ಬೇಕಿದೆ ಕೇಂದ್ರದ ಬಿಗ್ ಪ್ಯಾಕೇಜ್ – ಕೊರಾನಾಘಾತದ ಚೇತರಿಕೆಗೆ ಬೃಹತ್ ಪರಿಹಾರ ಸೂತ್ರ ಅಗತ್ಯ

– ಕೇಶವ್‌ ಪ್ರಸಾದ್‌ ಬಿ ಬೆಂಗಳೂರು
ಕೊರೊನಾ ಸಂಕಟದ ನಡುವೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೆರವಿನ ಘೋಷಣೆಯ ಬೆನ್ನಲ್ಲೇ, ಕೇಂದ್ರ ಸರಕಾರದ ವಿಶೇಷ ಪ್ಯಾಕೇಜ್ ಬಗ್ಗೆ ಜನರ ನಿರೀಕ್ಷೆ ಹೆಚ್ಚಿದೆ.
ಆರ್ಥಿಕತೆಯನ್ನು ಮರಳಿ ಹಳಿಗೆ ತರಲು ಕೇಂದ್ರ ಮೊದಲ ಹಂತದಲ್ಲಿ 1.7 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸಿದೆ. ಹೀಗಿದ್ದರೂ, ಪರಿಸ್ಥಿತಿ ಸುಧಾರಿಸಬೇಕಿದ್ದರೆ ಇನ್ನೂ ಒಟ್ಟಾರೆಯಾಗಿ 10-15 ಲಕ್ಷ ಕೋಟಿ ರೂ. ಬೇಕು ಎಂಬುದು ಪರಿಣಿತರ ಅಭಿಮತ.
ಕೇಂದ್ರ ಸರಕಾರ ಸಣ್ಣ ಮತ್ತು ಮಧ್ಯಮ ಉದ್ದಿಮೆ ಸೇರಿದಂತೆ ಎಲ್ಲ ವಲಯಗಳಿಗೆ ನೆರವಿನ ಪ್ಯಾಕೇಜ್ ನೀಡಲು ಸಿದ್ಧತೆ ಪಡೆಸುತ್ತಿದೆ ಎಂದು ಸರಕಾರಿ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಆರ್‌ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್, ಐಎಂಎಫ್‌ನ ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್, ಭಾರತದ ಮಾಜಿ ಮುಖ್ಯ ಹಣಕಾಸು ಸಲಹೆಗಾರ ಕೌಶಿಕ್ ಬಸು, ನೊಬೆಲ್ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ ಸೇರಿದಂತೆ ಹಲವರು ಮೆಗಾ ರಿಲೀಫ್ ಪ್ಯಾಕೇಜ್ ಬೇಕು ಎಂದು ಪ್ರತಿಪಾದಿಸಿದ್ದಾರೆ. ಸಂಕಷ್ಟದಲ್ಲಿರುವ ಬಡವರಿಗೆ, ಸಣ್ಣ ಮತ್ತು ಮಧ್ಯಮ ಉದ್ದಿಮೆಗೆ, ಕೃಷಿ ಸೇರಿದಂತೆ ಹಲವು ವಲಯಗಳಿಗೆ ಹಣಕಾಸು ನೆರವು ಹೆಚ್ಚಿಸುವುದರಿಂದ ಆರ್ಥಿಕ ಪುನಶ್ಚೇತನ ಸಾಧ್ಯ ಎಂದಿದ್ದಾರೆ. ಈ ನಡುವೆ, ಮುಖ್ಯ ಆರ್ಥಿಕ ಸಲಹೆಗಾರ ಕೆ.ವಿ ಸುಬ್ರಮಣಿಯನ್ ಅವರು ಇದಕ್ಕೆ ತಗಲುವ ಭಾರಿ ಖರ್ಚು ವೆಚ್ಚಗಳ ಬಗ್ಗೆ ಎಚ್ಚರಿಸಿದ್ದಾರೆ.
10 ಲಕ್ಷ ಕೋಟಿ ರೂ. ಅಥವಾ ಜಿಡಿಪಿಯ ಕನಿಷ್ಠ ಶೇ.5ರಷ್ಟು ಪರಿಹಾರವನ್ನು ಘೋಷಿಸಬೇಕು ಎಂದು ನೀತಿ ಆಯೋಗ ಇತ್ತೀಚೆಗೆ ಸಲಹೆ ನೀಡಿದೆ. ಭಾರತದ ಜಿಡಿಪಿ ಮೌಲ್ಯ ಅಂದಾಜು 147 ಲಕ್ಷ ಕೋಟಿ ರೂ. ಇದೆ. ಬಡವರಿಗೆ ನಗದು ನೆರವು, ಕಾರ್ಪೊರೇಟ್ ವಲಯಕ್ಕೆ ಈಕ್ವಿಟಿ ನೆರವು ಮತ್ತು ಸಣ್ಣ, ಮಧ್ಯಮ ಉದ್ದಿಮೆಗಳ ಸಾಲದ ಹೊರೆ ಇಳಿಸಲು ಆಯೋಗ ಸಲಹೆ ನೀಡಿದೆ.

ಭಾರತದ ಕೋವಿಡ್-19 ಪ್ಯಾಕೇಜ್
– ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ -1.70 ಲಕ್ಷ ಕೋಟಿ ರೂ.
– ಜನ್‌ಧನ್‌ ಖಾತೆ ಅಡಿಯಲ್ಲಿ 19.86 ಕೋಟಿ
– ಮಹಿಳೆಯರಿಗೆ ತಲಾ 500 ರೂ.
– 8 ಕೋಟಿ ಬಡ ಕುಟುಂಬಗಳಿಗೆ ಉಚಿತ ಎಲ್‌ಪಿಜಿ ಸಿಲಿಂಡರ್
– ಹಿರಿಯ ನಾಗರಿಕರಿಗೆ ಮಾಸಿಕ 1000 ರೂ. ನೆರವು
– 39 ಕೋಟಿ ಬಡವರಿಗೆ 34,800 ಕೋಟಿ ರೂ. ನೆರವು

ಭಾರಿ ದುಡ್ಡಿನ ನೆರವು ಏಕೆ ಬೇಕು?
ಲಾಕ್‌ಡೌನ್‌ನಿಂದ ಉತ್ಪಾದನೆ ಸ್ಥಗಿತ. ನಗದು ಕೊರತೆಯನ್ನು ಸಣ್ಣ, ಮಧ್ಯಮ ಉದ್ಯಮಿಗಳು ಎದುರಿಸುತ್ತಿದ್ದಾರೆ.
ಜನರ ಕೈಯಲ್ಲೂ ಹಣಕಾಸು ಕೊರತೆ.
– ವಸ್ತು ಮತ್ತು ಸೇವೆಗಳನ್ನು ಖರೀದಿಸುವ ಜನತೆಯ ಸಾಮರ್ಥ್ಯ ಹೆಚ್ಚಳಕ್ಕೆ ಮೆಗಾ ಪ್ಯಾಕೇಜ್ ಅಗತ್ಯ.
– ಉತ್ಪಾದನಾ ಚಟುವಟಿಕೆ ಹೆಚ್ಚಿಸಲು ನಾನಾ ವಲಯಗಳಿಗೆ ನಗದು ಸಹಾಯವೇ ದಾರಿ.
– ಜನತೆಯ ಕೈಯಲ್ಲಿ ದುಡ್ಡಿಟ್ಟಾಗ ವಸ್ತು-ಸೇವೆಗಳ ಖರೀದಿ ಚಟುವಟಿಕೆ ಹೆಚ್ಚುತ್ತದೆ.
– ಆರ್ಥಿಕ ವ್ಯವಹಾರಗಳು ಚೇತರಿಸುತ್ತವೆ.
– ಈ ಹಿಂದೆ ಆರ್ಥಿಕ ಹಿಂಜರಿತ ಸಂಭವಿಸಿದಾಗಲೆಲ್ಲ ಮೆಗಾ ರಿಲೀಫ್ ಪ್ಯಾಕೇಜ್ ಫಲಪ್ರದ.

ನೆರವಿನ ಸಾಧಕ-ಬಾಧಕವೇನು?
– ಜನರ ಕೈಯಲ್ಲಿ ನಗದು ಹರಿವು ಹೆಚ್ಚುತ್ತದೆ. ವಸ್ತು-ಸೇವೆಗಳನ್ನು ಖರೀದಿಸಲು, ಆಸ್ತಿ ಪಾಸ್ತಿಗಳನ್ನು ಕೊಳ್ಳಲು, ಹೂಡಿಕೆ ಮಾಡಲು ಜನ ಮುಂದಾಗುತ್ತಾರೆ. ಇದು ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸುತ್ತದೆ. ಜಿಡಿಪಿ ಏರಿಕೆಗೆ ನಿರ್ಣಾಯಕ.
– ಆದರೆ ಉತ್ಪಾದಿತ ವಸ್ತುಗಳು ಮಾರುಕಟ್ಟೆಯಲ್ಲಿ ಸಮೃದ್ಧವಾಗಿ ದೊರೆಯುವ ತನಕ ಅನೇಕ ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಜನತೆಯ ಕೈಯಲ್ಲಿದುಡ್ಡು ಇದ್ದರೂ, ಖರ್ಚೂ ಅಷ್ಟೇ ಆಗುತ್ತದೆ.
– ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಯಾಗುವುದರಿಂದ ಉತ್ಪಾದನೆ ದಿಢೀರ್ ಚುರುಕಾಗುತ್ತದೆ. ಉದ್ಯೋಗ ಸೃಷ್ಟಿಯಾಗುತ್ತದೆ.
-ಡಾಲರ್ ಎದುರು ರೂಪಾಯಿ ಗಣನೀಯ ಕುಸಿತ ಸಂಭವ. ಆಗ ಆಮದು ತುಟ್ಟಿಯಾಗುತ್ತದೆ. ಚಿನ್ನ-ಬೆಳ್ಳಿ, ಸ್ಮಾರ್ಟ್‌ಪೋನ್‌ ಇತ್ಯಾದಿ ದರ ಏರಿಕೆ ಸಾಧ್ಯತೆ.
– ಹಣದುಬ್ಬರ ಏರಿಕೆಯಾದರೂ, ಆರ್‌ಬಿಐ ಮತ್ತು ಸರಕಾರ ನಾನಾ ಕ್ರಮಗಳ ಮೂಲಕ ನಿಯಂತ್ರಿಸಬಹುದು.

ವಿಪತ್ತು ಪರಿಹರಿಸಲು ಜಿಡಿಪಿಯ ಶೇ.5ಕ್ಕೂ ಹೆಚ್ಚು ಮೌಲ್ಯದ ನೆರವನ್ನು ಸರಕಾರ ಬಿಡುಗಡೆಗೊಳಿಸಬೇಕು. ಇದರಿಂದ ಉತ್ಪಾದನೆ ಮತ್ತು ಸೇವಾ ವಲಯ ಗಣನೀಯ ಸುಧಾರಿಸಲಿದೆ. ಹಣದುಬ್ಬರ, ರೂಪಾಯಿ ಮೌಲ್ಯ ಇಳಿಕೆ ಇತ್ಯಾದಿ ಪರಿಣಾಮಗಳು ಉಂಟಾದರೂ ಅದು ತಾತ್ಕಾಲಿಕ. ಗ್ರಾಮೀಣ ಭಾಗದಲ್ಲಿ ಉದ್ಯಮಶೀಲತೆ, ಉದ್ಯೋಗ ಸೃಷ್ಟಿಗೂ ಇದು ನಿರ್ಣಾಯಕ.
-ಸಂಪತ್ರಾಮನ್ ಮಾಜಿ ಅಧ್ಯಕ್ಷ ಅಸೊಚೆಮ್

ದೊಡ್ಡ ವೆಚ್ಚಕ್ಕೆ ಹೊಸ ನೋಟು ಮುದ್ರಣ ಅಗತ್ಯ
15-20 ಲಕ್ಷ ಕೋಟಿ ರೂ. ಲೆಕ್ಕದಲ್ಲಿ ದುಡ್ಡು ಹೊಂದಿಸಬೇಕು ಎಂದರೆ ಮದ್ಯ ಮಾರಾಟಕ್ಕೆ ಒಪ್ಪಿಗೆ, ಸರಕಾರಿ ವೆಚ್ಚ ನಿಯಂತ್ರಣ, ಪೆಟ್ರೋಲ್-ಡೀಸೆಲ್ ಅಬಕಾರಿ ಸುಂಕ ಹೆಚ್ಚಳ, ಲಾಕ್‌ಡೌನ್‌ ನಡುವೆ ಉದ್ದಿಮೆಗಳ ಚಟುವಟಿಕೆಗೆ ಅನುಮತಿ ಇತ್ಯಾದಿ ಉಪಕ್ರಮಗಳಷ್ಟೇ ಸಾಕಾಗುವುದಿಲ್ಲ. ಕೇಂದ್ರ ಬಾಂಡ್‌ಗಳನ್ನು ಬಿಡುಗಡೆಗೊಳಿಸಬೇಕು. ಈ ಬಾಂಡ್‌ಗಳನ್ನು ಆರ್‌ಬಿಐ ಹೊಸ ನೋಟುಗಳನ್ನು ಮುದ್ರಿಸಿಕೊಳ್ಳಬೇಕು. ಹಾಗೂ ಸರಕಾರ ಆರ್‌ಬಿಐನಿಂದ ಪಡೆಯುವ ಹಣವನ್ನು ನಾನಾ ಕ್ಷೇತ್ರಗಳಿಗೆ ಹಣಕಾಸು ನೆರವಿನ ರೂಪದಲ್ಲಿ ವಿತರಿಸಬೇಕು ಎನ್ನುತ್ತಾರೆ ಆರ್ಥಿಕ ತಜ್ಞರು. ಆದರೆ 10 ಲಕ್ಷ ಕೋಟಿ ರೂ.ಗೂ ಹೆಚ್ಚು ನಗದು ನೆರವು ನೀಡುವುದರ ಅಡ್ಡ ಪರಿಣಾಮಗಳ ಬಗ್ಗೆ ಮುಖ್ಯ ಆರ್ಥಿಕ ಸಲಹೆಗಾರ ಎಚ್ಚರಿಸಿದ್ದಾರೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top