– ಸುಧೀಂದ್ರ ಹಾಲ್ದೊಡ್ಡೇರಿ.
ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಜಗದ್ವಿಖ್ಯಾತ ವಿದ್ಯಾಸಂಸ್ಥೆ ಭಾರತೀಯ ವಿಜ್ಞಾನ ಮಂದಿರ (ಐಐಎಸ್‌ಸಿ) ನಿಮಗೆ ಗೊತ್ತು. ನವೀನ ವಿಜ್ಞಾನ-ತಂತ್ರಜ್ಞಾನ ಕನಸುಗಳನ್ನು ಹೊತ್ತಯುವ ಪ್ರತಿಭಾವಂತರಿಗೆ ಅಗತ್ಯ ಸಂಪನ್ಮೂಲಗಳನ್ನು, ಸಾಧನ-ಸಲಕರಣೆಗಳನ್ನು ಹಾಗೂ ವಿದ್ವಜ್ಜನರ ಮಾರ್ಗದರ್ಶನವನ್ನು ನೀಡಿ, ಸಾರ್ವತ್ರಿಕ ಒಳಿತಿಗೆ ಬಳಕೆಯಾಗಬಲ್ಲ ಉತ್ಪನ್ನಗಳ ಅಭಿವೃದ್ಧಿಗೆ ನೆರವಾಗುವಉದ್ದಿಶ್ಯ ಇಲ್ಲಿನ ‘ಸೊಸೈಟಿ ಫಾರ್ ಇನ್ನೋವೇಶನ್ ಆ್ಯಂಡ್ ಡೆವಲಪ್‌ಮೆಂಟ್’ ಒಕ್ಕೂಟದ್ದು. ಕೆಲ ವರ್ಷಗಳ ಹಿಂದೆ ವೈಮಾಂತರಿಕ್ಷ ಕ್ಷೇತ್ರದ ಉತ್ಸಾಹಿ ಸಮೂಹವೊಂದು ದೇಶದ ಹೆಮ್ಮೆಯ ಲಘು ಯುದ್ಧ ವಿಮಾನ ‘ತೇಜಸ್’ನ ವಿನ್ಯಾಸಗಾರ ಡಾ.ಕೋಟಾ ಹರಿನಾರಾಯಣ ಅವರ ಮಾರ್ಗದರ್ಶನದಲ್ಲಿ ‘ಜನರಲ್ ಏರೋನಾಟಿಕ್ಸ್’ ಸಂಸ್ಥೆಯನ್ನು ಐಐಎಸ್‌ಸಿ ಆವರಣದಲ್ಲಿ ಆರಂಭಿಸಿತು. ನಿರ್ದಿಷ್ಟ ಉದ್ದಿಶ್ಯಗಳಿಗಾಗಿ ಹಾರಿಬಿಡುವ ಚಾಲಕರಹಿತ ಪುಟಾಣಿ ವಿಮಾನ ‘ಡ್ರೋನ್’ಗಳನ್ನು ಇದು ನಿರ್ಮಾಣ ಮಾಡುತ್ತಿದೆ.
ಮದುವೆ ಮನೆಗಳಲ್ಲಿ ಛಾಯಾಗ್ರಾಹಕರ ಕೈಗೆ ನಿಲುಕದ ಕೋನಗಳಲ್ಲಿ ಚಿತ್ರಗಳನ್ನು, ವಿಡಿಯೋಗಳನ್ನು ಸೆರೆಹಿಡಿಯುವ ಇಂಥ ಹಾರುಯಂತ್ರಗಳನ್ನು ನೀವು ಕಂಡಿರುತ್ತೀರಿ. ವಿವಿಧ ಗಾತ್ರ, ಹಾರಾಟ ಸಾಮರ್ಥ್ಯ, ಅಳವಡಿಕೆಗಳೊಂದಿಗೆ ‘ಡ್ರೋನ್’ಗಳು ಮಿಲಿಟರಿ ಉದ್ದಿಶ್ಯಗಳಿಗೂ ಬಳಕೆಯಾಗುತ್ತಿವೆ. ಶತ್ರುದೇಶದ ಗುಪ್ತನೆಲೆಯಲ್ಲಿ ಗಸ್ತು ತಿರುಗಿ ಚಿತ್ರಗಳನ್ನು ಸೆರೆಹಿಡಿಯುವುದರಿಂದ ಹಿಡಿದು, ಅಂಥ ನೆಲೆಗಳ ನಾಶಕ್ಕೆ ಅಸ್ತ್ರಗಳನ್ನು ತೂರಿಬಿಡಲೂ ‘ಡ್ರೋನ್’ಗಳನ್ನು ಉಪಯೋಗಿಸಬಹುದು. ಮನುಷ್ಯರು ಸಾಗಲಾಗದ ಅಸಹನೀಯ ಪರಿಸರದಲ್ಲಿ ಪರಿವೀಕ್ಷ ಣೆ ಮಾಡಲು, ಅಗತ್ಯ ಸರಕುಗಳನ್ನು ರವಾನಿಸುವಲ್ಲೂ ಇವುಗಳ ಬಳಕೆಯಿದೆ. ‘ಡ್ರೋನ್’ಗಳ ಮೊದಲ ಬಳಕೆ ಆರಂಭವಾದದ್ದು ಮಿಲಿಟರಿ ನೆಲೆಗಳಲ್ಲಿ. ಅತ್ಯಂತ ಕಡಿಮೆ ಅವಧಿಯಲ್ಲಿ ಜೋಡಣೆ ಮಾಡಬಲ್ಲ, ಸದ್ದಿಲ್ಲದೆ ಸಾಗಬಲ್ಲ, ಇನ್‌ಫ್ರಾರೆಡ್ ಕ್ಯಾಮೆರಗಳನ್ನು ಬಳಸಬಲ್ಲ, ಚಿತ್ರ ಹಾಗೂ ವೀಡಿಯೋಗಳನ್ನು ಸತತವಾಗಿ ರವಾನಿಸಬಲ್ಲ, ಪುಟ್ಟದಾದ, ಹಗುರವಾದ, ಸ್ವತಂತ್ರವಾಗಿ ಹಾರಾಡಬಲ್ಲ ‘ಡ್ರೋನ್’ಗಳಿಗೆ ಇಲ್ಲಿ ಬೇಡಿಕೆ ಹೆಚ್ಚು. ಮಿಲಿಟರಿ ಕಾರ್ಯಾಚರಣೆಯ ಜತೆಗೆ ಆಂತರಿಕ ಭದ್ರತಾ ಸವಾಲುಗಳಾದ ನಕ್ಸಲ್ ಚಟುವಟಿಕೆ, ಭಯೋತ್ಪಾತಗಳ ನಿಗ್ರಹಕ್ಕೂ ಈ ಬಗೆಯ ಹಾರುಯಂತ್ರಗಳನ್ನು ಬಳಸಬಹುದು. ಛತ್ತೀಸಗಢದಲ್ಲಿನ ದಟ್ಟ ಅರಣ್ಯ ಪ್ರದೇಶಗಳಲ್ಲಿ ನಕ್ಸಲರ ಚಲನವಲನಗಳನ್ನು ಸಿಆರ್‌ಪಿಎಫ್ ಅರೆಸೇನಾ ಯೋಧಪಡೆಯು ನಿಗಾವಣೆ ಮಾಡುತ್ತದೆ. ‘ಜನರಲ್ ಏರೋನಾಟಿಕ್ಸ್’ ಅಭಿವೃದ್ಧಿಪಡಿಸಿದ ಹಗಲು-ರಾತ್ರಿ ಕಾರ್ಯ ನಿರ್ವಹಿಸಬಲ್ಲ ಕ್ಯಾಮೆರಗಳನ್ನು ಹೊತ್ತ ‘ಡ್ರೋನ್’ಗಳನ್ನು ಕಗ್ಗತ್ತಲೆಯ ರಾತ್ರಿಯಂದು ಈ ಪ್ರದೇಶದಲ್ಲಿ ಸಿಆರ್‌ಪಿಎಫ್ ಪರೀಕ್ಷಾರ್ಥ ಹಾರಾಟಗಳನ್ನು ನಡೆಸಿದೆ.
ಪ್ರಸ್ತುತ ಈ ಸಂಸ್ಥೆ ಅಭಿವೃದ್ಧಿಪಡಿಸಿರುವ ‘ಡ್ರೋನ್’ಗಳು ದೇಹವೊಂದರಿಂದ ತೆಗೆದ ಅಂಗವನ್ನು ಮತ್ತೊಬ್ಬರಿಗೆ ಕಸಿ ಮಾಡಲು ಆಸ್ಪತ್ರೆಗಳ ನಡುವಿನ ತ್ವರಿತ ಸಾಗಾಟಕ್ಕೆ ನೆರವಾಗಲಿವೆ. ಹಾರಾಟದ ಸಮಯದಲ್ಲಿ ಅಂಗಗಳನ್ನು ಸುರಕ್ಷ ವಾಗಿ ಕಾಪಾಡುವಂಥ ವಾತಾವರಣ ಹಾಗೂ ಧಕ್ಕೆಯಾಗದಂಥ ಪಯಣಸೌಖ್ಯವನ್ನೂ ಈ ಯಂತ್ರಗಳು ಒದಗಿಸಲಿವೆ. ಇಂಥದೇ ಯಂತ್ರಗಳು ಈಗಾಗಲೇ ಕೃಷಿಭೂಮಿಯಲ್ಲಿ ಕೀಟನಾಶಕ, ಕಳೆನಾಶಕ, ರಾಸಾಯನಿಕಗಳನ್ನು ಕೆಳಮಟ್ಟದ ಹಾರಾಟದಲ್ಲಿ ಸಿಂಚನ ಮಾಡುವಲ್ಲಿ ಯಶಸ್ವಿಯಾಗಿವೆ. ಕೋವಿಡ್-19ರ ದಾಳಿಯ ಸಮಯದಲ್ಲಿ ಈ ಬಗೆಯ ‘ಡ್ರೋನ್’ಗಳನ್ನು ಸೋಂಕುನಿವಾರಕ ಔಷಧಗಳ ಸಿಂಚನಕ್ಕೆ ಬಳಕೆ ಮಾಡಬಹುದೆಂಬ ಆಲೋಚನೆ ಕಂಪನಿಯ ವಿನ್ಯಾಸಕರಿಗೆ ಬಂದಿತು. ಅಂತೆಯೇ ತ್ವರಿತ ಅವಧಿಯಲ್ಲಿ ಯಂತ್ರಗಳಿಗೆ ಸೂಕ್ತ ಮಾರ್ಪಾಡುಗಳನ್ನು ಅವರು ಮಾಡಿದರು. ಬೆಂಗಳೂರು ಹಾಗೂ ಭುವನೇಶ್ವರ ನಗರಗಳಲ್ಲಿನ ನಲವತ್ತಕ್ಕೂ ಹೆಚ್ಚು ಆಯಕಟ್ಟಿನ ಸ್ಥಳಗಳಲ್ಲಿ ಒಟ್ಟು 125 ಬಾರಿ ಔಷಧ ಸಿಂಚನಗಳನ್ನು ಈ ‘ಡ್ರೋನ್’ಗಳು ನಡೆಸಿವೆ. ಇವೆರಡೂ ನಗರಪಾಲಿಕೆಗಳ ಸಹಯೋಗದೊಂದಿಗೆ ಮಾರುಕಟ್ಟೆಗಳು, ಕಿಷ್ಕಿಂಧ ರಸ್ತೆಗಳು, ಸೋಂಕು ಹೆಚ್ಚಿರುವ ವಸತಿ ಪ್ರದೇಶಗಳು, ಆಸ್ಪತ್ರೆಗಳು ಮತ್ತಿತರ ಜನನಿಬಿಡ ಸ್ಥಳಗಳಲ್ಲಿ ‘ಡ್ರೋನ್’ಗಳ ಕಾರ್ಯಾಚರಣೆ ಯಶಸ್ವಿಯಾಗಿವೆ. ಬೆಂಗಳೂರು ಪೊಲೀಸರ ಕೋರಿಕೆಯಂತೆ ‘ಡ್ರೋನ್’ಗಳನ್ನು ಸೋಂಕಿನ ಆತಂಕ ಹೆಚ್ಚಿರುವ ಪ್ರದೇಶಗಳಲ್ಲಿನ ಬಳಕೆಗಾಗಿ ಪರಿವೀಕ್ಷ ಣಾ ಕ್ಯಾಮೆರಾ ಹಾಗೂ ಮುನ್ನೆಚ್ಚರಿಕಾ ಸೂಚನೆಗಳನ್ನು ಬಿತ್ತರಿಸಬಲ್ಲ ಧ್ವನಿವರ್ಧಕ ವ್ಯವಸ್ಥೆಗಳನ್ನು ಅಳವಡಿಕೆ ಮಾಡಲಾಗಿದೆ. ಇತ್ತ ತಮಿಳು ಚಿತ್ರ ‘ವಿಸ್ವಾಸಂ’ ಖ್ಯಾತಿಯ ನಟ ಅಜಿತ್‌ಕುಮಾರ್ ಐಐಟಿ ಮದ್ರಾಸ್‌ನಲ್ಲಿ ‘ಡ್ರೋನ್’ಗಳ ಅಭಿವೃದ್ಧಿಗೆಂದು ಪ್ರಾಯೋಜಿಸಿದ್ದ ‘ದಕ್ಷಾ’ ಯೋಜನೆ ಯಶಸ್ವಿಯಾಗಿದೆ. ಕೇವಲ 30 ನಿಮಿಷಗಳಲ್ಲಿ ಒಂದು ಎಕರೆಯಷ್ಟು ವಿಸ್ತೀರ್ಣದ ಜಾಗಕ್ಕೆ ಸೋಂಕು ನಿವಾರಕ ಔಷಧವನ್ನು ಈ ‘ಡ್ರೋನ್’ಗಳ ಮೂಲಕ ಸಿಂಪಡಿಸಬಹುದು.
ಕೋವಿಡ್-19ರ ಸಂಕಷ್ಟದೊಂದಿಗೆ ಹೆಣಗಾಡುತ್ತಿರುವ ಸಮಯದಲ್ಲಿಯೇ ಭಾರತಕ್ಕೆ ಬಂದೆರಗಿದ್ದು ಲೋಕಸ್ಟ್ ಮಿಡತೆಗಳ ಹಾವಳಿ. ಕೋಟಿಗಟ್ಟಲೆ ಸಂಖ್ಯೆಯಲ್ಲಿ ದಿನವೊಂದಕ್ಕೆ 150 ಕಿಲೋಮೀಟರ್ ದೂರ ಸಾಗಬಲ್ಲ ಇವು ಇಳಿದ ಕಡೆ ತೀವ್ರಗತಿಯಲ್ಲಿ ಆಹಾರಬೆಳೆಗಳನ್ನು ನಾಶಮಾಡಬಲ್ಲವು. ಕಳೆದ ವಾರ ಈ ಮಿಡತೆಗಳ ಸಮೂಹವು ದಿಲ್ಲಿ ಹಾಗೂ ಸಮೀಪದ ಗುರುಗ್ರಾಮಗಳಿಗೆ ದಾಂಧಲೆಯಿಟ್ಟಿವೆ. ಮಾನ್ಸೂನ್ ಮಳೆಯ ಆಗಮನದ ಹೊತ್ತಿನಲ್ಲಿಯೇ ಲೋಕಸ್ಟ್ ಮಿಡತೆಗಳಿಗೆ ತ್ವರಿತಗತಿಯ ಸಂತಾನೋತ್ಪತ್ತಿ ಕಾಲ. ಇವು ಇನ್ನು ಕೆಲ ವಾರಗಳಲ್ಲಿ ರಾಜಸ್ಥಾನ ಹಾಗೂ ಸುತ್ತಲ ಪ್ರದೇಶಗಳತ್ತ ದಾಳಿ ಇಡುವ ನಿರೀಕ್ಷೆಯಿವೆ. ಇವುಗಳ ಹತೋಟಿಗೆ ‘ಡ್ರೋನ್’ಗಳ ಮೂಲಕ ಕೀಟನಾಶಕಗಳ ಸಿಂಚನ ಮಾಡಬಹುದೆಂಬ ಕೃಷಿ ಮಂತ್ರಾಲಯದ ಯೋಚನೆಗೆ ಸರಕಾರದ ಅನುಮತಿ ದೊರಕಿದೆ. ಸೂರ್ಯಾಸ್ತವಾದ ನಂತರ ತಮ್ಮ ಚಟುವಟಿಕೆಗಳನ್ನು ನಿಲ್ಲಿಸಿ ತಟಸ್ಥವಾಗುವ ಈ ಮಿಡತೆಗಳ ಮೇಲೆ ಕೀಟನಾಶಕಗಳನ್ನು ಸಿಂಚನ ಮಾಡಲು ರಾತ್ರಿಯೇ ಸೂಕ್ತ ಸಮಯ. ಹಾಗಾಗಿ ರಾತ್ರಿಯ ಕಾಲದಲ್ಲಿ ಹಾರಾಟ ನಡೆಸಬಲ್ಲ, ದೀರ್ಘಕಾಲ ಕಾರ್ಯ ನಿರ್ವಹಿಸಬಲ್ಲ ‘ಡ್ರೋನ್’ಗಳ ಕಾರ್ಯಾಚರಣೆಗೆ ಭಾರತದ ‘ನಾಗರಿಕ ವಿಮಾನಯಾನ ನಿರ್ದೇಶನಾಲಯ’ದ (ಡಿಜಿಸಿಎ) ಅನುಮೋದನೆ ನೀಡುತ್ತಿದೆ. ವಾಹನಗಳ ಓಡಾಟಕ್ಕೆ ಅನುಕೂಲವಿಲ್ಲದ ಕೃಷಿ ಪ್ರದೇಶದಲ್ಲಿ ಹಾಗೂ ಎತ್ತರದ ಮರಗಳಿರುವ ಸ್ಥಳಗಳಲ್ಲಿ ಕೀಟನಾಶಕಗಳ ಸಿಂಪರಣೆಗೆ ‘ಡ್ರೋನ್’ಗಳ ಬಳಕೆಯೇ ಸೂಕ್ತ.
ಪ್ರಸ್ತುತ ಕೋವಿಡ್-19 ಸಂದರ್ಭದಲ್ಲಿ ಜಾಗತಿಕ ಆಹಾರ ಉತ್ಪಾದನೆಯ ಮೇಲೆ ಈ ಮಿಡತೆಗಳು ತೀವ್ರ ಪರಿಣಾಮ ಬೀರಲಿವೆಯೆಂಬ ಶಂಕೆ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯದು (ಎಫ್‌ಎಒ). ‘ಡ್ರೋನ್’ಗಳ ಮೂಲಕ ಮಿಡತೆ ನಿವಾರಕ ಔಷಧ ಸಿಂಪರಣೆ ಮಾಡಲೆತ್ನಿಸಿರುವ ಭಾರತದ ಪ್ರಯತ್ನವನ್ನು ಅದು ಶ್ಲಾಘಿಸಿದೆ. ಕ್ಷ ಣಕ್ಷ ಣಕ್ಕೆ ತಮ್ಮ ಹಾರಾಟದ ದಿಕ್ಕು-ದಿಸೆಗಳನ್ನು ಬದಲಿಸಬಲ್ಲ ಈ ಮಿಡತೆಗಳ ಚಲನವಲನಗಳ ಮೇಲೆ ಸತತವಾಗಿ ನಿಗಾ ಇಡುವುದು ಸುಲಭದ ಮಾತಲ್ಲ. ಸಾಗುವ ಹಾದಿಯನ್ನು ಗ್ರಹಿಸಿ ಅವುಗಳು ಮುಂದೆ ದಾಳಿಯಿಡಬಹುದಾದ ಸ್ಥಳಗಳನ್ನು ಮೊದಲೇ ಗುರುತಿಸುವುದು ಅವಶ್ಯ. ಇಂಥ ಕೆಲಸಕ್ಕೆ ‘ಡ್ರೋನ್’ಗಳು ಅಗತ್ಯ ಮಾಹಿತಿಗಳನ್ನು ನೀಡಬಹುದು. ಕೀಟನಾಶಕ ಸಿಂಪರಣೆಯ ಜತೆಗೆ ಈ ಮಿಡತೆಗಳ ಹಾವಳಿಯ ಚಿತ್ರಣ ಮತ್ತು ಅವುಗಳ ಹಾರಾಟದ ಹಾದಿಯನ್ನು ದಾಖಲಿಸುವ ಕೆಲಸಗಳಿಗೆ ‘ಡ್ರೋನ್’ಗಳನ್ನು ಬಳಸಿದರೆ ಸೂಕ್ತ ಮುಂಜಾಗರೂಕ ಕ್ರಮಗಳನ್ನು ಕೈಗೊಳ್ಳಬಹುದು. ಹಾಗೆಯೇ ಫಸಲಿಗೆ ಬಂದ ಬೆಳೆಗಳ ಮೇಲೆ ಪೂರ್ವಭಾವಿಯಾಗಿ ಲೋಕಸ್ಟ್ ನಿರೋಧಕ ಕೀಟನಾಶಕಗಳನ್ನು ಸಿಂಪಡಿಸುವ ಕಾರ್ಯ ನಡೆಸಬಹುದು. ಜಗತ್ತಿನಲ್ಲಿ ಲೋಕಸ್ಟ್ ಮಿಡತೆಗಳ ನಿಯಂತ್ರಣಕ್ಕೆ ‘ಡ್ರೋನ್’ಗಳನ್ನು ಬಳಸುತ್ತಿರುವ ಮೊದಲ ರಾಷ್ಟ್ರ ಭಾರತ. ‘ಜನರಲ್ ಏರೋನಾಟಿಕ್ಸ್’ ಸಂಸ್ಥೆ ಲೋಕಸ್ಟ್ ನಿಯಂತ್ರಣಕ್ಕೆ ತನ್ನ ‘ಡ್ರೋನ್’ಗಳನ್ನು ಸಜ್ಜುಗೊಳಿಸಿ, ಈಗಾಗಲೇ ಪರೀಕ್ಷಾರ್ಥ ಹಾರಾಟಗಳನ್ನು ನಡೆಸುತ್ತಿದೆ. ಬೆಳಗಿನ ಜಾವದ ಮೂರು ಗಂಟೆಗೆ ಲೋಕಸ್ಟ್ ಪೀಡಿತ ಪ್ರದೇಶಗಳಲ್ಲಿ ‘ಡ್ರೋನ್’ಗಳ ಮೂಲಕ ಕೀಟನಾಶಕಗಳ ಸಿಂಚನದ ಪರಿಶೀಲನೆಗಳನ್ನು ಮಾಡಿದೆ. ಲೋಕಸ್ಟ್ ಮಿಡತೆಗಳು ಧುತ್ತೆಂದು ಹಾರಿಬರುವ ಕೀಟಗಳು. ಆದರೆ ಭಾರತದಲ್ಲಿ ಆಹಾರಬೆಳೆಗಳನ್ನು ನಿಶ್ಚಿತ ಅವಧಿಯಲ್ಲಿ ಕಬಳಿಸುವ/ಹಾಳುಗೆಡಹುವ ಕ್ರಿಮಿಕೀಟಗಳ ನಿಯಂತ್ರಣಕ್ಕೆ ‘ಡ್ರೋನ್’ಗಳನ್ನು ಬಳಸುವ ಬಗ್ಗೆಯೂ ಕೃಷಿ ಇಲಾಖೆ ತನ್ನ ಗಮನ ಹರಿಸಿದೆ.
ಕೋವಿಡ್-19 ಸೋಂಕು ಹೆಚ್ಚಾದಂತೆ ಆನ್‌ಲೈನ್ ಮೂಲಕ ಆಹಾರ ತಿನಿಸುಗಳನ್ನು ಸರಬರಾಜು ಮಾಡುವ ಝೊಮ್ಯಾಟೊ, ಸ್ವಿಗ್ಗಿ, ಡನ್ಝೋದಂಥ ಕಂಪನಿಗಳ ವಹಿವಾಟು ಪ್ರತಿಶತ 70ರಷ್ಟು ಕಡಿಮೆಯಾಗಿತ್ತು. ಮನುಷ್ಯ ಸಂಪರ್ಕರಹಿತ ಸೇವೆಗಷ್ಟೇ ಬೇಡಿಕೆಯಿರುವುದನ್ನು ಮನಗಂಡ ಈ ಕಂಪನಿಗಳು ‘ಡ್ರೋನ್’ಗಳ ಮೂಲಕ ತಮ್ಮ ಸರಬರಾಜಿನ ಯೋಚನೆ ಮಾಡಿದವು. ಆದರೆ ಇಂಥ ಯಂತ್ರಗಳ ಸಾರ್ವಜನಿಕ ಹಾರಾಟಕ್ಕೆ ಡಿಜಿಸಿಎ ಕಠಿಣ ನಿಬಂಧನೆಗಳ ಪರಿಪಾಲನೆ ಹಾಗೂ ಪೂರ್ವಾನುಮತಿ ಅಗತ್ಯ. ಸದ್ಯದ ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡಿರುವ ಡಿಜಿಸಿಎ ಅನುಮೋದನಾ ಪ್ರಕ್ರಿಯೆಯನ್ನು ಸರಳಗೊಳಿಸುತ್ತಿದೆ. ಸುರಕ್ಷ ತೆ ಹಾಗೂ ಖಾಸಗಿತನವನ್ನು ಕಾಪಾಡುವ ಜವಾಬ್ದಾರಿಯೂ ನಿಯಂತ್ರಕರ ಮೇಲಿದೆ. ಆರೋಗ್ಯಕರ, ಸೋಂಕುರಹಿತ ಹಾಗೂ ತ್ವರಿತವಾಗಿ ತಿನಿಸುಗಳನ್ನು ಸರಬರಾಜು ಮಾಡುವ ಯೋಜನೆಗಳಿಗೆ ಈ ಅನುಮೋದನೆಯು ಅನುಕೂಲವಾಗಲಿದೆ. ಅಮೆಝಾನ್ ಸೇರಿದಂತೆ ಅನೇಕ ಆನ್‌ಲೈನ್ ಮಳಿಗೆಗಳು ತಮ್ಮ ಸರಕುಗಳ ಸಾಗಣೆಗೆ ‘ಡ್ರೋನ್’ಗಳ ಬಳಕೆಗೆ ಸಜ್ಜಾಗುತ್ತಿವೆ.
‘ಡ್ರೋನ್’ ಹಾರುಯಂತ್ರಗಳ ಬಳಕೆಯ ಸಾಧ್ಯತೆಗಳು ಅಪಾರ. ಈಗಾಗಲೇ ಹಲವು ಕಂಪನಿಗಳು ತಮ್ಮ ‘ಡ್ರೋನ್’ಗಳ ಮೂಲಕ ಅನನ್ಯ ಕೆಲಸಗಳನ್ನು ಮಾಡಿವೆ. ಉದಾಹರಣೆಗೆ, ಅಮೆಝಾನ್ ಮಳೆಕಾಡುಗಳಂಥ ದುರ್ಗಮ ಪ್ರದೇಶಗಳಲ್ಲಿ ಸಿಲುಕಿಕೊಂಡವರಿಗೆ ತುರ್ತು ಅಗತ್ಯದ ಔಷಧಗಳನ್ನು ಕಳುಹಿಸಲಾಗಿದೆ. ನೇಪಾಳದ ಕಗ್ಗಾಡಿನ ಆರೋಗ್ಯ ತಪಾಸಣಾ ಕೇಂದ್ರಗಳಿಂದ ಕ್ಷ ಯಪೀಡಿತ ರೋಗಿಗಳ ರಕ್ತಮಾದರಿಗಳನ್ನು ಸಂಗ್ರಹಿಸಲಾಗಿದೆ. ಕ್ಯಾಮರೂನ್‌ನಲ್ಲಿ ಪೋಲಿಯೋ ಪೀಡಿತರ ದೇಹದ್ರವ್ಯಗಳ ಮಾದರಿಗಳನ್ನು ಪಡೆಯಲಾಗಿದೆ. ಝೀಕಾ ವೈರಸ್ ಹಾವಳಿಗೆ ತುತ್ತಾಗಿದ್ದ ಬ್ರೆಝಿಲ್‌ನ ಗ್ರಾಮಗಳಿಗೆ ಲಸಿಕೆಗಳನ್ನು ರವಾನಿಸಲಾಗಿದೆ. ಅಂತೆಯೇ ಫೀಜಿ ದ್ವೀಪದ ಡೆಂಗೆಜ್ವರ ಮತ್ತು ತಾಂಜಾನಿಯಾದ ಮಲೇರಿಯಾ ಜ್ವರದ ಹತೋಟಿಗೆ ಮದ್ದುಗಳನ್ನು ತಲುಪಿಸಲಾಗಿದೆ. ಕೋವಿಡ್-19ನ ಈ ತುರ್ತು ಪರಿಸ್ಥಿತಿಯಲ್ಲಿ ‘ಡ್ರೋನ್’ ಹಾರಾಟಕ್ಕಿದ್ದ ಅಡೆತಡೆಗಳು ಕೊಂಚಮಟ್ಟಿಗೆ ನಿವಾರಣೆಯಾಗಿವೆ. ಬ್ರಿಟನ್ನಿನಲ್ಲಿ ಈಗಾಗಲೇ ‘ಡ್ರೋನ್’ ಹಾರಾಟಕ್ಕೆ ನಿಶ್ಚಿತ ಮಾರ್ಗಗಳನ್ನು ನಿಗದಿಪಡಿಸುವ ಕಾರ್ಯ ಆರಂಭವಾಗಿದೆ. ಭಾರತ ಸೇರಿದಂತೆ 25 ರಾಷ್ಟ್ರಗಳು ‘ಡ್ರೋನ್’ ಬಳಕೆಗೆ ಉತ್ತೇಜನ ನೀಡುವಂಥ ಯೋಜನೆಗಳಿಗೆ ಚಾಲನೆ ನೀಡಿವೆ.
(ಲೇಖಕರು ಹಿರಿಯ ವಿಜ್ಞಾನಿ)