ಚೀನಾ… ನಮ್ಮ ಗಡೀನೂ ನಿಂದೇನಾ?

ಯಾವಾಗಲೂ ಕಿರಿಕಿರಿಯುಂಟು ಮಾಡುವ ನೆರೆಮನೆಯವನ ರೀತಿಯಲ್ಲಿವರ್ತಿಸುವ ಚೀನಾ ಭಾರತವೂ ಸೇರಿದಂತೆ  ತನ್ನ ನೆರೆಯ ಬಹುತೇಕ ರಾಷ್ಟ್ರಗಳ ಜೊತೆಗೆ ಗಡಿ ಸಂಘರ್ಷವನ್ನು ಕಾಯ್ದುಕೊಂಡು ಬಂದಿದೆ. ಇದೀಗ ಭಾರತದ ಲಡಾಖ್ ಪ್ರದೇಶದಲ್ಲಿನ ಗ್ಯಾಲ್ವನ್ ನದಿ ಕಣಿವೆ, ಗಡಿ ನಿಯಂತ್ರಣ ರೇಖೆಯ ಪಾಂಗೊಂಗ್ ತ್ಸೋ ಗಡಿಗೆ ಸಂಬಂಧಿಸಿದಂತೆ ಭಾರತದ ಜೊತೆ ತಿಕ್ಕಾಟಕ್ಕೆ ಇಳಿದಿದೆ.

ಕೊರೊನಾ ವೈರಸ್ಗೆ ಸಂಬಂಧಿಸಿದ ಮಾಹಿತಿ ಮುಚ್ಚಿಟ್ಟಿದ್ದಕ್ಕಾಗಿ ಜಗತ್ತಿನ ಬಹುತೇಕ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿರುವ ಚೀನಾ ಇದೀಗ ಭಾರತದ ಜತೆಗೆ ಗಡಿ ಕ್ಯಾತೆ ತೆಗೆದಿದೆ.
ಈ ಚೀನಾದ ಗಡಿ ಕ್ಯಾತೆಗಳು ಬರೀ ಭಾರತದೊಂದಿಗೆ ಮಾತ್ರವೇ ಇದೆ ಎಂದು ಭಾವಿಸಬೇಕಿಲ್ಲ. ಚೀನಾ ಒಟ್ಟು 14 ನೆರೆ ರಾಷ್ಟ್ರಗಳನ್ನು ಹೊಂದಿದ್ದು, ಈ ಪೈಕಿ ಕೆಲವು ರಾಷ್ಟ್ರಗಳನ್ನು ಹೊರತುಪಡಿಸಿದರೆ, ಅಂದರೆ ಪಾಕಿಸ್ತಾನ ಮತ್ತು ನೇಪಾಳ ಬಿಟ್ಟು ಉತ್ತರ ಕೊರಿಯಾ, ರಷ್ಯಾ, ಮಂಗೊಲಿಯಾ, ಕಝಖಸ್ತಾನ, ಕಿರ್ಗಿಸ್ತಾನ, ತಜಿಕಿಸ್ತಾನ, ಅಫಘಾನಿಸ್ತಾನ, ಭಾರತ, ಭೂತಾನ್, ಮ್ಯಾನ್ಮಾರ್, ಲಾವೋ ಮತ್ತು ವಿಯೆಟ್ನಾಮ್‌ಗಳೊಂದಿಗೆ ಗಡಿ ತಂಟೆ, ತಕರಾರು ಇಟ್ಟುಕೊಂಡಿದೆ.
ಇದನ್ನು ಯಾಕೆ ಹೇಳಬೇಕಾಯಿತು ಎಂದರೆ, ಚೀನಾ ಒಂದು ರೀತಿಯಲ್ಲಿ ಜಗಳಗಂಟಿ ನೆರೆಮನೆ ಇದ್ದ ಹಾಗೆ. ಯಾವಾಗಲೂ ನೆರೆಹೊರೆಯವರೊಂದಿಗೆ ಕಿರಿಕ್ ಮಾಡಿಕೊಳ್ಳುತ್ತಲೇ ಇರುತ್ತದೆ.
ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದವು ಹಲವು ದಶಕಗಳಿಂದ ಇದೆ. ಅಕ್ಸಾಯ್ ಚಿನ್, ಡೆಪ್ಸಾಂಗ್ ಪ್ಲೇನ್ಸ್, ಟ್ರಾನ್ಸ್-ಕರಕೋರಮ್ ಟ್ರ್ಯಾಕ್ಟ್ (ಶಕ್ಸ್ಗಮ್ ನದಿ ಪ್ರದೇಶ), ಡೋಕ್ಲಾಮ್, ಅರುಣಾಚಲ ಪ್ರದೇಶ ಗಡಿ ವಿವಾದ ಸೇರಿದಂತೆ ಅನೇಕ ವಿವಾದಗಳಿವೆ. ಇದೀಗ ಆ ಸಾಲಿಗೆ ಲಡಾಖ್ ಪ್ರಾಂತ್ಯದಲ್ಲಿರುವ ಆಕ್ಸಾಯ್ ಚಿನ್ ಭಾಗದ ಗ್ಯಾಲ್ವನ್ ನದಿ ಕಣಿವೆ ಗಡಿ, ಎಲ್ಎಸಿಯಲ್ಲಿರುವ ಪಾಂಗೊಂಗ್ ಗಡಿಯು ತಿಕ್ಕಾಟಕ್ಕೆ ಕಾರಣವಾಗಿದೆ. ತನ್ನ ಪ್ರದೇಶದಲ್ಲಿ ಭಾರತ ಭದ್ರತಾ ಕ್ಯಾಂಪ್‌ಗಳನ್ನು ನಿರ್ಮಿಸುತ್ತಿದ್ದು, ಇದರಿಂದ ತನ್ನ ಪ್ಯಾಟ್ರೋಲಿಂಗ್ಗೆ ಅಡ್ಡಿಯಾಗಿದೆ ಎಂದು ಚೀನಾ ಆಕ್ಷೇಪ ವ್ಯಕ್ತಪಡಿಸಿದೆ. ಪ್ರಸ್ತುತ ಇಲ್ಲಿ ಉಭಯ ದೇಶಗಳ ಯೋಧರು ಮುಖಾಮುಖಿ ಎದೆಗೊಟ್ಟು ನಿಂತಿದ್ದಾರೆ. ಈ ಕಣಿವೆ ಹಿಂದೆ ಕೂಡ ಒಮ್ಮೆ ತಿಕ್ಕಾಟಕ್ಕೆ ಕಾರಣವಾಗಿದೆ.
ಕಳೆದ ಒಂದು ತಿಂಗಳಲ್ಲಿ ಚೀನಾ ಭಾರತದ ಜೊತೆ ಮೂರು ಕಡೆ ಗಡಿ ತಕರಾರು ಎತ್ತಿದೆ. ಮೊದಲನೆಯದು, ಮೇ 5ರಂದು ಲಡಾಖ್‌ನಲ್ಲಿ ಭಾರತ ಹಾಗೂ ಚೀನಾದ ಗಡಿಯಾಗಿರುವ ಪಾಂಗೊಂಗ್ ಸರೋವರದ ಮೇಲೆ ಗಡಿ ಉಲ್ಲಂಘಿಸಿ ಚೀನಾದ ಹೆಲಿಕಾಪ್ಟರ್‌ಗಳು ಹಾರಾಡಿದವು. ಇದನ್ನು ಭಾರತದ ಸೇನೆ ಪ್ರತಿಭಟಿಸಿತು. ಎರಡನೆಯದು ನಕು ಲಾ ಪಾಸ್. ಸಿಕ್ಕಿಂ ಗಡಿಭಾಗದಲ್ಲಿರುವ ಈ ನಕು ಲಾ ಪಾಸ್‌ನಲ್ಲಿ ಮೇ 10ರಂದು ಉಂಟಾಗಿದ್ದ ಚೀನಾ- ಭಾರತ ಯೋಧರ ಘರ್ಷಣೆ ನಂತರ ಸ್ಥಳೀಯ ಮಾತುಕತೆಯಿಂದ ಪರಿಹಾರವಾಯಿತು. ಬಳಿಕ, ಈಗ ಗ್ಯಾಲ್ವನ್ ನದಿ ಕಣಿವೆಯ ಗಡಿಯ ಸಂಘರ್ಷ ಶುರುವಾಗಿದೆ.

ಇಂದಿನಿಂದ ಕಮಾಂಡರ್ ಸಮ್ಮೇಳನ
ಬುಧವಾರದಿಂದ ಆರಂಭವಾಗಲಿರುವ ಮೂರು ದಿನಗಳ ಕಮಾಂಡರ್‌ಗಳ ಸಮ್ಮೇಳನದಲ್ಲಿ ಭಾರತೀಯ ಸೇನೆಯು ಪೂರ್ವ ಲಡಾಖ್‌ನಲ್ಲಿ ಭಾರತ ಮತ್ತು ಚೀನಾ ನಡುವೆ ಉದ್ಭವವಾಗಿರುವ ಉದ್ವೀಗ್ನ ಸ್ಥಿತಿಯ ಕುರಿತು ಪರಿಶೀಲನೆ ನಡೆಸಲಿದೆ. ಪೂರ್ವ ಲಡಾಖ್‌ನ ಪಾಂಗೊಂಗ್, ಗ್ಯಾಲ್ವನ್ ಕಣಿವೆ, ಡೆಮ್ಚಾಕ್ ಮತ್ತು ದೌಲತ್ ಬೇಗ್ ಓಲ್ಡೀ ಪ್ರದೇಶಗಳಲ್ಲಿ ಭಾರತ ಮತ್ತು ಚೀನಾ ಯೋಧರು ಯುದ್ಧ ಸನ್ನದ್ಧ ಸ್ಥಿತಿಯಲ್ಲಿದ್ದಾರೆ. ಹಲವು ಬಾರಿ ಚಕಮಕಿಯೂ ನಡೆದಿದೆ. ಹಾಗಾಗಿ, ಸಮ್ಮೇಳನದಲ್ಲಿ ಈ ಕುರಿತೇ ಹೆಚ್ಚು ಚರ್ಚೆ ನಡೆಯಲಿದೆ. ಈ ಉದ್ವಿಗ್ನ ಪರಿಸ್ಥಿತಿಯನ್ನು ಮಾತುಕತೆ ಮೂಲಕ ತಿಳಿಗೊಳಿಸುವ ಪ್ರಯತ್ನ ಎರಡೂ ಕಡೆಗಳಿಂದಲೂ ನಡೆದಿದೆಯಾದರೂ ಅದು ಅಷ್ಟು ಬೇಗ ತಿಳಿಯಾಗುವ ಸಾಧ್ಯತೆಗಳಿಲ್ಲ. ಮೇ 5ರಂದು ಉಭಯ ರಾಷ್ಟ್ರಗಳ ಯೋಧರ ನಡುವೆ ಚಕಮಕಿ ನಡೆಯಿತು.
ಈ ಹಿಂಸಾಚಾರದಲ್ಲಿ ಸುಮಾರು 100 ಸೈನಿಕರು ಗಾಯಗೊಂಡಿಧಿದ್ದಾರೆ. ಮೇ 9ರಂದು ಇದೇ ರೀತಿಯ ಹಿಂಸಾಚಾರ ಉತ್ತರ ಸಿಕ್ಕಿಮ್ ಗಡಿಯಲ್ಲೂ ನಡೆದಿದೆ.

73 ದಿನಗಳ ಉದ್ವಿಗ್ನ ಸ್ಥಿತಿ
ಭಾರತ ಮತ್ತು ಚೀನಾ ನಡುವೆ ಇದೇ ರೀತಿಯ ಉದ್ವಿಗ್ನ ಸ್ಥಿತಿ 2017ರಲ್ಲಿ ಡೋಕ್ಲಾಮ್‌ನಲ್ಲಿ ನಡೆದಿತ್ತು. ಸುಮಾರು 73 ದಿನಗಳ ಎರಡೂ ಕಡೆಯಿಂದಲೂ ಸೈನಿಕರು ಸನ್ನದ್ಧ ಸ್ಥಿತಿಯಲ್ಲೇ ಇದ್ದರು. ಅಣ್ವಸ್ತ್ರಗಳನ್ನು ಹೊಂದಿರುವ ಎರಡು ಬಲಾಢ್ಯ ರಾಷ್ಟ್ರಗಳ ನಡುವೆ ಯುದ್ಧವೇ ನಡೆಯಬಹುದು ಎಂದು ಜಗತ್ತು ಭಾವಿಸಿತ್ತು. ಆದರೆ, ಉಭಯ ರಾಷ್ಟ್ರಗಳು ಮಾತುಕತೆ ಮೂಲಕ ವಿವಾದವನ್ನು ಬಗೆಹರಿಸಿಕೊಂಡಿದ್ದವು. ಡೋಕ್ಲಾಮ್ ವಿವಾದ ಬಳಿಕ, 2018ರ ಏಪ್ರಿಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ಚೀನಾದ ವುಹಾನ್ ಸಿಟಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಕಳದೆ ವರ್ಷ ಮೋದಿ ಅವರು ಕ್ಸಿ ಜಿನ್ಪಿಂಗ್ ಅವರನ್ನು ಚೆನ್ನೈ ಸಮೀಪದ ಮಹಾಬಲಿಪುರಂನಲ್ಲಿ ಸ್ವಾಗತಿಸಿ, ಮಾತುಕತೆ ನಡೆಸಿದ್ದರು. ಭಾರತವಂತೂ, ಒಂದು ಗುಂಡೂ ಹಾರದೇ ಡೋಕ್ಲಾಮ್ ಗಡಿ ವಿವಾದ ಬಗೆ ಹರಿದಿದೆ ಎಂದು ಹೇಳಿತ್ತು. ಆದರೆ, ಚೀನಾ ಮತ್ತೆ ಗ್ಯಾಲ್ವನ್ ಕಣಿವೆಯ ವಿವಾದವನ್ನು ಮುಂದು ಮಾಡಿ ಕಾಲಕೆರೆದು ನಿಂತಿದೆ.

ಅರುಣಾಚಲ ತನ್ನದೆನ್ನುವ ಚೀನಾ
ಎಲ್ಎಸಿಗುಂಟ 3,488 ಕಿ.ಮೀ. ಒಳಗೊಂಡಿರುವ ಗಡಿ ವಿವಾದವು ಭಾರತ ಮತ್ತು ಚೀನಾ ನಡುವೆ ಇದೆ. ಭಾರತೀಯ ಗಣರಾಜ್ಯದ ಭಾಗವಾಗಿರುವ ಅರುಣಾಚಲ ಪ್ರದೇಶ ಚೀನಾ ತನ್ನ ದೇಶದ ಭಾಗವೆಂದು ಹಕ್ಕು ಸಾಧಿಸುತ್ತಿದೆ. ಅರುಣಾಚಲ ಪ್ರದೇಶ ಟಿಬೆಟ್‌ನ ದಕ್ಷಿಣ ಭಾಗ ಎನ್ನುವುದು ಚೀನಾದ ಹಕ್ಕುದಾರಿಕೆಯಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಆಗಾಗ ಸಂಘರ್ಷಗಳು ಆಗುತ್ತಲೇ ಇರುತ್ತವೆ. ನಕಾಶೆಯಲ್ಲೂ ಚೀನಾ ಅರುಣಾಚಲ ಪ್ರದೇಶವನ್ನು ತನ್ನ ದೇಶದ ಭಾಗ ಎಂದು ಗುರುತಿಸಿ ಈ ಹಿಂದೆ ವಿವಾದ ಮಾಡಿತ್ತು. ಇಷ್ಟಾಗಿಯೂ ಉಭಯ ರಾಷ್ಟ್ರಗಳು ಮಾತುಕತೆಯ ಮೂಲಕ ಎದುರಾಗುವ ಸಂಘರ್ಷಗಳನ್ನು ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡುತ್ತಲೇ ಇವೆ. ಉಭಯ ರಾಷ್ಟ್ರಗಳಿಗೂ ಯುದ್ಧ ಮೊದಲ ಆದ್ಯತೆಯಾಗಿಲ್ಲ. ಒಂದೊಮ್ಮೆ ಚೀನಾ ಮತ್ತು ಭಾರತ ನಡುವೆ ಯುದ್ಧವೇನಾದರೂ ಘಟಿಸಿದರೆ ಅದು ಭಯಂಕರವಾಗಲಿದೆ ಎಂಬುದರಲ್ಲಿ ಅನುಮಾನವೇ ಇಲ್ಲ.

ಚೀನಾ ಕಾಲು ಕೆದರುತ್ತಿರುವುದೇಕೆ?
ಚೀನಾ ಯಾಕೆ ಪದೇಪದೆ ಭಾರತದ ಜೊತೆ ಗಡಿ ಸಂಘರ್ಷವನ್ನು ಕೆದಕುತ್ತದೆ ಎಂಬ ಪ್ರಶ್ನೆಗೆ ಉತ್ತರ ಅಷ್ಟು ಸುಲಭವಲ್ಲ. ಯಾಕೆಂದರೆ, ಭೌಗೋಳಿಕವಾಗಿ ತುಂಬ ಜಟೀಲ ಗಡಿಯನ್ನು ಉಭಯ ರಾಷ್ಟ್ರಗಳು ಹೊಂದಿವೆ. ಈ ಗಡಿ ಅಂತಾರಾಷ್ಟ್ರೀಯ ಗಡಿಯಾಗಿಯೂ, ಉಭಯ ರಾಷ್ಟ್ರಗಳ ನಡುವಿನ ಗಡಿ ಆಗಿಯೂ ಗುರುತಿಸಿಕೊಳ್ಳುತ್ತದೆ. ತುಂಬ ಸಂಕೀರ್ಣಮಯವಾಗಿರುವ ಸಂಘರ್ಷವಿದು. ಇದರ ಹೊರತಾಗಿಯೂ ರಾಜಕೀಯ ಕಾರಣಗಳೂ ಇವೆ. ಏಷ್ಯಾದಲ್ಲೇ ತನ್ನ ಪ್ರಭುತ್ವವನ್ನು ಸಾಧಿಸುತ್ತಿರುವ ಚೀನಾಗೆ ಭಾರತವನ್ನು ಬಗ್ಗುಬಡಿಯಲು ಸಾಧ್ಯವಿಲ್ಲ. ಬದಲಾಗಿ ಅಂತಾರಾಷ್ಟ್ರೀಯವಾಗಿ ಚೀನಾಕ್ಕೆ ಅನೇಕ ವಿಷಯಗಳಲ್ಲಿ ಭಾರತ ಠಕ್ಕರ್ ನೀಡಿದೆ. ಚೀನಾದ ಒಬಿಒಆರ್‌ಗೆ ವಿರೋಧ, ಆರ್ಥಿಕ ಸಮರದ ಸಂದರ್ಭದಲ್ಲಿ ಅಮೆರಿಕದ ಪರ ವಹಿಸಿದ ಭಾರತದ ನಿಲುವು, ಮುಕ್ತ ವ್ಯಾಪಾರ ಒಪ್ಪಂದ ಆರ್‌ಸಿಇಪಿಗೆ ಭಾರತ ತೋರಿದ ವಿರೋಧ… ಹೀಗೆ ಅನೇಕ ಸಂಗತಿಗಳಲ್ಲಿ ಉಭಯ ರಾಷ್ಟ್ರಗಳ ನಡುವೆ ಅಭಿಪ್ರಾಯ ಭೇದಗಳಿವೆ. ಇದರಿಂದ ಕೆರಳಿರುವ ಚೀನಾ ಹೇಗಾದರೂ ಭಾರತವನ್ನು ಹಣಿಯಲು ಸಮಯ ಸಿಕ್ಕಾಗಲೆಲ್ಲ ಪ್ರಯತ್ನಿಸುತ್ತಲೇ ಇರುತ್ತದೆ. ಇತ್ತೀಚಿನ ಕೊರೊನಾ ವೈರಸ್ ಸಂಬಂಧವೂ ಚೀನಾ ಇಡೀ ಜಗತ್ತಿನೆದರು ಮುಖಭಂಗ ಎದುರಿಸಿದೆ.

ಮೆಕ್ಮೋಹನ್ ಗೆರೆ
1914ರಲ್ಲಿ ಬ್ರಿಟಿಷ್ ಅಧಿಕಾರಿ, ಭಾರತದಲ್ಲಿ ವಿದೇಶಾಂಗ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಮೆಕ್ಮೋಹನ್ ಎಂಬಾತ ಭಾರತ ಮತ್ತು ಚೀನಾದ ಗಡಿಯನ್ನು ರೂಪಿಸಲು ಒಂದು ರೇಖೆಯನ್ನು ರಚಿಸಿದ್ದಾನೆ. ಭಾರತ ಈ ರೇಖೆಯನ್ನು ಒಪ್ಪಿದರೆ, ಚೀನಾ ಒಪ್ಪಿಲ್ಲ. ಭಾರತ- ಟಿಬೆಟ್ ನಡುವೆ ಆಗಿರುವ ಸಿಕ್ಕಿಂ ಒಪ್ಪಂದವನ್ನೂ ಚೀನಾ ಮಾನ್ಯ ಮಾಡಿಲ್ಲ. ಉಭಯ ದೇಶಗಳ ನಡುವಿನ ವಾಸ್ತವಿಕ ಗಡಿರೇಖೆ ಸುಮಾರಾಗಿ ಮೆಕ್ಮೋಹನ್ ಲೈನ್‌ಗೆ ಸಮೀಪವಾಗಿದ್ದು, ವ್ಯತ್ಯಾಸವಿರುವ ಕಡೆಯಲ್ಲೆಲ್ಲ ಗಡಿ ತಕರಾರು ಭುಗಿಲೇಳುತ್ತಲೇ ಇರುತ್ತದೆ.

ದಲೈಲಾಮಾಗೆ ಆಶ್ರಯ
ಭಾರತದ ವಿರುದ್ಧ ಚೀನಾ ಹಗೆತನ ಸಾಧಿಸಲು ಮತ್ತೊಂದು ಪ್ರಮುಖ ಕಾರಣ- ಟಿಬೆಟ್‌ನ ಧರ್ಮಗುರು ಆಗಿದ್ದ ದಲೈಲಾಮಾ ಅವರಿಗೆ ಆಶ್ರಯ ನೀಡಿರುವುದು. ಟಿಬೆಟ್ ಮೊದಲಿನಿಂದಲೂ ತಾನು ಸ್ವತಂತ್ರ ರಾಷ್ಟ್ರ ಎಂದು ಹೇಳಿಕೊಂಡು ಬಂದಿದೆ. ಆದರೆ, ಚೀನಾ ಮಾತ್ರ ಅದನ್ನು ತನ್ನ ದಕ್ಷಿಣ ಭಾಗದ ಪ್ರಮುಖ ಪ್ರಾಂತ್ಯವಾಗಿ ಹಕ್ಕು ಸಾಧಿಸುತ್ತಲೇ ಇದೆ. ಈಗಲೂ ಅಲ್ಲಿ ಚೀನಾದ ಆಡಳಿತವೇ ನಡೆಯುತ್ತದೆ. 1950ರಲ್ಲಿ ಚೀನಾ ಟಿಬೆಟ್ ಅನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡಿದೆ. ಚೀನಾದ ಈ ದಬ್ಬಾಳಿಕೆ ವಿರುದ್ಧ ಹೋರಾಟಗಳು ನಡೆಯುತ್ತಿವೆ. 1959ರ ಹೊತ್ತಿಗೆ ಟಿಬೆಟ್‌ನ ಧಾರ್ಮಿಕ ಹಾಗೂ ರಾಜಕೀಯ ನಾಯಕರಾಗಿದ್ದ ದಲೈಲಾಮಾ ಭಾರತಕ್ಕೆ ಆಶ್ರಯ ಬಯಸಿ ಬರುತ್ತಾರೆ. ಲಾಮಾಗೆ ಆಶ್ರಯ ನೀಡಿರುವುದನ್ನು ಚೀನಾ ಇಂದಿಗೂ ಅರಗಿಸಿಕೊಳ್ಳುತ್ತಿಲ್ಲ.

ಭಾಯಿ ಭಾಯಿ ಎನ್ನುತ್ತಲೇ ಯುದ್ಧ ಮಾಡಿತು!
ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರು ಅವರು ಅಲಿಪ್ತ ನೀತಿಯ ಭಾಗವಾಗಿ ಎಲ್ಲ ರಾಷ್ಟ್ರಗಳೊಂದಿಗೆ ಸ್ನೇಹವನ್ನು ಬಯಸಿದ್ದರು. ಅದರಂತೆ ಚೀನಾದೊಂದಿಗೆ ಸ್ನೇಹಹಸ್ತ ಚಾಚಿ, ಹಿಂದಿ-ಚೀನಿ ಭಾಯಿ ಭಾಯಿ ಎಂದು ಬಣ್ಣಿಸಿದ್ದರು. ಆದರೆ, ಕುತಂತ್ರಿ ಚೀನಾ ಮಾತ್ರ ನೆಪಕ್ಕೆ ಗೆಳೆತನ ಮಾಡಿ ಸದ್ದಿಲ್ಲದೇ 1962ರಲ್ಲಿ ಭಾರತದ ವಿರುದ್ಧ ಯುದ್ಧ ಸಾರಿತು. ಉಭಯ ರಾಷ್ಟ್ರಗಳ ನಡುವಿನ ಹಿಮಾಲಯದ ಗಡಿ ಯುದ್ಧಕ್ಕೆ ಕಾರಣವಾಗಿತ್ತು. ವಿಶೇಷವಾಗಿ, 1959ರ ಟಿಬೆಟ್ ಹೋರಾಟ ವೇಳೆ ದಲೈಲಾಮಾ ಭಾರತಕ್ಕೆ ಪಲಾಯನಗೊಂಡ ಬಳಿಕ ಉಭಯ ರಾಷ್ಟ್ರಗಳ ನಡುವೆ ಸಂಘರ್ಷದ ಸ್ಥಿತಿ ನಿರ್ಮಾಣವಾಯಿತು. ಚೀನಾ ತನ್ನ ಸೇನೆಯನ್ನು ಗಡಿಯಲ್ಲಿ ತಂದು ನಿಲ್ಲಿಸಿತ್ತು. ಈ ಸಂಬಂಧ ನಡೆದ ಮಾತುಕತೆಗಳು ವಿಫಲವಾದ ನಂತರ 1962 ಅಕ್ಟೋಬರ್ 20ರಂದು ಲಡಾಖ್‌ನ ಹಿಮಾಲಯದ ಗಡಿಯಲ್ಲಿ ಯುದ್ಧ ಸಾರಿತು. ಭಾರತವು ಪ್ರತಿಯಾಗಿ ಯುದ್ಧ ನಡೆಸಿತು. 1962ರ ನವೆಂಬರ್ 20ರಂದು ಕದನ ವಿರಾಮವನ್ನು ಚೀನಾ ಪ್ರಕಟಿಸಿತು. ಈ ಯುದ್ಧವು ಉಭಯ ರಾಷ್ಟ್ರಗಳಿಗೂ ಪಾಠವನ್ನು ಕಲಿಸಿತು. ಆ ಬಳಿಕ ವಾಸ್ತವಿಕ ಯುದ್ಧ ನಡೆದಿಲ್ಲವಾದರೂ ಯುದ್ಧ ಪರಿಸ್ಥಿತಿ ಆಗಾಗ ನಿರ್ಮಾಣವಾಗುತ್ತಲೇ ಇದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top