ಸರ್ಕಾರ ಸ್ನೇಹಿತನಾಗಬೇಕೆ ವಿನಾ ದಾನಿಯಾಗಬಾರದು

ಧರ್ಮಸ್ಥಳ ದೇಶವಿದೇಶಗಳಲ್ಲಿಯೂ ಖ್ಯಾತಿ ಪಡೆದ ಪುಣ್ಯಕ್ಷೇತ್ರ, ಕಾರಣಿಕ ಕ್ಷೇತ್ರ. ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಹೆಸರೂ ಅಷ್ಟೇ ಸುಪರಿಚಿತ. ಧಾರ್ವಿುಕ, ಸಾಮಾಜಿಕ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಕೊಂಡಿರುವ ಹೆಗ್ಗಡೆಯವರು ಈಗ ಪಟ್ಟಾಭಿಷೇಕದ 50ನೇ ವರ್ಷದ ಮಹತ್ವದ ಕಾಲಘಟ್ಟದಲ್ಲಿದ್ದಾರೆ. ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಪ್ರಧಾನ ಸಂಪಾದಕ ಹರಿಪ್ರಕಾಶ ಕೋಣೆಮನೆಯವರಿಗೆ ನೀಡಿದ ಈ ವಿಶೇಷ ಸಂದರ್ಶನದಲ್ಲಿ ಡಾ.ಹೆಗ್ಗಡೆಯವರು ತಮ್ಮ ಸುದೀರ್ಘ ಪಯಣದ ವಿವರಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಭಾಗ 1

# ಸಾಮಾಜಿಕ ಕಾರ್ಯ ಧರ್ಮಸ್ಥಳ ಕ್ಷೇತ್ರಕ್ಕೆ ವಿಶಿಷ್ಟ ಸ್ಥಾನಮಾನವನ್ನು ತಂದುಕೊಟ್ಟಿದೆ. ಸರ್ಕಾರ ಆರ್ಥಿಕ ಉದ್ದೇಶದಿಂದಲೋ ಅಥವಾ ಇನ್ಯಾವ ಕಾರಣದಿಂದಲೋ ಈ ಕೆಲಸಗಳನ್ನು ಮಾಡುತ್ತಿಲ್ಲ. ಸರ್ಕಾರಕ್ಕೆ ನೀವು ಏನು ಕಿವಿಮಾತು ಹೇಳಲು ಬಯಸುತ್ತೀರಿ?

ನಮ್ಮೆಲ್ಲ ಕಾರ್ಯಕ್ರಮಗಳು ಸರ್ಕಾರಕ್ಕೆ ಪ್ರೇರಕವಾಗಿವೆ. ನಮ್ಮ ಹಲವು ಕಾರ್ಯಕ್ರಮಗಳನ್ನು ಸರ್ಕಾರ ಒಪ್ಪಿ ನಂತರ ಅದನ್ನು ಜಾರಿಗೆ ತಂದಿದ್ದೂ ಇದೆ. ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದಂತೆ ಸ್ವಸಹಾಯ ಸಂಘಗಳನ್ನು ಸ್ಥಾಪಿಸಿದ್ದು, ಕೆರೆಗಳ ಹೂಳೆತ್ತುವ ಕಾರ್ಯ, ನೀರನ್ನು ಶುದ್ಧೀಕರಿಸಿ ನೀಡುವ ಶುದ್ಧ ಗಂಗಾ ಯೋಜನೆ ಹಾಗೂ ನಾವು ಅಳವಡಿಸಿರುವ ಸೋಲಾರ್ ವ್ಯವಸ್ಥೆಯಿಂದ ಪ್ರೇರಣೆಗೊಂಡ ಸರ್ಕಾರ ಅದನ್ನು ಜಾರಿಗೆ ತಂದಿದ್ದು ಇದಕ್ಕೆ ಕೆಲ ಉದಾಹರಣೆಯಷ್ಟೇ. ಇಷ್ಟು ವರ್ಷಗಳ ಅನುಭವದಲ್ಲಿ ನನಗೆ ಒಂದು ಸ್ಪಷ್ಟವಾಗಿದ್ದೇನೆಂದರೆ ಜನರ ಭಾಗವಹಿಸುವಿಕೆ ಇಲ್ಲದಿದ್ದರೆ ಯಾವ ಕಾರ್ಯಕ್ರಮವೂ ಯಶಸ್ವಿಯಾಗುವುದಿಲ್ಲ.

ಸರ್ಕಾರ ಎಂದ ಕೂಡಲೇ ಜನರಿಗೆ ಅದು ಕೊಡುವುದು, ನಾವು ತೆಗೆದುಕೊಳ್ಳುವುದು ಎಂಬ ಭಾವನೆ ಬಂದಿದೆ. ಸರ್ಕಾರದ ಧೋರಣೆಯಿಂದ ರೋಸಿಹೋಗಿ ಬಹಳಷ್ಟು ಜನರು ಅದರಲ್ಲಿ ತಮ್ಮ ಸಹಭಾಗಿತ್ವವನ್ನು ನೀಡುವುದೇ ಇಲ್ಲ. ಆದ್ದರಿಂದ ಧರ್ಮಸ್ಥಳದ ಎಲ್ಲಾ ಯೋಜನೆಗಳಿಗೆ ನಾವು ಜನರಲ್ಲಿ ಪ್ರಗತಿಯ ಪಾಲುದಾರರಾಗಿ ಎಂಬುದಾಗಿ ಸಂದೇಶವನ್ನು ಕೊಡುತ್ತೇವೆ. ಸರ್ಕಾರಕ್ಕೆ ನನ್ನ ಸಲಹೆಯೇನೆಂದರೆ, ಪ್ರತಿಯೊಂದು ಕುಟುಂಬಕ್ಕೂ ಒಂದು ಯೋಜನೆಯನ್ನು ಹಾಕಿಕೊಡಿ. ಪ್ರಗತಿಯ ಯೋಜನೆಯನ್ನು ಅವರೇ ಹಾಕಿಕೊಳ್ಳಲಿ. ಆಗ ಅವರು ಅದನ್ನು ಸಾಧಿಸಲು ಬೇಕಾದ ಪ್ರಯತ್ನಗಳನ್ನು ಮಾಡುತ್ತಾರೆ. ಸರ್ಕಾರ ಒಬ್ಬ ಸ್ನೇಹಿತನಾಗಬೇಕೆ ಹೊರತು ದಾನಿ ಆಗಬಾರದು.

# ಭಾರತದ ಯೋಗ, ಆಯುರ್ವೆದ ಮತ್ತು ಪ್ರಕೃತಿ ಚಿಕಿತ್ಸೆಗಳಿಗೆ ಇಂದು ಇಡೀ ಜಗತ್ತಿನಲ್ಲಿ ಮಹತ್ವ ದೊರೆಯುತ್ತಿದೆ. ಆದರೆ ತಾವು 35-40 ವರ್ಷಗಳ ಹಿಂದೆಯೇ ಇದೆಲ್ಲದಕ್ಕೂ ವ್ಯವಸ್ಥಿತವಾದ ಅಡಿಪಾಯವನ್ನು ಹಾಕಿದ್ದೀರಿ. ಈ ಎಲ್ಲಾ ಆಲೋಚನೆಗಳು ನಿಮಗೆ ಹೇಗೆ ಬಂತು?

ನಾನು ವಿದೇಶ ಪ್ರಯಾಣ ಮಾಡುವಾಗ ಅಲ್ಲಿಯ ಜನ ಜೀವನ ಮತ್ತು ಅವರ ಸ್ಥೂಲಕಾಯವನ್ನು ನೋಡಿದ್ದೆ. ಹಾಗೆಯೇ ಅವರ ಸಂಸ್ಕಾರ ಮತ್ತು ಸಂಸ್ಕೃತಿ ಬೆರಕೆಯಾಗಿದ್ದುದು ಕಂಡುಬಂತು. ಉದಾಹರಣೆಗೆ ಅಮೆರಿಕದಲ್ಲಿ ಕಲಬೆರಕೆ ಸಂಸ್ಕೃತಿಯಿದೆ. ಅವರದ್ದೇ ಅದ ಸಂಸ್ಕೃತಿಯೇ ಇಲ್ಲ. ಇದನ್ನೆಲ್ಲ ನೋಡಿ ನಮ್ಮ ಸಂಸ್ಕೃತಿಯನ್ನು ಏಕೆ ಪರಿಚಯ ಮಾಡಬಾರದು ಎಂಬ ಯೋಚನೆಯೂ ಬಂತು. ಆಗ ನನಗೆ ಮಹರ್ಷಿ ಮಹೇಶ್ ಯೋಗಿಯವರ ಹಾಗೂ ಇಸ್ಕಾನ್ ಸಂಸ್ಥೆಯ ಪರಿಚಯವಾಯಿತು. ಇವರೆಲ್ಲ ನಮ್ಮ ದೇಶದ ಜ್ಞಾನ, ಪರಂಪರೆ, ವೇದ ಜ್ಞಾನ ಮತ್ತು ಜೀವನಶೈಲಿ ವಿದೇಶಿಯರಿಗೆ ಆಕರ್ಷಣೀಯವಾಗಿ ತೋರುವಂತೆ ಮಾಡಿದರು. ಆಹಾರ ಪದ್ಧತಿಯೂ ಸೇರಿದಂತೆ ಅವರಲ್ಲಿ ಸಾತ್ವಿಕತೆಯನ್ನು ತಂದರು. ಅಂದರೆ, ನಮ್ಮ ಭಾರತೀಯ ಜೀವನಶೈಲಿಯಲ್ಲಿ, ಸಂಸ್ಕೃತಿಯಲ್ಲಿ ಮತ್ತು ಧಾರ್ವಿುಕ ಪರಂಪರೆಯಲ್ಲಿ ಸತ್ವ ಇದೆ ಎಂದು ನನಗನ್ನಿಸಿತು. ಹಾಗಾಗಿ ನಾವು ಮೂರು ಆಯುರ್ವೆದ ಕಾಲೇಜುಗಳನ್ನು ಮತ್ತು ಒಂದು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯನ್ನು ಸ್ಥಾಪಿಸಿದ್ದೇವೆ. ಇವತ್ತು ನಮ್ಮವರು ವಿದೇಶಗಳಲ್ಲಿ ಯೋಗ ಪ್ರಚಾರ ಮಾಡುತ್ತಿದ್ದಾರೆ.

# ಧರ್ಮಸ್ಥಳದ ಮಹಿಮೆಯ ಜೊತೆ ಜೊತೆಗೆ ತಮ್ಮ ಹೆಸರು ಸಹ ಮುಂಚೂಣಿಯಲ್ಲಿದೆ. ಎಷ್ಟರ ಮಟ್ಟಿಗೆ ಅಂದರೆ ಇತ್ತೀಚೆಗೆ ರಾಷ್ಟ್ರಪತಿ ಹುದ್ದೆಗೂ ತಮ್ಮ ಹೆಸರು ಕೇಳಿಬಂದಿತ್ತು. ಇದನ್ನು ಹೇಗೆ ವ್ಯಾಖ್ಯಾನಿಸುತ್ತೀರಿ?

ನನ್ನ 50 ವರ್ಷದ ಕಾರ್ಯದಲ್ಲಿ ಏನಾದರೂ ಸಾಧಿಸಿದ್ದರೆ, ಅದು ತಲೆಯ ಮೇಲೆ ಏನೂ ಹೊರೆಯನ್ನು ಇಟ್ಟುಕೊಳ್ಳದೆ ಬದುಕಿದ್ದು. ಈ ಕ್ಷೇತ್ರದಲ್ಲಿ ಅಹಂಕಾರಕ್ಕೆ ಎಂದಿಗೂ ಅವಕಾಶವಿಲ್ಲ. ಇದು ನನ್ನ ಕರ್ತವ್ಯ. ಎಷ್ಟೋ ಜನ್ಮದ ಪುಣ್ಯದ ಫಲದಿಂದ ಈ ಪೀಠವನ್ನು ಅಲಂಕರಿಸಿದ್ದೇನೆ ಎಂಬುದು ನನ್ನ ನಂಬಿಕೆ.

ಬಹಳ ಕ್ಷಿಪ್ರವಾಗಿ ತೀರ್ಮಾನ ತೆಗೆದುಕೊಳ್ಳುವುದು ನನ್ನ ಗುಟ್ಟು. ಯಾವುದಾದರೊಂದು ಯೋಗ್ಯ ಯೋಜನೆ ಹೊಳೆದರೆ ಆಗಿಂದಾಗೆ ಅದನ್ನು ಅನುಷ್ಠಾನಗೊಳಿಸಿಬಿಡುತ್ತೇನೆ. ಎಲ್ಲದಕ್ಕಿಂತ ಮುಖ್ಯವಾಗಿ ನನ್ನ ದೊಡ್ಡ ಸಂಪತ್ತು ನನ್ನ ಸಿಬ್ಬಂದಿ ಮತ್ತು ನನ್ನ ಸಹೋದರರು. ನಮ್ಮ ಗ್ರಾಮೀಣ ಸೇವಾ ಅಭಿವೃದ್ಧಿ ಯೋಜನೆಯಲ್ಲಿ ಸುಮಾರು 15 ಸಾವಿರ ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಲ್ಲೋ ಅಲ್ಲಿ ಇಲ್ಲಿ ಸಣ್ಣಪುಟ್ಟ ಲೋಪದೋಷಗಳಿರಬಹುದು. ಆದರೆ ಒಟ್ಟಾರೆ ಹೇಳುವುದಾದರೆ ಹೆಗ್ಗಡೆಯವರ ಚಿಂತನೆಯ ಜೊತೆಗೆ, ಅವರ ಸ್ಪೂರ್ತಿಯ ಜೊತೆಗೆ ಮತ್ತು ಅವರ ಎಲ್ಲಾ ಸೇವಾ ಮನೋಧರ್ಮದ ಜೊತೆಗೆ ಅವರೆಲ್ಲರೂ ಸೇರಿಕೊಳ್ಳುತ್ತಾರೆ.

# ತಾವು ಅಂದಾಜು ಸುಮಾರು 18 ವಯಸ್ಸಿನಲ್ಲಿದ್ದಾಗ ಈ ಪಟ್ಟಾಧಿಕಾರಕ್ಕೆ ಬಂದವರು. ಅಲ್ಲಿಂದ ಸುದೀರ್ಘ 50 ವರ್ಷಗಳ ಕಾಲ ಧರ್ಮದರ್ಶನ, ಮಾರ್ಗದರ್ಶನವನ್ನು ನೀಡುತ್ತಾ ಯಶಸಿ ್ವರ್ಣಧಾರತ್ವವನ್ನು ನಿರ್ವಹಣೆ ಮಾಡುತ್ತಾ ಬಂದವರು. ಈ ಅವಿರತ ಪಯಣವನ್ನು ವಿವರಿಸುವಿರಾ?

ಇದು ಮಂಜುನಾಥ ಸ್ವಾಮಿಯ ಸಾನ್ನಿಧ್ಯ. ಇಲ್ಲಿ ಶ್ರೀ ಮಂಜುನಾಥ ಸ್ವಾಮಿ ವಿಶೇಷವಾಗಿ ಶಿವಲಿಂಗದ ರೂಪದಲ್ಲಿದ್ದಾನೆ. ಇದರ ಅರ್ಚಕರು ವೈಷ್ಣವರು, ಮಾಧ್ವರು. ನಮ್ಮ ಹೆಗ್ಗಡೆ ಪರಂಪರೆ ಜೈನ ಸಮುದಾಯಕ್ಕೆ ಸೇರಿದ್ದು, ನಾವು ದಿಗಂಬರ ಜೈನ ಸಂಪ್ರದಾಯದವರು. ಹೀಗೆ ಈ ಮೂರರ ಸಮ್ಮಿಲನ ಧರ್ಮಸ್ಥಳದಲ್ಲಿ ಆಗಿದೆ. ಕರ್ನಾಟಕದಲ್ಲಿ ಅದರಲ್ಲೂ ಕರಾವಳಿ ಭಾಗದಲ್ಲಿ ದೈವಾರಾಧನೆ, ಭೂತಾರಾಧನೆಯನ್ನು ಎಲ್ಲಾ ಜಾತಿಯ ಮತ್ತು ಧರ್ಮದ ಜನರು ಆಚರಿಸುವುದು ಸಾಮಾನ್ಯ. ಹೀಗೆ ನಮ್ಮನ್ನೆಲ್ಲಾ ಬೆಸೆಯುವ ಶಕ್ತಿಯೇ ಕಲರಹೋ, ಕಳರ್​ಕಾಯಿ, ಕುಮಾರಸ್ವಾಮಿ ಮತ್ತು ಕನ್ಯಾಕುಮಾರಿ ಎಂಬ ಆ ನಾಲ್ಕು ಧರ್ಮದೇವತೆಗಳು. ಇವರಿಗೆ ಭಂಟನಾಗಿ ಅಣ್ಣಪ್ಪ ಭೂತನಿದ್ದಾನೆ. ಇವರೆಲ್ಲರೂ ಮಂಜುನಾಥ ಸ್ವಾಮಿಯ ಸೇವೆಯಲ್ಲಿ ತೊಡಗಿಸಿಕೊಂಡಿರುವವರು. ಈ ಕ್ಷೇತ್ರದಲ್ಲಿ ಆಗುವಂತಹ ಎಲ್ಲಾ ಪೂಜೆಗಳು, ಉತ್ಸವಗಳು ಹಾಗೂ ಆರಾಧನೆಗಳಿಗೆ ಮಂಜುನಾಥ ಸ್ವಾಮಿಯೇ ಕೇಂದ್ರ. ಆದರೆ ಧರ್ಮದೇವತೆಗಳು ಈ ಎಲ್ಲಾ ಕಾರ್ಯಗಳನ್ನು ಹೆಗ್ಗಡೆಯವರ ಮೂಲಕ ನಿರ್ವಹಿಸಲಾಗುತ್ತದೆ ಎಂಬ ವಾತಾವರಣವನ್ನು ನಿರ್ವಿುಸುತ್ತವೆ.

ಇಂತಹ ಕ್ಷೇತ್ರಕ್ಕೆ ನಾನು 21ನೇ ಪಟ್ಟಾಧಿಕಾರಿ. ಸುಮಾರು 600 ವರ್ಷಗಳ ದೀರ್ಘ ಇತಿಹಾಸ ಈ ಪೀಠಕ್ಕಿದೆ. ನಾನು ಸಂಸಾರಿಯಾದರೂ ಒಂದು ರೀತಿಯಲ್ಲಿ ಇಲ್ಲಿಗೆ ಸಮರ್ಪಿತಗೊಂಡವನು. ಪೀಠಕ್ಕೆ ಸಂಬಂಧಿಸಿದಂತೆ ಹಳೆಯ ಮನೆಯಾದ ನೆಲ್ಯಾಡಿ ಬೀಡಿನಲ್ಲಿ ಒಂದು ಉಯ್ಯಾಲೆ ಇದೆ. ಅಂತಹ ಉಯ್ಯಾಲೆಯಲ್ಲಿ ನನ್ನನ್ನು ಕೂಡಿಸಿ, ಈ ಧರ್ಮದೇವತೆಗಳು ಕತ್ತಿಯನ್ನು ಹಿಡಿದು, ಆವೇಶದಲ್ಲಿ ‘ಪೆರ್ಗಡೆ… ಪೆರ್ಗಡೆ… ಪೆರ್ಗಡೆ’ ಎಂಬುದಾಗಿ ಮೂರು ಬಾರಿ ಕರೆದು ನನಗೆ ಪೀಠವನ್ನು ಕೊಡುತ್ತಾರೆ. ಅಂತೆಯೇ ನನಗೆ ಪಟ್ಟದ ಉಂಗುರ ಮತ್ತು ಕತ್ತಿಯಿದೆ. ಹೀಗೆ ಧರ್ಮದೇವತೆಗಳು ನನಗೆ ಅಧಿಕಾರದ ಮುದ್ರೆ ಮತ್ತು ಸಂಕೇತವನ್ನು ಕೊಡುತ್ತಾರೆ.

ಪ್ರತಿ ಮಾಸಿಕ ಸಂಕ್ರಮಣದಂದು ಅಣ್ಣಪ್ಪ ಬೆಟ್ಟದಲ್ಲಾಗುವ ಆವೇಶದಲ್ಲಿ ಧರ್ಮದೇವತೆಗಳು ನಮ್ಮೊಂದಿಗೆ ಸಂವಾದ ನಡೆಸುತ್ತಾರೆ. ಅಂದು ಆ ಧರ್ಮದೇವತೆಗಳು ಧರ್ಮಸ್ಥಳದಲ್ಲಾಗಬೇಕಾದ ಪೂಜಾ ಕೈಂಕರ್ಯದ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ. ‘ನಿಮ್ಮ ಮೂಲಕ ನಾವು ಧರ್ಮ ಸ್ಥಾಪನೆಯ ಕಾರ್ಯವನ್ನು ಮಾಡಬೇಕು, ನಮ್ಮ ಮೂಲಕ ಈ ಎಲ್ಲಾ ವ್ಯವಹಾರಗಳನ್ನು ನೀವು ನಡೆಸಬೇಕು’ ಎಂಬುದಾಗಿ ಹೇಳಿ ಆಶೀರ್ವದಿಸುತ್ತಾರೆ. ಹೀಗೆ ಧರ್ಮದೇವತೆಗಳು ನನಗೆ ಪ್ರತಿತಿಂಗಳು ಅಧಿಕಾರವನ್ನು ಕೊಟ್ಟು ನನ್ನಿಂದ ವರದಿಯನ್ನು ಪಡೆಯುತ್ತಾರೆ. ನಾವು ಕೊಟ್ಟ ವರದಿಯನ್ನು ಅವರು ಮಂಜುನಾಥ ಸ್ವಾಮಿಗೆ ಮುಟ್ಟಿಸುವ ಕೆಲಸವನ್ನು ಮಾಡುತ್ತಾರೆ.

# ಧರ್ಮಸ್ಥಳ ಕೇವಲ ಧರ್ಮದ ಕೇಂದ್ರವಾಗಿ ಉಳಿದಿಲ್ಲ. ಮಹಿಳಾ ಸಬಲೀಕರಣ, ಶಿಕ್ಷಣ, ಆಡಳಿತಾತ್ಮಕ ತರಬೇತಿಯೊಂದಿಗೆ ಇನ್ನೂ ಹತ್ತು ಹಲವು ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದೀರಿ. ಒಂದು ಸರ್ಕಾರ ಮಾಡುವ ಕೆಲಸವನ್ನು ಮಾಡುತ್ತಿದ್ದೀರಿ. ಇದಕ್ಕೆಲ್ಲಾ ಅವಶ್ಯಕವಾದ ಶಕ್ತಿ, ನಿರ್ವಹಣೆಯ ಸಾಮರ್ಥ್ಯ ನಿಮಗೆ ಎಲ್ಲಿಂದ ಬರುತ್ತದೆ?

ಧರ್ಮದೇವತೆಗಳು ಈ ಕರ್ತವ್ಯವನ್ನು ನನಗೆ ಕೊಟ್ಟಿದ್ದಾರೆ. ಇದರೊಂದಿಗೆ ನಾಲ್ಕು ರೀತಿಯ ದಾನಗಳು ಧರ್ಮಸ್ಥಳದಲ್ಲಿ ನಿರಂತರವಾಗಿ ನಡೆದುಕೊಂಡು ಬಂದಿವೆ. ಮೊದಲನೆಯದು ಆಹಾರ ದಾನ. ಇಲ್ಲಿ ಪ್ರತಿನಿತ್ಯ ಬಂದ ಭಕ್ತಾದಿಗಳಿಗೆಲ್ಲರಿಗೂ ದಾಸೋಹ ನಡೆಯುತ್ತದೆ. 1947-48ರಲ್ಲಿ ಎರಡನೇ ವಿಶ್ವ ಸಮರದ ಸಂದರ್ಭದಲ್ಲಿ ಎಲ್ಲಾ ಕಡೆ ಅನ್ನ ದಾಸೋಹ ನಿಂತುಹೋಗಿತ್ತು. ಆದರೆ ಧರ್ಮಸ್ಥಳದಲ್ಲಿ ಮಾತ್ರ ನಿಂತಿರಲಿಲ್ಲ. ಎರಡನೆಯದು ವಿದ್ಯಾದಾನ. ನಮ್ಮ ಶಕ್ತಿಗೆ ಅನುಸಾರವಾಗಿ ವಿದ್ಯಾದಾನ ಮಾಡುವ ಪದ್ಧತಿಯಿದೆ. ಮೂರನೆಯದು ಔಷಧ ದಾನ. ಆಧುನಿಕ ಆಸ್ಪತ್ರೆಗಳನ್ನು ನಡೆಸುವ ಮೂಲಕ ಈ ದಾನವನ್ನು ಪೂರೈಸುವ ಕಾರ್ಯ ಮಾಡುತ್ತಿದ್ದೇವೆ. ಈ ದಾನ ಮುಖ್ಯ ದೇವಸ್ಥಾನದಲ್ಲಿ ಸಹ ನಡೆಯುತ್ತದೆ. ಭೂತ ಪ್ರೇತಗಳಿಂದ ಆವರಿಸಲ್ಪಟ್ಟವರು ಅಥವಾ ಭ್ರಮೆಗೆ ಒಳಪಟ್ಟವರು ದೇವಸ್ಥಾನಕ್ಕೆ ಬಂದು ತೀರ್ಥಸ್ನಾನ ಮಾಡುತ್ತಾರೆ. ದೇವರ ಮುಂದೆ ಬಂದು ಶರಣಾಗುತ್ತಾರೆ. ಇದರಿಂದ ಅವರಿಗೆ ಪರಿಹಾರ ಸಿಗುತ್ತದೆ ಎಂಬುದು ಪ್ರತೀತಿ.

ನಾಲ್ಕನೆಯದು ಅಭಯದಾನ. ಇದರಲ್ಲಿ ನ್ಯಾಯದಾನ, ಗ್ರಾಮೀಣಾಭಿವೃದ್ಧಿ, ಸ್ವಉದ್ಯೋಗವೂ ಬರುತ್ತದೆ. ಅಭಯದಾನದ ಅಡಿಯಲ್ಲಿ, ಇಲ್ಲಿಗೆ ಬರುವ ಭಕ್ತಾದಿಗಳೊಂದಿಗೆ ಸಂವಹನ ನಡೆಸುತ್ತೇನೆ. ಸಾಮಾನ್ಯವಾಗಿ ಪ್ರತಿ ಭಾನುವಾರ ನಾನು ಸುಮಾರು 2000 ದಷ್ಟು ಯಾತ್ರಾರ್ಥಿಗಳೊಂದಿಗೆ ಮಾತನಾಡುತ್ತೇನೆ. ಇದಲ್ಲದೆ, ಸುಮಾರು 200ಕ್ಕೂ ಹೆಚ್ಚು ಪ್ರಾಚೀನ ದೇವಸ್ಥಾನಗಳನ್ನು ಉಳಿಸಿ ಅದನ್ನು ಸಂರಕ್ಷಿಸುವ ಕಾರ್ಯ ಮಾಡುತ್ತಿದ್ದೇವೆ. ಈ ಕಾರ್ಯಗಳಿಗೆ ನಾವು ಬೇರೆ ಬೇರೆ ಟ್ರಸ್ಟ್​ಗಳನ್ನು ತೆರೆದಿದ್ದೇವೆ.

# ದೇಶ ಅಭಿವೃದ್ಧಿ ಕಾಣಬೇಕಾದರೆ ದುಡಿಯುವ ಕೈಗಳಿಗೆ ಉದ್ಯೋಗ ಸಿಗಬೇಕು. ಆ ಕೆಲಸವನ್ನು ಅನೇಕ ವರ್ಷಗಳ ಹಿಂದೆಯೇ ತಾವು ಪ್ರಾರಂಭ ಮಾಡಿದ್ದೀರಿ. ತಮ್ಮ ಸ್ವಸಹಾಯ ಸಂಘಗಳಿರಬಹುದು, ಗ್ರಾಮೀಣಾಭಿವೃದ್ಧಿ ಸಂಸ್ಥೆಗಳಿರಬಹುದು, ಇಲ್ಲವೇ ಇನ್ಯಾವುದೇ ನಿಮ್ಮ ಜನಪಯೋಗಿ ಕೆಲಸವನ್ನು ಇಂದು ಕೇಂದ್ರ ಸರ್ಕಾರ ದೇಶಾದ್ಯಂತ ವಿಸ್ತರಿಸುವ ಕಾರ್ಯವನ್ನು ಮಾಡುತ್ತಿದೆ. ಇದು ನಿಮಗೆ ಹೆಮ್ಮೆ ಅನಿಸುತ್ತಿದೆಯೇ?

ಖಂಡಿತ. ಸುಮಾರು 40 ವರ್ಷಗಳ ಹಿಂದೆ ನಮ್ಮ ನಾಡಿನಲ್ಲಿ ನಿರುದ್ಯೋಗ ಸಮಸ್ಯೆ ಅತಿಯಾಗಿತ್ತು. ಜನಸಂಖ್ಯೆ ಸಮಸ್ಯೆಯೂ ತೀವ್ರವಾಗಿತ್ತು. ಆಗ ಕುಟುಂಬ ಯೋಜನೆಯನ್ನು ಸರ್ಕಾರ ಅನುಷ್ಠಾನಗೊಳಿಸಿತ್ತು. ಅಂತಹ ಸಂದರ್ಭದಲ್ಲಿ ನನಗನಿಸಿದ್ದು, ಉದ್ಯೋಗಕ್ಕೆ ಶಿಕ್ಷಣವೇ ಪ್ರಧಾನವಲ್ಲ ಎಂದು. ನಮ್ಮ ಗ್ರಾಮೀಣ ಹಾಗೂ ಗುಡಿ ಕೈಗಾರಿಕೆಗೆ ಯಾರೂ ಪ್ರಮಾಣಪತ್ರ ನೀಡಿಲ್ಲ. ಇತ್ತೀಚಿನ ಶಿಕ್ಷಣದಿಂದ ಈ ಪರಂಪರೆಯೇ ನಶಿಸಿಹೋಗಿದೆ. ಆದ್ದರಿಂದ ಜೀವನಕ್ಕೆ ಅವಶ್ಯಕವಿರುವಷ್ಟು ಓದು ಬರಹ ಬರುವವನು ಸ್ವಾವಲಂಬಿಯಾಗಿ ಬದುಕುವ ಕಲೆಗೆ ಉತ್ತೇಜನ ನೀಡಬೇಕಾಗಿದೆ. ಇಂದು ಪಂಪ್, ಫೋನ್, ಫ್ಯಾನ್ ರಿಪೇರಿಯಂತಹ ಸಣ್ಣಪುಟ್ಟ ಕೆಲಸಗಳಿಗೂ ಜನ ಪಟ್ಟಣಕ್ಕೆ ಹೋಗುವಂತಾಗಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಹಳ್ಳಿಗಳಲ್ಲೇ ಸ್ವಉದ್ಯೋಗ ಸೃಷ್ಟಿಸುವ ಯೋಜನೆಗಳನ್ನು ನಾವು ಹಮ್ಮಿಕೊಳ್ಳುತ್ತಿದ್ದೇವೆ.

ನಮ್ಮಲ್ಲಿ ಸುಮಾರು 160 ಸ್ವ ಉದ್ಯೋಗ ತರಬೇತಿ ಕಾರ್ಯಕ್ರಮಗಳಿವೆ. ಇದಲ್ಲದೆ, ಫಲಾನುಭವಿಗೆ ಆದ್ಯತೆ ಮೇರೆಗೆ ಸಾಲ ನೀಡಬೇಕೆಂಬ ಒಡಂಬಡಿಕೆಯನ್ನು ಕೆಲವೊಂದು ಬ್ಯಾಂಕ್​ಗಳೊಂದಿಗೆ ಮಾಡಿಕೊಂಡೆವು. ನಮ್ಮ ರುಡ್​ಸೆಟ್​ನ ಮೂಲ ಉದ್ದೇಶವೇ 30 ದಿನದಲ್ಲಿ ಅತಿ ಕಡಿಮೆ ವೆಚ್ಚದಲ್ಲಿ ತರಬೇತಿ ನೀಡುವುದಾಗಿದೆ. ಹೀಗೆ ರಕ್ತಗತವಾಗಿ ಮನುಷ್ಯನ ಅಂತರಾಳದಲ್ಲಿರುವ ಕೌಶಲ್ಯಕ್ಕೆ ಕಿಡಿಹೊತ್ತಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಹೀಗಾಗಿ 35 ವರ್ಷದ ಹಿಂದೆ ಸ್ಥಾಪಿಸಿದ ಈ ಸಂಸ್ಥೆಯನ್ನು ಆರು ವರ್ಷದ ಹಿಂದೆ ಕೇಂದ್ರ ಸರ್ಕಾರ ಮೆಚ್ಚಿ, ದೇಶಾದ್ಯಂತ ವಿಸ್ತರಿಸುತ್ತಿದೆ. ಅದಕ್ಕೆ ನನ್ನನ್ನೇ ಗೌರವಾಧ್ಯಕ್ಷರನ್ನಾಗಿಯೂ ಮಾಡಿದೆ. ದೇಶದಲ್ಲಿ ಈ ರೀತಿಯ 567 ಸಂಸ್ಥೆಗಳನ್ನು ಸ್ಥಾಪಿಸಿ ಆಯಾ ಪ್ರದೇಶಗಳಲ್ಲಿರುವ ಉತ್ತಮ ಬ್ಯಾಂಕ್​ಗಳು ಈ ಸಂಸ್ಥೆಯನ್ನು ಪ್ರೇರೇಪಿಸಬೇಕು ಎಂಬುದಾಗಿ ಯೋಜನೆಯನ್ನು ರೂಪಿಸಿದೆ. ಇದರಿಂದ ಕನಿಷ್ಠ ಶಿಕ್ಷಣ ಪಡೆದವರು ಕೂಡ ಜೀವನ ಪೂರ್ತಿ ನಿವೃತ್ತಿಯಿಲ್ಲದೆ, ದುಡಿಯುವ ಅವಕಾಶ ಪಡೆಯುವಂತಾಗಿದೆ.

# ಸರ್ಕಾರ ಈ ರೀತಿಯ ಕೌಶಲ್ಯಾಭಿವೃದ್ಧಿಗೆ, ಸ್ವ ಉದ್ಯೋಗದ ತರಬೇತಿಗೆಂದೇ ಲಕ್ಷಾಂತರ ರೂಪಾಯಿ ಸಾಲವನ್ನು ಕೊಡುತ್ತಿದೆ. ಹೀಗೆ ಸರ್ಕಾರ ಒಳ್ಳೆಯ ಉದ್ದೇಶಕ್ಕೆಂದು ನೀಡುವ ಸಾಲ ಮರುಪಾವತಿಯಾಗುವುದೇ ಇಲ್ಲ. ಅದರಲ್ಲಿ ಯಶಸ್ಸಿನ ಪ್ರಮಾಣ ಅತಿ ಕಡಿಮೆ ಇರುತ್ತದೆ. ಆದರೆ ನಿಮ್ಮಲ್ಲಿ ಸಾಲದ ಮರುಪಾವತಿಯೊಂದಿಗೆ ಯಶಸ್ಸಿನ ಪ್ರಮಾಣವೂ ಹೆಚ್ಚು. ಏನಿದರ ಚಮತ್ಕಾರ?

ಹಿಂದೆಲ್ಲ ಕೇವಲ 10 ರಿಂದ 15 ರಷ್ಟಿದ್ದ ಯಶಸ್ಸಿನ ಪ್ರಮಾಣ ಕ್ರಮೇಣ ಚೇತರಿಕೆಯನ್ನು ಕಾಣುತ್ತಿದೆ. ಕಳೆದ ನಾಲ್ಕು ವರ್ಷದಲ್ಲಿ ದೇಶದಲ್ಲಿ ಸುಮಾರು 23 ಲಕ್ಷ ಜನರಿಗೆ ನಾವು ತರಬೇತಿಯನ್ನು ಕೊಟ್ಟಿದ್ದೇವೆ. ನಮ್ಮ ಎಲ್ಲ ಕೇಂದ್ರಗಳು ಒಳ್ಳೆಯ ಸಾಧನೆಯನ್ನು ಮಾಡಿ ಶೇಕಡಾ 70 ರಷ್ಟು ಯಶಸ್ವಿ ನಿರ್ವಹಣೆ ಮಾಡಿವೆ. ನಾನೇ ಇದರ ಅಧ್ಯಕ್ಷನಾಗಿರುವುದರಿಂದ ಭಾರತದಲ್ಲಿರುವ ಎಲ್ಲ 567 ಸಂಸ್ಥೆಗಳ ನಿರ್ವಹಣಾ ಕೇಂದ್ರವನ್ನು ಹಾಗೂ ತರಬೇತಿ ಕೇಂದ್ರವನ್ನು ಬೆಂಗಳೂರಿಗೆ ತಂದಿದ್ದೇನೆ.

# ತಾವು ಅನೇಕ ಸಂಘ ಸಂಸ್ಥೆಗಳನ್ನು ನಡೆಸುತ್ತಾ ಇದ್ದೀರಿ. ಇವೆಲ್ಲ ಸಾಮಾಜಿಕ ಪ್ರಯೋಜನ ಮತ್ತು ಆರ್ಥಿಕ ದೃಷ್ಟಿಯಿಂದ ಲಾಭದಲ್ಲಿವೆಯಾ?

ಎಲ್ಲಾ ಸಂಸ್ಥೆಗಳು ಅದರಲ್ಲೂ ವಿಶೇಷವಾಗಿ ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳು ಆರ್ಥಿಕವಾಗಿ ಲಾಭದಲ್ಲಿ ನಡೆಯುತ್ತಿಲ್ಲ. ನಮ್ಮ ಕಾರ್ಯಗಳಲ್ಲಿ ಧರ್ಮದ ಒಂದು ಮುಖವನ್ನು ನಾವು ಬಹಳ ಪ್ರಮುಖವಾಗಿ ಗಮನಿಸುತ್ತೇವೆ. ಆಸ್ಪತ್ರೆಗಳಲ್ಲಿ ಅತಿ ಕಡಿಮೆ ದರದಲ್ಲಿ ಅತಿ ಹೆಚ್ಚಿನ ಸವಲತ್ತುಗಳನ್ನು ಕೊಡುತ್ತಿದ್ದೇವೆ. ಶಿಕ್ಷಣ ಸಂಸ್ಥೆಗಳಲ್ಲಿಯೂ ಇತರೆ ಸಂಸ್ಥೆಗಳಿಗಿಂತ ಅತಿ ಕಡಿಮೆ ಬೆಲೆಯ ಶುಲ್ಕವನ್ನು ಪಡೆಯುತ್ತಿದ್ದೇವೆ. ಆದರೆ ನೀವು ಕೇಳಿದ ಇನ್ನೊಂದು ಮುಖ ಬಹಳ ಪರಿಣಾಮಕಾರಿಯಾದುದಾಗಿದೆ. ನಮ್ಮ ಶಿಕ್ಷಣ ಸಂಸ್ಥೆಗಳು ಭಾರತ ದೇಶದ ಮೊದಲ 50 ಸಂಸ್ಥೆಗಳ ಪಟ್ಟಿಯೊಳಗೆ ಬರುತ್ತವೆ. ಇನ್ನು ಕೆಲವು ವಿದ್ಯಾಸಂಸ್ಥೆಗಳು ಮೊದಲ 10 ಸಂಸ್ಥೆಗಳ ಒಳಗೆ ಬರುತ್ತವೆ.

# ತಮ್ಮ ಹಲವಾರು ವಿಶೇಷತೆಗಳಲ್ಲಿ ನಿರ್ವಹಣ ಕೌಶಲವೂ ಒಂದು. ಇಂತಹ ಕೌಶಲವನ್ನು ನಿಮ್ಮ ಎಲ್ಲಾ ಅಂಗಸಂಸ್ಥೆಗಳಲ್ಲಿಯೂ ಮೂಡಿಸಲು ಸಾಧ್ಯವಾಗಿದೆಯಾ?

ಖಂಡಿತವಾಗಿಯೂ ಆಗಿದೆ. ಆದರೆ ಎಷ್ಟರ ಮಟ್ಟಿಗೆ ಯಶಸ್ಸು ಲಭಿಸಿದೆ ಎಂಬುದನ್ನು ನಾನು ಹೇಳಲಾರೆ. ನಿರ್ವಹಣೆಯ ಮಟ್ಟದಲ್ಲಿ ಆಗಾಗ ಉಂಟಾಗುವ ಗೊಂದಲವನ್ನು ಸರಿಪಡಿಸಿಕೊಳ್ಳುತ್ತಿದ್ದೇವೆ. ಹಾಗಾಗಿ ಧರ್ಮಸ್ಥಳದ ನಿರ್ವಹಣಾ ವ್ಯವಸ್ಥೆಯ ಮೇಲೆ ಬಹಳ ನಿರೀಕ್ಷೆಯಿದೆ.

# ಧರ್ಮಸ್ಥಳದ ಹತ್ತಾರು ಸಂಸ್ಥೆಗಳ ಯಶಸ್ಸಿಗೆ ಸಿಬ್ಬಂದಿ ಕಾರಣ ಎಂದು ಹೇಳುವ ನೀವು, ಇಂತಹ ಸಿಬ್ಬಂದಿ ಮತ್ತು ಸ್ವಯಂಸೇವಕರನ್ನು ಹೇಗೆ ಆಯ್ಕೆ ಮಾಡಿಕೊಳ್ಳುತ್ತೀರಿ? ಆಯ್ಕೆಯ ವಿಚಾರದಲ್ಲಿ ನಿಮ್ಮ ಮಾನದಂಡವೇನು?

ಸಾಮಾನ್ಯವಾಗಿ ನಾನು ನಿರ್ದೇಶಕರು, ಯೋಜನಾಧಿಕಾರಿಗಳಂತಹ ಸ್ಥಾನಗಳನ್ನು ಬಿಟ್ಟರೆ ಬೇರೆ ಸ್ಥಾನಗಳಲ್ಲಿರುವ ಅಧಿಕಾರಿಗಳನ್ನು ಆಯ್ಕೆ ಮಾಡುವುದೇ ಇಲ್ಲ. ಸಾಮಾನ್ಯವಾಗಿ ಯಾರಿಗೆ ಕ್ಷೇತ್ರದ ಮೇಲೆ ಅಭಿಮಾನವಿರುತ್ತದೆಯೋ ಮತ್ತು ಇಲ್ಲೇ ಸೇವೆ ಮಾಡಬೇಕು ಎಂಬ ಭಾವನೆಯಿರುತ್ತದೆಯೋ ಅವರೇ ನಮ್ಮಲ್ಲಿ ಬರುತ್ತಾರೆ. ಅಂಥವರನ್ನು ನಮಗೆ ಬೇಕಾದ ರೀತಿಯಲ್ಲಿ ತಿದ್ದಿಕೊಳ್ಳುವುದು ನಮ್ಮಲ್ಲಿರುವ ವಿಶೇಷತೆ.

# ಇವತ್ತು ತಾವು ಕೇವಲ ಧರ್ವಧಿಕಾರಿಗಳಾಗಿ ಉಳಿದಿಲ್ಲ. ಒಬ್ಬ ಶ್ರೇಷ್ಠ ಆಡಳಿತಗಾರರಾಗಿ ಧರ್ಮಸ್ಥಳದ ಚಟುವಟಿಕೆಯನ್ನು ದೇಶಾದ್ಯಂತ ವಿಸ್ತರಿಸಿದ್ದೀರಿ. ಇದನ್ನು ಮುನ್ನಡೆಸುವುದು ಬಹಳ ಸೂಕ್ಷ್ಮ ಮತ್ತು ಹೊಣೆಗಾರಿಕೆಯ ಕೆಲಸ. ಇಂತಹ ಯಶಸ್ಸಿನ ಪರಂಪರೆಯನ್ನು ಮುನ್ನಡೆಸತಕ್ಕಂತ ಉತ್ತರಾಧಿಕಾರಿಯ ಆಲೋಚನೆ ಏನಾದರೂ ಆಗಿದೆಯಾ?

ಅದು ಆಗುತ್ತೆ. ಅದಕ್ಕೊಂದು ವ್ಯವಸ್ಥೆ ಇದೆ. ಹಿಂದೆ ನಮ್ಮ ಕ್ಷೇತ್ರದಲ್ಲಿ ಇಂತಹ ಘಟನೆಗಳು ಐದಾರು ಬಾರಿ ಆಗಿವೆ. ಮುಂದೆಯೂ ಆಗುತ್ತದೆ.

# ಇವತ್ತು ಜನರು ತಮ್ಮನ್ನು ಒಬ್ಬ ಧರ್ವಧಿಕಾರಿಯಾಗಿ ಕಾಣುವುದಕ್ಕಿಂತ ಹೆಚ್ಚಾಗಿ ಮಂಜುನಾಥ ಸ್ವಾಮಿಯ ಪ್ರತಿರೂಪವನ್ನು ನಿಮ್ಮಲ್ಲಿ ಕಾಣುತ್ತಾರೆ. ಹಾಗೆಯೇ ನ್ಯಾಯ ತೀರ್ವನವನ್ನು ಕೊಡುವ ನ್ಯಾಯದೇವತೆ ಎಂಬುದಾಗಿಯೂ ಕಾಣುತ್ತಾರೆ. ಧರ್ವಧಿಕಾರಿ, ಆಡಳಿತಗಾರ ಮತ್ತು ನ್ಯಾಯದೇವತೆ ಈ ಮೂರರಲ್ಲಿ ತಾವು ಪ್ರಧಾನವಾದ ಸ್ಥಾನವನ್ನ ಅಥವಾ ಭಾವನೆಯನ್ನ ಯಾವುದರೊಂದಿಗೆ ಬೆಸೆದುಕೊಂಡಿದ್ದೀರಿ?

ನೀವು ಹೇಳಿದ ಮೊದಲ ಮಾತಿಗೆ ನಾನು ಪ್ರಾಧಾನ್ಯತೆಯನ್ನು ಕೊಡುತ್ತೇನೆ. ಏಕೆಂದರೆ ಧರ್ಮಸ್ಥಳದಲ್ಲಿದ್ದರೆ ಮುಂಜಾನೆ ನಾನು ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡದೆ ಆಹಾರ ಸ್ವೀಕರಿಸುವುದಿಲ್ಲ. ಹೀಗೆ ಬೆಳಗ್ಗೆ ದೇವರ ದರ್ಶನ, ಧರ್ಮದೇವತೆಗಳ ನುಡಿಕಟ್ಟು ಮತ್ತು ಆಗುವ ಕೆಲ ಕಾರ್ಯಕ್ರಮಗಳು ಇವೆಲ್ಲವೂ ವಿಶೇಷವಾದ ಶಕ್ತಿಯನ್ನು ನನಗೆ ಕೊಡುತ್ತವೆ. ನನ್ನಲ್ಲಿಗೆ ಬರುವವರು ಮೂರು ಅಥವಾ ಐದು ಸೆಕೆಂಡ್​ನಲ್ಲಿ ನಾನು ಕೊಡುವ ತೀರ್ವನವನ್ನು ಒಪ್ಪಿಕೊಂಡು ಹೋಗುತ್ತಾರೆ. ಆದ್ದರಿಂದ ನನಗೆ ಮೊದಲು ಇರುವಂತಹದ್ದು ಈ ದೈವತ್ವದ ರಕ್ಷಣೆ. ನಾನು ಮಂಜುನಾಥನ ಪ್ರತಿನಿಧಿಯೂ ಹೌದು, ಚಂದ್ರನಾಥನ ಅನುಗ್ರಹಿತನೂ ಹೌದು. ವೈಯಕ್ತಿಕವಾಗಿ ನಾನು ಮತ್ತು ನನ್ನ ಸಂಸಾರ ಜೈನ ಧರ್ಮವನ್ನು ಆಚರಣೆ ಮಾಡುವುದರಿಂದ ಅನೇಕ ಜೈನ ಧರ್ಮದ ವಿಚಾರಗಳು ನನಗೆ ಹಲವಷ್ಟು ವಿಚಾರದಲ್ಲಿ ಸಹಾಯಕ್ಕೆ ಬಂದಿದೆ.

ಹಾಗೆಯೇ ನೀವು ಕೇಳಿದ ಮತ್ತೆರಡು ವಿಚಾರಗಳು ಸಹಜವಾಗಿ ಬರುವಂತಹದು. ನ್ಯಾಯದಾನ ಕೊಡುವಾಗ ತಯಾರಿ ಮಾಡಬಾರದು. ಹಾಗೆಯೇ ಧರ್ಮಸ್ಥಳದಲ್ಲಿ ಇನ್ನೊಂದು ಸಂಪ್ರದಾಯವಿದೆ. ಒಂದು ವಿಚಾರದಲ್ಲಿ ನ್ಯಾಯ ಅನ್ಯಾಯದ ಅರಿವು ಮೂಡಿದಾಗ ಅದನ್ನು ನಾವು ಹೇಳಿಬಿಡುತ್ತೇವೆ. ಅದನ್ನು ಜಾರಿ ಮಾಡುವುದಿಲ್ಲ. ಆದರೆ ನಾವು ಹೇಳಿದ ನ್ಯಾಯದ ಮಾತನ್ನು ಅಹಂಕಾರದಿಂದಲೋ ಅಥವಾ ಇನ್ಯಾವುದೋ ಪ್ರೇರಣೆಯಿಂದ ತಪ್ಪು ಮಾಡಿದವನು ತಿರಸ್ಕರಿಸಿದರೆ ಅವನಿಗೆ ಅದಕ್ಕೆ ತಕ್ಕ ಬೆಲೆ ಸಿಕ್ಕೆ ಸಿಗುತ್ತದೆ. ಹಾಗಾಗಿ ನಾವು ಅಂತಃಕರಣ ಶುದ್ಧತೆಯಿಂದ ನ್ಯಾಯ ಕೊಟ್ಟರೆ ಅದನ್ನು ಜಾರಿ ಮಾಡುವ ಕೆಲಸವನ್ನು ಅಣ್ಣಪ್ಪ ಮಾಡುತ್ತಾನೆ ಎಂಬ ಪ್ರತೀತಿ ಇದೆ. ಆದ್ದರಿಂದ ಇಲ್ಲಿ ಹಾಸ್ಯಕ್ಕೆ ಒಂದು ಮಾತಿದೆ. ಅದೇನೆಂದರೆ ‘ಮಂಜುನಾಥನಿಗೆ ಪ್ರಾರ್ಥನೆ, ಅಣ್ಣಪ್ಪನಿಗೆ ನಮಸ್ಕಾರ’ ಎಂದು.

(ಸಂದರ್ಶನದ ಎರಡನೆಯ ಭಾಗ ನಾಳೆ ಪ್ರಕಟವಾಗುತ್ತದೆ)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top