– ಕೊರೊನೇತರ ರೋಗಿಗಳಿಗೆ ಸಿಗದ ಸ್ಪಂದನೆ
– ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‌ಗಳಿಗೆ ಸೋಂಕಿನ ಆತಂಕ
ವಿಕ ಬ್ಯೂರೊ ಬೆಂಗಳೂರು.
ರಾಜ್ಯದಲ್ಲಿ ಹಿಂದೆಲ್ಲ ಸುಲಭವಾಗಿ ದೊರೆಯುತ್ತಿದ್ದ ತುರ್ತು ಆರೋಗ್ಯ ಸೇವೆ ಈಗ ಮರೀಚಿಕೆಯಾಗಿದೆ. ಕೋವಿಡ್-19 ಹೊರತುಪಡಿಸಿ ಇತರ ರೋಗಗಳಿಗೆ ತುತ್ತಾದವರಿಗೆ ಮತ್ತು ವಯೋಸಹಜ ಕಾಯಿಲೆಯಿಂದ ಬಳಲುವವರು ಚಿಕಿತ್ಸೆ ಇಲ್ಲದೆ ಕಂಗಾಲಾಗಿದ್ದಾರೆ.
ಇಡೀ ಆರೋಗ್ಯ ಕ್ಷೇತ್ರ ಕೊರೊನಾ ನಿಯಂತ್ರಣದತ್ತ ಕೇಂದ್ರೀಕೃತವಾಗಿರುವುದು, ಹೆಚ್ಚಿನ ಜಿಲ್ಲಾಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆಗಳಾಗಿ ಪರಿವರ್ತಿಸಿರುವುದರಿಂದ ಇತರ ರೋಗಿಗಳಿಗೆ ತುರ್ತು, ಸಕಾಲದಲ್ಲಿ ಆರೋಗ್ಯ ಸೇವೆ ಲಭ್ಯವಾಗುತ್ತಿಲ್ಲ. ಅದರಲ್ಲೂ ಉಸಿರಾಟದ ತೀವ್ರ ತೊಂದರೆ (ಎಸ್ಎಆರ್‌ಐ -ಸಾರಿ), ಐಎಲ್ಐ(ಇನ್‌ಫ್ಲೂಯೆಂಜಾ), ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ತೊಂದರೆ, ಮೂತ್ರಪಿಂಡದ ತೊಂದರೆ ಸೇರಿದಂತೆ ವೃದ್ಧರು ಎದುರಿಸುವ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಸುಲಭದಲ್ಲಿ ಚಿಕಿತ್ಸೆ ದೊರೆಯುತ್ತಿಲ್ಲ. ಈ ಕಾರಣದಿಂದ ಬೆಂಗಳೂರು ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ತುರ್ತು ಚಿಕಿತ್ಸೆ ಸಿಗದೆ ರೋಗಿಗಳು ಮೃತರಾಗಿರುವ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ.
ಮಾಹಿತಿ ಮತ್ತು ಪರೀಕ್ಷೆ
ಖಾಸಗಿ ಆಸ್ಪತ್ರೆಗಳಲ್ಲಿ ಹೊರರೋಗಿ ವಿಭಾಗದಲ್ಲಿ ಸೇವೆ ದೊರೆಯುತ್ತಿದೆ. ಕೆಲ ಪ್ರದೇಶಗಳಲ್ಲಿ ಕ್ಲಿನಿಕ್‌ಗಳು ಕೂಡ ಬಾಗಿಲು ತೆರೆದಿದ್ದು, ಸಾಮಾನ್ಯ ಆರೋಗ್ಯ ಸೇವೆ ದೊರೆಯುತ್ತಿದೆ. ಆದರೆ ತೀವ್ರವಾದ ಕೆಮ್ಮು ಇರುವವರು, ಹೃದಯ, ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿರುವವರು ಬಂದರೆ ಅವರಿಗೆ ಚಿಕಿತ್ಸೆ ನೀಡಲು ವೈದ್ಯರು, ಶುಶ್ರೂಷಕರು ಹಿಂಜರಿಯುತ್ತಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುವವರು ಬಂದರೆ ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಿಯೇ ಮುಂದುವರಿಯಬೇಕೆಂಬ ಭಾವನೆ ಸಿಬ್ಬಂದಿಯಲ್ಲಿ ಬೆಳೆದಿದೆ. ಹೀಗೆ ಮಾಹಿತಿ ನೀಡುವಲ್ಲಿ ಸಮಯ ವ್ಯರ್ಥವಾಗುತ್ತಿದೆ. ಇನ್ನೂ ಕೆಲವೆಡೆ ರೋಗಿಯ ಗಂಟಲ ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿ ವರದಿಗೆ ಕಾಯಲಾಗುತ್ತಿದೆ. ಈ ವರದಿ ಬಂದ ನಂತರವೇ ರೋಗಿಗೆ ಚಿಕಿತ್ಸೆ ನೀಡುತ್ತೇವೆ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ.
ವೃದ್ಧರು ಬಹುಬೇಗ ಕೊರೊನಾ ಸೋಂಕಿಗೊಳಗಾಗುವ ಸಾಧ್ಯತೆ ಇರುವುದರಿಂದ ಆಸ್ಪತ್ರೆಗೆ ಬರುವ ವೃದ್ಧರು ಸೋಂಕಿಗೊಳಗಾದವರೇ, ಅಲ್ಲವೇ ಎಂದು ನಿರ್ಧರಿಸುವುದು ಕಷ್ಟ. ಇದರಿಂದಾಗಿ ರೋಗಿಯನ್ನು ಹೊರಗೆಯೇ ಗಂಟೆಗಟ್ಟಲೆ ಕಾಯಿಸುವ, ಬೇರೆ ಆಸ್ಪತ್ರೆಗಳಿಗೆ ಹೋಗಲು ಸೂಚಿಸುವುದು ಸಾಮಾನ್ಯವಾಗಿದೆ.
ಸಮಸ್ಯೆಗಳ ಸುಳಿ
– ಹಲವು ಜಿಲ್ಲೆಗಳಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಪೂರ್ಣ ಪ್ರಮಾಣದ ಸೇವೆ ಸಿಗುತ್ತಿಲ್ಲ.
– ಕೊರೊನಾ ಟೆಸ್ಟ್ ಆಗದೆ ಚಿಕಿತ್ಸೆ ನೀಡಲು ಮುಂದಾಗದ ಖಾಸಗಿ ಆಸ್ಪತ್ರೆಗಳು
– ಪೂರ್ಣ ಪ್ರಮಾಣದ ಸಾರಿಗೆ ವ್ಯವಸ್ಥೆ ಇಲ್ಲದೆ ಆಸ್ಪತ್ರೆಗಳಿಗೆ ಹೋಗಲು ಕಷ್ಟ.
– ಖಾಸಗಿ ಕ್ಲಿನಿಕ್‌ಗಳು ಪೂರ್ಣ ಪ್ರಮಾಣದಲ್ಲಿ ತೆರೆದಿಲ್ಲ.
– ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರವನ್ನೂ ಹೆಚ್ಚಿಸಲಾಗಿದೆ.
– ಜನರಿಗೂ ಆಸ್ಪತ್ರೆಗೆ ಹೋಗಲು ಭಯ
ವೆನ್ ಲಾಕ್‌ನಿಂದ 10 ಜಿಲ್ಲೆಗೆ ಸಮಸ್ಯೆ
ದಕ್ಷಿಣ ಕನ್ನಡ ಜಿಲ್ಲಾಸರಕಾರಿ ವೆನ್ಲಾಕ್ ಆಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆಯನ್ನಾಗಿ ಮಾಡಿದ್ದರಿಂದ ನೆರೆಯ ಸುಮಾರು 8-10 ಜಿಲ್ಲೆಯ ಬಡ, ಮಧ್ಯಮ ರೋಗಿಗಳಿಗೆ ಬಹಳಷ್ಟು ತೊಂದರೆಯಾಗಿದೆ.
ಸರಕಾರದ ಮನವಿ ಬಳಿಕ ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳು ತೆರೆದಿವೆ. ಕೋವಿಡ್ ಆಸ್ಪತ್ರೆಯಲ್ಲಿ ಸೇವೆ ನೀಡುವ ಸಿಬ್ಬಂದಿಗೆ ವಿಮೆ ನೀಡಲಾಗಿದೆ. ಇದನ್ನು ಖಾಸಗಿ ಆಸ್ಪತ್ರೆ ಸಿಬ್ಬಂದಿಗೂ ನೀಡಬೇಕು. ಕೋವಿಡ್ ಹಾಗೂ ನಾನ್ ಕೋವಿಡ್ ಎಂದು ಭೇದ ಮಾಡಬಾರದು.
-ಡಾ.ಎಸ್.ಶ್ರೀನಿವಾಸ್, ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ
ಪರೀಕ್ಷೆ ಸಂಕಟ
ಯಾವುದೇ ಗಂಭೀರ ಕಾಯಿಲೆ ಇರುವ ರೋಗಿಯನ್ನು ಆಸ್ಪತ್ರೆಗೆ ಒಯ್ದರೆ ಮೊದಲು ಅವರ ಸಮಸ್ಯೆಯನ್ನು ನೋಡುವ ಬದಲು ಕೊರೊನಾ ಇದೆಯೇ ಇಲ್ಲವೇ ಎನ್ನುವುದಕ್ಕೇ ಆದ್ಯತೆ ನೀಡಲಾಗುತ್ತಿದೆ. ಗಂಟಲ ಸ್ರಾವದ ಪರೀಕ್ಷೆಯ ವರದಿ ಬಂದ ಬಳಿಕವೇ ಚಿಕಿತ್ಸೆ ಮಾಡಬೇಕೋ ಬೇಡವೋ ಎನ್ನುವುದು ತೀರ್ಮಾನವಾಗುತ್ತವೆ. ಬೆಂಗಳೂರಿನಲ್ಲಿ ಹೊಟ್ಟೆನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರನ್ನು ಸೇರಿಸಿಕೊಳ್ಳಬೇಕೇ ಬೇಡವೇ ಎಂಬ ಚರ್ಚೆಯಲ್ಲಿ ಮುಕ್ಕಾಲು ತಾಸು ಕಳೆದಿತ್ತು. ಹೀಗಾಗಿ ಆಸ್ಪತ್ರೆ ಆವರಣದಲ್ಲೇ ಅವರು ಪ್ರಾಣ ಕಳೆದುಕೊಂಡರು. ಕೇರಳ ಮೂಲದ ಗರ್ಭಿಣಿ ಆಸ್ಪತ್ರೆ ಸಿಗದೆ ಆಟೊರಿಕ್ಷಾದಲ್ಲಿ ಮಗು ಹೆತ್ತ ಘಟನೆ ನಡೆದಿತ್ತು. ಮಂಗಳೂರಿನಲ್ಲಿ ರೋಗಿಯನ್ನು ಸೇರಿಸಿಕೊಳ್ಳಲು ಹಲವಾರು ಖಾಸಗಿ ಆಸ್ಪತ್ರೆಗಳು ನಿರಾಕರಿಸಿದ ಘಟನೆ ನಡೆದಿತ್ತು.
ಚಿಕಿತ್ಸೆ ನೀಡಲು ವೈದ್ಯರಿಗೇ ಭಯ
ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ 50-60 ವರ್ಷದ ವೈದ್ಯರು, ಶುಶ್ರೂಷಕರು ತುರ್ತು ಪರಿಸ್ಥಿತಿಯಲ್ಲಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಹಿಂಜರಿಯುತ್ತಿದ್ದಾರೆ. ಕ್ಲಿನಿಕ್ ಹೊಂದಿರುವ ಈ ವಯೋಮಾನದ ವೈದ್ಯರು ಲಾಕ್‌ಡೌನ್ ಸಡಿಲಗೊಂಡಾಗಲೂ ಕ್ಲಿನಿಕ್ ತೆರೆದಿಲ್ಲ. ಹಾಗೆಯೇ ಕೆಲ ಆಸ್ಪತ್ರೆಗಳಲ್ಲಿ ಈ ವಯೋಮಾನದ ವೈದ್ಯರು ಸೇವೆಗೆ ಹಾಜರಾಗುತ್ತಿಲ್ಲ ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ. ಚಿಕಿತ್ಸೆ ಪಡೆದ ವ್ಯಕ್ತಿಗೆ ಕೊರೊನಾ ಸೋಂಕು ಉಂಟಾದರೆ ವೈದ್ಯರಿಗೂ ಅದು ಅಂಟಿಕೊಳ್ಳುತ್ತದೆ.
ಲ್ಯಾಬ್ ಟೆಸ್ಟ್‌ಗಳೆಲ್ಲ ಖಾಸಗಿಗೆ
– ಹೆಚ್ಚಿನ ಜಿಲ್ಲಾಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್, ರಕ್ತ, ಮೂತ್ರ ಪರೀಕ್ಷೆಯ ಲ್ಯಾಬ್‌ಗಳು ಕೆಲಸ ಮಾಡುತ್ತಿಲ್ಲ. ಖಾಸಗಿ ಲ್ಯಾಬ್‌ಗಳಲ್ಲಿ ದುಬಾರಿ ದರ ನೀಡಬೇಕು.
– ಕೆಲವೊಂದು ಶಸ್ತ್ರ ಚಿಕಿತ್ಸೆ ವಿಚಾರದಲ್ಲೂ ಕೆಲ ವೈದ್ಯರು ಖಾಸಗಿಗೆ ರೆಫರ್ ಮಾಡುತ್ತಿದ್ದಾರೆ.
– ಔಷಧದ ಅಂಗಡಿಗಳಲ್ಲಿ ಜ್ವರ, ಕೆಮ್ಮಿಗೆ ಔಷಧ ನೀಡುತ್ತಿಲ್ಲ.
ಸಣ್ಣ ಪುಟ್ಟ ಸಮಸ್ಯೆಗಳನ್ನು ಕೇಳೋರಿಲ್ಲ
ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ತುರ್ತು ಶಸ್ತ್ರಚಿಕಿತ್ಸೆಗಳಿಗಷ್ಟೇ ಆದ್ಯತೆ, ಸಣ್ಣ ಪುಟ್ಟ ಸಮಸ್ಯೆಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಹಾಸನ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಪೂರ್ವದಲ್ಲಿ ದಿನಕ್ಕೆ 30-40 ಹೆರಿಗೆಯಾಗುತ್ತಿದ್ದರೆ ಈಗ 10-15 ಅಷ್ಟೆ. ಬಳ್ಳಾರಿಯ ಬ್ರಿಮ್ಸ್ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆ ಮಾಡಿದ ಬಳಿಕ ರೋಗಿಗಳನ್ನು ವಿಮ್ಸ್ಗೆ ಕಳುಹಿಸಲಾಗುತ್ತಿದೆ. ಇಲ್ಲಿ ಸಕಾಲಕ್ಕೆ ವೈದ್ಯರು ಸ್ಪಂದಿಸುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಕೊಪ್ಪಳ ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ಯಂತ್ರಗಳನ್ನು ಖಾಸಗಿ ಸೆಂಟರ್‌ಗೆ ಶಿಫ್ಟ್ ಮಾಡಲಾಗಿದೆ. ರೋಗಿಗಳ ಸಂಖ್ಯೆ ಜಾಸ್ತಿ ಇದೆ, ಸಾಮರ್ಥ್ಯ ಕಡಿಮೆ ಇರುವುದು ಸಮಸ್ಯೆಯಾಗಿದೆ. ವಿಜಯಪುರದಲ್ಲಿ ಮಕ್ಕಳ ತಜ್ಞರು ಕ್ಲಿನಿಕ್ ಬಂದ್ ಮಾಡಿದ್ದರಿಂದ ಪರದಾಟ ನಡೆದಿತ್ತು. 10 ದಿನಗಳಿಂದ ಜಿಲ್ಲಾಸ್ಪತ್ರೆಯಲ್ಲಿ ಹೊರರೋಗಿ ಸೇವೆ ಆರಂಭಿಸಿದ್ದರಿಂದ ಸಮಸ್ಯೆ ತಪ್ಪಿದೆ. ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸಿಸ್ ಸೇವೆ ನಿಲ್ಲಿಸಿದ್ದರಿಂದ ರೋಗಿಗಳು ದುಬಾರಿ ವೆಚ್ಚದ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸುವುದು ಅನಿವಾರ್ಯವಾಗಿತ್ತು.
ತಲೆ ಗಾಯದಂಥ ಚಿಕಿತ್ಸೆಗೆ ಅಸ್ಪತ್ರೆಗಳು ಸ್ಪಂದಿಸುತ್ತಿಲ್ಲ ಎಂದು ಸ್ವತಃ ಬೆಳಗಾವಿ ಜಿಲ್ಲಾವೈದ್ಯಾಧಿಕಾರಿ ಬಳಿ ಮೂರು ದೂರುಗಳು ದಾಖಲಾಗಿದ್ದವು.
ಮಂಗಳೂರು ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಚಿಕಿತ್ಸೆ ನೀಡಲಾಗುತ್ತಿದ್ದ 82 ಮಂದಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಾಲೂಕು ಆಸ್ಪತ್ರೆಗಳಲ್ಲೂ ಆಂಬ್ಯುಲೆನ್ಸ್ ಸೇವೆ ಇದೆ.