ಸಹಕಾರ ಬ್ಯಾಂಕ್‌ಗಳು ಆರ್‌ಬಿಐ ಉಸ್ತುವಾರಿಗೆ

– ಹಗರಣವಾದರೆ ಠೇವಣಿದಾರರ ಹಿತರಕ್ಷಣೆಗೆ ಅನುಕೂಲ
– ಸುಗ್ರೀವಾಜ್ಞೆ ತರಲು ಕೇಂದ್ರ ಸಚಿವ ಸಂಪುಟ ನಿರ್ಧಾರ.

ಹೊಸದಿಲ್ಲಿ: ಠೇವಣಿದಾರರ ಹಿತ ರಕ್ಷಣೆಯ ನಿಟ್ಟಿನಲ್ಲಿ ದೇಶದಲ್ಲಿರುವ ನಗರ ಸಹಕಾರ ಬ್ಯಾಂಕ್‌ಗಳು ಹಾಗೂ ಅಂತರಾಜ್ಯ ಸಹಕಾರ ಬ್ಯಾಂಕ್‌ಗಳನ್ನು ಸುಗ್ರೀವಾಜ್ಞೆಯ ಮೂಲಕ ಆರ್‌ಬಿಐನ ಮೇಲುಸ್ತುವಾರಿ ವ್ಯಾಪ್ತಿಗೆ ತರಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದಿಸಿದೆ.
ಕರ್ನಾಟಕದಲ್ಲಿ ಒಟ್ಟು 261 ನಾನ್ ಶೆಡ್ಯೂಲ್ಡ್ ನಗರ ಸಹಕಾರ ಬ್ಯಾಂಕ್‌ಗಳು ಇದ್ದು, ಇವುಗಳೂ ಸೇರಿದಂತೆ ದೇಶದ ಸಹಕಾರ ಬ್ಯಾಂಕ್‌ಗಳ ಸಂಪೂರ್ಣ ಮೇಲುಸ್ತುವಾರಿ ಆರ್‌ಬಿಐ ವ್ಯಾಪ್ತಿಗೆ ಬರಲಿದೆ. ಹಲವು ರಾಜ್ಯಗಳಲ್ಲಿ ವಹಿವಾಟು ನಡೆಸುತ್ತಿರುವ ಪಂಜಾಬ್ ಆ್ಯಂಡ್ ಮಹಾರಾಷ್ಟ್ರ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ (ಪಿಎಂಸಿ) ಹಗರಣ ನಡೆದ ನಂತರ ಸರಕಾರ ಪ್ರಮುಖ ನಿರ್ಧಾರ ಕೈಗೊಂಡಿದೆ. ಬೆಂಗಳೂರಿನ ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್‌ನಲ್ಲೂ ಇತ್ತೀಚೆಗೆ ಹಗರಣ ನಡೆದಿದ್ದು, ಆರ್‌ಬಿಐ ಈ ಬ್ಯಾಂಕ್‌ನ ವ್ಯವಹಾರದ ಮೇಲೆ ನಿರ್ಬಂಧಗಳನ್ನು ವಿಧಿಸಿ ತನಿಖೆ ನಡೆಸಿದೆ.
ರಿಸರ್ವ್ ಬ್ಯಾಂಕ್ ಈಗ ಶೆಡ್ಯೂಲ್ಡ್ ಬ್ಯಾಂಕ್‌ಗಳ(ವರ್ಗೀಕೃತ) ಮೇಲೆ ಹೊಂದಿರುವ ಉಸ್ತುವಾರಿ ಅಧಿಕಾರ ಸಹಕಾರ ಬ್ಯಾಂಕ್‌ಗಳಿಗೂ ವಿಸ್ತರಣೆಯಾಗಲಿದೆ.
‘‘1,482 ನಗರ ಸಹಕಾರ ಬ್ಯಾಂಕ್‌ಗಳು ಮತ್ತು 58 ಅಂತಾರಾಜ್ಯ ಸಹಕಾರ ಬ್ಯಾಂಕ್‌ಗಳು ಆರ್‌ಬಿಐ ವ್ಯಾಪ್ತಿಗೆ ಬರಲಿವೆ. ಒಟ್ಟು 1,540 ಸಹಕಾರ ಬ್ಯಾಂಕ್‌ಗಳು ಆರ್‌ಬಿಐ ಉಸ್ತುವಾರಿಗೆ ಒಳಪಡಲಿವೆ. ಈ ಬ್ಯಾಂಕ್‌ಗಳಲ್ಲಿ 8.6 ಕೋಟಿ ಠೇವಣಿದಾರರು ಇದ್ದು, ಅವರ 4.84 ಲಕ್ಷ ಕೋಟಿ ರೂ. ಹಣ ಸುರಕ್ಷಿತವಾಗಿರಲಿದೆ’’ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು.
ರಾಜ್ಯದಲ್ಲಿ ನಬಾರ್ಡ್ ವ್ಯಾಪ್ತಿಯಲ್ಲಿರುವ ಡಿಸಿಸಿ ಬ್ಯಾಂಕ್‌ಗಳು ಹಾಗೂ ಅಪೆಕ್ಸ್ ಬ್ಯಾಂಕ್ ಇದೆ. ಇವುಗಳು ಕೃಷಿ ಸಾಲವನ್ನು ನೀಡುತ್ತವೆ. ಈ ಬ್ಯಾಂಕ್‌ಗಳನ್ನು ಆರ್‌ಬಿಐ  ಪರವಾಗಿ ನಬಾರ್ಡ್ ಮೇಲುಸ್ತುವಾರಿ ವಹಿಸಿಕೊಳ್ಳುತ್ತವೆ.
ಪರಿಣಾಮವೇನು?: ಇದುವರೆಗೆ ನಗರ(ಪಟ್ಟಣ) ಸಹಕಾರ ಬ್ಯಾಂಕ್‌ಗಳು ಅವ್ಯವಹಾರ ಮಾಡಿದ ಸಂದರ್ಭ, ಬ್ಯಾಂಕ್‌ಗಳ ನಿರ್ದೇಶಕರನ್ನು ಮತ್ತು ಆಡಳಿತ ಮಂಡಳಿಯನ್ನು ಅಮಾನತಿನಲ್ಲಿಡುವ ಅಧಿಕಾರವು ಸಹಕಾರ ಬ್ಯಾಂಕ್‌ಗಳ  ರಿಜಿಸ್ಟ್ರಾರ್ ಕೈಯಲ್ಲಿತ್ತು. ಹಣ ದುರ್ಬಳಕೆ ಪ್ರಕರಣಗಳಲ್ಲಿ ಆರ್‌ಬಿಐ ಇಂಥ ತಪ್ಪಿತಸ್ಥ ಬ್ಯಾಂಕ್ ಮತ್ತು ನಿರ್ದೇಶಕರನ್ನು ಅನರ್ಹಗೊಳಿಸಿ ಎಂದು ಸೂಚಿಸುತ್ತಿತ್ತು. ಆದರೆ ಸ್ಥಳೀಯ ರಾಜಕೀಯ ಹಸ್ತಕ್ಷೇಪ ಅಥವಾ ಇನ್ನಾವುದೋ ಕಾರಣದಿಂದ ಬ್ಯಾಂಕ್ ಸೂಪರ್ ಸೀಡ್ ಅಥವಾ ನಿರ್ದೇಶಕರನ್ನು ದೂರವಿಡುವುದರಲ್ಲಿ ವಿಳಂಬವಾಗುತ್ತಿತ್ತು. ಈ ವಿಳಂಬ ತಪ್ಪಲಿದೆ. ಯಾಕೆಂದರೆ ಇನ್ನುಮುಂದೆ ಆರ್‌ಬಿಐ ನೇರವಾಗಿ ತಾನೇ ನಿರ್ಧಾರ ತೆಗೆದುಕೊಳ್ಳಲಿದೆ. ರಿಜಿಸ್ಟ್ರಾರ್ ಅವರನ್ನು ಆರ್‌ಬಿಐ ಕೇಳಬೇಕಿಲ್ಲ ಎನ್ನುತ್ತಾರೆ ಸಹಕಾರ ಬ್ಯಾಂಕಿಂಗ್ ವಲಯದ ತಜ್ಞರು.
ನಾನಾ ರಾಜ್ಯಗಳ ಕೋ ಆಪರೇಟಿವ್ ಬ್ಯಾಂಕ್ ಮತ್ತು ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ಗಳು ಆರ್‌ಬಿಐ  ಮೇಲುಸ್ತುವಾರಿಯಲ್ಲಿ ಕೆಲಸ ಮಾಡಲಿವೆ ಎನ್ನುವುದು ಹೊಸ ವಿಷಯವೇನೂ ಅಲ್ಲ. ಆದರೆ ನಿಯಮಾವಳಿಗಳನ್ನು ಶೆಡ್ಯೂಲ್ಡ್ ಬ್ಯಾಂಕ್‌ಗಳ ಮಾದರಿಯಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಿದರೆ ಸಹಕಾರ ಬ್ಯಾಂಕ್‌ಗಳಲ್ಲಿ ಹಣದ ದುರ್ಬಳಕೆ ತಪ್ಪುತ್ತದೆ.
-ರಂಗಸ್ವಾಮಿ ಮೂಕನಹಳ್ಳಿ, ಹಣಕಾಸು ಸಲಹೆಗಾರರು, ಬೆಂಗಳೂರು

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top