117 ದಿನಗಳ ಬಳಿಕ ಮತ್ತೆ ಕ್ರಿಕೆಟ್ ಕಮಾಲ್

– ಕೊರೊನಾ ನಡುವೆ ಪ್ರೇಕ್ಷಕರಿಲ್ಲದ ಪಂದ್ಯ
– ನಾಳೆಯಿಂದ ಇಂಗ್ಲೆಂಡ್-ವಿಂಡೀಸ್ ಟೆಸ್ಟ್ ಸರಣಿ.

ಹೊಸದಿಲ್ಲಿ: ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ತಂಡದ ಆಟಗಾರರು ಬುಧವಾರ ಬೆಳಗ್ಗೆ (ಭಾರತೀಯ ಕಾಲಮಾನ ಮಧ್ಯಾಹ್ನ 3.30) ಸೌತಾಂಪ್ಟನ್ನ ಏಜಸ್ ಬೌಲ್ ಸ್ಟೇಡಿಯಮ್‌ಗೆ ಕಾಲಿಡುವ ಘಳಿಗೆ ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ. ದೀರ್ಘ ಅವಧಿಯ ಕೋವಿಡ್-19 ಲಾಕ್‌ಡೌನ್‌ ಬಳಿಕ ಅಂದರೆ ಸತತ 117 ದಿನಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವೊಂದಕ್ಕೆ ಚಾಲನೆ ದೊರೆಯಲಿದ್ದು, ಐತಿಹಾಸಿಕ ಕ್ಷಣವೊಂದು ಸೃಷ್ಟಿಯಾಗಲಿದೆ. ಕೊರೊನಾ ಹಾವಳಿ ಅಂತ್ಯವಾಗದಿದ್ದರೂ, ಜೈವಿಕ ಸುರಕ್ಷಿತ ತಾಣದಲ್ಲಿ ಪಂದ್ಯ ಏರ್ಪಡಿಸಿ ಕೊರೊನೋತ್ತರ ಕ್ರಿಕೆಟ್‌ಗೆ ಚಾಲನೆ ನೀಡಿದ ಹೆಗ್ಗಳಿಕೆ ತನ್ನದಾಗಿಸಿಕೊಳ್ಳಲು ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಮಂಡಳಿ ಸಜ್ಜಾಗಿದೆ. ಹಲವು ದಿನ ಪಂದ್ಯಗಳೇ ನಡೆಯದ ಕಾರಣ ಬೇಸರಗೊಂಡಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಇದು ಶುಭ ಸುದ್ದಿಯಾಗಲಿದೆ.
ಮಾ. 13ರಂದು ಆಸ್ಪ್ರೇಲಿಯಾ-ನ್ಯೂಜಿಲೆಂಡ್ ನಡುವಿನ ಟಿ20 ಪಂದ್ಯ ಈ ಹಿಂದಿನ ಕೊನೇ ಅಂತಾರಾಷ್ಟ್ರೀಯ ಪಂದ್ಯ. ಹೀಗಾಗಿ ಈ ಸರಣಿಯು ಇನ್ನು ಮುಂದೆ ಕ್ರಿಕೆಟ್ ಅಯೋಜಿಸುವ ಕ್ರಿಕೆಟ್ ಮಂಡಳಿಗಳಿಗೆ ಮಾದರಿ ಎನಿಸಿಕೊಳ್ಳಲಿದೆ.

ಕ್ವಾರಂಟೈನ್ ಕಡ್ಡಾಯ
ಖಾಸಗಿ ವಿಮಾನದ ಮೂಲಕ ವೆಸ್ಟ್ ಇಂಡೀಸ್ ಆಟಗಾರರನ್ನು ತವರಿಗೆ ಕರೆಸಿಕೊಂಡಿರುವ ಇಸಿಬಿ, ಎಲ್ಲರನ್ನೂ ಕ್ವಾರಂಟೈನ್‌ಗೆ ಒಳಪಡಿಸಿದೆ. ಎಲ್ಲ ಆಟಗಾರರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ನೆಗೆಟಿವ್ ಬಂದವರಿಗೆ ಮಾತ್ರ ಅವಕಾಶ. ಆಲ್‌ರೌಂಡರ್ ಬೆನ್‌ ಸ್ಟ್ರೋಕ್ಸ್ ಮೊದಲ ಬಾರಿ ಇಂಗ್ಲೆಂಡ್ ತಂಡದ ನಾಯಕತ್ವ ವಹಿಸಲಿದ್ದಾರೆ. ಆಲ್‌ರೌಂಡರ್‌ ಜೇಸನ್ ಹೋಲ್ಡರ್ ವಿಂಡೀಸ್ ನಾಯಕರಾಗಿದ್ದಾರೆ.

3 ಟೆಸ್ಟ್‌ಗಳ ಸರಣಿ
ಜುಲೈ 8ರಂದು ಮೊದಲ ಟೆಸ್ಟ್, 16ರಂದು 2ನೇ ಯದು ಮೂರನೆಯದು 24ರಂದು ಆರಂಭವಾಗಲಿದೆ. ಇದು ಕಳೆದ ಏಕ ದಿನ ವಿಶ್ವಕಪ್ ಬಳಿಕ ಆರಂಭಗೊಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವೂ ಆಗಿದೆ.

ಹಲವು ನಿರ್ಬಂಧ
ಕ್ರೀಡಾಂಗಣಕ್ಕೆ ಪ್ರೇಕ್ಷಕರು ಪ್ರವೇಶಿಸುವಂತಿಲ್ಲ. ಇದೇ ವೇಳೆ ಆಟಗಾರರಿಗೆ ಹೊಸ ಮಾದರಿ ಕ್ರಿಕೆಟ್‌ಗೆ ಒಗ್ಗಿಕೊಳ್ಳುವ ಸವಾಲಿದೆ. ಮೊದಲನೆಯದಾಗಿ ಚೆಂಡಿನ ಹೊಳಪಿಗಾಗಿ ಎಂಜಲು ಸವರುವುದನ್ನು ನಿಷೇಧಿಸಲಾಗಿದ್ದು, ನಿಯಮ ಮೀರಿದರೆ ಚೆಂಡು ವಿರೂಪದ ಆರೋಪ ಎದುರಿಸಬೇಕಾಗುತ್ತದೆ.

ಏನೆಲ್ಲ ವಿಶೇಷತೆ?
– ಸೌತಾಂಪ್ಟನ್‌ನ ಸ್ಟೇಡಿಯಂನಲ್ಲಿ ಪಂದ್ಯ
– ಪ್ರೇಕ್ಷಕರಿಗೆ ಪ್ರವೇಶವಿಲ್ಲ
– ಎಲ್ಲ ಆಟಗಾರರಿಗೆ ಕೊರೊನಾ ಫ್ರೀ ವರದಿ
– ಚೆಂಡಿಗೆ ಎಂಜಲು ಒರೆಸಿದರೆ ಶಿಕ್ಷೆ

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top