ರಾಮಮಂದಿರ ನಿರ್ಮಾಣಕ್ಕೆ ಸ್ವಾಗತದ ಧ್ವನಿ – ಸಾಂಸ್ಕೃತಿಕ ರಾಜಕಾರಣಕ್ಕೆ ಎಂಟ್ರಿ ಪಡೆಯಿತಾ ಕಾಂಗ್ರೆಸ್‌?

– ಶಶಿಧರ ಹೆಗಡೆ.

ಸೋಮನಾಥ ಮಂದಿರದ ಜೀರ್ಣೋದ್ಧಾರದ ವೇಳೆ ಕಾಂಗ್ರೆಸ್‌ ಹೇಗೆ ನಡೆದುಕೊಂಡಿತು ಎನ್ನುವುದು ದೇಶದ ಚರಿತ್ರೆಯ ಪುಟಗಳಲ್ಲಿ ದಾಖಲಾಗಿ ಹೋಗಿದೆ. ಭಾರತದ ಸಾಂಸ್ಕೃತಿಕ ಪರಂಪರೆಯ ಅಭಿಮಾನದ ಪ್ರತೀಕವಾದ ಸೋಮನಾಥ ದೇಗುಲ ಪುನರುತ್ಥಾನಗೊಂಡು ಸುಮಾರು ಏಳು ದಶಕಗಳೇ ಉರುಳಿದೆ. ಇದೀಗ ಭಾರತೀಯರ ಸಂಸ್ಕೃತಿ, ತತ್ತ್ವಾದರ್ಶದ ಮೇಲ್ಮೆಯನ್ನು ಪ್ರತಿಬಿಂಬಿಸುವ ಶ್ರೀರಾಮನ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸವಾಗಿದೆ. ಜಗನ್ನಾಥನಾದ ರಾಮನ ಮಂದಿರದ ಭೂಮಿ ಪೂಜೆಯ ಶುಭಾವಸರದಲ್ಲಿ ಕಾಂಗ್ರೆಸ್‌ನ ಸ್ಪಂದನೆ ಮಾತ್ರ ಅನಿರೀಕ್ಷಿತ. ಯಾಕೆಂದರೆ ಮಂದಿರ ನಿರ್ಮಾಣವನ್ನು ಕಾಂಗ್ರೆಸ್‌ ಸ್ವಾಗತಿಸಿದೆ. ಪ್ರಾರಂಭದಿಂದಲೂ ರಾಮ ಜನ್ಮಭೂಮಿ ವಿಚಾರದಲ್ಲಿ ಕಾಂಗ್ರೆಸ್‌ ಅಂತರ ಕಾಯ್ದುಕೊಂಡಿತ್ತು. ರಾಮಭಕ್ತರನ್ನು ಕೆರಳಿಸುವ ಹೇಳಿಕೆಯನ್ನು ಕಾಂಗ್ರೆಸ್‌ ನಾಯಕರು ಪುಂಖಾನುಪುಂಖವಾಗಿ ನೀಡಿದ್ದರು. ರಾಮಮಂದಿರ ಕುರಿತ ಹೋರಾಟ ಬಿಜೆಪಿಯ ಕೇಸರಿ ರಾಜಕಾರಣದ ಅಜೆಂಡಾ. ವಾಸ್ತವದಲ್ಲಿ ಬಿಜೆಪಿಗೆ ಭಾವನಾತ್ಮಕ ಕಾರ್ಯಸೂಚಿ ಇಟ್ಟುಕೊಂಡು ವೋಟ್‌ ಬ್ಯಾಂಕ್‌ ಸೃಷ್ಟಿಸುವ ಜರೂರತ್ತು ಇದೆ. ಹಾಗಾಗಿ ಮಂದಿರದ ಸುತ್ತ ಬಿಜೆಪಿಯ ರಾಜಕಾರಣವೆಂದು ಕಾಂಗ್ರೆಸ್‌ ಝಾಡಿಸುತ್ತಿತ್ತು. ರಾಮಮಂದಿರ ಚಳವಳಿಗೆ ಬೆಂಬಲಿಸಿದ್ದರಿಂದ ಬಿಜೆಪಿಗೆ ವೋಟ್‌ ಬ್ಯಾಂಕ್‌ ಸೃಷ್ಟಿಯಾದದ್ದು ನಿಜ. ಅದೇ ಕಾಲಕ್ಕೆ ಅಲ್ಪಸಂಖ್ಯಾತರ ಓಲೈಕೆಯಲ್ಲಿದ್ದ ಕಾಂಗ್ರೆಸ್‌ಗೂ ಲಾಭವಾಗಿತ್ತು. ಆದರೆ, ಕಳೆದ ಒಂದೂವರೆ ದಶಕದ ಅವಧಿಯಲ್ಲಿ ದೇಶದ ರಾಜಕಾರಣದ ಭೂಪಟದ ಸ್ವರೂಪವೇ ಬದಲಾಗಿದೆ. ಇದರಿಂದ ರಫೇಲ್‌ನಂತೆ ಬಿಜೆಪಿ ನಭಕ್ಕೆ ನೆಗೆಯುತ್ತಿದೆ. ಕಾಂಗ್ರೆಸ್‌ನ ವರ್ಚಸ್ಸು ಪಾತಾಳಕ್ಕಿಳಿದಿದೆ. ಕಾಂಗ್ರೆಸ್‌ ತನ್ನ ಪುರಾತನ ರಾಜನೀತಿಯಿಂದ ಹೊರ ಬಾರದ್ದರಿಂದ ಇಂಥ ಅಪಮಾನಕ್ಕೆ ಗುರಿಯಾಗಿದೆ. ಈ ದೃಷ್ಟಿಯಿಂದ ನೋಡಿದಾಗ ರಾಮ ಮಂದಿರಕ್ಕೆ ಅಡಿಗಲ್ಲು ಹಾಕುವಾಗ ಕಾಂಗ್ರೆಸಿಗರು ಸ್ವಾಗತಿಸಿರುವುದು ಮಹತ್ವದ ವಿದ್ಯಮಾನ. ಬದಲಾವಣೆಗೆ ಕಾಂಗ್ರೆಸ್‌ ತೆರೆದುಕೊಳ್ಳುತ್ತಿದೆ ಎನ್ನುವುದರ ದ್ಯೋತಕ.

ಬದಲಾಯ್ತಾ ಕಾಂಗ್ರೆಸ್‌?
ಸ್ವಾತಂತ್ರ್ಯ ಬಂದ ಹೊಸದರಲ್ಲಿ ದೇಶದ ಮೊದಲ ಗೃಹ ಮಂತ್ರಿ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರು ಸೋಮನಾಥ ಮಂದಿರದ ಪುನರುಜ್ಜೀವನಕ್ಕೆ ಉದ್ಯುಕ್ತರಾದಾಗ ಅಂದಿನ ಪ್ರಧಾನಿ ಪಂಡಿತ್‌ ನೆಹರೂ ಅಸಹನೆ ವ್ಯಕ್ತಪಡಿಸಿದ್ದರು. ಬಳಿಕ ಮಂದಿರ ಜೀರ್ಣೋದ್ಧಾರ ಸಮಾರಂಭದಲ್ಲಿ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್‌ ಭಾಗಿಯಾಗುವುದು ನೆಹರೂ ಅವರಿಗೆ ಇಷ್ಟವಿರಲಿಲ್ಲ. ಈ ಸಂಬಂಧವಾಗಿ ಸಾಕಷ್ಟು ವಿಸ್ತ್ರತ ಚರ್ಚೆ ನಡೆದಿದೆ. ಈ ಕುರಿತ ವಿವರಕ್ಕೆ ಹೋಗುವುದಿಲ್ಲ. ನೆಹರೂ ಮಾದರಿಯಲ್ಲೇ ಈಗಿನ ಕಾಂಗ್ರೆಸಿಗರೂ ರಾಮ ಮಂದಿರ ನಿರ್ಮಾಣವನ್ನು ಸೆಕ್ಯೂಲರ್‌ ಕನ್ನಡಕ ಹಾಕಿಕೊಂಡು ನೋಡಿದ್ದರೆ ಏನಾಗುತ್ತಿತ್ತು ಎಂದು ಯೋಚಿಸಿ? ಉತ್ತರ ಬಹಳ ಸರಳ; ಅತ್ಯಂತ ಶ್ರೇಷ್ಠ ಹಾಗೂ ಸಾಮರಸ್ಯ, ಸಮತಾಭಾವದ ಭಾರತೀಯ ಸಂಸ್ಕೃತಿಯನ್ನು ಒಳಹೊಕ್ಕು ನೋಡುವ ಸದವಕಾಶದಿಂದ ಕಾಂಗ್ರೆಸ್‌ ವಂಚಿತವಾಗುತ್ತಿತ್ತು. ರಾಜಕಾರಣಕ್ಕೆ ಸಂಸ್ಕೃತಿಯೂ ಬೇಕು. ಸಂಸ್ಕೃತಿಯ ಉಳಿವು, ಅಭ್ಯುದಯಕ್ಕೆ ರಾಜಕೀಯದ ಬೆಂಬಲ ಅವಶ್ಯಕ. ಯಾವುದೇ ಮತ, ಧರ್ಮವಿರಲಿ. ಜನಸಂಸ್ಕೃತಿ ಮತ್ತು ಜನಪದ ಆಚರಣೆಗಳ ವಿಷಯದಲ್ಲಿ ರಾಜಕೀಯ ಪಕ್ಷ ಗಾವುದ ದೂರವುಳಿದು ಬಿಟ್ಟರೆ ನಷ್ಟವನ್ನೇ ಅನುಭವಿಸಬೇಕಾಗುತ್ತದೆ. ಹೆಕ್ಕಿ ಆಯ್ದುಕೊಳ್ಳುವ ರಾಜನೀತಿಯು ಒಳಗೊಳ್ಳುವಿಕೆಯನ್ನೇ ಅಣಕಿಸುತ್ತದೆ. ಈ ವಿಚಾರದಲ್ಲಿ ಬಹಳ ವರ್ಷ ಮೈಮರೆತಿದ್ದ ಕಾಂಗ್ರೆಸ್‌ ಪಕ್ಷ ರಾಮ ಮಂದಿರ ಭೂಮಿ ಪೂಜೆಯ ಸಂದರ್ಭದಲ್ಲಿ ಎಚ್ಚೆತ್ತುಕೊಂಡಿದೆಯೆಂದು ಭಾವಿಸಬಹುದು.

ಸಂಸ್ಕೃತಿ ಬಿಟ್ಟು ಭಾರತವಿಲ್ಲ
ಸೋಮನಾಥ ಮಂದಿರಕ್ಕೆ ದ್ವಾಪರಯುಗದ ನಂಟಿದೆ. ರಾಮ ಜನ್ಮಭೂಮಿ ಅದಕ್ಕಿಂತಲೂ ಹಿಂದಿನ ತ್ರೇತಾಯುಗದ್ದಾಗಿದೆ. ರಾಮಾಯಣ, ಮಹಾಭಾರತ ಮಹಾಕಾವ್ಯಗಳು ಆಸ್ತಿಕ ಬಂಧುಗಳಿಗೆ ನೇತೃಧ್ವಯಗಳಿದ್ದಂತೆ. ಪುರಾಣ, ಪುಣ್ಯಕಥೆಗಳ ವಿಷಯದಲ್ಲಿ ಭಾವನಾತ್ಮಕವಾಗಿರುವ ನಮ್ಮ ಜನರ ನಡುವೆ ಯಾವುದೋ ಒಂದು ರಾಜಕೀಯ ಪಕ್ಷ ಅದು ತನಗೆ ಅಪಥ್ಯ ಎನ್ನಲಾಗದು. ಹಾಗಂದುಕೊಂಡರೆ ಕಾಂಗ್ರೆಸ್‌ಗಾದ ಗತಿ ಬಿಜೆಪಿ ಮತ್ತು ಇನ್ನಿತರ ಪಕ್ಷಗಳಿಗೂ ಬರಬಹುದು. ಎಲ್ಲರನ್ನೂ ಜತೆಗೆ ಕರೆದೊಯ್ಯುವ ದೃಢವಾದ ಸಂಕಲ್ಪದೊಂದಿಗೆ ರಾಜಕೀಯ ಪಕ್ಷ ಗಳು ಕೆಲಸ ಮಾಡಬೇಕಾಗುತ್ತದೆ. ಅದಕ್ಕಾಗಿ ಪರಿಪಕ್ವವಾದ ಸಿದ್ಧಾಂತದ ತಳಪಾಯವೂ ಬೇಕು. ಇಲ್ಲದೇ ಹೋದರೆ ಕುರು ಸಾಮ್ರಾಜ್ಯವನ್ನು ಧೃತರಾಷ್ಟ್ರ ಆಳಿದಂತಾಗುತ್ತದೆ. ಗಾಳಿಯಲ್ಲಿ ತೇಲುವ ಉತ್ತರೀಯಕ್ಕೆ ಸ್ವಂತಿಕೆ ಮತ್ತು ಅಸ್ತಿತ್ವವೇ ಇರುವುದಿಲ್ಲ. ಗಾಳಿಯ ರಭಸಕ್ಕೆ ಸಿಲುಕಿದ ಉತ್ತರೀಯ ಯಾವಾಗ ಬೇಕಿದ್ದರೂ ಮುಳ್ಳಿನ ಬೇಲಿಗೆ ತಾಗಿ ಹರಿದು ಹೋಗಬಹುದು. ಅಂತರಂಗದ ದೃಷ್ಟಿಯನ್ನು ಯಾವತ್ತೂ ತೆರೆದು ನೋಡದ ಧೃತರಾಷ್ಟ್ರನ ಆಳ್ವಿಕೆ ಈ ತೆರನಾಗಿತ್ತೆಂದು ಭೀಷ್ಮನೇ ವಿಷಾದಿಸಿದ್ದನೆಂದು ಮಹಾಭಾರತದ ಕಥೆ ಹೇಳುತ್ತದೆ. ಹಾಗೆಯೇ ಒಮ್ಮೆ ಅಲ್ಪಸಂಖ್ಯಾತರ ಓಲೈಕೆ, ಮತ್ತೊಮ್ಮೆ ಬಹುಸಂಖ್ಯಾತರ ಓಲೈಕೆ, ಅದಲ್ಲದಿದ್ದರೆ ಭಗವಾ ರಾಜಕಾರಣವೆಂದು ಹೊರಟರೆ ಯಾವ ಪಕ್ಷವೂ ಉದ್ಧಾರವಾಗುವುದಿಲ್ಲ. ಈ ಸೂಕ್ಷ್ಮವನ್ನು ಅರಿತು ಅಂತರ್‌ ದೃಷ್ಟಿಯನ್ನು ಜಾಗೃತಗೊಳಿಸಿಕೊಂಡರೆ ಬಿಜೆಪಿಯ ಮುಂದಿನ ದಾರಿಯೂ ಕ್ಷೇಮ. ಕಾಂಗ್ರೆಸ್‌ನ ಭವಿಷ್ಯವೂ ಉಜ್ವಲವಾದೀತು.

ಜನರಿಗೇ ವಾಕರಿಕೆ
ಯಾವುದೇ ಮತ, ಧರ್ಮ, ಪಂಥ, ಜಾತಿಯವರು ಓಲೈಕೆಯನ್ನು ಬಿಗಿದಪ್ಪಿಕೊಳ್ಳುವುದಿಲ್ಲ. ಯಾವುದೋ ಒಂದು ರಾಜಕೀಯ ಪಕ್ಷ ವಿಶೇಷವಾಗಿ ನಮ್ಮನ್ನು ಸಲಹುತ್ತಿದೆ ಎಂಬ ಭದ್ರತಾ ಭಾವ ಮೂಡಬಹುದು. ಅದು ವೋಟ್‌ ಬ್ಯಾಂಕ್‌ ರಾಜಕಾರಣದ ಅಸ್ತ್ರವೆಂದು ಗೊತ್ತಾಗಲು ಬಹಳ ದಿನ ಹಿಡಿಯುವುದಿಲ್ಲ. ಹೀಗೆ ರಾಜಕೀಯ ಪಕ್ಷಗಳ ಬಣ್ಣ ಬಯಲಾದಾಗ ಜನರಿಗೂ ವಾಕರಿಕೆ ಬರುತ್ತದೆ. ಯಥಾರ್ಥದಲ್ಲಿ ತುಷ್ಟೀಕರಣವನ್ನು ಅಲ್ಪಸಂಖ್ಯಾತರೂ ಒಪ್ಪುವುದಿಲ್ಲ. ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಂಡ ಪುಡಾರಿಗಳಿಗೆ ಮಾತ್ರ ಇದು ಉದರ ಪೋಷಣೆಯಾಗಿರುತ್ತದೆ. ಉತ್ತರ ಪ್ರದೇಶದಲ್ಲಿ ದಲಿತ-ಬ್ರಾಹ್ಮಣ ಸಮೀಕರಣ ಮಾಡಿ ಅಧಿಕಾರಕ್ಕೆ ಬಂದಿದ್ದ ಮಾಯಾವತಿ ಅವರಿಗೆ ಇದೇ ಸೂತ್ರಕ್ಕೆ ಕಟ್ಟುಬಿದ್ದು ರಾಜಕಾರಣ ಮುಂದುವರಿಸಲು ಸಾಧ್ಯವಾಗಿಲ್ಲ. ಶಹನಾಯಿ ವಾದಕ ಪಂಡಿತ್‌ ಬಿಸ್ಮಿಲ್ಲಾ ಖಾನ್‌ ಅವರಂತಹ ಮಹನೀಯರನ್ನು ನೆನಪಿಸಿಕೊಳ್ಳಬೇಕು. ಕಾಶಿ ವಿಶ್ವನಾಥನ ಮಂದಿರದಲ್ಲಿ ಶಹನಾಯಿ ನುಡಿಸುವ ಮೂಲಕವೇ ಬಿಸ್ಮಿಲ್ಲಾ ಖಾನರ ದಿನಚರಿ ಪ್ರಾರಂಭವಾಗುತ್ತಿತ್ತು. ಡಾ.ಅಬ್ದುಲ್‌ ಕಲಾಂ ಯಾರಿಗೆ ಗೊತ್ತಿಲ್ಲ ಹೇಳಿ? ನಿಜಾರ್ಥದಲ್ಲೂ ಇವರು ಭಾರತೀಯ ಸಂಸ್ಕೃತಿಯ ರಾಯಭಾರಿಗಳು. ರಾಮನ ಆದರ್ಶನ್ನು ಸ್ಮರಿಸಿದಂತೆ ಕಲಾಮ್‌ರಂತಹ ಮೇಧಾವೀಗಳನ್ನೂ ಪ್ರಾತಃಸ್ಮರಣೀಯರೆಂದು ಗೌರವಿಸಿದ ಸಂಸ್ಕೃತಿ ನಮ್ಮದು. ಮುಸ್ಲಿಮರಲ್ಲೂ ಸಂಸ್ಕೃತದಲ್ಲಿ ಪಾಂಡಿತ್ಯ ಗಳಿಸಿದ ಪ್ರೊಫೆಸರ್‌ಗಳಿದ್ದಾರೆ. ಹಿಂದೂಗಳಲ್ಲೂ ಉರ್ದು ಸಾಹಿತ್ಯವನ್ನು ಓದಿಕೊಂಡವರು ಹಲವರು. ನಮ್ಮ ರಾಜ್ಯದ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್‌ ರಾಜಕಾರಣಕ್ಕೆ ಬರುವ ಮೊದಲು ಉರ್ದು ಮಾಸ್ತರರಾಗಿದ್ದರು. ಹೀಗೆ ಹಲವು ನಿದರ್ಶನದ ಬಗ್ಗೆ ಪಟ್ಟಿ ಮಾಡಬಹುದು. ಇದೇ ನಿಜವಾದ ಭಾರತೀಯತ್ವದ ಬಹು ಸಂಸ್ಕೃತಿ.

ಇಂದಿರಾ-ರಾಜೀವ್‌ ದೃಷ್ಟಿ
ಹಾಗೆ ನೋಡಿದರೆ ಇಂದಿರಾ ಗಾಂಧಿ ಹಾಗೂ ರಾಜೀವ್‌ ಗಾಂಧಿ ಅಧಿಕಾರದಲ್ಲಿದ್ದಾಗ ಹಿಂದುತ್ವದ ವಿರೋಧಿ ನಿಲುವು ತಳೆದಿರಲಿಲ್ಲ. ಅಯೋಧ್ಯೆಯನ್ನು ‘ರಾಮ್‌ ಕೀ ಪುರಿ’ ಎಂದು ಅಭಿವೃದ್ಧಿ ಪಡಿಸಲು ಇಂದಿರಾಜೀ ಪ್ರಧಾನಿಯಾಗಿದ್ದಾಗ ನೀಲನಕ್ಷೆ ಸಿದ್ಧಪಡಿಸಿದ್ದರು. ಆದರೆ, ಯೋಜನೆ ಕಾರ್ಯರೂಪಕ್ಕೆ ಬರುವ ಮೊದಲೇ ಅವರು ದುರಂತ ಸಾವು ಕಂಡಿದ್ದರು. ಇನ್ನು ರಾಜೀವ್‌ ಗಾಂಧಿಯವರು ಪ್ರಧಾನಿಯಾಗಿದ್ದಾಗ ಕೋರ್ಟ್‌ ಆದೇಶದ ಅನುಸಾರ ತಕ್ಷಣವೇ ವಿವಾದಿತ ಕಟ್ಟಡದಲ್ಲಿ ರಾಮಲಲ್ಲಾನ ಪೂಜೆಗೆ ಬಾಗಿಲು ತೆರೆಸಿ ಕೊಟ್ಟಿದ್ದರು. ನಂತರದಲ್ಲಿ ರಾಮಜನ್ಮ ಸ್ಥಳದಲ್ಲಿ ವಿಶ್ವ ಹಿಂದೂ ಪರಿಷತ್‌ ಆಯೋಜಿಸಿದ್ದ ಸಮಾರಂಭದಲ್ಲಿ ಅಂದಿನ ಕೇಂದ್ರ ಸಚಿವರಾದ ನಾರಾಯಣದತ್ತ ತಿವಾರಿ, ಬೂಟಾಸಿಂಗ್‌ ಭಾಗಿಯಾಗಿದ್ದರು. ಇಷ್ಟಲ್ಲದೆ ರಾಜೀವ್‌ ಗಾಂಧಿ ಸರಕಾರವಿದ್ದಾಗಲೇ ಆಗಿನ ಸಾಲಿಸಿಟರ್‌ ಜನರಲ್‌ ಎಲ್‌.ಎನ್‌.ಸಿನ್ಹಾ ರಾಮ ಜನ್ಮಭೂಮಿ ಪರವಾಗಿ ವಾದಿಸಿದ್ದರು. ದಾಖಲೆಗಳನ್ನೂ ಸಲ್ಲಿಸಿದ್ದರು. ರಾಜೀವ್‌ ಗಾಂಧಿ ಕಾಲದಲ್ಲೆ ರಮಾನಂದ ಸಾಗರ್‌ ನಿರ್ದೇಶನದ ರಾಮಾಯಣ ಧಾರಾವಾಹಿ ದೂರದರ್ಶನದಲ್ಲಿ ಪ್ರಸಾರವಾಯಿತು. ರಾಮ ಮಂದಿರ ಕುರಿತ ಭಾವನಾತ್ಮಕತೆಯನ್ನು ದೇಶದ ಮೂಲೆ ಮೂಲೆಗೆ ಪ್ರವಹಿಸುವುದರಲ್ಲಿ ಈ ಧಾರಾವಾಹಿಯ ಕೊಡುಗೆ ದೊಡ್ಡದಾಗಿತ್ತು. ಇಷ್ಟೆಲ್ಲದರ ಹೊರತಾಗಿಯೂ ರಾಮ ಮಂದಿರ ಹೋರಾಟದಲ್ಲಿ ಬಿಜೆಪಿ ನೇರವಾಗಿ ಗುರುತಿಸಿಕೊಳ್ಳುತ್ತಿದ್ದಂತೆ ಕಾಂಗ್ರೆಸ್‌ ವರಸೆ ಬದಲಾಯಿತು. ಅಲ್ಲಿಂದ ಮುಂದೆ ರಾಮಮಂದಿರದ ವಿಷಯವೆತ್ತಿದರೆ ಕಾಂಗ್ರೆಸ್‌ ನಾಯಕರು ಕೆಂಡ ತುಳಿದವರಂತೆ ಆಡಲು ಶುರು ಮಾಡಿದರು. ಜತೆಗೆ ತುಷ್ಟೀಕರಣ ರಾಜಕಾರಣಕ್ಕೆ ಸಂಪೂರ್ಣವಾಗಿ ಶರಣಾದರು. ಕಾಲಾನಂತದಲ್ಲಿ ಇದು ಕಾಂಗ್ರೆಸ್‌ಗೆ ದುಬಾರಿಯಾಗಿ ಪರಿಣಮಿಸಿತು.

ಆಚರಣೆ ಮುಖ್ಯ
ಕಾಂಗ್ರೆಸ್‌ ಪಕ್ಷ ಅಲ್ಪಸಂಖ್ಯಾತರ ಓಲೈಕೆಯಲ್ಲಿ ಮುಳುಗಿ ಏಳುತ್ತಿದ್ದರೆ ರಾಮಮಂದಿರದ ಅಸ್ತ್ರ ಹಿಡಿದ ಬಿಜೆಪಿ ಬೆಳೆಯುತ್ತಾ ಹೋಯಿತು. ಸಾಂಸ್ಕೃತಿಕ ರಾಜಕಾರಣದಲ್ಲೂ ಚಾಲಾಕಿಗಳಾಗಿರುವ ಬಿಜೆಪಿಗರು ಹಿಂದುತ್ವದ ಆಧಾರದಲ್ಲಿ ದಲಿತರು, ಹಿಂದುಳಿದವರು, ಬುಡಕಟ್ಟು ಸಮುದಾಯದವರನ್ನೂ ಬುಟ್ಟಿಗೆ ಹಾಕಿಕೊಂಡರು. ಈ ಸಮಾಜದವರನ್ನು ಹಿಡಿದಿಟ್ಟುಕೊಳ್ಳುವ ಉದ್ದೇಶದಿಂದ ವನವಾಸಿ ಕಲ್ಯಾಣ ಸೇರಿದಂತೆ ಹತ್ತು ಹಲವು ಸಂಘಟನೆಗಳನ್ನು ಬಿಜೆಪಿ ಪೊರೆಯಿತು. ಮುಸ್ಲಿಂ ಓಲೈಕೆಯಲ್ಲೇ ಕಳೆದು ಹೋಗಿದ್ದ ಕಾಂಗ್ರೆಸ್‌ಗೆ ತನ್ನ ಪಾರಂಪರಿಕ ವೋಟ್‌ ಬ್ಯಾಂಕ್‌ಗೆ ಬಿಜೆಪಿಯ ಸಾಂಸ್ಕೃತಿಕ ರಾಜಕಾರಣ ಕನ್ನ ಹಾಕಿರುವುದು ಅರಿವಿಗೂ ಬರಲಿಲ್ಲ. ಅದು ಗೊತ್ತಾಗುವಾಗ ಕಾಲ ಮಿಂಚಿ ಹೋಗಿತ್ತು. ಹಾಗಾಗಿ ದಿಲ್ಲಿ ಗದ್ದುಗೆಯೂ ಸೇರಿದಂತೆ ಒಂದಾದ ಮೇಲೊಂದು ರಾಜ್ಯದಲ್ಲಿ ಕಾಂಗ್ರೆಸ್‌ ಮಗುಚಿ ಬಿದ್ದಿದೆ. ರಾಮಮಂದಿರಕ್ಕೆ ಭೂಮಿಪೂಜೆಯಾದ ಸಂದರ್ಭದಲ್ಲಿ ಕಾಂಗ್ರೆಸಿಗರಿಗೆ ಒಂದು ಹದದಲ್ಲಿ ಜ್ಞಾನೋದಯ ಆದಂತಿದೆ. ರಾಹುಲ್‌ ಗಾಂಧಿ, ಪ್ರಿಯಾಂಕಾ ವಾಧ್ರಾ ಆದಿಯಾಗಿ ರಾಮಮಂದಿರವು ದೇಶದ ಸಂಸ್ಕೃತಿಯ ಹೆಗ್ಗುರುತಾಗಲಿದೆ ಎಂದಿದ್ದಾರೆ. ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ.ಶಿವಕುಮಾರ ಕೂಡ ಬೆಂಬಲಿಸಿದ್ದಾರೆ. ಶ್ರೀರಾಮನ ಆದರ್ಶ, ಮೌಲ್ಯಗಳನ್ನು ಕೇಂದ್ರವಾಗಿಟ್ಟುಕೊಂಡು ಸಾಮರಸ್ಯದ ರಾಜನೀತಿಯ ಬೆಸುಗೆ ಬೆಸೆಯುವ ದೃಷ್ಟಿಯಿಂದ ಇದು ಉತ್ತಮ ಬೆಳವಣಿಗೆ. ಈ ದೃಷ್ಟಿಕೋನದಂತೆ ಕಾಂಗ್ರೆಸ್‌ ನಡೆದುಕೊಂಡರೆ ಮುಂಬರುವ ದಿನಗಳಲ್ಲಿ ಕಾಂಗ್ರೆಸ್‌ ಚೇತರಿಸಿಕೊಂಡೀತು. ಅಂದರೆ ಬಹುಸಂಖ್ಯಾತ, ಅಲ್ಪಸಂಖ್ಯಾತ ಕಂದಕವನ್ನು ಮುಚ್ಚಿ ಹಾಕಿ ಸಾಂಸ್ಕೃತಿಕ ಸಾಮರಸ್ಯದ ದಾರಿಯಲ್ಲಿ ಸಾಗುವುದಾಗಿದೆ.

ಬಿಜೆಪಿಗೆ ಹೊಸ ಅಸ್ತ್ರವಿಲ್ಲ?
ರಾಮಮಂದಿರ ರಾಜಕಾರಣವೀಗ ಬಹುಮಟ್ಟಿಗೆ ಮುಗಿದ ಅಧ್ಯಾಯ. ಹಾಗಾಗಿ ಬಿಜೆಪಿಯ ಬತ್ತಳಿಕೆಯಿಂದ ಜಾರಿ ಹೋದಂತಾಗಿದೆ. ಇತ್ತೀಚಿನ ದಿನಗಳಲ್ಲಿ ಬಿಜೆಪಿ ಬಗ್ಗೆಯೂ ಅಪಸ್ವರ ಕೇಳಿ ಬರುತ್ತಿದೆ. ಬಿಜೆಪಿ ಪ್ರತಿಪಕ್ಷದಲ್ಲಿರಲು ಲಾಯಕ್ಕು ಎಂಬ ವಾದ ಆರ್ಥಿಕ ಹಿಂಜರಿತ ಇನ್ನಿತರ ಸಂಕಷ್ಟದ ಸಂದರ್ಭದಲ್ಲಿ ಚಲಾವಣೆಗೆ ಬಂದಿದೆ. ಇದರ ಅರ್ಥ ಬಿಜೆಪಿಯ ಅಭಿವೃದ್ಧಿಯ ಅಜೆಂಡಾ ಇನ್ನಷ್ಟು ಸ್ಪಷ್ಟವಾಗಬೇಕು ಎನ್ನುವುದಾಗಿದೆ. ಇಲ್ಲದಿದ್ದರೆ ಜನರು ಪರ್ಯಾಯವನ್ನು ಈಗಿನ ಕಾಲದಲ್ಲಿ ಸುಲಭವಾಗಿ ಹುಡುಕಿಯಾರು. ದಿಲ್ಲಿಯಲ್ಲಿ ಆಮ್‌ ಆದ್ಮಿ ಪಾರ್ಟಿ ಎರಡನೇ ಬಾರಿಗೆ ಅಧಿಕಾರ ಹಿಡಿದದ್ದು ಇದಕ್ಕೊಂದು ಉದಾಹರಣೆ. ಮಹಾರಾಷ್ಟ್ರ, ರಾಜಸ್ಥಾನ, ಮಧ್ಯ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾದದ್ದನ್ನೂ ಇದೇ ದೃಷ್ಟಿಯಲ್ಲಿ ನೋಡಬೇಕು. ಸಾಲು ಸಾಲು ಚುನಾವಣೆ ಗೆದ್ದು ಏಕಚಕ್ರಾಧಿಪತ್ಯ ಸ್ಥಾಪಿಸಿರುವ ಬಿಜೆಪಿಗೆ ಸಾಲು ಸಾಲು ಚುನಾವಣೆ ಸೋಲುವ ಭೀತಿ ಇಲ್ಲವೇ ಇಲ್ಲ ಎಂದಲ್ಲ. ಕಾಂಗ್ರೆಸ್‌ ತನ್ನ ರಾಜಕಾರಣದಲ್ಲಿ ಸ್ಪಷ್ಟತೆ ತಂದುಕೊಂಡರೆ ಬಿಜೆಪಿಯ ಯಾಗ ತುರಗವೂ ಲಾಯದಲ್ಲಿ ಬಂಧಿಯಾಗುವ ದಿನವೂ ಬಂದೀತು!

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top