ಕೋವಿಡ್‌ ಪ್ರತಿರೋಧ – ಬೆಂಗಳೂರಲ್ಲೇ ಕಂಡುಬಂತು ಹೆಚ್ಚಿನ ಪ್ರತಿಕಾಯ

ಭಾರತೀಯರಲ್ಲಿ ಸುಮಾರು 18 ಕೋಟಿ ಮಂದಿ ಈಗಾಗಲೇ ಕೋವಿಡ್‌ಗೆ ರೋಗನಿರೋಧಕ ಶಕ್ತಿ ಬೆಳೆಸಿಕೊಂಡಿದ್ದಾರೆಯೇ? ಹೌದು ಎನ್ನುತ್ತಿದೆ ಒಂದು ಅಧ್ಯಯನ. ಇದರಲ್ಲಿ ಬೆಂಗಳೂರಿನಲ್ಲಿ ನಡೆಸಿದ ಅಧ್ಯಯನದಲ್ಲಿ ಅತಿ ಹೆಚ್ಚಿನ ಪ್ರತಿಕಾಯ(ಆ್ಯಂಟಿಬಾಡಿ)ಗಳು ಕಂಡುಬಂದಿವೆ.

ಪ್ರತಿಕಾಯಗಳೆಂದರೇನು?
ಯಾವುದೇ ಕಾಯಿಲೆಯ ವೈರಸ್‌ ಅಥವಾ ಬ್ಯಾಕ್ಟೀರಿಯಾ ಮನುಷ್ಯನೊಳಗೆ ಪ್ರವೇಶಿಸಿದಾಗ, ಅದನ್ನು ಪ್ರತಿರೋಧಿಸುವ ಜೀವಕಣಗಳನ್ನು ದೇಹವೇ ಉತ್ಪತ್ತಿ ಮಾಡುತ್ತದೆ. ಇದನ್ನೇ ಪ್ರತಿಕಾಯ(ಆ್ಯಂಟಿಬಾಡಿ) ಎನ್ನುತ್ತಾರೆ. ಈ ಪ್ರತಿಕಾಯಗಳು ದೇಹದಲ್ಲಿದ್ದರೆ, ಈಗಾಗಲೇ ಆಯಾ ನಿರ್ದಿಷ್ಟ ಕಾಯಿಲೆಗೆ ಮನುಷ್ಯ ಒಂದಲ್ಲ ಒಂದು ರೀತಿಯಲ್ಲಿ ತೆರೆದುಕೊಂಡಿದ್ದಾನೆ ಎಂದೇ ಅರ್ಥ. ಆ್ಯಂಟಿಬಾಡಿ ಟೆಸ್ಟ್‌ನಲ್ಲಿ ರಕ್ತದ ಮಾದರಿಯನ್ನು ಪರೀಕ್ಷೆಗೊಡ್ಡಲಾಗುತ್ತದೆ.

60,000 ಮಂದಿಯ ಪರೀಕ್ಷೆ
ಥಯೋಕೇರ್‌ ಟೆಕ್ನಾಲಜೀಸ್‌ ಎಂಬ ಖಾಸಗಿ ಪ್ರಯೋಗಾಲಯ ದೇಶಾದ್ಯಂತ ಸುಮಾರು 60,000 ಮಂದಿಯನ್ನು ಆ್ಯಂಟಿಬಾಡಿ ಪರೀಕ್ಷೆಗೆ ಒಳಪಡಿಸಿದೆ. ದೇಶದ 600 ಪ್ರದೇಶಗಳಲ್ಲಿ (ಪಿನ್‌ಕೋಡ್‌ಗಳು) 20 ದಿನಗಳ ಕಾಲಾವಧಿಯಲ್ಲಿ ನಡೆಸಲಾದ ಟೆಸ್ಟ್‌ಗಳು ಇವು. ಇವು ಯಾದೃಚ್ಛಿಕ (ರಾರ‍ಯಂಡಮ್‌) ಪರೀಕ್ಷೆಗಳಲ್ಲ. 80 ಶೇಕಡದಷ್ಟು ಕೆಲವು ಕಾರ್ಪೊರೇಟ್‌ ಸಂಸ್ಥೆಗಳು ನಡೆಸಿದ್ದು, 15 ಶೇಕಡದಷ್ಟು ವಸತಿ ಸಂಕೀರ್ಣಗಳು ನಡೆಸಿದ್ದು ಹಾಗೂ 5 ಶೇಕಡದಷ್ಟು ತಾವಾಗಿ ಬಂದವರದ್ದು. ಆದರೆ ಇದು ದೇಶದ ಹೆಚ್ಚೂಕಡಿಮೆ ಎಲ್ಲ ಭಾಗವನ್ನು ಕವರ್‌ ಮಾಡಿದೆ ಹಾಗೂ ಕೆಲವು ಗಣನೀಯ ಫಲಿತಾಂಶಗಳನ್ನು ತೋರಿಸಿದೆ.

ಎನ್‌ಸಿಡಿಸಿ ಪರೀಕ್ಷೆಯಲ್ಲಿ 23%
ದಿಲ್ಲಿಯಲ್ಲಿ ಸೋಂಕು ನಿಯಂತ್ರಣ ರಾಷ್ಟ್ರೀಯ ಕೇಂದ್ರ (ಎನ್‌ಸಿಡಿಸಿ) ಸೆರೋಪ್ರಿವೇಲೆನ್ಸ್‌ ಟೆಸ್ಟ್‌ (ಸಮುದಾಯದಲ್ಲಿ ವೈರಸ್‌ ಎಷ್ಟು ಹರಡಿದೆ ಎಂಬುದನ್ನು ಅಳೆಯುವ ಪರೀಕ್ಷೆ)ಗಳನ್ನು ನಡೆಸಿದೆ. ಇದರಲ್ಲಿ ಕಂಡುಬಂದ ಪ್ರಕಾರ, ನಗರದಲ್ಲಿ ಶೇಕಡ 23.48 ಮಂದಿಯಲ್ಲಿ ಕೋವಿಡ್‌ ಪ್ರತಿಕಾಯ ಪತ್ತೆಯಾಗಿದೆ. ಇದು ಜೂ.27ರಿಂದ ಜು.10ರವರೆಗೆ ನಡೆದಿರುವ ಅಧ್ಯಯನವಾಗಿದ್ದು, ಹೆಚ್ಚು ಮಂದಿ ಸೋಂಕಿತರು ಲಕ್ಷಣರಹಿತರು ಎಂಬುದೂ ಗೊತ್ತಾಗಿದೆ. 21,387 ಮಂದಿಯನ್ನು ಟೆಸ್ಟ್‌ಗೆ ಒಳಪಡಿಸಲಾಗಿತ್ತು.

ಪರೀಕ್ಷೆಯಲ್ಲಿ ಕಂಡುಬಂದದ್ದೇನು?
ಥಯೋಕೇರ್‌ ಟೆಕ್ನಾಲಜೀಸ್‌ 60,000 ಮಂದಿಗೆ ನಡೆಸಿದ ಪರೀಕ್ಷೆಯಲ್ಲಿ ಶೇ.15 ಮಂದಿಯಲ್ಲಿ ಕೋವಿಡ್‌ ಆ್ಯಂಟಿಬಾಡಿಗಳು ಕಂಡುಬಂದಿವೆ. ಅಂದರೆ, ದೇಶದ ಜನಸಂಖ್ಯೆಯಲ್ಲಿ 15% ಎಂದರೆ ಸುಮಾರು 18 ಕೋಟಿ ಮಂದಿಯಲ್ಲಿ ಪ್ರತಿಕಾಯಗಳು ಉತ್ಪತ್ತಿಯಾಗಿರಬಹುದು ಎಂಬುದು ಇಲ್ಲಿರುವ ಲೆಕ್ಕಾಚಾರ. ಅಂದರೆ ಈ ಪ್ರತಿರೋಧ ಶಕ್ತಿ ಗಳಿಸಿಕೊಂಡವರಲ್ಲಿ ನಾವೂ ಇರಬಹುದು; ಇಲ್ಲದೆಯೂ ಇರಬಹುದು. ಇದನ್ನು ಇನ್ನೊಂದು ರೀತಿಯಲ್ಲೂ ನೋಡಬಹುದು; ಅಂದರೆ ಶೇ.85 ಮಂದಿಯಲ್ಲಿ ಪ್ರತಿಕಾಯಗಳು ಇಲ್ಲ. ಹೀಗಾಗಿ ದೊಡ್ಡ ಪ್ರಮಾಣದ ಜನಸಂಖ್ಯೆ ಇನ್ನೂ ಕೋವಿಡ್‌ ತುತ್ತಾಗುವ ಸಾಧ್ಯತೆ ಇದ್ದೇ ಇದೆ.

(ಈ ಬಾಕ್ಸ್‌ ಇಂಪಾರ್ಟೆಂಟ್‌…)
ಬೆಂಗಳೂರಿನಲ್ಲಿ ಹೆಚ್ಚು ಪ್ರತಿಕಾಯ
ಈ ಲ್ಯಾಬ್‌ ಬೆಂಗಳೂರಿನ ಎರಡು ಕಡೆ ಟೆಸ್ಟ್‌ಗಳನ್ನು ನಡೆಸಿದೆ. ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣ. ಪೀಣ್ಯ ದಾಸರಹಳ್ಳಿಯಲ್ಲಿ ಹೆಚ್ಚಿನ ಪ್ರತಿಕಾಯ ಪ್ರಮಾಣ ಕಂಡುಬಂದಿದೆ. ಇಲ್ಲಿ ದೊರೆತ ಫಲಿತಾಂಶ ಶೇ.44.1. ಇದು ದೇಶದಲ್ಲಿ ಎರಡನೇ ಸ್ಥಾನ. ಮೊದಲಿನ ಸ್ಥಾನದಲ್ಲಿ ಥಾಣೆಯ ಭಿವಂಡಿ ಇದ್ದು, ಶೇ.47.1ರಷ್ಟಿದೆ. ಹೊಸದಿಲ್ಲಿ ಮೂರನೇ ಸ್ಥಾನ (37.7%) ಹಾಗೂ ಹೈದರಾಬಾದ್‌ (37.3%) ನಾಲ್ಕನೇ ಸ್ಥಾನಗಳಲ್ಲಿವೆ. ಐದನೇ ಸ್ಥಾನದಲ್ಲಿ (36.7%) ಮುಂಬಯಿ ಇದೆ. ಇಲ್ಲಿ ಪರೀಕ್ಷೆಗೆ ಪಡೆಯಲಾದ ಹೆಚ್ಚಿನ ಮಾದರಿಗಳು ರೆಡ್‌ ಜೋನ್‌ ಅಥವಾ ಕಂಟೇನ್‌ಮೆಂಟ್‌ ಜೋನ್‌ಗೆ ಸಂಬಂಧಿಸಿದವು. ಹೆಚ್ಚು ಸೋಂಕು ಕಂಡುಬಂದ ಪ್ರದೇಶದಲ್ಲಿ ಹೆಚ್ಚು ಪ್ರತಿಕಾಯ ಉತ್ಪತ್ತಿಯಾಗಿರುವುದು ಕಂಡುಬಂದಿದೆ. ಇದರ ಅರ್ಥವೇನೆಂದರೆ- ಈ ಪ್ರದೇಶಗಳಲ್ಲಿ ಪರೀಕ್ಷೆ ನಡೆಸಿದರೆ ಇನ್ನಷ್ಟು ಸೋಂಕಿತರು ಕಂಡುಬರಬಹುದು. ಆದರೆ ಅವರೆಲ್ಲ ಅಸಿಮ್ಟಮ್ಯಾಟಿಕ್‌ ಆಗಿದ್ದಾರೆ.

ಐಸಿಎಂಆರ್‌ ಪರೀಕ್ಷೆಗಳು
ಭಾರತೀಯ ವೈದ್ಯಕೀಯ ಸಂಶೋಧನೆ ಮಂಡಳಿ (ಐಸಿಎಂಆರ್‌) ಏಪ್ರಿಲ್‌ನಲ್ಲಿ ಒಂದು ಪರೀಕ್ಷೆಗಳನ್ನಾಧರಿಸಿದ ಸಮೀಕ್ಷೆ ನಡೆಸಿತ್ತು. ಆಗ 0.73 ಶೇಕಡ ಮಂದಿಯಲ್ಲಿ ಸೋಂಕು ಕಂಡುಬಂದಿತ್ತು. ಜೂನ್‌ ಅಂತ್ಯದಲ್ಲಿ ಇನ್ನೊಂದು ದೇಶವ್ಯಾಪಿ ಪರೀಕ್ಷೆಯನ್ನು ಐಸಿಎಂಆರ್‌ ನಡೆಸಿದ್ದು, ಅದರಲ್ಲಿ ಶೇ.20 ಮಂದಿ ಸೋಂಕಿಗೆ ತುತ್ತಾದ್ದು ಕಂಡುಬಂದಿದೆ ಎಂದು ಹೇಳಲಾಗಿದೆ. ವಿವರಗಳು ಇನ್ನಷ್ಟೇ ಬರಬೇಕಿದೆ.

ಸಮುದಾಯಕ್ಕೆ ಹರಡಿದೆಯಾ?
ಈ ಪರೀಕ್ಷೆಗಳು ತಿಳಿಸುವ ಸಂಗತಿಯೇನು ಎನ್ನುವ ಬಗ್ಗೆ ಭಿನ್ನ ಅಭಿಪ್ರಾಯಗಳು ಇವೆ. ಕೆಲವರು, ಇದರಿಂದ ಸೋಂಕು ಸಮುದಾಯಕ್ಕೆ ಹರಡಿದೆ ಎಂಬುದು ತಿಳಿಯುತ್ತದೆ ಎಂದಿದ್ದಾರೆ. ಆದರೆ ಕೇಂದ್ರ ಆರೋಗ್ಯ ಸಚಿವಾಲಯ ಇತ್ತೀಚೆಗೆ ಹೇಳಿದ ಪ್ರಕಾರ, ‘‘ಕೇವಲ 49 ಜಿಲ್ಲೆಗಳಲ್ಲಿ ಶೇ.80ರಷ್ಟು ಕೇಸುಗಳು ಇವೆ. ಹೀಗಾಗಿ ಸೋಂಕು ಸಮುದಾಯಕ್ಕಿಡೀ ಹರಡಿಲ್ಲ.’’ ಆದರೆ, ಐಸಿಎಂಆರ್‌ ಸಮೀಕ್ಷೆ ಪ್ರಕಾರ ಶೇ.20 ಮಂದಿಯಲ್ಲಿ ಪ್ರತಿಕಾಯಗಳು ಇದ್ದರೆ, ಖಂಡಿತವಾಗಿಯೂ ಸಮುದಾಯಕ್ಕೆ ಸೋಂಕು ಹರಡಿದೆ ಎನ್ನಲು ಅವಕಾಶವಿದೆ. ಆದರೆ ಇದನ್ನು ಧನಾತ್ಮಕವಾಗಿಯೂ ನೋಡಬಹುದು. ಹಾಗಿದ್ದರೆ ದೇಶದ 140 ಕೋಟಿ ಮಂದಿಯಲ್ಲಿ 28 ಕೋಟಿ ಮಂದಿಯನ್ನು ವೈರಾಣು ಸೋಂಕಿರಬಹುದು. ಆದರೆ ಇತರ ದೇಶಗಳಿಗೆ ಹೋಲಿಸಿದರೆ ಮೃತ್ಯುವಿನ ಪ್ರಮಾಣ ಅತ್ಯಂತ ಕಡಿಮೆ ಇದೆ. ಇದು ಧನಾತ್ಮಕ ಅಂಶ.

ನೀವೂ ಟೆಸ್ಟ್‌ ಮಾಡಿಸಬೇಕೆ?
ಕೋವಿಡ್‌ ಆ್ಯಂಟಿಬಾಡಿ ಟೆಸ್ಟ್‌ಗಳನ್ನು ಯಾರು ಬೇಕಿದ್ದರೂ ಮಾಡಿಸಬಹುದು. ಕೋವಿಡ್‌ ನಿಮಗೆ ಬಂದು ಹೋಗಿದೆಯೇ ಎಂಬುದನ್ನು ತಿಳಿಯುವ ಕುತೂಹಲ ನಿಮಗಿದ್ದರೆ ಈ ಪರೀಕ್ಷೆ ಮಾಡಿಸಬಹುದು. ಇದನ್ನು ಮಾಡುವ ಪರವಾನಗಿಯನ್ನು ಕೆಲವು ಖಾಸಗಿ ಲ್ಯಾಬ್‌ಗಳಿಗೆ ನೀಡಲಾಗಿದೆ.

ಆ್ಯಂಟಿಬಾಡಿ ಟೆಸ್ಟ್‌ನ ಅರ್ಥವೇನು?
ಕೋವಿಡ್‌ ಸೋಂಕಿನ ಪರೀಕ್ಷೆ ಬೇರೆ; ಆ್ಯಂಟಿಬಾಡಿ ಪರೀಕ್ಷೆ ಬೇರೆ. ಸೋಂಕಿನ ಪರೀಕ್ಷೆ ನಿಮ್ಮಲ್ಲಿ ವೈರಸ್‌ ಇದೆಯೇ ಎಂಬುದನ್ನು ತಿಳಿಸುತ್ತದೆ. ಆ್ಯಂಟಿಬಾಡಿ ಟೆಸ್ಟ್‌, ನಿಮಗೆ ಸೋಂಕು ಬಂದು ಹೋಗಿತ್ತೇ ಎಂಬುದನ್ನು ತಿಳಿಸುತ್ತದೆ. ವೈರಸ್‌ಗಳನ್ನು ವಿರೋಧಿಸಲು ದೇಹ ಸೃಷ್ಟಿಸಿದ ಪ್ರತಿಕಾಯಗಳನ್ನು ಈ ಪರೀಕ್ಷೆ ಪತ್ತೆ ಹಚ್ಚುತ್ತದೆ. ಈ ಪರೀಕ್ಷೆಯಲ್ಲಿ ನಿಮಗೆ ಪಾಸಿಟಿವ್‌ ಬಂದರೆ, ನಿಮ್ಮ ದೇಹಕ್ಕೆ ವೈರಾಣು ವಿಸಿಟ್‌ ಕೊಟ್ಟು ಹೋಗಿರಬಹುದು, ಅಥವಾ ಇನ್ನೂ ಇರಬಹುದು. ಸಾಮಾನ್ಯವಾಗಿ ಯಾವುದೇ ಸೋಂಕಿನ ಪ್ರತಿಕಾಯಗಳು ಮನುಷ್ಯನ ದೇಹದಲ್ಲಿ ತಿಂಗಳುಗಟ್ಟಲೆ ಉಳಿದುಕೊಳ್ಳುತ್ತವೆ. ಆದರೆ ಕೋವಿಡ್‌ನ ಪ್ರತಿಕಾಯಗಳು ಎಷ್ಟು ಸಮಯ ಉಳಿಯುತ್ತವೆ ಎಂಬುದು ಇನ್ನೂ ಗೊತ್ತಾಗಿಲ್ಲ.

ಈ ಟೆಸ್ಟ್‌ಗಳಿಂದ ಏನು ಪ್ರಯೋಜನ?
ಆ್ಯಂಟಿಬಾಡಿ ಟೆಸ್ಟ್‌ನಲ್ಲಿ ಪಾಸಿಟಿವ್‌ ಬಂದವರು, ಯಾವುದೇ ಸೋಂಕಿನ ಲಕ್ಷಣಗಳನ್ನು ತೋರಿಸದಿದ್ದರೆ ಹಾಗೂ ಕೊರೊನಾ ಟೆಸ್ಟ್‌ನಲ್ಲಿ ನೆಗೆಟಿವ್‌ ಬಂದರೆ, ಸುರಕ್ಷಿತ ಎಂದರ್ಥ. ಇವರು ಎಂದಿನಂತೆ ಸಾಮಾನ್ಯ ಜೀವನಕ್ಕೆ ಮರಳಬಹುದು. ಇಂಥವರ ರಕ್ತದ ಪ್ಲಾಸ್ಮಾವನ್ನು, ಕೋವಿಡ್‌ ಸೋಂಕಿತರ ಚಿಕಿತ್ಸೆಗೆ ಬಳಸಲೂ ಬಹುದು.

ಟೇಬಲ್‌
ಎಲ್ಲಿ ಎಷ್ಟು?
ಸ್ಥಳ ಪ್ರತಿಕಾಯ ಪ್ರಮಾಣ
ಭಿವಂಡಿ, ಥಾಣೆ 47.1%
ಪೀಣ್ಯ, ಬೆಂಗಳೂರು 44.1%
ಆನಂದ್‌ ವಿಹಾರ್‌, ದಿಲ್ಲಿ 37.7%
ಜುಬಿಲಿ, ಹೈದರಾಬಾದ್‌ 37.3%
ದಹಿಸರ್‌, ಥಾಣೆ 36.7%
ಘಾಟ್‌ಕೋಪರ್‌, ಮುಂಬಯಿ 36.7%
ಬಳ್ಳಾರಿ 21.4%
ಬೆಂಗಳೂರು ದಕ್ಷಿಣ 18.4%

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top