ಕೊರೊನಾ ಮನೋಲೋಕ

– ರಮೇಶ್‌ ಪೋಖ್ರಿಯಾಲ್‌ ‘ನಿಶಾಂಕ್‌’
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು.

ಪರೀಕ್ಷಾ ಪೆ ಚರ್ಚಾ 3.0ರಲ್ಲಿ ಪ್ರಧಾನಿಯವರು ಒತ್ತಡ, ಆತಂಕ ಮತ್ತು ಅವುಗಳನ್ನು ನಿಭಾಯಿಸುವ ತಂತ್ರಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸುತ್ತಿರುವಾಗ, ‘‘ನಮ್ಮ ಮಾನಸಿಕ ಸ್ಥಿತಿ ಹೇಗಿರಬೇಕೆಂದರೆ, ನಾವು ಒಮ್ಮೆ ವಿಫಲವಾದರೂ, ಮತ್ತೆ ಪ್ರಯತ್ನಿಸಬೇಕು. ಜೀವನದಲ್ಲಿ ಈ ಮನೋಭಾವವು ಪ್ರತಿ ವಿದ್ಯಾರ್ಥಿಗೂ ಇರಬೇಕು,’’ ಎಂದು ಹೇಳಿದ್ದರು. ಕೋವಿಡ್‌-19 ಸಾಂಕ್ರಾಮಿಕ ರೋಗವು ವಿದ್ಯಾರ್ಥಿಗಳು ಮತ್ತು ಇತರರ ಮೇಲೆ ಪರಿಣಾಮ ಬೀರಿದೆ. ಪರಿಣಾಮವಾಗಿ ಎಲ್ಲಾ ಕಡೆಯೂ ಒತ್ತಡದ ಸಂದರ್ಭಗಳು ಸೃಷ್ಟಿಯಾಗಿವೆ. ಇದು ಎಲ್ಲಾ ವಯಸ್ಸಿನವರ ಮತ್ತು ವೃತ್ತಿಗಳನ್ನು ಮಾಡುವವರ ಸಾಮಾನ್ಯ ದಿನಚರಿಗಳನ್ನು ಅಸ್ತವ್ಯಸ್ತಗೊಳಿಸಿ ಒತ್ತಡ ಮತ್ತು ಆತಂಕಗಳಿಗೆ ಒಡ್ಡಿದೆ. ಮಾನಸಿಕ ಆರೋಗ್ಯವು ಸಮಾಜದ ಯೋಗಕ್ಷೇಮ ಮತ್ತು ಉತ್ಪಾದಕತೆಯೊಂದಿಗೆ ಪರಸ್ಪರ ಸಂಬಂಧವನ್ನು ಹೊಂದಿದೆ. ವಿಶ್ವಾದ್ಯಂತ, ಮಾನಸಿಕ ಮತ್ತು ನಡವಳಿಕೆ ಸಂಬಂಧಿ ಅಸ್ವಸ್ಥತೆಗಳು ಒಟ್ಟು ರೋಗಗಳ ಶೇ.11ರಷ್ಟಿವೆ; ಇದು 2020ರ ವೇಳೆಗೆ ಶೇ.15ಕ್ಕೆ ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ಮಾಹಿತಿಯು ಮಾನಸಿಕ ಆರೋಗ್ಯದ ಸಂಬಂಧ ದೇಶಗಳಲ್ಲಿ ಲಭ್ಯವಿರುವ ಸಂಪನ್ಮೂಲಗಳು ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳ ನಡುವೆ ಇರುವ ದೊಡ್ಡ ಅಂತರವನ್ನು ಬಹಿರಂಗಪಡಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಆರೋಗ್ಯ ಕ್ಷೇತ್ರದಲ್ಲಿ, ಆರೋಗ್ಯ ಸುಧಾರಣೆಯಲ್ಲಿ ಸಕಾರಾತ್ಮಕ ಪರಿಣಾಮವನ್ನು ತರಲು ಆರ್ಥಿಕ, ಪರಿಸರ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಆರೋಗ್ಯವನ್ನು ಉತ್ತೇಜಿಸುವ ನೀತಿಗಳ ಅಗತ್ಯವಿದೆ. ಇದಲ್ಲದೆ, ನಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಹೆಚ್ಚಿನ ನೆರವು ಮತ್ತು ಕಾಳಜಿಯ ಅಗತ್ಯವಿರುವ ಇತರರಿಗೆ ಸಹಾಯ ಮಾಡಲು ನಾವು ಸಾಕಷ್ಟು ಕೆಲಸಗಳನ್ನು ಮಾಡಬಹುದಾಗಿದೆ. ಆರ್ಥಿಕ ಪರಿಹಾರ ಪ್ಯಾಕೇಜ್‌ ಅಡಿಯಲ್ಲಿ ಕೋವಿಡ್‌-19 ಸಾಂಕ್ರಾಮಿಕದ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಅವರ ಕುಟುಂಬದವರು ಮತ್ತು ಶಿಕ್ಷ ಕರ ಮಾನಸಿಕ ಯೋಗಕ್ಷೇಮಕ್ಕಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಉಪಕ್ರಮಗಳನ್ನು ಘೋಷಿಸಿದ್ದಾರೆ.
ಕೊರೊನಾ ನಂತರದಲ್ಲಿ ಎಲ್ಲಾ ವಯಸ್ಸಿನ ಓದುಗರ ಅಗತ್ಯಗಳಿಗಾಗಿ ದಾಖಲಾತಿ ಮತ್ತು ಸಂಬಂಧಿತ ಓದುವ ಸಾಮಗ್ರಿಗಳನ್ನು ಒದಗಿಸಲು ನ್ಯಾಷನಲ್‌ ಬುಕ್‌ ಟ್ರಸ್ಟ್‌ ‘ಸಾಂಕ್ರಾಮಿಕ ರೋಗದ ಮಾನಸಿಕ-ಸಾಮಾಜಿಕ ಪರಿಣಾಮ ಮತ್ತು ನಿಭಾವಣೆ’ ಪರಿಕಲ್ಪನೆಯಡಿ ಕೊರೊನಾ ಅಧ್ಯಯನ ಸರಣಿಯನ್ನು ಹೊರತಂದಿದೆ. ಈ ಪುಸ್ತಕಗಳು ಹಲವಾರು ದೂರವಾಣಿ ಕರೆಗಳನ್ನು ಆಧರಿಸಿವೆ ಮತ್ತು ಪ್ರಖ್ಯಾತ ಮನಶ್ಶಾಸ್ತ್ರಜ್ಞರು ವಿವಿಧ ವಯೋಮಾನದವರೊಂದಿಗೆ ನಡೆಸಿದ ಆನ್ಲೈನ್‌ ಸಮೀಕ್ಷೆಗಳನ್ನು ಒಳಗೊಂಡಿವೆ. ಸಂಶೋಧನಾ ಪ್ರಯತ್ನಗಳ ಫಲವಾಗಿ ಏಳು ಕೈಪಿಡಿಗಳನ್ನು ಪ್ರಕಟಿಸಲು ಸಾಧ್ಯವಾಗಿದೆ.
ನ್ಯಾಷನಲ್‌ ಬುಕ್‌ ಟ್ರಸ್ಟ್‌ ಮಾಡಿರುವ ಈ ಅದ್ಭುತ ಕಾರ್ಯವು ಹಂಚಿಕೊಳ್ಳಲು ಯೋಗ್ಯವಾಗಿದೆ. ಈ ಪ್ರಕಟಣೆಗಳಲ್ಲಿ ‘ಸಾಮಾಜಿಕ ಅಂತರದ ಭವಿಷ್ಯ: ಮಕ್ಕಳು, ಹದಿಹರೆಯದವರು ಮತ್ತು ಯುವಕರಿಗೆ ಹೊಸ ಮೂಲತತ್ವಗಳು’- ಕೈಪಿಡಿಯು ವಿದ್ಯಾರ್ಥಿಗಳು ನೂತನ ಕಲಿಕೆ ಮತ್ತು ಜೀವನ ವಿಧಾನಕ್ಕೆ ಹೇಗೆ ಹೊಂದಿಕೊಳ್ಳುತ್ತಿದ್ದಾರೆ ಮತ್ತು ಆತಂಕ, ಒತ್ತಡ, ಅನಿಶ್ಚಿತತೆ ಮತ್ತು ಭೀತಿಯನ್ನು ಅವರು ಹೇಗೆ ಎದುರಿಸಿದರು ಎಂಬುದನ್ನು ವಿವರಿಸುತ್ತದೆ. ಅಂತೆಯೇ, ಅವರು ತಮ್ಮ ಕೌಶಲ್ಯ, ಪ್ರತಿಭೆಯನ್ನು ಉದ್ದೀಪಿಸಲು ತಂತ್ರಜ್ಞಾನವನ್ನು ಹೇಗೆ ಬಳಸಿಕೊಂಡರು ಎಂಬುದೂ ಇದರಲ್ಲಿದೆ. ‘ಕೊರೊನಾ ಬಿಕ್ಕಟ್ಟಿನಲ್ಲಿ ಸಿಲುಕಿದಾಗ: ದುಡಿಮೆಯ ವೃತ್ತಿಪರರಿಗೆ ಒಂದು ಅನುಸಂಧಾನ, ಅರ್ಥವನ್ನು ನಿರೂಪಿಸುವುದು’- ಕೈಪಿಡಿಯು ಕೋವಿಡ್‌-19 ಭೀತಿಯ ಪರಿಸ್ಥಿತಿಯು ದುಡಿಮೆಯ ವೃತ್ತಿಪರರಿಗೆ ಅಸಂಖ್ಯಾತ ಸಾಮಾಜಿಕ-ಆರ್ಥಿಕ ಮತ್ತು ವೈಯಕ್ತಿಕ ಸವಾಲುಗಳನ್ನು ಒಡ್ಡಿರುವ ಬಗ್ಗೆ ಟಿಪ್ಪಣಿಗಳನ್ನು ಹೊಂದಿದೆ.
ದುಃಖಕರವಾದ ವಿಷಯವೆಂದರೆ, ಸಾಂಕ್ರಾಮಿಕದ ಸಮಯದಲ್ಲಿ ದೇಶದ ಸೋದರಿಯರು ಮತ್ತು ತಾಯಂದಿರು ಕೌಟುಂಬಿಕ ದೌರ್ಜನ್ಯ ಮತ್ತು ಮಾದಕ ವಸ್ತುಗಳ ಉಲ್ಬಣದ ಪರಿಣಾಮವನ್ನು ಎದುರಿಸುತ್ತಿದ್ದಾರೆ. ಅಂತಹ ಸಮಸ್ಯೆಗಳನ್ನು ಎದುರಿಸಲು ಅವರಿಗೆ ನೆರವಿನ ವ್ಯವಸ್ಥೆಯ ಕೊರತೆಯಿದೆ. ‘ಮನೆಯಲ್ಲಿ ಹೊಸ ಗಡಿಗಳು: ಮಹಿಳೆಯರು, ತಾಯಂದಿರು ಮತ್ತು ಪೋಷಕರಿಗೆ ಒಂದು ಅನುಸಂಧಾನ’ ಕೈಪಿಡಿಯು ಮಹಿಳೆಯರ ಮೇಲಿನ ದೌರ್ಜನ್ಯದ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಈ ಸವಾಲಿನ ಸಂದರ್ಭದ ಭೀತಿಯು ನಮ್ಮನ್ನು ಆವರಿಸಿಕೊಳ್ಳಲು ಪ್ರಯತ್ನಿಸಬಹುದಾದರೂ, ನಮ್ಮನ್ನು ಉತ್ತಮವಾಗಿಸಲು ನಾವು ನಮ್ಮ ಕಾರ್ಯಗಳನ್ನು ಒಟ್ಟಿಗೆ ಮಾಡಬೇಕಾಗಿದೆ. ‘ಶರತ್ಕಾಲದಲ್ಲಿ: ಹಿರಿಯರನ್ನು ಅರ್ಥ ಮಾಡಿಕೊಳ್ಳುವುದು’- ಕೈಪಿಡಿಯು ಮನೆಯ ಹಿರಿಯರು ಅಪಾರವಾದ ವೈಯಕ್ತಿಕ, ಸಾಮಾಜಿಕ ಅನುಭವಗಳು ಮತ್ತು ಇಂದಿನ ಪೀಳಿಗೆಗೆ ಮಾರ್ಗದರ್ಶನ ಮಾಡುವ ಬುದ್ಧಿವಂತಿಕೆಯನ್ನು ಹೊಂದಿರುವುದರಿಂದ ಪ್ರಸ್ತುತದಲ್ಲಿ ಕುಟುಂಬಕ್ಕೆ ಮಾರ್ಗದರ್ಶನ ನೀಡಲು ಅವರಿಗೆ ಕುಟುಂಬ ಸಲಹೆಗಾರರ ಪಾತ್ರವನ್ನು ನೀಡಬೇಕಾಗಿದೆ ಎಂದು ಸೂಚಿಸುತ್ತದೆ. ‘ವಿಕಲಾಂಗ ವ್ಯಕ್ತಿಗಳ ಕಳವಳಗಳನ್ನು ಅರ್ಥ ಮಾಡಿಕೊಳ್ಳುವುದು’ ಮತ್ತು ‘ಪರಕೀಯತೆ ಮತ್ತು ಸ್ಥಿತಿಸ್ಥಾಪಕತೆ’ ಕೈಪಿಡಿಗಳು ವಿಶೇಷ ಮಕ್ಕಳು ಕ್ರಮೇಣ ಆಲಸ್ಯ, ಬೇಸರ ಮತ್ತು ಪ್ರತ್ಯೇಕತೆಯನ್ನು ಅನುಭವಿಸುವ ಬಗ್ಗೆ ಹೇಳುತ್ತವೆ. ಸೋಂಕಿಗೆ ಒಳಗಾದರೆ ಇತರರಂತೆಯೇ ಸಮಾನ ವೈದ್ಯಕೀಯ ಲಭ್ಯತೆ ಮತ್ತು ಆದ್ಯತೆ ಅವರು ಪಡೆಯಬೇಕಿದೆ.
ಕೊರೊನಾ ಯೋಧರಾದ ವೈದ್ಯರು, ದಾದಿಯರು ಅಥವಾ ಇತರ ವೈದ್ಯಕೀಯ ಸಿಬ್ಬಂದಿಯಿಂದ ದೇಶವು ಅಸಾಧಾರಣ ಬೆಂಬಲವನ್ನು ಪಡೆದಿದೆ. ಅವರಿಗೆ ಒಂದೆಡೆ, ಇತರರ ಜೀವಗಳನ್ನು ಉಳಿಸುವ ಒತ್ತಡವಿದ್ದರೆ ಮತ್ತೊಂದೆಡೆ, ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕಾದ ಆತಂಕವನ್ನೂ ಅವರು ಎದುರಿಸಬೇಕಾಗುತ್ತದೆ. ಈ ಯೋಧರನ್ನು ಇಂತಹ ತೀವ್ರವಾದ ನೋವು ಮತ್ತು ಒತ್ತಡದಲ್ಲಿ ನಾವು ಬಿಡಲಾಗುತ್ತದೆಯೇ? ಅವರಿಗಾಗಿ ಸಿದ್ಧಪಡಿಸಿರುವ ‘ಕೊರೊನಾ ಯೋಧರ ಅಗ್ನಿಪರೀಕ್ಷೆ: ವೈದ್ಯಕೀಯ ಮತ್ತು ಅಗತ್ಯ ಸೇವಾ ಪೂರೈಕೆದಾರರೊಂದಿಗೆ ಒಂದು ಅನುಸಂಧಾನ’ ಕೈಪಿಡಿಯು ಉತ್ತಮ ಮಾನಸಿಕ ಆರೋಗ್ಯವನ್ನು ಸಾಧಿಸಲು ಸಹಾಯ ಮಾಡಲು ಅನ್ವಯವಾಗುವ ಮತ್ತು ಸ್ವಯಂ ತೆಗೆದುಕೊಳ್ಳುವ ಚಿಕಿತ್ಸಾ ವಿಧಾನಗಳ ಬಗ್ಗೆ ತಿಳಿಸುತ್ತದೆ. ಹಾಗೆಯೇ, ‘ಕೊರೊನಾ ಪೀಡಿತರ ಕುಟುಂಬಗಳನ್ನು ಅಥೈರ್‍ಸಿಕೊಳ್ಳುವುದು’ ಕೈಪಿಡಿಯಲ್ಲಿ ಅವರಲ್ಲಿರುವ ಭಯ, ತಾರತಮ್ಯ ಮತ್ತು ಸಾಮಾಜಿಕ ಕಳಂಕಗಳ ಬಗ್ಗೆ ವಿವರಿಸಲಾಗಿದೆ.
ಈ ಸಂಶೋಧನೆಗಳು ಉತ್ತಮ ಮಾನಸಿಕ ಆರೋಗ್ಯದತ್ತ ಬದಲಾವಣೆಯ ಹೆಜ್ಜೆಗಳನ್ನು ಇಡಲು ನಮ್ಮನ್ನು ಪ್ರೇರೇಪಿಸುತ್ತವೆ. ಕೊರೊನಾ ನಂತರದ ಕಾಲದಲ್ಲಿ, ಒಂದು ರಾಷ್ಟ್ರವಾಗಿ ನಾವು ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮವನ್ನು ಸಮುದಾಯ ಆಧಾರಿತ ಮಾನಸಿಕ ಆರೋಗ್ಯ ಉತ್ತೇಜನದ ಒಂದು ಅವಿಭಾಜ್ಯ ಅಂಗವಾಗಿ ಬಲಪಡಿಸುವ ಅಗತ್ಯವಿದೆ ಎಂಬ ಅಧ್ಯಯನ ಗುಂಪು ನೀಡಿರುವ ಸಲಹೆಗಳನ್ನು ನಾನು ಬಲವಾಗಿ ಒಪ್ಪುತ್ತೇನೆ. ಕೊರೊನಾ ನಂತರದ ಕಾಲದ ಹೋರಾಟವು ಚೇತರಿಕೆಯ ಮತ್ತು ಉತ್ತಮ ಹೊಂದಾಣಿಕೆಯ ಸಮಾಜಕ್ಕಾಗಿ ತಯಾರಾಗಲು ದೈಹಿಕ ಸಾಮರ್ಥ್ಯ‌ ಮತ್ತು ರೋಗನಿರೋಧಕ ಶಕ್ತಿ, ಸಾಮಾಜಿಕ-ಆರ್ಥಿಕ ರೂಪಾಂತರಗಳು ಮತ್ತು ಸಾಮೂಹಿಕವಾದ ಮಾನಸಿಕ ಆರೋಗ್ಯ ಕಾರ್ಯಕ್ರಮಗಳಿಗೆ ಒತ್ತು ನೀಡುವ ಬಹು ಆಯಾಮದ್ದಾಗಿರಬೇಕು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top