ಕೊರೊನಾ ಹಿನ್ನೆಲೆಯಲ್ಲಿ ಒಂದು ಧ್ಯಾನ !

– ಪಿ.ಶೇಷಾದ್ರಿ.  
ಬೆಂಗಳೂರಿನಲ್ಲಿ ನಾನಿರುವ ಮನೆ ನಗರದ ನಡುವಿನ ವಸತಿ ಸಮುಚ್ಛಯದ ಆರನೇ ಮಹಡಿಯಲ್ಲಿದೆ. ಬೆಳಗ್ಗೆ ಎದ್ದ ತಕ್ಷಣ ನಮಗೆ ಕೇಳಿಸುವ ಮೊದಲ ಶಬ್ದ ಹಕ್ಕಿಗಳ ಚಿಲಿಪಿಲಿ. ಈ ನಗರದ ಮಧ್ಯೆ ಹಕ್ಕಿಗಳ ಕಲರವ ಕೇಳಲು ಮುಖ್ಯ ಕಾರಣವೆಂದರೆ ನಮ್ಮ ಅಪಾರ್ಟ್‌ಮೆಂಟ್‌ಗೆ ಹೊಂದಿಕೊಂಡಂತೆ ಇರುವ ಐದೆಕರೆ ಖಾಲಿ ಸೈಟು! ಪ್ರಾಯಶಃ ಯಾವುದೋ ತಕರಾರಿನಿಂದ ಅದು ಖಾಲಿ ಉಳಿದಿದೆ ಅಷ್ಟೆ. ಈ ಖಾಲಿ ಜಾಗದಲ್ಲಿ ದಟ್ಟವಾಗಿ ಗಿಡ ಮರಗಳು ಬೆಳೆದುಕೊಂಡು, ಪುಟ್ಟ ಕಾಡಿನಂತಿದೆ. ಇಲ್ಲಿ ಹಕ್ಕಿಗಳು ಸಂತೋಷದಿಂದ ಸಂಸಾರ ನಡೆಸುತ್ತಿವೆ. ಪಕ್ಕದಲ್ಲಿಯೇ ವೃಷಭಾವತಿ ಕಾಲುವೆ ಬೇರೆ ಹರಿಯುತ್ತಿದೆ. ಇನ್ನೇನು ಬೇಕು? ಇದು ನಮ್ಮ ಮನೆಯ ಪೂರ್ವ ದಿಕ್ಕು. ದಕ್ಷಿಣದ ಬಾಲ್ಕನಿಗೆ ಬಂದರೆ ವಿಸ್ತಾರವಾಗಿ ಹರಡಿಕೊಂಡ ಸಾವಿರಾರು ಮನೆಗಳ ಕಾಂಕ್ರೀಟ್‌ ಕಾಡು ತೆರೆದುಕೊಳ್ಳುತ್ತದೆ. ಇಲ್ಲಿಂದ ಬರುವ ಸದ್ದು ಯಾವ ಮಾರ್ಕೆಟ್‌ನ ಸದ್ದಿಗೂ ಕಡಿಮೆಯಿಲ್ಲ. ತರಕಾರಿ ಮಾರುವವರು, ಎಳನೀರಿನವರು, ಪಾತ್ರೆ ಪಗಡಿಯವರು ಒಂದೇ ಎರಡೇ.
ಮಾರ್ಚ್‌ ಇಪ್ಪತ್ನಾಲ್ಕರಿಂದ ಈ ಕಾಂಕ್ರೀಟ್‌ ಕಾಡಿನ ಸದ್ದು ಸಂಪೂರ್ಣ ನಿಂತು ಹೋಯಿತು. ಈ ನಿಶ್ಶಬ್ದಕ್ಕೆ ನಾವಷ್ಟೇ ಅಲ್ಲ ಪೂರ್ವದಿಕ್ಕಿನ ಪುಟ್ಟ ಕಾಡಿನ ಹಕ್ಕಿ-ಪಕ್ಷಿಗಳು ಗಲಿಬಿಲಿಗೊಂಡಿದ್ದವು. ದಿನದಲ್ಲಿ ಒಂದೆರಡು ಬಾರಿ ಪೊಲೀಸ್‌ ವ್ಯಾನ್‌ ಸಂಚಾರ ಬಿಟ್ಟರೆ ಬೇರೆ ಯಾವ ಚಟುವಟಿಕೆಯೂ ಸುಮಾರು ಐವತ್ತು ದಿನ ನಡೆಯಲಿಲ್ಲ. ಪಾಳುಬಿದ್ದ ಊರಿನಂತಿತ್ತು ಈ ಪ್ರದೇಶ. ಈಗ ಚಟುವಟಿಕೆ ಕೊಂಚ ಚಿಗುರಿದೆ. ಜೊತೆಗೆ ಕಂಡ ಹೊಸ ಬೆಳವಣಿಗೆಯೆಂದರೆ, ತಳ್ಳೋ ಗಾಡಿಯವರು ಕೂಗುವುದನ್ನು ನಿಲ್ಲಿಸಿದ್ದಾರೆ. ಏಕೆಂದರೆ ಬಾಯಿಗೆ ಮಾಸ್ಕ್‌ನ ಬೀಗ. ಆದರೆ ಕೂಗದೆ ವ್ಯಾಪಾರ ಹೇಗೆ? ಅವರೂ ಇದಕ್ಕೆ ಸಿದ್ಧವಾದವರಂತೆ ತಾಂತ್ರಿಕವಾಗಿ ಅಪ್‌ಡೇಟ್‌ ಆಗಿ, ಧ್ವನಿಯನ್ನು ಮನೆಯಲ್ಲೇ ರೆಕಾರ್ಡ್‌ ಮಾಡಿಕೊಂಡು ಬಂದು ಬ್ಯಾಟರಿ ಆಪರೇಟಡ್‌ ಯಂತ್ರದಿಂದ ಬೀದಿಯಲ್ಲಿ ಬಿತ್ತರಿಸಿಕೊಂಡು ಹೋಗುತ್ತಾರೆ. ಆದರೆ ಮುಂಚಿನ ಮನುಷ್ಯ ಧ್ವನಿಯಲ್ಲಿದ್ದ ಜೀವಂತಿಕೆ, ಲಯ ಎರಡೂ ಮಿಸ್‌ ಆಗಿದೆ. ನನ್ನ ಸಿನಿಮಾಗಳಲ್ಲಿ ವಾತಾವರಣದ ಶಬ್ದ ಬಳಸಬೇಕಾಗಿ ಬಂದಾಗ, ನಾನು ಎಷ್ಟೋ ಸಲ ಈ ತರಕಾರಿಯವರು ಕೂಗುವುದನ್ನು ರೆಕಾರ್ಡ್‌ ಮಾಡಿಕೊಂಡು ಹೋಗಿ ಬಳಸಿದ್ದುಂಟು. ಮುಂದೆ ಏನು ಮಾಡಲಿ?
* * *
ಎರಡು ತಿಂಗಳ ಹಿಂದೆ ನಮ್ಮೆಲ್ಲರಿಗೆ ಅನಿವಾರ್ಯ ರಜೆ ಬಂತಲ್ಲ. ಈ ರಜೆಯನ್ನು ಸಾರ್ಥಕಗೊಳಿಸಬೇಕು ಎಂದು ತೀರ್ಮಾನಿಸಿದೆವು. ಅದಕ್ಕಾಗಿ ಕೆಲಸಗಳ ಪಟ್ಟಿ ಸಿದ್ಧವಾಯಿತು. ಮನೆ ಕ್ಲೀನ್‌ ಮಾಡುವುದು, ಹಳೆಯ ಕಾಗದ ಪತ್ರ ಜೋಡಿಸುವುದು, ಬಳಸದ ವಸ್ತುಗಳನ್ನು ಬಿಸಾಕುವುದು ಹೀಗೇ… ಜೊತೆಗೆ ಓದು, ಸಂಗೀತ ಕೇಳುವಿಕೆ, ಚಿತ್ರವೀಕ್ಷಣೆ ಎಗ್ಗಿಲ್ಲದೆ ನಡೆಯಿತು. ಒಂದು ಹಂತದಲ್ಲಿ ಈ ನಿರಂತರತೆ ಬೋರ್‌ ಹೊಡೆಸಿತು. ಮತ್ತೇನು ಮಾಡುವುದು ಎಂದು ಹುಡುಕಿದಾಗ ಗಮನ ಸೆಳೆದದ್ದು ಧ್ಯಾನ!
ಭೈರಪ್ಪನವರ ‘ಸಾರ್ಥ’ ಕಾದಂಬರಿಯಲ್ಲಿ ಧ್ಯಾನದ ಬಗ್ಗೆ ಸ್ವಲ್ಪ ವಿಸ್ತೃತವಾಗಿ ಬರೆದಿರುವುದನ್ನು ಓದಿ ಮರುಳಾಗಿದ್ದೆ. ಎಂಟನೆಯ ಶತಮಾನದ ಆ ಕಾದಂಬರಿಯಲ್ಲಿ ನಾಗಭಟ್ಟನೆಂಬ ಒಬ್ಬಾತ ತಾನಿದ್ದ ರಾಜ್ಯ ಬಿಟ್ಟು ಬೇರೆ ಪ್ರದೇಶಕ್ಕೆ ಹೋಗಬೇಕಾದ ಅನಿವಾರ್ಯ ಒದಗಿ ಬಂದಿರುತ್ತದೆ. ಈಗಿನ ಕಾಲದಂತೆ ಆಗ ಬೆಳಗ್ಗೆ ಹೋಗಿ ಸಂಜೆ ಹಿಂದಿರುಗುವ ವ್ಯವಸ್ಥೆ ಇರಲಿಲ್ಲವಲ್ಲ. ಇವನು ಹಲವು ವರ್ಷ ದೂರದ ಪ್ರದೇಶದಲ್ಲಿ ಇರಬೇಕಾಗಿರುತ್ತದೆ. ಇತ್ತ ಊರಿನಲ್ಲಿ ಸುಂದರವಾದ ಪತ್ನಿಯನ್ನು ಬಿಟ್ಟು ಹೋಗಿರುತ್ತಾನೆ. ದೇಹ ಅಲ್ಲಿದ್ದರೂ ಮನಸ್ಸು ಇಲ್ಲಿಯೇ. ಪತ್ನಿಯೊಬ್ಬಳೇ ಏನು ಮಾಡುತ್ತಿರಬಹುದು? ಇನ್ನೂ ನನ್ನಲ್ಲಿಯೇ ಮನಸ್ಸಿಟ್ಟಿದ್ದಾಳೆಯೋ, ಅಥವಾ ಬೇರೆಯವರ ವಶವಾಗಿದ್ದಾಳೆಯೋ ಎಂಬ ಅನುಮಾನಗಳು ನಾಗಭಟ್ಟನನ್ನು ಕಾಡುತ್ತವೆ. ಒಂದು ಹಂತದಲ್ಲಿ ಧ್ಯಾನದಲ್ಲಿ ಉತ್ತುಂಗ ಸಾಧಿಸಿದ ಮೇಲೆ ಧ್ಯಾನಸ್ಥ ಸ್ಥಿತಿಯಲ್ಲಿ ಬೇರೊಬ್ಬರ ಮನಸ್ಸನ್ನು ಹೊಕ್ಕು ಅಲ್ಲಿ ನಡೆಯುವ ವ್ಯಾಪಾರಗಳನ್ನು ಅರಿಯಲು ಸಮರ್ಥನಾಗುತ್ತಾನೆ. ಧ್ಯಾನವನ್ನು ಸ್ವಾರ್ಥಕ್ಕೆ ಬಳಸಬಾರದು ಎಂಬ ಗುರುಗಳ ಎಚ್ಚರಿಕೆಯಿದ್ದರೂ ಧ್ಯಾನಸ್ಥನಾಗಿ ಪತ್ನಿಯ ಮನಸ್ಸಿನಲ್ಲಿ ನಡೆಯುತ್ತಿರುವುದನ್ನು ಕಾಣುತ್ತಾನೆ. ಆಕೆ ಇವನ ಗೆಳೆಯನ ಜೊತೆ ಇರುವುದು ಅರಿತು ದಂಗಾಗುತ್ತಾನೆ. ಇದು ಕಥೆಯಲ್ಲಿ ಬರುವ ಒಂದು ಸನ್ನಿವೇಶ.
ಈ ಧ್ಯಾನದಿಂದ ಮನಸ್ಸು ನಿರ್ಲಿಪ್ತ ಸ್ಥಿತಿಯನ್ನು ಸಾಧಿಸುತ್ತದೆ, ಕೆಲವು ಇಂದ್ರಿಯಾತೀತ ಶಕ್ತಿಗಳು ಸಂಪನ್ನವಾಗುತ್ತವೆ. ವಿಶೇಷ ಪ್ರಯತ್ನಪಟ್ಟರೆ ನಮ್ಮ ದೇಹದಲ್ಲಿ ಸಹಸ್ರಾರ ಚಕ್ರ ಪ್ರಕಾಶಿಸುವುದನ್ನು ಕಾಣಬಹುದು. ಕೊನೆಗೆ ಸಾಧನೆಯ ತುತ್ತತುದಿಗೇರಿದರೆ ಸಾಕ್ಷಾತ್ಕಾರ, ಆನಂದ, ಅನುಭೂತಿ… ಎಲ್ಲವನ್ನೂ ಮೀರಿದ ಸ್ಥಿತಿಯೇ ಶೂನ್ಯ. ಧ್ಯಾನದಿಂದ ಇಷ್ಟೆಲ್ಲಾ ಸಾಧಿಸಲು ಸಾಧ್ಯವೇ?
ಇಪ್ಪತ್ತೇಳು ವರ್ಷ ಹಿಂದೆ ಡಾ.ರಾಜ್‌ಕುಮಾರ್‌ ಅವರ ‘ಅಕಸ್ಮಿಕ’ ಚಲನಚಿತ್ರದಲ್ಲಿ ಸಹನಿರ್ದೇಶಕನಾಗಿ ಕೆಲಸ ಮಾಡುವ ಸಂದರ್ಭ ಒದಗಿ ಬಂದಿತ್ತು. ಅವರ ಯೋಗನಿಷ್ಠೆ ಕುರಿತು ಎಲ್ಲರಿಗೂ ತಿಳಿದೇ ಇದೆ. ಬ್ರಾಹ್ಮೀಮುಹೂರ್ತದಲ್ಲಿ ಎದ್ದು ಸಾಧನೆ ಮಾಡುತ್ತಿದ್ದರಂತೆ. ಬೆಳಗ್ಗೆ ಚಿತ್ರೀಕರಣಕ್ಕೆ ಬಂದರೆ ಅವರ ಮುಖದಲ್ಲಿ ಒಂದು ಬಗೆಯ ತೇಜಸ್ಸು ಇರುತ್ತಿತ್ತು. ಸಂಜೆಯ ಹೊತ್ತಿಗೆ ಅದು ನಿಧಾನವಾಗಿ ಕುಂದುತ್ತಿತ್ತು. ಸಂಜೆ ಮತ್ತೆ ಕೋಣೆಯಲ್ಲಿ ಕುಳಿತು ಪ್ರಾಣಾಯಾಮ ಮಾಡಿ ಒಂದಿಷ್ಟನ್ನು ಸಂಚಯ ಮಾಡಿಕೊಳ್ಳುತ್ತಿದ್ದುದನ್ನು ಕಂಡಿದ್ದೇನೆ. ಒಮ್ಮೆ ಅವರು ಪ್ರಾಣಾಯಾಮ ಕುರಿತು ಮಾತನಾಡುತ್ತಾ, ‘‘ನಾನು ಪ್ರಾಣವಾಯುವನ್ನು ನನ್ನ ದೇಹದ ಮೂಲೆ ಮೂಲೆಗೆ ಕಳಿಸುವ ಕಲೆ ಸಿದ್ಧಿಸಿಕೊಂಡಿದ್ದೇನೆ. ಕಾಲುಬೆರಳಿನ, ಅಷ್ಟೇ ಏಕೆ, ಕೂದಲಿನ ಬುಡಕ್ಕೂ ಇದು ಹರಿಯುವ ಅನುಭವ ನನಗಾಗಿದೆ! ಯಾವುದೇ ಭಾಗದಲ್ಲಿ ನೋವಿದ್ದರೆ ಅಲ್ಲಿಗೆ ಇದನ್ನು ಹರಿಸಿ ಆದಷ್ಟು ಮಟ್ಟಿಗೆ ಶಮನ ಮಾಡಿಕೊಳ್ಳಬಲ್ಲೆ,’’ ಎಂದು ಹೇಳುತ್ತಿದ್ದರು.
ಧ್ಯಾನ-ಯೋಗ-ಪ್ರಾಣಾಯಾಮಗಳ ಹಲವು ಕ್ರ್ಯಾಷ್‌ ಕೋರ್ಸ್‌ಗಳಲ್ಲಿ ನಾನೂ ಭಾಗವಹಿಸಿದ್ದೆ. ವಾರ, ಒಪ್ಪತ್ತಿನ ಆ ಶಿಬಿರಗಳು ಎಷ್ಟು ತಾನೆ ಹೇಳಿಕೊಟ್ಟಾವು? ಅಲ್ಲಾಗುತ್ತಿದ್ದುದು ಧ್ಯಾನ, ಯೋಗದ ಮೊದಲ ಮೆಟ್ಟಿಲಿನ ಪರಿಚಯ ಅಷ್ಟೇ. ನೀವು ನಿತ್ಯವೂ ಏಕಾಗ್ರತೆಯಿಂದ ಸಾಧನೆ ಮಾಡಿದರೆ ನಾವು ಹೇಳುವ ಎಲ್ಲ ಅನುಕೂಲಗಳು ನಿಮಗೆ ದೊರಕುತ್ತವೆ ಎನ್ನುತ್ತಿದ್ದರು. ಅಮಾವಾಸ್ಯೆಗೋ ಹುಣ್ಣಿಮೆಗೋ ಒಮ್ಮೆ ಕುಳಿತು ಮರ್ಕಟನಂತ ಮನಸ್ಸನ್ನು ಹಿಡಿಯಲು ಹೋದರು ಅದು ಕೈಗೆ ಸಿಕ್ಕೀತೆ? ಈ ಅನಿವಾರ್ಯ ರಜೆಯಲ್ಲಿ ಫೇಸ್‌ಬುಕ್‌ನಲ್ಲಿ ಧ್ಯಾನದ ಲೈವ್‌ ಕಾರ್ಯಕ್ರಮ ನಡೆಯುವುದನ್ನು ಗಮನಿಸಿದೆ. ಕುತೂಹಲದಿಂದ ಅದರಲ್ಲಿ ಭಾಗವಹಿಸಿದೆ. ಪ್ರತಿದಿನ ಬೆಳಗ್ಗೆ ಅರ್ಧ ಗಂಟೆ, ಸಂಜೆ ಅರ್ಧ ಗಂಟೆ ಈ ಕಾರ್ಯಕ್ರಮದಲ್ಲಿ ಗುರುಗಳು ಕುಳಿತು ಧ್ಯಾನದಲ್ಲಿ ಭಾಗಿಯಾಗುತ್ತಿದ್ದರು. ಅವರ ಸೂಚನೆ ಅನುಸರಿಸಿ ನಾವೂ ಅವರೊಂದಿಗೆ ಧ್ಯಾನ ಮಾಡಬಹುದಿತ್ತು.
ಅವರು ಹೇಳುತ್ತಿದ್ದರು: ನಿಮ್ಮ ಮನಸ್ಸು ಎಲ್ಲಿದೆ? ಹೃದಯದಲ್ಲೋ, ಮಿದುಳಿನಲ್ಲೋ? ನಿಮ್ಮ ಆಲೋಚನೆಗಳೇ ನಿಮ್ಮ ಮನಸ್ಸು. ಆಲೋಚನೆಗಳು ಬರುವುದು ಮಿದುಳಿನಿಂದ. ಮನಸ್ಸನ್ನು ಯಾವ ಕಾರಣಕ್ಕೂ ಹಿಡಿದಿಡಬೇಡಿ, ಹರಿಯಬಿಡಿ. ದೀರ್ಘ, ನಿಧಾನಗತಿಯ ಉಸಿರಾಟ ನಡೆಸಿ. ಯೋಚನೆಗಳು ಬಂದರೆ ಬರಲಿ. ಆದರೆ ಯಾವುದನ್ನೂ ಹಿಂಬಾಲಿಸಬೇಡಿ. ಹೊರನಿಂತು ಗಮನಿಸಿ. ನಂತರ ಅದರ ಪಾಡಿಗೆ ಅದನ್ನು ಹೋಗಲು ಬಿಟ್ಟುಬಿಡಿ. ನಮ್ಮ ದೇಹ ಪಂಚಭೂತಗಳಿಂದ ಆಗಿದೆ. ನೀವು ಜಗತ್ತಿನ ಒಂದು ಸಣ್ಣ ಅಂಶ. ನಿಮ್ಮ ಜೀವಂತಿಕೆಗೆ ಶಕ್ತಿ ಬೇಕು. ನಿಮ್ಮ ದೇಹ/ಮನಸ್ಸನ್ನು ಒಂದು ಬೋಗುಣಿ ಎಂದು ಭಾವಿಸಿ. ಬ್ರಹ್ಮಾಂಡದಿಂದ ಬರುವ ಪ್ರತಿಯೊಂದು ಶಕ್ತಿಯನ್ನೂ ಸ್ವೀಕರಿಸಿ. ತುಂಬಿಸಿಕೊಳ್ಳಿ. ಕಾಪಾಡಿಕೊಳ್ಳಿ…
ಹೀಗೇ ನಾಲ್ಕೈದು ವಾರ ನಡೆಯಿತು. ಇಷ್ಟು ದಿನ ನಿರಂತರವಾಗಿ ನಾನು ಎಂದೂ ಧ್ಯಾನ ಮಾಡಿರಲಿಲ್ಲ. ಇದರಿಂದ ವಿಶೇಷ ಅನುಭವಗಳು ಆಗದಿದ್ದರೂ ಒಂದಿಷ್ಟು ವಿಶ್ರಾಂತಿ ದೊರೆತಂತೆ ಭಾಸವಾಗುತ್ತಿತ್ತು. ಇನ್ನೂ ಏಕಾಗ್ರತೆಯಿಂದ ಧ್ಯಾನ ಮಾಡೋಣ, ಅಲೌಕಿಕ ಅನುಭವಗಳು ಮುಂದೆ ಆಗಬಹುದು ಎಂದು ನನ್ನನ್ನು ನಾನು ಈ ಪ್ರಕ್ರಿಯೆಗೆ ಒಡ್ಡಿಕೊಳ್ಳುತ್ತಿದ್ದೆ.
ಒಂದು ದಿನ ಮೊಬೈಲ್‌ನಲ್ಲಿ ಚಾರ್ಜ್‌ ಇರಲಿಲ್ಲ, ಮನೆಯಲ್ಲಿ ಪವರ್‌ ಕೂಡ ಇಲ್ಲ. ಅಷ್ಟರಲ್ಲಿ ಧ್ಯಾನದ ಸಮಯವಾಯಿತು. ಗುರುಗಳ ಆದೇಶವಿಲ್ಲದೆ ಧ್ಯಾನ ಮಾಡುವುದು ಹೇಗೆ? ಹೇಗೂ ಇಷ್ಟು ದಿನ ಮಾಡಿದ ಅನುಭವ ಇದೆಯಲ್ಲ ಎಂದು ಧ್ಯಾನ ಮಾಡಲು ಕುಳಿತೆ. ಮೂರು ಬರಿ ‘ಓಂ’ ಪಠಣವಾದ ಮೇಲೆ ದೀರ್ಘ ಉಸಿರಾಟ ಪ್ರಾರಂಭಿಸಿದೆ. ಆದರೆ ಗಮನ ಎತ್ತೆತ್ತಲೋ ಹೋಗುತ್ತಿತ್ತು. ಎಲೆಕ್ಟ್ರಿಸಿಟಿ ಯಾವಾಗ ಬರಬಹುದು, ಗುರುಗಳ ಧ್ವನಿ ಯಾವಾಗ ಕೇಳಿಸೀತು ಎಂಬುದರ ಕಡೆಯೇ ಆಲೋಚನೆ. ಹಾಗೂ ಹೀಗೂ ಕಷ್ಟಪಟ್ಟು ಮನಸ್ಸನ್ನು ಕೇಂದ್ರೀಕರಿಸಲು ಕುಳಿತೆ, ಆಗ ಕಿವಿಯಲ್ಲಿ ಗುರುಗಳು ಹೇಳುತ್ತಿದ್ದ ಮಾತುಗಳು ರಿಂಗಣಿಸತೊಡಗಿದವು! ಇದೇನು ಕರೆಂಟ್‌ ಬಂತೇ ಎಂದು ಕಣ್ಣನ್ನು ಕಿರಿದುಗೊಳಿಸಿ ಕಂಪ್ಯೂಟರ್‌ ಮುಂದಿದ್ದ ಮೊಬೈಲ್‌ನತ್ತ ನೋಡಿದೆ. ಇಲ್ಲ, ಮೊಬೈಲ್‌ನಲ್ಲಿ ಜೀವವಿಲ್ಲ. ಮತ್ತೆ ಈ ಧ್ವನಿ ಎಲ್ಲಿಂದ ಬರುತ್ತಿದೆ? ನಿಜ ಏನೆಂದರೆ, ಅದು ಎಲ್ಲಿಂದಲೂ ಬರುತ್ತಿರಲಿಲ್ಲ; ನನ್ನೊಳಗೇ ಇತ್ತು. ಇಷ್ಟು ದಿನ ಕೇಳಿ ಅಭ್ಯಾಸವಾಗಿದ್ದ ಧ್ವನಿ ಮಾರ್ದನಿಸುತ್ತಿತ್ತು.
ನಾನು ನನಗರಿವಿಲ್ಲದೇ ಆ ಧ್ವನಿಗೆ ಅಡಿಕ್ಟ್ ಆಗಿದ್ದೆ. ಯಾವುದಕ್ಕೂ ಅಡಿಕ್ಟ್ ಆಗಬಾರದು. ಈ ವ್ಯಸನದಿಂದ ಬಿಡಿಸಿಕೊಂಡು ಸ್ವಂತ ದಾರಿ ಹುಡುಕಿಕೊಳ್ಳಬೇಕು. ಪ್ರಯತ್ನಿಸಿದೆ. ಇಲ್ಲ, ಆಗಲಿಲ್ಲ. ಮನಸ್ಸು ಚಂಚಲವಾಯಿತು. ಏಕಾಗ್ರತೆಯೂ ದೊರೆಯಲಿಲ್ಲ. ತಪ್ಪು ನನ್ನಲ್ಲಿದೆಯಾ? ಧ್ವನಿಯಲ್ಲಿದೆಯಾ? ‘ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ’ ಎನ್ನುತ್ತಾರಲ್ಲ. ಇದನ್ನು ವ್ಯಾಖ್ಯಾನಿಸುವುದು ಹೇಗೆ? ಕಣ್ಣಿಗೆ ಕಾಣದ ಈ ವೈರಸ್‌ನ ದಿನಗಳಲ್ಲಿ ನಾನು ಹುಡುಕುತ್ತಿದ್ದ ‘ಧ್ಯಾನ’ಕ್ಕೆ ಉತ್ತರ ಸಿಗಬಹುದು ಎಂದುಕೊಂಡಿದ್ದೆ. ಸಿಗಲಿಲ್ಲ. ‘ನಾನು’ ಇನ್ನೂ ಮಾಗಬೇಕೇನೋ…

(ಲೇಖಕರು ಚಿತ್ರ ನಿರ್ದೇಶಕರು)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top