ಕೊರೊನಾ ಕಾಲದಲ್ಲಿ ಆತ್ಮನಿರ್ಭರತೆ ಮತ್ತು ಉದಾರೀಕರಣ 2.0!

– ಎನ್‌.ರವಿಶಂಕರ್.  ‌

ಜೀವವಿಕಸನ ಕ್ರಿಯೆಯ ತತ್ವವನ್ನು ಜಗತ್ತಿಗೆ ಹೇಳಿಕೊಟ್ಟ ಪಿತಾಮಹ ಚಾರ್ಲ್ಸ್ ಡಾರ್ವಿನ್‌ರ ಮಾತುಗಳು- “It is not the strongest of the species that survives, nor the most intelligent; it is the one most adaptable to change.” ‘‘ಬದುಕುಳಿಯುವುದು ಅತ್ಯಂತ ಬಲಿಷ್ಠ ಪ್ರಾಣಿಯೂ ಅಲ್ಲ, ಅತ್ಯಂತ ಬುದ್ಧಿವಂತ ಪ್ರಾಣಿಯೂ ಅಲ್ಲ. ಬದಲಿಗೆ ಬದಲಾವಣೆಗೆ ಒಗ್ಗಿಕೊಳ್ಳುವ ಶಕ್ತಿಯುಳ್ಳವು.’’ ಮಾನವನ ವಿಕಾಸದ ಎಲ್ಲ ಹಂತಗಳಲ್ಲಿಯೂ ಈ ಮಾತು ನಿಜವಾಗಿರುವುದನ್ನು ಕಂಡಿದ್ದೇವೆ.
ಈ ಹೊತ್ತಿನ ಕೊರೊನಾ ಸಂಕಷ್ಟವನ್ನು ಎದುರಿಸುವ ನಮ್ಮ ತಂತ್ರಗಾರಿಕೆಯಲ್ಲಿಯೂ ಕೊನೆಗೆ ‘ಹೊಂದಾಣಿಕೆ’ಯೇ ಪ್ರಮುಖ ಅಸ್ತ್ರವಾಗಿ ಹೊರಹೊಮ್ಮಿರುವುದು ಅಚ್ಚರಿಯೇನಲ್ಲ. ಇಲ್ಲಿನ ಹೊಂದಾಣಿಕೆ ತಂತ್ರ ವ್ಯಕ್ತಿಗಳಿಗೆ ಸೀಮಿತವಲ್ಲ. ಅದು, ರಾಜ್ಯ- ದೇಶಗಳಿಗೂ ಅನ್ವಯಿಸುವಂಥದ್ದು. ಯಾವ ರಾಜ್ಯ-ದೇಶಗಳು ಪರಿಸ್ಥಿತಿಗೆ ಶೀಘ್ರವಾಗಿ adapt ಆಗುತ್ತವೆಯೋ ಅವು ಉಳಿಯುತ್ತವೆ. ವೃದ್ಧಿಸುತ್ತವೆ. ಈ ಸಮಯದಲ್ಲಿ ನಾವು ಆತ್ಮನಿರ್ಭರರಾಗಿ ಬದುಕಲು ಕಲಿಯಬೇಕು ಎನ್ನುವ ಪಾಠವನ್ನೂ ಹೇಳಲಾಗುತ್ತಿದೆ. ವ್ಯಕ್ತಿಗಳ ವಿಷಯದಲ್ಲಿ ಆತ್ಮಾವಲಂಬನೆ ಎಷ್ಟು ಕಷ್ಟವೋ, ದೇಶಗಳ ವಿಷಯದಲ್ಲಿ ಸ್ವಾವಲಂಬನೆಯ ಗ್ರಹಿಕೆ ಅದಕ್ಕಿಂತಲೂ ಕಠಿಣ. ಏಕೆಂದರೆ, ಉದಾರೀಕರಣಗೊಂಡು ಮೂರು ದಶಕಗಳಾದ ಮೇಲೆ ಹಿಮ್ಮುಖ ಹರಿವು ಸಾಧ್ಯವಿಲ್ಲ. ಹಾಗಾಗಿ, ನಾವು ಆತ್ಮನಿರ್ಭರರಾಗಿಯೂ ಇರಬೇಕಿದೆ, ಉದಾರನೀತಿಯನ್ನೂ ಅನುಸರಿಸಬೇಕಿದೆ. ಅಷ್ಟಾಗಿ, ಸ್ವಾವಲಂಬನೆ ಮತ್ತು ಉದಾರತ್ವಗಳು ಪರಸ್ಪರ ಪೂರಕವೋ ಅಥವ ವಿರೋಧಿಯೋ? ಇದನ್ನು ಅರ್ಥ ಮಾಡಿಕೊಳ್ಳಲು ಉದಾರೀಕರಣದ ಹೊಸ ವ್ಯಾಖ್ಯೆ ಹೇಗಿದೆಯೆಂಬುದನ್ನು ಅರ್ಥ ಮಾಡಿಕೊಳ್ಳೋಣ. ಸದ್ಯಕ್ಕೆ ಅದನ್ನು ಉದಾರೀಕರಣ 2.0 ಎಂದು ಕರೆಯೋಣ.
ನನ್ನ ಅದೃಷ್ಟ! ಕಳೆದ 13 ವರ್ಷಗಳನ್ನು ಭಾರತದ ಅತ್ಯುತ್ತಮ ಸ್ಟಾರ್ಟ್‌ಅಪ್‌ಗಳ ಮತ್ತು ತಂತ್ರಜ್ಞಾನ ಕೇಂದ್ರಿತ ಉದ್ಯಮಗಳ ಸಾಮೀಪ್ಯದಲ್ಲಿ ಕಳೆದಿದ್ದೇನೆ. ಕನಿಷ್ಠ ಐದು ಸಾವಿರ ಸ್ಥಾಪಕರೊಡನೆ ಸಂಭಾಷಿಸುವ, ಅವರ ಮನದಾ ಅರಿಯುವ ಅವಕಾಶ ದೊರೆತಿದೆ. ಈ ಒಡನಾಟದಿಂದ ಎರಡು ಸತ್ಯಗಳು ಗೋಚರಿಸಿವೆ. ಮೊದಲನೆಯದು, ವರ್ಷಗಳು ಕಳೆದಂತೆ, ಭಾರತದ ಉದ್ಯಮಿಗಳು ಅದರಲ್ಲೂ ನವೋದ್ಯಮಿಗಳು ಜಾಗತಿಕ ಸಾಧ್ಯತೆಗಳ ಬಗ್ಗೆ ಜಾಗೃತರಾಗಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ, ಉದ್ಯಮಗಳ ಪರಿಕಲ್ಪನೆಯ ಹಂತದಲ್ಲೇ ಜಾಗತಿಕ ಮಾರುಕಟ್ಟೆಯ ನಿರೀಕ್ಷೆಗಳನ್ನು ಮನದಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಉದಾಹರಣೆಗೆ, ಭಾರತದ ಅತಿದೊಡ್ಡ ಕ್ಯಾಬ್‌ ಕಂಪನಿ ಓಲಾ, ಅಥವಾ ಅತಿದೊಡ್ಡ ಇ ಕಾಮರ್ಸ್‌ ಕಂಪನಿ ಫ್ಲಿಪ್‌ಕಾರ್ಟ್‌. ಹಲವಾರು ದೇಶಗಳಿಗೆ ವಿಸ್ತರಿಸಬಹುದಾದಷ್ಟು ಬಲಿಷ್ಠವಾದ ತಾಂತ್ರಿಕ ಮತ್ತು ಔದ್ಯಮಿಕ ಸಾಮರ್ಥ್ಯ‌ ಹೊಂದಿದೆ. ತಮ್ಮ ಮೊದಲ ಆ್ಯಪ್‌ ಸೃಷ್ಟಿಸುವಾಗಲೇ ಓಲಾ ಮತ್ತು ಫ್ಲಿಪ್‌ಕಾರ್ಟ್‌ಗಳ ಸ್ಥಾಪಕರು, ಇದು ಎಲ್ಲಿಯೂ ಸಲ್ಲಬಹುದಾದ ತಂತ್ರಜ್ಞಾನ ಮತ್ತು ಪರಿಹಾರೋಪಾಯ ಎನ್ನುವುದನ್ನು ಸಾಬೀತುಮಾಡಿದ್ದಾರೆ. ಹತ್ತಾರು ದೇಶಗಳಿಂದ ಇಂತಹ ಉದ್ಯಮಗಳಿಗೆ ಹೂಡಿಕೆ ಹರಿದುಬಂದಿದ್ದರೆ ಅದಕ್ಕೆ ಈ ಜಾಗತಿಕ ಸಾಧ್ಯತೆಗಳ ಅರಿವೇ ಕಾರಣ. ಮತ್ತೊಂದು ಉದಾಹರಣೆ- ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಇನ್‌ಮೊಬಿ ಸಂಸ್ಥೆ, ಇಂದು ವಿಶ್ವದಲ್ಲೇ ಮೊಬೈಲ್‌ ಜಾಹೀರಾತು ಉದ್ಯಮದಲ್ಲಿ ದೊಡ್ಡ ಹೆಸರು. ಅವರು ತಂತ್ರಜ್ಞಾನದ ಬುನಾದಿ ಮೇಲೆ ತಮ್ಮ ಉದ್ದಿಮೆಯನ್ನು ಕಲ್ಪಿಸಿಕೊಳ್ಳುವ ಹಂತದಲ್ಲಿಯೇ ಜಗತ್ತನ್ನು ತಮ್ಮ ರಂಗಮಂಚವಾಗಿ ಕನಸಿದರು. ಆದ್ದರಿಂದಲೇ ಜಾಗತಿಕ ಮಟ್ಟದ ಜಾಹೀರಾತು ವೇದಿಕೆಯ ಸೃಷ್ಟಿ ಸಾಧ್ಯವಾಯಿತು.
ಔದ್ಯಮಿಕ ಜಗತ್ತಿನಲ್ಲಿ ಇಂದಾಗುತ್ತಿರುವುದೆಲ್ಲವೂ 29 ವರ್ಷದ ಹಿಂದೆ ಉದಾರೀಕರಣಗೊಂಡ ಭಾರತದ ದೀರ್ಘಾವಧಿ ಪರಿಣಾಮಗಳು. ನಾನು ಜಗತ್ತಿಗಾಗಿ ಮಾಡಬಲ್ಲೆ ಎಂದು ಮ್ಯಾನುಫ್ಯಾಕ್ಚರಿಂಗ್‌ ಸಂಸ್ಥೆಯವ ಹೇಳಿದರೆ ನಾನು ಜಗತ್ತಿಗೆ ಮಾರಬಲ್ಲೆ ಎನ್ನುತ್ತಾನೆ ಇನ್‌ಮೊಬಿಯನ್ನು ಸೃಷ್ಟಿಸಿದ ಮಹಾಶಯ. ಈ ವಿಶ್ವಾಸ ಮೂಡಲು ಕಾರಣ ಉದಾರೀಕರಣಗೊಂಡ ಭಾರತ.
ಎರಡನೆಯದು ಮತ್ತು ಬಹುಮುಖ್ಯವಾದುದು ಉದಾರೀಕರಣದ ಔದ್ಯಮಿಕ, ಆರ್ಥಿಕ ಮತ್ತು ಸಾಮಾಜಿಕ ಸಾಧ್ಯತೆಗಳು ಪೂರ್ಣರೂಪ ಪಡೆಯಲು ಇದು ಸಕಾಲ ಎನ್ನುವಂತಿದೆ. ಉದಾರೀಕರಣದ ಸಕಾರಾತ್ಮಕ ಪರಿಣಾಮಗಳು ಅತಿಸಾಮಾನ್ಯರನ್ನು ತಲುಪಿ, ಅವರ ಜೀವನದಲ್ಲಿ ದೊಡ್ಡ ಬದಲಾವಣೆ ಸಾಧ್ಯವಾಗಲಿದೆ. ಉದಾರೀಕರಣದ ಉಪಲಬ್ಧಿಗಳು ಸಾಮಾನ್ಯರನ್ನು ತಲುಪಲು, ಅದಕ್ಕೆ ಪೂರಕವಾದ ನೀತಿ ಮತ್ತು ವಾಹಕಗಳು ಬೇಕು. ಅವನ್ನು ಸೃಷ್ಟಿಸಬೇಕಾದ ಅಗತ್ಯ ಸರಕಾರಗಳಿಗೆ ಕಾಣುತ್ತಿರುವುದು ಸಂತೋಷದ ವಿಷಯ. ಉದಾಹರಣೆಗೆ: ಡಿಜಿಟಲ್‌ ಇಂಡಿಯಾ ಹೆಸರಿನಡಿಯಲ್ಲಿ ಸೃಷ್ಟಿಗೊಂಡ ಮಾಹಿತಿ ಹೆದ್ದಾರಿ ಅಥವಾ ‘ಇನ್‌ಫರ್ಮೇಷನ್‌ ಹೈವೇ’.
ಭೌತಿಕ ಹೆದ್ದಾರಿಗಳ ವಿಷಯದಲ್ಲಿ ಹೇಗೋ ಮಾಹಿತಿ ಹೆದ್ದಾರಿಯೆಂಬ ವರ್ಚುಯಲ್‌ ಹೈವೇನಲ್ಲೂ ಹಾಗೆಯೇ! ಹೆದ್ದಾರಿಗಳು ವಸ್ತುಗಳ ಸಾಗಾಣಿಕೆ ಸುಲಭವಾಗುವಂತೆ ಮಾಡಿ ಮಾರುಕಟ್ಟೆ ಇರುವೆಡೆ ಸರಕು ಲಭ್ಯವಾಗಿಸುತ್ತವೆ. ಕೊಳ್ಳುವವನು- ಮಾರುವವನು ಒಟ್ಟಾಗುವುದು ಸುಲಭವಾಗುತ್ತದೆ. ಇದರಿಂದ ಆರ್ಥಿಕ ಚಟುವಟಿಕೆ ಸಾಧ್ಯವಾಗುತ್ತದೆ. ರಸ್ತೆಗಳ ಜಾಲ ಮತ್ತು ಗುಣಮಟ್ಟ ಹೆಚ್ಚಿದಷ್ಟೂ, ಆರ್ಥಿಕ ಚಟುವಟಿಕೆಯ ಪ್ರಮಾಣವೂ ಹೆಚ್ಚುತ್ತದೆ. ಮಾಹಿತಿ ಹೆದ್ದಾರಿ ಕೂಡ ಇದೇ ಕೆಲಸವನ್ನು ಮಾಡುತ್ತದೆ! ಮಾಹಿತಿ ಹರಿವು ಸರಾಗವಾಗಿಸುತ್ತದೆ. ಮಾಹಿತಿ ಉಳ್ಳವರು ಮತ್ತು ಇರದವರ ನಡುವೆ ಇರುವ trust deficit ಅಥವಾ ನಂಬಿಕೆಯ ಕೊರತೆಯನ್ನು ನೀಗಿಸುತ್ತದೆ. ಇಬ್ಬರೂ ಪರಸ್ಪರ ವ್ಯವಹರಿಸುವುದು ಸುಲಭವಾಗುತ್ತದೆ. ಆರ್ಥಿಕ ಚಟುವಟಿಕೆ ಹೆಚ್ಚುತ್ತದೆ. ಅಭಿವೃದ್ಧಿಯ ಮುಖ್ಯ ಮಾಪಕಗಳಲ್ಲೊಂದು ಈ ಆರ್ಥಿಕ ಚಟುವಟಿಕೆಯ ಹೆಚ್ಚಳ. ಚಟುವಟಿಕೆ ಹೆಚ್ಚಿದಷ್ಟೂ ಹಣ ಕೈ ಬದಲಾಯಿಸುವ ಗತಿಯೂ ಹೆಚ್ಚುತ್ತದೆ. ಒಟ್ಟರ್ಥದಲ್ಲಿ ಇದನ್ನು ಆರ್ಥಿಕ ಪ್ರಗತಿ ಎಂದು ಕರೆಯುತ್ತೇವೆ. ಡಿಜಿಟಲ್‌ ಇಂಡಿಯಾದಿಂದಾಗಿ ಆರ್ಥಿಕ ಪ್ರಗತಿಗೆ ಬೇಕಾದ ಬುನಾದಿ ತಯಾರಾಗಿದೆ. ಉದಾರೀಕರಣದ ಪೂರ್ಣಪ್ರಯೋಜನ ಜನರಿಗೆ ತಲುಪಲು ಮತ್ತೊಂದು ಮಜಲು ಸಜ್ಜಾಗುತ್ತದೆ.
ಮಾಹಿತಿ ಆಧಾರಿತವಾದ ಇಂದಿನ ಆರ್ಥಿಕತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಾಗ ಮಾತ್ರ ಲಾಭ ಹೆಚ್ಚುತ್ತದೆ ಎನ್ನುವ ಹೊಸ ಚಿಂತನೆ ಮೊದಲ್ಗೊಂಡಿದೆ. ಈ ಯೋಚನೆಯನ್ನೇ ಮೂಲವಾಗಿಟ್ಟುಕೊಂಡು ಉದ್ಯಮಗಳನ್ನು ಕಟ್ಟಲಾಗುತ್ತಿದೆ. ಉದಾಹರಣೆಗೆ, ಈ ಹೊಸ ಉದ್ಯಮಗಳ ಮಾದರಿಯ ಸ್ಥೂಲ ರೂಪ ಈ ರೀತಿ- ನಮಗೆ ಗೊತ್ತಿರುವ ವಿಷಯದಲ್ಲಿ ನಾವು ಉದ್ಯಮ ಸ್ಥಾಪಿಸೋಣ. ಅದರ ಆನ್‌ಲೈನ್‌ ಸ್ವರೂಪವನ್ನು (ವೆಬ್‌ಸೈಟ್‌, ಪೋರ್ಟಲ್‌, ಆ್ಯಪ್‌, ಆಗ್ರಿಗೇಷನ್‌ ಮಾಡೆಲ್‌, ಮಾರ್ಕೆಟ್‌ ಪ್ಲೇಸ್‌ ಮಾಡೆಲ್‌ ಇತ್ಯಾದಿ ಯಾವುದೇ ಪ್ರಕಾರಗಳಿರಬಹುದು) ಯಾವ ರೀತಿ ಕಟ್ಟೋಣ ಎಂದರೆ, ಬೇರೆಯವರು ತಮ್ಮ ಉದ್ಯಮವನ್ನು ಬೆಳೆಸಲು ನಮ್ಮ ಉದ್ಯಮವನ್ನು ಬಳಸಿಕೊಳ್ಳಬಹುದು ಎಂಬಂತೆ! ಆಗ, ಅವರ ಉದ್ಯಮವೂ ಬೆಳೆಯುತ್ತದೆ. ನಮ್ಮ ಉದ್ಯಮವೂ ಬೆಳೆಯುತ್ತದೆ. ಉದಾಹರಣೆಗೆ ನಮ್ಮ ಕಂಪನಿಯ ಎಪಿಐಗಳನ್ನು ಮುಕ್ತಗೊಳಿಸಿದರೆ (ಸರಳವಾಗಿ ಹೇಳುವುದಾದರೆ, ಉದ್ಯಮಕ್ಕೆ/ ಸಾಫ್ಟ್‌ವೇರ್‌ ಡೆವಲಪ್‌ಮೆಂಟ್‌ಗೆ ಸಂಬಂಧಪಟ್ಟ ಕೆಲವು ಮಾಹಿತಿ, ಕೋಡ್‌ಗಳ ಮುಖೇನ ಮುಕ್ತವಾಗಿ ಲಭ್ಯವಾಗಿಸುವುದು) ಅಥವ ನಮ್ಮ ಸಾಫ್ಟ್‌ವೇರ್‌ ಡೆವೆಲಪ್‌ಮೆಂಟ್‌ ಕಿಟ್‌ಗಳನ್ನು (ಎಸ್‌ಡಿಟಿ) ಹೊರಗಿನ ಡೆವಲಪರ್‌ಗಳಿಗೆ ಉಚಿತವಾಗಿ ಬಿಚ್ಚಿಟ್ಟರೆ, ಅವರು ಅದನ್ನು ಬಳಸಿ ಲಾಭದಾಯಕವಾದ ಏನನ್ನೋ ಸೃಷ್ಟಿಸುತ್ತಾರೆ. ಅದರಿಂದ ಬರುವ ಲಾಭವನ್ನು ನಾವಿಬ್ಬರೂ ಹಂಚಿಕೊಳ್ಳಬಹುದು. ಇದರಿಂದ ಅವರಿಗೆ ನಾವು ಸೃಷ್ಟಿಸಿದ್ದನ್ನೇ ಪುನರ್‌ಸೃಷ್ಟಿಸುವ ಕೆಲಸ ತಪ್ಪುತ್ತದೆ. ನಮಗಾದರೋ, ಅಂತಹ ನೂರಾರು ಎಪಿಐ/ಎಸ್‌ಡಿಟಿ ಬಳಕೆದಾರರ ಮೂಲಕ ಕ್ಷಿಪ್ರಗತಿಯಲ್ಲಿ ಉದ್ಯಮವನ್ನು ವಿಸ್ತರಿಸಿದಂತಾಗುತ್ತದೆ.
‘ಎಲ್ಲರ ಸುಖದಲ್ಲಿ ನನ್ನ ಸುಖವೂ ಇದೆ’ ಎನ್ನುವ ಇಂತಹ ಸಹಕಾರಿ ತತ್ವವನ್ನು ಮಾಹಿತಿ ಯುಗದಲ್ಲಿ ಉದ್ದಿಮೆಗಳನ್ನು ಸೃಷ್ಟಿಸುತ್ತಿರುವವರು ಅನುಸರಿಸುತ್ತಿದ್ದಾರೆ. ಹಿಂದಿನ ಪೀಳಿಗೆಯವರು ಮಾಹಿತಿಯ ಹರಿವಿಗೆ ಕಟ್ಟುತ್ತಿದ್ದ ಅಡ್ಡಗೋಡೆಗಳನ್ನು ಕೆಡವುತ್ತಿದ್ದಾರೆ. ‘ಮುಕ್ತವಾಗಿ ಬಿಡೋಣ, ಹಂಚಿ ತಿನ್ನೋಣ’ ಎನ್ನುವುದು ಎಲ್ಲ ಡಿಜಿಟಲ್‌ ಆರ್ಥಿಕತೆಗಳ ಮೂಲಮಂತ್ರವಾಗಿದೆ. ಇದರ ಅನೇಕ ಸಾಕಾರರೂಪಗಳು ನೋಡಲು ಸಿಗುತ್ತವೆ. ಒಂದಕ್ಕೊಂದು ಹೆಣೆದುಕೊಂಡಿರುವ ನೂರಾರು ಸ್ಟಾರ್ಟ್‌ಅಪ್‌ಗಳು ನಮ್ಮ ಆರ್ಥಿಕತೆಯನ್ನು ಚಲನಾತ್ಮಕವಾಗಿಸಿವೆ. ತಮ್ಮ ಉತ್ಪನ್ನ/ ಸೇವೆಗೆ ಪೂರಕ ಅಥವ ಸಹಕಾರಿಯಾದ ಮತ್ತೊಂದು ಸ್ಟಾರ್ಟ್‌ಅಪ್‌ ಎಲ್ಲೇ ಇದ್ದರೂ, ಅದರೊಂದಿಗೆ ಮುಕ್ತವಾಗಿ ಹೊಂದಾಣಿಕೆ ಮಾಡಿಕೊಳ್ಳುವುದು ಸಾಧ್ಯವಾಗಿದೆ.
ಇದನ್ನು shared economy ಅಥವ ಹಂಚಿಕೊಂಡ ಆರ್ಥಿಕತೆ ಎನ್ನುತ್ತಾರೆ. ಈ ಆರ್ಥಿಕತೆ ಕಾರ್ಯನಿರ್ವಹಿಸುವ ರೀತಿಯನ್ನು ಗ್ರಹಿಸಬೇಕಾದ್ದು, ಆತ್ಮನಿರ್ಭರತೆಯ ಹೊಳಹಿನಲ್ಲಿ ಉದಾರೀಕರಣದ ಲಾಭವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಹಿನ್ನೆಲೆಯಾಗಿ ಚರ್ಚಿಸಬೇಕಾದ್ದು ಅತ್ಯಗತ್ಯ. ಶೇರ್ಡ್‌ ಎಕಾನಮಿ ಎಂದರೆ, ಎಲ್ಲರೂ ಭಾಗವಹಿಸುವ, ಎಲ್ಲರಿಗೂ ಅನುಕೂಲವಾಗುವ, ಮುಕ್ತವಾದ ವ್ಯವಸ್ಥೆಯನ್ನು ಕಲ್ಪಿಸುವುದು. ಇಲ್ಲಿ ಯಾರೋ ಒಬ್ಬರು ಇನ್ನೊಬ್ಬರ ಮೇಲೆ ದೌರ್ಜನ್ಯ ಎಸಗಲು ಸಾಧ್ಯವಿಲ್ಲ. ಅದು ಹಂಚಿದ ಆರ್ಥಿಕತೆಯ ಪಾರದರ್ಶಕತೆಗೆ ಮತ್ತು ಬಹುತ್ವವೇ ಮಿಗಿಲೆಂಬ ಕಲ್ಪನೆಗೆ ವಿರುದ್ಧವಾದುದು. ಹೀಗಾಗಿ ಇಲ್ಲಿ ಆತ್ಮನಿರ್ಭರವಾದ ವ್ಯಕ್ತಿಗಳು ನಿರ್ಮಿಸಿರುವ ಸ್ವಾವಲಂಬಿ ಉದ್ಯಮಗಳೂ ಗೆಲ್ಲುತ್ತವೆ. ಉದಾರತೆಯ ನೀತಿಗೆ ಓಗೊಟ್ಟು, ಒಟ್ಟು ವ್ಯವಸ್ಥೆಯೂ ರಚನಾತ್ಮಕವಾಗುತ್ತದೆ.
ಆದರೂ, ಇಂದಿನ ಡಿಜಿಟಲೀಕರಣಗೊಳ್ಳುತ್ತಿರುವ ಭಾರತದಲ್ಲಿ ಹೆಚ್ಚು ಕಲಿತವರಿಗೆ ಮಾತ್ರ ಆದಾಯ ಮತ್ತು ಅವಕಾಶಗಳು ಎನ್ನುವ ಭಾವನೆಯೇ ಉದಾರೀಕರಣದ ಬಗ್ಗೆ ಇಂದಿಗೂ ಸ್ವಲ್ಪ ಮಟ್ಟಿಗಿನ ಅನುಮಾನ, ಆತಂಕ ಮತ್ತು ವಿರೋಧ ಇರಲು ಕಾರಣ! ಜ್ಞಾನ ಆಧಾರಿತವಾದ ಆರ್ಥಿಕತೆಯಲ್ಲಿ, ನಾವು ಮಾಡುವ ಕೆಲಸ ಯಾವುದೇ ಆದರೂ, ಮಾಹಿತಿ ತಂತ್ರಜ್ಞಾನದ ಬೆನ್ನೆಲುಬಿರದಿದ್ದರೆ, ಆ ಕೆಲಸ ಇತರೆ ಕೆಲಸಗಳ ಹೋಲಿಕೆಯಲ್ಲಿ ಮಂಕಾಗುತ್ತದೆ. ಉದಾಹರಣೆಗೆ, ಕೆಲ ವರ್ಷಗಳ ಕೆಳಗಿನ ಪರಿಸ್ಥಿತಿ ನೆನೆಸಿಕೊಳ್ಳಿ. ಕ್ಯಾಬ್‌ ಡ್ರೈವರ್‌ಗಳು ಎಷ್ಟು ಸಂಪಾದಿಸುತ್ತಿದ್ದಿರಬಹುದು? ಹತ್ತರಿಂದ ಇಪ್ಪತ್ತು ಸಾವಿರ. ಇಂದು, ಕೆಲವು ಓಲಾ ಮತ್ತು ಊಬರ್‌ ಡ್ರೈವರ್‌ಗಳು ತಿಂಗಳಿಗೆ ಲಕ್ಷ ಎಣಿಸುತ್ತಾರೆ. ಚಾಲಕರು ಮತ್ತು ಈ ಡಿಜಿಟಲ್‌ ಕಂಪನಿಗಳು ಒಬ್ಬರನ್ನೊಬ್ಬರು ನಂಬಿದ್ದರಿಂದ ಆದ ಕ್ರಾಂತಿ ಇದು! ಹಂಚಿದ ಆರ್ಥಿಕತೆ, ಹೆಚ್ಚು ಕಲಿಯದವರನ್ನೂ ತಲುಪುತ್ತಿರುವುದಕ್ಕೆ ಇರುವ ಸಣ್ಣ ಪುರಾವೆ. ಇದೇ ರೀತಿ, ಎಲೆಕ್ಟ್ರಿಷಿಯನ್‌ಗಳು, ಪ್ಲಂಬರ್‌ಗಳು, ಡೆಲಿವರಿ ಬಾಯ್‌ಗಳು ಕೂಡ ಡಿಜಿಟಲ್‌ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ತಮ್ಮ ಗಳಿಕೆ ವೃದ್ಧಿಸಿಕೊಂಡಿದ್ದಾರೆ. ತಮ್ಮ ಸ್ಮಾರ್ಟ್‌ ಫೋನನ್ನೇ ವೃತ್ತಿಯ ಮುಖವಾಗಿಸಿಕೊಂಡಿದ್ದಾರೆ. ಆತ್ಮನಿರ್ಭರ ನವೋದ್ಯಮಿಗಳಿಂದ ಅನೇಕರ ಏಳ್ಗೆಯಾಗಿದೆ. ಅವರು ಸೃಷ್ಟಿಸಿದ ತಂತ್ರಜ್ಞಾನವನ್ನು ಬಳಸುತ್ತಿರುವ ಅನೇಕರೂ ಸ್ವಾವಲಂಬಿಗಳಾಗುವಂತೆ ವೇದಿಕೆಗಳನ್ನು ರೂಪಿಸಿದ್ದಾರೆ.
ಆತ್ಮನಿರ್ಭರತೆಗೂ ಉದಾರೀಕರಣಕ್ಕೂ ಕೂಡುಗೆರೆಯ ಸಂಬಂಧ ಏರ್ಪಡುವುದು ಇಲ್ಲಿಯೇ. ಉದಾರೀಕರಣ ಎಂದರೆ, ಜಗತ್ತಿಗೆ ಭಾರತವನ್ನು ಮಾರುಕಟ್ಟೆಯಾಗಿ ತೆರೆದೆವು ಎನ್ನುವ ಸ್ಥಿತಿ ಇತ್ತು. ಉದಾರೀಕರಣದ ಮೊದಲ ಹಂತದ ಬಗೆಗಿನ ಆತಂಕಗಳೆಲ್ಲವೂ, ಭಾರತ ಇತರರಿಗೆ ಮಾರುಕಟ್ಟೆಯಾದರೆ ನಮ್ಮ ಉತ್ಪನ್ನ ಮತ್ತು ಸೇವೆಗಳ ಗತಿ ಏನು ಎನ್ನುವ ಆತಂಕಗಳು. ಆದರೆ ಡಿಜಿಟಲೀಕರಣಗೊಂಡ ಭಾರತದಲ್ಲಿ, ‘ಮೇಕ್‌ ಇನ್‌ ಇಂಡಿಯಾ’ ಎನ್ನುವ ಹೊಸ ಭಾರತದಲ್ಲಿ, ನಾನು ಕೆಲಸ ಹುಡುಕುವುದಿಲ್ಲ, ಉದ್ಯೋಗ ಸೃಷ್ಟಿಸುತ್ತೇನೆ ಎನ್ನುವ ಧೀರೋದಾತ್ತ ನವೋದ್ಯಮಕರ್ತರಿರುವ ಭಾರತದಲ್ಲಿ ಉದಾರೀಕರಣ 2.0 ಹೊಸ ಸಾಧ್ಯತೆಗಳನ್ನು ತೆರೆದಿಡಲಿದೆ. ಇಲ್ಲಿ ಮಾಡಿ ಅಲ್ಲಿ ಮಾರುತ್ತೇನೆ ಎನ್ನುವುದು ಉದಾರೀಕರಣ 2.0ದ ಮೂಲ ಮಂತ್ರವಾಗಿದೆ.
ಮುಂದುವರಿದ ವಿಶ್ವಕ್ಕೆ ಮಾರುಕಟ್ಟೆಯಂತೆ ಮಾತ್ರ ಕಾಣುತ್ತಿದ್ದ ಭಾರತ ಇಂದು ಉತ್ಪನ್ನ, ಸೇವೆ ಮತ್ತು ಸಂಪನ್ಮೂಲಗಳನ್ನು ಪೂರೈಸುವ ಬಲಿಷ್ಠ ಶಕ್ತಿಯಾಗಿ ಕಾಣತೊಡಗಿದೆ. ಉದಾರೀಕರಣವೆನ್ನುವುದು ಟು-ವೇ-ಸ್ಟ್ರೀಟ್‌ (ಇಬ್ಬದಿಯ ಸಂಚಾರದ ಪಥ) ಎನ್ನುವ ಸತ್ಯ ಭಾರತೀಯರಿಗೆ ಮತ್ತು ಭಾರತದ ಜೊತೆ ವ್ಯವಹರಿಸುವವವರಿಗೆ ಅರ್ಥವಾಗಿದೆ. ಇದರಿಂದಾಗಿ ಉದಾರೀಕರಣದ ಬಗ್ಗೆ ಇದ್ದ ಆತಂಕಗಳು ನಿಧಾನವಾಗಿಯಾದರೂ ಕಡಿಮೆಯಾಗಿ, ಕೊಟ್ಟುಕೊಳ್ಳುವ ಹೊಸ ಮನಃಸ್ಥಿತಿಯಾಗಿ ಮಾರ್ಪಟ್ಟಿದೆ. ಎಲ್ಲರೂ ಉದಾರೀಕರಣದಿಂದ ಬಂದ ಬದಲಾವಣೆಗಳನ್ನು ಮನಃಪೂರ್ವಕವಾಗಿ ಒಪ್ಪಿಕೊಂಡಿದ್ದಾರೆ ಎನ್ನುವುದು ಇದರರ್ಥವಲ್ಲ. ಆದರೆ, ಒಂದು ರಾಷ್ಟ್ರವಾಗಿ ಉದಾರೀಕರಣದ ಬಗೆಗಿನ ಪರಿಪ್ರೇಕ್ಷೆಯಂತೂ ಬದಲಾಗಿದೆ. ಉದಾರೀಕರಣವೆಂದರೆ ನಮ್ಮನ್ನು ನಾವು ಜಗತ್ತಿಗೆ ಮಾರಿಕೊಳ್ಳುವುದಲ್ಲ, ಬದಲಿಗೆ, ಆತ್ಮವಿಶ್ವಾಸದಿಂದ ಜಗತ್ತಿನೊಡನೆ ವ್ಯವಹರಿಸುವುದು ಎನ್ನುವಲ್ಲಿಗೆ ಬಂದು ನಿಂತಿದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top