ಕೈ ಸರಕಾರ ಪ್ರತಿಷ್ಠಾಪನೆಗೆ ಚಪ್ಪಡಿ ಕಲ್ಲಾಗುವೆ

– ಕೇಡರ್ ಬೇಸ್ ಪಕ್ಷ ಕಟ್ಟುವೆ | ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಡಿ.ಕೆ.ಶಿವಕುಮಾರ್ ಪ್ರತಿಜ್ಞೆ.

ವಿಕ ಸುದ್ದಿಲೋಕ ಬೆಂಗಳೂರು
ನಾನು ಕಾಂಗ್ರೆಸ್‌ನ ಸಾಮಾನ್ಯ ಕಾರ್ಯಕರ್ತ. ಬಳಿಕ ಅಧ್ಯಕ್ಷ . ನನಗೆ ಜೈ ಎನ್ನುವ ಬೆಂಬಲಿಗರು ಬೇಡ. ಕಾಂಗ್ರೆಸ್‌ಗೆ ಜೈ ಎನ್ನುವ ಕಾರ್ಯಕರ್ತರು ಬೇಕು. ಕಾಂಗ್ರೆಸ್ ಅನ್ನು ಅಧಿಕಾರದಲ್ಲಿ ಪ್ರತಿಷ್ಠಾಪನೆ ಮಾಡಲು ಪಕ್ಷ ದ ಪಾಲಿಗೆ ವಿಧಾನಸೌಧ ಮೆಟ್ಟಿಲುಗಳಿಗೆ ಚಪ್ಪಡಿಯಾಗುವೆ…: ಕೆಪಿಸಿಸಿ ನೂತನ ಅಧ್ಯಕ್ಷ ರಾಗಿ ಗುರುವಾರ ಪದಗ್ರಹಣ ಮಾಡಿದ ಡಿ.ಕೆ. ಶಿವಕುಮಾರ್ ಮಾತಿದು.
‘‘ಎಲ್ಲ ಐದು ಬೆರಳು ಸೇರಿದರೆ ಹಸ್ತ. ಅದೇ ರೀತಿ ಎಲ್ಲರೂ ಒಟ್ಟುಗೂಡಿ ಕೆಲಸ ಮಾಡಿದರೆ ಪಕ್ಷ ಕ್ಕೆ ಶ್ರೇಯಸ್ಸು. ನನಗೆ ಗುಂಪು, ಬಣ, ಜಾತಿ, ಮತದಲ್ಲಿ ನಂಬಿಕೆ ಇಲ್ಲ. ಕಾಂಗ್ರೆಸ್ ಪಕ್ಷ ನನ್ನ ಧರ್ಮ, ಅದೇ ನನ್ನ ಜಾತಿ. ಪಕ್ಷವನ್ನು ಅಧಿಕಾರಕ್ಕೆ ತರುವ ಗುರಿಗಾಗಿ ದುಡಿಯುತ್ತೇನೆ,’’ ಎಂದು ಘೋಷಿಸಿದರು.
‘‘ಸೋನಿಯಾ ಗಾಂಧಿಯವರು ಎಲ್ಲರೊಂದಿಗೆ ಸುದೀರ್ಘ ಚರ್ಚೆ ಮಾಡಿ, ರಾಜ್ಯದ ಎಲ್ಲ ನಾಯಕರ ಬಳಿ ಸಲಹೆ ಪಡೆದು ನನಗೆ ಈ ಜವಾಬ್ದಾರಿಯನ್ನು ಕೊಟ್ಟು ನಿಮ್ಮ ಮುಂದೆ ನಿಲ್ಲಿಸಿದ್ದಾರೆ. ನನಗೆ ಅಧ್ಯಕ್ಷ ಸ್ಥಾನದ ಹಂಬಲ ಇಲ್ಲ. ಆದರೆ, ಸವಾಲು ಎದುರಿಸಲು ಉತ್ಸಾಹವಿದೆ. ‘ಡಿ.ಕೆ. ಶಿವಕುಮಾರ್ ರಾಜಕೀಯ ಬದುಕು ಮುಗಿಯಿತು. ಬಿಜೆಪಿಯವರು ಕುತಂತ್ರ ಮಾಡಿ ನೀಡುತ್ತಿರುವ ಕಿರುಕುಳಕ್ಕೆ ಅವರ ರಾಜಕೀಯ ಅಂತ್ಯವಾಯಿತು ಎನ್ನುವ ಮಾತು ಕೇಳಿಬಂದಿದ್ದ ಸಂದರ್ಭದಲ್ಲಿ ಸೋನಿಯಾ ಗಾಂಧಿ ಅವರು ತಿಹಾರ್ ಜೈಲಿಗೆ ಬಂದು ನನ್ನನ್ನು ಸಹೋದರನಂತೆ ಕಂಡರು. ಒಂದು ಗಂಟೆ ಕಾಲ ಮಾತನಾಡಿ ಧೈರ್ಯ ತುಂಬಿದರು. ಈಗ ನನ್ನನ್ನು ಈ ಸ್ಥಾನದಲ್ಲಿ ನಿಲ್ಲಿಸಿದ್ದಾರೆ,’’ ಎಂದು ಹೇಳುತ್ತ ಭಾವುಕರಾದರು.

ಜತೆಗೂಡಿದರೆ ಯಶಸ್ಸು
ಅಧ್ಯಕ್ಷನಾದರೂ ನಾನು ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತ. ನಾನು ವೈಯಕ್ತಿಕ ನಾಯಕತ್ವಕ್ಕಿಂತ ಸಾಮೂಹಿಕ ನಾಯಕತ್ವದ ಮೇಲೆ ನಂಬಿಕೆ ಇಟ್ಟವನು. ಜತೆಗೂಡುವುದು ಆರಂಭ. ಜತೆಗೂಡಿ ಯೋಚಿಸುವುದು ಪ್ರಗತಿ. ಜತೆಗೂಡಿ ಕೆಲಸ ಮಾಡುವುದು ಯಶಸ್ಸು ಎಂಬುದನ್ನು ನಂಬಿರುವವನು.
ವಿದ್ಯಾರ್ಥಿ ನಾಯಕನಾಗಿ ಅಂತಿಮ ಪದವಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲೇ ಪಕ್ಷ ದ ಟಿಕೆಟ್ ಕೊಟ್ಟು ದೇವೇಗೌಡರ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷ ಅವಕಾಶ ನೀಡಿತು. ಇದನ್ನು ನಾನು ಮರೆಯಲು ಸಾಧ್ಯವಿಲ್ಲ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ ಎಂದು ನಂಬಿದ್ದೇನೆ.
ನನಗೆ ಯಾರು ಎಷ್ಟೇ ತೊಂದರೆ ಕೊಡಲಿ. ಆಮಿಷ ಒಡ್ಡಲಿ. ಕೇಸ್ ಹಾಕಲಿ. ಜೈಲಿಗೆ ಹಾಕಲಿ ಯಾವುದಕ್ಕೂ ನಾನು ಬೆದರುವುದಿಲ್ಲ. ಈ ಡಿ.ಕೆ ಶಿವಕುಮಾರ್ ಜಗ್ಗುವ ಮಗ ಅಲ್ಲ.

ಕೇಡರ್ ಬೇಸ್‌ಗೆ ಕೇರಳ ಮಾದರಿ
‘‘ಪಕ್ಷ ವನ್ನು ಮಾಸ್ ಬೇಸ್ ನಿಂದ ಕೇಡರ್ ಬೇಸ್ ಪಾರ್ಟಿಯಾಗಿ ಪರಿವರ್ತಿಸಬೇಕಿದೆ. ಯಾವುದೇ ನಾಯಕನಾದರೂ ಆತ ತನ್ನ ಬೂತ್ ಮಟ್ಟದಿಂದ ಪ್ರತಿನಿಧಿಸಬೇಕು. ಇದಕ್ಕೆ ಕೇರಳ ಮಾಡೆಲ್ ಪ್ರೇರಣೆ. ನಾವೆಲ್ಲರೂ ಸೇರಿ ಎಲ್ಲರಿಗೂ ಸ್ಥಾನಮಾನ ಸಿಗುವಂತೆ ಕಾರ್ಯಕ್ರಮ ರೂಪಿಸೋಣ,’’ ಎಂದು ಶಿವಕುಮಾರ್‌  ಆಶಯ ವ್ಯಕ್ತಪಡಿಸಿದರು.

ಬಂಡೆಯಲ್ಲ, ಚಪ್ಪಡಿ ಕಲ್ಲಾಗುವೆ
ಕೆಲವರು ನನ್ನನ್ನು ಕನಕಪುರ ಬಂಡೆ ಅನ್ನುತ್ತಾರೆ. ಕಲ್ಲುಪ್ರಕೃತಿ. ಕೆತ್ತಿದರೆ ಆಕೃತಿ. ಪೂಜಿಸಿದರೆ ಸಂಸ್ಕೃತಿ. ಬಂಡೆಗೆ ಉಳಿ ಪೆಟ್ಟು ಬಿದ್ದರೆ ಅಡಿಪಾಯದ ಕಲ್ಲಾಗುತ್ತದೆ. ಇನ್ನೂ ಪೆಟ್ಟು ಬಿದ್ದರೆ ಚಪ್ಪಡಿಯಾಗುತ್ತದೆ. ಇನ್ನು ಪೆಟ್ಟು ಬಿದ್ದರೆ ಬಾಗಿಲ ಕಂಬವಾಗುತ್ತದೆ. ನಿರಂತರ ಪೆಟ್ಟು ಬಿದ್ದರೆ ದೇವರ ಶಿಲೆಯಾಗುತ್ತದೆ. ನಾನು ಶಿಲೆಯಾಗಲು ಬಯಸುವುದಿಲ್ಲ. ಬದಲಿಗೆ ವಿಧಾನಸೌಧದ ಮೆಟ್ಟಿಲ ಕಲ್ಲಾಗುತ್ತೇನೆ. ನೀವು ಆ ಕಲ್ಲಿನ ಮೇಲೆ ನಡೆದುಕೊಂಡು ವಿಧಾನಸೌಧದ ಮೂರನೇ ಮಹಡಿ ತಲುಪಿದರೆ ಸಾಕು. ಅದರಲ್ಲಿ ತೃಪ್ತಿ ಪಡುತ್ತೇನೆ,’’ ಪಕ್ಷ ದ ಸಹೋದ್ಯೋಗಿಗಳಿಗೆ ಹೇಳಿದರು.

ಹೋದವರು ಹೋಗಲಿ
ಬಿಜೆಪಿ ಮುಕ್ತ ರಾಜ್ಯ ಮಾಡಲು ನಾವೆಲ್ಲ ಪ್ರತಿಜ್ಞೆ ಮಾಡಬೇಕಿದೆ. ಸರ್ವರಿಗೆ ಸಮಬಾಳು, ಸರ್ವರಿಗೆ ಸಮಪಾಲು ಎಂಬ ತತ್ವದ ಮೇಲೆ ನಾವು ಸಾಗೋಣ. ಆಪರೇಷನ್ ಕಮಲದ ಮೂಲಕ ಹೋದವರು, ಹೋಗುವವರು ಹೋಗಲಿ. ಸಂತೋಷದಿಂದ ಕಳುಹಿಸಿಕೊಡುತ್ತೇವೆ. ಈ ಕಾರ್ಯಕರ್ತರು ಹಾಗೂ ನಾಯಕರಿಗೆ ಪಕ್ಷ ಕಟ್ಟುವ ಶಕ್ತಿ ಇದೆ,’’ ಎಂದರು.

ದಶ ದೀಪ ಬೆಳಗಿದರು
– ಸಂವಿಧಾನದ ಪ್ರಸ್ತಾವನೆ ಪಠಣ ಮಾಡುವ ಮೂಲಕ ಪ್ರತಿಜ್ಞಾ ಕಾರ್ಯಕ್ರಮ ನಡೆದಿದ್ದು ವಿಶೇಷವಾಗಿತ್ತು.
– ಸೇವಾದಳದ ಗೌರವ ರಕ್ಷೆ, ಧ್ವಜ ವಂದನೆ, ವಂದೇ ಮಾತರಂ ಹಾಡಿ, ಹತ್ತು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ.
– ಕೆಪಿಸಿಸಿ ‘ಥಿಂಕ್ ಟ್ಯಾಂಕ್’ ಗುಂಪಿನ ನಾಯಕ ಬಿ.ಎಲ್.ಶಂಕರ್‌ರಿಂದ ಕಾರ್ಯಕ್ರಮ ನಿರ್ವಹಣೆ.
– ಕಾರ್ಯಕರ್ತರಿಗೆ ಸ್ವತಃ ಪ್ರತಿಜ್ಞಾ ವಿಧಿ ಬೋಧಿಸಿದ ಡಿ.ಕೆ. ಶಿವಕುಮಾರ್.
– ಪದಗ್ರಹಣಕ್ಕೆ ಸಾಕ್ಷಿಯಾದ ತಾಯಿ ಗೌರಮ್ಮ, ಪತ್ನಿ ಉಷಾ.

ಸರ್ವರನ್ನೂ ಬೆಸೆದ ವೇಣುಗಾನ
ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದ್ದು, ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡರೆ ರಾಜ್ಯದಲ್ಲಿ ಮತ್ತೆ ಯಶಸ್ವಿ ಆಗಲು ಸಾಧ್ಯವಿದೆ. ಶಿವಕುಮಾರ್ ಈ ಗುರಿಯನ್ನು ಸಾಧ್ಯವಾಗಿಸಲಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.
ಪ್ರತಿಜ್ಞಾ ಸಮಾರಂಭದಲ್ಲಿ ಮಾತನಾಧಿಡಿದ ಅವರು, ‘‘ಶಿವಕುಮಾರ್ ಡೈನಾಮಿಕ್ ಆಗಿರಬಹುದು. ಆದರೆ, ಒಬ್ಬರೇ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ಪಕ್ಷದ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು,’’ ಎಂದು ಕಿವಿಮಾತು ಹೇಳಿದರು.
‘‘ಈಶ್ವರ್‌ ಖಂಡ್ರೆ ರಾಜ್ಯದ ಭವಿಷ್ಯದ ನಾಯಕ ಆಗುವುದರಲ್ಲಿ ಸಂದೇಹವಿಲ್ಲ. ಸತೀಶ್ ಜಾರಕಿಹೊಳಿ ಎಲ್ಲೇ ಹೋದರೂ ಪಕ್ಷಕ್ಕೆ ನಿರೀಕ್ಷಿತ ಫಲಿತಾಂಶ ಖಚಿತ. ಅವರು ಬೆಳಗಾವಿ ರಾಜಕಾರಣಕ್ಕೆ ಮೀಸಲಾಗದೆ ರಾಜ್ಯ ಪ್ರವಾಸ ಮಾಡಬೇಕು. ಸಿದ್ದರಾಮಯ್ಯ ಅಧಿಕಾರಾವಧಿ ಕರ್ನಾಟಕದ ಪಾಲಿಗೆ ಸುವರ್ಣ ದಿನಗಳು. ಅವರು ತಳ ಸಮುದಾಯದ ಜನರ ಪರವಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದವರು. ಪಕ್ಷ ದ ಹಿರಿಯರಾದ ಖರ್ಗೆ ಜನಪರ ಕಾಳಜಿಯ ನಾಯಕ. ಎಲ್ಲರೂ ಒಟ್ಟಾಗಿ ಪಕ್ಷ ಬಲಪಡಿಸಬೇಕು,’’ ಎಂದರು.

ಕಾಂಗ್ರೆಸ್‌ನ ಸಮಸ್ತ ನಾಯಕರ ಹಾಜರಿ
ಕೆಪಿಸಿಸಿ ಕಚೇರಿಯ ಮುಖ್ಯ ವೇದಿಕೆ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯದ ಎಲ್ಲ ನಾಯಕರು ಪಾಲ್ಗೊಂಡರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಮಲ್ಲಿಕಾರ್ಜುನ ಖರ್ಗೆ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ವೀರಪ್ಪ ಮೊಯ್ಲಿ, ಕೆ.ಎಚ್. ಮುನಿಯಪ್ಪ, ಕೆ. ರೆಹಮಾನ್ ಖಾನ್, ಬಿ.ಕೆ. ಹರಿಪ್ರಸಾದ್, ಕೆಪಿಸಿಸಿಯ ಮಾಜಿ ಅಧ್ಯಕ್ಷರಾದ ಡಾ.ಜಿ.ಪರಮೇಶ್ವರ, ಆರ್.ವಿ. ದೇಶಪಾಂಡೆ, ದಿನೇಶ್ ಗುಂಡೂರಾವ್ ಹಾಗೂ ಎಚ್.ಕೆ.ಪಾಟೀಲ್, ರಾಮಲಿಂಗಾರೆಡ್ಡಿ, ಸಂಸದರು, ಶಾಸಕರು, ಮಾಜಿ ಸಚಿವರು, ಮುಂಚೂಣಿ ಘಟಕಗಳ ಪದಾಧಿಕಾರಿಗಳು ಸೇರಿ 150 ಕ್ಕೂ ಹೆಚ್ಚು ನಾಯಕರು ಪಾಲ್ಗೊಂಡರು.

ಡಿಜಿಟಲ್ ಪ್ರತಿಜ್ಞೆ ಸಕ್ಸಸ್
ಕೆಪಿಸಿಸಿ ‘ಪ್ರತಿಜ್ಞಾ’ ಕಾರ್ಯಕ್ರಮ ರಾಜಕೀಯ ಪಕ್ಷಗಳ ಸಭೆ, ಸಮಾರಂಭಗಳಿಗೆ ಹೈಟೆಕ್ ಸ್ಪರ್ಶದ ಮೇಲ್ಪಂಕ್ತಿ ಹಾಡಿತು. ಕೆಪಿಸಿಸಿ ನೂತನ ಕಟ್ಟಡದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ 7800 ಕಡೆಗಳಲ್ಲಿ ಡಿಜಿಟಲ್ ಸ್ವರೂಪದಲ್ಲಿ ಕಾಣಿಸಿಕೊಂಡಿತು. ಸುಮಾರು 10 ಲಕ್ಷ ಮಂದಿ ಡಿಜಿಟಲ್ ವೇದಿಕೆಗಳಲ್ಲಿ, ಲಕ್ಷಾಂತರ ಮಂದಿ ಫೇಸ್‌ಬುಕ್‌ ಲೈವ್ ಮತ್ತು ಯೂಟ್ಯೂಬ್‌ಗಳಲ್ಲಿ ವೀಕ್ಷಿಸಿದರು. ಯಾವುದೇ ತಾಂತ್ರಿಕ ಸಮಸ್ಯೆಗಳಿಲ್ಲದೆ ಕಾರ್ಯಕ್ರಮ ಯಶಸ್ವಿಯಾಯಿತು.

ನಂಬಿಕೆ ಬಿಡದ ಡಿಕೆಶಿ
ಸಮಾರಂಭ ಸ್ಥಳಕ್ಕೆ ಎಲ್ಲ ನಾಯಕರು ಎಡಗಡೆಯಿಂದ ಪ್ರವೇಶ ಪಡೆದರೆ, ಶಿವಕುಮಾರ್ ಅವರು ಮಾತ್ರ ಕಚೇರಿಯ ಬಲಗಡೆಯಿಂದ ಅಧಿಕಾರ ಸ್ವೀಕಾರಕ್ಕೆ ತೆರಳಿದರು. ಜತೆಗೆ ಕೆಪಿಸಿಸಿ ಕಟ್ಟಡ ಆವರಣದಲ್ಲಿದ್ದ ಅರಳೀಮರಕ್ಕೆ ಪೂಜೆ ಸಲ್ಲಿಸಿದರು. ವಿದ್ಯಾರ್ಥಿ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ಜತೆಗೆ ಡಿಕೆಶಿ ನಿವಾಸಕ್ಕೆ ತೆರಳಿದ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಅರ್ಚಕರು ಪ್ರಸಾದ ನೀಡಿದರು.

ಅಜ್ಜಯ್ಯನ ಸ್ಮರಣೆ
ಮಾತಿನ ಆರಂಭದಲ್ಲೇ ಡಿಕೆಶಿ ಅವರು ನಾಡದೇವತೆ ಚಾಮುಂಡೇಶ್ವರಿ, ನೊಣವಿಕೆರೆ ಅಜ್ಜಯ್ಯನ ಸ್ಮರಣೆ ಮಾಡಿದರು. ಜತೆಗೆ ನಾಡಿನ ಎಲ್ಲ ಧರ್ಮಗುರುಗಳ ಆಶೀರ್ವಾದ ಬೇಡಿದರು.

ಪೀಠಿಕೆ ಓದುವಾಗ ಎಡವಟ್ಟು
ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಡಿ.ಕೆ. ಶಿವಕುಮಾರ್ ಅವರಿಗೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪತ್ರದ ಮೂಲಕ ಹಾಗೂ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಕಾರ್ಯಕ್ರಮದ ವೇಳೆ ದೂರವಾಣಿ ಕರೆ ಮಾಡಿ ಶುಭಾಶಯ ಹೇಳಿದರು.
ತಪ್ಪಾಗಿ ಓದಿದ ರೆಹಮಾನ್ ಖಾನ್: ಸಂವಿಧಾನ ಪೀಠಿಕೆ ಭೋದನೆ ಮಾಡಿದ ಮಾಜಿ ಕೇಂದ್ರ ಸಚಿವ ಕೆ. ರೆಹಮಾನ್ ಖಾನ್‌ರಿಂದ ಆದ ತಪ್ಪುಗಳನ್ನು ನಾಯಕರು ಸರಿಪಡಿಸಿಕೊಂಡು ಪೀಠಿಕೆ ಓದಿದರು.

-ಸೋನಿಯಾ, ಪ್ರಿಯಾಂಕ, ರಾಹುಲ್ ಗಾಂಧಿ ಹಾರೈಕೆ

ಶಿವಕುಮಾರ್ ನೇತೃತ್ವದಲ್ಲಿ ಕೆಪಿಸಿಸಿ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲಿದೆ. ಸರಕಾರದ ವೈಫಲ್ಯಗಳ ವಿರುದ್ಧ ಹೋರಾಟ ಮಾಡಲಿದೆ ಎಂಬ ನಂಬಿಕೆ ಇದೆ.
– ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷೆ

ಪಕ್ಷದಲ್ಲಿ ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುವ ಜವಾಬ್ದಾರಿ ನಿಮ್ಮ ಮೇಲಿದ್ದು, ಇದನ್ನು ಮಾಡುವ ವಿಶ್ವಾಸ ನನಗಿದೆ. ನಿಮ್ಮ ಮುಂದಿನ ಕಾರ್ಯಗಳಿಗೆ ಶುಭವಾಗಲಿ.
-ರಾಹುಲ್ ಗಾಂಧಿ, ಎಐಸಿಸಿ ನಿಕಟಪೂರ್ವ ಅಧ್ಯಕ್ಷ

ಕೊರೊನಾ ಬಂದಾಗಿನಿಂದ ಪ್ರಧಾನಿ ಮನೆಯಿಂದ ಹೊರಬಂದಿಲ್ಲ. ನಾವೆಲ್ಲ ಜನರ ಮಧ್ಯೆ ಹೋಗಿ ಕೆಲಸ ಮಾಡುತ್ತಿದ್ದೇವೆ. ಕೊರೊನಾ ಮುಗಿದ ಬಳಿಕ ರಾಜ್ಯದ ಮೂಲೆ ಮೂಲೆಗೆ ಹೋಗೋಣ. ಸರಕಾರದ ವೈಫಲ್ಯಗಳನ್ನು ಜನರ ಮುಂದಿಡೋಣ.
– ಸಿದ್ದರಾಮಯ್ಯ, ಮಾಜಿ ಸಿಎಂ

ನಾವು ಎಷ್ಟೇ ಎತ್ತರದ ಸ್ಥಾನಕ್ಕೆ ಏರಿದರೂ ಪಕ್ಷ ದ ತತ್ತ್ವ ಬಿಡಬಾರದು. ಮೋದಿ, ಶಾ ಜೋಡಿ ದೇಶವನ್ನು ಹಾಳು ಮಾಡುತ್ತಿದೆ. ಕೆಟ್ಟ ಬಿಜೆಪಿ ಸರಕಾರವನ್ನು ಕಿತ್ತೊಗೆಯದಿದ್ದರೆ ದೇಶದ ಯುವಕರಿಗೆ ಭವಿಷ್ಯವಿಲ್ಲ. ಈ ಗುರಿಗಾಗಿ ಹೋರಾಟ ಮಾಡೋಣ.
-ಮಲ್ಲಿಕಾರ್ಜುನ ಖರ್ಗೆ, ಸಂಸದ

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top