ಕೊರೊನಾ ತುರ್ತು ಪರಿಸ್ಥಿತಿ – ಕೈ ಮೀರಿ ಹೋಗುವ ಮುನ್ನ ಎಚ್ಚೆತ್ತುಕೊಳ್ಳಿ

ಕಳೆದ ಒಂದು ವಾರದಿಂದ ರಾಜ್ಯದಲ್ಲಿ, ಮುಖ್ಯವಾಗಿ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಾಬರಿಯಾಗುವಷ್ಟು ಏರುತ್ತಿದೆ. ಕಳೆದೆರಡು ದಿನಗಳಿಂದ ಬೆಂಗಳೂರಿನಲ್ಲೇ ಹೊಸ ರೋಗಿಗಳ ಸಂಖ್ಯೆ ಪ್ರತಿದಿನ ಒಂದು ಸಾವಿರಕ್ಕಿಂತಲೂ ಹೆಚ್ಚು ವರದಿಯಾಗುತ್ತಿದೆ. ಭಾನುವಾರ ರಾಜ್ಯದಲ್ಲಿ ಕೋವಿಡ್‌ನಿಂದ 37 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಪ್ರಮಾಣ 20 ಸಾವಿರದ ಗಡಿ ದಾಟಿದೆ. ಇದು ಆರೋಗ್ಯ ತುರ್ತು ಪರಿಸ್ಥತಿಯೇ ಸರಿ. ಇತ್ತೀಚೆಗೆ ಕೋವಿಡ್‌ ನಿರ್ವಹಣೆಯಲ್ಲಿ ಕೇಂದ್ರದಿಂದ ಶ್ಲಾಘನೆ ಪಡೆದ ರಾಜ್ಯದಲ್ಲಿ, ವಾಸ್ತವ ಸ್ಥಿತಿ ಹಾಗಿಲ್ಲ ಎಂಬುದು ರುಜುವಾತಾಗಿದೆ. ಕೊರೊನಾದ ರುದ್ರ ನರ್ತನ ಇದೇ ರೀತಿ ಮುಂದುವರಿದರೆ ಬೆಂಗಳೂರಿನಲ್ಲಿ ಚಿಕಿತ್ಸೆಗೆ ಆಸ್ಪತ್ರೆಗಳು ಸಿಗದ ಸ್ಥಿತಿ ನಿರ್ಮಾಣವಾಗಬಹುದು. ಮುಖ್ಯವಾಗಿ ಇಂಥ ಸ್ಥಿತಿಯಿಂದ ರಾಜಧಾನಿಯಲ್ಲಿ ಒಂದು ಬಗೆಯ ಭಯದ ವಾತಾವರಣ ಸೃಷ್ಟಿಯಾಗಿದ್ದು, ಇಲ್ಲಿಂದ ಪಾರಾದರೆ ಸಾಕು ಎಂಬಂತೆ ಊರುಗಳಿಗೆ ಜನ ದೌಡಾಯಿಸುತ್ತಿದ್ದಾರೆ. ಇದು ಇನ್ನೊಂದು ಸುತ್ತಿನ ಅನಾಹುತಕ್ಕೆ ದಾರಿ ಮಾಡಿಕೊಡಬಹುದು. ಹಾಗಿದ್ದರೆ ಸರಕಾರ ಎಡವಿದ್ದು ಎಲ್ಲಿ ಎಂಬ ಆತ್ಮಾವಲೋಕನವನ್ನು ಈಗಲೇ ಮಾಡಿಕೊಂಡು ಅದನ್ನು ಸರಿಪಡಿಸುವತ್ತ ಗಮನ ಕೊಡಲೇಬೇಕಾಗಿದೆ.
ಕೊರೊನಾದ ವ್ಯಾಪಕತೆ, ಅದು ತಂದಿಡಬಹುದಾದ ಭೀಭತ್ಸತೆಯನ್ನು ಅರಿಯುವಲ್ಲಿ ಸರಕಾರಕ್ಕೆ ದೂರದೃಷ್ಟಿಯ ಕೊರತೆಯಿತ್ತು. ನಿಯಂತ್ರಣಕ್ಕೆ ಸರಕಾರ ಮಾಡಿದ ಸಿದ್ಧತೆಗಳು ಸಾಲದಾಯಿತು. ತಜ್ಞರು ಎಚ್ಚರಿಕೆ ನೀಡಿದ್ದರೂ ಸರಕಾರ ಆರೋಗ್ಯ ವ್ಯವಸ್ಥೆಯ ಸುಧಾರಣೆಗೆ ಆದ್ಯತೆ ನೀಡಲಿಲ್ಲ. ಸರಕಾರಿ ಆರೋಗ್ಯ ಕೇಂದ್ರಗಳಲ್ಲಿನ ವ್ಯವಸ್ಥೆ ಸುಧಾರಿಸಲಿಲ್ಲ. ಲಾಕ್‌ಡೌನ್‌ ಜಾರಿಯಲ್ಲಿದ್ದ ಸಂದರ್ಭವನ್ನೇ ಬಳಸಿಕೊಂಡು ವಿಶೇಷ ಆಸ್ಪತ್ರೆ ಸ್ಥಾಪನೆ ಮಾಡಬಹುದಾಗಿತ್ತು; ಮಾಡಲಿಲ್ಲ. ಈಗ ವರದಿಯಾಗುತ್ತಿರುವಂತೆ ಪ್ರತಿದಿನ ಸಾವಿರ ಪ್ರಕರಣಗಳು ಬಂದರೆ ಲಭ್ಯವಿರುವ ಎಲ್ಲ ಆಸ್ಪತ್ರೆಗಳು 10 ದಿನದೊಳಗೆ ಭರ್ತಿಯಾಗುತ್ತವೆ. ಈ ಮಧ್ಯೆ ಖಾಸಗಿ ಆಸ್ಪತ್ರೆಗಳನ್ನು ಚಿಕಿತ್ಸೆಗೆ ಪಡೆಯಲು ಸರಕಾರ ವಿಳಂಬ ಮಾಡಿತು. ಈ ಬಗ್ಗೆ ಪೂರ್ತಿ ವಿಶ್ವಾಸವನ್ನೂ ಮೂಡಿಸಿದಂತಿಲ್ಲ. ಸೋಂಕಿತರಿಗೆ ಬೆಡ್‌ ಇಲ್ಲ ಎಂಬ ಕಾರಣವನ್ನು ಖಾಸಗಿ ಆಸ್ಪತ್ರೆಗಳು ನೀಡುತ್ತಿರುವುದು ನೋಡಿದರೆ ಸರಕಾರಕ್ಕೂ ಇವರಿಗೂ ಸಮನ್ವಯವೇ ಇಲ್ಲದಂತಿದೆ. ತತ್ಕಾಲಕ್ಕೆ ಖಾಸಗಿ ಆಸ್ಪತ್ರೆಗಳನ್ನು ಸರಕಾರ ಸುಪರ್ದಿಗೆ ತೆಗೆದುಕೊಳ್ಳಬಹುದಿತ್ತು. ಲಾಕ್‌ಡೌನ್‌ ಆರಂಭದಲ್ಲಿ ಕೊರೊನಾ ಸ್ವಯಂಸೇವೆಗೆ ದೊಡ್ಡ ಸಂಖ್ಯೆಯಲ್ಲಿ ಸಂಸ್ಥೆಗಳು, ಸ್ವಯಂಸೇವಕರು ಮುಂದೆ ಬಂದಿದ್ದರು. ಅವರನ್ನು ಸರಕಾರ ಸಮರ್ಪಕವಾಗಿ ಬಳಸಿಕೊಂಡಂತೆ ಕಾಣದು.
ಇಂದು ಕೋವಿಡ್‌ ಪರೀಕ್ಷೆಯ ವರದಿ ಪೊಸಿಟಿವ್‌ ಬಂದರೆ ಮುಂದೇನು ಎಂಬುದನ್ನು ರೋಗಿಯೇ ನಿರ್ಣಯಿಸಬೇಕಾದ ಸ್ಥಿತಿ ಇದೆ. ಸರಕಾರಿ ಕೇಂದ್ರಗಳಲ್ಲಿ ಹಾಸಿಗೆಯಿಲ್ಲ; ಹಾಸಿಗೆಯಿದ್ದರೆ ವೆಂಟಿಲೇಟರ್‌ಗಳಿಲ್ಲ; ಎರಡೂ ಇದ್ದರೆ ವೈದ್ಯರಿಲ್ಲ. ಖಾಸಗಿ ಆಸ್ಪತ್ರೆಗಳು ಪ್ರವೇಶ ನಿರಾಕರಿಸುತ್ತವೆ. ಇದರಿಂದಾಗಿಯೇ ಆಸ್ಪತ್ರೆಗಳಿಗೆ ಸುತ್ತಿ ಬೀದಿಯಲ್ಲಿ ಹೆಣವಾದ ನಿದರ್ಶನಗಳಿವೆ. ರಾಜ್ಯ ಹಿಂದೆಂದೂ ಇಂಥ ಘೋರವನ್ನು ಕಂಡಿರಲಿಲ್ಲ. ಇದನ್ನು ಒಂದು ಸಮರ್ಪಕವಾದ ಡ್ಯಾಶ್‌ಬೋರ್ಡ್‌, ಒಂದು ಆ್ಯಪ್‌ ಮೂಲಕ ನಿಭಾಯಿಸುವ ಸಾಧ್ಯತೆಯಿತ್ತು. ಈಗಲೂ ಅಂಥದೊಂದು ವ್ಯವಸ್ಥೆಯಾದರೆ ಪರೀಕ್ಷೆಯ ಫಲಿತಾಂಶ, ಆಸ್ಪತ್ರೆ ಲಭ್ಯತೆ ಇತ್ಯಾದಿಗಳನ್ನು ಅದರಲ್ಲಿ ಕೈಗೆಟಕುವಂತೆ ಮಾಡಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಪರಿಸ್ಥಿತಿ ನಿಭಾಯಿಸಬೇಕಾದ ಸಚಿವರಲ್ಲೇ ಸಮನ್ವಯದ ಕೊರತೆ ತಲೆದೋರಿತು.
ಈಗಲೂ ಕಾಲ ಮಿಂಚಿಲ್ಲ. ಇತರ ಕೆಲಸಗಳನ್ನೆಲ್ಲ ಬದಿಗಿಟ್ಟು ಎಲ್ಲರೂ ಈಗ ಕೊರೊನಾ ನಿಭಾವಣೆಗೆ ನಿಲ್ಲಬೇಕು. ಸಮರೋಪಾದಿಯಲ್ಲಿ ಬೆಡ್‌ಗಳು ಹಾಗೂ ವೆಂಟಿಲೇಟರ್‌ಗಳ ಜೋಡಣೆಯಾಗಬೇಕು. ರೋಗಿಗೆ ಪೊಸಿಟಿವ್‌ ಬಂದ ಕೂಡಲೇ ಆತನ ಲಕ್ಷಣಗಳನ್ನು ಅನುಸರಿಸಿ ಚಿಕಿತ್ಸೆ ಒದಗಿಸಬೇಕು. ಮನೆ ಚಿಕಿತ್ಸೆಯ ಕಟ್ಟುನಿಟ್ಟಿನ ನಿಗಾ ಇಡಬೇಕು. ಕ್ವಾರಂಟೈನ್‌, ಕಾಂಟ್ಯಾಕ್ಟ್ ಟ್ರೇಸಿಂಗ್‌ಗಳು ಮತ್ತೆ ಶಿಸ್ತುಬದ್ಧ ಆಗಬೇಕು. ಸಚಿವರು ಕೇವಲ ತಮ್ಮ ಸುರಕ್ಷತೆ ನೋಡಿಕೊಳ್ಳದೆ ಫೀಲ್ಡಿಗಿಳಿದು ಸಮನ್ವಯಪೂರ್ವಕ, ಸಮರೋಪಾದಿಯಲ್ಲಿ ದುಡಿಯಬೇಕು. ವಿಶೇಷ ಆಸ್ಪತ್ರೆಗಳು ಸ್ಥಾಪನೆಯಾಗಬೇಕು. ಯುವ ವೈದ್ಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಬೇಕು. ಮುಖ್ಯವಾಗಿ, ಬೆಂಗಳೂರಿನಲ್ಲಿದ್ದರೆ ಬೀದಿ ಹೆಣ ಆಗಬೇಕಾದೀತು ಎಂಬ ಆತಂಕ ಶ್ರೀಸಾಮಾನ್ಯನಿಗೆ ಮೂಡದಂತೆ ಆಸ್ಪತ್ರೆಗಳಲ್ಲಿ ಸನ್ನದ್ದತೆ ಆಗಬೇಕು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top