ಚುನಾವಣಾ ಆಯೋಗಕ್ಕೆ ಖದರು ತಂದ ಖಡಕ್ ಶೇಷನ್

  1. ಓರ್ವ ಟಿ.ಎನ್. ಶೇಷನ್ ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ಇಷ್ಟು ಅಗಾಧ ಬದಲಾವಣೆ ಮಾಡಬಲ್ಲರಾದರೆ ನಾವು ಕರ್ನಾಟಕದ ಆರು ಕೋಟಿ ಜನರು/ದೇಶದ ನೂರಿಪ್ಪತ್ತೈದು ಕೋಟಿ ಜನರು ಇನ್ನೇನೆಲ್ಲ ಮಾಡಬಹುದು! ಆಲೋಚಿಸುವುದು ಬೇಡವೇ? ಕರ್ನಾಟಕ ವಿಧಾನಸಭಾ ಚುನಾವಣೆ ಇದಕ್ಕೆ ವೇದಿಕೆಯಾಗಲಿ.

ಚುನಾವಣಾ ಆಯೋಗಕ್ಕೆ ಎಂಥ ತಾಕತ್ತಿದೆ ಎಂಬುದನ್ನು ದೇಶಕ್ಕೆ ತೋರಿಸಿಕೊಟ್ಟ ಮಾಜಿ ಮುಖ್ಯಚುನಾವಣಾ ಆಯುಕ್ತ ಟಿ.ಎನ್. ಶೇಷನ್ ತಮ್ಮ ಕೊನೇ ದಿನಗಳನ್ನು ಎಲ್ಲಿ ಮತ್ತು ಹೇಗೆ ಕಳೆಯುತ್ತಿದ್ದಾರೆ ಎಂಬುದರ ಕುರಿತು ದಿನಂಪ್ರತಿ ತರಹೇವಾರಿ ಸುದ್ದಿಗಳು ಹರಿದಾಡುತ್ತಿವೆ. ಶೇಷನ್ ಮಾತ್ರವಲ್ಲ, ಒಂದುಕಾಲಕ್ಕೆ ಹೆಸರು ಮಾಡಿದ್ದ ಎಂತೆಂಥವರು ತಮ್ಮ ಕೊನೇ ದಿನಗಳನ್ನು ಹೇಗೆ ಕಳೆದರು, ಕಳೆಯುತ್ತಿದ್ದಾರೆ ಎಂಬುದೇ ಒಂದು ಆಸಕ್ತಿಕರ ವಿಚಾರ. ಅದನ್ನು ಬೇರೊಂದು ಸಂದರ್ಭದಲ್ಲಿ ಮೆಲುಕು ಹಾಕುವಾ. ಈಗ ಶೇಷನ್ ನೆನಪಾದದ್ದು ಇನ್ನೊಂದು ಇಪ್ಪತ್ತು ದಿನಗಳಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಯೆಂಬ ಮೌನ ಮೆರವಣಿಗೆಯನ್ನು ಕಂಡಾಗ!

ಈಗಿನ ಚುನಾವಣೆ ಸಂದರ್ಭವನ್ನು ಚರ್ಚೆಮಾಡುವ ಪೂರ್ವದಲ್ಲಿ ನಾವೆಲ್ಲ ಚಿಕ್ಕವರಿದ್ದಾಗ ವಿಧಾನಸಭೆ/ಲೋಕಸಭೆಗೆ ನಡೆಯುವ ಚುನಾವಣೆ, ಅಷ್ಟೇ ಏಕೆ ಒಂದು ಪಂಚಾಯಿತಿ ಚುನಾವಣೆಯೂ ಹೇಗಿರುತ್ತಿತ್ತು ಎಂಬುದನ್ನು ಒಮ್ಮೆ ಕಣ್ಮುಂದೆ ತಂದುಕೊಳ್ಳೋಣ. ಬಸ್​ಸ್ಟಾ್ಯಂಡು, ಅಂಗಡಿಮುಂಗಟ್ಟು, ಓಣಿಓಣಿಗಳ ಗೋಡೆಗಳು ಹೀಗೆ ಎಲ್ಲೆಂದರಲ್ಲಿ ಅಂಟಿಸುವ ಪೋಸ್ಟರುಗಳು ಐದು ವರ್ಷ ಕಳೆದರೂ ತಮ್ಮ ಕೊಳಕು ಮುಖವನ್ನು ತೋರಿಸುತ್ತಲೇ ಇರುತ್ತಿದ್ದವು. ಹೇಗೆಂದರೆ ಹಾಗೆ ಬಿಸಾಡುವ ಕರಪತ್ರಗಳು, ಚರಂಡಿಯ ಪಕ್ಕ ಬಿದ್ದು ಒದ್ದಾಡುವ ಕಟೌಟುಗಳು, ರಸ್ತೆಬದಿ ಗಟಾರು, ಮೋರಿಯನ್ನೆಲ್ಲ ಆಕ್ರಮಿಸಿಕೊಂಡು ತೇಲಾಡುತ್ತಿದ್ದ ಬಂಟಿಂಗ್ಸ್… ಆದರೆ ಈಗ ಅಂತಹ ಯಾವ ಅಸಹ್ಯ ಕುರುಹುಗಳೂ ಕಾಣಿಸದು. ಚುನಾವಣೆ ಹತ್ತಿರದಲ್ಲೇ ಇದೆ ಎಂಬುದು ಯಾರಾದರೂ ಹೇಳಿದರಷ್ಟೇ ಗೊತ್ತಾಗಬೇಕು. ಅಷ್ಟು ಸ್ವಚ್ಛ ಮತ್ತು ಸ್ತಬ್ಧ. ಮೈಕ್ ಪ್ರಚಾರದ ವಿಚಾರಕ್ಕೆ ಬರುವುದಾದರೆ ಯಾರು ಏನು ಒದರುತ್ತಿದ್ದಾರೆಂಬುದೇ ತಿಳಿಯದಷ್ಟು ಮೈಕಾಸುರನ ಹಾವಳಿ ಈ ಹಿಂದೆಲ್ಲ ಇರುತ್ತಿತ್ತು. ಎಲ್ಲಿ ನೋಡಿದರೂ ‘ಬಡವರ ಬಂಧು’, ‘ದೀನದಲಿತರ ಆಶಾಕಿರಣ’ ಮತ್ತೊಂದು ಮಗದೊಂದು ವಿಶೇಷಣಗಳೊಂದಿಗಿನ ಅಭ್ಯರ್ಥಿಗಳ ಪರ ಮೈಕ್ ಕಿರುಚಾಟ ಕಿವಿಗಪ್ಪಳಿಸುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ನಮಗೆ ಅಂತಹ ಯಾತನೆ, ಉಪಟಳ ಇಲ್ಲವೇ ಇಲ್ಲ ಎಂದರೆ ತಪ್ಪಲ್ಲ. ಇದೆಲ್ಲ ಆ ಮಹಾನುಭಾವ ಶೇಷನ್​ರ ಪರಿಶ್ರಮದಿಂದ ಆದ ಕೊಂಚ ಬದಲಾವಣೆ ಎನ್ನಬಹುದು. ಮೆನಿ ಮೆನಿ ಥ್ಯಾಂಕ್ಸ್ ಟು ಗ್ರೇಟ್ ಶೇಷನ್.

ವ್ಯವಸ್ಥೆಯ ಬದಲಾವಣೆಗೆ ಒಬ್ಬ ವ್ಯಕ್ತಿ ಕೂಡ ಹೇಗೆ ಕಾರಣ ಆಗಬಹುದು ಎಂಬುದಕ್ಕೆ ಶೇಷನ್ ಒಂದು ಉತ್ತಮ ಉದಾಹರಣೆ. ಹಿರಿಯ ಐಎಎಸ್ ಅಧಿಕಾರಿಯಾಗಿದ್ದ ಅವರು 1990ರ ಡಿಸೆಂಬರ್​ನಿಂದ 1996ರ ಡಿಸೆಂಬರ್​ವರೆಗೆ ಭಾರತದ ಮುಖ್ಯ ಚುನಾವಣಾ ಆಯಕ್ತರಾಗಿದ್ದರು. ಹಾಗೆ ನೋಡಿದರೆ 1950ನೇ ಇಸವಿಯಿಂದಲೂ ಭಾರತದಲ್ಲಿ ಚುನಾವಣಾ ಆಯೋಗ ಅಸ್ತಿತ್ವದಲ್ಲಿದೆ. ಅದಕ್ಕೆ ಸಂವಿಧಾನಾತ್ಮಕ ಮಾನ್ಯತೆಯಿದೆ. ಚುನಾವಣೆ ನಡೆಸುವ ವಿಚಾರದಲ್ಲಿ ಆಯೋಗಕ್ಕೆ ಅಪರಿಮಿತವಾದ ಅಧಿಕಾರವೂ ಇದೆ. ಆದರೆ ಅದ್ಯಾವುದೂ ಶೇಷನ್​ರಿಗಿಂತ ಮೊದಲು ಆ ಕುರ್ಚಿಯಲ್ಲಿ ಕುಳಿತು ಎದ್ದು ಹೋದ ಒಂಭತ್ತು ಜನ ಮುಖ್ಯಚುನಾವಣಾ ಆಯುಕ್ತರಿಗೆ ಗೊತ್ತೇ ಇರಲಿಲ್ಲ. ಮುಖ್ಯಚುನಾವಣಾ ಆಯುಕ್ತರು ಕೂಡ ಹೌದಪ್ಪಗಳಾಗಿ ನಾಮ್ೇವಾಸ್ತೆ ಎಂಬಂತಾಗಿದ್ದರು. ಚುನಾವಣಾ ಆಯೋಗದ ಖದರು ಏನೆಂಬುದು ಗೊತ್ತಾದದ್ದೇ ಶೇಷನ್ ಎಂಬ ಖಡಕ್ ಅಧಿಕಾರಿ ಬಂದ ನಂತರ. ಅಂಥ ಶೇಷನ್ ಏನೇನೆಲ್ಲ ಬದಲಾವಣೆ ತಂದರು ಎಂಬುದಕ್ಕಾಗಿ ಕೆಲವೊಂದು ಉದಾಹರಣೆಗಳನ್ನು ನಾವು ಗಮನಿಸಬೇಕಿದೆ.

ಚುನಾವಣಾ ಆಯೋಗ ರಚನೆಯಾಗಿ ಇಪ್ಪತ್ತು ವರ್ಷಗಳು ಕಳೆಯುವವರೆಗೆ ನೀತಿಸಂಹಿತೆ ಎಂಬುದೇ ಅಸ್ತಿತ್ವದಲ್ಲಿರಲಿಲ್ಲ ಎಂಬುದು ಎಷ್ಟು ಜನಕ್ಕೆ ಗೊತ್ತು? 1971ರಲ್ಲಿ ಮೊದಲ ಬಾರಿಗೆ ನೀತಿಸಂಹಿತೆ (MODEL ELECTION CODE OF CONDUCT) ರಚನೆ ಆಯಿತು ನಿಜ. ಆದರೆ ಆಚರಣೆಗೆ ಬಂದಿರಲಿಲ್ಲ.

ನಿಯಮಗಳು ಏನೇನು?: ಚುನಾವಣೆ ಘೊಷಣೆ ಆದ ನಂತರ ಅಸ್ತಿತ್ವದಲ್ಲಿರುವ ಸರ್ಕಾರ ಹೊಸ ಘೊಷಣೆಗಳನ್ನು ಮಾಡಬಾರದು. ಸರ್ಕಾರಿ ಕಾಮಗಾರಿಗಳಿಗೆ ಚಾಲನೆ ಕೊಡಬಾರದು. ಬಹಿರಂಗ ಪ್ರಚಾರಕ್ಕೆ ದಿನದ ಇಂತಿಷ್ಟೇ ಹೊತ್ತು ಅವಕಾಶ. ಪರವಾನಗಿ ಇಲ್ಲದೆ ವಾಹನ ಬಳಕೆ ಮತ್ತು ಮೈಕ್ ಪ್ರಚಾರ ಮಾಡುವ ಹಾಗಿಲ್ಲ. ಓರ್ವ ಅಭ್ಯರ್ಥಿಯ ವೆಚ್ಚಮಿತಿ ಇಂತಿಷ್ಟೇ. ಆಯಾ ದಿನದ ಖರ್ಚುವೆಚ್ಚದ ವಿವರವನ್ನು ಆಯಾ ದಿನವೇ ಆಯೋಗಕ್ಕೆ ಒಪ್ಪಿಸತಕ್ಕದ್ದು. ಪೂಜಾಸ್ಥಾನಗಳನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಬಾರದು. ವೈಯಕ್ತಿಕ ತೇಜೋವಧೆಗೆ ಅವಕಾಶ ಇಲ್ಲ. ಇವೆಲ್ಲವೂ ನಿಜವಾಗಿ ಕಾರ್ಯರೂಪಕ್ಕೆ ಬಂದದ್ದು 90ರ ದಶಕದಲ್ಲಿ, ಅದೂ ಶೇಷನ್ ಚುನಾವಣಾ ಆಯೋಗದ ಚುಕ್ಕಾಣಿ ಹಿಡಿದ ನಂತರವೇ.

ಶೇಷನ್ ಎಂಥ ಖಡಕ್ ಅಧಿಕಾರಿಯಾಗಿದ್ದರು ಎಂದರೆ ನೀತಿಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಆಗಿನ ಪ್ರಧಾನಿ ಪಿ.ವಿ.ನರಸಿಂಹರಾವ್, ಹಿರಿಯ ಮಂತ್ರಿಯಾಗಿದ್ದ ಸೀತಾರಾಮ ಕೇಸರಿ ಅಂಥವರಿಗೇ ನೋಟಿಸ್ ಕೊಟ್ಟು ಆಯೋಗಕ್ಕೆ ಖುದ್ದು ವಿವರಣೆ ನೀಡುವಂತೆ ಮಾಡಿದ್ದರು. ನೀತಿಸಂಹಿತೆ ಎಫೆಕ್ಟ್ ಹೇಗಿತ್ತು ಎಂಬುದಕ್ಕೆ ಕರ್ನಾಟಕದ್ದೇ ಒಂದು ಉದಾಹರಣೆ ಇದೆ. ಕರ್ನಾಟಕದಲ್ಲಿ ಅಂದು ಅತ್ಯಂತ ಪ್ರಭಾವಿಯಾಗಿದ್ದ ಎಸ್.ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದರು. ಅಫ್ಜಲ್​ಪುರದಲ್ಲಿ ಅವರು ಕಾಂಗ್ರೆಸ್ ಪಕ್ಷದ ಬಹಿರಂಗ ಪ್ರಚಾರದಲ್ಲಿ ಭಾಗವಹಿಸಬೇಕಿತ್ತು. ಅವರು ಅಫ್ಜಲ್​ಪುರ ತಲುಪಿದ್ದು ರಾತ್ರಿ ಒಂಭತ್ತು ಮುಕ್ಕಾಲು ಗಂಟೆಗೆ. ಹತ್ತು ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಬೇಕು. ಚುನಾವಣಾ ಅಧಿಕಾರಿಗಳು ಹತ್ತೇ ನಿಮಿಷದಲ್ಲಿ ಬಂಗಾರಪ್ಪ ಅವರನ್ನು ಮುಲಾಜಿಲ್ಲದೆ ವೇದಿಕೆಯಿಂದ ಕೆಳಗಿಳಿಸಿದರು. ಹಾಗೇ ಇನ್ನೊಂದು ಸಾರ್ವತ್ರಿಕ ಚುನಾವಣೆಯ ಪ್ರಸಂಗ. ಆಗಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಹೆಲಿಕಾಪ್ಟರ್ ಮೂಲಕ ಪುಟ್ಟಪರ್ತಿ ಸಾಯಿಬಾಬಾ ದೇವಸ್ಥಾನದ ಆವರಣ ತಲುಪಿದ್ದರು. ಅದೇ ವೇಳೆಗೆ ಶೇಷನ್ ಕೂಡ ಪುಟ್ಟಪರ್ತಿಯಲ್ಲಿದ್ದರು. ಅದು ಗೊತ್ತಾದದ್ದೇ ತಡ, ರಾವ್ ದೇವಾಲಯದ ದರ್ಶನವನ್ನೂ ಮಾಡದೆ ಹೆಲಿಪ್ಯಾಡ್​ನಿಂದ ನಿರ್ಗಮಿಸಿಬಿಟ್ಟರು. ಓರ್ವ ಅಧಿಕಾರಿಯ ಖಡಕ್​ತನ ಅಂದರೆ ಇದೇ ತಾನೆ?.

ಹೆಂಡಕ್ಕೆ ನಿರ್ಬಂಧ: ಚುನಾವಣೆಯಲ್ಲಿ ಹೆಂಡ-ಹಣ ಹಂಚಬಾರದು ಎಂಬುದು 1971ರಲ್ಲಿ ರಚಿಸಲಾದ ನೀತಿಸಂಹಿತೆಯಲ್ಲೇ ಇದ್ದ ನಿಯಮ. ಆದರೆ ಅದು ಕರಾರುವಾಕ್ಕಾಗಿ ಜಾರಿಗೆ ಬಂದದ್ದು ಶೇಷನ್ ಅಧಿಕಾರ ವಹಿಸಿಕೊಂಡ ನಂತರ. ಚುನಾವಣೆ ನಡೆಯುವ ಆರು ದಿನ ಮುಂಚಿನಿಂದ ಮದ್ಯ ವ್ಯಾಪಾರ ಬಂದ್ ಮಾಡಲು ಶೇಷನ್ ಸೂಚನೆ ಕೊಟ್ಟರು. ಒಂದು ಪ್ರಮಾಣದಲ್ಲಿ ಅದು ಪರಿಣಾಮ ಬೀರಿದೆ ಕೂಡ.

ಗುರುತು ಚೀಟಿ: ಮತದಾರರಿಗೆ ಕಡ್ಡಾಯ ಗುರುತಿನ ಚೀಟಿ ಕೊಡಬೇಕೆಂಬ ನಿರ್ಣಯವೂ ಹೊಸತಾಗಿರಲಿಲ್ಲ. ಆದರೆ ಅದನ್ನು ಜಾರಿಗೊಳಿಸಲು ತೀರ್ವನಿಸಿದ ಶೇಷನ್, ಈ ನಿಯಮ ಜಾರಿಗೆ 1994 ಡಿಸೆಂಬರ್ 31ರ ಗಡುವು ನೀಡಿದರು. ಗುರುತಿನ ಚೀಟಿಗೆಂದೇ ಮೂರೂವರೆ ಸಾವಿರ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡುವ ಐತಿಹಾಸಿಕ ತೀರ್ವನವನ್ನು ಅವರು ತೆಗೆದುಕೊಂಡರು. ಗುರುತಿನ ಚೀಟಿ ಕಡ್ಡಾಯವಾಗಿ ಜಾರಿಗೆ ಬಂತು.

ಪಕ್ಷೇತರರಿಗೆ ಕಡಿವಾಣ: ಚುನಾವಣೆಗಳಲ್ಲಿ ಪಕ್ಷೇತರ ಅಭ್ಯರ್ಥಿಗಳ ಹಾವಳಿ ಮಿತಿ ಮೀರಿದಾಗ ಅದಕ್ಕೆ ಕಡಿವಾಣ ಹಾಕಿದರು. ಪಕ್ಷೇತರ ಅಭ್ಯರ್ಥಿ ಸಾಮಾನ್ಯ ವರ್ಗಕ್ಕೆ ಸೇರಿದ್ದರೆ 1 ಲಕ್ಷ ರೂ., ಪರಿಶಿಷ್ಟ ಜಾತಿ/ಪಂಗಡಕ್ಕೆ ಸೇರಿದ್ದರೆ 50 ಸಾವಿರ ರೂ. ಚುನಾವಣಾ ಠೇವಣಿ ಇಡಬೇಕು. ಆ ಚುನಾವಣೆಯಲ್ಲಿ ಚಲಾವಣೆ ಆದ ಮತಗಳಲ್ಲಿ ಕನಿಷ್ಠ ಕಾಲುಭಾಗ ಮತ ಪಡೆದರೆ ಮಾತ್ರ ಠೇವಣಿ ಮೊತ್ತ ವಾಪಸು ಕೊಡಲಾಗುವುದೆಂಬ ನಿಯಮ ಮಾಡಿದ ಬಳಿಕ ಗೊತ್ತುಗುರಿ ಇಲ್ಲದೆ ಚುನಾವಣೆಗೆ ಸ್ಪರ್ಧಿಸುವವರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ.

ಮತದಾರ ಪಟ್ಟಿ: ಮತದಾರರ ಪಟ್ಟಿ ಕಂಪ್ಯೂಟರೀಕರಣಕ್ಕೆ ಕ್ರಮವಾದದ್ದು ಕೂಡ ತೊಂಭತ್ತರ ದಶಕದಲ್ಲೇ. ಅದು ಕೂಡ ಕರ್ನಾಟಕದಲ್ಲೇ 1998ರಲ್ಲಿ ಮೊದಲ ಬಾರಿಗೆ ಆಚರಣೆಗೆ ಬಂತು. ಅದರಿಂದಾಗಿ ಬೇಕಾಬಿಟ್ಟಿ ಮತದಾರರ ಪಟ್ಟಿ ತಯಾರಿಕೆಗೆ/ಮತದಾರ ಪಟ್ಟಿಯಿಂದ ಹೆಸರು ಅಳಿಸಿ ಹಾಕುವಿಕೆಗೆ ಗಣನೀಯ ಪ್ರಮಾಣದಲ್ಲಿ ಕಡಿವಾಣ ಬಿತ್ತು.

ಇವಿಎಂ ಬಳಕೆ ಕ್ರಾಂತಿಕಾರಿ ನಿರ್ಧಾರ: 1982ರಲ್ಲಿ ಮೊದಲ ಬಾರಿಗೆ ಕೇರಳದಲ್ಲಿ ಪ್ರಾಯೋಗಿಕವಾಗಿ ಎರಡು ಬೂತ್​ಗಳಲ್ಲಿ ಇವಿಎಂ (Electronic Voting Machines)ಬಳಕೆ ಮಾಡಲಾಯಿತು. ಎಲ್ಲ ರೀತಿಯ ತಾಂತ್ರಿಕ ಮತ್ತು ಕಾನೂನಾತ್ಮಕ ಸಮಸ್ಯೆ ಬಗೆಹರಿಸಿಕೊಂಡ ಬಳಿಕ 1998ರಲ್ಲಿ ದೆಹಲಿ, ಮಧ್ಯಪ್ರದೇಶ, ರಾಜಸ್ಥಾನದ 16 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಪೂರ್ಣವಾಗಿ ಇವಿಎಂ ಬಳಕೆಗೆ ಚುನಾವಣಾ ಆಯೋಗ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿತು. ಮುಂದೆ 1999ರಲ್ಲಿ ಗೋವಾ ವಿಧಾನಸಭಾ ಚುನಾವಣೆ ಮತ್ತು 2004ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಸಂಪೂರ್ಣವಾಗಿ ಮತಯಂತ್ರ ಬಳಕೆ ಜಾರಿಗೆ ಬಂತು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಿವಿಪ್ಯಾಟ್(ಮತಖಾತರಿ ಚೀಟಿ) ಪಡೆಯುವ ವ್ಯವಸ್ಥೆ ಬಂದಿದೆ. ಇದೆಲ್ಲದರ ನೇರ ಪರಿಣಾಮ ಎಂದರೆ ಚುನಾವಣೆಯಿಂದ ಚುನಾವಣೆಗೆ ಮತದಾನ ಪ್ರಮಾಣ ಗಣನೀಯವಾಗಿ ಹೆಚ್ಚಳ ಆಗುತ್ತಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚೆಚ್ಚು ಕಂಡುಬರುತ್ತಿದೆೆ. ಇಷ್ಟೆಲ್ಲ ಆಗಿದೆ ನಿಜ, ಆದರೆ ಆಗಬೇಕಾದ್ದು ಇನ್ನೂ ಸಾಕಷ್ಟಿದೆ. ಉದಾಹರಣೆಗೆ, ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ಬೇರೆ-ಬೇರೆ ವೆಚ್ಚ ಮಿತಿ ಇದೆ. ಆದರೆ ಅದು ಹೆಸರಿಗೆ ಮಾತ್ರ. ಚುನಾವಣಾ ಆಯೋಗ ನಿಗದಿ ಮಾಡಿದ ಮಿತಿಗಿಂತ ಎಷ್ಟೋ ಪಟ್ಟು ಹೆಚ್ಚಿನ ವೆಚ್ಚವನ್ನು ಅಭ್ಯರ್ಥಿಗಳು ಮಾಡುತ್ತಲೇ ಇದ್ದಾರೆ.

ಅಪರಾಧಿಗಳನ್ನು ಚುನಾವಣೆಯಿಂದ ದೂರ ಇಡುವುದಕ್ಕೆ ನೀತಿಸಂಹಿತೆಯಲ್ಲಿ, ಚುನಾವಣೆ ಕಾಯ್ದೆಯಲ್ಲಿ ಅವಕಾಶ ಇದೆ. ಆದರೆ ಅದು ಪರಿಣಾಮಕಾರಿಯಾಗಿ ಜಾರಿಗೆ ಬಂದಿಲ್ಲ. ಸಂವಿಧಾನದ ಆಶಯಗಳು ಮತ್ತು ಪುಸ್ತಕದಲ್ಲಿರುವ ಕಾಯ್ದೆಯ ಅಂಶಗಳು ಜಾರಿಗೆ ಬರದಿರುವುದಕ್ಕೆ ಕಾರಣಗಳು ಇಲ್ಲದಿಲ್ಲ. ಉದಾಹರಣೆಗೆ, ತೊಂಭತ್ತರ ದಶಕದ ಆರಂಭದಲ್ಲಿ ಟಿ.ಎನ್.ಶೇಷನ್ ಭ್ರಷ್ಟ ರಾಜಕಾರಣಿಗಳ ಮೈಚಳಿ ಬಿಡಿಸಿದರು. ಆದರೆ ಅದೇ ಕಾರಣಕ್ಕೆ, ಶೇಷನ್ ಕೈ ಕಟ್ಟಿಹಾಕಬೇಕೆಂಬ ಉದ್ದೇಶದಿಂದ ಸಂವಿಧಾನಕ್ಕೆ ತಿದ್ದುಪಡಿ ತಂದು ಏಕಸದಸ್ಯ ಚುನಾವಣಾ ಆಯೋಗದ ಬದಲು ಬಹುಸದಸ್ಯ ವ್ಯವಸ್ಥೆ ಜಾರಿಗೆ ತರಲಾಯಿತು. ಆದರೆ ಒಂದೇ ಖುಷಿ ವಿಚಾರ ಎಂದರೆ ವ್ಯವಸ್ಥೆ ಬದಲಾದರೂ, ಆಯುಕ್ತರು ಬದಲಾದರೂ ಚುನಾವಣಾ ಆಯೋಗ ತನ್ನ ಖದರನ್ನು ಹಾಗೇ ಕಾಯ್ದುಕೊಂಡು ಹೋಗುತ್ತಿದೆ.

ಈ ಕೆಳಗೆ ಉಲ್ಲೇಖಿಸಿದ ಕೆಲ ಸುಧಾರಣೆಗಳು ಭಾರತದ ರಾಜಕೀಯ ವ್ಯವಸ್ಥೆಯ ಶುದ್ಧೀಕರಣ ಮತ್ತು ಪರಿಣಾಮಕಾರಿ ಆಡಳಿತ ವ್ಯವಸ್ಥೆಯ ದೃಷ್ಟಿಯಿಂದ ಮಹತ್ವದ್ದು.

  • ಚುನಾವಣಾ ವೆಚ್ಚವನ್ನು ಸರ್ಕಾರವೇ ಭರಿಸುವುದು: ಇದು ಸಮರ್ಥರು, ಶುದ್ಧಹಸ್ತರು ರಾಜಕೀಯ ವ್ಯವಸ್ಥೆಯೊಳಕ್ಕೆ ಬರುವ ದೃಷ್ಟಿಯಿಂದ ಬಹಳ ಮಹತ್ವದ್ದು. ಆಚರಣೆ ಕ್ಲಿಷ್ಟ, ಆದರೆ ಅಸಾಧ್ಯವಲ್ಲ.
  • ಅಭ್ಯರ್ಥಿಗಳ ಅರ್ಹತೆ ಮಾನದಂಡ: ಅರ್ಹತೆಯಲ್ಲಿ ಎರಡು ವಿಧ. ಒಂದು ವಿದ್ಯಾರ್ಹತೆ. ಮತ್ತೊಂದು ನೈತಿಕ ಅರ್ಹತೆ. ಭಾರತದ ಆಡಳಿತದ ವ್ಯವಸ್ಥೆಯಲ್ಲಿ ಕಾರಕೂನನಿಗೂ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ. ಆದರೆ ಐಎಎಸ್ ಅಧಿಕಾರಿಗಳಿಗೆ ಆದೇಶ ಮಾಡಿ ಆಡಳಿತ ನಡೆಸುವವರಿಗೆ ವಿದ್ಯಾರ್ಹತೆಯ ಮಾನದಂಡ ಇಲ್ಲದಿರುವುದು ವಿಪರ್ಯಾಸವೇ ಸರಿ.
  • ನೈತಿಕ ಅರ್ಹತೆ: ಕ್ರಿಮಿನಲ್ ಅಪರಾಧಿಗಳು/ರಾಜಕೀಯವನ್ನೇ ದುಡ್ಡು ದುಡಿಯುವ ಉದ್ಯೋಗ ಮಾಡಿಕೊಂಡಿರುವವರು/ಉದ್ಯಮ ನಡೆಸುವ ಉದ್ದೇಶಕ್ಕೆ ರಾಜಕೀಯ ಅಧಿಕಾರ ಹಿಡಿಯುವ ಭ್ರಷ್ಟರನ್ನು ಚುನಾವಣೆಯಿಂದ ದೂರ ಇಡಲು ಪರಿಣಾಮಕಾರಿ ವ್ಯವಸ್ಥೆ ಬರಬೇಕಿದೆ.
  • ಚುನಾವಣೆ ಗೆಲುವಿನಿಂದ ಸಿಗುವ ಅಧಿಕಾರವನ್ನು ಸ್ವಂತದ
  • ಕೆಲಸಕ್ಕೆ ಬಳಸುವುದನ್ನು ಕ್ರಿಮಿನಲ್ ಅಪರಾಧ ಎಂದು
  • ಪರಿಗಣಿಸಬೇಕು. ಜನಪ್ರತಿನಿಧಿಗಳಿಗೆ ಕೊಡುವ ವೇತನಭತ್ಯೆಯನ್ನು ವೈಜ್ಞಾನಿಕ ರೀತಿಯಲ್ಲಿ ನಿಗದಿಪಡಿಸಬೇಕು.
  • ಅವಧಿ ಮಿತಿ: ಇಂದು ನಮ್ಮ ವ್ಯವಸ್ಥೆ ನಿಂತ ನೀರಾಗಲು ಇದೇ ಮುಖ್ಯ ಕಾರಣ. ಅಪ್ಪ, ಮಗ, ಮೊಮ್ಮಗ ಅಧಿಕಾರ ಹಿಡಿಯುವ ವಂಶಾಡಳಿತ, ಓರ್ವ ಎಂಪಿ/ಎಂಎಲ್​ಎ ಆಜೀವ ಜನಪ್ರತಿನಿಧಿಯಾಗುವ ಅಧಿಕಾರ ಗುತ್ತಿಗೆ ಪದ್ಧತಿ ಕೊನೆಗೊಳ್ಳಬೇಕು. ಅದು ಕಾಯ್ದೆಯಿಂದ ಸಾಧ್ಯವಾಗದೆ ಹೋದರೆ ಮತದಾರರು ತೀರ್ಮಾನ ಮಾಡಿದರೂ ಸಾಕು.

ಒಟ್ಟಾರೆ ಹೇಳುವುದಿಷ್ಟೆ, ಶೇಷನ್ ಬಿತ್ತಿದ ಬೀಜಕ್ಕೆ ನಾವೇ ನೀರೆರೆದು ಅದು ಮೊಳಕೆಯೊಡೆದು ಹೆಮ್ಮರ ಆಗುವಂತೆ ಮಾಡಬೇಕು. ಓರ್ವ ಶೇಷನ್ ಇಷ್ಟು ಬದಲಾವಣೆ ಮಾಡಬಲ್ಲರಾದರೆ ನಾವು ಕರ್ನಾಟಕದ ಆರು ಕೋಟಿ ಜನರು/ದೇಶದ ನೂರಿಪ್ಪತ್ತೈದು ಕೋಟಿ ಜನರು ಇನ್ನೇನೆಲ್ಲ ಮಾಡಬಹುದು! ಆಲೋಚಿಸಬೇಕಲ್ಲವೆ?

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top