ದಾವಣಗೆರೆಯಲ್ಲಿ ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇಶದಲ್ಲಿ ಅಲ್ಲಲ್ಲಿ ಹೀಗೆ ಕ್ವಾರಂಟೈನ್‌ನಲ್ಲಿರುವ ಕೆಲವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳು ವಿರಳವಾಗಿಯಾದರೂ ವರದಿಯಾಗಿವೆ. ಕ್ವಾರಂಟೈನ್‌ನಲ್ಲಿದ್ದವರು ಓಡಿಹೋದ ಪ್ರಕರಣಗಳು ಸಾಕಷ್ಟಿವೆ. ಇನ್ನು ಹಲವರು ಅಂತಾರಾಜ್ಯ ವಿಮಾನ ಪ್ರಯಾಣ ಮಾಡಬೇಕಿದ್ದವರು, ತಾವು ತಲುಪಿದ ರಾಜ್ಯದಲ್ಲಿ ಕಡ್ಡಾಯ ಕ್ವಾರಂಟೈನ್‌ಗೆ ಒಳಗಾಗಬೇಕು ಎಂಬ ಶರತ್ತಿಗೆ ಒಪ್ಪದೆ ಹಾಗೇ ಮರಳಿದ ಘಟನೆಯೂ ನಡೆದಿದೆ. ಈ ಆತ್ಮಹತ್ಯೆಗಳು, ತಮಗೆ ಕೋವಿಡ್ ಇರಬಹುದು ಎಂಬ ಆತಂಕದಿಂದ ನಡೆದಿವೆ ಎಂದಾದರೆ ಇವರು ಅಜ್ಞಾನಕ್ಕೆ ಬಲಿಯಾಗಿದ್ದಾರೆ ಎಂದೇ ಹೇಳಬೇಕಾಗುತ್ತದೆ. ಹಾಗೇ ಕ್ವಾರಂಟೈನ್ ಬಗ್ಗೆ ಜನರಲ್ಲಿ ಭಯ, ಜಿಗುಪ್ಸೆಗಳು ಕೂಡ ವ್ಯಕ್ತವಾಗುತ್ತಿರುವುದನ್ನು ಈ ಪ್ರಕರಣಗಳ ಮೂಲಕ ಕಾಣಬಹುದು. ಕೋವಿಡ್ ಬಂದರೆ ಸಾವು ಖಚಿತ ಎನ್ನುವ, ಕ್ವಾರಂಟೈನ್ ಎಂದರೆ ಜೈಲು ಎನ್ನುವ ತಪ್ಪು ಕಲ್ಪನೆಗಳನ್ನು ನಾವು ಜನಮನದಿಂದ ನಿವಾರಿಸಲೇಬೇಕಿದೆ.
ಮುಖ್ಯವಾಗಿ, ಕೋವಿಡ್ ಸೋಂಕಿತರಾದವರಿಗೆ ಕೌನ್ಸೆಲಿಂಗ್ ನಡೆಸಬೇಕಾದ ಅವಶ್ಯಕತೆ ಇದೆ. ಎಲ್ಲರಿಗೂ ಈ ಸೋಂಕಿನ ಬಗ್ಗೆ ಸರಿಯಾದ ತಿಳಿವಳಿಕೆ ಇದೆ ಎನ್ನಲಾಗುವುದಿಲ್ಲ. ಕೊರೊನಾ ಬಗ್ಗೆ ಮಾಹಿತಿಯಂತೆ ತಪ್ಪು ಕಲ್ಪನೆಗಳೂ ಸಮಾಜದಲ್ಲಿ ಹೇರಳವಾಗಿವೆ. ಭಯಭೀತಿಯ ಚಿತ್ರಣಗಳೂ ಪೂರ್ವಗ್ರಹಗಳೂ ರೋಗಿಯ ಮನಸ್ಸನ್ನು ಸಂಪೂರ್ಣ ಕದಡಿ ಮಾನಸಿಕ ಸ್ವಾಸ್ಥ್ಯಕ್ಕೆ ಧಕ್ಕೆಯಾಗುವ ಸಂಭವ ಇಲ್ಲದಿಲ್ಲ. ಕಾಯಿಲೆಯ ಭಯದಿಂದ ಮಾಡಿಕೊಳ್ಳುವ ಆತ್ಮಹತ್ಯೆಗಳಿಗೆ ಇಂಥ ಪೂರ್ವಗ್ರಹಗಳೇ ಕಾರಣ. ಹೀಗಾಗಿ ಕೋವಿಡ್ ಸೋಂಕಿತರಂತೆ ಅದರ ಶಂಕೆಯಿಂದ ಕ್ವಾರಂಟೈನ್‌ನಲ್ಲಿ ಇರುವವರಿಗೂ, ಅವರ ಆತಂಕಗಳನ್ನು ಕೇಳಿಸಿಕೊಂಡು ಕೌನ್ಸೆಲಿಂಗ್ ನೀಡುವ ಸೌಲಭ್ಯ ಇರಬೇಕು.
ಕೊರೊನಾ ವೈರಸ್ ಪಾಸಿಟಿವ್ ಕಂಡುಬಂದವರೆಲ್ಲವರೂ ಕ್ವಾರಂಟೈನ್‌ನಲ್ಲಿ ಇರಬೇಕು- ಯಾಕೆಂದರೆ ಅವರಿಂದ ಅದು ಇನ್ನೊಬ್ಬರಿಗೆ ಹರಡಬಾರದು ಎಂಬುದಕ್ಕಷ್ಟೇ. ಕ್ವಾರಂಟೈನ್ ಎಂದರೆ ಜೈಲಲ್ಲ. ಅದು ಸೋಂಕಿತ ವ್ಯಕ್ತಿ ಇನ್ನೊಬ್ಬರ ಸಂಪರ್ಕವಿಲ್ಲದೆ 14 ದಿನ ಕಳೆಯಬೇಕಾದ ತಾಣ. ಅಲ್ಲಿ ಆತ ಸೂಕ್ತ ಚಿಕಿತ್ಸೆಗಳನ್ನು ಪಡೆಯುತ್ತಾನೆ. ಶೇ.80 ಮಂದಿಯಲ್ಲಿ ಕೋವಿಡ್ ಜ್ವರ, ಕೆಮ್ಮು, ಗಂಟಲುನೋವು ಮುಂತಾದ ಸಣ್ಣಪುಟ್ಟ ಲಕ್ಷಣಗಳನ್ನು ತೋರಿಸಿ ಹೊರಟುಹೋಗುತ್ತದೆ. ನೂರಕ್ಕೆ ಎರಡು ಮಂದಿಗೆ ಮಾತ್ರ ಉಸಿರಾಟದ ಸಮಸ್ಯೆ ಉಂಟಾಗಬಹುದು. ಇವರು ಕೂಡ ತೀವ್ರ ನಿಗಾ ಘಟಕದಲ್ಲಿ ಚೇತರಿಸಿಕೊಳ್ಳುತ್ತಾರೆ. ಇನ್ನು, ಸೋಂಕಿತ ವ್ಯಕ್ತಿಯ ನಿಕಟ ಸಂಪರ್ಕಕ್ಕೆ ಬಂದವರನ್ನೂ ಕ್ವಾರಂಟೈನ್‌ನಲ್ಲಿ ಇಡಲಾಗುತ್ತದೆ. ಅವರು ಕಾಯಿಲೆ ಪೀಡಿತರಲ್ಲ; ವೈರಸ್ ಅವರನ್ನೂ ಸೇರಿರಬಹುದು ಹಾಗೂ ಅವರಿಗೆ ಅಗತ್ಯಬಿದ್ದರೆ ಶೀಘ್ರವೇ ಚಿಕಿತ್ಸೆ ನೀಡಬೇಕು ಮತ್ತು ಇತರರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಈ ಕ್ವಾರಂಟೈನ್. ಕ್ವಾರಂಟೈನ್‌ನಲ್ಲಿ ಇರುವವರು ನಾಗರಿಕತೆಯಿಂದ ಆಚೆಗಿರುವವರಲ್ಲ, ಅಸ್ಪೃಶ್ಯರಲ್ಲ. ಅವರು ಎಲ್ಲ ಬಗೆಯ ನಾಗರಿಕ ಹಕ್ಕು, ಸೌಲಭ್ಯ, ಚಿಕಿತ್ಸೆಯ ಹಕ್ಕು ಹೊಂದಿರುವವರೇ. ಹೀಗೆ ಕ್ವಾರಂಟೈನ್ ಆದವರೆಲ್ಲ ಹದಿನಾಲ್ಕು ದಿನಗಳ ಅವಧಿ ಮುಗಿದ ಬಳಿಕ ಮನೆಗೆ ಹೋಗಬಹುದು. ಅವರನ್ನು ಯಾರೂ ತಡೆಯುವಂತಿಲ್ಲ; ಅಸ್ಪೃಶ್ಯರಂತೆ ನಡೆಸಿಕೊಳ್ಳುವಂತೆಯೂ ಇಲ್ಲ. ಹೀಗಾಗಿ ಕ್ವಾರಂಟೈನ್ ಬಗ್ಗೆಯೂ ಭಯ ಬೇಡ; ಕ್ವಾರಂಟೈನ್‌ನಲ್ಲಿ ಇದ್ದು ಬಂದವರ ಬಗ್ಗೆ ಸಮಾಜದ ಇತರರು ‘ಅಸ್ಪೃಶ್ಯತೆ’ ಆಚರಿಸುವುದೂ ಸಲ್ಲ. ಎಲ್ಲರ ಜೊತೆಗೆ ಕಾಪಾಡಿಕೊಳ್ಳುವ ‘ಸೋಶಿಯಲ್ ಡಿಸ್ಟೆನ್ಸ್’ ಕಾಪಾಡಿಕೊಂಡರೆ ಸಾಕು.
ಕ್ವಾರಂಟೈನ್ ಉಲ್ಲಂಘನೆಗಳು ನಡೆಯುತ್ತಿರುವುದು ಏಕಾಂತದ ಹಾಗೂ ಕಾಯಿಲೆಯ ಕುರಿತ ಭಯದಿಂದ. ಹೀಗೆ ಉಲ್ಲಂಘಿಸುತ್ತಿರುವವರು ತಮ್ಮ ಜೊತೆಗೆ ಸಮಾಜವನ್ನೂ ಅಪಾಯಕ್ಕೆ ಒಡ್ಡಿಕೊಳ್ಳುತ್ತಿದ್ದೇವೆ ಎಂಬುದನ್ನು ಅರಿತುಕೊಳ್ಳಬೇಕು. ಒಂದು ವೇಳೆ ಇವರು ವೈರಾಣು ಪೀಡಿತರಾಗಿದ್ದರೆ ಕ್ವಾರಂಟೈನ್‌ನಲ್ಲಿದ್ದಾಗ ಚಿಕಿತ್ಸೆ ಸುಲಭ. ಹೊರಗಡೆ ತಿರುಗಾಡುತ್ತಿದ್ದರೆ ಆ ಅವಧಿಯಲ್ಲಿ ಅವರ ಸಂಪರ್ಕಕ್ಕೆ ಬಂದ ಅವರ ಕುಟುಂಬದವರನ್ನೂ ಇತರರನ್ನೂ ಹುಡುಕಿ ನಿಗಾ ಇಡಬೇಕಾದ ಹೆಚ್ಚುವರಿ ಹೊಣೆ ಉಂಟಾಗುತ್ತದೆ. ಇದನ್ನು ನಿವಾರಿಸೋಣ.