ಹೆದ್ದಾರಿ ಕಾಮಗಾರಿಗಳಿಂದ ಚೀನಿ ಕಂಪನಿಗಳು ಔಟ್ ಕೈಗಾರಿಕೋದ್ಯಮಗಳಲ್ಲೂ ಡ್ರ್ಯಾಗನ್ ಹೂಡಿಕೆಗೆ ಬ್ರೇಕ್.
ಹೊಸದಿಲ್ಲಿ: ಪೂರ್ವ ಲಡಾಖ್ ಗಡಿ ಸಂಘರ್ಷದ ಬಳಿಕ ಚೀನಾ ವಿರುದ್ಧ ಭಾರತ ದಿಟ್ಟ ಕ್ರಮಗಳನ್ನು ಮುಂದುವರಿಸಿದೆ. 59 ಆ್ಯಪ್ಗಳ ನಿಷೇಧದ ಮೂಲಕ ಚೀನಾಗೆ ಬಿಸಿ ಮುಟ್ಟಿಸಿದ್ದ ಭಾರತ ಈಗ ಹೆದ್ದಾರಿ ಕಾಮಗಾರಿಗಳಿಂದ ಚೀನಿ ಕಂಪನಿಗಳನ್ನು ಸಂಪೂರ್ಣವಾಗಿ ಹೊರಗಿಡಲು ನಿರ್ಧರಿಸಿದೆ. ಅಲ್ಲದೆ, ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಕೈಗಾರಿಕೆ ಸೇರಿದಂತೆ ಇತರೆ ವಲಯಗಳಲ್ಲೂ ಚೀನಿ ಹೂಡಿಕೆಗೆ ಅವಕಾಶ ನೀಡದಿರಲು ತೀರ್ಮಾನಿಸಲಾಗಿದೆ. ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಬುಧವಾರ ಈ ವಿಷಯ ಪ್ರಕಟಿಸಿದ್ದಾರೆ.
‘‘ಚೀನಾ ನಂಟು ಹೊಂದಿರುವ ಯಾವುದೇ ಕಂಪನಿಗೆ ರಸ್ತೆ ಕಾಮಗಾರಿ ಗುತ್ತಿಗೆ ನೀಡುವುದಿಲ್ಲ. ಭಾರತದ ಕಂಪನಿಗಳ ಜತೆ ಜಂಟಿಯಾಗಿ ಯೋಜನೆ ಕೈಗೊಳ್ಳಲೂ ಅವಕಾಶ ನೀಡುವುದಿಲ್ಲ. ಈ ಸಂಬಂಧ ಸದ್ಯದಲ್ಲೇ ಪರಿಷ್ಕೃತ ನೀತಿಯನ್ನು ಬಿಡುಗಡೆ ಮಾಡಲಾಗುವುದು. ಭಾರತದ ಹೆಚ್ಚಿನ ಕಂಪನಿಗಳಿಗೆ ಹೆದ್ದಾರಿ ಯೋಜನೆಗಳಲ್ಲಿ ತೊಡಗಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿಅರ್ಹತೆ ಮಾನದಂಡಗಳನ್ನು ವಿಸ್ತರಿಸಲಾಗುವುದು,’’ ಎಂದು ಅವರು ತಿಳಿಸಿದ್ದಾರೆ.
ಹಾಲಿ ಯೋಜನೆಗೆ ರೀ ಬಿಡ್ಡಿಂಗ್
ಈಗಾಗಲೇ ಚೀನಾದ ಕಂಪನಿಗಳು ಭಾರತದ ಕಂಪನಿ ಜತೆ ಜಂಟಿಯಾಗಿ ರಸ್ತೆ ಕಾಮಗಾರಿ ಗುತ್ತಿಗೆ ಪಡೆದಿದ್ದರೆ, ಅಂತಹ ಯೋಜನೆಗಳಿಗೆ ಹೊಸದಾಗಿ ಬಿಡ್ಡಿಂಗ್ ಆಹ್ವಾನಿಸಲಾಗುತ್ತದೆ. ಹಾಲಿ ಮತ್ತು ಭವಿಷ್ಯದ ಎಲ್ಲಾ ಯೋಜನೆಗಳಿಗೆ ಹೊಸ ನಿಯಮ ಅನ್ವಯವಾಗಲಿದೆ.
4ಜಿ ಟೆಂಡರ್ ಕ್ಯಾನ್ಸಲ್
ಟೆಲಿಕಾಂ ಕಂಪನಿಗಳಾದ ಬಿಎಸ್ಸೆನ್ನೆಲ್ ಮತ್ತು ಎಂಎನ್ಟಿಎಲ್ ತಮ್ಮ 4ಜಿ ನೆಟ್ವರ್ಕ್ ಅಪ್ಗ್ರೇಡ್ ಸಂಬಂಧ ಚೀನಾದ ಕಂಪನಿಗಳ ಜತೆ ಒಪ್ಪಂದ ರದ್ದುಗೊಳಿಸಿವೆ. ಗಡಿ ಸಂಘರ್ಷದ ಬಳಿಕ ಸರಕಾರದ ಸೂಚನೆ ಹಿನ್ನೆಲೆಯಲ್ಲಿ ಚೀನಾ ಮೂಲದ ‘ಹುವಾಯ್’ ಮತ್ತು ‘ಜೆಡ್ಟಿಇ’ ಸಂಸ್ಥೆಗಳ ಜತೆ ಒಪ್ಪಂದ ರದ್ದಾಗಿದೆ. 2 ವಾರದಲ್ಲಿ ಹೊಸ ಟೆಂಡರ್ ಕರೆಯುವ ಸಾಧ್ಯತೆಯಿದೆ.
ವೀಬೊದಿಂದ ಮೋದಿ ಲಾಗ್ಆಫ್
ಚೀನಾದ ಆ್ಯಪ್ ನಿಷೇಧ ಬೆನ್ನಲ್ಲೇ ಪ್ರಧಾನಿ ಮೋದಿ ಅವರು ಚೀನಾದ ಸಾಮಾಜಿಕ ಜಾಲತಾಣ ‘ವೀಬೊ’ದಿಂದ ನಿರ್ಗಮಿಸಿದ್ದಾರೆ. ಮೋದಿ ಅವರ ಪ್ರೊಫೈಲ್ ಫೋಟೊ, ಪೋಸ್ಟ್, ಕಾಮೆಂಟ್ಗಳನ್ನು ತೆಗೆದುಹಾಕಲಾಗಿದೆ. ಆದರೆ, ಚೀನಾದ ಅಧ್ಯಕ್ಷರ ಜತೆ ಇರುವ ಎರಡು ಫೊಟೊಗಳನ್ನು ತೆಗೆಯಲು ‘ವೀಬೊ’ ಅವಕಾಶ ನೀಡಿಲ್ಲ.
ಅಮೆರಿಕ ಸ್ವಾಗತ
ಚೀನಾ ಮೂಲದ ಆ್ಯಪ್ ಬ್ಯಾನ್ ಕ್ರಮಕ್ಕೆ ಅಮೆರಿಕ ಬೆಂಬಲ ವ್ಯಕ್ತಪಡಿಸಿದೆ. ಭಾರತದ ಈ ನಡೆಯಿಂದ ರಾಷ್ಟ್ರೀಯ ಭದ್ರತೆ ಹೆಚ್ಚಲಿದೆ ಎಂದು ಅಮೆರಿಕ ವಿದೇಶಾಂಗ ಸಚಿವ ಮೈಕ್ ಪಾಂಪಿಯೊ ಹೇಳಿದ್ದಾರೆ.