ಬಾವಲಿಗಳ ಬೆನ್ನು ಬೀಳಬೇಡಿ…

ಬಾವಲಿಗಳಿಂದ ಕೋವಿಡ್‌-19 ಬರಲ್ಲ
ಐಸಿಎಂಆರ್‌, ವಿಜ್ಞಾನಿಗಳ ಅಭಿಪ್ರಾಯ | ಮರಗಳನ್ನು ಕಡಿಯದಿರಲು ಮನವಿ
ವಿಕ ಸುದ್ದಿಲೋಕ ಬೆಂಗಳೂರು : ಬಾವಲಿಗಳಿಂದ ಕೊರೊನಾ ವೈರಸ್‌(ಕೋವಿಡ್‌-19)ಗೆ ಹರಡುತ್ತಿದೆ ಎಂಬ ತಪ್ಪು ಮಾಹಿತಿಯನ್ನು ನಂಬಿದ ಅನೇಕರು ತಮ್ಮ  ಮನೆ ಮಂದೆ ಇರುವ ಗಿಡ, ಮರಗಳ ಕೊಂಬೆಗಳನ್ನು ಕಡಿಯತ್ತಿರುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಆದರೆ, ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ (ಐಸಿಎಂಆರ್‌) ಮತ್ತು ತಜ್ಞರು ಬಾವಲಿಗಳು ಕೋವಿಡ್‌-19 ವಾಹಕಗಳಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗಷ್ಟೇ ಕೇರಳ, ಹಿಮಾಚಲ ಪ್ರದೇಶ, ಪುದುಚೇರಿ ಮತ್ತು ತಮಿಳುನಾಡು ಪ್ರದೇಶ ವ್ಯಾಪ್ತಿಯ 25ಕ್ಕೂ ಹೆಚ್ಚು ಬಾವಲಿಗಳನ್ನು ಪರೀಕ್ಷೆಗೊಳಪಡಿಸಿ ಅಧ್ಯಯನ ಕೈಗೊಳ್ಳಲಾಗಿತ್ತು. ಭಾರತದ ಎರಡು ಜಾತಿಯ ಬಾವಲಿಗಳಲ್ಲಿ ಕೊರೊನಾ ವೈರಸ್‌ ಪತ್ತೆಯಾಗಿದೆ. ಆದರೆ, ಈಗ ಮಾನವ ಕುಲಕ್ಕೆ ಕಂಟಕ ತಂದಿರುವ ಕೊರೊನಾ ವೈರಸ್‌(ಕೋವಿಡ್‌-19) ಮತ್ತು ಬಾವಲಿಗಳಲ್ಲಿ ಪತ್ತೆಯಾಗಿರುವ ವೈರಸ್‌ಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ. ‘‘ಬಾವಲಿಗಳಿಂದ ಕೊರೊನಾ ವೈರಸ್‌ ಹರಡುವ ಘಟನೆ ಸಾವಿರ ವರ್ಷಗಳಲ್ಲಿ ಒಮ್ಮೆ ಮಾತ್ರ ಸಂಭವಿಸಬಹುದು,’’ ಎಂದು ಐಸಿಎಂಆರ್‌ನ ಮುಖ್ಯ ವಿಜ್ಞಾನಿ ಡಾ. ರಮಣ್‌ ಗಂಗಖೇಡ್ಕರ ಅವರು ಅಭಿಪ್ರಾಯಪಟ್ಟಿದ್ದಾರೆ. ‘‘ಭಾರತದಲ್ಲಿನ ಬಾವಲಿಗಳು ಸೋಂಕು ಹರಡುವುದಕ್ಕೆ ಯಾವುದೇ ಸಾಕ್ಷಿ ಲಭ್ಯವಾಗಿಲ್ಲ,’’ ಎಂದು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಯ ವಿಜ್ಞಾನಿ ಡಾ. ಪ್ರಜ್ಞಾ ಡಿ. ಯಾದವ್‌ ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ಅಧ್ಯಯನ ವರದಿ ‘ಇಂಡಿಯನ್‌ ಜರ್ನಲ್‌ ಆಫ್‌ ಮೆಡಿಕಲ್‌ ರಿಸರ್ಚ್‌’ನಲ್ಲಿ ಪ್ರಕಟವಾಗಿದೆ. ಆದರೆ,  ಸಾಮಾನ್ಯ ಜನರು ಈ ಮಾಹಿತಿಯನ್ನು ತಪ್ಪಾಗಿ ಅರ್ಥೈಸಿಕೊಂಡು ಬಾವಲಿಗಳು ಆಶ್ರಯದಾತವಾಗಿರುವ ಮರಗಳನ್ನು ಕತ್ತರಿಸುವ ಪ್ರಯತ್ನಗಳು ಅಲ್ಲಲ್ಲಿ ವರದಿಯಾಗುತ್ತಿವೆ. ಬೆಂಗಳೂರಿನ ಜೆ.ಪಿ. ನಗರದಂಥ ಪ್ರದೇಶಗಳಲ್ಲೂ ಜನರು ಈ ತಪ್ಪು ಮಾಹಿತಿಯನ್ನೇ ನಿಜವೆಂದು ನಂಬಿ, ಗಿಡ ಮರಗಳಿಗೆ ಕೊಡಲಿ ಏಟು ನೀಡಲು ಮುಂದಾಗಿದ್ದನ್ನು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಆಹಾರ ಕೊಂಡಿ ಕಳಚೀತು ಹುಷಾರ್‌: ವ್ಯಾಪಕವಾಗಿ ಹಬ್ಬುತ್ತಿ­ರುವ ತಪ್ಪು ಮಾಹಿತಿಯಿಂದಾಗಿ ಬಾವಲಿಗಳ ಸಾಮೂಹಿಕ ಮಾರಣ­ಹೋಮ ನಡೆಯಬಹುದು ಎಂಬ ಆತಂಕವನ್ನು ವಿಜ್ಞಾನಿಗಳು, ವನ್ಯಜೀವಿ ಸಂರಕ್ಷ ಕರು ಹೊರ ಹಾಕಿದ್ದಾರೆ. ‘‘ಬಾವಲಿಗಳು ಅದ್ಭುತ ಪರಾಗಸ್ಪರ್ಶಕಗಳಾಗಿವೆ ಮತ್ತು ಆಹಾರ ಉತ್ಪಾದನೆಗೆ ನೆರವಾಗುತ್ತವೆ. ಒಂದೊಮ್ಮೆ ಬಾವಲಿಗಳನ್ನು ಈ ರೀತಿಯ ತಪ್ಪು ಗ್ರಹಿಕೆಗೆ ಗುರಿಯಾಗಿಸಿ ವಧಾಸ್ಥಾನದಲ್ಲಿ ನಿಲ್ಲಿಸಲಾರಂಭಿಸಿದರೆ ಆಹಾರ ಸರಪಳಿಯ ಬಹುಮುಖ್ಯ ಕೊಂಡಿಯನ್ನು ಕಳಚಿ ಹೋಗಬಹುದು’’ ಎಂದು ಹಿರಿಯ ಅರಣ್ಯಾಧಿಕಾರಿಯೊಬ್ಬರು ಎಚ್ಚರಿಸಿದ್ದಾರೆ. ಇದರಿಂದ ಪರಿಸರ ಅಸಮತೋಲನ ಉಂಟಾಗಿ, ಪ್ರತಿಕೂಲ ಪರಿಣಾಮವನ್ನು ಎದುರಿಸಬೇಕಾಗಿ ಬರಬಹುದು.

ಬಾವಲಿಗಳಿಂದ ಕೊರೊನಾ ವೈರಸ್‌ ಹರಡುತ್ತದೆ ಎಂಬ ತಪ್ಪು ಮಾಹಿತಿಯನ್ನು ನಂಬಿ ಜನರು ಆತಂಕಕ್ಕೀಡಾಗುತ್ತಿದ್ದಾರೆ. ಆದರೆ, ಬಾವಲಿಗಳಿಗೂ ಮತ್ತು ಕೊರೊನಾ ವೈರಸ್‌ಗೂ ಯಾವುದೇ ಸಂಬಂಧವಿಲ್ಲ ಎಂದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಬಾವಲಿಗಳು ಸೋಂಕು ವಾಹಕಗಳಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಆಹಾರ ಸರಪಳಿಯಲ್ಲಿ ಬಾವಲಿಗಳು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿವೆ. ಬಾವಲಿಗಳಿಂದ ನಮಗೆ ಲಾಭವೇ ಇದೆ ಹೊರತು ನಷ್ಟವಿಲ್ಲ.  – ಜೋಸೆಫ್‌ ಹೂವರ್‌ ವನ್ಯಜೀವಿ ಸಂರಕ್ಷ ಣಾವಾದಿ.

ಸಮತೋಲನ ಹಾಳಾದೀತು! ಬಾವಲಿಗಳು ಪರಿಸರದಲ್ಲಿ ಒಂದು ಮಹತ್ವವಾದ ಕಾರ್ಯವನ್ನು ನಿರ್ವಹಿಸುತ್ತವೆ. ಇವುಗಳಲ್ಲಿ ದೊಡ್ಡ ಗಾತ್ರದ ಬಾವಲಿಗಳು ಪರಾಗ ಸ್ಪರ್ಶ ಹಾಗೂ ಬೀಜ ವಿಸ್ತರಣೆಯನ್ನೂ ಮಾಡಿ, ಕಾಡನ್ನು ಬೆಳೆಯಲು ಸಹಾಯ ಮಾಡುತ್ತವೆ. ಚಿಕ್ಕ ಬಾವಲಿಗಳು ಕೀಟಗಳನ್ನು ತಿನ್ನುವುದರಿಂದ ರೈತ ಮಿತ್ರನಾಗಿ ಬೆಳೆ ಹಾನಿಯನ್ನು ನಿಯಂತ್ರಿಸುತ್ತವೆ ಹಾಗೂ ಸೊಳ್ಳೆಗಳನ್ನು ತಿನ್ನುವುದರಿಂದ ಮಲೇರಿಯಾ, ಡೆಂಗೆ, ಚಿಕೂನ್‌ಗುನ್ಯದಂಥ ಕಾಯಿಲೆಗಳನ್ನು ತಡೆಗಟ್ಟುತ್ತವೆ. ಬಾವಲಿಗಳಿಂದ ಕೋವಿಡ್‌- 19 ಧಿವೈರಸ್‌ ಹರಡುತ್ತದೆ ಎಂಬುವುದಕ್ಕೆ ಇನ್ನೂ ಯಾವುದೇ ಪುರಾವೆ ಸಿಕ್ಕಿಲ್ಲ. ಬಾವಲಿಗಳನ್ನು ಮರಗಳಿಂದ ಓಡಿಸುವುದಾಗಲಿ, ಕೊಲ್ಲುವುದಾಗಲಿ ಅಥವಾ ಮರಗಳನ್ನೇ ಕಡಿಯುವುದನ್ನು ಮಾಡಿದರೆ ಇದರಿಂದ ಪ್ರಕೃತಿಯ ಸಮತೋಲನ ಹಾಳಾಗುತ್ತದೆ ಹಾಗೂ ಇನ್ನೂ ಹೆಚ್ಚು ಕಂಡರಿಯದ ಕಾಯಿಲೆಗಳು ಹುಟ್ಟುತ್ತದೆ.- ರಾಜೇಶ್‌ ಪುಟ್ಟಸ್ವಾಮಯ್ಯ, ಸಿಟಿಜನ್‌ ಸೈಂಟಿಸ್ಟ್‌ ಹಾಗೂ ಬಾವಲಿ ಸಂರಕ್ಷ ಣಾ ಟ್ರಸ್ಟ್‌ನ ಟ್ರಸ್ಟಿ.

ಬಾವಲಿಗಳಿಂದ ಕೋವಿಡ್‌-19 ಸೋಂಕು ತಗಲುತ್ತದೆ ಎಂಬ ವದಂತಿಯಲ್ಲಿ ಸತ್ಯಾಂಶವಿಲ್ಲ. ಶಿವಾಜಿ ನಗರದಲ್ಲಿಮರದ ಕೊಂಬೆಗಳಲ್ಲಿ ಬಾವಲಿಗಳು ನೇತಾಡುತ್ತಿದ್ದು, ರೆಂಬೆಗಳನ್ನು ಕಡಿದು ಹಾಕುವಂತೆ ದೂರು ಬಂದಿತ್ತು. ಬಾವಲಿಗಳಿಂದ ಸೋಂಕು ಹರಡುತ್ತದೆಂಬುದು ಸಾಬೀತಾಗಿಲ್ಲ. ಹಾಗಾಗಿ, ಬಾವಲಿಗಳು ನೇತಾಡುವ ರೆಂಬೆ-ಕೊಂಬೆಗಳನ್ನು ಕಡಿಯಲು ಸಾಧ್ಯವಿಲ್ಲವೆಂದು ಜನರಿಗೆ ತಿಳಿಹೇಳಲಾಯಿತು.-ಎಚ್‌.ಎಸ್‌. ರಂಗನಾಥಸ್ವಾಮಿ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಬಿಬಿಎಂಪಿ

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top