ಸಾಲ ಮರುಪಾವತಿಯ ಅವಧಿ ಮುಂದೂಡಿಕೆಗೆ ಅವಕಾಶ ನೀಡಿರುವ ಆರ್‌ಬಿಐ, ಈ ಅವಧಿಯ ಬಡ್ಡಿ ಮನ್ನಾ ಮಾಡದಿರುವುದಕ್ಕೆ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಾಲದ ಇಎಂಐ ಕಟ್ಟಲು ಅವಧಿಯನ್ನು ಮಾರ್ಚ್‌ನಿಂದ ಆಗಸ್ಟ್‌ವರೆಗೆ, ಆರು ತಿಂಗಳ ಕಾಲ ಮುಂದೂಡಿದೆ. ಆದರೆ ಇದೇ ಅವಧಿಯಲ್ಲಿ ಸಾಲಕ್ಕೆ ಬಡ್ಡಿ ಸಂಗ್ರಹಿಸಲು ಬ್ಯಾಂಕ್‌ಗಳಿಗೆ ಅವಕಾಶ ನೀಡಿದೆ. ಇದು ಅನಿವಾರ್ಯ ಎಂದು ಕೋರ್ಟ್‌ಗೆ ನೀಡಿದ ವಿವರಣೆಯಲ್ಲಿ ಆರ್‌ಬಿಐ ಹೇಳಿದೆ. ಆರ್‌ಬಿಐ ನೀಡಿರುವ ಈ ಸೌಲಭ್ಯವೇ ಒಂದು ಬಗೆಯಲ್ಲಿ ವಿಚಿತ್ರ. ಇದನ್ನು ಒಂದೇ ಮಾತಿನಲ್ಲಿ ವಿವರಿಸುವುದಾದರೆ ‘ಮುಳುಗುವವನ ಮೇಲೆ ಬಂಡೆ ಹೊರಿಸಿದಂತೆ’ ಎನ್ನಬಹುದು.
ಈ ಯೋಜನೆಯಲ್ಲಿ ಮೇಲ್ನೋಟಕ್ಕೆ ಬ್ಯಾಂಕ್‌ಗಳು ಸಾಲಗಾರರ ಮೇಲೆ ಭಾರಿ ಕೃಪೆ ತೋರಿಸಿದಂತೆ ಕಾಣಿಸುತ್ತದೆ. ಆದರೆ ಈ ವಿನಾಯಿತಿ ಪಡೆಯುವವರು ಇನ್ನೊಂದು ಸುತ್ತಿನ ಉರುಳಿಗೆ ಕೊರಳು ಒಡ್ಡಿದಂತಾಗುತ್ತಿದೆ. ಉದಾಹರಣೆಗೆ, 20 ವರ್ಷಗಳ ಅವಧಿಗೆ 30 ಲಕ್ಷ ರೂ. ಗೃಹಸಾಲ ಪಡೆದು ಮಾಸಿಕ 30,000 ಇಎಂಐ ಕಟ್ಟುತ್ತಿರುವವರು ಒಟ್ಟು ಆರು ತಿಂಗಳು ಮೊರಾಟೋರಿಯಂ ಪಡೆದರೆ, ಈ ಆರು ತಿಂಗಳ ಕಾಲ ಬರಬೇಕಿದ್ದ ಅಸಲು ಹಾಗೂ ಬಡ್ಡಿಯ ಮೊತ್ತವನ್ನು ಬ್ಯಾಂಕ್‌ಗಳು ಅಸಲಿಗೇ ಸೇರಿಸುತ್ತವೆ. ಅಂದರೆ ಸುಮಾರು 1.80 ಲಕ್ಷ ರೂ.ಗಳಷ್ಟು ಹೆಚ್ಚುವರಿ ಹಣ ಅಸಲಿಗೆ ಸೇರುತ್ತದೆ. ಇದಕ್ಕೆ ಬಡ್ಡಿ ಸೇರಿದಾಗ ಗ್ರಾಹಕ ಹೆಚ್ಚುವರಿ ಸುಮಾರು 12 ತಿಂಗಳ ಕಾಲ ಸಾಲಪಾವತಿ ಮಾಡುತ್ತಿರಬೇಕಾಗುತ್ತದೆ. ವಾಹನ ಸಾಲದಲ್ಲೂ ಹೀಗೇ ಆಗುತ್ತದೆ. ಇದು ವಿನಾಯಿತಿಯಲ್ಲ, ಮುಂದೂಡಿಕೆಯಷ್ಟೇ.
ಆದರೆ ಈ ವಾಸ್ತವವನ್ನು, ನೈಜ ಲೆಕ್ಕಾಚಾರವನ್ನು ಗ್ರಾಹಕರಿಗೆ ಆರ್‌ಬಿಐ ವಿವರಿಸಿಲ್ಲ. ಸರಕಾರವೂ ಹೇಳಿಲ್ಲ. ಸಾಲ ನೀಡಿದ ಬ್ಯಾಂಕ್‌ಗಳು ಕೂಡ, ಮೊರಾಟೋರಿಯಂ ಬಯಸುತ್ತಿರುವ ಗ್ರಾಹಕರಿಗೆ ಇದನ್ನು ಸಮರ್ಪಕವಾಗಿ ತಿಳಿಸಿಲ್ಲ. ಇಲ್ಲಿ ಅವುಗಳು ಕೂಡ ತಮ್ಮ ಲಾಭದ ಲೆಕ್ಕಾಚಾರವನ್ನಷ್ಟೇ ಮಾಡಿವೆ. ಬಡ್ಡಿ ಹೆಚ್ಚು ಪಡೆಯಬಹುದು ಎನ್ನುವುದು ಈ ಬ್ಯಾಂಕ್‌ಗಳ ಲೆಕ್ಕಾಚಾರ. ಆದರೆ ಕೊರೊನಾದಿಂದ ಸಂಕಷ್ಟ ಅನುಭವಿಸುತ್ತಿರುವ, ಬದುಕಲೂ ಕಷ್ಟಪಡುತ್ತಿರುವ ಗ್ರಾಹಕರ ಮೇಲೆ ತಾವು ಕ್ರೂರ ಜೋಕ್ ಮಾಡುತ್ತಿದ್ದೇವೆ ಎಂಬುದು ಈ ಬ್ಯಾಂಕ್‌ಗಳ ಅರಿವಿಗೇ ಬಂದಿಲ್ಲ. ಮೊರಾಟೋರಿಯಂ ಬಗ್ಗೆ ಅರ್ಧಸತ್ಯ, ಸುಳ್ಳುಗಳನ್ನು ನಂಬುತ್ತಿರುವ ಗ್ರಾಹಕರು ವಾಸ್ತವ ಅರಿವಾದ ಬಳಿಕ ಮೋಸ ಹೋದ ಅನುಭವ ಹೊಂದುತ್ತಿದ್ದಾರೆ. ಹೇಗೋ ಕಂತು ಕಟ್ಟಬಹುದಾಗಿದ್ದವರು ಕೂಡ ವಿನಾಯಿತಿ ಬಯಸಿ ಈಗ ಪೇಚಾಡುತ್ತಿದ್ದಾರೆ. ಕನಿಷ್ಠ ಪಕ್ಷ ಈ ಬಗ್ಗೆ ಖಚಿತ ಮಾಹಿತಿಯನ್ನು ಒದಗಿಸುವ ಹೊಣೆಯನ್ನು ಆರ್‌ಬಿಐ ಹೊರಬೇಕಿತ್ತು ಹಾಗೂ ಬ್ಯಾಂಕ್‌ಗಳಿಗೆ ಈ ಬಗ್ಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕಿತ್ತು. ಬ್ಯಾಂಕ್‌ಗಳೂ ಈ ಮಾಹಿತಿಯನ್ನು ಮುಚ್ಚಿಟ್ಟಿವೆ ಅಥವಾ ಈ ಬಗ್ಗೆ ಜಾಣ ಮೌನ ತಾಳಿವೆ.
ಈ ದಿಕ್ಕಿನಲ್ಲಿ ಯೋಚಿಸಿದಾಗ ಸುಪ್ರೀಂ ಕೋರ್ಟ್ ಆರ್‌ಬಿಐಯನ್ನು ತರಾಟೆಗೆ ತೆಗೆದುಕೊಂಡಿರುವುದು ಸರಿಯಾಗಿಯೇ ಇದೆ. ಸಾಲದ ಅಸಲನ್ನು ಬ್ಯಾಂಕ್‌ಗಳು ಬಿಡಲಾಗದು ಎಂಬುದು ನಿಜ. ಆದರೆ ಬಡ್ಡಿಯಲ್ಲಿ ವಿನಾಯಿತಿ ನೀಡುವುದು ಇಂಥ ಸಂಕಷ್ಟಮಯ ಸನ್ನಿವೇಶದಲ್ಲಿ ಅಗತ್ಯವಾಗಿತ್ತು. ಮುಚ್ಚಿಹೋಗುತ್ತಿರುವ ಸಣ್ಣ ಹಾಗೂ ಕಿರು ಉದ್ಯಮಗಳು, ಸಾಲ ಮಾಡಿ ಟ್ಯಾಕ್ಸಿ ಅಥವಾ ಕ್ಯಾಬ್ ಓಡಿಸುತ್ತಿರುವವರು ಇಂಥ ಸಾಲಗಳಿಂದ ಮಾಡಿಕೊಂಡ ದುಡಿಮೆಯ ಸಾಧನಗಳಲ್ಲೇ ದಿನದ ಕೂಳನ್ನು ಕಾಣುತ್ತಾರೆ; ಕಳೆದೆರಡು ತಿಂಗಳು ಇಂಥವರಿಗೆ ದುರ್ಭರ ದಿನಗಳು. ಇಂಥವರ ಸಾಲದ ಬಡ್ಡಿಮನ್ನಾ ಮಾಡುವುದರಿಂದ ಈ ವರ್ಗ ಸ್ವಲ್ಪ ಉಸಿರಾಡಬಹುದಿತ್ತು. ಇನ್ನಾದರೂ ಬಡ್ಡಿ ಮನ್ನಾ ಮಾಡಬಹುದು ಅಥವಾ ಭಾಗಶಃ ವಿನಾಯಿತಿ ನೀಡುವ ಅವಕಾಶ ತೆರೆದೇ ಇದೆ.