ವಾಸ್ತವದಲ್ಲಿ ನಾವೆಲ್ಲರೂ ಮುಷ್ಕರ, ಹರತಾಳ ಮತ್ತು ಬಂದ್‌ನಂಥ ಪ್ರವೃತ್ತಿಗಳನ್ನು ವಿರೋಧಿಸುವ ಮನಸ್ಥಿತಿ ಉಳ್ಳವರು ನಿಜ. ಈ ನೆಲದ ನ್ಯಾಯಾಲಯಗಳೂ ಬಂದ್‌ಗೆ ಸಮ್ಮತಿಯನ್ನು ನೀಡುವುದಿಲ್ಲ; ಬಂದ್ ವೇಳೆ ಉಂಟಾಗುವ ನಷ್ಟವನ್ನು ಆಯೋಜಕರಿಂದಲೇ ವಸೂಲಿ ಮಾಡಬೇಕೆಂಬ ಐತಿಹಾಸಿಕ ಆದೇಶಗಳನ್ನು ನೀಡಿವೆ. ಪರಿಸ್ಥಿತಿ ಹೀಗಿರುವಾಗ ನಾವೆಲ್ಲ ಈ ಲಾಕ್‌ಡೌನ್ ಎಂಬ 21 ದಿನಗಳ ಅಜ್ಞಾತವಾಸವನ್ನು ಒಪ್ಪಿಕೊಂಡಿದ್ದೆವೆ. ಯಾಕೆಂದರೆ, ಇಡೀ ಮನುಕುಲಕ್ಕೆ ಅಪಾಯ ತಂದೊಡ್ಡಿರುವ ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಇರುವ ಸದ್ಯದ ಏಕೈಕ ಪರಿಹಾರ ಎಂಬ ಕಾರಣಕ್ಕಾಗಿ. ವಿಶೇಷ ಎಂದರೆ, ಇಷ್ಟು ದೊಡ್ಡಮಟ್ಟದ ಲಾಕ್‌ಡೌನ್ ಅನ್ನು ದೇಶ ಇದೇ ಮೊದಲ ಬಾರಿಗೆ ಅನುಭವಿಸಿದೆ. ಈ ಸ್ಥಿತಿ ಇನ್ನೂ ಮುಂದುವರೆದರೂ ಸಹಿಸಿಕೊಳ್ಳುವಂತೆ ಮಾಡಿದೆ.
ಮಾರ್ಚ್ 25ರಂದು ಲಾಕ್‌ಡೌನ್ ಜಾರಿಯಾದ ಬಳಿಕ ಅದಕ್ಕೆ ಹೊಂದಿಕೊಳ್ಳಲು ನಾವೆಲ್ಲ ಒಂದು ವಾರ ಪರದಾಡಿದ್ದೇವೆ; ಹಿಂಸೆಯನ್ನು ಅನುಭವಿಸಿದ್ದೇವೆ; ಹತಾಶರಾಗಿದ್ದೇವೆ; ಜಗಳಾಡಿದ್ದೇವೆ. ಯಾಕೆಂದರೆ, ಇದೆಲ್ಲವೂ ಹೊಸದಾಗಿತ್ತು. ಸಮಯ ಕಳೆದಂತೆ ಪರಿಸ್ಥಿತಿಗೆ ಒಗ್ಗಿಕೊಂಡು ಸೋಂಕು ಹರಡುವುದನ್ನು ತಡೆಯಲು ನಮ್ಮ ಪಾಲಿನ ಕೊಡುಗೆಯನ್ನು ನೀಡಿದ್ದೇವೆ. ಇದೀಗ, ಈ ಲಾಕ್‌ಡೌನ್ ಮುಂದುವರಿಸಬೇಕೆ, ಬೇಡವೇ? ಅಥವಾ ಪರ್ಯಾಯ ಮಾರ್ಗಗಳನ್ನು ಹುಡುಕಿಕೊಳ್ಳಬೇಕೇ ಎಂಬುದರ ಕುರಿತು ಕರ್ನಾಟಕ ಸರಕಾರ ಶನಿವಾರ ಮಹತ್ವದ ತೀರ್ಮಾನಕ್ಕೆ ತೆಗೆದುಕೊಳ್ಳುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಪ್ರಜ್ಞಾವಂತ ನಾಗರಿಕರಾದ ನಮ್ಮ ಮೇಲಿನ ಜವಾಬ್ದಾರಿ ಹೆಚ್ಚಿದೆ. ಸರಕಾರ ಯಾವುದೇ ತೀರ್ಮಾನ ಕೈಗೊಳ್ಳಬಹುದು. ಕೊರೊನಾ ಸೋಂಕು ಪೂರ್ತಿ ನಿಯಂತ್ರಣಕ್ಕೆ ಬರಲಿ ಎಂದು ಲಾಕ್‌ಡೌನ್ ನಿರ್ಧಾರವನ್ನು ಇನ್ನೂ ಕೆಲ ದಿನ ಮುಂದುವರೆಸಬಹುದು ಅಥವಾ ಹಂತಹಂತವಾಗಿ ಲಾಕ್‌ಡೌನ್ ತೆರವುಗೊಳಿಸುವ ನಿರ್ಧಾರವನ್ನೂ ಪ್ರಕಟಿಸಬಹುದು. ನಿರ್ದಿಷ್ಟ ಸ್ಥಳಗಳಲ್ಲಿ ಲಾಕ್‌ಡೌನ್ ಮುಂದುವರಿಸಿ, ಉಳಿದೆಡೆ ಒಂದಿಷ್ಟು ಸಡಿಲಿಕೆಯನ್ನು ಮಾಡಲೂಬಹುದು. ಹೀಗೆ ಸರಕಾರ ಯಾವುದೇ ನಿರ್ಣಯ ಕೈಗೊಂಡರೂ ಅದನ್ನು ಯಶಸ್ವಿಗೊಳಿಸುವ ಹೊಣೆ ನಮ್ಮ ಮೇಲೆಯೇ ಇರಲಿದೆ.
ಮಂದಿನ 15 ಅಥವಾ ಅದಕ್ಕಿಂತ ಹೆಚ್ಚಿನ ದಿನಗಳವರೆಗೆ ಲಾಕ್‌ಡೌನ್ ವಿಸ್ತರಿಸಿದರೆ ನಾವೆಲ್ಲ ಅದಕ್ಕೆ ಸಹಕರಿಸದೇ ಅನ್ಯ ಮಾರ್ಗ ಇಲ್ಲ. ಒಂದು ವೇಳೆ, ಲಾಕ್‌ಡೌನ್ ಪೂರ್ತಿ ಇಲ್ಲವೇ ಭಾಗಶಃ ತೆರವುಗೊಳಿಸಿದರೆ ಆಗ ನಮ್ಮ ಜವಾಬ್ದಾರಿ ಇನ್ನೂ ಹೆಚ್ಚಾಗುತ್ತದೆ. ಲಾಕ್‌ಡೌನ್ ವೇಳೆ ಅನುಸರಿಸಿಕೊಂಡ ಬಂದಿರುವ ಶಿಸ್ತನ್ನು ಯಾವುದೇ ನಿಯಮಗಳ ಹೇರಿಕೆ ಇಲ್ಲದೇ ಮುಂದುವರಿಸುವ ಸಂಕಲ್ಪವನ್ನು ನಾವು ಮಾಡಬೇಕಾಗುತ್ತದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತಲೇ ಸೋಂಕು ಹರಡುವುದನ್ನು ತಡೆಯಲು ನಮ್ಮ ಕಾಣ್ಕೆಯನ್ನು ನೀಡಬೇಕಾಗುತ್ತದೆ. ನಾವೆಲ್ಲರೂ ಸ್ವತಃ ಪೊಲೀಸರು, ಆರೋಗ್ಯ ಸಿಬ್ಬಂದಿಗಳು, ಸರಕಾರದ ಅಧಿಕಾರಿಗಳೆಂದೇ ಭಾವಿಸಿ ಮುಂದೆ ಕೆಲ ತಿಂಗಳವರೆಗೂ ಕೆಲಸ ಮಾಡಬೇಕಾಗುತ್ತದೆ. ವೈಯಕ್ತಿಕ ನೆಲೆಯಲ್ಲಿ ಸಾಂಕ್ರಾಮಿಕ ಹರಡುವುದನ್ನು ತಡೆಯಲು ಏನೇನು ಮಾಡಲು ಸಾಧ್ಯವೋ ಅದನ್ನೆಲ್ಲ ಮಾಡಬೇಕಾಗುತ್ತದೆ. ಈ ಬಗ್ಗೆ ನಾವು ನಮ್ಮ ಪರಿಚಯಸ್ಥರಿಗೆ, ಸ್ನೇಹಿತರಿಗೆ, ಬಂಧುಗಳಿಗೆ ತಿಳಿ ಹೇಳುವ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕಾಗುತ್ತದೆ. ಆಗಲೇ ಈ ಮಹಾಮಾರಿ ಕೊರೊನಾ ವಿರುದ್ಧ ಒಂದು ಹಂತದವರೆಗೆ ಯುದ್ಧ ಗೆಲ್ಲಲು ಸಾಧ್ಯ. ಒಂದು ವೇಳೆ, ನಾವೇನಾದರೂ ಅಶಿಸ್ತಿನ ಮೂಟೆಗಳಾಗಿ ವರ್ತಿಸತೊಡಗಿದರೆ ಅದಕ್ಕೆ ತಕ್ಕ ಬೆಲೆಯನ್ನು ತೆರಬೇಕಾಗುತ್ತದೆ. ಈ ವಿಷಯ ಸಂಬಂಧ ನಮ್ಮ ಮುಂದೆ ಬೇರೆ ಬೇರೆ ದೇಶಗಳ ಉದಾಹರಣೆಗಳಿವೆ ಎಂಬುದನ್ನು ಮರೆಯಬಾರದು.
ಈ ಲಾಕ್‌ಡೌನ್ ಎಂಬುದು ನಮಗೋಸ್ಕರ ನಾವೇ ಯಶಸ್ವಿಗೊಳಿಸಬೇಕಾದ ಒಂದು ಸಾಮಾಜಿಕ ಬದ್ಧತೆ ಎಂದು ಅರ್ಥೈಯಿಸಿಕೊಳ್ಳಬೇಕು. ಆಗ, ಎದುರಾಗುವ ತೊಂದರೆಗಳು ಬಾಧೆಯನ್ನುಂಟು ಮಾಡುವುದಿಲ್ಲ. ಇದೊಂದು ತೀರಾ ಗಂಭೀರ ಸ್ಥಿತಿಯಾದ್ದರಿಂದ ನಾವೆಲ್ಲ ನಮ್ಮ ಆಸೆ, ಆಕಾಂಕ್ಷೆ, ಇಷ್ಟ ಅನಿಷ್ಟಗಳನ್ನು ಬದಿಗಿಟ್ಟು, ಕೊರೊನಾ ವಿರುದ್ಧದ ಹೋರಾಟದಲ್ಲಿ ವ್ಯವಸ್ಥೆಯೊಂದಿಗೆ ಕೈಜೋಡಿಸಿ, ಪ್ರಜ್ಞಾವಂತಿಕೆ ಮೆರೆಯೋಣ.