– 17 ರಾಜ್ಯಗಳಲ್ಲಿನ 1023 ಕೇಸಿಗೆ ನಿಜಾಮುದ್ದೀನ್ ನಂಟು
– 22 ಸಾವಿರ ಜನರು ಕ್ವಾರಂಟೈನ್
– ಶತಕದ ಬಾಗಿಲಿಗೆ ಬಂದ ಸಾವಿನ ಸಂಖ್ಯೆ
– ರಾಜ್ಯದಲ್ಲೂ16 ಹೊಸ ಕೇಸ್ ಪತ್ತೆ
ಹೊಸದಿಲ್ಲಿ: ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಮೂರು ಸಾವಿರದ ಗಡಿ ದಾಟಿದೆ. ಆದರೆ, ಸೋಂಕಿನ ಪ್ರಮಾಣದಲ್ಲಿ ಸಿಂಹಪಾಲು ಪ್ರಕರಣಗಳು ನೇರವಾಗಿ ದಿಲ್ಲಿಯಲ್ಲಿ ನಡೆದ ತಬ್ಲಿಘಿ ಸಮಾವೇಶದೊಂದಿಗೆ ನಂಟು ಹೊಂದಿರುವುದು ಬೆಳಕಿಗೆ ಬಂದಿದೆ.
ಕರ್ನಾಟಕ, ತಮಿಳುನಾಡು, ದಿಲ್ಲಿ, ಆಂಧ್ರ ಪ್ರದೇಶ, ತೆಲಂಗಾಣ, ಉತ್ತರ ಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿದಂತೆ 17 ರಾಜ್ಯಗಳಲ್ಲಿನ ಬರೋಬ್ಬರಿ 1,023 ಸೋಂಕಿತರು ತಬ್ಲಿಘಿ ಸಮಾವೇಶದಲ್ಲಿ ಭಾಗಿಯಾದವರು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಖಚಿತಪಡಿಸಿದೆ.
ಶನಿವಾರ ದಿಲ್ಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಆರೋಗ್ಯ ಕಾರ್ಯದರ್ಶಿ ಲವ ಅಗರ್ವಾಲ್ ಅವರು ಈ ಕುರಿತ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದಾರೆ.
ಆಸ್ಪತ್ರೆಯಲ್ಲಿ ಹುಚ್ಚಾಟ ನಿಜ
ತಬ್ಲಿಘಿ ಜಮಾತ್ ಸಂಘಟನೆ ದಿಲ್ಲಿಯ ನಿಜಾಮುದ್ದೀನ್‌ನಲ್ಲಿ ಆಯೋಜಿಸಿದ್ದ ಧಾರ್ಮಿಕ ಸಮಾವೇಶದಲ್ಲಿ ಭಾಗವಹಿಸಿ ಗಾಜಿಯಾಬಾದ್ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಗಳು ಬೆತ್ತಲೆಯಾಗಿ ಓಡಾಡಿ ಮಹಿಳಾ ನರ್ಸ್‌ಗಳಿಗೆ ಕಿರುಕುಳ ನೀಡಿರುವುದು ನಿಜ ಎಂಬುದು ಉತ್ತರ ಪ್ರದೇಶ ಸರಕಾರ ನಡೆಸಿದ ತನಿಖೆಗಳಿಂದ ಸಾಬೀತಾಗಿದೆ. ಒಟ್ಟು ಆರು ಜನರ ವಿರುದ್ಧ ಮಹಿಳಾ ನರ್ಸ್‌ಗಳು ಮತ್ತು ವೈದ್ಯಕೀಯ ಸಿಬ್ಬಂದಿ ಆರೋಪ ಮಾಡಿದ್ದರು. ಆ ಪೈಕಿ ಐವರು ಕೃತ್ಯ ಎಸಗಿರುವುದು ನಿಜ ಎಂದು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಪ್ರೇಟ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನಡೆಸಿದ ಪ್ರತ್ಯೇಕ ತನಿಖೆಗಳಿಂದ ದೃಢಪಟ್ಟಿದೆ.
ಕಾನ್ಪುರದಲ್ಲೂ ವಿಕೃತಿ
ಕಾನ್ಪುರದ ಸರಕಾರಿ ಆಸ್ಪತ್ರೆಯಲ್ಲಿಯೂ ಕ್ವಾರಂಟೈನ್‌ನಲ್ಲಿರುವ ತಬ್ಲಿಘಿಗಳು ಔಷಧ ಸೇವಿಸಲು ನಿರಾಕರಿಸುವುದರ ಜತೆ ವೈದ್ಯಕೀಯ ಸಿಬ್ಬಂದಿ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ಕೈಯ್ಯಲ್ಲಿಎಂಜಲು ಹಾಕಿಕೊಂಡು ಆಸ್ಪತ್ರೆಯ ಮೆಟ್ಟಿಲುಗಳ ಹಿಡಿಕೆಗೆ ಉಜ್ಜಿದ್ದಾರೆ. ಆಸ್ಪತ್ರೆಗೆ ದಾಖಲಾಗಿರುವ 22 ಜನರ ಪೈಕಿ 6 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಮುಖ್ಯ ವೈದ್ಯಾಧಿಕಾರಿ ಅಶೋಕ್ ಶುಕ್ಲಾ ತಿಳಿಸಿದ್ದಾರೆ.
ಶೋಧ ತೀವ್ರಗೊಳಿಸಲು ಸೂಚನೆ
ತಬ್ಲಿಘಿ ಸಮಾವೇಶದಲ್ಲಿ ನೇರವಾಗಿ ಭಾಗವಹಿಸಿದವರು ಮತ್ತು ಭಾಗವಹಿಸಿದವರ ನಿಕಟ ಸಂಪರ್ಕಕ್ಕೆ ಬಂದವರು ಸೇರಿದಂತೆ ಒಟ್ಟು 22,000ಕ್ಕೂ ಅಧಿಕ ಮಂದಿಯನ್ನು ದೇಶದ ವಿವಿಧ ರಾಜ್ಯಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಇಂಥವರನ್ನು ಗುರುತಿಸುವ ಕಾರ್ಯವನ್ನು ರಾಜ್ಯಗಳು ಇನ್ನಷ್ಟು ತೀವ್ರಗೊಳಿಸಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.
ಕೊರೊನಾ ಚೀಟ್ ಶೀಟ್
30%: ದೇಶದ 30 ಪ್ರತಿಶತ ಕೊರೊನಾ ಸೋಂಕುಗಳಿಗೆ ಒಂದೇ ಪ್ರದೇಶ ಮೂಲ
25: ದೇಶದಲ್ಲಿಪರೀಕ್ಷಿಸಲಾಗುವ ಪ್ರತಿ 25 ಮಂದಿಯಲ್ಲಿಒಬ್ಬರಿಗೆ ಪಾಸಿಟಿವ್
30:1- ಪ್ರತಿ 30 ಸೋಂಕಿತರಲ್ಲಿಒಬ್ಬರು ಸಾವಿಗೀಡಾಗುವ ಸಂಭವ
75,000: ದೇಶದಲ್ಲಿಇದುವರೆಗೂ ಕೈಗೊಂಡ ಕೊರೊನಾ ಪರೀಕ್ಷೆಗಳು
58: ದೇಶದಲ್ಲಿ ಗಂಭೀರ ಪರಿಸ್ಥಿತಿಯಲ್ಲಿರುವ ಕೊರೊನಾ ರೋಗಿಗಳ ಸಂಖ್ಯೆ
ಭಾರತದಲ್ಲಿ ಶನಿವಾರ ಇನ್ನೂ ಐವರು ಸೋಂಕಿಗೆ ಬಲಿ
ವಿದೇಶದಲ್ಲೂ ಇದುವರೆಗೆ 15 ಎನ್‌ಆರ್‌ಐಗಳು ಸಾವು
ಇದು ನಿತ್ಯ ಯುದ್ಧ
ಪ್ರಕರಣಗಳ ಸಂಖ್ಯೆ ದುಪ್ಪಟ್ಟು ಏರಿಕೆ ಭಾರತದಲ್ಲಿ ಇನ್ನೂ ನಿಧಾನಗತಿಯಲ್ಲೇ ಇದೆ. ಆದರೆ, ನಾವು ಹೋರಾಡುತ್ತಿರುವುದು ಸಾಂಕ್ರಾಮಿಕ ರೋಗದ ವಿರುದ್ಧ. ಇದು ದಿನದಿನದ ಯುದ್ಧ. ಇಂದಿನ ಯಶಸ್ಸು ನಾಳೆಗೆ ಉಳಿಯದೇ ಹೋಗಬಹುದು. ಅಂತಿಮ ಗೆಲುವಿಗೆ ಎಲ್ಲರ ಬೆಂಬಲ ಅನಿವಾರ್ಯ.
– ಲವ ಅಗರ್ವಾಲ್, ಆರೋಗ್ಯ ಕಾರ್ಯದರ್ಶಿ
ಏ.8ಕ್ಕೆ ಪ್ರಧಾನಿ ಸರ್ವಪಕ್ಷ ಸಭೆ
ಕರೊನಾ ವೈರಸ್ ಸೋಂಕಿನ ಪರಿಸ್ಥಿತಿ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಏ.8ರಂದು ಸರ್ವಪಕ್ಷಗಳ ಸಭೆ ಕರೆದಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖಂಡರ ಜತೆ ಸಮಾಲೋಚನೆ ನಡೆಯಲಿದೆ.