ಕಡು ಸಾಹಸದಲ್ಲಿ ಕೊನೆಗೊಂಡ ಧೀರರ ಬದುಕು

– ಕರ್ನಲ್ ಆಶುತೋಷ್ ಕುಟುಂಬದ ದೇಶಭಕ್ತಿ ಅಪಾರ – ಪತಿಯ ಬಗ್ಗೆ ಹೆಮ್ಮೆಯ ನುಡಿಗಳನ್ನಾಡಿದ ಪಲ್ಲವಿ ಶರ್ಮ.
ಜೈಪುರ: ‘‘ದೇಶ ರಕ್ಷ ಣೆ ವೇಳೆ ಪತಿ ಹುತಾತ್ಮರಾಗಿರುವುದು ನನಗೆ ಹೆಮ್ಮೆಯ ವಿಚಾರ. ಅದಕ್ಕಾಗಿ ಕಣ್ಣೀರು ಹಾಕಲಾರೆ. ದೇಶಕ್ಕಾಗಿ ತ್ಯಾಗ ಮಾಡುವುದು ಗೌರವದ ವಿಚಾರ,’’ ಇದು ಹಂದ್ವಾರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹುತಾತ್ಮರಾದ ಕರ್ನಲ್ ಆಶುತೋಷ್ ಶರ್ಮಾ ಅವರ ಪತ್ನಿ ಪಲ್ಲವಿ ಶರ್ಮಾ ಅವರ ಮನದಾಳದ ಮಾತು.‘‘ಆಶುತೋಷ್ ಅವರು ನಮ್ಮನ್ನು ಅಗಲಿದ್ದಾರೆಂಬ ನೋವು ಕಾಡದು. ಅವರ ಶೌರ್ಯ ಸಾಹಸ ಮತ್ತು ಹುರುಪಿಗಾಗಿ ಅವರು ಸದಾ ನಮ್ಮ ಮನದಾಳದಲ್ಲಿ ನಿಲ್ಲುತ್ತಾರೆ,’’ ಎನ್ನುತ್ತಾರೆ ಪಲ್ಲವಿ.  ‘‘ದೇಶ ಸೇವೆ ಮಾಡಬೇಕಿದ್ದರೆ ಸೇನೆ ಸೇರಲೇಬೇಕು ಎಂದೇನೂ ಇಲ್ಲ. ಒಬ್ಬ ಜವಾಬ್ದಾರಿಯುತ ನಾಗರಿಕನಾಗುವುದು ಮುಖ್ಯ. ಎಲ್ಲರೂ ಅವರ ಕರ್ತವ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸಿದರೆ ಅದುವೇ ದೇಶ ಸೇವೆ,’’ ಎಂದು ಅವರು ಹೇಳಿದ್ದಾರೆ. ಆಶುತೋಷ್ ಶರ್ಮಾ ಅವರಿಗೆ ಪತ್ನಿ ಪಲ್ಲವಿ ಶರ್ಮಾ, 12 ವರ್ಷದ ಮಗಳು ತಮನ್ನಾ ಇದ್ದಾರೆ. ಇವರಿಬ್ಬರೂ ರಾಜಸ್ಥಾನದ ವೈಶಾಲಿನಗರದ ರಂಗೋಲಿ ಗಾರ್ಡನ್ಸ್ ಸೊಸೈಟಿಯಲ್ಲಿ ವಾಸವಿದ್ದಾರೆ. ಪಲ್ಲವಿ ಅವರ ಕುಟುಂಬದವರು ಮತ್ತು ತಾಯಿ ಜೈಪುರದ ಜೈಸಿಂಗಾಪುರದಲ್ಲಿ ವಾಸವಿದ್ದಾರೆ. ‘‘ಮೇ 1ರಂದು ಅವರ ಬಳಿ ಮಾತನಾಡಿದ್ದೆ. ಅದಾದ ಬಳಿಕ ಅವರು ಕಾರ್ಯಾಚರಣೆಗೆ ತೆರಳಿದ್ದರು. ಫೆಬ್ರವರಿ 27ರಂದು ಉಧಂಪುರದಲ್ಲಿ ನಾವು ಭೇಟಿಯಾಗಿದ್ದೆವು. ಅದೇ ಕೊನೆ, ಬಳಿಕ ಫೋನಿನಲ್ಲಷ್ಟೇ ಮಾತುಕತೆ,’’ ಎಂದು ಪಲ್ಲವಿ ಶರ್ಮಾ ನೆನಪಿಸಿಕೊಂಡಿದ್ದಾರೆ.
1,500 ಜನರ ರಕ್ಷಣೆ ಹೊಣೆ ಆಶುತೋಷ್ ಅವರು ಪತ್ನಿಯೊಂದಿಗೆ ಕೊನೇಯದಾಗಿ ಮಾತನಾಡಿದಾಗ ‘‘ನೀನು ಮನೆ ಜವಾಬ್ದಾರಿ ನೋಡಿಕೊ. ನಾನು 1,500 ಜನರನ್ನು ರಕ್ಷಿಸಬೇಕಿದೆ,’’ ಎಂದು ಹೇಳಿದ್ದರು. ಅಲ್ಲದೆ, ಉಗ್ರರನ್ನು ಹೊಡೆದುರುಳಿಸಿ ಮನೆಗೆ ಮರಳುವ ಭರವಸೆ ನೀಡಿದ್ದರು. ‘‘ಈಗಲೂ ಅವರು ಮನೆಗೆ ಬಂದಿದ್ದಾರೆ. ಆದರೆ ತ್ರಿವರ್ಣಧ್ವಜದಲ್ಲಿ ಹುತಾತ್ಮರಾಗಿ ಮರಳಿದ್ದಾರಷ್ಟೇ,’’ ಎಂದು ದಿಟ್ಟ ದನಿಯಲೇ ಪಲ್ಲವಿ ಹೇಳಿದ್ದಾರೆ.

ಬಂದ ಬಳಿಕ ಹೊಸ ಶೂ: ಕರ್ನಲ್ ಶರ್ಮಾ ಅವರು ಇತ್ತೀಚೆಗೆ ಹೊಸ ಶೂ ತಂದು ಮನೆಯಲ್ಲಿಟ್ಟಿದ್ದರು. ಕಾರ್ಯಾಚರಣೆ ಮುಗಿಸಿ ವಾಪಸಾದ ಬಳಿಕ ಅವುಗಳನ್ನು ತೊಡುವೆ ಎಂದು ಪತ್ನಿಗೆ ಹೇಳಿದ್ದರು. 
ಮಗಳಿಗೂ ಆದರ್ಶ: ‘‘ನನ್ನ ಮಗಳು ಅಪ್ಪನನ್ನು ಒಬ್ಬ ತತ್ವಾದರ್ಶ ಪಾಲಿಸುವ ತಂದೆಯಾಗಿ ನೆನೆಸಿಕೊಳ್ಳಬೇಕು. ಜೀವದ ಹಂಗು ತೊರೆದು ತನ್ನ ತಂಡವನ್ನು ಮುನ್ನಡೆಸಿರುವ ಸಾಹಸಿಯಾಗಿ ಸ್ಮರಿಸಬೇಕು. ದೇಶಸೇವೆಯನ್ನು, ಕಾಯಕವನ್ನು ಪ್ರೀತಿಸುವ ದೇಶಪ್ರೇಮಿಯಾಗಿ ಅವರ ತಂದೆ ನನ್ನ ಮಗಳ ನೆನಪಿನಲ್ಲಿ ಉಳಿಯಬೇಕು,’’ ಎಂದು ಪಲ್ಲವಿ ಹೇಳಿದ್ದಾರೆ.  ತಮನ್ನಾ ಕೂಡ ಕಡು ದುಃಖದ ನಡುವೆಯೂ ದೇಶ ಸೇವೆಯ ಸಾರ್ಥಕತೆ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ‘‘ಅಪ್ಪ ನನಗೆ ಅನೇಕ ಭರವಸೆಗಳನ್ನು ನೀಡಿದ್ದರು. ಜತೆಗೂಡಿ ಸಿನಿಮಾಕ್ಕೆ ಹೋಗೋಣ ಎಂದು ಆಶ್ವಾಸನೆ ನೀಡಿದ್ದರು. ಕಳೆದ ಬಾರಿ ಬಂದಾಗ ತೊಡೆ ಮೇಲೆ ಕೂರಿಸಿ ಮುದ್ದಾಡಿದ್ದರು. ಆ ಕ್ಷಣಗಳು ಇನ್ನೆಂದೂ ಬರುವುದಿಲ್ಲ ಎನ್ನುವುದು ನೆನೆದಾಗ ಕಡುದುಃಖವಾಗುತ್ತದೆ. ಆದರೆ ಅಪ್ಪನ ತ್ಯಾಗ ಈ ದೇಶಕ್ಕೆ ಆದರ್ಶ’’ ಎಂದು ಕಣ್ಣಾಲಿ ತುಂಬಿ ನುಡಿದಿದ್ದಾರೆ ತಮನ್ನಾ.
ಮದುವೆಯಾದ 4 ತಿಂಗಳಿಗೆ ಕಾಶ್ಮೀರಕ್ಕೆ ತೆರಳಿದ್ದ ಮೇಜರ್ ಹುತಾತ್ಮ ಅನೂಜ್ ಸೂದ್ (31) ಅವರು 2017ರಲ್ಲಿ ಮದುವೆಯಾಗಿದ್ದರು. ಮದುವೆಯಾಗಿ  ನಾಲ್ಕೇ ತಿಂಗಳಿಗೆ ಕಾಶ್ಮೀರದ ಕಾರ್ಯಾಚರಣೆಗೆ ತೆರಳಿದ್ದರು. ಅವರು ನಿಯೋಜನೆಗೊಂಡಿದ್ದ ತಂಡದ ಕರ್ತವ್ಯ ಅತ್ಯಂತ ಕಠಿಣವಾಗಿತ್ತು. ಆದ್ದರಿಂದಲೇ ಆ ತಂಡದ ಯೋಧರಾರಿಗೂ ಪತ್ನಿಯರನ್ನು ಜತೆಯಲ್ಲಿ ಇಟ್ಟುಕೊಳ್ಳಲು ಅವಕಾಶ ಇರುವುದಿಲ್ಲ.“ಮೇಜರ್ ಸೂದ್ ಪರಮೋಚ್ಛ ತ್ಯಾಗ ಮಾಡಿದ್ದಾರೆ. ಜೀವಗಳನ್ನು ಉಳಿಸುವುದು ಅವರ ಕರ್ತವ್ಯವಾಗಿತ್ತು. ಅವರು ತರಬೇತಿಯಲ್ಲಿ ಕಲಿತದ್ದೂ ಅದನ್ನೇ. ಆದರೆ ಮದುವೆಯಾಗಿ ಕೌಟುಂಬಿಕ ಸುಖ ಅನುಭವಿಸದೇ ಅವರು ದೂರವಾಗಿರುವುದು ದುಃಖದ ವಿಷಯ,’’ ಎಂದು ಅನೂಜ್ ತಂದೆ ಬ್ರಿಗೇಡಿಯರ್ ಚಂದ್ರಕಾಂತ್ ಸೂದ್ (ನಿವೃತ್ತ) ಹೇಳಿದ್ದಾರೆ. 
ಶಾಲೆಯಲ್ಲೇ ಸೇನೆಯ ಕನಸು ಅನೂಜ್ ಸೂದ್ ಅವರು ವಿದ್ಯಾರ್ಥಿಯಾಗಿದ್ದಾಗಿನಿಂದಲೇ ಸೇನೆಯಲ್ಲಿ ಅಧಿಕಾರಿಯಾಗುವ ಕನಸು ಕಂಡಿದ್ದರು. ಪಂಜಾಬ್‌ನ ಪಟಿಯಾಲ ಜಿಲ್ಲೆಯ ನಭಾದಲ್ಲಿರುವ ಪಂಜಾಬ್ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದ ಸೂದ್, ಸ್ನೇಹಿತರು ಹಾಗೂ ಶಿಕ್ಷಕರೊಂದಿಗೆ ಜೀವನದ ಗುರಿಗಳು, ತಮ್ಮ ಇಷ್ಟದ ಸಿನಿಮಾಗಳು, ನಟ-ನಟರು ಎಲ್ಲದರ ಬಗ್ಗೆಯೂ ಮಾತನಾಡಿದ್ದರು. ಸೂದ್ ಅವರ ನೆನಪಿನ ಬುತ್ತಿಯನ್ನು ಸ್ನೇಹಿತರು ಬಿಚ್ಚಿಟ್ಟಿದ್ದಾರೆ. ಸೂದ್ ಅವರ ನೆಚ್ಚಿನ ನಟಿ ಏಂಜೆಲಿನಾ ಜೋಲಿ. ಓಂ ಶಾಂತಿ ಓಂ, ಲಕ್ಷ್ಯ, ಡೈ ಹಾರ್ಡ್ ಫೇವರಿಟ್ ಸಿನಿಮಾಗಳು. 2008ರಲ್ಲಿ ಅನೂಜ್ ಅವರು ನ್ಯಾಷನಲ್ ಡಿಫೆನ್ಸ್ ಅಕಾಡೆಮಿಗೆ ಸೇರುವ ಮೂಲಕ ತಮ್ಮ ಕನಸು ನನಸಾಗಲು ನೀರೆರೆದಿದ್ದರು.
ಆದಿತ್ಯನಾಥ್ ನೆರವು ಲಖನೌ: ಹುತಾತ್ಮರಾದ ಕರ್ನಲ್ ಆಶುತೋಷ್ ಶರ್ಮಾ ಅವರ ಕುಟುಂಬಕ್ಕೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ 50 ಲಕ್ಷ ರೂ. ನೆರವು ಘೋಷಿಸಿದ್ದಾರೆ. ಇದೇ ವೇಳೆ, ಮೃತರ ಕುಟುಂಬ ಸದಸ್ಯರಿಗೆ ಸರಕಾರಿ ಉದ್ಯೋಗದ ಭರವಸೆ ನೀಡಿದ್ದಾರೆ. ಉತ್ತರ ಪ್ರದೇಶದ ಬುಲಂದ್‌ಶಹರ್‌ನ  ಪರ್ವಾನಾ ಗ್ರಾಮದಲ್ಲಿ ಆಶುತೋಷ್ ಅವರ ಸ್ಮಾರಕ ನಿರ್ಮಾಣ ಮಾಡುವುದಾಗಿಯೂ ಯೋಗಿ ಆದಿತ್ಯನಾಥ್ ಅವರು ಘೋಷಿಸಿದ್ದಾರೆ. ಮುಖ್ಯಮಂತ್ರಿ ಕಚೇರಿಯ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ಈ ಬಗ್ಗೆ ಮಾಹಿತಿ ನೀಡಲಾಗಿದೆ.
ಸ್ವಯಂ ಪ್ರೇರಣೆಯಿಂದ ತಂಡ ಸೇರಿದ್ದ ಖಾಜಿ ಹಂದ್ವಾರದಲ್ಲಿ ನಡೆದ  ಉಗ್ರರ ಜತೆ ನಡೆದ ಗುಂಡಿನ ಕಾಳಗದಲ್ಲಿ ಹುತಾತ್ಮರಾದ ಜಮ್ಮು ಕಾಶ್ಮೀರ ಪೊಲೀಸ್ ಪಡೆಯ ಸಬ್ಇನ್ಸ್‌ಪೆಕ್ಟರ್‌ ಎಸ್ ಎ ಪಿ ಖಾಜಿ (41) ಅವರದ್ದು ಸಾಹಸದ ವೃತ್ತಿ ಬದುಕು. ಸಾಮಾನ್ಯ ಪೊಲೀಸ್ ಅಧಿಕಾರಿಯಾಗಿದ್ದರೆ ಅವರು ನೆಮ್ಮದಿಯಾಗಿ ಇರಬಹುದಾಗಿತ್ತು. ಕಡು ಸಾಹಸಿಯಾಗಿದ್ದ ಖಾಜಿ 2006ರಲ್ಲಿ ಸ್ವಯಂ ಪ್ರೇರಣೆಯಿಂದ ಸೇನಾ ಕಾರ್ಯಾಚರಣೆ ಸೇರಿದ್ದರು. ಅದರಲ್ಲೂ ಉಗ್ರರ ವಿರುದ್ಧ ನಡೆಯುವ ವಿಶೇಷ ಕಾರ್ಯಾಚರಣೆಗಳ ತಂಡದಲ್ಲಿ ಸ್ಥಾನ ಪಡೆದಿದ್ದರು. ಅವರ ಉತ್ಸುಕತೆ ಕಂಡು ಉಮೇದುಗೊಂಡಿದ್ದ ಭದ್ರತಾ ಅಧಿಕಾರಿಗಳು, ಅವರನ್ನು ಕ್ಲಿಷ್ಟ ಕಾರ್ಯಾಚರಣೆ ನಡೆಸುವ ತಂಡದಲ್ಲಿ ನಿಯೋಜಿಸಿದ್ದರು. ಅವರ ಸಾಹಸದ ಬದುಕು ಕೊನೆಗೊಂಡಿದೆ. ‘ಶೇರ್ ಇ ಕಾಶ್ಮೀರ್’ ಪೊಲೀಸ್ ಶೌರ್ಯ ಪ್ರಶಸ್ತಿ (2009), ರಾಷ್ಟ್ರಪತಿಗಳ ಪೊಲೀಸ್ ಶೌರ್ಯ ಪ್ರಶಸ್ತಿ (2011) ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳು ಅವರಿಗೆ ಸಂದಿವೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top