ಆನ್‌ಲೈನ್‌ ಕ್ಲಾಸ್‌ಗೆ ಸವಾಲುಗಳು : ಉಳ್ಳವರ – ಇಲ್ಲದವರ ಅಂತರ ಹೆಚ್ಚಾಗದಿರಲಿ

ಖಾಸಗಿ ಶಾಲೆಗಳು ಎಲ್‌ಕೆಜಿಯಿಂದ ಹತ್ತನೇ ತರಗತಿಯವರೆಗೆ ಆನ್‌ಲೈನ್‌ ಕ್ಲಾಸ್‌ಗಳನ್ನು ನಡೆಸುವುದಕ್ಕೆ ಸರಕಾರ ವಿಧಿಸಿರುವ ನಿರ್ಬಂಧಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ‘ಇದು ಸಂವಿಧಾನದ 21 ಹಾಗೂ 21ಎ ವಿಧಿಯಯನ್ವಯ ಪ್ರಜೆಗಳಿಗೆ ದತ್ತವಾಗಿರುವ ಬದುಕಿನ ಹಾಗೂ ಶಿಕ್ಷಣದ ಹಕ್ಕನ್ನು ನಿರಾಕರಿಸಿದಂತಾಗಿದೆ’ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ. ಇದರಿಂದ, ಆನ್‌ಲೈನ್‌ ಕ್ಲಾಸ್‌ಗಳನ್ನು ನಡೆಸಲು ಮುಂದಾಗಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮುಕ್ತ ರಹದಾರಿ ದೊರೆತಂತಾಗಿದೆ. ಆದರೆ ಈ ಆದೇಶ, ಆನ್‌ಲೈನ್‌ ಶಿಕ್ಷಣದ ಹೆಸರಿನಲ್ಲಿ ಶುಲ್ಕ ವಸೂಲಿ ಮಾಡಲು ಅಥವಾ ಆನ್‌ಲೈನ್‌ ಕ್ಲಾಸುಗಳನ್ನು ಕಡ್ಡಾಯ ಮಾಡಲು ಶಾಲೆಗಳಿಗೆ ನೀಡಿದ ಅನುಮತಿ ಅಲ್ಲವೆಂದೂ ಹೇಳಿದೆ. ಅಂದರೆ ಈ ಕುರಿತು ಒಂದು ನಿಯಮಾವಳಿ ರೂಪಿಸಲು ಸರಕಾರಕ್ಕೆ ಅವಕಾಶವಿದ್ದೇ ಇದೆ.
ಕೋವಿಡ್‌ ಸಾಂಕ್ರಾಮಿಕ ತಂದೊಡ್ಡಿರುವ ಹೊಸ ಸವಾಲು ಇದು. ಲಾಕ್‌ಡೌನ್‌ನಿಂದಾಗಿ ಅನಿವಾರ್ಯವಾಗಿ ಶಿಕ್ಷಣ ಕ್ಷೇತ್ರದಲ್ಲಿ ಸಾಂಪ್ರದಾಯಿಕ ತರಗತಿಗಳು ಬಂದ್‌ ಆಗಿದ್ದು ಆನ್‌ಲೈನ್‌ ಪಾಠ ಪ್ರವಚನಗಳತ್ತ ಶಿಕ್ಷಕರು- ವಿದ್ಯಾರ್ಥಿಗಳು ತಿರುಗಲೇಬೇಕಾಗಿ ಬಂದಿದೆ. ಕ್ಲಾಸ್‌ಗಳು ಆರಂಭವಾಗುವ ಲಕ್ಷಣ ಸದ್ಯಕ್ಕಿಲ್ಲ. ಆರಂಭವಾದರೂ, ದೈಹಿಕ ಅಂತರ ಕಾಯ್ದುಕೊಳ್ಳಬೇಕಾಗಿರುವುದರಿಂದ ಹೆಚ್ಚಿನ ಮಕ್ಕಳನ್ನು ಒಂದೆಡೆ ಕೂಡಿಹಾಕುವಂತಿಲ್ಲ. ಆದರೆ ಮಕ್ಕಳ ಶಿಕ್ಷಣವನ್ನಂತೂ ಕೈಬಿಡುವಂತಿಲ್ಲವಲ್ಲ. ಹೀಗಾಗಿ ಆನ್‌ಲೈನ್‌ ತರಗತಿ, ಉಪನ್ಯಾಸ, ಸಂವಾದ, ಸೆಮಿನಾರ್‌ಗಳು ಭವಿಷ್ಯದಲ್ಲಿ ಅನಿವಾರ್ಯವಾಗಲಿವೆ. ನಾವು ಸಾಂಪ್ರದಾಯಿಕ ಗುರುಪರಂಪರೆಯ ಎಷ್ಟೇ ಅಭಿಮಾನಿಗಳಾಗಿದ್ದರೂ, ಆರೋಗ್ಯ ಸುರಕ್ಷತೆಯ ದೃಷ್ಟಿಯಿಂದ ಇಂದು ವರ್ಚುವಲ್‌ ತರಗತಿಗಳತ್ತ ಹೊರಳಿಕೊಳ್ಳಬೇಕಾಗಿದೆ. ಇದನ್ನು ಮನಗಂಡು ಕೇಂದ್ರ ಸರಕಾರ ಕೂಡ ಇತ್ತೀಚೆಗೆ ಹಲವು ಉಪಕ್ರಮಗಳನ್ನು ಪ್ರಕಟಿಸಿತ್ತು. ದೇಶದ ಟಾಪ್‌ 100 ವಿಶ್ವವಿದ್ಯಾಲಯಗಳಿಗೆ ಆನ್‌ಲೈನ್‌ ಕೋರ್ಸ್‌ಗಳನ್ನು ಆರಂಭಿಸಲು ಅನುಮತಿ ನೀಡಿತ್ತು.
ಆದರೆ ನಾವು ಇಲ್ಲಿ ಪರಿಗಣಿಸಬೇಕಾದ ಸೂಕ್ಷ್ಮಗಳು ಹಲವು ಇವೆ. ನಾವು ಸವಲತ್ತು ವಂಚಿತರನ್ನೂ ಗಮನಿಸಬೇಕು. ಖಾಸಗಿ ಶಾಲೆಗೆ ಹೋಗುವವರೆಲ್ಲರೂ ಆನ್‌ಲೈನ್‌ ಕ್ಲಾಸ್‌ಗೆ ಅಗತ್ಯವಾದ ಸೌಲಭ್ಯ ಹೊಂದಿಲ್ಲದಿರಬಹುದು. ಎಲ್ಲರಲ್ಲೂ ಲ್ಯಾಪ್‌ಟಾಪ್‌, ಸ್ಮಾರ್ಟ್‌ಫೋನ್‌ ಇಲ್ಲದಿರಬಹುದು; ಅಥವಾ ಇದ್ದವರಿಗೂ ಆನ್‌ಲೈನ್‌ ಸಾಕ್ಷರತೆ ಇರಲಾರದು. ನಮ್ಮಲ್ಲಿ ಡಿಜಿಟಲ್‌ ವ್ಯವಸ್ಥೆ ಸ್ಪರ್ಶಿಸಿರುವುದು ಶೇ.50 ಮಂದಿಯನ್ನು ಮಾತ್ರ. ಇನ್ನುಳಿದ ಶೇ.50 ಮಂದಿ ಡಿಜಿಟಲ್‌ ಅನಕ್ಷರಸ್ಥರು. ಆನ್‌ಲೈನ್‌ ಪಾಠಗಳು ಸ್ಮಾರ್ಟ್‌ಫೋನ್‌ ಅಥವಾ ಲ್ಯಾಪ್‌ಟಾಪ್‌ ಹೊಂದಿರುವ, 4ಜಿ ಇಂಟರ್‌ನೆಟ್‌ ವ್ಯವಸ್ಥೆ ಪಡೆಯಬಲ್ಲ ಶ್ರೀಮಂತ, ಮಧ್ಯಮ ವರ್ಗದವರನ್ನು ತಲುಪಬಹುದು. ಇವೆರಡೂ ಇಲ್ಲದ ಬಡವರನ್ನು ಅದು ತಲುಪುವುದು ಹೇಗೆ? ಈ ಬಗ್ಗೆ ಖಾಸಗಿ ಶಾಲೆಗಳೂ ಉತ್ತರದಾಯಿತ್ವ ತೋರಬೇಕಿದೆ.
ಸರಕಾರಿ ಶಾಲಾ ವ್ಯವಸ್ಥೆ ಈಗ ಬಲಿಷ್ಠವಾಗಿಲ್ಲದಿರಬಹುದು; ಆದರೆ ಅದು ಶಿಕ್ಷಣವನ್ನು ಬಡವರ ಮನೆಗೆ ತಲುಪಿಸುವ ಕಾಯಕವನ್ನಂತೂ ಮಾಡುತ್ತಿದೆ. ಸರಕಾರ ಎಲ್ಲ ಮಕ್ಕಳಿಗೂ ಆನ್‌ಲೈನ್‌ ಪಾಠ ಪ್ರವಚನದ ವ್ಯವಸ್ಥೆ ಮಾಡಲು ಸಾಧ್ಯವೇ? ನಮ್ಮಲ್ಲಿ ಇಂಟರ್‌ನೆಟ್‌ ತಲುಪದ ಕುಗ್ರಾಮಗಳೂ ಸಾಕಷ್ಟಿವೆ. ಇಲ್ಲಿನ ಮಕ್ಕಳು ಸಾಂಪ್ರದಾಯಿಕ ವ್ಯವಸ್ಥೆಯನ್ನೇ ನೆಚ್ಚಿಕೊಳ್ಳಬೇಕಾಗುತ್ತದೆ. ಆನ್‌ಲೈನ್‌ ಪಠ್ಯ ಬಲಿಷ್ಠಗೊಳಿಸುವ ನೆವದಲ್ಲಿ ಸಾಂಪ್ರದಾಯಿಕ ವ್ಯವಸ್ಥೆ ಬಡವಾದರೆ, ಅದರ ಋುಣಾತ್ಮಕ ಪರಿಣಾಮ ಗ್ರಾಮೀಣ, ಬಡ ಸಮುದಾಯದ ಮೇಲೆ ಆಗುತ್ತದೆ. ಆನ್‌ಲೈನ್‌ ಶಿಕ್ಷಣ ಪಡೆಯುವ ನಗರದ- ಶ್ರೀಮಂತ ಮಕ್ಕಳು ಹಾಗೂ ಇದನ್ನು ಪಡೆಯಲಾರದ ಹಳ್ಳಿಯ- ಬಡ ಮಕ್ಕಳು ಎಂಬ ಭಾರಿ ಕಂದಕ ಸೃಷ್ಟಿಯಾಗಬಹುದು. ಇದನ್ನು ನಿವಾರಿಸಿಕೊಳ್ಳುವುದು ಹೇಗೆ? ಇಂಟರ್‌ನೆಟ್‌ ವ್ಯವಸ್ಥೆಗೂ ಸರಕಾರ ಖಾಸಗಿ ದೂರಸಂಪರ್ಕ ಕಂಪನಿಗಳನ್ನು ನೆಚ್ಚಿಕೊಳ್ಳಬೇಕು. ಖಾಸಗಿ ಶಾಲೆಗಳು, ವಿವಿಗಳು ಆನ್‌ಲೈನ್‌ ಸವಲತ್ತಿನ ಹೆಸರಿನಲ್ಲಿ ಹೆಚ್ಚಿನ ಸುಲಿಗೆಗೆ ಮುಂದಾಗಬಹುದು. ಆನ್‌ಲೈನ್‌ಗಾಗಿ ಹೊಸಬಗೆಯ ಪಠ್ಯಕ್ರಮ, ಬೋಧನಾಕ್ರಮ ಹಾಗೂ ಪರೀಕ್ಷಾಕ್ರಮಗಳನ್ನೇ ರೂಪಿಸುವುದು ಅವಶ್ಯಕವಾಗುತ್ತದೆ. ಇವೆಲ್ಲವೂ ಸರಕಾರದ ಮುಂದಿರುವ ಸವಾಲುಗಳು. ದೂರದೃಷ್ಟಿ, ಸಾಮಾಜಿಕ ಕಾಳಜಿ, ಸಮರ್ಪಕ ಯೋಜನೆಗಳು ಇಲ್ಲಿ ಮುಖ್ಯ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top