ಅಗ್ಗದ ಕೀಟನಾಶಕ ಬ್ಯಾನ್‌?

– 27 ಪೆಸ್ಟಿಸೈಡ್ಸ್‌ ನಿಷೇಧಕ್ಕೆ ಕೇಂದ್ರದ ಪ್ರಸ್ತಾಪ – ಪರ್ಯಾಯ ನಾಶಕಗಳು ದುಬಾರಿ ಆತಂಕ.
ಕಿರಣ್‌ ಕುಮಾರ್‌ ಡಿ. ಕೆ ಬೆಂಗಳೂರು.  
ಹಲವು ದಶಕಗಳಿಂದ ಜನಪ್ರಿಯವಾಗಿರುವ ಹಾಗೂ ಪರಿಣಾಮಕಾರಿ ಫಲಿತಾಂಶ ನೀಡುತ್ತಿರುವ 27 ಕೀಟನಾಶಕಗಳ ನಿಷೇಧಕ್ಕೆ ಕೇಂದ್ರ ಸರಕಾರ ಕರಡು ಪ್ರಸ್ತಾವನೆ ಸಿದ್ಧಪಡಿಸಿದೆ. ಇವುಗಳಲ್ಲಿ ಹೆಚ್ಚಿನವು ಕಡಿಮೆ ಅಪಾಯಕಾರಿಯಾಗಿರುವ ಅಗ್ಗದ ಜನರಿಕ್‌ ಕೀಟನಾಶಕಗಳೇ ಆಗಿರುವುದು ರೈತರಲ್ಲಿ ಆತಂಕ ಮೂಡಿಸಿದೆ.
ಈಗಾಗಲೇ ಅಧಿಕ ನಿರ್ವಹಣಾ ವೆಚ್ಚ ಹಾಗೂ ಬೆಳೆದ ಉತ್ಪನ್ನಗಳಿಗೆ ದರ ಕುಸಿತದಿಂದ ಹೈರಾಣಾಗಿರುವ ರೈತರು, ದುಬಾರಿ ದರ ತೆತ್ತು ಹೊಸ ಕೀಟನಾಶಕ ಖರೀದಿಸಬೇಕಾದ ಅನಿವಾರ‍್ಯತೆ ಸೃಷ್ಟಿಯಾಗುವ ಸಾಧ್ಯತೆ ಇರುವುದರಿಂದ ಸರಕಾರದ ನಡೆಯ ವಿರುದ್ಧ ವ್ಯಾಪಕ ಅಸಮಾಧಾನ ವ್ಯಕ್ತವಾಗುತ್ತಿದೆ.
‘ಮಾನವ ಹಾಗೂ ಪ್ರಾಣಿಗಳಿಗೆ ಅಪಾಯಕಾರಿಯಾಗಿರುವ 27 ಮಾದರಿಯ ಕೀಟನಾಶಕಗಳ ಆಮದು, ಉತ್ಪಾದನೆ, ಮಾರಾಟ, ಸಾಗಾಟ, ವಿತರಣೆ ಹಾಗೂ ಬಳಕೆ ನಿಷೇಧಿಸಲು ನಿರ್ಧರಿಸಲಾಗಿದೆ. ಇವುಗಳ ಬದಲಿಗೆ ಹೊಸ ಕೀಟನಾಶಕಗಳ ಬಳಕೆಗೆ ಅವಕಾಶವಿರುತ್ತದೆ. ನಿಷೇಧ ಕುರಿತು ಆಕ್ಷೇಪಣೆ ಸಲ್ಲಿಸುವವರಿಗೆ 45 ದಿನಗಳ ಅವಕಾಶವಿದೆ’ ಎಂದು ಮೇ 14ರಂದು ಸರಕಾರ ತಿಳಿಸಿದೆ. ಈ ಬಗ್ಗೆ ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೂ ಮಾಹಿತಿ ರವಾನಿಸಿ ಸಲಹೆ ನೀಡುವಂತೆ ಸೂಚಿಸಿದೆ. ತರಕಾರಿ, ಹೂವುಗಳಿಂದ ಆರಂಭವಾಗಿ, ಭತ್ತ, ರಾಗಿ, ಗೋಧಿ, ಜೋಳ, ದವಸ ಧಾನ್ಯಗಳು, ಕಬ್ಬು, ಹತ್ತಿ, ಕಾಫಿ, ಕಾಳುಮೆಣಸು, ಅಡಕೆ, ಏಲಕ್ಕಿ, ಮಾವು, ದ್ರಾಕ್ಷಿ, ಸೇಬು, ದಾಳಿಂಬೆ ಹೀಗೆ ದೇಶದಲ್ಲಿ ಬೆಳೆಯಲ್ಪಡುವ ಎಲ್ಲ ಮಾದರಿಯ ಕೃಷಿಗೂ ಈ ಕೀಟನಾಶಕ, ಕಳೆನಾಶಕ ಹಾಗೂ ಶಿಲೀಂದ್ರ ನಾಶಕಗಳೇ ಸದ್ಯ ಹೆಚ್ಚಾಗಿ ಬಳಕೆಯಾಗುತ್ತಿವೆ.
ಕಡಿಮೆ ಅಪಾಯದ್ದೂ ನಿಷೇಧ!
ಕೀಟನಾಶಕಗಳನ್ನು ಸಾಮಾನ್ಯವಾಗಿ ಅತಿಹೆಚ್ಚು ಅಪಾಯಕಾರಿ (ಕೆಂಪು), ಹೆಚ್ಚಿನ ಅಪಾಯಕಾರಿ(ಹಳದಿ), ಮಧ್ಯಮ ಅಪಾಯಕಾರಿ(ನೀಲಿ) ಹಾಗೂ ಅಲ್ಪ ಪ್ರಮಾಣದ ಅಪಾಯಕಾರಿ (ಹಸಿರು)ಗಳೆಂದು 4 ವಿಭಾಗಗಳಲ್ಲಿ ಗುರುತಿಸಲಾಗುತ್ತದೆ. ಇದೀಗ ನಿಷೇಧಕ್ಕೆ ಮುಂದಾಗಿರುವ ಕೀಟನಾಶಕಗಳಲ್ಲಿ ಕೆಂಪು ವಿಭಾಗದವು ಕಡಿಮೆ. ಇದು ಸರಕಾರದ ಪರಾಮರ್ಶೆ ವಿಧಾನದ ಕುರಿತು ಅನುಮಾನ ಮೂಡಿಸಿದೆ. ಕಾಲಕಾಲಕ್ಕೆ ಕೀಟನಾಶಕಗಳ ನಿಷೇಧ ಮಾಡಲಾಗುತ್ತದೆಯಾದರೂ ಈ ಬಾರಿ ಪಟ್ಟಿಯಲ್ಲಿರುವ ಹೆಚ್ಚಿನ ಕೀಟನಾಶಕಗಳು ಅಗ್ಗದ ದರದವು ಮತ್ತು ಹಲವು ದಶಕಗಳಿಂದ ರೈತರು ಬಳಸುತ್ತ ಪ್ರಮಾಣಿತ ಫಲಿತಾಂಶ ಹೊಂದಿರುವ ಕೀಟನಾಶಕಗಳು. ಹೀಗಿರುವಾಗ ಜಾಗೃತಿಯನ್ನೂ ಮೂಡಿಸದೆ ಏಕಾಏಕಿ ನಿಷೇಧಕ್ಕೆ ಮುಂದಾದರೆ ಹೊಸ ಮಾಲಿಕ್ಯೂಲ್‌ ಉತ್ಪಾದಿಸುವ ಸಂಸ್ಥೆಗಳು ಇದರ ಲಾಭ ಪಡೆದು ರೈತರ ಮೇಲೆ ಸವಾರಿ ಮಾಡಲು ಅನುವು ಮಾಡಿಕೊಟ್ಟಂತಾಗುತ್ತದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

ನಿಷೇಧ ಪ್ರಸ್ತಾವಿತ ಔಷಧಗಳು
ಅಸಿಫೇಟ್‌, ಅಟ್ರಾಝೈನ್‌, ಮೆಲಾಥಿಯನ್‌, ಮ್ಯಾಂಕೋಝೆಬ್‌, ಮೋನೋಕ್ರೊಟೊಪಾಸ್‌, ಕ್ವಿನಲ್‌ಫಾಸ್‌, ಕ್ಯಾಪ್ಟೈನ್‌, ಕಾರ್ಬೆಂಡೇಝಿಮ್‌, ಬುಟಾಕ್ಲೋರ್‌, ಕಾರ್ಬೋಫರಾನ್‌, ಕ್ಲೋರೋಫೆರಿಫಾಸ್‌, ಟು 4 ಡಿ, ಡೆಲ್ಟಾಮೆಥ್ರಿನ್‌, ಡಿಕೋಫೊಲ್‌, ಡೈಮಿಥೇಟ್‌, ಬೆನ್‌ಫರಾಕರ್ಬ್‌, ಡಿನೋಕ್ಯಾಪ್‌, ಡ್ಯುರಾನ್‌, ಮೆಥಾಮಿಲ್‌, ಆಕ್ಷಿಫ್ಲೋರ್ಫೆನ್‌, ಪೆಂಡಿಮೆಥಾಲಿನ್‌, ಸಲ್ಫೋಸಲ್ಫರಾನ್‌, ಥಿಯೋಡಿಕಾರ್ಬ್‌, ಥಿಯೋಫಾನಟ್‌ ಎಮಿಥಿಲ್‌, ಥಿರಮ್‌, ಝೈನೆಬ್‌, ಝಿರಮ್‌.

ಮಿಡತೆಗಳ ನಾಶಕ್ಕೂ ಇವೇ ಬೇಕು!
ದೇಶಾದ್ಯಂತ ಆತಂಕ ಸೃಷ್ಟಿಸಿರುವ ಮಿಡತೆಗಳ ನಾಶಕ್ಕೆ ರಾಜ್ಯಗಳಿಗೆ ಕೇಂದ್ರ ಸರಕಾರ ಸೂಚಿಸಿರುವ ಕೀಟನಾಶಕಗಳಲ್ಲಿ ಇದೀಗ ನಿಷೇಧದ ಪಟ್ಟಿಯಲ್ಲಿರುವ ಕ್ರಿಮಿನಾಶಕಗಳೇ ಅಗ್ರ ಸ್ಥಾನದಲ್ಲಿವೆ. ಮೆಲಾಥಿಯನ್‌, ಡೆಲ್ಟಾಮೆಥ್ರಿನ್‌, ಕ್ಲೋರೋಫೆರಿಫಾಸ್‌, ಲಾಂಬ್ಡಾ ಸೈಹಾಲೋಥ್ರಿನ್‌, ಫಿಪ್ರೋನಿಲ್‌, ಬ್ಯಾಂಡಿಯೋಕಾರ್ಬ್‌ ಎಂಬ 6 ವಿಧದ ಕೀಟನಾಶಕಗಳ ಬಳಕೆಗೆ ಸೂಚಿಸಲಾಗಿದ್ದು, ಇದರಲ್ಲಿ ಮೊದಲ ಮೂರು ನಿಷೇಧದ ಪ್ರಸ್ತಾವನೆಯಲ್ಲಿದೆ.

ಒಂದೆಡೆ ಈಗ ಕಂಡುಬಂದಿರುವ ಮಿಡತೆಗಳ ಹತ್ಯೆಗೆ ಈ ಕೀಟನಾಶಕಗಳನ್ನೇ ಬಳಸುವಂತೆ ಸೂಚಿಸುತ್ತ, ಇನ್ನೊಂದೆಡೆ ಇವುಗಳ ನಿಷೇಧಕ್ಕೆ ಪ್ರಸ್ತಾವನೆ ಸಲ್ಲಿಸುತ್ತ ಕೇಂದ್ರ ಸರಕಾರ ದ್ವಂದ್ವ ನಿಲುವು ವ್ಯಕ್ತಪಡಿಸುತ್ತಿದೆ. ನಿಷೇಧ ಪ್ರಸ್ತಾವನೆಗೆ ನಾವು ಆಕ್ಷೇಪಣೆ ಸಲ್ಲಿಸಲಿದ್ದೇವೆ.
– ಸಿದ್ದಪ್ಪ ರೆಡ್ಡಿ, ಅಧ್ಯಕ್ಷರು, ಕರ್ನಾಟಕ ಕೀಟನಾಶಕ ಉತ್ಪಾದಕರ ಸಂಘ(ಕೆಪಿಎಂಎ)

ಜನರಿಕ್‌ ಕೀಟನಾಶಕಗಳ ನಿಷೇಧ ಮಾಡಿದರೆ ಹೊಸ ಉತ್ಪನ್ನಗಳಿಗೆ ಒಗ್ಗಿಕೊಳ್ಳಲು ರೈತರಿಗೆ ಒಂದಷ್ಟು ಕಾಲಾವಕಾಶ ಬೇಕಾಗಬಹುದು. ಆದರೆ ಭವಿಷ್ಯದ ದೃಷ್ಟಿಯಿಂದ ಗಮನಿಸಿದರೆ ಕೀಟನಾಶಕಗಳ ನಿಷೇಧ ಉತ್ತಮ ನಿರ್ಧಾರ.
-ವೆಂಕಟರಾಮ ರೆಡ್ಡಿ ಪಾಟೀಲ್‌, ಅಪರ ಕೃಷಿ ನಿರ್ದೇಶಕರು

ಆಯ್ದ ಕೀಟನಾಶಕಗಳ ನಿಷೇಧಕ್ಕೆ ಕೇಂದ್ರ ಸರಕಾರ ನಿರ್ಧಾರ ಮಾಡಿದೆ. ಸದ್ಯ ಈ ಕುರಿತ ಪ್ರಸ್ತಾವನೆ ಸಾರ್ವಜನಿಕ ಡೊಮೈನ್‌ನಲ್ಲಿದ್ದು, ಅಭಿಪ್ರಾಯ ಹಾಗೂ ಆಕ್ಷೇಪಣೆ ಸಲ್ಲಿಕೆಗೆ ಅವಕಾಶವಿದೆ.
– ಡಿ.ವಿ. ಸದಾನಂದಗೌಡ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರು

ನಿಷೇಧ ಯಾಕೆ?
ಎಲ್ಲ ಕೀಟನಾಶಕಗಳು ಸಕಲ ಜೀವಿಗಳಿಗೂ ಅಪಾಯಕಾರಿ. ಹಾಗಾಗಿ ಕೀಟನಾಶಕಕ್ಕೆ ರಾಸಾಯನಿಕ ಬಳಕೆ ಕಡಿಮೆ ಜೈವಿಕ ಉತ್ಪನ್ನ ಬಳಕೆ ಹೆಚ್ಚಿಸುವ ಉದ್ದೇಶ

ಆತಂಕ ಏನು?
ಅಗ್ಗದ ದರದ ಈ ದೇಸಿ ರಾಸಾಯನಿಕ ನಿಷೇಧಿಸಿ ವಿದೇಶಿ ಕಂಪನಿಗಳಿಗೆ ಮಣೆ ಹಾಕಿದರೆ ದುಬಾರಿ ಸಾಧ್ಯತೆ. ದೇಸಿ ಉತ್ಪಾದನೆಗೆ ಹೊಡೆತ. ವಿದೇಶಿ ಕಂಪನಿಗಳ ಪಾರಮ್ಯ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top