ಸಿಇಟಿ ಪರೀಕ್ಷೆಯೂ ಸುಗಮ – ಶಾಲಾರಂಭಕ್ಕೆ ಇದು ಸ್ಫೂರ್ತಿಯಾಗಲಿ

ಕರ್ನಾಟಕ ಸರಕಾರ ಇಂಜಿನಿಯರಿಂಗ್‌ ಹಾಗೂ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆಸುವ ಸಿಇಟಿ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರೈಸಿದೆ. ಗುರುವಾರ ಹಾಗೂ ಶುಕ್ರವಾರ ಸುಮಾರು 497 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪರೀಕ್ಷೆಯಲ್ಲಿ 1.75 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪಿಯುಸಿ ಇಂಗ್ಲಿಷ್‌ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಲಾಕ್‌ಡೌನ್‌ ಸಂದರ್ಭದಲ್ಲಿಯೇ ಯಶಸ್ವಿಯಾಗಿ ನಡೆಸಿದ್ದ ಸರಕಾರ, ಈಗ ಸಿಇಟಿಯನ್ನೂ ನೆರವೇರಿಸಿ ಸೈ ಎನ್ನಿಸಿಕೊಂಡಿದೆ. ಇದರಲ್ಲಿ 63 ಮಂದಿ ಕೋವಿಡ್‌ ಸೋಂಕಿತರೂ ಇದ್ದುದು ವಿಶೇಷ. ಈ ವಿದ್ಯಾರ್ಥಿಗಳು ಪರೀಕ್ಷೆಗಳಿಂದ ವಂಚಿತರಾಗದಂತೆ ನೋಡಿಕೊಂಡ ಪರೀಕ್ಷಾ ಪ್ರಾಧಿಕಾರದ ಕಾಳಜಿ ಹಾಗೂ ಕ್ಷಮತೆ ಶ್ಲಾಘನೀಯ. ಉನ್ನತ ವೃತ್ತಿಪರ ಶಿಕ್ಷಣದ ಕಲಿಕೆಯ ಕನಸನ್ನು ಕಟ್ಟಿಕೊಂಡವರಿಗೆ ಸಿಇಟಿ ಮಹತ್ವದ ಘಟ್ಟ. ಇದು ಮುಂದೂಡಲ್ಪಟ್ಟರೆ ಅಥವಾ ಅನಿಶ್ಚಿತವಾಗಿದ್ದರೆ ವಿದ್ಯಾರ್ಥಿಗಳ ಭವಿಷ್ಯವೂ ಅಷ್ಟರ ಮಟ್ಟಿಗೆ ಡೋಲಾಯಮಾನ ಆಗುತ್ತದೆ. ಈಗಲೂ ಸಿಇಟಿ ಪರೀಕ್ಷೆ ನಡೆಸಬಾರದು ಎಂದು ಕೋರಿ ನ್ಯಾಯಾಲಯಕ್ಕೆ ಅರ್ಜಿಗಳು ಸಲ್ಲಿಕೆಯಾಗಿದ್ದವು. ನಿಗದಿತ ಪರೀಕ್ಷೆ ಮುಂದೂಡಲ್ಪಟ್ಟಿದ್ದರೆ ಅದು ವಿದ್ಯಾರ್ಥಿಗಳ ಸಿದ್ಧತೆ, ಮಾನಸಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದುದು ಖಚಿತ. ಆದರೆ ಹೈಕೋರ್ಟ್‌, ಸಕಲ ಮುನ್ನೆಚ್ಚರಿಕೆ- ಸುರಕ್ಷತಾ ಕ್ರಮಗಳೊಂದಿಗೆ ಪರೀಕ್ಷೆ ನಡೆಸುವಂತೆ ಸರಕಾರಕ್ಕೆ ಸೂಚನೆ ನೀಡಿತ್ತು.
ಶಾಲೆಗಳ ಆರಂಭ, ಆನ್‌ಲೈನ್‌ ಶಿಕ್ಷಣದ ಬಗ್ಗೆ ಯಾವ ನಿಲುವನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆಯೂ ಇದುವವರೆಗೆ ಸರಕಾರದ ನಿಲುವು ಸ್ಪಷ್ಟವಾಗಿರುವಂತೆ ತೋರುತ್ತಿದೆ. ಕೊರೊನಾ ಸೊಂಕಿನ ತೀವ್ರತೆ ಇಳಿಮುಖವಾಗುವವರೆಗೆ ಮಕ್ಕಳನ್ನು ಶಾಲೆಗೆ ಕರೆಸಿಕೊಳ್ಳುವ ರಿಸ್ಕ್‌ ತೆಗೆದುಕೊಳ್ಳುವುದಿಲ್ಲ; ಶಾಲೆ ಆರಂಭಿಸಲು ಯಾವುದೇ ಅವಸರವಿಲ್ಲ ಎಂದು ಸಚಿವರು ಹೇಳಿದ್ದಾರೆ. ಆನ್‌ಲೈನ್‌ ಪಾಠಪ್ರವಚನ ಹಾಗೂ ನೇರ ತರಗತಿಗಳ ಸುವರ್ಣ ಮಧ್ಯಮ ಮಾರ್ಗವನ್ನು ಅಳವಡಿಸಿಕೊಳ್ಳುವುದಾಗಿ, ವಿಜಯಕರ್ನಾಟಕ ಪತ್ರಿಕೆ ನಡೆಸಿದ್ದ ವೆಬಿನಾರ್‌ನಲ್ಲೂ ಸಚಿವರು ಹೇಳಿದ್ದರು. ಹೆತ್ತವರಿಗೆ ಮಕ್ಕಳನ್ನು ಶಾಲೆಗೆ ಕಳಿಸಲು ಆತುರ ಇದ್ದಂತಿಲ್ಲ. ಆದರೆ ಒಂದಲ್ಲ ಒಂದು ಹಂತದಲ್ಲಿ ಶಾಲೆಗಳು ಪುನಾರಂಭ ಆಗುವುದು ಅನಿವಾರ್ಯ. ಯಾಕೆಂದರೆ ಕಲಿಕೆ ಎಂಬುದು ಕೇವಲ ಆನ್‌ಲೈನ್‌ನಲ್ಲಿ ನಡೆಯುವಂಥದಲ್ಲ. ಶಾಲೆಯ ವಾತಾವರಣ ಹಾಗೂ ಶಿಕ್ಷಕರ ಸಮ್ಮುಖ ಕಲಿಕೆಯು ವಿದ್ಯಾರ್ಥಿಗಳಲ್ಲಿ ಒಂದು ಬಗೆಯ ಆತ್ಮವಿಶ್ವಾಸ, ಹೊಣೆಗಾರಿಕೆ ಹಾಗೂ ಸಕಾರಾತ್ಮಕ ಒತ್ತಡವನ್ನು ತುಂಬುತ್ತದೆ.
ಎಸ್ಸೆಸ್ಸೆಲ್ಸಿ ಹಾಗೂ ಸಿಇಟಿ ಪರೀಕ್ಷೆಗಳ ಯಶಸ್ಸು ಸರಕಾರಕ್ಕೆ ಆತ್ಮವಿಶ್ವಾಸವನ್ನು ತುಂಬಲಿ. ಹಾಗೇ ಹೆತ್ತವರು, ಶಾಲಾಡಳಿತಗಳಲ್ಲೂ ಭರವಸೆಯನ್ನು ಮೂಡಿಸಲಿ ಎಂದು ಆಶಿಸಬಹುದು. ಈಗಾಗಲೇ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳ ಫಲಿತಾಂಶವೂ ಬಂದಿದ್ದು, ವಿದ್ಯಾರ್ಥಿಗಳು ಶಾಲೆಗೆ ಮರಳಲು ಕಾತರರಾಗಿದ್ದಾರೆ. ವಿದ್ಯಾರ್ಥಿಗಳ ವಯೋಮಾನದಲ್ಲಿ ಕೊರೊನಾ ಹೆಚ್ಚೇನೂ ಕಾಡುವುದಿಲ್ಲ ಎಂಬುದೂ ರುಜುವಾತಾಗಿದೆ. ಶಾಲೆಗಳ ಪುನಾರಂಭದಿಂದ ಒಂದು ಬೃಹತ್‌ ವ್ಯವಸ್ಥೆ, ಜೀವನಚಕ್ರವೇ ತಿರುಗಲು ಆರಂಭವಾಗುತ್ತದೆ. ಕೊರೊನೋತ್ತರ ಕಾಲಕ್ಕೆ ಇದು ಹೊಸ ಬಗೆಯ ಆತ್ಮವಿಶ್ವಾಸವನ್ನೂ ತುಂಬಬಹುದು. ಇದರಿಂದ, ಕೆಲಸವಿಲ್ಲದೆ ಬಳಲಿರುವ ಶಿಕ್ಷಕರನ್ನೂ ಮರಳಿ ತೊಡಗಿಸಿದಂತಾಗಲಿದೆ. ಆದರೆ ಬಹಳ ಮುನ್ನೆಚ್ಚರಿಕೆಯಿಂದ ಇದನ್ನು ಆಗಗೊಡುವುದು ಅಗತ್ಯ. ಆನ್‌ಲೈನ್‌ ಕಲಿಕೆ ಹಾಗೂ ಆಫ್‌ಲೈನ್‌ ಮುಖಾಮುಖಿಗಳ ಮಧ್ಯಮಸೂತ್ರವೊಂದನ್ನು ಕಂಡುಕೊಳ್ಳುವುದು ಅಗತ್ಯ. ಕೋವಿಡ್‌ನ ಜೊತೆಗೇ ನಾವು ಬಾಳಬೇಕು; ಅದನ್ನು ಇನ್ನಷ್ಟು ಹರಡದಂತೆ ಎಚ್ಚರಿಕೆಯಿಂದಲೂ ಇರಬೇಕು. ಶಾಲೆಗಳು ನಮ್ಮ ಭವಿಷ್ಯದ ಪ್ರಜೆಗಳನ್ನು ಉತ್ಪಾದಿಸುವ ಕೇಂದ್ರಗಳು. ಇವುಗಳ ಅನಿರ್ದಿಷ್ಟಾವಧಿ ಮುಚ್ಚುಗಡೆಯಿಂದ ಮಕ್ಕಳಲ್ಲೂ ಒಂದು ಅಗೋಚರ ಆತಂಕವನ್ನು ನಾವು ಸೃಷ್ಟಿಸಿದಂತಾಗುತ್ತದೆ. ಮಕ್ಕಳ ಮಾನಸಿಕ ಸ್ವಾಸ್ಥ್ಯಕ್ಕೂ ಶಾಲೆಗಳು ಅಗತ್ಯ. ಪರೀಕ್ಷೆಗಳ ನಿರ್ವಹಣೆಯಿಂದ ಪಡೆದ ಪಾಠಗಳು ಶಾಲಾರಂಭಕ್ಕೆ ನೆರವಾಗಲಿ. ಶಾಲೆಗಳನ್ನು ಪುನಾರಂಭಿಸಲು ಆತುರ ಬೇಡ; ಆದರೆ ಯೋಜನೆ ಈಗಿನಿಂದಲೇ ಆರಂಭವಾಗಲಿ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top