ರಾಮ ಮಂದಿರ ನಿರ್ಮಾಣ ಎಂದರೆ ರಾಷ್ಟ್ರೀಯ ಹೆಮ್ಮೆ ಮರು ಪ್ರತಿಷ್ಠಾಪನೆ

– ಪ್ರಫುಲ್ಲ ಕೇತ್ಕರ್.
ಭಾರತದ ಇತಿಹಾಸದಲ್ಲಿ 2020ರ ಆಗಸ್ಟ್ 5ರಂದು ಹೊಸ ಅಧ್ಯಾಯ ಆರಂಭವಾಗಲಿದೆ. ಜನ್ಮಸ್ಥಳ ಅಯೋಧ್ಯೆಯಲ್ಲಿ ರಾಮ ಮಂದಿರ ಮರು ನಿರ್ಮಾಣದ ಕಾರ್ಯ ಆರಂಭವಾಗಲಿದ್ದು, ಭಿನ್ನ ರೀತಿಯಲ್ಲಿ ಈ ಯುಗದ ಪ್ರಮುಖ ಘಟನೆಯಾಗಿ ದಾಖಲಾಗಲಿದೆ. ಈ ಕೊರೊನಾ ಸಾಂಕ್ರಾಮಿಕದಿಂದಾಗಿ ಭೌತಿಕವಾಗಿ ಬಹಳಷ್ಟು ಜನರಿಗೆ ಈ ಘಟನೆಯಲ್ಲಿ ನೇರವಾಗಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ, ಅನೇಕ ವೇದಿಕೆಗಳ ಮೂಲಕ ಇಡೀ ಜಗತ್ತು ಈ ಕಾರ್ಯಕ್ರಮವನ್ನು ನೇರ ಪ್ರಸಾರದಲ್ಲಿ ನೋಡಲಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ರಾಮಜನ್ಮಭೂಮಿ ಹೋರಾಟಕ್ಕೆ ಮಾರ್ಗದರ್ಶನ ನೀಡಿದ ಹಾಗೂ ನೇತೃತ್ವ ವಹಿಸಿಕೊಂಡ ಎಲ್ಲ ಸಾಧು, ಸಂತರ ನಾಯಕತ್ವ ಈ ಸಮಯದಲ್ಲಿ ಹಾಜರಿರಲಿದೆ. ರಾಜಕೀಯ ಮತ್ತು ಆಧ್ಯಾತ್ಮಿಕ ನಾಯಕತ್ವ ಈ ಐತಿಹಾಸಿಕ ಸಂದರ್ಭದಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿರುವುದು ಮಹತ್ತರವಾದ ಸಂದೇಶವನ್ನೇ ರವಾನಿಸಲಿದೆ.
ನಿಮಗೆ ಗೊತ್ತಿರಲಿ, ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿ ಹೋರಾಟವು 492 ವರ್ಷಗಳಿಂದ ನಡೆದುಕೊಂಡು ಬಂದಂತದ್ದಾಗಿದೆ. ಈ ಒಟ್ಟಾರೆ ಹೋರಾಟ ಏನು? ಅದು ಯಾವುದೋ ಒಂದು ಸಮುದಾಯದ ವಿರುದ್ಧವಾಗಿತ್ತೆ? ಅದು ಕೇವಲ ದೇಗುಲ ನಿರ್ಮಾಣಕ್ಕೆ ನಡೆದ ಹೋರಾಟವೇ? ಒಂದು ವೇಳೆ, ನಾವು ಈ ಬಗ್ಗೆ ಹೆಚ್ಚು ಆಳವಾಗಿ ವಿಶ್ಲೇಷಿಸಿದರೆ ಇದರೆಲ್ಲದರ ಆಚೆಗಿನ ಸತ್ಯವೊಂದನ್ನು ಕಂಡುಕೊಳ್ಳಬಹುದು.
ಇಡೀ ರಾಮಜನ್ಮಭೂಮಿ ವಿಮೋಚನಾ ಹೋರಾಟವು ಕೇವಲ ಧಾರ್ಮಿಕವಾಗಿರಲಿಲ್ಲ. ನಿರಂತರ ಸಾಮಾಜಿಕ ಪ್ರಯತ್ನಗಳಾಗಿರಲಿ, 1949ರಿಂದ ನಡೆದ ಕಾನೂನಾತ್ಮಕ ಹೋರಾಟಗಳೆಲ್ಲವೂ ರಾಷ್ಟ್ರೀಯ ಆತ್ಮಗೌರವವನ್ನು ಮತ್ತೆ ಪ್ರತಿಷ್ಠಾಪಿಸುವುದಕ್ಕಾಗಿಯೇ ನಡೆದ ಪ್ರಯತ್ನಗಳಾಗಿದ್ದವು. ನಮ್ಮ ನಾಗರಿಕತ್ವದ ಗುರುತನ್ನು ಮತ್ತೆ ಖಾತ್ರಿಪಡಿಸುವ ಸ್ವಾಭಾವಿಕ ಅನ್ವೇಷಣೆ ಈ ಹೋರಾಟದಲ್ಲಿ ಪ್ರತಿಫಲನಗೊಂಡಿತು; ಅದು ಯಾರ ವಿರುದ್ಧವೂ ಆಗಿರಲಿಲ್ಲ. ಆದರೆ, ವಿದೇಶ ದಾಳಿಕೋರರಿಂದಾಗಿ ಕಳೆದುಕೊಂಡಿದ್ದ ನಮ್ಮತನವನ್ನು ಮತ್ತೆ ಪಡೆದುಕೊಳ್ಳುವುದಾಗಿತ್ತು. ಸಾಮಾನ್ಯ ಜನರಿಗೆ ಪ್ರಭು ಶ್ರೀರಾಮ ರಾಷ್ಟ್ರದ ಸಾಮೂಹಿಕ ಪ್ರಜ್ಞೆಯ ಪ್ರತೀಕ ಮತ್ತು ಅದನ್ನೇ ಈಗ ಮರು ಪ್ರತಿಷ್ಠಾಪಿಸಲಾಗುತ್ತಿದೆ.
ಬೌದ್ಧಿಕ ವಲಯದಲ್ಲಿ ಪುನುರುತ್ಥಾನ ಪ್ರಕ್ರಿಯೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಹತ್ವ ಪಡೆದುಕೊಳ್ಳುತ್ತದೆ. ವಸಾಹತುಶಾಹಿಯು ನಮ್ಮ ಬುದ್ಧಿಜೀವಿಗಳನ್ನು ಬಹಳಷ್ಟು ಪ್ರಭಾವಿಸಿದೆ. ಈ ಬುದ್ಧಿಜೀವಿಗಳು ಬಳಸುವ ‘ಉದಾರವಾದ’ ಮತ್ತು ‘ಪ್ರಗತಿಪರ’ ಎಂಬ ಮಾಪಕಗಳು ಚಳವಳಿಯ ನಾಗರಿಕತ್ವದ ಮೌಲ್ಯದ ಅಂತಃಸತ್ವವನ್ನು ಅರಿತುಕೊಳ್ಳಲು ಬಿಡುವುದಿಲ್ಲ. ವಿದೇಶಿ ದಾಳಿಕೋರರ ಗುರುತುಗಳನ್ನು ಡಿಕೊಲೊನೈಸ್ ಮಾಡುವ ಸ್ವಾಭಾವಿಕ ಪ್ರಚೋದನೆಯು ಅವರಿಗೆ ಸಹ್ಯವಾಗುವುದಿಲ್ಲ. ಸಮಗ್ರತೆ ಎನ್ನುವುದು ರಾಮ ರಾಜ್ಯದ ಪರಿಕಲ್ಪನೆಯೊಳಗೇ ಅಂತರ್ಗತವಾಗಿದೆ. ಇದರಿಂದಾಗಿಯೇ ಜಾತ್ಯತೀತ-ಕೋಮುವಾದದ ದ್ವಂದ್ವತೆ ಅಥವಾ ಬಹುಸಂಖ್ಯಾತ-ಅಲ್ಪಸಂಖ್ಯಾತರ ದ್ವಿಮಾನವು ರಾಮ ಜನ್ಮಭೂಮಿ ವಿಮೋಚನಾ ಚಳವಳಿಯ ಸಾರವನ್ನು ನಿಸ್ಸಾರಗೊಳಿಸಲು ಸಾಧ್ಯವಾಗಲಿಲ್ಲ. ಸ್ವಾತಂತ್ರ್ಯ ಬಂದಾಗಿನಿಂದಲೂ ಭಾರತದ ಸಾಮಾನ್ಯ ಜನರು ವಸಾಹತುಶಾಹಿ ಮಾದರಿಗಳಿಂದ ತಮ್ಮನ್ನು ತಾವು ವಿಮೋಚನೆಗೊಳ್ಳಲು ಬಯಸುತ್ತಿದ್ದಾರೆ. ಅದು ಸ್ವ ಗ್ರಹಿಕೆಯಾಗಿರಬಹದು ಅಥವಾ ಜಾಗತಿಕ ದೃಷ್ಟಿಕೋನಗಳಿಂದಲಾದರೂ ಆಗಿರಬಹುದು. ದುರದೃಷ್ಟವಷಾತ್, ಈ ಬುದ್ಧಿಜೀವಿಗಳು ನಿರಂತರವಾಗಿ ಅವರ ಮೇಲೆ ವಿಚ್ಛಿದ್ರಕಾರಿ ಮತ್ತು ಪ್ರತ್ಯೇಕತವಾದ ವಿಚಾರಗಳನ್ನು ಹೇರುತ್ತಾ ಬಂದಿದ್ದಾರೆ. ಭಾರತ ಅತ್ಯಂತ ಸಮಗ್ರ ಹಾಗೂ ಏಕೀಕರಣ ಸಮಾಜವಾಗಿರುವುದರಿಂದ ಈ ಆಂಗ್ಲೀಕರಣಗೊಂಡ ಮತ್ತು ಎಲ್ಲ ಸೌಲಭ್ಯಗಳನ್ನು ಪಡೆದುಕೊಂಡ ಬುದ್ಧಿಜೀವಿ ಗುಂಪಿನ ವಿರುದ್ಧ ತನ್ನ ಹತಾಶೆಯನ್ನು ಹಾರಹಾಕುತ್ತಲೇ ಇತ್ತು. ಇದೇ ಮುಂದೆ, ಚಳವಳಿಯ ನಿರ್ಮಾಣಕ್ಕೆ ಕಾರಣವಾಯಿತು. ಈಗ ಆರಂಭವಾಗುತ್ತಿರುವ ದೇಗುಲದ ಪುನರ್ ನಿರ್ಮಾಣವು, ಆ ಸಾಮೂಹಿಕ ರಾಷ್ಟ್ರೀಯ ಅಂತಃಪ್ರಜ್ಞೆಯನ್ನು ಈ ವಸಾಹತುಶಾಹಿ ಸಂಕೋಲೆಗಳಿಂದ ಮುಕ್ತಗೊಳಿಸುತ್ತಿದೆ.
ಬೌದ್ಧಿಕ ವಲಯದಲ್ಲಿ ಪ್ರಮುಖರಾಗಿರುವ ಮತ್ತು ಮಾಜಿ ಪ್ರಧಾನ ಸಂಪಾದಕ ಗಿರಿಲಾಲ್ ಜೈನ್ ಅವರು ತಮ್ಮ ಅಂಕಣವೊಂದರಲ್ಲಿ, ‘‘ರಾಮ ಹಿಂದೂ ಸಾರ್ವಜನಿಕ ಕ್ಷೇತ್ರದ ಅತ್ಯುತ್ತಮ ಉದಾಹರಣೆಯಾಗಿದ್ದಾರೆ. ಹಿಂದೂ ಸಮಾಜದ ನಂಬಿಕೆಯಲ್ಲಿ ವಿಷ್ಣುವಿನ ಇತರ ಅವತಾರಗಳಿವೆ ಮತ್ತು ಹತ್ತನೇ(ಕಲ್ಕಿ) ಅವತಾರ ಇನ್ನೂ ಅವತರಿಸಬೇಕಿದೆ. ಆದರೆ, ಹಿಂದೂ ಸಮಾಜ ವ್ಯವಸ್ಥೆ ಕ್ರಮಕ್ಕೆ ಇದಕ್ಕಿಂತ ಬೇರೆ ಉದಾಹರಣೆಯಿಲ್ಲ. ಆದ್ದರಿಂದ ಐತಿಹಾಸಿಕ ದೃಷ್ಟಿಯಿಂದ, ಉದ್ದೇಶಿತ ದೇವಾಲಯವು ಆ ಗುರಿಯತ್ತ ಮೊದಲ ಹೆಜ್ಜೆಯಾಗಬಹುದು,’’ ಎಂದು ಬರೆದುಕೊಂಡಿದ್ದಾರೆ. ಕೆಲವರು ಈಗಲೂ ನ್ಯಾಯ ಮತ್ತು ವ್ಯಾಜ್ಯ ಒಪ್ಪಂದದ ಮೂಲಕ ಸಮಗ್ರತೆ ಹಾಗೂ ಸಂಯೋಜನಾತ್ಮಕ ಪ್ರಕ್ರಿಯೆಗಳನ್ನು ಹಳಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಸುಪ್ರೀಂ ಕೋರ್ಟ್ ಮಾತ್ರ ಇನ್ನು ಮುಂದೆ ಅಂಥ ಶಕ್ತಿಗಳು ತಮ್ಮ ಪ್ರಯತ್ನದಲ್ಲಿ ಯಶಸ್ವಿಯಾಗುವುದಿಲ್ಲ ಎಂದು ಖಚಿತಪಡಿಸಿದೆ. ಚಳವಳಿ, ಹೋರಾಟ ಮತ್ತು ಸುಪ್ರೀಂ ಕೋರ್ಟ್ ನೀಡಿದ ತೀರ್ಪು ರಾಷ್ಟ್ರೀಯ ಸಾಕ್ಷಿಪ್ರಜ್ಞೆಯನ್ನು ಮರಳಿ ಪ್ರತಿಷ್ಠಾಪಿಸುವ ಪ್ರಕ್ರಿಯೆಯ ಪ್ರಮುಖ ಹಂತಗಳಾಗಿವೆ. ಈ ದಿಶೆಯಲ್ಲಿ ರಾಮ ಮುಂದಿರ ನಿರ್ಮಾಣವು ಮತ್ತೊಂದೆ ಹೆಜ್ಜೆಯಷ್ಟೇ. ಸಂಪೂರ್ಣ ತೀರ್ಥ ಕ್ಷೇತ್ರವನ್ನು ಸೃಷ್ಟಿಸುವ ಪ್ರಕ್ರಿಯೆಯು ಮುಂದಿನ ಎರಡ್ಮೂರು ವರ್ಷಗಳವರೆಗೂ ಮುಂದುವರಿಯಲಿದ್ದು, ಎಲ್ಲರಿಗೂ ಭಾಗವಹಿಸಲು ಅವಕಾಶ ಮತ್ತು ಸಮೃದ್ಧಿಯನ್ನು ಖಾತ್ರಿಪಡಿಸುವ ನ್ಯಾಯಯುತ ಮತ್ತು ಸಾಮರಸ್ಯ ವ್ಯವಸ್ಥೆಯಾದ ರಾಮ ರಾಜ್ಯದ ಸಂಕಲ್ಪವನ್ನು ನೆನಪಿಟ್ಟುಕೊಳ್ಳುವುದು ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ. ರಾಜ್ಯಾಡಳಿತ, ಆರ್ಥಿಕತೆ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಇಡೀ ಜಗತ್ತಿಗೇ ಮಾದರಿಯಾಗುವುದು ಅಂತಿಮ ಗುರಿಯಾಗಿದೆ ಮತ್ತು ಪ್ರಭು ಶ್ರೀರಾಮ ಅದಕ್ಕೆ ಸೂರ್ತಿಯ ಸೆಲೆಯಾಗಿದ್ದಾನೆ, ಆದರ್ಶವಾಗಿ ನಿಂತಿದ್ದಾನೆ ಎಂಬುದನ್ನು ನಾವು ಮರೆಯಬಾರದು. ಅಯೋಧ್ಯೆಯಲ್ಲಿ ರಾಜಕೀಯ ಮತ್ತು ಆಧ್ಯಾತ್ಮಿಕ ನಾಯಕತ್ವದ ಉಪಸ್ಥಿತಿಯು ಭಾರತದ ಈ ಶಾಶ್ವತ ಆಕಾಂಕ್ಷೆಯ ಸಂಕಲ್ಪವಾಗಿಯೇ ನಾವು ಕಾಣಬೇಕು.
2020 ಮಾರ್ಚ್ 14ರಂದು ಬೆಂಗಳೂರಲ್ಲಿ ನಡೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್ಎಸ್)ದ ಅಖಿಲ ಭಾರತೀಯ ಕಾರ್ಯಕಾರಿ ಮಂಡಲದಲ್ಲಿ ನಿರ್ಣಯವೊಂದನ್ನು ಪಾಸ್ ಮಾಡಲಾಯಿತು. ಆ ನಿರ್ಣಯದಲ್ಲಿ, ‘‘ರಾಮ ಮಂದಿರ ನಿರ್ಮಾಣವನ್ನು ಚಳವಳಿ ಮುನ್ನಡೆಸಿದ ಮತ್ತು ಮಾರ್ಗದರ್ಶನ ಮಾಡಿದ ಮಹಾನ್ ಸಾಧು ಸಂತರ ನೇತೃತ್ವದಲ್ಲೇ ಕೈಗೊಳ್ಳುತ್ತಿರುವುದು ಶ್ಲಾಘನೀಯವಾಗಿದೆ. ಪವಿತ್ರ ಮಂದಿರ ನಿರ್ಮಾಣ ಪೂರ್ಣಗೊಳಿಸುವುದರ ಜೊತೆಗೆ, ಘನತೆ, ಸಾಮಾಜಿಕ ಸಾಮರಸ್ಯ, ಸಮಗ್ರತೆಯ ಪ್ರಜ್ಞೆ ಮತ್ತು ಮರ್ಯಾದಾ ಪುರುಷೋತ್ತಮ ಶ್ರೀ ರಾಮ ಅವರ ಜೀವನದ ಉದಾತ್ತ ಆದರ್ಶಗಳನ್ನು ಅನುಕರಿಸುವ ಇಚ್ಛೆ ಸಮಾಜದಲ್ಲಿಮೂಡಲಾರಂಭಿಸುತ್ತದೆ. ಇದರೊಂದಿಗೆ ಜಗತ್ತಿನಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಾಮರಸ್ಯ ಪ್ರತಿಷ್ಠಾಪನೆಯ ಭಾರತದ ಧ್ಯೇಯ ಪೂರ್ಣವಾಗಲಿದೆ,’’ ಎಂದು ಸರಿಯಾಗಿಯೇ ಹೇಳಲಾಗಿದೆ. ಭಾರತ ಎಂದೂ ಆಧ್ಯಾತ್ಮ ಮತ್ತು ಪ್ರಾಪಂಚಿಕತೆಯನ್ನು ವಿರುದ್ಧವಾಗಿ ನೋಡಿಲ್ಲ. ಶ್ರೀರಾಮ ಮತ್ತು ಅಯೋಧ್ಯೆಯು ಆಧ್ಯಾತ್ಮಿಕತೆ ಮತ್ತು ಸಮೃದ್ಧಿ ಪರಿಪೂರ್ಣ ಸಂಶ್ಲೇಷಣೆಯನ್ನು ಸಂಕೇತಿಸುತ್ತದೆ. ದೇಗುಲ, ಚಳವಳಿ ಮತ್ತು ನಿರ್ಮಾಣ ಎರಡರಿಂದಲೂ ಸೂಧಿರ್ತಿ ಪಡೆದು ಭಾರತದ ನಿಜವಾದ ಧ್ಯೇಯವನ್ನು ಸಾಕಾರಗೊಳಿಸಲು ನಾವು ಇನ್ನೂ ಹೆಚ್ಚೆಚ್ಚು ಶ್ರಮಿಸಬೇಕಿದೆ.
(ಲೇಖಕರು ಹಿರಿಯ ಪತ್ರಕರ್ತರು)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top