ಕೊರೊನಾ ಲಸಿಕೆಯ ಮೇಲೆ ಸೈಬರ್ ದಗಾಕೋರರ ಕಣ್ಣು

ಸುಧೀಂದ್ರ ಹಾಲ್ದೊಡ್ಡೇರಿ.
ಕನ್ನಡದಲ್ಲೊಂದು ಆಡು ಮಾತಿದೆ – ಸಂತೆ ನೆರೆಯುವ ಮುನ್ನವೇ ಗಂಟು ಕಳ್ಳರು ನೆರೆದಿರುತ್ತಾರೆ. ಈ ಮಾತು ಸದ್ಯಕ್ಕೆ ಕೋವಿಡ್-19 ಲಸಿಕೆ ತಯಾರಿಕಾ ಮಾರುಕಟ್ಟೆಗೂ ಅನ್ವಯಿಸುವಂತಿದೆ. ಜನರ ಬಳಕೆಗೆ ಯಾವ ದೇಶದ ಲಸಿಕೆ ಮೊದಲು ಬರಬಹುದೆಂದು ಕಾತುರದಿಂದ ಕಾಯುತ್ತಿರುವಾಗಲೇ ಅಮೆರಿಕ, ಬ್ರಿಟನ್, ಹಾಗೂ ಕೆನಡಾ ದೇಶಗಳಲ್ಲಿನ ಲಸಿಕೆ ಸಂಶೋಧಕರ ಕಂಪ್ಯೂಟರ್‌ಗೆ ಲಗ್ಗೆಯಾಗಿರುವ ಸುದ್ದಿ ಬಂದಿದೆ. ಲಸಿಕೆಗೆ ಯಾವ ರಾಸಾಯನಿಕಗಳು ಬಳಕೆಯಾಗುತ್ತಿವೆ, ಎಷ್ಟು ಪ್ರಮಾಣದಲ್ಲಿ ಅವುಗಳನ್ನು ಬೆರೆಸಲಾಗಿದೆ, ಯಾವ ಅನುಪಾತದಲ್ಲಿ ಬೆರೆಸಿದಾಗ ಉತ್ತಮ ಪರಿಣಾಮ ದೊರೆತಿದೆ, ರಾಸಾಯನಿಕಗಳನ್ನು ಆಯ್ಕೆ ಮಾಡಿಕೊಂಡಾಗ ಎಂಥ ಮಾನದಂಡಗಳನ್ನು ಬಳಸಲಾಗಿತ್ತು, ಲಸಿಕೆಯೊಂದರ ನಿರ್ಮಾಣದ ಹಿನ್ನೆಲೆಯಲ್ಲಿ ಯಾವ ಸಂಶೋಧನಾ ಮಾಹಿತಿಗಳನ್ನು ಆಧರಿಸಲಾಗಿದೆ. ಇಂಥ ಮಹತ್ವದ ವಿಷಯಗಳ ಭಂಡಾರಕ್ಕೆ ರಷ್ಯಾದ ಸೈಬರ್ ಧಗಾಕೋರರು ಕೈ ಹಾಕಿದ್ದಾರೆಂಬ ಸಂಗತಿ ಬೆಳಕಿಗೆ ಬಂದಿದೆ. ಇಂಥ ಬಹುಮುಖ್ಯ ಮಾಹಿತಿ ಸೋರಿಕೆಯಿಂದ ಆ ದೇಶಗಳು ದೊಡ್ಡ ನಷ್ಟ ಅನುಭವಿಸಬಹುದು, ಲಸಿಕೆ ತಯಾರಿಕೆಗೆ ಹಿನ್ನಡೆಯಾಗಬಹುದು. ಪರಿಸ್ಥಿತಿಯ ಅನುಕೂಲ ಪಡೆದು ರಷ್ಯಾ ದೇಶವು ತನ್ನ ಲಸಿಕೆಯನ್ನು ಎಲ್ಲರಿಗಿಂತಲೂ ಮೊದಲು ಬಿಡುಗಡೆ ಮಾಡಬಹುದು. ಈ ಕುತ್ಸಿತ ಕೆಲಸದ ಹಿಂದೆ ಜಗತ್ತಿನಲ್ಲೇ ಕುಖ್ಯಾತವಾದ ರಷ್ಯಾ ಮೂಲದ ಎಪಿಟಿ29 ಎಂಬ ಸೈಬರ್ ಲಗ್ಗೆಕೋರ ಗುಂಪಿನ ಕೈವಾಡವಿದೆಯೆಂದು ವರದಿಯಾಗಿದೆ.
ಇತ್ತ ಅಮೆರಿಕ ದೇಶವು ತನ್ನ ದೇಶದಲ್ಲಿ ಚೀನಾದ ಸೈಬರ್ ಭಯೋತ್ಪಾದಕರ ಹಾವಳಿ ಹೆಚ್ಚಾಗಿದ್ದು, ಕೊರೋನಾ ವೈರಸ್‌ಗೆ ಸಂಬಂಧಿಸಿದ ಸಂಶೋಧನೆಗಳ ಮಾಹಿತಿಯನ್ನು ಅವರು ಕದ್ದಿದ್ದಾರೆಂದು ಆರೋಪಿಸಿದೆ. ಇಬ್ಬರು ಸೈಬರ್ ಲಗ್ಗೆಕೋರರನ್ನು ಅಮೆರಿಕದ ಬೇಹುಗಾರಿಕಾ ಸಂಸ್ಥೆ ಈಗಾಗಲೇ ಗುರುತಿಸಿದ್ದು, ಅವರಿಬ್ಬರೂ ಕೊರೋನಾ ವೈರಸ್‌ನ ಲಸಿಕೆ ಅಭಿವೃದ್ಧಿಯಲ್ಲಿ ತೊಡಗಿಕೊಂಡಿದ್ದ 11 ಪಾಶ್ಚಾತ್ಯ ದೇಶಗಳ ಕಂಪನಿಗಳಿಂದ ಅಮೂಲ್ಯ ಮಾಹಿತಿಗಳನ್ನು ಕಳುವು ಮಾಡಿದ್ದಾರೆಂದಿದೆ. ಚೀನಾ ಮತ್ತು ರಷ್ಯಾದಂಥ ರಾಷ್ಟ್ರಗಳು ಲಸಿಕೆಯ ಸ್ಪರ್ಧೆಯಲ್ಲಿ ತಾವೂ ಇರುವುದರಿಂದ, ಬೇರೆ ದೇಶಗಳ ಲಸಿಕೆ ತಡವಾಗಿ ಬರಬೇಕೆಂಬ ಆಶಯ ಹೊಂದಿವೆ. ಲಸಿಕೆಯ ಮಾರುಕಟ್ಟೆ ಸದ್ಯಕ್ಕೆ ಹಲವು ಸಹಸ್ರ ಕೋಟಿ ರೂಪಾಯಿಗಳಿಗೂ ದೊಡ್ಡದು. ಹಾಗೆಯೇ ಲಸಿಕೆ ತಯಾರಿಸುತ್ತಿರುವ ದೇಶಗಳ ಮಾಹಿತಿ ಭಂಡಾರವನ್ನು ತಿರುಚುವ ಅಥವಾ ಕದಿಯುವ ಮೂಲಕ, ಆ ದೇಶಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗ ಮಾಡುವುದೂ ಆ ದಾಳಿಕೋರರ ಮತ್ತೊಂದು ಉದ್ದಿಶ್ಯವಾಗಿದೆ. ಅದಕ್ಕೆಂದೇ ಚೀನಾ ಹಾಗೂ ರಷ್ಯಾ ದೇಶಗಳ ಸರ್ಕಾರವೇ ಇಂಥ ದುಷ್ಕೃತ್ಯಗಳನ್ನು ಬೆಂಬಲಿಸುತ್ತಿವೆ. ಚೀನಾ ದೇಶದ ಸುರಕ್ಷಾ ಮಂತ್ರಾಲಯದಿಂದ ಬೆಂಬಲ ಪಡೆದಿರುವ ಈ ದಾಳಿಕೋರರು ಅಮೆರಿಕದ ರಕ್ಷಣಾ ಇಲಾಖೆಗೆ ಶಸ್ತ್ರಾಸ್ತ್ರ ಪೂರೈಸುವವರ ಭಂಡಾರದಿಂದಲೂ ರಹಸ್ಯ ಮಾಹಿತಿಗಳನ್ನು ಸೆಳೆದಿದ್ದಾರೆ. ಆಸ್ಪ್ರೇಲಿಯಾ ಮತ್ತು ಕೆನಡಾ ದೇಶಗಳೂ ತಮ್ಮ ಅನೇಕ ಕಂಪ್ಯೂಟರ್ ಜಾಲಗಳ ಮೇಲೆ ಚೀನಾ ದೇಶದ ದಾಳಿಕೋರರು ಲಗ್ಗೆ ಇಟ್ಟಿದ್ದಾರೆ.
ರಷ್ಯಾದ ಎಪಿಟಿ 29 ಗುಂಪು ಇಂದು ನಿನ್ನೆಯದಲ್ಲ. 2010ರಿಂದ ವಿಧ್ವಂಸಕ ಸೈಬರ್ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ. ಇಲ್ಲಿ ಎಪಿಟಿಯೆಂಬುದು ಅತ್ಯಾಧುನಿಕ ದೃಢ ಬೆದರಿಕೆಯನ್ನು (Advanced Persistent Threat) ಸೂಚಿಸುತ್ತದೆ. ಇದರಂತೆಯೇ ಸೈಬರ್ ದಾಳಿ ನಡೆಸುವವರ ಗುಂಪುಗಳಲ್ಲಿ ಇದಕ್ಕೆ ಡ್ಯೂಕ್ಸ್, ಕೋಝಿ ಬೇರ್, ಕೋಝಿಡ್ಯೂಕ್ ಎಂಬ ಅಡ್ಡ ಹೆಸರುಗಳಿವೆ. ಕಂಪ್ಯೂಟರ್ ಜಾಲಗಳ ಸುರಕ್ಷತೆಗೆ ಧಕ್ಕೆ ತರುವುದರಲ್ಲಿ ನಿಸ್ಸೀಮವಾಗಿರುವ ಎಪಿಟಿ29ಯ ಹ್ಯಾಕರ್‌ಗಳು 2015ರಲ್ಲಿ ಅಮೆರಿಕದ ಅಧ್ಯಕ್ಷರ ಅಧಿಕೃತ ನಿವಾಸ ವೈಟ್ ಹೌಸ್, ರಕ್ಷಣಾ ಇಲಾಖೆಯ ಕೇಂದ್ರ ಕಚೇರಿ ಪೆಂಟಾಗನ್ ಮತ್ತು ಸರ್ಕಾರದ ಅನೇಕ ಇಲಾಖೆಗಳ ಮಾಹಿತಿ ಭಂಡಾರಕ್ಕೆ ಲಗ್ಗೆ ಹಾಕಿದ್ದರು. ಉಕ್ರೇನ್ ದೇಶದ ವಿದ್ಯುತ್ ಸರಬರಾಜು ಕಂಪನಿಯ ಸಂಪರ್ಕ ಜಾಲವನ್ನು 2015ರಲ್ಲಿ ವಶಪಡಿಸಿಕೊಂಡು, ಎರಡೂವರೆ ಲಕ್ಷ ಜನರಿಗೆ ವಿದ್ಯುತ್ ಪೂರೈಕೆಯನ್ನು ಕೆಲಕಾಲ ತಡೆ ಹಿಡಿದಿದ್ದ ಅಪಕೀರ್ತಿ ಇವರದು. 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಮಯದಲ್ಲಿ ಅಲ್ಲಿನ ಡೆಮಾಕ್ರಟಿಕ್ ಪಕ್ಷದ ಸೈಬರ್ ವಹಿವಾಟುಗಳ ಮೇಲೆ ದಾಳಿ ನಡೆಸಿದ ಆರೋಪವೂ ಇವರ ಮೇಲಿದೆ. ಆ ಸಮಯದಲ್ಲಿ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದ ಹಿಲರಿ ಕ್ಲಿಂಟ ನ್ಅವರ ಪ್ರಚಾರ ವ್ಯವಸ್ಥಾಪಕರ ಇ-ಮೇಲ್ಖಾತೆಯಿಂದ ಸುಳ್ಳು ಪತ್ರಗಳನ್ನು ರವಾನಿಸಿ, ಮುಜುಗರಕ್ಕೆ ಈಡುಮಾಡಿದ್ದರು. ನಾರ್ವೆ ದೇಶದ ವಿದೇಶಾಂಗ, ರಕ್ಷಣೆ ಮತ್ತು ಆಂತರಿಕ ಭದ್ರತೆ ಇಲಾಖೆಗಳ ಕಂಪ್ಯೂಟರ್ ಜಾಲಗಳನ್ನು ಏಕಕಾಲಕ್ಕೆ ತೊಂದರೆಗೆ ಸಿಲುಕಿಸಿದ ಗಂಭೀರ ಆರೋಪವನ್ನು ಸಹ ಇವರು ಎದುರಿಸಿದ್ದಾರೆ. 2017ರಲ್ಲಿ ನೆದರ್ಲೆಂಡ್ಸ್‌ನ ಸಚಿವಾಲಯಗಳ ಮೇಲಿನ ಸೈಬರ್ ದಾಳಿಯ ಹಿಂದೆ ಇವರಿರಬಹುದೆಂಬ ಗುಮಾನಿಯಿದೆ. ಈ ಗುಂಪನ್ನು ರಷ್ಯಾದ ಆಂತರಿಕ ಬೇಹುಗಾರಿಕಾ ಏಜೆನ್ಸಿ (ಎಫ್ಎಸ್‌ಬಿ) ಮತ್ತು ಬಾಹ್ಯ ಬೇಹುಗಾರಿಕಾ ಏಜೆನ್ಸಿಗಳೇ (ಎಸ್‌ವಿಆರ್) ನಿರ್ವಹಿಸುತ್ತಿದ್ದು ಅವುಗಳ ಆಣತಿಯಂತೆ ಸೈಬರ್ ದಾಳಿಗಳು ನಡೆಯುತ್ತಿರಬಹುದೆಂಬ ಗುಮಾನಿಯೂ ಇದೆ. ವೈರಸ್ ಪ್ರತಿಬಂಧಕ ಸಲಕರಣೆಗಳನ್ನು ತಯಾರಿಸುವ ಸಿಮ್ಯಾಂಟೆಕ್ ಸಂಸ್ಥೆಯ ಪ್ರಕಾರ ಕಳೆದ ಹತ್ತು ವರ್ಷಗಳಲ್ಲಿ ಈ ಎಪಿಟಿ29 ಗುಂಪು ವಿದೇಶಿ ರಾಯಭಾರ ಕಚೇರಿಗಳ ಕಂಪ್ಯೂಟರ್ ಜಾಲಗಳ ಮೇಲೂ ದಾಳಿ ನಡೆಸಿವೆ. ಇಂಥ ಕಡೆ ಸಾಮಾನ್ಯವಾಗಿ ಎಪಿಟಿ29ಯು ಗೌಪ್ಯ ಸಂಕೇತಗಳನ್ನು ಕದಿಯಲು ಮೋಸದ ಇ-ಮೇಲ್‌ಗಳನ್ನು ಕಳುಹಿಸುತ್ತದೆ ಇಲ್ಲವೇ ತಾನು ಕಳುಹಿಸುವ ಸಂದೇಶದಲ್ಲಿರುವ ವೈರಸ್‌ಗಳಿಂದ ಜಾಲಗಳನ್ನು ನಿಷ್ಕ್ರಿಯಗೊಳಿಸುವಂತೆ ನೋಡಿಕೊಳ್ಳುತ್ತದೆ.
ಕಳೆದ ವಾರ ಇಸ್ರೇಲ್ ದೇಶದ ಕುಡಿಯುವ ನೀರು ಪೂರೈಕೆ ವ್ಯವಸ್ಥೆಯ ಕಂಪ್ಯೂಟರ್ ಜಾಲದ ಮೇಲೆ ಸೈಬರ್ ದಾಳಿಯಾಗಿತ್ತು. ನೀರನ್ನು ಶುದ್ಧೀಕರಿಸಲು ಯಾವ ಪ್ರಮಾಣದಲ್ಲಿ ಕ್ಲೋರಿನ್ ಬೆರೆಸಬೇಕೆಂಬ ಅನುಪಾತವನ್ನು ಈ ದಾಳಿಯು ಏರುಪೇರು ಮಾಡಿತ್ತು. ಇದಕ್ಕೂ ಹಿಂದೆ ಚರಂಡಿ ನೀರಿನ ಶುದ್ಧೀಕರಣ ವ್ಯವಸ್ಥೆಗೆ ಸಂಬಂಧಿಸಿದಂತೆಯೂ ಏಪ್ರಿಲ್ ತಿಂಗಳಿನಲ್ಲಿ ದಾಳಿ ನಡೆದಿತ್ತು. ಇವೆರಡೂ ದಾಳಿಗಳ ಹಿಂದೆ ಇರಾನ್ ದೇಶದ ಕೈವಾಡವಿದೆಯೆಂದು ಇಸ್ರೇಲ್ ಆಪಾದಿಸಿದೆ. ಆದರೆ ಏಪ್ರಿಲ್‌ನ ದಾಳಿಗೆ ಪ್ರತಿಯಾಗಿ ಇಸ್ರೇಲ್ ದೇಶವು ಇರಾನಿನ ನೀರು ಪೂರೈಕೆ ವ್ಯವಸ್ಥೆಯನ್ನು ಏರುಪೇರಾಗಿಸುವಂಥ ¨ದಾಳಿಯನ್ನು ಮೇ ತಿಂಗಳಲ್ಲಿ ಮಾಡಿತ್ತು. ಇವೆರಡೂ ದೇಶಗಳು ಕಿತ್ತಾಡುವಂತೆ ಈಜಿಪ್ಟ್ ಮತ್ತು ಇಥಿಯೋಪಿಯಾ ದೇಶಗಳೂ ಪರಸ್ಪರ ಕಚ್ಚಾಡುತ್ತಿವೆ. ನೈಲ್ ನದಿಗೆ ಅಡ್ಡವಾಗಿ ಇಥಿಯೋಪಿಯಾ ಕಟ್ಟಿರುವ ಬಾರಿ ಆಣೆಕಟ್ಟಿನಿಂದಾಗಿ ತನ್ನ ಜಲ ಪೂರೈಕೆಗೆ ವ್ಯತ್ಯಯವಾಗುತ್ತಿದೆಯೆಂಬ ಆರೋಪ ಈಜಿಪ್ಟಿನದು. ಕಳೆದ ತಿಂಗಳು ಈ ಆಣೆಕಟ್ಟಿನ ಕಾರ್ಯನಿರ್ವಹಣೆಯ ಕಂಪ್ಯೂಟರ್ ಜಾಲಕ್ಕೆ ಈಜಿಪ್ಟ್ ದಾಳಿಕಾರರು ಲಗ್ಗೆ ಹಾಕಿದ್ದರು.
ಕಳೆದ ಹಲವು ದಶಕಗಳಿಂದ ರಷ್ಯಾದ ಸೈಬರ್ ಲಗ್ಗೆಕೋರರು ಲಕ್ಷಾಂತರ ಕೋಟಿ ಬೈಟ್ಗಳಷ್ಟು ಮಾಹಿತಿಗಳನ್ನು ಬೇರೆ ಬೇರೆ ದೇಶಗಳ ಕಂಪ್ಯೂಟರುಗಳಿಂದ ಕಳುವು ಮಾಡಿದ್ದಾರೆ. ಜಗತ್ತಿನಾದ್ಯಂತ ಆಯಕಟ್ಟಿನ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಲವು ದಶಲಕ್ಷ ಕಂಪ್ಯೂಟರುಗಳನ್ನು ಅವರು ತಮ್ಮ ವಶಕ್ಕೆ ಕೆಲಕಾಲ ಪಡೆದುಕೊಂಡು ಮಾಹಿತಿಗಳನ್ನು ತಿರುಚಿದ್ದಾರೆ, ಅಳಸಿಹಾಕಿದ್ದಾರೆ, ಹಿಡಿತದಲ್ಲಿಟ್ಟುಕೊಂಡು ಒತ್ತೆಹಣ ಪಡೆದಿದ್ದಾರೆ. ತಾವು ಕದ್ದ ಮಾಹಿತಿಯನ್ನು ಬೇರೆಯವರಿಗೆ ಮಾರಿ ಯಾರ ಅಂದಾಜಿಗೂ ಸಿಗದಷ್ಟು ದುಡ್ಡು ಮಾಡಿಕೊಂಡಿದ್ದಾರೆ. ಐಬಿಎಂ ಕಂಪನಿಯ ವಕ್ತಾರರ ಪ್ರಕಾರ ಕಳೆದ ಎರಡು ವರ್ಷಗಳಲ್ಲಿ ಭಾರತದ ಕಂಪನಿಗಳೂ ಸೈಬರ್ ಲಗ್ಗೆಗಳಿಗೆ ಗುರಿಯಾಗಿವೆ. ಸಹಸ್ರಾರು ಅಮೂಲ್ಯ ಕಡತಗಳನ್ನು ಕಳೆದುಕೊಂಡಿರುವ ಕಂಪನಿಗಳು ಭಾರಿ ನಷ್ಟವನ್ನನುಭವಿಸಿವೆ ಎಂದು ಅವರು ತಿಳಿಸಿದ್ದಾರೆ. ಕೋವಿಡ್-19 ಸೋಂಕಿನ ಪ್ರಸರಣೆ ಹೆಚ್ಚಾಗುತ್ತಿರುವ ಸಮಯದಲ್ಲಿ ಸೈಬರ್ ದಾಳಿಗಳೂ ಹೆಚ್ಚಾಗುತ್ತಿವೆಯೆಂದಿದ್ದಾರೆ. ಮಾರ್ಚ್ 11ರ ನಂತರದಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದ ಸುಳ್ಳು ಸುದ್ದಿಗಳು ಡಿಜಿಟಲ್ ಮಾಧ್ಯಮಗಳ ಮೂಲಕ ಭಾರಿ ಮಟ್ಟದಲ್ಲಿ ಹಂಚಿಕೆಯಾಗಿವೆ. ಇಂಥ ಸಂದೇಶಗಳೊಂದಿಗೆ ಕಂಪ್ಯೂಟರ್‌ಗಳ ಕಾರ್ಯನಿರ್ವಹಣೆಗೆ ಅಡ್ಡಿ ಮಾಡುವ ವೈರಸ್‌ಗಳು ಸಹಾ ರವಾನೆಯಾಗಿರಬಹುದು.
ಚೀನಾ ದೇಶದ ಸೈಬರ್ ದಾಳಿಕೋರರನ್ನು ವಿಶೇಷವಾಗಿ ಗಮನದಲ್ಲಿಟ್ಟುಕೊಂಡಿರುವ ಭಾರತದ ದೂರ ಸಂಪರ್ಕ ಇಲಾಖೆಯು ತನ್ನ ಸುಪರ್ದಿಗೆ ಬರುವ ಎಲ್ಲವೆಬ್ ಪೋರ್ಟಲ್‌ಗಳು /ತಾಣಗಳ ನಿರ್ವಾಹಕರಿಗೆ ಮುನ್ನೆಚ್ಚರಿಕೆ ಕೊಟ್ಟಿದೆ. ಅವುಗಳೆಲ್ಲವೂ ತಮ್ಮ ಸಂಪರ್ಕ ಜಾಲಗಳ ಸುರಕ್ಷತೆಯನ್ನು ಪುನಃ ಪರಿಶೀಲನೆಗೊಳಪಡಿಸಬೇಕು, ಸರ್ಕಾರ ವಿವರಿಸಿರುವ ಎಲ್ಲಸುರಕ್ಷಾ ನಿಯಮಗಳು ಪಾಲನೆಯಾಗಿರುವ ಬಗ್ಗೆ ವರದಿಯನ್ನು ಶೀಘ್ರವೇ ಕೊಡಬೇಕೆಂದು ಆದೇಶಿಸಿದೆ. ಚೀನಾದೊಂದಿಗಿನ ಗಡಿಯಲ್ಲಿಇನ್ನೂ ಪ್ರಕ್ಷುಬ್ಧತೆಯಿರುವುದರಿಂದ, ಯಾವುದೇ ಸಮಯದಲ್ಲಿ ಆ ದೇಶ ಸೈಬರ್ ದಾಳಿ ನಡೆಸಬಹುದಾದ ಆತಂಕವಿದೆ. ಈ ಹಿನ್ನೆಲೆಯಲ್ಲಿ ಜೂನ್ 15ರಂದು ಟಿಕ್ಟಾಕ್, ಕ್ಯಾಮ್ ಸ್ಕ್ಯಾನರ್ ಸೇರಿದಂತೆ ಚೀನಾ ಮೂಲದ 59 ಆ್ಯಪ್‌ಗಳ ಬಳಕೆಯನ್ನು ಸರ್ಕಾರ ನಿಷೇಧ ಮಾಡಿತ್ತು. ಮತ್ತಷ್ಟು ಪರಿಶೀಲನೆಯ ನಂತರ ನಿನ್ನೆ 47 ಹೊಸ ಚೀನಾ ಆ್ಯಪ್‌ಗಳನ್ನು ನಿಷೇಧಿತ ಪಟ್ಟಿಗೆ ಸೇರಿಸಿದೆ. ಇನ್ನೂ 250 ಚೀನಾ ಮೂಲದ ಆ್ಯಪ್‌ಗಳನ್ನುವಿಶೇಷ ತಪಾಸಣೆಗೆ ಒಳಪಡಿಸುತ್ತಿದೆ. ಅವುಗಳೂ ಸಹಾ ಮುಂದಿನ ದಿನಗಳಲ್ಲಿ ಬಳಕೆಗೆ ನಿಷೇಧವಾಗಬಹುದು.
ಎಲ್ಲಕ್ಕೂ ಮುಖ್ಯವಾಗಿ ಬ್ಯಾಂಕಿಂಗ್ ವಹಿವಾಟಿನ ಮೇಲೆ ದಾಳಿಯಾಗುವ ಕುರಿತು ಅಮೆರಿಕ, ಬ್ರಿಟನ್ ಮತ್ತು ಯುರೋಪ್ ದೇಶಗಳು ಆತಂಕದಲ್ಲಿವೆ. ಕೊರೋನಾ ವೈರಸ್ ದಾಳಿಯಿಂದ ಆರ್ಥಿಕವಾಗಿ ಹೈರಾಣಾಗಿರುವ ಬಹುತೇಕ ದೇಶಗಳು ಸೈಬರ್ ದಾಳಿಗಳಿಂದ ಮಕಾಡೆ ಮಲಗಬಹುದು. ಈ ಕುರಿತಂತೆ ಜವಾಬ್ದಾರಿಯುತ ದೇಶಗಳು ಪುಂಡ ದೇಶಗಳಿಂದ ಎದುರಾಗಬಹುದಾದ ಸೈಬರ್ ದಾಳಿಗಳ ಬಗ್ಗೆ ವಿಶೇಷ ಎಚ್ಚರಿಕೆ ವಹಿಸುತ್ತಿವೆ. ಜಾಗತಿಕವಾಗಿ ಸೈಬರ್ ದಾಳಿ ನಡೆಸುತ್ತಿರುವವರಲ್ಲಿ ರಷ್ಯಾದೇಶದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಅಮೆರಿಕ ದೇಶದ ಸಂಪರ್ಕ ಜಾಲಕ್ಕೆ ಲಗ್ಗೆ ಹಾಕುವಲ್ಲಿ ರಷ್ಯಾದವರೊಂದಿಗೆ ಚೀನಾ, ಇರಾನ್ ಮತ್ತು ಉತ್ತರ ಕೊರಿಯಾ ದೇಶದಗಾಕೋರರೂ ನಿಸ್ಸೀಮರಾಗಿದ್ದಾರೆ. (ಲೇಖಕರು ಹಿರಿಯ ವಿಜ್ಞಾನಿ)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top