ಕೃಷಿ ಮಾರುಕಟ್ಟೆಯನ್ನು ಬಲಪಡಿಸಲು ಎಪಿಎಂಸಿ ಕಾಯಿದೆಗೆ ಸುಗ್ರೀವಾಜ್ಞೆಯ ಮೂಲಕ ತಿದ್ದುಪಡಿ ತರುವಂತೆ ಕೇಂದ್ರ ಸರಕಾರ ರಾಜ್ಯಗಳಿಗೆ ನೀಡಿರುವ ಸಲಹೆ ಈಗ ವಿವಾದ ಸೃಷ್ಟಿಸಿದೆ. ಇದರ ಸಾಧ್ಯತೆ- ಅಪಾಯಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತಂದು 2017ರ ‘ಮಾದರಿ ಕೃಷಿ ಉತ್ಪನ್ನ ಮತ್ತು ಜೀವನೋಪಾಯ ಮಾರುಕಟ್ಟೆ ಕಾಯಿದೆ’ಯನ್ನು (ಎಪಿಎಂಎಲ್ ಕಾಯಿದೆ) ಜಾರಿಗೊಳಿಸಲು ಕೇಂದ್ರ ಸರಕಾರ ನೀಡಿರುವ ಸಲಹೆಯನ್ನು ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶ, ಗುಜರಾತ್ ಅನುಸರಿಸಿವೆ. ಉತ್ತರ ಪ್ರದೇಶ ಪ್ರಯತ್ನಿಸುತ್ತಿದೆ. ಇದರಿಂದ ಖಾಸಗಿ ವಲಯದ ಕಂಪನಿಗಳೂ ಎಪಿಎಂಸಿ ಮಾರುಕಟ್ಟೆಯಲ್ಲಿ ವ್ಯವಹರಿಸಲು ಹಾದಿ ಸುಗಮವಾಗಿದೆ. ಇದೀಗ ಕರ್ನಾಟಕ ಸರಕಾರವೂ ಇದೇ ಹಾದಿಯಲ್ಲಿದೆ. ಸರಕಾರದ ಈ ನಿಲುವಿನ ಬಗ್ಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಮಧ್ಯಪ್ರದೇಶ ಮತ್ತು ಗುಜರಾತ್ನಲ್ಲಿ ಈಗಾಗಲೇ ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತರಲಾಗಿದೆ. ಹೊಸ ಎಪಿಎಂಎಲ್ ಕಾಯಿದೆ ಜಾರಿಯಾದರೆ ಎಪಿಎಂಸಿ ಮಾರುಕಟ್ಟೆಗಳಲ್ಲಿ ಕೃಷಿ ಉತ್ಪನ್ನಗಳ ಮಾರಾಟಕ್ಕಿರುವ ಹಲವು ನಿರ್ಬಂಧಗಳು ರದ್ದಾಗಲಿವೆ. ಖಾಸಗಿ ಕಂಪನಿಗಳೂ ಎಪಿಎಂಸಿಗೆ ಪ್ರವೇಶಿಸಬಹುದು. ಹಾಗೂ ರೈತರಿಂದ ಕೃಷಿ ಉತ್ಪನ್ನಗಳನ್ನು ಖರೀದಿಸಬಹುದು. ಫಡ್ನವಿಸ್ ನೇತೃತ್ವದ ಮಹಾರಾಷ್ಟ್ರ ಸರಕಾರ ಹಿಂದೆ ಇದನ್ನು ಜಾರಿ ಮಾಡಲು ಹೊರಟಿತ್ತಾದರೂ, ರೈತರ ವಿರೋಧದಿಂದ ಹಿಂದೆ ಸರಿದಿತ್ತು.
ಮಾದರಿ ಎಪಿಎಲ್ಎಂ ಕಾಯಿದೆ-2017 ಸುತ್ತಮುತ್ತ
ಕೃಷಿ ಉತ್ಪನ್ನ ಮತ್ತು ಕೃಷಿ ಜೀವನೋಪಾಯಕ್ಕೆ ಸಂಬಂಧಿಸಿದ ವಸ್ತುಗಳ ಮಾರಾಟಕ್ಕೆ ರಾಷ್ಟ್ರವ್ಯಾಪಿ ಮುಕ್ತ ಮಾರುಕಟ್ಟೆ ಕಲ್ಪಿಸುವುದು, ರೈತರಿಗೆ ತಮ್ಮ ಉತ್ಪನ್ನಗಳನ್ನು ಯಾವುದೇ ನಿರ್ಬಂಧವಿಲ್ಲದೆ ಮಾರಾಟ ಮಾಡಲು ಅವಕಾಶ ಕಲ್ಪಿಸುವುದು ‘ಮಾದರಿ ಎಪಿಎಲ್ಎಂ ಕಯಿದೆ-2017’ರ ಆಶಯ. ಎಪಿಎಂಸಿಯಲ್ಲಿ ಆನ್ಲೈನ್ ವ್ಯಾಪಾರ, ಖಾಸಗಿ ಕಂಪನಿಗಳ ಪ್ರವೇಶಕ್ಕೂ ಅನುಮತಿ ನೀಡಿ ಮಾರುಕಟ್ಟೆ ವಿಸ್ತರಣೆ ಮಾಡುವುದು ಇದರ ಉದ್ದೇಶ. ಇದರಿಂದ ಎಪಿಎಂಸಿಯಲ್ಲಿ ಕೃಷಿ ಉತ್ಪನ್ನಗಳ ದರ ನಿಗದಿಯಲ್ಲಿ ಸಮಿತಿಯ ಏಕಸ್ವಾಮ್ಯ ಕೊನೆಯಾಗಲಿದ್ದು, ರೈತರಿಗೆ ಅನುಕೂಲವಾಗಲಿದೆ ಎನ್ನುವುದು ಸರಕಾರದ ವಾದ.
ಸರಕಾರ ಹೇಳುವ ಪ್ರಕಾರ, ಎಪಿಎಂಸಿಯಲ್ಲಿ ಮಾರುಕಟ್ಟೆ ಸಮಿತಿ ಪ್ರಜಾಸತ್ತಾತ್ಮಕವಾಗಿ ರೂಪುಗೊಳ್ಳಲಿದೆ. ರೈತರ ಜತೆಗೆ ಸಂಸ್ಕರಣೆಗಾರರು, ರಫ್ತುದಾರರು, ಸಗಟು ರಿಟೇಲರ್ ಮತ್ತು ಗ್ರಾಹಕರ ಸಂಯೋಜನೆ ಆಗಲಿದೆ. ಖಾಸಗಿ ಹೋಲ್ಸೇಲ್ ಮಾರುಕಟ್ಟೆ ಮಂಡಿ ಮತ್ತು ಇತರ ಭಿನ್ನ ಮಾರುಕಟ್ಟೆಗಳ ಸಂಯೋಜನೆಯಿಂದ ಸ್ಪರ್ಧಾತ್ಮಕತೆ ಹೆಚ್ಚಲಿದೆ. ರೈತರು ಮತ್ತು ಸಂಸ್ಕರಣೆಗಾರರು, ರಫ್ತುದಾರರು, ಸಗಟು ಖರೀದಿದಾರರು ಮತ್ತು ಬಳಕೆದಾರರ ನಡುವೆ ನೇರ ವ್ಯವಹಾರದ ಪರಿಣಾಮ ಉತ್ಪಾದಕರು ಮತ್ತು ಗ್ರಾಹಕರಿಗೆ ಲಾಭವಾಗಲಿದೆ.
ಕೃಷಿಕರಿಗೆ ತಮ್ಮ ಉತ್ಪನ್ನಗಳನ್ನು ಖರೀದಿದಾರರಿಗೆ ನೇರವಾಗಿ ಮಾರಲು ಅವಕಾಶ ಸಿಗಲಿದೆ. ಇ-ಕಾಮರ್ಸ್ ಪರಿಣಾಮ ಗಡಿಗಳ ಮಿತಿ ಇಲ್ಲದೆ ವಿಸ್ತಾರ ಮಾರುಕಟ್ಟೆಯ ದರಗಳನ್ನು ಅರಿತು ವ್ಯವಹರಿಸಬಹುದು. ಏಕೀಕೃತ ಪರವಾನಗಿ ಇರುವುದರಿಂದ ರೈತರಿಗೆ ಎಪಿಎಂಸಿ ಮಾರುಕಟ್ಟೆಯ ವಿಸ್ತರಣೆಯಾಗುತ್ತದೆ. ರೈತರು ರಾಜ್ಯದಲ್ಲಿಎಲ್ಲಿಯ ಎಪಿಎಂಸಿಗಳಲ್ಲೂ ಮಾರಾಟ ಮಾಡಬಹುದು. ನಿರ್ಬಂಧ ಇರುವುದಿಲ್ಲ.
ನೀತಿ ಆಯೋಗದ ಸಲಹೆ
ಕೃಷಿ ಆದಾಯವನ್ನು ಹೆಚ್ಚಿಸುವ ದೃಷ್ಟಿಯಿಂದ ಎಪಿಎಂಸಿ ಕಾಯಿದೆಯ ತಿದ್ದುಪಡಿಗೆ ಈ ಹಿಂದೆ ನೀತಿ ಆಯೋಗವೂ ಶಿಫಾರಸು ನೀಡಿತ್ತು. ಕೋವಿಡ್-19 ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಎಪಿಎಂಸಿಗಳ ಮಂಡಿಗಳ ನಿಯಮಾವಳಿಗಳನ್ನು ಸಡಿಲಗೊಳಿಸಲು ಸಲಹೆ ನೀಡಿತ್ತು.
ರಾಜ್ಯದ ಮೇಲೆ ಕೇಂದ್ರದ ಒತ್ತಡವೇಕೆ?
‘‘ಕೇಂದ್ರ ಕೃಷಿ ಸಚಿವಾಲಯ ಮೇ 5ರಂದು ರಾಜ್ಯಗಳಿಗೆ ಪತ್ರ ಬರೆದು ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಜಾರಿಗೆ ಸೂಚಿಸಿರುವುದು ಸರಿಯಲ್ಲ. ಇದು ರಾಜ್ಯದ ವಿಷಯ. ಇದರಲ್ಲಿ ಕೇಂದ್ರ ಮೂಗು ತೂರಿಸಬಾರದು. ಈ ತಿದ್ದುಪಡಿ ರೈತರ ಪಾಲಿಗೆ ಮಾರಕವಾಗಲಿದೆ,’’ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
‘‘ಇದು ರೈತರಿಗೆ ಅನ್ಯಾಯ ಮಾಡುವಂತಹ ಕೆಲಸ. ಇದರ ಮೂಲಕ ಬೆಳೆಗಳ ಬೆಲೆಗಳ ನಿಗದಿ ಮಾರುಕಟ್ಟೆ ಒಳಗೆ ತೀರ್ಮಾನವಾಗಲ್ಲ. ಹೊರಗಡೆ ತೀರ್ಮಾನವಾಗಿ ರೈತರನ್ನು ಕೊಳ್ಳೆ ಹೊಡೆಯುತ್ತಾರೆ. ಹೀಗಾಗಿ ಇದು ರೈತರಿಗೆ ಮಾರಕ. ಈ ಬಗ್ಗೆ ಅಧಿವೇಶನ ಹಾಗೂ ಸಾರ್ವಜನಿಕವಾಗಿ ಚರ್ಚಿಸಿ ನಂತರ ಜಾರಿಗೆ ತರಬೇಕು,’’ ಎಂದು ಆಗ್ರಹಿಸಿದರು. ‘‘ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ತಾವು ಬೆಳೆದ ಬೆಳೆಗಳನ್ನು ಕೇಳುವವರಿಲ್ಲದೆ ರೈತ ಸಮುದಾಯ ಕಂಗಾಲಾಗಿದೆ. ಈ ಸಂದರ್ಭದಲ್ಲಿ ಕಾಯಿದೆಗೆ ತಿದ್ದುಪಡಿ ತರಲು ಹೊರಟಿರುವುದು ಅವರ ಗಾಯದ ಮೇಲೆ ಬರೆ ಎಳೆದಂತಾಗಿದೆ. ರೈತರು ಬೆಳೆದ ತರಕಾರಿ, ಹೂ, ಭತ್ತ, ಜೋಳ, ಮೆಕ್ಕೆ ಜೋಳ, ಈರುಳ್ಳಿ, ತೊಗರಿ ಸೇರಿದಂತೆ ಆನೇಕ ಬೆಳೆಗಳನ್ನು ಸರಕಾರ ಖರೀದಿಸಿಲ್ಲ. ಬಹುತೇಕ ರೈತರು ಖರೀದಿ ಮಾಡುವವರಿಲ್ಲದೆ ತಾವು ಬೆಳೆದ ಬೆಳೆಗಳನ್ನು ಬೀದಿಗೆ ಸುರಿಯುತ್ತಿದ್ದಾರೆ. ಹಾಪ್ಕಾಮ್ಸ…, ಎಪಿಎಂಸಿ ಮೂಲಕ ಖರೀದಿ ಮಾಡಿ, ರೈತರಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ ಎಂದರೆ ಕೇಳಲಿಲ್ಲ. ಜನರಲ್ಲಿ ಖರೀದಿ ಮಾಡುವ ಶಕ್ತಿ ಇದ್ದರೆ ಸರಕಾರಕ್ಕೂ ಆದಾಯ ಬರುತ್ತದೆ. ಯಾರೂ ಖರೀದಿ ಮಾಡದೇ ಇದ್ದರೆ ಉತ್ಪಾದನೆ ಆಗದು, ಮಾರುಕಟ್ಟೆಯೂ ಕ್ರಿಯಾಶೀಲ ಆಗುವುದಿಲ್ಲ,’’ ಎಂದು ಕಳವಳ ವ್ಯಕ್ತಪಡಿಸಿದರು.
ಸುಗ್ರೀವಾಜ್ಞೆಯಲ್ಲೇನಿದೆ?
– ಕೇಂದ್ರದ 2017ರ ಮಾದರಿ ಎಪಿಎಲ್ಎಂ ಕಾಯಿದೆಯ ಅನುಸಾರ ತಯಾರಿಸಲಾಗಿದೆ.
– ವ್ಯಾಪಾರಸ್ಥರು, ಕಂಪನಿಯವರು ನೇರವಾಗಿ ರೈತರ ಮನೆ ಬಾಗಿಲಿಗೆ ತೆರಳಿ ಬೆಳೆ ಖರೀದಿಸಬಹುದು.
– ರೈತರು ರಾಜ್ಯದ ಯಾವುದೇ ಜಿಲ್ಲೆಯ ಎಪಿಎಂಸಿಯಲ್ಲಿ ಬೆಳೆ ಮಾರಾಟ ನಡೆಸಬಹುದು.
– ರೈತರು ಬೆಳೆದ ಉತ್ಪನ್ನಗಳ ಮಾರಾಟ ಸಂಬಂಧ ಆನ್ಲೈನ್ ಮಾರ್ಕೆಟಿಂಗ್ ಸೌಲಭ್ಯ.
– ರಾಜ್ಯದ ಹಳೆಯ ಕಾಯಿದೆಯಂತೆ ವರ್ತಕರು ನೇರವಾಗಿ ರೈತರ ಹೊಲದಿಂದ ಬೆಳೆ ಖರೀದಿಸುವಂತಿಲ್ಲ.
– ಇಂತಹ ಪ್ರಕರಣಗಳಲ್ಲಿ ವರ್ತಕರ ವಿರುದ್ಧ ಕಾನೂನು ಕ್ರಮಕ್ಕೆ ಅವಕಾಶಧಿವಿದೆ. ಇನ್ನು ಮುಂದೆ ಈ ಕ್ರಮ ಇರುವುದಿಲ್ಲ.
– ಹೊಸ ಕಾಯಿದೆ ಎಪಿಎಂಸಿಗಳನ್ನು ಹೆಚ್ಚು ಸ್ಪರ್ಧಾತ್ಮಕಗೊಳಿಸುವ ಉದ್ದೇಶ ಹೊಂದಿದೆ.
ಯಡಿಯೂರಪ್ಪ ಅವರೇ ರೈತ ಹಿತ ಮರೆಯಬೇಡಿ: ಕುಮಾರಸ್ವಾಮಿ
ಎಪಿಎಂಸಿ ಕಾಯಿದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರಲು ರಾಜ್ಯ ಸರಕಾರ ಮುಂದಾಗಿರುವುದನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತೀವ್ರವಾಗಿ ವಿರೋಧಿಸಿದ್ದಾರೆ. ವಿಧಾನಸೌಧದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘‘ಪ್ರಧಾನಿ ಮೋದಿ ಜತೆ ಕೈಜೋಡಿಸಲು ರಾಜ್ಯದ ರೈತರ ಹಿತವನ್ನು ಬಲಿಕೊಡಬೇಡಿ. ಎಪಿಎಂಸಿ ಕಾಯಿದೆ ತಿದ್ದುಪಡಿ ತೀರ್ಮಾನ ಕೈಬಿಡಬೇಕು. ರೈತರು ಉಳಿಯಬೇಕಾದರೆ ಯಡಿಯೂರಪ್ಪ ಅವರೇ ಹೋರಾಟ ಮಾಡಬೇಕು. ಮಹಾರಾಷ್ಟ್ರ ಇಂತಹ ಕಾಯಿದೆ ಮಾಡಲು ಮುಂದಾಗಿ ಎಡವಿದೆ. ಇದು ಗೊತ್ತಿದ್ದೂ ತಪ್ಪು ಮಾಡಬೇಡಿ,’’ ಎಂದು ಕಿವಿಮಾತು ಹೇಳಿದರು. ‘‘ಕಾಯಿದೆ ತಿದ್ದುಪಡಿ ಮಾಡಿದರೆ ರೈತರಿಗೆ ತೊಂದರೆ ಮಾತ್ರವಲ್ಲ, ರಾಜ್ಯ ಸರಕಾರಕ್ಕೂ ಸುಮಾರು 600 ಕೋಟಿ ರೂ. ನಷ್ಟವಾಗಲಿದೆ. ಯಡಿಯೂರಪ್ಪನವರೇ ನೀವು ಕಷ್ಟಪಟ್ಟು ಸಿಎಂ ಆಗಿರುವುದು ರಾಜ್ಯದ ಜನರನ್ನು ಉದ್ಧಾರ ಮಾಡಲು ಮತ್ತು ರೈತರನ್ನು ರಕ್ಷ ಣೆ ಮಾಡಲು ಎಂಬುದನ್ನು ಮರೆಯಬೇಡಿ,’’ ಎಂದು ತಾಕೀತು ಮಾಡಿದರು.
ಬಿಜೆಪಿಯೇತರ ರಾಜ್ಯಗಳ ವಿರೋಧ
ಉದ್ದೇಶಿತ ಕಾಯಿದೆಗೆ ಬಿಜೆಪಿಯೇತರ ಪಕ್ಷ ಗಳ ಆಡಳಿತವಿರುವ ರಾಜ್ಯ ಸರಕಾರಗಳು ವಿರೋಧಿಸಿವೆ. ಈಗಾಗಲೇ ಮಹಾರಾಷ್ಟ್ರ, ಪಂಜಾಬ್ ಇನ್ನಿತರ ರಾಜ್ಯಗಳು ಈ ಪ್ರಸ್ತಾವ ತಿರಸ್ಕರಿಸುವ ಸುಳಿವು ನೀಡಿವೆ. ಅಷ್ಟಕ್ಕೂ ಎಪಿಎಂಸಿ ಸಂಬಂಧದಲ್ಲಿರಾಜ್ಯ ಸರಕಾರಗಳು ಕ್ರಮ ಕೈಗೊಳ್ಳಬೇಕು. ಇದರಲ್ಲಿಕೇಂದ್ರ ಸರಕಾರದ ಹಸ್ತಕ್ಷೇಪ ಸಲ್ಲ. ಹೀಗೆಯೇ ಮಾಡಿ ಎಂದು ಫರ್ಮಾನು ಹೊರಡಿಸುವಂತೆ ಕೇಂದ್ರ ಆದೇಶಿಸುವುದೂ ಸರಿಯಲ್ಲಎಂಬ ಆಕ್ಷೇಪ ಕೇಳಿಬರುತ್ತಿದೆ.
ಸಹಕಾರಿ ತತ್ವವನ್ನು ಗಾಳಿಗೆ ತೂರಿ, ರೈತರ ಹಿತ ಬಲಿಕೊಟ್ಟು ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತರುವ ನಿಲುವಿಗೆ ಕಾಂಗ್ರೆಸ್ ತೀವ್ರ ವಿರೋಧವಿದೆ. ಹೊಸ ಕಾನೂನು ಜಾರಿಗೆ ನಾವು ಬಿಡಲ್ಲ.
-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ
ಕಾಯಿದೆ ಜಾರಿಗೊಂಡರೆ ರೈತರ ಶೋಷಣೆ ವ್ಯಾಪಕವಾಗಿ ಹೆಚ್ಚಾಗಲಿದೆ ಮಾತ್ರವಲ್ಲ, ಎಪಿಎಂಸಿಗಳಿಗೆ ವ್ಯಾಪಾರವಿಲ್ಲದೆ ಮುಚ್ಚುವ ಪರಿಸ್ಥಿತಿ ಬರಲಿದೆ. ಕೃಷಿ ಮಾರುಕಟ್ಟೆಯೆಂಬುದು ಪೂರ್ಣ ಮುಕ್ತವಾದ ಕಾರ್ಪೋರೇಟ್ ಲೂಟಿಕೋರ ಖಾಸಗಿ ಮಾರುಕಟ್ಟೆಯಾಗಲಿದೆ.
-ಜಿ.ಸಿ.ಬಯ್ಯಾರೆಡ್ಡಿ ಅಧ್ಯಕ್ಷ , ಕರ್ನಾಟಕ ಪ್ರಾಂತ ರೈತ ಸಂಘ
ತಿದ್ದುಪಡಿಯು ರೈತ, ಸಣ್ಣ ವ್ಯಾಪಾರಸ್ಥರ ವಿರೋಧಿ. ಬಹುರಾಷ್ಟ್ರೀಯ ಕಂಪನಿಗಳ ಕೈಯಲ್ಲಿ ಕೃಷಿ ಕೊಡಲು ಸರಕಾರ ಮುಂದಾಗಿದೆ. ರೈತರನ್ನು ಗುಲಾಮರನ್ನಾಗಿ ಮಾಡಲು ಸರಕಾರ ಹೊರಟಿದೆ.
– ಮಾರುತಿ ಮಾನ್ಪಡೆ, ಉಪಾಧ್ಯಕ್ಷರು, ಕರ್ನಾಟಕ ಪ್ರಾಂತ ರೈತ ಸಂಘ
ಈ ಕಾಯಿದೆ ಬಗ್ಗೆ ರೈತರಿಗೆ ಮಾಹಿತಿಯೇ ಇಲ್ಲ, ಇದರಿಂದ ಅನುಕೂಲವೋ, ಅನಾನುಕೂಲವೋ? ದಲ್ಲಾಳಿಗಳು, ವ್ಯಾಪಾರಿಗಳು, ಮಾಲ್ನವರಿಗೆ ಅನುಕೂಲವಾಗುತ್ತಾ ಎಂಬುದರ ಬಗ್ಗೆ ಯಾರಿಗೂ ಗೊತ್ತಿಲ್ಲ. ತುರ್ತಾಗಿ ಸಭೆ ಕರೆದು ಸರಕಾರ ಮಾಹಿತಿ ನೀಡಬೇಕು. ಈ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಈ ಕೊರೊನಾ ಸಂದರ್ಭದಲ್ಲಿಜಾರಿಗೊಳಿಸುವ ಅಗತ್ಯವೇನಿದೆ?
-ಕುರುಬೂರು ಶಾಂತಕುಮಾರ್, ರೈತ ಮುಖಂಡ
ಇದೊಂದು ಜನ ವಿರೋಧಿ ತಿದ್ದುಪಡಿಯಾಗಿದೆ. ವ್ಯವಸಾಯ ಮತ್ತು ರೈತಾಪಿ ಜನರನ್ನು ಮನಬಂದಂತೆ ಲೂಟಿ ಮಾಡಲು ನೆರವಾಗಲಿದೆ. ಇದು ಗ್ರಾಮೀಣ ಆರ್ಥಿಕತೆ ಹಾಗೂ ರಾಜ್ಯದ ಗ್ರಾಹಕ ಮಾರುಕಟ್ಟೆ ಕಾರ್ಪೋರೇಟ್ಗಳ ಕೈಗೆ ವರ್ಗಾವಣೆಯಾಗಲಿದೆ. ಮುಂದಿನ ದಿನಗಳಲ್ಲಿ ತೀವ್ರ ಅಪಾಯಕಾರಿಯಾಗಲಿದೆ. ಹೀಗಾಗಿ ಕಾಯಿದೆಗೆ ತಿದ್ದುಪಡಿ ತರುವ ಪ್ರಸ್ತಾವನೆಯಿಂದ ರಾಜ್ಯ ಸರಕಾರ ಹಿಂದೆ ಸರಿಯಬೇಕು.
-ಯು.ಬಸವರಾಜ ಕಾರ್ಯದರ್ಶಿ, ಸಿಪಿಐಎಂ
ಈಗ ವರ್ತಕರು, ರೈತರು ಎಂದಿನಿಂದಲೂ ಆರ್ಥಿಕವಾಗಿ ಪರಸ್ಪರ ಕೊಡುಕೊಳ್ಳುವಿಕೆಯ ಒಂದು ವ್ಯವಸ್ಥೆಯಲ್ಲಿವಹಿವಾಟು ನಡೆಸುತ್ತಿದ್ದಾರೆ. ಆದರೆ, ಕಾಯಿದೆ ತಿದ್ದುಪಡಿಯಿಂದ ಇದಕ್ಕೆ ಪೆಟ್ಟು ಬೀಳಲಿದ್ದು, ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಪದ್ಧತಿ ಜಾರಿಗೆ ಬರುವ ಮೂಲಕ ರೈತರ ಬದುಕು ಪರರ ನಿಯಂತ್ರಣ ಕ್ಕೊಳಪಡುವುದರಲ್ಲಿ ಸಂಶಯವಿಲ್ಲ.
-ಚಾಮರಸ ಮಾಲಿಪಾಟೀಲ್ ಗೌರವಾಧ್ಯಕ್ಷ , ರಾಜ್ಯ ರೈತ ಸಂಘ ರಾಯಚೂರು