ಪ್ಯಾಕೇಜ್ ಅನುಷ್ಠಾನ ಮುಖ್ಯ – ಬೃಹತ್ ನೆರವು ಸಂತ್ರಸ್ತರನ್ನು ತಲುಪಲಿ

ಸೋಮವಾರ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ದೇಶವನ್ನುದ್ದೇಶಿಸಿ ಮಾತನಾಡಿ, 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ಅನ್ನು ಘೋಷಿಸಿದ್ದಾರೆ. ಕೊರೊನಾ ಲಾಕ್‌ಡೌನ್‌ನಿಂದ ಉಂಟಾಗಿರುವ ಆರ್ಥಿಕ ಬೇಗುದಿಯನ್ನು ತಕ್ಕಮಟ್ಟಿಗೆ ತಣಿಸಲು ಈ ಪ್ಯಾಕೇಜ್ ನೆರವಾಗಬಹುದು ಎಂದು ಆಶಿಸಬಹುದು. ಇದು ಜಿಡಿಪಿಯ ಶೇ.10ರಷ್ಟಿದ್ದು, ಗಣನೀಯ ಪ್ರಮಾಣದ ನೆರವೇ ಆಗಿದೆ. ರೈತರು, ಸಣ್ಣ ಹಾಗೂ ಕಿರು ಉದ್ಯಮಗಳು, ಕೈಗಾರಿಕೆ, ಮಧ್ಯಮ ವರ್ಗದವರಿಗೆ ಈ ಪ್ಯಾಕೇಜ್ ಸಲ್ಲಲಿದೆ ಎಂದು ಪ್ರಧಾನಿ ಹೇಳಿದ್ದಾರೆ. ಕೊರೊನಾ ಸಮರವನ್ನು ಭಾರತ ಜಯಿಸಲಿದೆ ಎಂಬ ಭರವಸೆಯನ್ನು ಪ್ರಧಾನಿ ತಮ್ಮ ಮಾತುಗಳಲ್ಲಿ ನೀಡಿದ್ದಾರೆ. ಆರ್ಥಿಕತೆ, ಮೂಲಸೌಕರ್ಯ, ಕಾರ್ಯವ್ಯವಸ್ಥೆ, ಮಾನವ ಸಂಪನ್ಮೂಲ, ಬೇಡಿಕೆ ಎಂಬ ಐದು ಸ್ತಂಭಗಳ ಮೂಲಕ ಭಾರತ ಸ್ವಾವಲಂಬಿಯಾಗಲಿದೆ ಎಂದು ಅವರು ಹೇಳಿದ್ದಾರೆ. ಸ್ಥಳೀಯ ಉತ್ಪನ್ನಗಳ ಬಗ್ಗೆ ನಾವು ಹೆಚ್ಚು ಹೆಚ್ಚು ಮಾತನಾಡಬೇಕು, ಅವುಗಳನ್ನು ಬಳಸುವ ಮೂಲಕ ಸ್ವಾವಲಂಬನೆ ಸಾಧಿಸಬೇಕು ಎಂದು ಒತ್ತಿ ಹೇಳಿದ್ದು, ಇದನ್ನು ಅವರು ‘ಆತ್ಮನಿರ್ಭರ ಭಾರತ ಅಭಿಯಾನ’ ಎಂದು ಕರೆದಿದ್ದಾರೆ.
ಮೋದಿಯವರ ಮಾತುಗಳಲ್ಲಿ ಯಾವಾಗಲೂ ಸೂತ್ರಗಳು, ಹೊಸ ಹೊಳಹುಗಳು, ಕನಸುಗಳು ತುಂಬಿರುತ್ತವೆ. ಆದರೆ ಅನುಷ್ಠಾನದ ವಿಚಾರ ಬಂದಾಗ, ಅವುಗಳಲ್ಲಿ ಎಷ್ಟು ನಮ್ಮ ದೇಶದಲ್ಲಿ ತಳಮಟ್ಟದಲ್ಲಿ ನನಸಾಗಿವೆ ಎಂಬುದನ್ನು ಗಮನಿಸಬೇಕಾಗುತ್ತದೆ. ಅವರು ಘೋಷಿಸಿರುವ 20 ಲಕ್ಷ ಕೋಟಿಯ ಪ್ಯಾಕೇಜ್‌ನ ವಿವರಗಳನ್ನು ವಿತ್ತ ಸಚಿವರು ನೀಡಲಿದ್ದಾರೆ. ಈ ಹಿಂದೆಯೂ ಆರ್‌ಬಿಐನಿಂದ ಒಂದು ಪ್ಯಾಕೇಜ್ ಘೋಷಿಸಲಾಗಿತ್ತು. ವಿತ್ತ ಸಚಿವರು ಒಂದು ಪ್ಯಾಕೇಜ್ ಘೋಷಿಸಿದ್ದರು. ಇವುಗಳು ಅನುಷ್ಠಾನದ ಯಾವ ಹಂತದಲ್ಲಿವೆ ಎಂಬುದನ್ನೂ ಸಚಿವರು ತಿಳಿಸುವುದು ಸೂಕ್ತ. ಆದರೆ ಇವು ಸಣ್ಣ ಮೊತ್ತದ ನೆರವುಗಳಾಗಿದ್ದವು. ಈಗ ಘೋಷಿಸಲಾಗಿರುವ ಪ್ಯಾಕೇಜ್ ಬೃಹತ್ ಮೊತ್ತದ್ದಾಗಿದ್ದು ಅಧಿಕ ಮಂದಿ ಫಲಾನುಭವಿಗಳನ್ನು ತಲುಪಲಿರುವುದರಿಂದ ತಳಹಂತದಲ್ಲಿ ಹೆಚ್ಚಿನ ಕ್ರಿಯಾಯೋಜನೆಯನ್ನು ಅಪೇಕ್ಷಿಸುತ್ತದೆ. ಒಂದೊಂದು ಪೈಸೆಯೂ ನಿಜವಾದ ಸಂತ್ರಸ್ತರನ್ನು ತಲುಪಲಿ ಎಂಬುದು ಎಲ್ಲರ ಆಶಯ.
ನಮ್ಮಲ್ಲಿ ಪ್ಯಾಕೇಜ್‌ಗಳನ್ನು ಘೋಷಿಸುವುದು ಸುಲಭ. ಇದಕ್ಕೆ ಆರ್ಥಿಕ ಸಂಪನ್ಮೂಲ ಎಲ್ಲಿಂದ ಹೊಂಚಲಾಗುತ್ತದೆ, ಪ್ಯಾಕೇಜ್‌ನ ಆಶಯ ಅರ್ಥಪೂರ್ಣವಾಗಿ ಈಡೇರುತ್ತಿದೆಯೇ, ಅಧಿಕಾರಿಗಳು ಯೋಜನೆಗಳನ್ನು ತಳಸ್ತರಕ್ಕೆ ಮುಟ್ಟಿಸುತ್ತಿದ್ದಾರೆಯೇ ಎಂಬುದನ್ನೆಲ್ಲ ನಿಗಾ ಇಟ್ಟು ಪರಿಶೀಲಿಸಿ ಸಾರ್ವಜನಿಕರ ಗಮನಕ್ಕೂ ತರುವ ಒಂದು ವ್ಯವಸ್ಥೆ ಸರಕಾರದ ಕಡೆಯಿಂದ ಆಗಬೇಕು. ಆಗ ಸರಕಾರದ ನೆರವಿನ ಬಗ್ಗೆ ಜನತೆಯಲ್ಲಿ ಭರವಸೆ ಉಂಟಾಗಬಹುದು. ಆರ್ಥಿಕತೆ ಚೇತರಿಸಬೇಕಾದರೆ ಉತ್ಪಾದನೆ, ಪೂರೈಕೆ ವ್ಯವಸ್ಥೆ ಚುರುಕಾಗಬೇಕು. ಅದು ಚುರುಕಾಗಬೇಕಾದರೆ ಕಾಣಬೇಕಾದರೆ ಬೇಡಿಕೆಯಲ್ಲಿ ಹೆಚ್ಚಳ ಉಂಟಾಗಬೇಕು. ಬೇಡಿಕೆ ಹೆಚ್ಚಬೇಕಾದರೆ ಗ್ರಾಹಕ ವರ್ಗದಲ್ಲಿ ವೆಚ್ಚ ಮಾಡುವ ಶಕ್ತಿ ಸೃಷ್ಟಿಯಾಗಬೇಕು. ಹಾಗಾಗಬೇಕಾದರೆ ಮಧ್ಯಮವರ್ಗದ ಉದ್ಯೋಗ ಮತ್ತು ಸಂಬಳದ ಸ್ಥಿತಿ ಸುಧಾರಿಸಬೇಕು. ಇದೆಲ್ಲವೂ ಒಂದು ಸರಣಿಯಾಗಿದ್ದು, ಎಲ್ಲ ವಲಯಗಳೂ ಸಮಗ್ರ ಗಮನವನ್ನು ಬೇಡುತ್ತವೆ. ಕಿರು, ಮಧ್ಯಮ ಉದ್ಯಮಗಳ ಪುನಶ್ಚೇತನಕ್ಕೆ ಹೆಚ್ಚಿನ ಗಮನ ಪ್ಯಾಕೇಜ್‌ನಲ್ಲಿರಬಹುದು. ಆದರೆ ಗಣನೀಯ ತೆರಿಗೆ ನೀಡುತ್ತಿರುವ ಮಧ್ಯಮ ವರ್ಗದ ನೌಕರರೂ ಸಂಕಷ್ಟದಲ್ಲಿದ್ದಾರೆ. ಕೃಷಿ ವಲಯವೂ ಬಿಕ್ಕಟ್ಟಿನಲ್ಲಿದ್ದು, ಇದು ಉತ್ಪಾದನೆ ವಲಯದ ಮೂಲ ಕೊಂಡಿಯಾಗಿದೆ. ಕೃಷಿ ಕಾರ್ಮಿಕರು, ಅಸಂಘಟಿತ ವಲಯದ ಎಲ್ಲ ಕಾರ್ಮಿಕರು ತೀವ್ರ ಸಂತ್ರಸ್ತರಾಗಿದ್ದಾರೆ. ಹಾಗೆ ನೋಡಿದರೆ ಸಂತ್ರಸ್ತರ ಸಂಖ್ಯೆಯೇ ಹೆಚ್ಚಿದ್ದು, ಈ ಬೃಹತ್ ಮೊತ್ತವೂ ಅದರ ಮುಂದೆ ಸಣ್ಣದೆನಿಸುವುದು ಖಚಿತ. ಹಾಗಿದ್ದರೂ ಇಂಥ ನೆರವು ಸಕಾಲಿಕ. ಇದರ ಸದುಪಯೋಗವಾಗಲಿ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top