– ಸೇನಾನಿಗಳ ಕೈಯಲ್ಲಿದೆ ಕೊರೊನಾ ಮಣಿಸುವ ತಾಕತ್ತು | ಗಡಿ ಮೀರದಂತೆ ತಡೆಯಿರಿ
– ಆತಂಕ, ಭಯ, ಬೇಡಿಕೆಗಳನ್ನು ಬದಿಗಿಡಿ | ನಿಮ್ಮನ್ನೇ ನಂಬಿದವರನ್ನು ಮೊದಲು ಕಾಪಾಡಿ.
ವಿಕ ಸುದ್ದಿಲೋಕ ಬೆಂಗಳೂರು.
ಭಾರತೀಯ ಯೋಧರು ಪಾಕಿಸ್ತಾನ, ಚೀನಾ ಗಡಿಯಲ್ಲಿ ಕೆಚ್ಚೆದೆಯ ಹೋರಾಟದ ಮೂಲಕ ವೈರಿಗಳನ್ನು ಹಿಮ್ಮೆಟ್ಟಿಸಿ ದೇಶದ ಜನರ ಹೃದಯ ಗೆಲ್ಲುತ್ತಿದ್ದಾರೆ. ಇತ್ತ ಕೊರೊನಾ ಎಂಬ ಕಣ್ಣಿಗೆ ಕಾಣದ ವೈರಿಯ ವಿರುದ್ಧ ನಿರ್ಣಾಯಕ ಹೋರಾಟಕ್ಕೆ ನಿಂತ ವೈದ್ಯಲೋಕವನ್ನೂ ಜನ ವೀರ ಯೋಧರಂತೆ ಕಾಣುತ್ತಿದ್ದಾರೆ, ಕೈ ಮುಗಿಯುತ್ತಿದ್ದಾರೆ…
ಸರ್ವ ಕಾಲದಲ್ಲೂ ರೋಗಿಗಳ ಪಾಲಿಗೆ ದೇವರಾಗಿರುವ ವೈದ್ಯರಿಗೆ ಇದು ಸೈನಿಕನ ಕ್ಷಮತೆ, ವೃತ್ತಿಬದ್ಧತೆ ಮತ್ತು ಮಾನವೀಯತೆಯ ಉತ್ತುಂಗವನ್ನು ಮೆರೆದು ಹೊಸ ಚರಿತ್ರೆ ಬರೆಯುವ ಅಪೂರ್ವ ಅವಕಾಶ. ಕೊರೊನಾ ಯಾರಿಗೆ ಬೇಕಾದರೂ ತಗಲಲಿ, ಎಷ್ಟೇ ವ್ಯಾಪಿಸಲಿ, ವೈದ್ಯರು ನಮ್ಮ ಬೆನ್ನಿಗಿದ್ದಾರೆ, ವೈದ್ಯಕೀಯ ವ್ಯವಸ್ಥೆ ನಮ್ಮನ್ನು ಕಾಪಾಡುತ್ತದೆ ಎಂಬ ಒಂದು ಭರವಸೆ ಸಿಕ್ಕರೆ ಸಾಕು ಎಲ್ಲವನ್ನೂ ಮೆಟ್ಟಿ ನಿಲ್ಲಬಲ್ಲ ತಾಕತ್ತು ಎಲ್ಲ ರೋಗಿಗಳಿಗೆ ಬರುತ್ತದೆ.
ಆದರೆ, ಬೆಂಗಳೂರು ಸೇರಿ ಕೆಲವು ಭಾಗಗಳಲ್ಲಿ ಸಕಾಲದಲ್ಲಿ ವೈದ್ಯರ ನೆರವು ಸಿಗದೆ ಭಯದಿಂದ ತತ್ತರಿಸುವ, ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲೆಡೆ ಕೊರೊನಾ ಹೆಚ್ಚುತ್ತಿದ್ದಂತೆಯೇ ಕೆಲವರು ಸೋಂಕಿನ ಭಯದಿಂದ, ಇನ್ನು ಕೆಲವರು ಕೌಟುಂಬಿಕ, ಮತ್ತಿತರ ಕಾರಣಗಳಿಗಾಗಿ ಸೇವೆಗೆ ಹಿಂದೇಟು ಹಾಕುತ್ತಿರುವ ವಿದ್ಯಮಾನಗಳು ನಡೆಯುತ್ತಿವೆ. ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳೆರಡೂ ವೈದ್ಯರ ಕೊರತೆಯಿಂದ ಸೇವೆ ನೀಡಲು ಕಷ್ಟಪಡುತ್ತಿವೆ. ಇಷ್ಟರ ನಡುವೆಯೂ ನಮ್ಮ ನಡುವಿನ ಅದೆಷ್ಟೋ ವೈದ್ಯರು ತಮ್ಮ ಕುಟುಂಬ, ಮನೆ, ಮಕ್ಕಳನ್ನೂ ಮರೆತು ಕೊರೊನಾ ವಿರುದ್ಧದ ಸಮರದಲ್ಲಿ ತೊಡಗಿಕೊಂಡಿದ್ದಾರೆ. ಇಂಥ ಸಂಕಷ್ಟ ಕಾಲದಲ್ಲಿ ಜನಸೇವೆ ಮಾಡುವ ಭಾಗ್ಯ ಸಿಕ್ಕಿರುವುದು ಹಲವು ಜನ್ಮಗಳ ಪುಣ್ಯ ಫಲ ಎಂದೇ ಭಾವಿಸಿ ಸಾರ್ಥಕ ಭಾವ ಅನುಭವಿಸುತ್ತಿರುವ ವೈದ್ಯರೂ ಇದ್ದಾರೆ. ಎಲ್ಲ ಆತಂಕಗಳನ್ನು ಮೀರಿ ನಿಂತು ಕೊರೊನಾ ಮಣಿಸುವ ಪಣ ತೊಟ್ಟವರ ಸ್ಫೂರ್ತಿಯ ಮಾತುಗಳು ನಿಜಕ್ಕೂ ಭರವಸೆ ಹುಟ್ಟಿಸುತ್ತಿವೆ.
ಆದರೆ, ಸರಕಾರವೂ ವೈದ್ಯ ಲೋಕಕ್ಕೆ ಬೆಂಬಲವಾಗಿ ನಿಲ್ಲಬೇಕು. ಅವರಿಗೆ ಕನಿಷ್ಠ ಸೌಲಭ್ಯಗಳನ್ನು ಒದಗಿಸಬೇಕು, ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕಾಗಿದೆ.
ಆತಂಕಪಡುವ ಅಗತ್ಯವಿಲ್ಲ
ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಅವರ ಪ್ರಕಾರ, ವೈದ್ಯರಿಗೆ ಆತಂಕ ಸಹಜ. ಆದರೆ, ಭಯಪಡಬೇಕಾಗಿಲ್ಲ. ಮನೆಯಲ್ಲಿ ವೃದ್ಧ ತಂದೆ- ತಾಯಿ ಇದ್ದರೆ ಪ್ರತ್ಯೇಕವಾಗಿರುವುದು, ಮನೆಗೆ ಹೋಗದೆ ಆಸ್ಪತ್ರೆಯಲ್ಲೇ ಪ್ರತ್ಯೇಕ ಕೋಣೆಯಲ್ಲಿ ಇರುವುದು ಮೊದಲಾದ ಕ್ರಮಗಳನ್ನು ವೈದ್ಯರು ಅನುಸರಿಸಿ ಸೇವೆ ಸಲ್ಲಿಸಬಹುದು. ಕೆಲವರು ಟೆಲಿ ಮೆಡಿಸಿನ್ ಮೂಲಕ ಮಾರ್ಗದರ್ಶನ ನೀಡಬಹುದು. ಹೆಚ್ಚಿನವರು ವೈದ್ಯರ ನೆರವು ಸಿಗದೆ ಭಯದಿಂದಲೇ ಪ್ರಾಣ ಕಳೆದುಕೊಳ್ಳುವುದರಿಂದ ಅವರ ಬೆಂಬಲಕ್ಕೆ ನಿಂತರೆ ಪ್ರಾಣ ಉಳಿಸಬಹುದು.
ವೈದ್ಯ ಗೆಳೆಯರೇ ದಯವಿಟ್ಟು ಆಸ್ಪತ್ರೆಗೆ ಬನ್ನಿ
ನಾನು ಖಾಸಗಿ ಆಸ್ಪತ್ರೆಯ ಕೋವಿಡ್ ಐಸಿಯುನಲ್ಲಿ ಕೆಲಸ ಮಾಡುತ್ತಿದ್ದೇನೆ. ಬೆಳಗ್ಗೆ ಐದುವರೆ ಗಂಟೆಗೆ ಇಲ್ಲಿಗೆ ಬಂದಿದ್ದೇನೆ. ಈಗ ಮಧ್ಯ ರಾತ್ರಿ 12 ಗಂಟೆ ಆಗಿ ಹೋಗಿದೆ. ಅದೆಷ್ಟೋ ಜನ ಬಿಟ್ಟೂ ಬಿಡದೆ ಕರೆ ಮಾಡುತ್ತಿದ್ದಾರೆ. ಯಾಕೆಂದರೆ, ಅವರ ತಂದೆ ಉಸಿರುಕಟ್ಟಿ ಒದ್ದಾಡುತ್ತಿದ್ದಾರೆ, ಸೋದರರಿಗೆ ಉಸಿರಾಡಲು ಆಗುತ್ತಿಲ್ಲ, ಅವರ ಹೆಣ್ಮಕ್ಕಳು ಸಂಕಟಪಡುತ್ತಿದ್ದಾರೆ. ಆದರೆ, ಅವರಿಗೆ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಒಂದು ಬೆಡ್ ಸಿಗುತ್ತಿಲ್ಲ. ಇಲ್ಲಿ ನೋಡಿ ಇಡೀ ಆಸ್ಪತ್ರೆಯಲ್ಲಿ ನಾವಿಬ್ಬರೇ ಇದ್ದೇವೆ. ನಮ್ಮನ್ನು ಬಿಟ್ಟರೆ ಬೇರೆ ಯಾರೂ ಇಲ್ಲ ಇಲ್ಲಿ. ನಮ್ಮಲ್ಲಿ ಬೆಡ್‌ಗಳಿವೆ, ಆಕ್ಸಿಜನ್ ಇದೆ, ವೆಂಟಿಲೇಟರ್‌ಗಳಿವೆ. ನನ್ನಲ್ಲಿ ಇಂಥ ಇನ್ನೂ 30 ಬೆಡ್‌ಗಳಿವೆ. ಆದರೆ, ಇಲ್ಲಿ ಕೆಲಸ ಮಾಡಲು ಡಾಕ್ಟರ್‌ಗಳೇ ಇಲ್ಲ. ನನಗೆ ಹೆಚ್ಚೇನೂ ಬೇಡ. ದಿನಕ್ಕೆ ನಿಮ್ಮ ಆರು ಗಂಟೆಗಳ ಸಮಯ ಸಾಕು. ಗೆಳೆಯರೇ ಇದು ನನ್ನ ಕಳಕಳಿಯ ಮನವಿ. ಇದು ನಾವು ನಿಮ್ಮ ರಕ್ಷಣೆಗೆ ಬದ್ಧರಾಗಿದ್ದೇವೆ ಎಂದು ಭರವಸೆ ನೀಡೋ ಕಾಲ. ಕೆಲವೊಮ್ಮೆ ಸೈನಿಕರು ಮುಂಚೂಣಿಯಲ್ಲಿರುತ್ತಾರೆ, ಕೆಲವೊಮ್ಮೆ ಪೊಲೀಸರು ಸಾರಥ್ಯ ವಹಿಸುತ್ತಾರೆ. ಆತ್ಮೀಯ ವೈದ್ಯ ಗೆಳೆಯರೇ ಈಗ ನಾನು ಮತ್ತು ನೀವು ಮುಂಚೂಣಿಯಲ್ಲಿರಬೇಕಾದ ಸಮಯ. ನಾವು ಮಾನವೀಯತೆಯನ್ನು ಕಾಪಾಡುತ್ತೇವೆ ಎಂಬುದನ್ನು ತೋರಿಸಿಕೊಡೋಣ. ಇಲ್ಲಿರುವವರು ಯಾರೋ ಒಬ್ಬರ ತಾಯಿ, ಯಾರದೋ ಮಗಳು, ಯಾರದೋ ಸೋದರ, ಯಾರೋ ಒಬ್ಬರ ತಂದೆ. ಈ ಕ್ಷಣದಲ್ಲಿ ನಾವು ಅವರ ಬೆಂಬಲಕ್ಕೆ ನಿಲ್ಲಬೇಕಾಗಿದೆ. ಅವರ ಆರೈಕೆಯ ಭರವಸೆ ನೀಡೋಣ. ನಾವು ಎಷ್ಟು ಕಾಲ ಬದುಕುತ್ತೇವೋ ಗೊತ್ತಿಲ್ಲ. ಅದು ಮುಖ್ಯವೂ ಅಲ್ಲ. ಹೇಗೆ ಬದುಕುತ್ತೇವೆ ಎನ್ನುವುದೇ ಮುಖ್ಯ.
-ಡಾ. ಶಾರಿಖ್, ಬೆಂಗಳೂರು
ವೇತನ ಎಷ್ಟು?
ಸರಕಾರಿ ವೈದ್ಯರು
ತಜ್ಞ ವೈದ್ಯರು: 1.21 ಲಕ್ಷ ರೂ.
ಎಂಬಿಬಿಎಸ್: 80,000 ರೂ.
ಗುತ್ತಿಗೆ ವೈದ್ಯರು: 60,000 ರೂ.
ಖಾಸಗಿ ವೈದ್ಯರು
ಆರಂಭಿಕ: 60,000 ರೂ.
ತಜ್ಞರು: 1.50 ಲಕ್ಷ ರೂ.