ಲಾಕ್‌ಡೌನ್ ಸಂದರ್ಭದಲ್ಲಿ ಯಾರನ್ನೂ ಕೆಲಸದಿಂದ ತೆಗೆಯಬಾರದು ಎಂದು ಖಾಸಗಿ ಸಂಸ್ಥೆಗಳಿಗೆ ಸೂಚಿಸಿದ್ದ ಸರಕಾರ, ತನ್ನದೇ ಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದ 416 ಜನರಿಗೆ ಸೇವೆಯಿಂದ ಮುಕ್ತಿ ನೀಡಿದೆ. ಮಧ್ಯಾಹ್ನ ಉಪಾಹಾರ ಯೋಜನೆಯಡಿ ರಾಜ್ಯದ ಎಲ್ಲ ಶೈಕ್ಷ ಣಿಕ ಜಿಲ್ಲೆ ಮತ್ತು ತಾಲೂಕು ಮಟ್ಟದ ಕಚೇರಿಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಡಾಟಾ ಎಂಟ್ರಿ ಆಪರೇಟರ್ ಮತ್ತು ಡಿ ದರ್ಜೆ ನೌಕರರನ್ನು ಮಾರ್ಚ್ 31ರ ನಂತರ ಸೇವೆಯಿಂದ ಬಿಡುಗಡೆ ಮಾಡಲಾಗಿದೆ. ಇವರೆಲ್ಲರೂ ಸುಮಾರು 12 ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದವರು. ಇವರು ಮಾಡುತ್ತಿದ್ದ ಕೆಲಸವನ್ನು ನಿರ್ವಹಿಸಲು ಹೊಸ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದ್ದು, ಆ ಹಿನ್ನೆಲೆಯಲ್ಲಿ ಇವರ ಸೇವೆ ಕೊನೆಗೊಳಿಸಲಾಗಿದೆಯಂತೆ. ತಾನೇ ನೀಡಿದ ಆದೇಶವನ್ನು ಸರಕಾರ ತಾನೇ ಪಾಲಿಸದಿದ್ದರೆ, ಬೇರೊಬ್ಬರು ಅದನ್ನು ಪಾಲಿಸಬೇಕು ಎಂದು ನಿರೀಕ್ಷಿಸುವುದಾದರೂ ಹೇಗೆ ಸಾಧ್ಯ?
ಹೊಸ ತಂತ್ರಾಂಶ ನಿರ್ವಹಣೆಗೆ ಮಾಡಲಾಗುವ ವೆಚ್ಚವನ್ನು ಈ ನೌಕರರ ಸಂಬಳಕ್ಕಾಗಿ ನೀಡಿದ್ದರೂ ಸಾಕಾಗುತ್ತಿತ್ತು. ಸರಕಾರಗಳಿಗೆ ಆಡಳಿತದ ಸುಗಮತೆ, ಕಚೇರಿ ವ್ಯವಹಾರದಲ್ಲಿ ಆಧುನಿಕತೆ ಅಳವಡಿಸುವುದು ಮಾತ್ರ ಆದ್ಯತೆಯಲ್ಲ. ಈ ಕೆಲಸವನ್ನೇ ನಂಬಿಕೊಂಡಿರುವ ನೌಕರರ ಉದ್ಯೋಗ ಭದ್ರತೆಯೂ ಆದ್ಯತೆಯಾಗಬೇಕು. ಕಲ್ಯಾಣ ಕಾರ್ಯಕ್ರಮಗಳಿಗೆ ಕೋಟಿಗಟ್ಟಲೆ ಖರ್ಚು ಮಾಡುವ ಸರಕಾರಕ್ಕೆ 416 ನೌಕರರ ಕೆಲವೇ ಲಕ್ಷಗಳ ವೇತನ ದೊಡ್ಡ ಹೊರೆಯಾಗಲಾರದು. ಗುತ್ತಿಗೆ ಉಪನ್ಯಾಸಕರೂ ಸೇರಿದಂತೆ ಬಹುತೇಕ ಗುತ್ತಿಗೆ ಸೇವೆಗಳು ಈಗ ‘ಕಾಯಂ ಗುತ್ತಿಗೆ’ ಗಳಾಗಿವೆ ಹಾಗೂ ಸಾವಿರಾರು ಮಂದಿ ಇದನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇಂಥವರನ್ನು ನಡುನೀರಿನಲ್ಲಿ ಕೈ ಬಿಡುವುದು ಸರಿಯಲ್ಲ. ಖಾಸಗಿ ಕಂಪನಿಗಳೇನೋ ಇಂಥ ಕ್ರಮಕ್ಕೆ ಲಾಭ- ನಷ್ಟದ ಲೆಕ್ಕಾಚಾರ ಹೇಳಿ ಸಮರ್ಥನೆ ಕೊಡಬಹುದು. ಆದರೆ ಸರಕಾರ ಹಾಗೆ ಹೇಳುವಂತಿಲ್ಲ. ಅದು ಲಾಭ- ನಷ್ಟದ ಮೇಲೆ ನಡೆಯುವುದಲ್ಲ. ಅದಕ್ಕೊಂದು ಸಾಮಾಜಿಕ ಹೊಣೆಗಾರಿಕೆ ಇದೆ.
ಖಾಸಗಿ ಕಂಪನಿಗಳಲ್ಲಿ ಹೆಚ್ಚಿನವು ಈಗ ತಮ್ಮ ನಷ್ಟದ ಬಾಬ್ತನ್ನು ಕಡಿಮೆಗೊಳಿಸಿಕೊಳ್ಳಲು ನಾನಾ ದಾರಿ ಹುಡುಕುತ್ತಿವೆ. ಮೊದಲ ಆದ್ಯತೆಯಾಗಿ ಅವು ಪರಿಗಣಿಸುವುದು ಉದ್ಯೋಗಿಗಳ ವಜಾವನ್ನೇ. ಸರಕಾರದ ಕ್ರಮ ಇಂಥ ಕಂಪನಿಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟಂತಾಗಬಹುದು. ಇಂಥ ಸನ್ನಿವೇಶದಲ್ಲಿ ಸರಕಾರದ ಮನೆಯ ಹಿರಿಯಣ್ಣನ ಸ್ಥಾನದಲ್ಲಿದ್ದು ಸಮಾಜಕ್ಕೆ ಮೌಲ್ಯ ನಿರ್ದೇಶನ ಮಾಡಬೇಕು. ಬೇಕಿದ್ದರೆ ಖರ್ಚು ಕಡಿಮೆ ಮಾಡುವ ಪರ್ಯಾಯ ದಾರಿಗಳನ್ನು ಅನುಸರಿಸಬಹುದು. ಉದಾಹರಣೆಗೆ, ವೇತನದಲ್ಲಿ ಒಂದಿಷ್ಟು ಭಾಗವನ್ನು ಕಡಿತ ಮಾಡುವ ಕ್ರಮ. ಇದರಿಂದ ಉದ್ಯೋಗಿಗಳ ಕೆಲಸವೂ ಉಳಿಯುತ್ತದೆ; ನಷ್ಟವೂ ಸ್ವಲ್ಪ ಪ್ರಮಾಣದಲ್ಲಿ ಸರಿದೂಗುತ್ತದೆ. ಇತ್ತೀಚೆಗೆ ಸರಕಾರಿ ಉದ್ಯೋಗಿಗಳ ಭತ್ಯೆಗಳನ್ನು ತಡೆಹಿಡಿಯಲು ಮುಂದಾಗಿರುವ ಕ್ರಮವೂ ಪರಿಶೀಲನೆಗೆ ಅರ್ಹ. ಹಾಗೆಯೇ ಕೇಂದ್ರ ಸರಕಾರ ತನ್ನ ಸಂಸದರ ವೇತನದಲ್ಲಿ ಕಡಿತ ಮಾಡಿದೆ. ಪ್ರಧಾನಿ, ರಾಷ್ಟ್ರಪತಿ, ಉಪರಾಷ್ಟ್ರಪತಿಗಳ ವೇತನಗಳಲ್ಲೂ ಕಡಿತ ಮಾಡಿದೆ. ಇದು ಸರಕಾರವೊಂದು ಹಾಕಿಕೊಡುವ ಆದರ್ಶ ಮೇಲ್ಪಂಕ್ತಿ. ಯಾರ ಜೀವನಕ್ಕೂ ಏಕಾಏಕಿ ಧಕ್ಕೆಯಾಗದಂಥ, ಆದರೆ ಗಣನೀಯ ಪ್ರಮಾಣದಲ್ಲಿ ಆರ್ಥಿಕ ನಷ್ಟವನ್ನು ತಡೆಯುವಂಥ ಕ್ರಮಗಳನ್ನು ಹುಡುಕಿ ಅವುಗಳನ್ನು ಜಾರಿಗೆ ತರಬೇಕು. ಸಚಿವರ ಐಷಾರಾಮಿ ವಾಹನ ಸೌಲಭ್ಯ ಸವಲತ್ತುಗಳಲ್ಲಿ ಕಡಿತ ಮಾಡುವುದು ಅಗತ್ಯವಾದೀತು.
ವೇತನ ಕಡಿತಗೊಂಡರೆ, ಆರ್ಥಿಕ ದುಃಸ್ಥಿತಿ ಮುಗಿದ ಬಳಿಕ ಚೇತರಿಸಿಕೊಳ್ಳಬಹುದು ಎಂಬ ಭರವಸೆಯಾದರೂ ಉಳಿದಿರುತ್ತದೆ. ಕೆಲಸವೇ ಇಲ್ಲವಾದರೆ ಭರವಸೆಯೇ ಇಲ್ಲದಾಗುತ್ತದೆ. ಲಾಕ್‌ಡೌನ್ ಹಾಗೂ ತತ್ಪರಿಣಾಮದ ನಂತರದ ದಿನಗಳಲ್ಲಿ ಹೊಸ ಉದ್ಯೋಗಗಳು ಸೃಷ್ಟಿಯಾಗುವುದೂ ಅನುಮಾನಾಸ್ಪದವೇ. ಹೀಗಾಗಿ ಕೆಲಸದಿಂದ ತೆಗೆಯುವುದಕ್ಕಿಂತಲೂ ಅದರಲ್ಲಿ ಉಳಿಸಿಕೊಳ್ಳುವುದು ಆದ್ಯತೆಯಾಗಲಿ.