ಉದ್ಯಮದ ಸವ್ಯಸಾಚಿ ಆಗಿದ್ದ ಕಾಫಿ ಕಿಂಗ್ ವಿ.ಜಿ. ಸಿದ್ಧಾರ್ಥ

– ಕೆ.ಸಿ.ಚಂದ್ರಪ್ಪ.
ವಿ.ಜಿ. ಸಿದ್ಧಾರ್ಥ ಕೇವಲ ಎರಡೂವರೆ ಲಕ್ಷ ಹಣವನ್ನು 1985ರಲ್ಲಿ ಷೇರು ಮಾರುಕಟ್ಟೆಯಲ್ಲಿ ತೊಡಗಿಸಿ, ಎಂಟು ವರ್ಷಗಳ ಅಲ್ಪಾವಧಿಯಲ್ಲಿ ನೂರಾರು ಕೋಟಿ ಸಂಪಾದಿಸಿ, ಆ ಹಣವನ್ನು ತನ್ನ ಮೂಲ ಕ್ಷೇತ್ರವಾದ ಕಾಫಿ ತೋಟಗಳಲ್ಲಿ ತೊಡಗಿಸಿ, ಮುಂದೆ ವಿಸ್ತರಿಸುತ್ತಾ ಸುಮಾರು ಹನ್ನೆರಡು ಸಾವಿರ ಎಕರೆ ಕಾಫಿ ತೋಟಗಳ ಒಡೆಯನಾದರು. 1993ರಲ್ಲಿ ಹುಟ್ಟು ಹಾಕಿದ ಅಮಾಲ್ಗಮೇಟೆಡ್ ಬೀನ್ ಕಾಫಿ ಟ್ರೇಡಿಂಗ್ ಕಂಪನಿ ಕೇವಲ ಮೂರು ವರ್ಷಗಳಲ್ಲಿ ದೇಶದ ಅತಿ ದೊಡ್ಡ ಕಾಫಿ ರಫ್ತು ಉದ್ದಿಮೆಯಾಗಿ ಬೆಳೆದಿತ್ತು. 1996ರಲ್ಲಿ ಹುಟ್ಟಿಕೊಂಡ ಕೆಫೆ ಕಾಫಿ ಡೇ(ಸಿಸಿಡಿ) ದೇಶದ ಉದ್ದಗಲಕ್ಕೂ ಬೆಳೆದಿದ್ದು ಒಂದು ಕ್ರಾಂತಿಕಾರಿ ಬೆಳವಣಿಗೆ. ಮುಂದೆ ಹೊರ ದೇಶಗಳಲ್ಲೂ ವಿಸ್ತರಿಸಿಕೊಂಡು ಸುಮಾರು 2100 ಔಟ್‌ಲೆಟ್‌ಗಳನ್ನು ಹೊಂದಿ, ದೇಶದ ಹೆಮ್ಮೆಯ ಬ್ರ್ಯಾಂಡ್ ಆಗಿ ಹೊಮ್ಮಿ ಗ್ಲೋಬಲ್ ಬ್ರ್ಯಾಂಡ್ ಆಗಿ ಪರಿವರ್ತಿತವಾದದ್ದು ಈಗ ಇತಿಹಾಸ.
ತಮ್ಮ ಉದ್ಯಮ ಕ್ಷೇತ್ರವನ್ನು ವಿಸ್ತರಿಸುತ್ತಾ ಲಾಜಿಸ್ಟಿಕ್, ಹೋಟೆಲ್ ಉದ್ಯಮ, ಐಟಿ ಕ್ಷೇತ್ರ, ಫರ್ನೀಚರ್ ಉದ್ಯಮ, ಶೈಕ್ಷಣಿಕ ಕ್ಷೇತ್ರ, ರಿಯಲ್ ಎಸ್ಟೇಟ್ ಮತ್ತು ದೇಶದಲ್ಲೇ ಅತಿ ವಿಸ್ತಾರವಾದ ಎರಡೂವರೆ ಲಕ್ಷ ಚದರು ಮೀಟರ್ ಗ್ಲೋಬಲ್ ವಿಲೇಜ್ ಹೆಸರಿನ ಐಟಿ ಪಾರ್ಕ್… ಹೀಗೆ ಹಲವು ಉದ್ಯಮ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು 15ರಿಂದ 20 ಸಾವಿರ ಕೋಟಿ ಆರ್ಥಿಕ ಸಂಪತ್ತು ಹೊಂದಿರುವ ಬೃಹತ್ ಉದ್ಯಮಪತಿಯಾಗಿ ಬೆಳೆದಿದ್ದರು. ಪ್ರಭಾವಿ ರಾಜಕಾರಣಿ ಎಸ್.ಎಂ.ಕೃಷ್ಣ ಅವರ ಪುತ್ರಿಯನ್ನು 1988ರಲ್ಲಿ ವರಿಸಿದ ಮೇಲೆ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ರಾಜಕೀಯ ಕ್ಷೇತ್ರದಲ್ಲೂ ಒಬ್ಬ ಪ್ರಭಾವಿಯಾಗಿ ಗುರುತಿಸಿಕೊಂಡಿದ್ದರು.
ಇಷ್ಟೊಂದು ಖ್ಯಾತಿ, ಅಪಾರ ಸಂಪತ್ತಿನ ಒಡೆಯ ಮತ್ತು ಶಿಸ್ತುಬದ್ಧ ಜೀವನವನ್ನು ಮೈಗೂಡಿಸಿಕೊಂಡಿದ್ದ ವ್ಯಕ್ತಿ ತಮ್ಮ ಉದ್ಯಮದಲ್ಲಿ ಬಂದೊದಗಿದ ಅನಿರೀಕ್ಷಿತ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ಅದನ್ನು ಎದುರಿಸಲಾಗದೆ 2019 ಜುಲೈ 29ರಂದು ಆತ್ಮಹತ್ಯೆ ಮಾಡಿಕೊಂಡದ್ದು, ಇಡೀ ದೇಶವನ್ನು ತಲ್ಲಣಗೊಳಿಸಿದ್ದು ಸುಳ್ಳಲ್ಲ. ಸಿದ್ಧಾರ್ಥ ಅವರನ್ನು ಹತ್ತಿರದಿಂದ ನೋಡುವ ಅವಕಾಶ ದೊರೆಯಿತು. ನಾನು ಚಿಕ್ಕಮಗಳೂರಲ್ಲಿದ್ದಾಗ ನಮ್ಮ ನಡುವೆ ಒಳ್ಳೆಯ ವೃತ್ತಿ ಬಾಂಧವ್ಯ ಇತ್ತು.
2011ರಲ್ಲಿ ಫೋರ್ಬ್ಸ್ ಇಂಡಿಯಾದ ಪ್ರಥಮ ಲೀಡರ್ ಶಿಪ್ ಅವಾರ್ಡ್ ಪುರಸ್ಕೃತರಾದ ಮೇಲೆ ಸಿದ್ಧಾರ್ಥ ಅವರ ಸಾಧನೆ ಮತ್ತು ಕೀರ್ತಿ ಉದ್ಯಮ ಲೋಕಕ್ಕೆ ಹೆಚ್ಚೆಚ್ಚು ತೆರೆದುಕೊಂಡಿತು. ಮುಂದೆ ದೇಶದ ಪ್ರತಿಷ್ಠಿತ ಮ್ಯಾನೇಜ್ಮೆಂಟ್ ಸ್ಕೂಲ್‌ಗಳು ಇವರನ್ನು ಸಂಪನ್ಮೂಲ ವ್ಯಕ್ತಿಯಾಗಿ ಕರೆಯಿಸಿಕೊಂಡವು. ತಮ್ಮ ಸರಳ ಮತ್ತು ವಸ್ತುನಿಷ್ಠ ವಿಚಾರಗಳನ್ನು ಮಂಡಿಸುತ್ತಿದ್ದ ರೀತಿ ಅವರಿಗೆ ಸ್ಟಾರ್ ವ್ಯಾಲ್ಯೂ ತಂದುಕೊಟ್ಟಿತ್ತು. ಆ ಹೊತ್ತಿಗೆ ಪ್ರತಿಷ್ಠಿತ ಸಿಸಿಡಿ ಬ್ರ್ಯಾಂಡ್ ಪ್ರಪಂಚದ ಇತರ ಹೆಗ್ಗಳಿಕೆಯ ಕಾಫಿ ಬ್ರ್ಯಾಂಡ್‌ಗಳ ಜೊತೆಗೆ ಪೈಪೋಟಿ ಮಾಡುವಷ್ಟರ ಮಟ್ಟಿಗೆ ಬೆಳೆದಿತ್ತು.
2015-16ರಲ್ಲಿ ಮ್ಯಾಗ್ಜಿನ್‌ ಒಂದರಲ್ಲಿ ಅವರು ತಮ್ಮ ದೂರದೃಷ್ಟಿಯ ಚಿಂತನೆಗಳು ಮತ್ತು ಭಾರತದ ಉದ್ಯಮ ಕ್ಷೇತ್ರ ಮುಂದಿನ 30 ವರ್ಷಗಳಲ್ಲಿ ಯಾವ ಎತ್ತರಕ್ಕೆ ಏರಬಲ್ಲದು ಎಂಬ ವಿಚಾರಗಳನ್ನು ಅವರು ಮಂಡಿಸಿದ್ದರು. ಇದು ನನ್ನನ್ನು ಬಲವಾಗಿ ಸೆಳೆಯಿತು. ಅವರಲ್ಲಿದ್ದ ಕ್ರಿಯಾಶೀಲತೆ, ವೃತ್ತಿಪರತೆ, ಭಿನ್ನವಾಗಿ ಯೋಚಿಸುವ ಮನೋಭಾವ ಮತ್ತು ಬದ್ಧತೆ ಇವೆಲ್ಲವೂ ತಾಳ-ಮೇಳಗಳಾಗಿ ಸೇರಿದ್ದರಿಂದ ಅಂತಾರಾಷ್ಟ್ರೀಯ ಖ್ಯಾತಿ ಪಡೆಯಲು ಸಾಧ್ಯವಾಯಿತು.
ಕಾಲೇಜು ವಿದ್ಯಾರ್ಥಿ ದೆಸೆಯಿಂದಲೂ ಕಾರ್ಲ್ ಮಾರ್ಕ್ಸ್ ಸಿದ್ಧಾಂತಕ್ಕೆ ಮಾರು ಹೋದವರು. ವಿಶೇಷ ಎಂದರೆ, ಉದ್ಯಮ ಆರಂಭಿಸಿ 5-6 ವರ್ಷಗಳಲ್ಲಿ ತಾವೇ ಬಂಡವಾಳಶಾಹಿಯಾಗಿ ಪರಿವರ್ತನೆ ಆದವರು!
ಈ ಉದ್ಯಮ ಕ್ಷೇತ್ರಕ್ಕೆ ಬಂದದ್ದೇ ಬಹಳ ಆಕಸ್ಮಿಕ ಎಂದು ಸಿದ್ಧಾರ್ಥ ಹಲವು ಬಾರಿ ಹೇಳಿದ್ದರು. ಕಮ್ಯುನಿಸ್ಟ್ ವಿಚಾರಧಾರೆಯಿಂದ ಹೊರಬಂದ ಮೇಲೆ ಸೇನಾಧಿಕಾರಿಯಾಗುವ ಆಸೆ ಹೊಂದಿದ್ದರು. ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಬಳಿಕ, ಅವರ ದಿಕ್ಕು ಮತ್ತು ದೆಸೆ ಎಲ್ಲವೂ ಬದಲಾಗಿತ್ತು. ಅವರ ಈ ಎಲ್ಲ ಚಿಂತನೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರೊಬ್ಬ ಹಠವಾದಿ, ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಹಿಂಜರಿಯುತ್ತಿರಲಿಲ್ಲ ಮತ್ತು ತಮ್ಮ ನಿರ್ಧಾರಕ್ಕೆ ಬದ್ಧರಾಗಿರುತ್ತಾರೆ ಎಂಬುದನ್ನು ಸ್ಪಷ್ಟವಾಗಿ ಗುರುತಿಸಬಹುದು. ಒಬ್ಬ ಸಾಮಾನ್ಯ ಕಾಫಿ ಬೆಳೆಗಾರ, ತನ್ನ ಸ್ವಂತ ಪ್ರತಿಭೆಯಿಂದ ಪ್ರಪಂಚದ ಭೂಪಟದಲ್ಲಿ ತನ್ನನ್ನು ಗುರುತಿಸಿಕೊಂಡು ದೇಶಕ್ಕೆ, ರಾಜ್ಯಕ್ಕೆ ಮತ್ತು ತನ್ನ ಕರ್ಮಭೂಮಿ ಚಿಕ್ಕಮಗಳೂರು ಜಿಲ್ಲೆಗೆ ಕೀರ್ತಿ ತಂದುಕೊಟ್ಟ ಇವರ ಅಗಲಿಕೆಯನ್ನು ಹೇಗೆ ತಾನೇ ಸಹಿಸಲು ಸಾಧ್ಯ? 50 ಸಾವಿರ ಉದ್ಯೋಗಗಳನ್ನು ಸೃಷ್ಟಿಸಿ ವಿಶೇಷ ಮುತುವರ್ಜಿ ವಹಿಸಿ ಗ್ರಾಮೀಣ ಯುವಕರಿಗೆ ಉದ್ಯೋಗ ಕಲ್ಪಿಸಿದ ಅವರ ಸಾಮಾಜಿಕ ಕಾಳಜಿಯನ್ನು ಪ್ರಶ್ನಿಸಲು ಸಾಧ್ಯವೇ?
ಕಳೆದ ಒಂದು ವರ್ಷದಿಂದ ಅವರ ಸಾವಿನ ಬಗ್ಗೆ ದೇಶವ್ಯಾಪಿ ಚರ್ಚೆಯಾಗಿದೆ. ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ತೆರಿಗೆ ಇಲಾಖೆಯ ದಾಳಿಯಿಂದ ಕಂಗೆಟ್ಟು ದಾರಿ ಕಾಣದೆ, ಹತಾಶೆಯಿಂದ ಪ್ರಾಣ ತ್ಯಾಗ ಮಾಡಿದ್ದಾರೆ ಎಂಬುದನ್ನು ಹೆಚ್ಚು ಕಮ್ಮಿ ಎಲ್ಲರೂ ಒಪ್ಪಿಕೊಂಡಿದ್ದಾರೆ. ಬಹುಶಃ ಇದಕ್ಕೆ ವ್ಯತಿರಿಕ್ತವಾಗಿ ಯೋಚಿಸುವುದು ಕಷ್ಟ.
ಕೆಫೆ ಕಾಫಿ ಡೇ ಯಾವ ರೂಪದಲ್ಲಿರುತ್ತದೆ, ಯಾರ ಮಾಲೀಕತ್ವದಲ್ಲಿರುತ್ತದೆ, ಸಿದ್ದಾರ್ಥ ಕಟ್ಟಿದ ಕಾಫಿ ಸಾಮ್ರಾಜ್ಯ ತನ್ನ ಎಂದಿನ ವೈಭವಕ್ಕೆ ಮರಳುತ್ತದೋ, ಇಲ್ಲವೋ ಎಂದು ಕಾಲವೇ ಹೇಳಬೇಕು. ಆದರೆ, ಅವರ ಹೆಸರು ಈ ನಾಡಿನ ಉದ್ಯಮಿಗಳ ಚರಿತ್ರೆಗೆ ಸೇರುತ್ತದೆ ಮತ್ತು ಈ ‘ಕಾಫಿ ಕಿಂಗ್’ ಅಮರರಾಗಿ ಉಳಿಯುತ್ತಾರೆ.
(ಲೇಖಕರು ನಿವೃತ್ತ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು )

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top