ಪೌರತ್ವ ಕಾಯಿದೆ : ಅಪಾಯ ಬಿತ್ತಿ ಬೆಳೆದ ಅರ್ಧಸತ್ಯಗಳು

ಪೌರತ್ವ ಕಾಯಿದೆ : ಅಪಾಯ ಬಿತ್ತಿ ಬೆಳೆದ ಅರ್ಧಸತ್ಯಗಳು
ಜತನದಿಂದ ಕಾಪಾಡಿಕೊಂಡು ಬಂದ ಮತೀಯ ಸಾಮರಸ್ಯಕ್ಕೆ ಪೆಟ್ಟು, ದೇಶದ ಪ್ರತಿಷ್ಠೆಗೆ ಘಾಸಿ ಮಾಡಿದ ಅಶಾಂತಿ

ಭಾರತದ ಜನತಂತ್ರಾತ್ಮಕ ಗಣರಾಜ್ಯ ಎಂದೂ ಕೂಡ ಬನಾನಾ ರಿಪಬ್ಲಿಕ್‌ ಆಗಲು ಸಾಧ್ಯವೇ ಇಲ್ಲ. ಈ ಅದಮ್ಯ ಆತ್ಮವಿಶ್ವಾಸಕ್ಕೆ ಕಾರಣ ನಮ್ಮ ಶ್ರೇಷ್ಠ ಸಂವಿಧಾನ. ಜಗತ್ತಿನ 220 ದೇಶಗಳ ಪೈಕಿ 180 ಪ್ರಜಾತಂತ್ರ ದೇಶಗಳಲ್ಲಿರುವ ಶ್ರೇಷ್ಠ ಮಾದರಿಗಳನ್ನು ಅಧ್ಯಯನ ನಡೆಸಿ, ರೂಪುಗೊಂಡಿರುವ ಸರ್ವಶ್ರೇಷ್ಠವಾದ ಸಂವಿಧಾನ ನಮ್ಮದು. ಹಾಗಾಗಿ ಇದು ಇಡೀ ಜಗತ್ತಿನಲ್ಲೇ ಅತ್ಯಂತ ಉತ್ಕೃಷ್ಠವಾದುದು. ಆಧುನಿಕ ಭಾರತದ ವಿಕಾಸದಲ್ಲೂ ನಮ್ಮ ಸಂವಿಧಾನದ ಕೊಡುಗೆ ಅಪಾರವಾದುದು. ನಮಗಿಂತ 150 ವರ್ಷ ಹಳೆಯದಾದ ಅಮೆರಿಕಾ ಸಂವಿಧಾನ 25 ಬಾರಿ ತಿದ್ದುಪಡಿಯಾದರೆ, ನಮ್ಮ ಸಂವಿಧಾನ 103 ಬಾರಿ ತಿದ್ದುಪಡಿಯಾಗಿದೆ. ಇದರರ್ಥ, ಅದು ಕಾಲಕ್ಕೆ ತಕ್ಕಂತೆ ಬದಲಾಗುತ್ತಲೇ ಇದೆ. ಭಾರತದ ಆಡಳಿತ ವ್ಯವಸ್ಥೆ ಯಾವತ್ತೂ ಹಳಿ ತಪ್ಪಿಲ್ಲ. ಈ ಶ್ರೇಯಸ್ಸು ಸಂವಿಧಾನಕ್ಕೆ ಸಲ್ಲುತ್ತದೆ.
ಈ ದೇಶದ ಪೌರನೇ ಅಲ್ಲದ ಪಾತಕಿ ಕಸಬ್‌ನಂಥ ಉಗ್ರನಿಗೂ ನ್ಯಾಯದಾನ ನೀಡಿದ ಭಾರತದ ಸಂವಿಧಾನವನ್ನು, ಪೌರತ್ವದ ವಿಷಯ ಇಟ್ಟುಕೊಂಡೇ ಖಳನಾಯಕನಂತೆ ಚಿತ್ರಿಸುವ ಪ್ರಯತ್ನ ನಡೆದರೆ ಹೇಗೆ? ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸುವ ಭರದಲ್ಲಿ ನಡೆದಿರುವ, ನಡೆಯುತ್ತಿರುವ ಕೆಲವು ವಿದ್ಯಮಾನಗಳ ಹಿನ್ನೆಲೆಯಲ್ಲಿ ಈ ಪೀಠಿಕೆಯನ್ನು ಹಾಕಬೇಕಾಯಿತು. ಪೌರತ್ವ ತಿದ್ದುಪಡಿ ಕಾಯಿದೆ ಎಂಬುದು ಸದ್ಯ ಭಾರತದ ಆಂತರಿಕ ವಿದ್ಯಮಾನವಾಗಿ ಉಳಿದಿಲ್ಲ. ಜಾಗತಿಕವಾಗಿ ಎಲ್ಲರ ಗಮನ ಸೆಳೆದಿದೆ. ಪೌರತ್ವ ತಿದ್ದುಪಡಿ ಕಾಯಿದೆ-2019 ದೇಶದಲ್ಲಿ ಜಾರಿಯಾದ ಮರುಕ್ಷ ಣದಿಂದ ಹಿಡಿದು ಇತ್ತೀಚಿನ ಮಂಗಳೂರು ಬಾಂಬ್‌ ಸ್ಫೋಟದ ಪ್ರಹಸನದವರೆಗೆ ಎಲ್ಲೆಡೆ ಒಂದು ರೀತಿಯ ಅಶಾಂತಿಯ ವಾತಾವರಣ ಸೃಷ್ಟಿಯಾಗಿರುವುದನ್ನು ಅಥವಾ ಉದ್ದೇಶಪೂರ್ವಕವಾಗಿ ಕೆಲವು ಪಕ್ಷ ಗಳು, ಸಿದ್ಧಾಂತವಾದಿಗಳು ಸೃಷ್ಟಿ ಮಾಡುತ್ತಿರುವುದನ್ನು ನಾವೆಲ್ಲ ಗಮನಿಸುತ್ತಲೇ ಇದ್ದೇವೆ. ಕಾಯಿದೆಯ ವಾಸ್ತವ ಕುರಿತು ಗೊಂದಲ ಸೃಷ್ಟಿಸಿ, ಮುಗ್ಧರನ್ನು ಹಾದಿ ತಪ್ಪಿಸುವ ಮೂಲಕ ಹಲವರು ಹಲವು ರೀತಿಯಲ್ಲಿ ಸ್ವಂತ ಮನೆಗೆ ಬೆಂಕಿ ಹಾಕಿ, ಚಳಿ ಕಾಯಿಸಿಕೊಳ್ಳುವ ಕ್ರೌರ್ಯವನ್ನು ಕಣ್ಣಾರೆ ಕಾಣುತ್ತಿದ್ದೇವೆ. ಅರ್ಧ ಸತ್ಯಗಳು ಸುಳ್ಳಿಗಿಂತ ಹೆಚ್ಚು ಅಪಾಯಕಾರಿಯಂತೆ. ಸದ್ಯ ಕೆಲವರು ಕಾಯಿದೆ ಕುರಿತು ಸುಳ್ಳುಗಳನ್ನು, ಅರ್ಧಸತ್ಯವನ್ನು ಹೇಳುತ್ತಾ, ಅಪಾಯಗಳನ್ನೇ ಬಿತ್ತಿ ಬೆಳೆಯುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಒಂದಿಷ್ಟು ವಾಸ್ತವಾಂಶಗಳ ಚರ್ಚೆ ಇಲ್ಲಿದೆ.
* ಪೌರತ್ವ ಕಾಯಿದೆ ಪ್ರಸ್ತಾಪ ಹೊಸದೇ?
ಖಂಡಿತ ಇಲ್ಲ, ಭಾರತದಲ್ಲಿ ಪೌರತ್ವ ಕಾಯಿದೆ 1955ರಲ್ಲೇ ಅಸ್ತಿತ್ವಕ್ಕೆ ಬಂದಿದೆ. ಯಾರಿಗೆ ಮತ್ತು ಎಂಥವರಿಗೆ ಪೌರತ್ವವನ್ನು ಕೊಡಬೇಕು, ಯಾರಿಗೆ ಕೊಡಬಾರದು ಎಂಬುದನ್ನು ಆ ಕಾಯಿದೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಆ ಅವಕಾಶಗಳು ಮತ್ತು ಷರತ್ತುಗಳು ಈಗಲೂ ಹಾಗೆಯೇ ಇವೆ. ಪೌರತ್ವದ ಕುರಿತು ಹೊಸದಾಗಿ ಸೃಷ್ಟಿಯಾಗಿರುವ ಸವಾಲುಗಳನ್ನು ಎದುರಿಸಲು ಬಹಳ ವರ್ಷಗಳ ಬಳಿಕ ಕಾಯಿದೆಗೆ ತಿದ್ದುಪಡಿ ತರಲಾಗಿದೆ. ಈ ಅರ್ಥದಲ್ಲೂ ಇದು ಒಳ್ಳೆಯ ಕಾಯಿದೆ.
* ಕಾಯಿದೆ ಕುರಿತ ಗೊಂದಲ ಯಾಕಾಗಿ?
ಪೌರತ್ವ (ತಿದ್ದುಪಡಿ) ಕಾಯಿದೆ 2019 ಇದು 1955ರಿಂದ ಜಾರಿಯಲ್ಲಿರುವ ಕಾಯಿದೆಯ ತಿದ್ದುಪಡಿಯಷ್ಟೆ. ಮುಸ್ಲಿಮರು ಬಹುಸಂಖ್ಯಾತರಾಗಿರುವ ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನಗಳಲ್ಲಿಧಾರ್ಮಿಕ ಹಿಂಸೆ, ಕಿರುಕುಳ, ಬಲಾತ್ಕಾರಕ್ಕೆ ಒಳಗಾಗಿ ಜೀವನ ನಡೆಸಲು ಸಾಧ್ಯವಾಗದೆ ಆಶ್ರಯ ಅರಸಿ ಭಾರತಕ್ಕೆ ಬಂದಿರುವ ಹಿಂದೂ, ಸಿಖ್‌, ಕ್ರೈಸ್ತ, ಬೌದ್ಧ, ಜೈನ ಮತ್ತು ಪಾರ್ಸಿ ಸಮುದಾಯದ ಪ್ರಜೆಗಳಿಗೆ ಭಾರತದ ಪೌರತ್ವ ನೀಡುವುದು ಈ ತಿದ್ದುಪಡಿಯ ಮುಖ್ಯ ಉದ್ದೇಶ.
* ಇದು ನಿರಂತರ ಅವಕಾಶವೇ?
ಇಲ್ಲ, 2014ರ ಡಿಸೆಂಬರ್‌ 31ರ ಪೂರ್ವದಲ್ಲಿ ಭಾರತಕ್ಕೆ ವಲಸೆ ಬಂದ ಪಾಕಿಸ್ತಾನ, ಬಾಂಗ್ಲಾದೇಶ, ಅಫಘಾನಿಸ್ತಾನ ದೇಶಗಳ ಅಲ್ಪಸಂಖ್ಯಾತ ಸಮುದಾಯದವರಿಗೆ ಮಾತ್ರ ನೀಡಿರುವ ಒಂದು ಬಾರಿಯ ಅವಕಾಶ.
* ನಿಬಂಧನೆ ಆಗಲೂ ಈಗಲೂ ಒಂದೇ
ಉಲ್ಲೇಖಿಸಿರುವ ದೇಶಗಳಿಂದ ಗಡಿಪಾರಿಗೆ ಒಳಗಾಗಿರುವವರು, 1946ರ ವಿದೇಶಿ ಕಾಯಿದೆ ಮತ್ತು 1920ರ ಪಾಸ್‌ಪೋರ್ಟ್‌ ಕಾಯಿದೆ (ಭಾರತಕ್ಕೆ ಪ್ರವೇಶ) ಅಡಿ ಜೈಲಿಗೆ ಹೋಗಿ ಬಂದಿರುವವರಿಗೆ ಕೇವಲ ಅಲ್ಪಸಂಖ್ಯಾತ ಎಂಬ ಕಾರಣಕ್ಕೆ ಪೌರತ್ವ ನೀಡಲಾಗುವುದಿಲ್ಲ!
* ಇದು ಪೌರತ್ವ ನಿರಾಕರಿಸುವ ಅಥವಾ ರದ್ದುಪಡಿಸುವ ಕಾಯಿದೆಯೇ?
ಖಂಡಿತ ಅಲ್ಲ. ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ, ಅಫಘಾನಿಸ್ತಾನ ಸೇರಿ ಜಗತ್ತಿನ ಯಾವುದೇ ದೇಶದ ಪ್ರಜೆ ತಾನು ಬಯಸಿದಲ್ಲಿ ಭಾರತದ ಪೌರತ್ವ ಪಡೆದುಕೊಳ್ಳಲು ಕಾಯಿದೆ ರೀತಿ ಈಗಿರುವ ಅವಕಾಶಕ್ಕೆ ಯಾವುದೇ ಬಾಧಕವಿಲ್ಲ. ಈಗಾಗಲೇ ಭಾರತವಾಸಿಗಳಾಗಿರುವವರಿಗೆ ಯಾವುದೇ ಆತಂಕವಿಲ್ಲ.
* ತಿದ್ದುಪಡಿ ಕಾಯಿದೆ ಭಾರತದ ಎಲ್ಲ ರಾಜ್ಯಗಳಿಗೆ ಅನ್ವಯವೇ?
ಇಲ್ಲ, ಇದು ಭಾರತದ ಈಶಾನ್ಯ ರಾಜ್ಯಗಳಿಗೆ ಅನ್ವಯವಾಗುವುದಿಲ್ಲ. ಅದರ ಕಾರ್ಯಕಾರಣ ಬೇರೆಯೇ ಇದೆ. ಅನ್ಯ ಸಂದರ್ಭದಲ್ಲಿ ಆ ಕುರಿತು ವಿಸ್ತೃತವಾಗಿ ಆಲೋಚನೆ ಮಾಡೋಣ.
* ಅಕ್ರಮ ವಲಸಿಗರೆಂದರೆ ಯಾರು?
1955ರ ಪೌರತ್ವ ಕಾಯಿದೆ ಪ್ರಕಾರ, ಭಾರತದಲ್ಲಿ ಅಕ್ರಮ ವಲಸಿಗರಿಗೆ ಪೌರತ್ವ ನೀಡಲಾಗುವುದಿಲ್ಲ. ಪ್ರಯಾಣದ ವೇಳೆ ಸರಿಯಾದ ದಾಖಲೆಗಳಿಲ್ಲದೆ ಅಂದರೆ ಪಾಸ್‌ಪೋರ್ಟ್‌, ವೀಸಾ ಮತ್ತು ಇತರ ದಾಖಲೆಗಳನ್ನು ಹೊಂದಿಲ್ಲದೆ ಭಾರತಕ್ಕೆ ಬಂದು ನಿಗದಿತ ಅವಧಿಗಿಂತ ಹೆಚ್ಚು ಸಮಯ ಭಾರತದಲ್ಲಿ ನೆಲೆಸಿದ್ದರೆ ಅವರನ್ನು ಅಕ್ರಮ ವಲಸಿಗರೆಂದು ಪರಿಗಣಿಸಲಾಗುತ್ತದೆ.
* ಈ ತಿದ್ದುಪಡಿ ಕಾಯಿದೆ ಧಾರ್ಮಿಕ ಭೇದಭಾವ ಮಾಡುತ್ತದೆಯೇ?
ಪೌರತ್ವ ತಿದ್ದುಪಡಿ ಕಾಯಿದೆಗೆ ತಕರಾರು ತೆಗೆಯುತ್ತಿರುವವರು ಹಾಗೆ ಹೇಳುತ್ತಿದ್ದಾರೆ. ಕಾನೂನಿನ ಎದುರು ಎಲ್ಲರೂ ಸಮಾನರು ಎಂದು ಹೇಳುವ ಭಾರತದ ಸಂವಿಧಾನದ ವಿಧಿ 14ಕ್ಕೆ ಇದು ವಿರುದ್ಧ ಎಂದು ವಾದಿಸಲಾಗುತ್ತಿದೆ. ಇದು ಭಾರತ ಸಂವಿಧಾನದ ಅತಿಮುಖ್ಯ ಭಾಗವಾದ ಜಾತ್ಯತೀತ ಆಶಯಕ್ಕೆ ವಿರುದ್ಧ ಎಂದು ಹೇಳಲಾಗುತ್ತಿದೆ. ಅದು ಶುದ್ಧ ತಪ್ಪು ಮತ್ತು ಅಜ್ಞಾನದಿಂದ ಕೂಡಿದ್ದು. ದುರುದ್ದೇಶಪೂರಿತವಾದುದು.
* ಹಾಗಾದರೆ ಸಂವಿಧಾನದ 14ನೇ ವಿಧಿಯ ವ್ಯಾಖ್ಯಾನ ಏನು?
ಕಾನೂನಿನ ಅಡಿ ಎಲ್ಲರೂ ಸಮಾನರು ಎಂಬ ವ್ಯಾಖ್ಯಾನದ ಅರ್ಥ ಭಾರತ ಎಲ್ಲರ ಪಾಲಿನ ಧರ್ಮಛತ್ರ ಎಂದಲ್ಲ. ಪ್ರಪಂಚದ ಎಲ್ಲ ಅಕ್ರಮ ವಲಸಿಗರೂ ನಮ್ಮವರೆಂದು ಅಪ್ಪಿಕೊಂಡು,ಅವರೆಲ್ಲರಿಗೂ ಪೌರತ್ವ ಕೊಡಬೇಕು ಎಂಬುದೂ ಅಲ್ಲ. ಸಂವಿಧಾನದ ಆ ವಿಧಿಯ ಪ್ರಕಾರ ಗುರುತರ ಅಪರಾಧ ಎಸಗಿರುವ ಆರೋಪಿ ಬಡವ- ಬಲ್ಲಿದ, ಅಬಲ- ಸಬಲ ಎಂದೆಣಿಸದೆ ನ್ಯಾಯ ಪಡೆಯಲು, ತನ್ನನ್ನು ತಾನು ಸಮರ್ಥಿಸಿಕೊಳ್ಳಲು ಇರುವ ಸಮಾನ ಅವಕಾಶ ಎಂದಷ್ಟೇ ಅದನ್ನು ಅಥೈರ್‍ಸಬೇಕು. ಅಂತಹ ಅವಕಾಶವನ್ನು ಮುಂಬೈ ದಾಳಿಕೋರ ಭಯೋತ್ಪಾದಕರಿಂದ ಹಿಡಿದು ನಿರ್ಭಯಾ ಅತ್ಯಾಚಾರ ಆರೋಪಿಗಳವೆರೆಗೆ ಕರುಣಿಸಿ ನಮ್ಮ ವ್ಯವಸ್ಥೆ ಶಹಬ್ಭಾಸ್‌ ಎನಿಸಿಕೊಂಡಿದೆ.
* ಇದು ಹಠಾತ್ತಾಗಿ ಆದ ಬೆಳವಣಿಗೆಯೇ?
ಕಾಯಿದೆಯನ್ನು ಈಗಲೇ ಜಾರಿಗೊಳಿಸುವುದು ಬೇಕಿತ್ತೇ ಬೇಡವೇ ಎಂಬುದು ಬೇರೆ ವಿಚಾರ. ಆದರೆ ಇದು ಹಠಾತ್ತಾಗಿ ಹುಟ್ಟಿಕೊಂಡ ಆಲೋಚನೆಯಲ್ಲ. ಬಿಜೆಪಿ ಆರು ವರ್ಷಗಳ ಹಿಂದೆಯೇ ತನ್ನ ಪ್ರಣಾಳಿಕೆಯಲ್ಲಿ ಈ ವಿಷಯವನ್ನು ಘೋಷಿಸಿತ್ತು. ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಬಹಳ ವರ್ಷಗಳ ಹಿಂದೆಯೇ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ನಿರಂತರವಾಗಿ ಧಾರ್ಮಿಕ ತಾರತಮ್ಯಕ್ಕೆ ಒಳಗಾಗಿ ಜೀವನ ನಡೆಸಲು ಕಷ್ಟ ಅನುಭವಿಸುತ್ತಿರುವ ಭಾರತದ ನೆರೆಯ ದೇಶಗಳ ಧಾರ್ಮಿಕ ಅಲ್ಪಸಂಖ್ಯಾತರಿಗೆ ಸರ್ವಧರ್ಮ ಸಮಭಾವದ ಆಶಯಕ್ಕೆ ಅನುಗುಣವಾಗಿ ಪೌರತ್ವ ನೀಡುವುದಾಗಿ ಆಡಳಿತಾರೂಢ ಬಿಜೆಪಿ ಚುನಾವಣಾಪೂರ್ವ ಅವಧಿಯಲ್ಲಿಯೇ ಭರವಸೆ ನೀಡಿತ್ತು.
* ಪೌರತ್ವ ಕಾಯಿದೆಗೂ, ಎನ್‌ಆರ್‌ಸಿಗೂ ಸಂಬಂಧವುಂಟೇ?
ಇವೆರಡಕ್ಕೂ ಯಾವುದೇ ಸಂಬಂಧ ಇಲ್ಲ. ರಾಷ್ಟ್ರೀಯ ನಾಗರಿಕರ ದಾಖಲಾತಿ ಪ್ರಕ್ರಿಯೆ ಜಾರಿಗೆ ತಂದ ಅಸ್ಸಾಂ ಅಕ್ರಮ ವಲಸಿಗರನ್ನು ಮಾತ್ರ ಗುರಿಯಾಗಿಟ್ಟುಕೊಂಡಿತ್ತು. ಪೌರತ್ವ ತಿದ್ದುಪಡಿ ಮಸೂದೆ ಧರ್ಮ, ನಂಬಿಕೆಯ ಆಧಾರವಾಗಿಟ್ಟುಕೊಂಡಿದ್ದರೆ, ರಾಷ್ಟ್ರೀಯ ನಾಗರಿಕ ದಾಖಲಾತಿಯಡಿ ತಾವು ಅಥವಾ ತಮ್ಮ ಪೂರ್ವಜರು ಅಸ್ಸಾಂನಲ್ಲಿ 1971ರ ಮಾರ್ಚ್‌ 24ರ ಮೊದಲು ನೆಲೆಸಿದ್ದರು ಎಂದು ಸಾಬೀತುಪಡಿಸಬೇಕು.
* ಪೌರತ್ವ ಕಾಯಿದೆ ಚರ್ಚೆ, ಪರಾಮರ್ಶೆ ಇಲ್ಲದೆ ಅಂಗೀಕಾರವಾಗಿದ್ದೇ?
ಇಲ್ಲ, 1955ರ ಪೌರತ್ವ ಕಾಯಿದೆಗೆ ತಿದ್ದುಪಡಿ ಪ್ರಸ್ತಾಪ ಸಂಸತ್ತಿನಲ್ಲಿ ಮಂಡನೆಯಾದದ್ದು 2016ರ ಜನವರಿಯಲ್ಲಿ. ಬಳಿಕ 2016ರ ಆಗಸ್ಟ್‌ನಲ್ಲಿ ಪ್ರಸ್ತಾಪವನ್ನು ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲಾಗಿತ್ತು. ಜಂಟಿ ಸಂಸದೀಯ ಸಮಿತಿ ಪರಿಶೀಲನೆ ಮಾಡಿ 2019ರ ಜನವರಿ 7ರಂದು ವರದಿ ನೀಡಿದ ಬಳಿಕ ಅದೇ ತಿಂಗಳ ಎಂಟನೇ ತಾರೀಕಿನಂದು ಸಂಸತ್ತು ಅದನ್ನು ಸ್ವೀಕರಿಸಿತು.
* ಸಂವಿಧಾನದ ಬದ್ಧ ಸಮಾನತೆಯ ಆಶಯ ಯಾವುದು?
ಎಲ್ಲ ಭಾರತವಾಸಿಗಳನ್ನು ಸಮಾನವಾಗಿ ನೋಡಬೇಕೆಂಬುದು ನಿಜವಾದ ಆಶಯವಾಗಿದ್ದರೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎಲ್ಲ ದೇಶವಾಸಿಗಳನ್ನು ಸಮಾನವಾಗಿ ನೋಡಬೇಕು. ಸಮಾನ ಅವಕಾಶ ಕಲ್ಪಿಸಬೇಕು. ಅಲ್ಪಸಂಖ್ಯಾತ ಬಹುಸಂಖ್ಯಾತ ಎಂಬ ವರ್ಗವನ್ನು ಸೃಷ್ಟಿ ಮಾಡಬಾರದು. ಜಮ್ಮು ಕಾಶ್ಮೀರಕ್ಕೊಂದು ಕಾನೂನು ಇತರೆಡೆಯ ಪ್ರಜೆಗಳಿಗೆ ಒಂದು ಕಾನೂನೆಂದು ಮಾಡಬಾರದು. ಅಲ್ಲಿನ ನಾಗರಿಕರಿಗೊಂದು ಹಕ್ಕು, ಇಲ್ಲಿನ ನಾಗರಿಕರಿಗೊಂದು ಹಕ್ಕೆಂದು ಭೇದವೆಣಿಸಬಾರದು. ಇದು ಸಂವಿಧಾನದ ವಿಧಿ 44ರ ಆಶಯ. ಅದೇ ಸಮಾನ ನಾಗರಿಕ ಸಂಹಿತೆ. ಅದಕ್ಕೆ ಯಾರೂ ತಕರಾರು ತೆಗೆಯಕೂಡದು. ಅದು ಸಾಧ್ಯವಾಗುತ್ತದೆಯೇ?
* ಮಾನವ ಹಕ್ಕುಗಳ ಉಲ್ಲಂಘನೆಗೆ ದಾರಿ ಮಾಡಿಕೊಡಬೇಕೇ?
1951ರಲ್ಲಿ ಮಾಡಿಕೊಂಡ ಭಾರತ ಪಾಕ್‌ ಸರಕಾರದ ನಡುವಿನ ಒಪ್ಪಂದದ ಪ್ರಕಾರ ಎರಡು ಲಕ್ಷ ಜನರನ್ನು ನಿರಾಶ್ರಿತರೆಂದು ಗುರುತಿಸಲಾಗಿತ್ತು. ವಿಶ್ವಸಂಸ್ಥೆ ಮಾಡಿರುವ ಅಂದಾಜಿನ ಪ್ರಕಾರ 2019ರ ಹೊತ್ತಿಗೆ ಭಾರತದಲ್ಲಿ 51 ಲಕ್ಷ ಕ್ಕೂ ಅಧಿಕ ನಿರಾಶ್ರಿತರಿದ್ದಾರೆ. ಅದರಲ್ಲಿ 31 ಲಕ್ಷ ಕ್ಕೂ ಹೆಚ್ಚು ಬಾಂಗ್ಲಾದಿಂದ, ಹತ್ತು ಲಕ್ಷ ಕ್ಕೂ ಹೆಚ್ಚು ಪಾಕಿಸ್ತಾನದಿಂದ, ಉಳಿದವರು ಅಫಫಾನಿಸ್ತಾನ, ಮ್ಯಾನ್ಮಾರ್‌, ಶ್ರೀಲಂಕಾ, ಚೀನಾ ಮುಂತಾದ ದೇಶಗಳಿಂದ ಬಂದವರು. ಈಗಲೂ ಅಕ್ರಮ ವಲಸೆ ಅವ್ಯಾಹತವಾಗಿ ನಡೆಯುತ್ತಿದೆ. ಹಾಗಾದರೆ ಇನ್ನೂ ಎಷ್ಟು ದಿನ ಇದೇ ಪ್ರವೃತ್ತಿ ಮುಂದುವರೆಯಲು ಬಿಡಬೇಕು. ಒಂದು ಈಗಾಗಲೇ ಬಂದವರಿಗೆ ನಾಗರಿಕತ್ವ ಕಲ್ಪಿಸಬೇಕು, ಮತ್ತೊಂದು ಇನ್ನು ಮುಂದೆ ಇದೇ ವಲಸೆ ಮುಂದುವರೆದು ಇಲ್ಲಿನವರ ಅನ್ನ, ಆಸ್ತಿ ಕಸಿದುಕೊಳ್ಳುವ ಪ್ರವೃತ್ತಿಗೆ ಕಡಿವಾಣ ಹಾಕಬೇಕಲ್ಲವೆ. ಅದಕ್ಕೆ ಇದಕ್ಕಿಂತ ಉತ್ತಮ ಉಪಕ್ರಮ ಬೇರೆ ಯಾವುದಿದೆ?
ಈಗ ಆಗಿರುವ ಮತ್ತು ಆಗುತ್ತಿರುವ ಬೆಳವಣಿಗೆಯಿಂದ ಮತೀಯ ಸಾಮರಸ್ಯಕ್ಕೆ ಹಿಂದೆಂದೂ ಆಗಿರದಂತಹ ಪೆಟ್ಟು ಬಿದ್ದಿದೆ. ಅದಕ್ಕೆ ಕಾರಣ ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ನಿರ್ದಿಷ್ಟ ಸಮುದಾಯವನ್ನು ದಿಕ್ಕು ತಪ್ಪಿಸಿದ ದೊಡ್ಡ ಮತ್ತು ಸಣ್ಣ ರಾಜಕೀಯ ಪಕ್ಷ ಗಳೇ ನೇರ ಹೊಣೆಯಾಗಬೇಕು ತಾನೆ. ಇದೆಲ್ಲದರ ಪರಿಣಾಮ ಭಾರತದ ಆಡಳಿತ ವ್ಯವಸ್ಥೆಯ ಮೇಲೆ ಅಗಾಧ ನಕಾರಾತ್ಮಕ ಪರಿಣಾಮ ಬೀರಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿಷ್ಠೆಗೆ ದೊಡ್ಡ ಘಾಸಿ ಆಗಿದೆ. ಇನ್ನಾದರೂ ಈ ಸೂಕ್ಷ್ಮ ಸಂಗತಿಗಳನ್ನು ಸಂಬಂಧಪಟ್ಟವರು ಗಮನಿಸುತ್ತಾರಾ?
ಇತ್ತೀಚೆಗೆ ಮಾತಿಗೆ ಸಿಕ್ಕ ಕಾಂಗ್ರೆಸ್‌ನ ಕೆಲವು ಹಿರಿಯ ತಲೆಯಾಳುಗಳೇ ಕಾಯಿದೆ ಕುರಿತು ಮಾತನಾಡಿದ್ದು ಅಚ್ಚರಿ ಹುಟ್ಟಿಸಿತು. ಸ್ವಾತಂತ್ರ್ಯ ಬಂದಾಗಿನಿಂದಲೂ ಅಲ್ಪಸಂಖ್ಯಾತರ ತುಷ್ಟೀಕರಣದ ಹಿಂದೆ ಬಿದ್ದಿರುವ ಕಾಂಗ್ರೆಸ್‌ ಇದಕ್ಕೆ ತೆತ್ತ ಬೆಲೆ ಅಪಾರ. ಆ ತುಷ್ಟೀಕರಣ ನೀತಿಯಿಂದ ಕಳೆದ ಚುನಾವಣೆಯಲ್ಲಿ ಹೊರಬಂದು ಚೇತರಿಸಿಕೊಳ್ಳುತ್ತಿದೆ ಎನ್ನುವಷ್ಟರಲ್ಲಿಯೇ ಈ ಪೌರತ್ವ ಕಾಯಿದೆಯಿಂದ ಮತ್ತೆ ಅಲ್ಪಸಂಖ್ಯಾತರ ಪರ ವಾಲಿ, ಮತ್ತೆ ತುಷ್ಟೀಕರಣದ ಖೆಡ್ಡಾಗಿ ಬಿದ್ದಿದೆ. ದೇಶದ ಹಿತವನ್ನೇ ಬಲಿಕೊಡುವಂತೆ ಮಾತನಾಡುವ ತುಕಡೇ ತುಕಡೇ ಗ್ಯಾಂಗ್‌ ಪರವಾಗಿ ಕಾಂಗ್ರೆಸ್‌ ನಿಲ್ಲಬಾರದಿತ್ತು ಎಂದು ಕಾಂಗ್ರೆಸಿಗರು ಬೇಸರ ಪಟ್ಟುಕೊಂಡರು.
ಇತ್ತ ಬಿಜೆಪಿಯಲ್ಲಿ ಸೋಮಶೇಖರ ರೆಡ್ಡಿ, ರೇಣುಕಾಚಾರ್ಯ ಅವರಂಥ ಕೆಲವು ವಾಚಾಳಿಗಳು, ಈ ಕಾಯಿದೆಯನ್ನು ಎಳ್ಳಷ್ಟು ಅರ್ಥ ಮಾಡಿಕೊಳ್ಳದೇ, ಅದರ ಚುಂಗು ಹಿಡಿದುಕೊಂಡು, ಬೇಜವಾಬ್ದಾರಿಯುತವಾಗಿ ಮಾತನಾಡುತ್ತಿದ್ದಾರೆ. ಇದು ಅವಿವೇಕವಲ್ಲದೇ ಮತ್ತಿನ್ನೇನೂ ಅಲ್ಲ. ಇಂಥ ಪ್ರಭೂತಿಗಳೇ ಬಿಜೆಪಿಗೆ ದೊಡ್ಡ ಶಾಪ.
ಇರಲಿ, ಭಾರತದ ಸಂವಿಧಾನದ ಕುರಿತು ಸಾಂದರ್ಭಿಕವಾಗಿ ಉಲ್ಲೇಖಿಸಲೇಬೇಕಾದ, ಸಕಾರಾತ್ಮಕ ಚಿಂತನೆ ಮಾಡುವ ಎಲ್ಲರಿಗೂ ಇಷ್ಟವಾಗುವ ಇನ್ನೂ ಹಲವು ಸಂಗತಿಗಳ ಕುರಿತು ಬರೆಯಬೇಕಿದೆ. ಮುಂದಿನ ಭಾಗದಲ್ಲಿ ಆ ಕುರಿತು ಗಮನ ಹರಿಸೋಣ.

ಓದುಗರ ಒಡಲಾಳ
ಆರ್ಥಿಕ ಹಿಂಜರಿತ ದೇಶವನ್ನು ಬಲವಾಗಿ ಕಾಡುತ್ತಿದೆ. ರಾಜ್ಯ ಮತ್ತು ಕೇಂದ್ರ ಸರಕಾರದ ತೆರಿಗೆ ಸಂಗ್ರಹ ಗಣನೀಯವಾಗಿ ಕುಸಿಯುತ್ತಿದೆ. ಈ ಸಂದರ್ಭದಲ್ಲಿ ಅತೃಪ್ತರ ತೃಪ್ತಿಪಡಿಸಲು, ಬೆಂಬಲಿಗರ ಖುಷಿಪಡಿಸಲು ರಾಜ್ಯ ಸರಕಾರ ಅನಗತ್ಯ ಹುದ್ದೆ ಸೃಷ್ಟಿಸುವುದನ್ನು ನಿಲ್ಲಿಸಬೇಕು. ಈಗ ನೇಮಕಗೊಂಡ ಅನೇಕ ಹುದ್ದೆಗಳನ್ನು ರದ್ದುಪಡಿಸಲು ಹಿಂದೇಟು ಹಾಕಬಾರದು.
ಮುನೀರ್‌, ಭದ್ರಾವತಿ

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top