– ಎಸ್ಸೆಸ್ಸೆಲ್ಸಿ ಎಕ್ಸಾಂ ರದ್ದತಿ, ಮಂದೂಡಿಕೆ ಬೇಡ: ತಜ್ಞರ ಅಭಿಮತ – ಸೆಂಟರ್‌ಗೆ ಹೋಗುವ ಬದಲು ಸ್ಕೂಲಲ್ಲೇ ಬರೆಸುವುದು ಸೂಕ್ತ.
ವಿಕ ಸುದ್ದಿಲೋಕ ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಬೇಕೇ ಬೇಡವೇ ಎಂಬ ಚರ್ಚೆ ಜೋರಾಗಿರುವ ನಡುವೆಯೇ, ವಿದ್ಯಾರ್ಥಿಗಳಿಗೆ ಅವರು ಕಲಿತ ಶಾಲೆಯಲ್ಲೇ ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ಪರೀಕ್ಷೆ ನಡೆಸಿದರೆ ಯಾವುದೇ ಸಮಸ್ಯೆ ಇಲ್ಲ ಎಂಬ ‘ಮಧ್ಯಮ ಸಲಹೆ’ಯೊಂದು ಕೇಳಿಬಂದಿದ್ದು, ಇದನ್ನು ಶಿಕ್ಷಣ ವಲಯವೂ ಬೆಂಬಲಿಸಿದೆ. ಜೀವನದ ಅತ್ಯಂತ ಪ್ರಮುಖ ಘಟ್ಟವಾಗಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ರದ್ದುಗೊಳಿಸಿ ಎಲ್ಲರನ್ನೂ ಉತ್ತೀರ್ಣಗೊಳಿಸುವುದು ಸಮಂಜಸವಲ್ಲ ಎಂದು ಶಿಕ್ಷಣ ತಜ್ಞರು ಸರಕಾರಕ್ಕೆ ಸಲಹೆ ನೀಡಿದ್ದಾರೆ. ಜೂನ್ 25ರಿಂದ ಜುಲೈ 4ರ ವರೆಗೆ ಸರಕಾರ ಪರೀಕ್ಷೆ ನಿಗದಿಪಡಿಸಿದೆ. ಈ ನಡುವೆ, ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಪರೀಕ್ಷೆಯ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ಕೊರೊನಾತಕಕ್ಕೆ ತಳ್ಳಬಾರದು ಎಂಬ ವಾದವೂ ಜೋರಾಗಿದೆ. ರಾಜ್ಯ ಸರಕಾರ ತಜ್ಞರ ಸಲಹೆಯಂತೆ ಪರೀಕ್ಷೆ ನಡೆಸುವುದು ಖಚಿತವಾಗಿದೆ. ಜತೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಮಕ್ಕಳು ದೊಡ್ಡ ಸಂಖ್ಯೆಯಲ್ಲಿ ಪರೀಕ್ಷಾ ಕೇಂದ್ರಗಳಿಗೆ ತೆರಳುವುದು, ಅಲ್ಲಿ ಒತ್ತಡದಲ್ಲಿ ಸಾಮಾಜಿಕ ಅಂತರವನ್ನು ಮರೆಯುವುದು, ಯಾರಿಗೋ ಇರಬಹುದಾದ ಸಣ್ಣ ಸಮಸ್ಯೆ ಇತರರಿಗೂ ಹರಡಿಬಿಡಬಹುದಾದ ಅಪಾಯದ ಹಿನ್ನೆಲೆಯಲ್ಲಿ ಹೆತ್ತವರಲ್ಲೂ ಆತಂಕಗಳಿವೆ. ಬಹುತೇಕ ಜಿಲ್ಲೆಗಳಲ್ಲಿ ಬಸ್ ವ್ಯವಸ್ಥೆ ಇನ್ನೂ ಆರಂಭಗೊಳ್ಳದೆ ಇರುವುದರಿಂದ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಹೋಗುವುದೂ ದೊಡ್ಡ ಸಮಸ್ಯೆಯೇ ಆಗುವ ಸಾಧ್ಯತೆ ಇದೆ. ಎಲ್ಲ ಪರ-ವಿರೋಧಗಳಿಗೆ ಕಿವಿಯಾಗಬೇಕಿರುವ ಸರಕಾರ ಎಲ್ಲರ ಆತಂಕವನ್ನು ನಿವಾರಿಸುವ, ಸುರಕ್ಷತೆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಅವರು ಓದುತ್ತಿರುವ ಶಾಲೆಯಲ್ಲೇ ಪರೀಕ್ಷೆ ನಡೆಸಿದರೆ ಉತ್ತಮ ಎಂಬ ಸಲಹೆ ಪೋಷಕರ ವಲಯದಿಂದಲೇ ಕೇಳಿಬರುತ್ತಿದೆ. ಇದಕ್ಕೆ ಹಲವು ತಜ್ಞರ ಬೆಂಬಲವೂ ಇದೆ.
ವಿಕೇಂದ್ರೀಕರಣವೇ ಪರಿಹಾರ : ಬೆಂಗಳೂರಿನ ಬಳಿಕ ಗರಿಷ್ಠ ಕೊರೊನಾ ಪಾಸಿಟಿವ್ ಇರುವ ಮಂಡ್ಯ ಜಿಲ್ಲೆಯಲ್ಲಿ ಒಟ್ಟು 449 ಪ್ರೌಢ ಶಾಲೆಗಳಿವೆ. ಇಲ್ಲಿನ ಮಕ್ಕಳಿಗೆ 82 ಸೆಂಟರ್‌ಗಳನ್ನು ಗುರುತಿಸಲಾಗಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರಿರುವ ಕೆ.ಆರ್.ಪೇಟೆ ತಾಲೂಕಿನಲ್ಲಿ 52 ಹೈಸ್ಕೂಲ್ ಮತ್ತು 9 ಸೆಂಟರ್‌ಗಳಿವೆ. ಸರಾಸರಿ ಒಂದು ಸೆಂಟರ್‌ಗೆ ಆರು ಶಾಲೆಗಳ ವಿದ್ಯಾರ್ಥಿಗಳು ಬರಬೇಕು. ಬೆಳಗಾವಿಯ ಬೈಲಹೊಂಗಲ ತಾಲೂಕಿನ ಅಂಕಿಅಂಶವೂ ಇದನ್ನೇ ಹೇಳುತ್ತದೆ. 43 ಶಾಲೆಗಳಿಗೆ 13 ಸೆಂಟರ್‌ಗಳು ಅಲ್ಲಿವೆ. ಹೀಗೆ ಒಂದೇ ಸೆಂಟರ್‌ಗೆ ಹಲವು ಶಾಲೆಯ ವಿದ್ಯಾರ್ಥಿಗಳು ಹೋಗುವುದರಿಂದ ಒಂದೇ ಕಡೆಗೆ ವಿದ್ಯಾರ್ಥಿಗಳ ಪ್ರವಾಹ ಮತ್ತು ಅಲ್ಲಿ ಜನದಟ್ಟಣೆ ಹೆಚ್ಚುತ್ತದೆ. ಒಂದೇ ಸಮಯದಲ್ಲಿ ಅಲ್ಲಿಗೆ ವಾಹನಗಳ ವ್ಯವಸ್ಥೆಯನ್ನೂ ಮಾಡಬೇಕಾಗುತ್ತದೆ. ಹೀಗಾಗಿ ಪಕ್ಕದಲ್ಲೇ ಇರುವ ಶಾಲೆಯಲ್ಲೇ ಪರೀಕ್ಷೆಗೆ ಅವಕಾಶ ನೀಡುವುದರಿಂದ ಈ ಓಡಾಟಗಳು ತಪ್ಪಲಿವೆ.
1000 ಆಂಗ್ಲ-ಕನ್ನಡ ಮಾಧ್ಯಮ ಶಾಲೆಗಳು ಜಾಗತಿಕ ನಿರೀಕ್ಷೆಗೆ ತಕ್ಕಂತೆ ಸರಕಾರಿ ಶಾಲಾ ಮಕ್ಕಳನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಈ ವರ್ಷದಿಂದಲೇ 1,000 ಕನ್ನಡ-ಆಂಗ್ಲ ಉಭಯ ಮಾಧ್ಯಮ ಶಾಲೆಗಳನ್ನು ಸರಕಾರ ಆರಂಭಿಸಲಿದೆ. ಈ ಶಾಲೆಗಳಲ್ಲಿ ಬಳಸಲಾಗುವ ಪಠ್ಯ ಪುಸ್ತಕಗಳಲ್ಲಿ ಕನ್ನಡ ಮತ್ತು ಆಂಗ್ಲ ಮಾಧ್ಯಮಗಳೆರಡರಲ್ಲೂ ಪಠ್ಯಗಳು ಇರಲಿವೆ. ಹಾಗೆಯೇ ಬೋಧನೆಯೂ ಎರಡೂ ಮಾಧ್ಯಮಗಳಲ್ಲಿ ಇರಲಿದೆ.
ಓದುವ ಶಾಲೆ ಯಾಕೆ ಸೂಕ್ತ?- ವಿದ್ಯಾರ್ಥಿಗಳಿಗೆ ತಮ್ಮದೇ ಶಾಲೆಯಲ್ಲಿ ಪರೀಕ್ಷೆ ಬರೆವ ನಿರಾಳತೆ – ಹೆಚ್ಚಿನವು ಕಾಲ್ನಡಿಗೆ ಹಾದಿ, ಕೆಲವೇ ಕಡೆ ವಾಹನ ಬಳಕೆ ಅನಿವಾರ್ಯತೆ – ಆ ಶಾಲೆಯ ಮಕ್ಕಳಷ್ಟೇ ಆಗಿರುವುದರಿಂದ ಒತ್ತಡ ಇರುವುದಿಲ್ಲ- ಸೋಂಕಿನ ಭೀತಿ ಇಲ್ಲ, ಪೋಷಕರಿಗೂ ಆತಂಕವಿಲ್ಲ. – ವ್ಯವಸ್ಥೆಯೂ ಸುಲಭ – ಇಡೀ ಶಾಲೆಯನ್ನು ಬಳಸಬಹುದಾದ್ದರಿಂದ ಸಾಮಾಜಿಕ ಅಂತರ ಸಮಸ್ಯೆ ಇಲ್ಲ – ವಿಷಯದ ಶಿಕ್ಷಕರನ್ನು ಹೊರತುಪಡಿಸಿ ಬೇರೆ ಶಿಕ್ಷಕರನ್ನು ವೀಕ್ಷಕರಾಗಿ ನೇಮಿಸಲು ಅವಕಾಶ – ಪ್ರಶ್ನೆಪತ್ರಿಕೆ ಸೋರಿಕೆ, ನಕಲು ನಿರ್ಬಂಧಕ್ಕೆ ಪಂಚಾಯಿತಿ ವ್ಯವಸ್ಥೆ ಬಳಸಬಹುದು. – ಅಗತ್ಯಬಿದ್ದರೆ ಕಾಲೇಜು ಉಪನ್ಯಾಸಕರ ಸೇವೆಯನ್ನೂ ಬಳಸಲು ಅವಕಾಶವಿದೆ – ಮಾಸ್ಕ್, ಸ್ಯಾನಿಟೈಸರ್ ಒದಗಿಸಲು ಅನುಕೂಲ, ವೈದ್ಯರ ಸೇವೆ ಲಭ್ಯ
ವಲಸೆ ಮಕ್ಕಳಿಗೂ ಅವಕಾಶ: ರಾಜ್ಯದ ನಾನಾ ಭಾಗಗಳಿಂದ ತಮ್ಮ ಊರಿಗೆ ತೆರಳಿರುವ ವಲಸೆ ಕಾರ್ಮಿಕರ ಮಕ್ಕಳಿಗೂ ತಾವು ವಾಸವಾಗಿರುವ ಪ್ರದೇಶದ ಸಮೀಪದ ಶಾಲೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಬಹುದು.
ಹೈಕೋರ್ಟ್ ಸಮ್ಮತಿ: ರಾಜ್ಯದಲ್ಲಿ ಜೂನ್ 25ರಿಂದ ನಡೆಸಲು ಉದ್ದೇಶಿಸಿರುವ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ಹೈಕೋರ್ಟ್ ರಾಜ್ಯ ಸರಕಾರಕ್ಕೆ ಅನುಮತಿ ನೀಡಿದೆ. ಆದರೆ, ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಕಿವಿಮಾತು ಹೇಳಿದೆ. ಇದರೊಂದಿಗೆ ಪರೀಕ್ಷೆ ನಡೆಸಲು ಹಾದಿ ಸುಗಮವಾಗಿದೆ.
* 16,000 ಪ್ರೌಢಶಾಲೆಗಳು
* 8.5 ಲಕ್ಷ ಪರೀಕ್ಷಾರ್ಥಿಗಳು
* 2879 ಪರೀಕ್ಷಾ ಕೇಂದ್ರಗಳು
ತಾಲೂಕಿನಲ್ಲಿಎಷ್ಟು?
ಹೈಸ್ಕೂಲ್ 50-70
ಸೆಂಟರ್ 10-15