ಕೋವಿಡ್ ಕಾಲದಲ್ಲಿ ಸೈಬರ್ ವಂಚನೆ ಜಾಲ – [email protected] ನಿಂದ ಮೇಲ್ ಬರಬಹುದು ಹುಷಾರು!

ವಂಚಕರು ಮತ್ತು ಭ್ರಷ್ಟಾಚಾರಿಗಳು ತಮಗೆ ಸಿಗುವ ಯಾವುದೇ ಅವಕಾಶವನ್ನು ಬಿಟ್ಟುಕೊಡುವುದಿಲ್ಲ. ಇದಕ್ಕೆ ಸಾಕ್ಷಿ ಕೊರೊನಾ ಹುಟ್ಟಿಸಿರುವ ಭಯದ ವಾತಾವರಣದಲ್ಲೂ ವಂಚಕರು ತಮ್ಮ ನೈಪುಣ್ಯತೆ ಮೆರೆಯುತ್ತಿರುವುದು! ಆತಂಕದ ಪರಿಸ್ಥಿತಿಯನ್ನು ಮೋಸಗಾರರು ತಮ್ಮ ಲಾಭದ ಅವಕಾಶವಾಗಿ ಬಳಸಿಕೊಳ್ಳುತ್ತಿದ್ದಾರೆ.
ಉಚಿತವಾಗಿ ಕೋವಿಡ್ ಟೆಸ್ಟ್ ಮಾಡಲಾಗುವುದು ಎಂದು ನಿಮ್ಮ ಫೋನು, ಮೇಲ್ ಐಡಿ, ವಾಟ್ಸ್ಆ್ಯಪ್‌ಗಳಿಗೆ ಕೆಲವು ಸಂದೇಶಗಳು ಬರುತ್ತಿದ್ದರೆ ಅಂಥವುಗಳನ್ನು ನಂಬಲು ಹೋಗಬೇಡಿ. ಅವು ನಿಮ್ಮ ಹಣವನ್ನು ಲಪಟಾಯಿಸುವ ಸಂದೇಶಗಳಾಗಿರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಜೂನ್ 21ರಿಂದ ಇಂಥ ಫಿಶ್ಯಿಂಗ್ ಮೇಲ್‌ಗಳು ರವಾನೆಯಾಗುತ್ತಿವೆ. ಮೋಸಗಾರರ ಬಳಿ 20 ಲಕ್ಷ ಮೇಲ್ ಐಡಿಗಳು, ಖಾಸಗಿ ವಿವರಗಳಿವೆ ಎಂದು ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಇಂಡಿಯಾ(ಸಿಇಆರ್‌ಟಿ-ಇನ್) ಎಚ್ಚರಿಸಿದೆ. ಸ್ಥಳೀಯಾಡಳಿತ ಸಂಸ್ಥೆಗಳು, ನಗರಸಭೆ, ಪೊಲೀಸ್, ಆರೋಗ್ಯ ಇಲಾಖೆ ಹೆಸರಿನಲ್ಲೂ ಇಂಥ ಇ ಮೇಲ್‌ಗಳು ಬರಬಹುದು. . [email protected] ಮೇಲ್ ಐಡಿಯಿಂದ ಬರುವ ಮೇಲ್‌ನಲ್ಲಿ ಉಚಿತ ಕೋವಿಡ್ ಟೆಸ್ಟ್ ಮಾಡುವ ಬಗ್ಗೆ ಒಕ್ಕಣಿಕೆ ಇರುತ್ತದೆ. ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳುವಂತೆ ಮೇಲ್‌ನಲ್ಲಿ ತಿಳಿಸಲಾಗಿರುತ್ತದೆ. ನೀವೇನಾದರೂ ಇದು ನಿಜವೆಂದು ನಿಮ್ಮ ವೈಯಕ್ತಿಕ ಮಾಹಿತಿ ಜತೆಗೆ, ಬ್ಯಾಂಕಿನ ಖಾತೆ, ಪಾಸ್‌ವರ್ಡ್‌ ಸೇರಿದಂತೆ ಇನ್ನಿತರ ಮಾಹಿತಿ ನೀಡಿದರೆ, ಯುಆರ್‌ಎಲ್‌ ಓಪನ್ ಮಾಡಿದರೆ ನಿಮ್ಮ ಅಕೌಂಟ್ ಖಾಲಿಯಾಗುವುದು ಖಚಿತ. ಹುಷಾರಾಗಿರಿ!
ಎಚ್ಚರಿಕೆ ನೀಡಿದ ಸಿಇಆರ್‌ಟಿ: ಫಿಶಿಂಗ್ ಮೇಲ್‌ಗಳ  ಬಗ್ಗೆ ಎಚ್ಚರಿಕೆ ವಹಿಸುವಂತೆ ಸಿಇಆರ್‌ಟಿ ತಿಳಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಎಸ್‌ಬಿಐ, ‘‘ದೇಶದ ಪ್ರಮುಖ ನಗರಗಳಲ್ಲಿ ಸೈಬರ್ ದಾಳಿ ನಡೆಯಲಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. . [email protected] ಬರುವ ಮೇಲ್‌ಳ ಮೇಲೆ ಕ್ಲಿಕ್ ಮಾಡಲು ಹೋಗಬೇಡಿ. ಈ ಬಗ್ಗೆ ಸಿಇಆರ್‌ಟಿ ಕೂಡ ಎಚ್ಚರಿಕೆ ನೀಡಿದೆ,’’ ಎಂದು ತನ್ನ ಖಾತೆದಾರರಿಗೆ ತಿಳಿಸಿದೆ. ಯೆಸ್ ಬ್ಯಾಂಕ್ ಈ ತರಹ ಮೇಲ್‌ಗಳು ಬಂದರೆ ತನಗೆ ರಿಪೋರ್ಟ್ ಮಾಡುವಂತೆ ತಿಳಿಸಿದೆ.

ಭಾರತದ ಮೇಲೆ ಡ್ರ್ಯಾಗನ್ ಸೈಬರ್ ದಾಳಿ!
ಲಡಾಕ್‌ನಲ್ಲಿ ಚೀನಾ, ಭಾರತ ನಡುವೆ ಉದ್ವಿಗ್ನ ಸ್ಥಿತಿ ಇರುವಾಗಲೇ ಚೀನಿ ಹ್ಯಾಕರ್‌ಗಳು ಭಾರತ ಪ್ರಮುಖ ಸಂಸ್ಥೆಗಳು, ಕಂಪನಿಗಳು, ರಕ್ಷ ಣಾ ಇಲಾಖೆಗೆ ಸಂಬಂಧಿಸಿದ ವೆಬ್‌ಸೈಟ್‌ ಹ್ಯಾಕ್‌ ಮಾಡುವ ಸಾಧ್ಯತೆಗಳಿವೆ. ಮುಂದಿನ ಕೆಲವು ದಿನಗಳಲ್ಲಿ ಸೈಬರ್ ದಾಳಿ ನಡೆದರೆ ಅಚ್ಚರಿ ಇಲ್ಲ. ಈ ಬಗ್ಗೆ ಚೀನಿ ಹ್ಯಾಕರ್‌ಗಳಲ್ಲಿ ಚರ್ಚೆಯಾಗುತ್ತಿದೆ ಎಂದು ವರದಿಯಾಗಿದೆ.
ಏನೇನು ಟಾರ್ಗೆಟ್?: ಭಾರತೀಯ ಉದ್ಯಮ ಸಂಸ್ಥೆಗಳು, ಕಂಪನಿಗಳು., ಸರಕಾರದ ಪ್ರಮುಖ ಇಲಾಖೆಗಳು, ಕೇಂದ್ರ ರಕ್ಷಣಾ ಸಚಿವಾಲಯ, ಮಾಧ್ಯಮ ಕೇಂದ್ರಗಳು, ಟೆಲಿಕಮ್ಯುನಿಕೇಷನ್, ಫಾರ್ಮಾ, ಸ್ಮಾರ್ಟ್‌ ಫೋನ್‌ ಕಂಪನಿಗಳು, ಕನ್ಸ್‌ಟ್ರಕ್ಷನ್‌ ಕಂಪನಿಗಳು.

– ವಂಚನೆ ತಪ್ಪಿಸಲು ಸಾಮಾನ್ಯ ಎಚ್ಚರಿಕೆಗಳು
– ಖಾತೆ ವಿವರ, ಎಟಿಎಂ ಪಿನ್ ಮಾಹಿತಿ ನೀಡಬೇಡಿ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸುವಾಗ ಇರಲಿ ಎಚ್ಚರ
– ಆಧಾರ್, ಪ್ಯಾನ್ ವಿವರ ನೀಡುವಾಗ ಜಾಗೃತೆ ಇರಲಿ, ಆಗಾಗ ಎಟಿಎಂ, ಆನ್‌ಲೈನ್‌ ಬ್ಯಾಂಕಿಂಗ್ ಪಾಸ್‌ವರ್ಡ್‌ ಬದಲಿಸಿ.
– ಮಾಲ್‌ಗಳಲ್ಲಿ ಡೆಬಿಟ್ ಕಾರ್ಡ್ ನಂಬರ್ ನೋಟ್ ಮಾಡದಂತೆ ಎಚ್ಚರ ವಹಿಸಿ, ಎಟಿಎಂನಲ್ಲಿ ಅನುಮಾನಾಸ್ಪದ ವಸ್ತು, ಉಪಕರಣಗಳು (ಸ್ಕಿಮ್ಮಿಂಗ್) ಕಂಡರೆ ಬ್ಯಾಂಕ್, ಪೊಲೀಸರಿಗೆ ಮಾಹಿತಿ ನೀಡಿ

ಪ್ಲಾಸ್ಮಾ ಹೆಸರಲ್ಲಿ ಮೋಸ
ಕೋವಿಡ್ ಪರಿಸ್ಥಿತಿಯನ್ನು ವಂಚಕರು ತಮ್ಮ ಲಾಭಕ್ಕೆ ಹೇಗೆ ಬಳಸಿಕೊಳ್ಳುತ್ತಿದ್ದಾರೆಂಬುದಕ್ಕೆ ಇದು ಹೊಸ ನಿದರ್ಶನ. ಕೆಲವು ದಿನಗಳ ಹಿಂದೆ, ದಿಲ್ಲಿ ಅಸೆಂಬ್ಲಿ ಸ್ಪೀಕರ್ ರಾಮ ನಿವಾಸ್ ಅವರ ಸಂಬಂಧಿ ಪುನೀತ್ ಅಗರ್ವಾಲ್ ಅವರು, ‘‘ತಮ್ಮ ಮಾವನ ಚಿಕಿತ್ಸೆಗೆ ಪ್ಲಾಸ್ಮಾ ರಕ್ತ ಅಗತ್ಯವಿದೆ’’ ಎಂದು ಪೋಸ್ಟ್ ಹಾಕಿದ್ದರು. ಬಳಿಕ ಪುನೀತ್ ಅವರಿಗೆ ರಾಹುಲ್ ಠಾಕೂರ್ ಎಂಬಾತ ಕಾಲ್ ಮಾಡಿ, ತಾನು ವೈದ್ಯನಾಗಿದ್ದು ಪ್ಲಾಸ್ಮಾ ದಾನಿಗಳಿದ್ದಾರೆ ಎಂದು ತಿಳಿಸಿ ಅವರಿಂದ ಗೂಗಲ್ ಪೇ ಮೂಲಕ ಹಣವನ್ನು ಪಡೆದುಕೊಂಡಿದ್ದ. ನಂತರ ಆತನಿಗೆ ಕರೆ ಮಾಡಿದರೆ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಪೊಲೀಸರು ಈ ಬಗ್ಗೆ ತನಿಖೆ ನಡೆಸಿದಾಗ ಅಬ್ದುಲ್ ಕರೀಮ್ ರಾಣಾ ಎಂಬಾತ ಪುನೀತ್ ಅಗರ್ವಾಲ್ ಅವರಿಗೆ ಮೋಸ ಮಾಡಿದ್ದು ಬಯಲಾಗಿತ್ತು. ಈ ತರಹ ವಂಚಕರಿದ್ದಾರೆ. ಹಾಗಾಗಿ ಹುಷಾರಾಗಿರುವುದು ಒಳ್ಳೆಯದು.

ನಾವೇನು ಮಾಡಬೇಕು?
– ಅನಪೇಕ್ಷಿತ ಮೇಲ್‌ಗಳಲ್ಲಿರುವ ಅಟ್ಯಾಚ್ಮೆಂಟ್‌ಗಳನ್ನು ತೆರೆಯಬೇಡಿ; ಒಂದು ವೇಳೆ ಅಂಥ ಮೇಲ್‌ಗಳು ನಿಮ್ಮ ಪರಿಚಯದವರಿಂದಲೇ ಬಂದಿದ್ದರೂ ಕೂಡ. ಮೇಲ್‌ನಲ್ಲಿರುವ ಯುಆರ್‌ಎಲ್‌ ಮೇಲೆ ಕ್ಲಿಕ್ ಮಾಡಬೇಡಿ.
– ಒಂದು ವೇಳೆ, ಹಾಗೆ ಬಂದ ಮೇಲ್‌ಗಳಲ್ಲಿರುವ ಯುಆರ್‌ಎಲ್‌ ನಿಜವೇ ಎನಿಸಿದರೆ ಅದನ್ನು ಅಲ್ಲಿ ಓಪನ್ ಮಾಡುವ ಬದಲು, ಬ್ರೌಸರ್‌ನಲ್ಲಿ ಅದರ ಮೂಲ ವೆಬ್‌ಸೈಟ್‌ ತೆರೆಯಲು ಪ್ರಯತ್ನಿಸಿ. ಆಗ ಅಸಲಿತನ ಬಯಲಾಗುತ್ತದೆ.
– ಒಂದು ವೇಳೆ ಮೇಲ್ ಕಳುಹಿಸಿದವರು ಪರಿಚಯದವರಾಗಿದ್ದರೂ ಅಟ್ಯಾಚ್ಮೆಂಟ್ ಓಪನ್ ಮಾಡುವಾಗಲೂ ಎಚ್ಚರಿಕೆ ವಹಿಸುವುದು ಅಗತ್ಯ.
– ಫಿಶಿಂಗ್ ಡೊಮೈನ್, ಮೇಲ್‌ನಲ್ಲಿರುವ ಕಾಗುಣಿತ ತಪ್ಪುಗಳು, ವೆಬ್‌ಸೈಟ್‌ಗಳು ಮತ್ತು ಪರಿಚಿತ ಅಲ್ಲದವರಿಂದ ಬರುವ ಇ ಮೇಲ್‌ಗಳ ಬಗ್ಗೆ ಎಚ್ಚರಿಕೆ ಇರಲಿ.
– ಯಾವುದೇ ಲಿಂಕ್ ಓಪನ್ ಮಾಡುವ ಮೊದಲು ಅಥವಾ ಲಾಗಿನ್ ಆಗುವ ಮೊದಲು ಅದರ ಸಾಚಾತನವನ್ನು ಪರೀಕ್ಷಿಸಿ.
– ಪರಿಚಿತವಲ್ಲದ ವೆಬ್‌ಸೈಟ್‌ಗಳಿಗೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನೀಡುವ ಮೊದಲು ಎಚ್ಚರಿಕೆ ವಹಿಸಿ.
ಬಹುಮಾನ ಗೆದ್ದಿದ್ದೀರಿ, ರಿವಾರ್ಡ್ಸ್ ದೊರೆಯಲಿದೆ, ಕ್ಯಾಶ್‌ಬ್ಯಾಕ್‌ ಆಫರ್‌ಗಳನ್ನು ನೀಡಲಾಗುತ್ತಿದೆ ಎಂಬಂಥ ಒಕ್ಕಣಿಕೆ ಇರುವ ಮೇಲ್‌ಗಳಲ್ಲಿರುವ ಯುಆರ್‌ಎಲ್‌ಗಳನ್ನು ಕ್ಲಿಕ್ ಮಾಡುವ ಮುಂಚೆ ಜಾಗೃತೆ ವಹಿಸುವುದು ಅತ್ಯವಶ್ಯ.
– ನಿಮ್ಮ ಆ್ಯಂಟಿ ವೈರಸ್, ಫೈರ್‌ವಾಲ್‌ ಮತ್ತು ಫಿಲ್ಟರಿಂಗ್ ಸೇವೆಗಳಲ್ಲಿ ಸುರಕ್ಷಿತ ಬ್ರೌಸಿಂಗ್ ಟೂಲ್ಸ್, ಫಿಲ್ಟರಿಂಗ್ ಟೂಲ್ಸ್ (ಆ್ಯಂಟಿ ವೈರಸ್ ಮತ್ತು ಕಂಟೆಂಟ್ ಬೇಸ್ಡ್ ಫಿಲ್ಟರಿಂಗ್) ಬಳಸುವುದನ್ನು ರೂಢಿಸಿಕೊಳ್ಳಿ.
– ಇತ್ತೀಚಿನ ಸ್ಪಾಮ್ ಮೇಲ್ ಕಂಟೆಂಟ್‌ಗಳೊಂದಿಗೆ  ಸ್ಪ್ಯಾಮ್ ಫಿಲ್ಟರ್‌ಗಳನ್ನು ಅಪ್ಡೇಟ್ ಮಾಡಿಕೊಳ್ಳಿ.
ಅನುಮಾನಾಸ್ಪದ ಮೇಲ್‌ಗಳು ಕಂಡು ಬಂದರೆ ಕೂಡಲೇ [email protected] ಗೆ ರಿಪೋರ್ಟ್ ಮಾಡಿ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top