ಕಾಂಗ್ರೆಸ್ ಗೆ ಹೊಡೆತ ನೀಡಿದ ಮೋದಿ ಸರ್ಕಾರದ ಕಠಿಣ ನಿರ್ಧಾರಗಳು

ಬಹುನಿರೀಕ್ಷಿತ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಹಿಮಾಚಲದಲ್ಲಿ ಗರಿಷ್ಠ ಸ್ಥಾನ ಗಳಿಸಿ, ಗುಜರಾತಿನಲ್ಲಿ ಪ್ರಯಾಸ ಪಟ್ಟು ಬಿಜೆಪಿ ಅಧಿಕಾರವನ್ನು ಹಿಡಿದಿದೆ. ಇಲ್ಲಿ ಆರಂಭವಾಗುವ ಮೊದಲ ಲೆಕ್ಕಾಚಾರ ಈ ಜಿದ್ದಾಜಿದ್ದಿನಲ್ಲಿ ಗೆದ್ದವರು ಯಾರು? ಸೋತವರು ಯಾರು? ಎಂಬುದು.  

ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಥಾನಗಳನ್ನು ಗೆದ್ದು ಸಂಖ್ಯಾಬಲ ಹೆಚ್ಚಿಸಿಕೊಂಡಿರುವುದು ನಿಜ. ಆದರೂ ಶತಾಯಗತಾಯ ಅಧಿಕಾರ ಹಿಡಿಯುವ ಮಹತ್ವಾಕಾಂಕ್ಷೆಯೊಂದಿಗೆ ತನ್ನೆಲ್ಲ ಪ್ರತಿಷ್ಠೆಯನ್ನು ಪಣಕ್ಕಿಟ್ಟು, ತರಹೇವಾರಿ ಹೊಂದಾಣಿಕೆಗಳನ್ನು ಮಾಡಿಕೊಂಡು ಸೆಣೆಸಿದರೂ ಅಧಿಕಾರದ ಕನಸು ಕೈಗೂಡಲಿಲ್ಲ ಎಂಬುದೂ ಅಷ್ಟೇ ಸತ್ಯ, ಇದೂ ಒಂದು ವಿಚಾರ. ಅದಕ್ಕೆ ಹೊರತಾಗಿ ಈಗಾಗಲೇ ತನ್ನ ಕೈಲಿದ್ದ ಹಿಮಾಚಲವನ್ನು ಆ ಪಕ್ಷ ಹೀನಾಯವಾಗಿ ಕಳೆದುಕೊಂಡಿದೆ. ಅದು ಒಂದು ರಾಜಕೀಯ ಪಕ್ಷವಾಗಿ ಕಾಂಗ್ರೆಸ್ಸಿಗೆ ಗುಜರಾತ್ ಸೋಲಿಗಿಂತಲೂ ದೊಡ್ಡ ನಷ್ಟ ಎಂಬುದನ್ನು ಒಪ್ಪಬೇಕು.
ಎರಡನೇಯ ಪ್ರಶ್ನೆ ಗುಜರಾತ್‍ನಲ್ಲಿ ಆಡಳಿತ ವಿರೋಧಿ ಅಲೆ ಪರಿಣಾಮ ಬೀರಿದೆಯಾ ಎಂಬುದು. ಹೌದು ನಿಶ್ಚಿತವಾಗಿ ಪರಿಣಾಮ ಬೀರಿದೆ. ಅದಕ್ಕೆ 22 ವರ್ಷಗಳ ಏಕತಾನತೆ ಒಂದು ಕಾರಣವಾದರೆ, ಈ ಸಲ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಮೋದಿಯ ಗೈರು ಬಿಜೆಪಿ ಹೆಚ್ಚು ಪ್ರಯಾಸ ಪಡುವಂತೆ ಮಾಡಿರುವುದರಲ್ಲಿ ಅನುಮಾನವಿಲ್ಲ. ಅದು ಈ ಚುನಾವಣೆಯಲ್ಲಿ ಮಾತ್ರವಲ್ಲ ಹಿಂದಿನ 2012ರ ವಿಧಾನಸಭಾ ಚುನಾವಣೆಯಲ್ಲೂ ವ್ಯಕ್ತವಾಗಿದೆ. ಅದಕ್ಕೂ ಪೂರ್ವದಲ್ಲಿ ಬಿಜೆಪಿ ಗುಜರಾತ್ ವಿಧಾನಸಭೆಯಲ್ಲಿ 122 ಶಾಸಕ ಬಲ ಹೊಂದಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಮೋದಿ ನೇತೃತ್ವದಲ್ಲೇ ಚುನಾವಣೆ ಎದುರಿಸಿಯೂ ಬಿಜೆಪಿ 7 ಸ್ಥಾನಗಳನ್ನು ಕಳೆದುಕೊಂಡಿತ್ತು. ಈ ಸಲದ ಸಂಖ್ಯಾಬಲವನ್ನು ಗಮನಿಸಿದರೆ ಮೋದಿ ಹೆಸರಿನ ಬಲ, ಕೇಂದ್ರ ಸರ್ಕಾರದ ಪ್ರಭಾವ ಇವೆಲ್ಲ ಇದ್ದರೂ ಬಿಜೆಪಿ ಗೆಲುವಿಗೆ ತೀರಾ ತಿಣುಕಬೇಕಾಗಿ ಬಂದಿದೆ.
ನಾಯಕತ್ವದ ಪರಿಣಾಮ ಎಷ್ಟು?
ಹೌದು ಯಾವುದೇ ಒಂದು ಚುನಾವಣೆಯಲ್ಲಿಇ ಅದು ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಯೇ ಆಗಲಿ, ಚುನಾವಣೆ ನಂತರ ನಿಜವಾದ ಆಡಳಿತ ನಡೆಸುವವರು ಯಾರು, ಅಂದರೆ ಮುಖ್ಯಮಂತ್ರಿ ಆಗುವವರು ಯಾರು, ಪ್ರಧಾನಿ ಆಗುವವರು ಯಾರು ಎಂಬುದು ಮತ್ತು ಸ್ಥಳೀಯವಾಗಿ ಒಂದೊಂದು ಕ್ಷೇತ್ರದಲ್ಲೂ ತಾವು ಗೆಲ್ಲಿಸುವ ಮುಖ ಯಾವುದು ಎಂಬುದು ಮತದಾರರಿಗೆ ಮುಖ್ಯವಾಗುತ್ತದೆ. ಅದು ಇತ್ತೀಚಿನ ಟ್ರೆಂಡ್ ಕೂಡ ಹೌದು. ಅದು ದೆಹಲಿ, ಪಂಜಾಬ್, ಗುಜರಾತ್ ಎಲ್ಲೆಡೆ ನಿರೂಪಿತವಾಗಿರುವ ಅಂಶ ಕೂಡ. ಇದನ್ನು ಬಿಜೆಪಿ, ಕಾಂಗ್ರೆಸ್ ಮತ್ತು ಎಲ್ಲ ರಾಜಕೀಯ ಪಕ್ಷದವರು ಅರ್ಥ ಮಾಡಿಕೊಳ್ಳಬೇಕು. ಒಮ್ಮೆ ಮೋದಿ ಈ ಪರಿ ಪ್ರಚಾರಕ್ಕೆ ಧುಮುಕದೇ ಇದ್ದರೆ ಇಂದಿನ ಚಿತ್ರಣವೇ ಬೇರೆ ಆಗಿರುತ್ತಿತ್ತು.
ಜಿಎಸ್‍ಟಿ/ನೋಟ್ ಬಂದಿ ಪರಿಣಾಮ ಬೀರಿದೆಯೇ?
ಇದನ್ನು ಕೂಡ ಹೌದು ಎನ್ನಲೇಬೇಕು. ಉತ್ತರಪ್ರದೇಶ ಚುನಾವಣೆ ನಡೆಯುವಾಗ ಆ ಎರಡು ತೀರ್ಮಾನಗಳ ಕುರಿತಾದ ಆವೇಶ ಇತ್ತು. ಅದು ಬಿಜೆಪಿಗೆ ಅನುಕೂಲಕ್ಕೆ ಬಂತು. ಆದರೆ, ಗುಜರಾತ್ ಚುನಾವಣೆ ಹೊತ್ತಿಗೆ ಅದೂ ಉದ್ಯಮ ಕೇಂದ್ರಿತವಾಗಿರುವ ಆ ರಾಜ್ಯದಲ್ಲಿ ನಿರೀಕ್ಷಿತ ಆರಂಭಿಕ ನಕಾರಾತ್ಮಕ ಪರಿಣಾಮ ಬೀರತೊಡಗಿತ್ತು. ಅದು ಗುಜರಾತ್ ಚುನಾವಣೆಯಲ್ಲಿ ಬಿಜೆಪಿಗೆ ಒಂದಿಷ್ಟು ಹಿನ್ನಡೆಗೆ ಕಾರಣವಾಗಿದೆ. ಕೊನೇ ಘಳಿಗೆಯಲ್ಲಿ ಜಿಎಸ್‍ಟಿ ಸ್ಲ್ಯಾಬ್‍ನಲ್ಲಿ ಒಂದಷ್ಟು ಸುಧಾರಣೆ ಮಾಡಿರುವುದು ದೊಡ್ಡ ಪ್ರಮಾಣದಲ್ಲಿ ಬಿಜೆಪಿಗೆ ಡ್ಯಾಮೇಜ್ ಕಂಟ್ರೋಲ್ ಮಾಡಲು ನೆರವಾಗಿದ್ದೂ ನಿಜ. ವಿಶೇಷವಾಗಿ ಜಿಎಸ್‍ಟಿ, ನೋಟ್ ರದ್ದತಿ ಕುರಿತು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಮಾಡಿದ್ದ ಅಪಪ್ರಚಾರವನ್ನೆಲ್ಲ ಮೀರಿ ನಿಲ್ಲಲು ಸಾಧ್ಯವಾಗಿದೆ. ಅದಕ್ಕೆ ಸೂರತ್, ಅಹಮದಾಬಾದ್‍ಗಳಲ್ಲಿ ನಿರೀಕ್ಷೆಗಳನ್ನು ತಲೆಕೆಳಗು ಮಾಡಿ ಬಿಜೆಪಿ ಮತ್ತೆ ಮೇಲುಗೈ ಸಾಧಿಸಿರುವುದು ಉತ್ತಮ ಉದಾಹರಣೆ ಎನ್ನಬಹುದು.
ಸಾಲಮನ್ನಾ/ಸಬ್ಸಿಡಿ ರದ್ದತಿ ಪರಿಣಾಮ
ಮೋದಿ ಸರ್ಕಾರದ ದೃಢ ನಿಲುವು ನೋಟ್ ಬಂದಿ ಮತ್ತು ಜಿಎಸ್‍ಟಿಗೆ ಮಾತ್ರ ಸೀಮಿತವಾಗಿಲ್ಲ. ಅಪವ್ಯಯ ಆಗುತ್ತಿದ್ದ ಗ್ಯಾಸ್ ಸಬ್ಸಿಡಿ, ಗೊಬ್ಬರದ ಸಬ್ಸಿಡಿ ಕಡಿತ ಮತ್ತು ಬಹುತೇಕ ಎಲ್ಲ ರಾಜ್ಯ ಸರ್ಕಾರಗಳ, ರಾಜಕೀಯ ಪಕ್ಷಗಳ ಒತ್ತಡದ ಬಳಿಕವೂ ರೈತರ ಸಾಲಮನ್ನಾ ಮಾಡುವುದಿಲ್ಲ ಎಂಬ ಮೋದಿ ಸರ್ಕಾರದ ದೃಢ ನಿಲುವು ವಿಶೇಷವಾಗಿ ಗ್ರಾಮೀಣ ಗುಜರಾತಿನಲ್ಲಿ ಮತಗಳಿಕೆ ಪ್ರಮಾಣ ಕುಸಿಯಲು ಕಾರಣವಾಗಿರುವುದನ್ನು ನಾವು ಗಮನಿಸಬೇಕಾಗಿದೆ. ಆದರೆ, ಬಿಜೆಪಿ ವಿರೋಧಿಗಳೆಲ್ಲರೂ ಒಟ್ಟಾಗಿ ಮಾಡಿದ ನಕಾರಾತ್ಮಕ ಪ್ರಚಾರವನ್ನು ಗಮನಿಸಿದರೆ ಬಿಜೆಪಿಗೆ ಈಗ ಆಗಿರುವ ನಷ್ಟದ ಪ್ರಮಾಣ ಕಡಿಮೆ ಅಂತಲೇ ಹೇಳಬೇಕು.
ಜಾತಿ ಸಮೀಕರಣದ ಪರಿಣಾಮ ಏನು?
ವಾಸ್ತವದಲ್ಲಿ ಗುಜರಾತಿನಲ್ಲಿ ಕಾಂಗ್ರೆಸ್ ಪಕ್ಷ ಸ್ಥಾನ ಗಳಿಕೆ ಹೆಚ್ಚಿಸಿಕೊಳ್ಳಲು ಹೆಚ್ಚು ಅನುಕೂಲಕ್ಕೆ ಬಂದದ್ದು ಇದೊಂದೇ ತಂತ್ರ. ಈ ಪ್ರಯೋಗ ದೇಶ ಮತ್ತು ಯಾವುದೇ ರಾಜ್ಯದ ಸಾಮಾಜಿಕ ವ್ಯವಸ್ಥೆಗೆ ಒಳ್ಳೆಯದಲ್ಲದೇ ಹೋದರೂ, ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಹೇಳುವ ಸೆಕ್ಯುಲರ್ ಸಿದ್ಧಾಂತಕ್ಕೆ ತದ್ವಿರುದ್ಧವವೇ ಆದರೂ ಚುನಾವಣೆಯಲ್ಲಿ ಮತಗಳಿಕೆ ಪ್ರಮಾಣ ಹೆಚ್ಚಳಕ್ಕೆ ನಿಶ್ಚಿತವಾಗಿ ನೆರವಾಗಿದೆ. ಆದರೆ, ಅದರ ಜತೆಗೆ ಗಟ್ಟಿ ನಾಯಕತ್ವ ಇಲ್ಲದೇ ಹೋದರೆ. ಸ್ಪಷ್ಟ ನಿಲುವು, ದೂರದೃಷ್ಟಿಯ ಆಲೋಚನೆ ಇಲ್ಲದೇ ಹೋದರೆ, ಕೇವಲ ಜಾತಿಯೊಂದನ್ನೇ ನೆಚ್ಚಿಕೊಂಡು ಅಧಿಕಾರ ಹಿಡಿಯಲು ಸಾಧ್ಯವಿಲ್ಲ ಎಂಬ ಸಂದೇಶ ಕೂಡ ಈ ಚುನಾವಣಾ ಫಲಿತಾಂಶದಿಂದ ರವಾನೆಯಾಗಿದೆ. ಮುಖ್ಯವಾಗಿ ಪಟೇಲ್ ಸಮುದಾಯ, ಹಿಂದುಳಿದ ವರ್ಗವನ್ನೆಲ್ಲ ಬಿಜೆಪಿ ವಿರುದ್ಧ ಎತ್ತಿಕಟ್ಟಿದ ಪರಿಣಾಮ ಬಂದ ಫಲಿತಾಂಶದಲ್ಲಿ ಕಾಂಗ್ರೆಸ್ ಪಕ್ಷದ ಪಾಲೆಷ್ಟು ಎಂಬುದನ್ನೂ ಯೋಚನೆ ಮಾಡುವಂಥದ್ದೇ ಆಗಿದೆ.
ದೇವಾಲಯಗಳ ದರ್ಶನ ಲಾಭ ತಂದಿದೆಯೇ?
ಇದು ಕೂಡ ಗುಜರಾತ್ ಚುನಾವಣೆಯ ಸಂದರ್ಭದಲ್ಲಿ ಗಮನಿಸಬೇಕಾಗಿರುವ ಪ್ರಮುಖಾಂಶ. ಆಸ್ತಿಕ ಸಮುದಾಯವನ್ನು ಒಲಿಸಿಕೊಳ್ಳಲು ರಾಹುಲ್ ಮಾಡಿದ ಪ್ರಯಾಸದ ಪ್ರಯತ್ನ ಇದು. ಇದರ ಜತೆಗೆ ಸಾಂಪ್ರದಾಯಿಕ ಜಾತಿ ಸಮೀಕರಣ, ಅಲ್ಪಸಂಖ್ಯಾತ, ಬಹುಸಂಖ್ಯಾತ ಲೆಕ್ಕಾಚಾರ ಬಿಟ್ಟು ಅಭಿವೃದ್ಧಿ ವಿಚಾರ, ಉತ್ತಮ ಆಡಳಿತ ನೀಡುವ ಭರವಸೆಯನ್ನೂ ರಾಹುಲ್ ನೀಡಿದರೆ ಅವರು ಬಿಜೆಪಿಗೆ ಪರ್ಯಾಯ ಆಗಲು ಸಾಧ್ಯವಿದೆ. ಅದನ್ನು ತಳ್ಳಿಹಾಕಲಾಗದು.
ಬಿಜೆಪಿಯೂ ತನ್ನ ಆಲೋಚನೆ ಬದಲಿಸಿಕೊಳ್ಳಬೇಕು
ಹಿಮಾಚಲದಲ್ಲಿ ಕಾಂಗ್ರೆಸ್ ಆಡಳಿತ ಸೋಲಿಸಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿದಿದೆ. ಆದರೆ ಕೊನೇ ಘಳಿಗೆಯಲ್ಲಿ ಬಿಜೆಪಿ ಘೋಷಿಸಿದ ಮುಖ್ಯಮಂತ್ರಿ ಅಭ್ಯರ್ಥಿಯೇ ಸೋಲುಂಡಿದ್ದಾರೆ. ಅಂದರೆ ಮತದಾರರ ಮನದಾಳವನ್ನು ಆ ಪಕ್ಷದ ನಾಯಕರು ಇನ್ನೂ ಅರಿಯುವುದು ಬಾಕಿ ಇದೆ ಎಂಬುದು ಸ್ಪಷ್ಟ. ಕರ್ನಾಟಕದ ಸಂದರ್ಭದಲ್ಲಿ ಬಿಜೆಪಿಯವರು ಈ ಮಾತನ್ನು ಹೆಚ್ಚು ಅನ್ವಯಿಸಿಕೊಳ್ಳುವುದು ಉತ್ತಮ.
ಒಟ್ಟಾರೆ ಹೇಳುವುದಾದರೆ ದೇಶದಲ್ಲಿ ಮೋದಿ ನಾಯಕತ್ವಕ್ಕೆ ಸದ್ಯ ಸರಿಸಾಟಿ ಬೇರೆ ಇಲ್ಲ. ಇದು ಮುಂದಿನ ಲೋಕಸಭಾ ಚುನಾವಣೆಯ ದಿಕ್ಸೂಚಿಯೂ ಹೌದು. ಮೋದಿ ಇಲ್ಲದೇ ಹೋಗಿದ್ದರೆ ಗುಜರಾತಿನಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತಿರಲಿಲ್ಲ. ಹಾಗೆಯೇ ರಾಹುಲ್ ಗಾಂಧಿ ನಾಯಕತ್ವವನ್ನು ಇನ್ನೂ ದೇಶದ ಜನರು ಪೂರ್ಣ ಒಪ್ಪಿಕೊಳ್ಳಲು ತಯಾರಿಲ್ಲ. ಮುಂದೆ ಅವರು ಹೇಗೆ ಜನರ ಮನವೊಲಿಸಿಕೊಳ್ಳುತ್ತಾರೋ ಗೊತ್ತಿಲ್ಲ.
ಪ್ರಜಾತಂತ್ರಕ್ಕೆ ಉತ್ತಮ ಸಂದೇಶ
ಕಳೆದ ಲೋಕಸಭಾ ಚುನಾವಣೆ ಬಳಿಕ ಆಡಳಿತ ಪಕ್ಷಕ್ಕೆ ಸರಿಸಾಟಿ ವಿಪಕ್ಷವೇ ಇಲ್ಲ ಎನ್ನುವ ಬೆಳವಣಿಗೆ ಇತ್ತು. ಅದು ಪ್ರಜಾತಂತ್ರದ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಆಗಿರಲಿಲ್ಲ. ಆದರೆ ಗುಜರಾತ್ ಚುನಾವಣೆ ಆ ಕೊರಗನ್ನು ದೂರ ಮಾಡಿದೆ. ಆದರೆ, ವಿಪಕ್ಷ ಕಾಂಗ್ರೆಸ್ ಲೋಕಸಭೆಯಲ್ಲಿ ಮಾಡಿದಂತೆ ವಿರೋಧಕ್ಕಾಗಿ ವಿರೋಧಿಸುವ ಚಾಳಿಯನ್ನು ಗುಜರಾತ್ ವಿಧಾನಸಭೆಯಲ್ಲೂ ಮುಂದುವರಿಸಿದರೆ ಈ ನಿರೀಕ್ಷೆಯೂ ಹುಸಿಯಾಗುತ್ತದೆ. ಇದನ್ನು ಬಿಜೆಪಿಯೇತರ ಎಲ್ಲ ಪಕ್ಷಗಳೂ ಅರ್ಥ ಮಾಡಿಕೊಳ್ಳಬೇಕು.
ಬಿಜೆಪಿಗೆ ಸಂದೇಶ?
ಮೋದಿಯೊಬ್ಬರನ್ನೇ ನೆಚ್ಚಿಕೊಳ್ಳುವುದನ್ನು ಬಿಟ್ಟು ರಾಜ್ಯಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ, ಕ್ಷೇತ್ರಮಟ್ಟದಲ್ಲಿ ಹೊಸ, ಯುವ ಎರಡನೇ ತಲೆಮಾರಿನ ನಾಯಕತ್ವ ಬೆಳೆಸುವ ಕಡೆಗೆ ಗಮನಹರಿಸುವುದಕ್ಕೆ ಇದು ಸಕಾಲ. ಅದಾದರೆ ಮೋದಿ ಹೆಸರು, ಕೆಲಸ ಬಿಜೆಪಿಯನ್ನು ಕಾಪಾಡುವುದರಲ್ಲಿ ಅನುಮಾನವೇ ಇಲ್ಲ.
ಕರ್ನಾಟಕದ ಮೇಲೆ ಪರಿಣಾಮ ಬೀರುವುದೇ?
ಇದು ಬಹುಮುಖ್ಯ ಪ್ರಶ್ನೆ. ಗುಜರಾತ್ ಚುನಾವಣೆ ಫಲಿತಾಂಶದ ಪ್ರಭಾವವೇ ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರದ ದಡಕ್ಕೆ ಸೇರಿಸುತ್ತದೆ ಎಂದು ಭಾವಿಸಬೇಕಾಗಿಲ್ಲ. ಬಿಜೆಪಿಯನ್ನು ಸೋಲಿನ ದವಡೆಯಿಂದ ಪಾರುಮಾಡಲು ಒಂದಿಷ್ಟು ಅನುಕೂಲಕ್ಕೆ ಬರಬಹುದು. ಅದರ ಲಾಭವನ್ನು ಇಲ್ಲಿ ಪಡೆಯವುದಕ್ಕಾಗಿ, ಉದಾಹರಣೆಗೆ ಎಲ್ಲ ನಾಯಕರೂ ಒಟ್ಟಾಗಿ ಮತದಾರರ ಎದುರು ಹೋದರೆ, ಉತ್ತಮ ಫೇಸ್ ವ್ಯಾಲ್ಯೂ ಇರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ಯಾವುದೇ ಹೊಂದಾಣಿಕೆಗೆ ಒಳಗಾಗದೇ ಗಟ್ಟಿತನ ಮೆರೆದಲ್ಲಿ ಬಿಜೆಪಿ ಗೆಲುವಿಗೆ ಈ ಫಲಿತಾಂಶ, ಮೋದಿ ಭಾಷಣ ಎಲ್ಲ ಅನುಕೂಲಕ್ಕೆ ಬರಬಹುದು. ಅದಿಲ್ಲ ಎಂದರೆ ಇಲ್ಲ, ಏಕೆಂದರೆ ಕಾಂಗ್ರೆಸ್ ಬೇರುಗಳು ಕರ್ನಾಟಕದಲ್ಲಿ ಇನ್ನೂ ಆಳದಲ್ಲಿವೆ.

 

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top