈಬಿಡಲಾಯಿತು.

4. ಮಧ್ಯಪ್ರದೇಶ, ರಾಜಸ್ಥಾನ
2010ರಿಂದೀಚೆಗೆ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕಾಯಿದೆಗೆ ತಿದ್ದುಪಡಿ ತರಲಾಗಿದ್ದು, ನಿರ್ದಿಷ್ಟ ಮಿತಿಗಳ ಅನ್ವಯ ಯಾರು ಬೇಕಾದರೂ ಕೃಷಿ ಭೂಮಿಯನ್ನು ತಮ್ಮದಾಗಿಸಬಹುದು.

5. ಬಿಹಾರ
ಬಿಹಾರದಲ್ಲಿ ರೈತರಲ್ಲದ ಕುಟುಂಬ ಗರಿಷ್ಠ 15 ಎಕರೆ ಕೃಷಿ ಜಮೀನು ಪಡೆಯಬಹುದು.

6. ಕೇರಳ
ಕೇರಳದಲ್ಲೂ ಯಾರು ಬೇಕಾದರೂ ಕೃಷಿ ಭೂಮಿ ಖರೀದಿಸಬಹುದು. ಆದರೆ ಕೃಷಿಕರಲ್ಲದ ಕುಟುಂಬ ಗರಿಷ್ಠ 15 ಎಕರೆ ಕೃಷಿ ಜಮೀನು ಕೊಳ್ಳಬಹುದು. ನೀರಾವರಿ ಇಲ್ಲದ 20 ಎಕರೆ ಜಮೀನು ಪಡೆಯಬಹುದು.

7. ಪಶ್ಚಿಮ ಬಂಗಾಳ
ವೈಯಕ್ತಿಕವಾಗಿ 17.5 ಎಕರೆಗಳ ಮಿತಿಯಲ್ಲಿ ಕೃಷಿ ಭೂಮಿ ಖರೀದಿಸಬಹುದು. ಆದರೆ ಚಹಾ ತೋಟ, ಮಿಲ್ಲು, ಕಾರ್ಖನೆ, ವರ್ಕ್‌ಶಾಪ್‌ಗಳಿಗೆ ಮಿತಿ ಇಲ್ಲ.

8. ಹಿಮಾಚಲ ಪ್ರದೇಶ
ರಾಜ್ಯದಲ್ಲಿ ಕೃಷಿಕರು ಮಾತ್ರ ಕೃಷಿ ಭೂಮಿ ಕೊಳ್ಳಬಹುದು. ಹೊರ ರಾಜ್ಯದವರು ಸರಕಾರದ ಪೂರ್ವಾನುಮತಿ ಇಲ್ಲದೆ ಖರೀದಿಸುವಂತಿಲ್ಲ.

9. ಗುಜರಾತ್
ಗುಜರಾತ್‌ನಲ್ಲಿ ಅಲ್ಲಿನ ಹೈಕೋರ್ಟ್ ತೀರ್ಪಿನ ಪ್ರಕಾರ 2012ರಿಂದೀಚೆಗೆ ಕೃಷಿಕರಲ್ಲದವರೂ ಕೃಷಿ ಭೂಮಿ ಖರೀದಿಸಬಹುದು.

10. ಉತ್ತರ ಪ್ರದೇಶ
ಉತ್ತರಪ್ರದೇಶದಲ್ಲಿ 12.50 ಎಕರೆಗಳ ಮಿತಿಯಲ್ಲಿ ಕೃಷಿಕರೇತರರೂ ಕೃಷಿ ಭೂಮಿ ಕೊಳ್ಳಬಹುದು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top