ಕಾಂಗ್ರೆಸ್‌ಗೆ ಕಿರಿಯರ ಬೈ : ಪಕ್ಷ ಒಡೆಯುತ್ತಿರುವ ಹಿರಿತಲೆ- ಕಿರಿತಲೆ ಸಂಘರ್ಷ

ಒಂದೆಡೆ ಬಿಜೆಪಿ ಹೊಸ ಹೊಸ ಮುಖಗಳಿಗೆ ಮನ್ನಣೆ ಕೊಡುತ್ತಾ ಮುನ್ನಡೆದಿದ್ದರೆ, ಅದರ ಎದುರು ತಕ್ಕ ಹೋರಾಟ ನೀಡಬೇಕಿದ್ದ ಪ್ರತಿಪಕ್ಷ ಕಾಂಗ್ರೆಸ್‌ ತನ್ನ ಯುವ ನಾಯಕರನ್ನೆಲ್ಲ ಕಳೆದುಕೊಳ್ಳುತ್ತಾ ಸಾಗಿದೆ. ಈ ವಿದ್ಯಮಾನದ ಬಗ್ಗೆ ಒಂದು ನೋಟ ಇಲ್ಲಿದೆ.

ರಾಜಸ್ಥಾನದಲ್ಲಿ ಬಿರುಗಾಳಿ:
ರಾಜಸ್ಥಾನದ ರಾಜಕಾರಣದಲ್ಲಿ ಎದ್ದಿರುವ ಬಿರುಗಾಳಿ, ಕಾಂಗ್ರೆಸ್‌ನ ಒಳಗಿನ ವಿದ್ಯಮಾನಗಳನ್ನು ಅವಲೋಕಿಸುವಂತೆ ಮಾಡಿದೆ. ಉಪ ಮುಖ್ಯಮಂತ್ರಿಯಾಗಿದ್ದ ಸಚಿನ್‌ ಪೈಲಟ್‌ ಅವರು ಶಾಸಕರನ್ನು ಕರೆದುಕೊಂಡು ಪಕ್ಷದೊಳಗೆ ಬಂಡಾಯ ಎದ್ದಿದ್ದಾರೆ. ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಹಾಗೂ ಹೈಕಮಾಂಡ್‌ನ ಹಿರಿಯ ನಾಯಕರ ಮೇಲಿನ ಆಕ್ರೋಶವನ್ನು ಅವರು ಈ ಮೂಲಕ ತೀರಿಸಿಕೊಂಡಿದ್ದಾರೆ. ಸಚಿನ್‌ ಜೊತೆಗಿನ ಸಂಧಾನವೆಲ್ಲ ವಿಫಲವಾಗಿ, ಕಾಂಗ್ರೆಸ್‌ ಅವರನ್ನು ಎಲ್ಲ ಪ್ರಮುಖ ಹುದ್ದೆಗಳಿಂದ ಉಚ್ಛಾಟಿಸಿದೆ. ಚುನಾವಣೆ ಕಾಲದಲ್ಲಿ ಜನರಿಗೆ ನೀಡಿದ್ದ ಭರವಸೆಗಳನ್ನು ಸರಕಾರ ಈಡೇರಿಸುತ್ತಿಲ್ಲ ಎಂಬುದು ಬಂಡಾಯಗಾರರ ಆರೋಪ. ಆದರೆ ಮುಖ್ಯಮಂತ್ರಿ ಹುದ್ದೆ ದೊರೆತಿಲ್ಲ ಎಂಬ ಸಚಿನ್‌ ಅಸಮಾಧಾನವೇ ಅವರ ಬಂಡಾಯಕ್ಕೆ ಕಾರಣ. ಸದ್ಯಕ್ಕೆ ಕಾಂಗ್ರೆಸ್‌ನ ಎರಡೂ ಕಡೆಯ ಶಾಸಕರು ರೆಸಾರ್ಟ್‌ಗಳಲ್ಲಿ ಬೀಡು ಬಿಟ್ಟಿದ್ದರೆ, ಸಚಿನ್‌ ಬಣ ಮತ್ತು ಪ್ರತಿಪಕ್ಷ ಬಿಜೆಪಿ ಬಹುಮತ ಸಾಬೀತಿಗೆ ಒತ್ತಾಯಿಸಿವೆ. ಇದು ಬಿಜೆಪಿಯ ಚಿತಾವಣೆ ಎಂದು ಗೆಹ್ಲೋಟ್‌ ಆರೋಪಿಸಿದ್ದಾರೆ. ಈ ಪ್ರಕರಣ, ಮೂರು ತಿಂಗಳ ಹಿಂದೆ ಮಧ್ಯಪ್ರದೇಶದಲ್ಲಿ ನಡೆದ ಇಂಥದೇ ಕಾಂಗ್ರೆಸ್‌ ಬಂಡಾಯವನ್ನು ನೆನಪಿಸಿದೆ.

ಮೂಲೆ ಸೇರಿದ ಯುವಕರು
2014ರ ಚುನಾವಣೆಯಲ್ಲಿ ಬಿಜೆಪಿ ಗೆಲುವು ಪಡೆದಾಗ, ಕಾಂಗ್ರೆಸ್‌ನಲ್ಲಿ ಯುವ ನಾಯಕರಿಗೆ ಮಣೆ ಹಾಕಬೇಕು ಎಂಬ ಬಲವಾದ ಕೂಗು ಎದ್ದಿತ್ತು. ಆಗ ರಾಹುಲ್‌ ಗಾಂಧಿ ಅವರಿಗೆ ಪಕ್ಷದ ಅಧ್ಯಕ್ಷತೆಯ ಪಟ್ಟ ಕಟ್ಟಲಾಗಿತ್ತು. ರಾಹುಲ್‌ ಗಾಂಧಿ ತಮಗೆ ಆಪ್ತರಾದ ಯುವ ನಾಯಕರ ಒಂದು ಪಡೆಯನ್ನೇ ರಾಜ್ಯಗಳಲ್ಲಿ ಬೆಳೆಸಿದ್ದರು. ಮಧ್ಯಪ್ರದೇಶದಲ್ಲಿ ಜ್ಯೋತಿರಾದಿತ್ಯ ಸಿಂದ್ಯಾ, ರಾಜಸ್ಥಾನದಲ್ಲಿ ಸಚಿನ್‌ ಪೈಲಟ್‌, ಮುಂಬಯಿಯಲ್ಲಿ ಮಿಲಿಂದ್‌ ದೇವೊರಾ- ಹೀಗೆ. ಆದರೆ, ದಶಕಗಳಿಂದ ಅಧಿಕಾರ ಹಾಗೂ ಪ್ರಭಾವದ ರುಚಿ ಕಂಡಿದ್ದ ಹೈಕಮಾಂಡ್‌ನ ಹಿರಿಯ ನಾಯಕರಿಗೆ ಇದು ಪಥ್ಯವಾಗಿರಲಿಲ್ಲ. ಹೀಗಾಗಿ ಯುವ ನಾಯಕರಿಗೂ ಹಿರಿಯ ನಾಯಕರಿಗೂ ಆಗಾಗ ಘರ್ಷಣೆ ನಡೆಯುತ್ತಲೇ ಇತ್ತು. 2019ರ ಚುನಾವಣೆಯಲ್ಲಿ ರಾಹುಲ್‌ ನೇತೃತ್ವದಲ್ಲಿ ಕಾಂಗ್ರೆಸ್‌ ದಯನೀಯ ಸೋಲು ಕಂಡಿತು. ಇದರಿಂದ ಹತಾಶರಾದ ರಾಹುಲ್‌ ಪಕ್ಷದ ಅಧ್ಯಕ್ಷತೆಗೆ ರಾಜೀನಾಮೆ ನೀಡಿದರು. ಒತ್ತಾಯಿಸಿದರೂ ಮರಳಲೇ ಇಲ್ಲ. ಸೋನಿಯಾ ಗಾಂಧಿ ಅವರೇ ಪಕ್ಷದ ಹೊಣೆ ಹೊರಬೇಕಾಯಿತು. ಇದರೊಂದಿಗೆ ಪಕ್ಷದಲ್ಲಿ ಹಿರಿಯರೇ ಮತ್ತೆ ಪ್ರಭಾವಿಗಳಾದರು. ಯುವಕರು ಮೂಲೆಗುಂಪಾದರು. ‘ಯುವಕರು ಪಕ್ಷವನ್ನು ಗೆಲ್ಲಿಸಲಿಲ್ಲ’ ಎಂಬುದು ಹಿರಿಯ, ಬಲಿಷ್ಠ ನಾಯಕರ ನಂಬಿಕೆ. ವಯಸ್ಸಾದರೂ ಖಜಾನೆಯ ಕೀಲಿಕೈ ಕೊಡದ ಮನೆ ಯಜಮಾನನಂತೆ ಹಿರಿಯ ನಾಯಕರು ನಡೆದುಕೊಳ್ಳುತ್ತಿದ್ದರೆ, ಸಿಟ್ಟಿಗೆದ್ದ ಯುವ ನಾಯಕರು ಒಬ್ಬೊಬ್ಬರಾಗಿ ಬಂಡಾಯವೇಳುತ್ತಿದ್ದಾರೆ. ಈ ಬಂಡಾಯದಿಂದ ಬಿಜೆಪಿ ಲಾಭ ಮಾಡಿಕೊಳ್ಳುತ್ತಿದೆ.

ಜ್ಯೋತಿರಾದಿತ್ಯ ಸಿಂದ್ಯಾ
ಮನಮೋಹನ್‌ ಸಿಂಗ್‌ ಅವರ ಕ್ಯಾಬಿನೆಟ್‌ನಲ್ಲಿ ರಾಹುಲ್‌ ಗಾಂಧಿ ಆಪ್ತರಾದ ಜ್ಯೋತಿರಾದಿತ್ಯ ಸಿಂದ್ಯಾ ಹಾಗೂ ಸಚಿನ್‌ ಪೈಲಟ್‌ ಇಬ್ಬರೂ ಸಚಿವರಾಗಿದ್ದರು. ಇಬ್ಬರೂ ತಮ್ಮ ರಾಜ್ಯಗಳಾದ ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ 2019ರ ಚುನಾವಣೆಯಲ್ಲಿ ಪಕ್ಷವನ್ನು ಗೆಲುವಿನತ್ತ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದಕ್ಕೆ ಪ್ರತಿಯಾಗಿ ಇವರಿಬ್ಬರಿಗೂ ರಾಜ್ಯದ ಮುಖ್ಯಮಂತ್ರಿ ಸ್ಥಾನ ದೊರೆಯಲಿದೆ ಎಂಬ ನಿರೀಕ್ಷೆಯಿತ್ತು. ಆದರೆ ನಿರೀಕ್ಷೆ ತಲೆಕೆಳಗಾಗಿ ಮಧ್ಯಪ್ರದೇಶದಲ್ಲಿ ಕಮಲ್‌ನಾಥ್‌ ಗದ್ದುಗೆಯೇರಿದರು. ರಾಜಸ್ಥಾನದಲ್ಲಿ ಅಶೋಕ್‌ ಗೆಹ್ಲೋಟ್‌ ಮುಖ್ಯಮಂತ್ರಿಯಾದರು. ಸಚಿನ್‌ ಉಪಮುಖ್ಯಮಂತ್ರಿಯಾದರು. ಆದರೆ ಹಿರಿಯರಿಗೂ ಕಿರಿಯರಿಗೂ ಅಧಿಕಾರದ ವಿಚಾರದಲ್ಲಿ ಘರ್ಷಣೆ ನಿರಂತರವಾಗಿ ಇತ್ತು. ಮಧ್ಯಪ್ರದೇಶದಲ್ಲಿ ಕಳೆದ ಮಾರ್ಚ್‌ನಲ್ಲಿ ಇದು ಸ್ಫೋಟಗೊಂಡಿತು. ಜ್ಯೋತಿರಾದಿತ್ಯ ಬಂಡಾಯವೆದ್ದು ಬಿಜೆಪಿಯನ್ನು ಸೇರಿಕೊಂಡರು. ಅವರಿಗೆ ರಾಜ್ಯಸಭೆ ಟಿಕೆಟ್‌ ದೊರೆಯಿತು.

ಮಿಲಿಂದ್‌ ದೇವೊರಾ
ದಕ್ಷಿಣ ಮುಂಬಯಿಯ ಪ್ರಭಾವಿ ನಾಯಕ ಮಿಲಿಂದ್‌ ದೇವೊರಾ, ಕಳೆದ ಒಂದು ವರ್ಷದಿಂದ ಪಕ್ಷದಲ್ಲಿ ತಮ್ಮ ಭಿನ್ನಮತವನ್ನು ದಿಟ್ಟವಾಗಿಯೇ ಪ್ರಕಟಿಸುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿನ ಸೋಲಿನ ಹೊಣೆ ಹೊತ್ತು ಮುಂಬಯಿಯ ಪಕ್ಷದ ಅಧ್ಯಕ್ಷತೆಗೆ ರಾಜೀನಾಮೆ ನೀಡಿದ್ದರು. ಕೇಂದ್ರ ಸರಕಾರ ಜಮ್ಮು ಕಾಶ್ಮೀರದ ಆರ್ಟಿಕಲ್‌ 370ನ್ನು ರದ್ದುಪಡಿಸಿದಾಗ, ಕಾಂಗ್ರೆಸ್‌ ಈ ನಡೆಯನ್ನು ಖಂಡತುಂಡವಾಗಿ ವಿರೋಧಿಸುತ್ತಿದ್ದರೂ, ಮಿಲಿಂದ್‌ ಅದನ್ನು ಸಮರ್ಥಿಸಿಕೊಂಡಿದ್ದರು. ದೇಶದ ಅಖಂಡತೆ ಸಾರ್ವಭೌಮತೆಗಳ ಪ್ರಶ್ನೆ ಬಂದಾಗ ಪಕ್ಷಭೇದ ನೋಡಬಾರದು ಎಂದಿದ್ದರು. ಹೌಡಿ ಮೋದಿ ಸಮಾವೇಶ ನಡೆದಾಗ ಮೋದಿಯವರನ್ನು ಶ್ಲಾಘಿಸಿದ್ದರು.

ಜಿತಿನ್‌ ಪ್ರಸಾದ
ಉತ್ತರಪ್ರದೇಶದ ಕಾಂಗ್ರೆಸ್‌ನ ಯುವ ನಾಯಕರಲ್ಲೊಬ್ಬ ಹಾಗೂ ಮನಮೋಹನ್‌ ಸಿಂಗ್‌ ಸರಕಾರದಲ್ಲಿ ಸಚಿವರಾಗಿದ್ದ ಜಿತಿನ್‌ ಪ್ರಸಾದ ಕೂಡ ಬಿಜೆಪಿ ಸೇರಲಿದ್ದಾರೆ ಎಂದು ಭಾವಿಸಲಾಗಿದೆ. ಇವರ ತಂದೆ ಜಿತೇಂದ್ರ ಪ್ರಸಾದ್‌ ಅವರು ಕಾಂಗ್ರೆಸ್‌ ಅಧ್ಯಕ್ಷತೆಗೆ ಸೋನಿಯಾ ಎದುರು ಸ್ಪರ್ಧಿಸಿದ್ದರು. ಪಕ್ಷದಲ್ಲಿ ಸಾಕಷ್ಟು ಹೊಣೆಗಾರಿಕೆ ನೀಡಿಲ್ಲ; ತನ್ನ ಪ್ರಾಯದ ಇತರರಿಗೆ ಕಾಂಗ್ರೆಸ್‌ನ ಪ್ರಮುಖ ಹುದ್ದೆಗಳನ್ನು ನೀಡಲಾಗಿದೆ ಎಂಬ ಸಿಟ್ಟು ಇವರಲ್ಲಿ ಇದೆ. 2019ರಲ್ಲೇ ಬಿಜೆಪಿ ಸೇರುವ ನಿರ್ಧಾರ ಮಾಡಿದ್ದ ಅವರು ನಂತರ ರಾಹುಲ್‌ ಗಾಂಧಿಯ ವಿನಂತಿಯ ಬಳಿಕ ಅದನ್ನು ಹಿಂದೆಗೆದುಕೊಂಡಿದ್ದರು. 370ನೇ ವಿಧಿ ರದ್ದತಿ ಕ್ರಮವನ್ನು ಇವರೂ ಬೆಂಬಲಿಸಿ ಮಾತನಾಡಿದ್ದರು.

ದೀಪೇಂದರ್‌ ಹೂಡಾ
ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್‌ ಹೂಡಾ ಅವರ ಪುತ್ರ ದೀಪೇಂದರ್‌ ಹೂಡಾ ಪಕ್ಷದ ಹೈಕಮಾಂಡ್‌ ತೀರ್ಮಾನಗಳ ಬಗ್ಗೆ ಭಿನ್ನಮತ ದಾಖಲಿಸುತ್ತ ಬಂದಿದ್ದಾರೆ. ಆರ್ಟಿಕಲ್‌ 370 ರದ್ದತಿ ಬಗ್ಗೆ ಬಿಜೆಪಿ ಪರ ನಿಲುವ ತಾಳಿದ್ದರು. ಅವರಿಗೆ ಯಾವುದೇ ಸಾಂಸ್ಥಿಕ ಹೊಣೆಗಾರಿಕೆ ನೀಡದೆ ಕಡೆಗಣಿಸಲಾಗಿದೆ.

ಸಂದೀಪ್‌ ದೀಕ್ಷಿತ್‌
ದಿಲ್ಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್‌ ಅವರ ಪುತ್ರ ಸಂದೀಪ್‌ ದೀಕ್ಷಿತ್‌ ಕೂಡ ಕಾಂಗ್ರೆಸ್‌ನಲ್ಲಿ ಮೂಲೆಗುಂಪಾದ ಇನ್ನೊಬ್ಬ ಯುವ ನಾಯಕ. ಕಳೆದ ಫೆಬ್ರವರಿಯಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ದೀಕ್ಷಿತ್‌ ಕಣದಲ್ಲಿ ಕಾಣಿಸಿಕೊಳ್ಳಲೇ ಇಲ್ಲ.

ಸಂಜಯ್‌ ಝಾ
ಮಹಾರಾಷ್ಟ್ರದ ಕಾಂಗ್ರೆಸ್‌ ಮುಖಂಡ, ಉದ್ಯಮಿ ಹಾಗು ಪಕ್ಷದ ಮಾಜಿ ವಕ್ತಾರ ಸಂಜಯ್‌ ಝಾ ಅವರನ್ನು ಪಕ್ಷದಿಂದ ಬುಧವಾರ ಉಚ್ಛಾಟಿಸಲಾಗಿದೆ. ಕಳೆದ ವಾರ ಪಕ್ಷದ ಹೈಕಮಾಂಡನ್ನು ಟೀಕಿಸುವ ವಿಮರ್ಶಾತ್ಮಕ ಲೇಖನವನ್ನು ಅವರು ಪತ್ರಿಕೆಗಳಲ್ಲಿ ಬರೆದಿದ್ದರು.

ಪ್ರಿಯಾಂಕ ಚತುರ್ವೇದಿ
ಕಾಂಗ್ರೆಸ್‌ ವಕ್ತಾರೆಯಾಗಿ ಅನುಪಮ ಸೇವೆ ಸಲ್ಲಿಸಿದ್ದ ಈ ನಲುವತ್ತು ವರ್ಷದ ನಾಯಕಿಯ ಆಕ್ಷೇಪವನ್ನು ಕಡೆಗಣಿಸಿ, ಆಕೆಯೊಂದಿಗೆ ಒಂದು ಕಾಲದಲ್ಲಿ ಅನುಚಿತ ವರ್ತನೆ ತೋರಿದ್ದ ಹಿರಿಯ ನಾಯಕರಿಗೆ ಮಣೆ ಹಾಕಲಾಯಿತು. ಇದರಿಂದ ಸಿಟ್ಟಿಗೆದ್ದ ಆಕೆ ಪಕ್ಷ ತೊರೆದು ಶಿವಸೇನೆ ಸೇರಿದ್ದಾರೆ.

ನವಜೋತ್‌ ಸಿಂಗ್‌ ಸಿಧು
ಪಂಜಾಬ್‌ನಲ್ಲಿ ಕಾಂಗ್ರೆಸ್‌ ಸರಕಾರದ ನೇತಾರ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ಗೂ ಸಚಿವ ಸಂಪುಟದಲ್ಲಿ ಒಬ್ಬರಾದ ನವಜೋತ್‌ ಸಿಂಗ್‌ ಸಿಧುಗೂ ಒಮ್ಮನಸ್ಸು ಇಲ್ಲ. ಆಗಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯುತ್ತಿರುತ್ತದೆ. ಸಿಧು ಆಪ್‌ ಸೇರಿಕೊಳ್ಳುತ್ತಾರೆ ಎಂಬ ವದಂತಿಯೂ ಇದೆ.

ಯುವಕರ ಸಿಟ್ಟೇ ಮುಳುವಾಯಿತೇ?
ಹಾಗೆ ನೋಡಿದರೆ ಹಿಂದೆಯೂ ಯುವಕರ ಸಿಟ್ಟೇ ಕೆಲವು ಕಡೆ ಕಾಂಗ್ರೆಸ್‌ನ ಸರ್ವನಾಶಕ್ಕೆ ಕಾರಣವಾಗಿದೆ. ಉದಾಹರಣೆಗೆ, ಆಂಧ್ರಪ್ರದೇಶದಲ್ಲಿ, ವೈಎಸ್‌ಆರ್‌ ರೆಡ್ಡಿಯ ಮರಣಾನಂತರ ಅವರ ಪುತ್ರ ಜಗನ್ಮೋಹನ ರೆಡ್ಡಿಯನ್ನು ಕಡೆಗಣಿಸಿದ್ದರಿಂದ ಕಾಂಗ್ರೆಸ್‌ ಇಂದು ಆಂಧ್ರದಲ್ಲಿ ಮಣ್ಣು ತಿಂದಿದೆ. 1998ರಲ್ಲಿ ಪಶ್ಚಿಮ ಬಂಗಾಲದಲ್ಲಿ ಕಾಂಗ್ರೆಸ್‌ನಲ್ಲಿ ಹಿರಿಯರ ಜೊತೆ ಉಂಟಾದ ಘರ್ಷಣೆಯಿಂದಾಗಿಯೇ ಮಮತಾ ಬ್ಯಾನರ್ಜಿ ಪಕ್ಷದಿಂದ ಹೊರಬಿದ್ದು, ತೃಣಮೂಲ ರಚಿಸಿದ್ದಲ್ಲದೆ ಮುಖ್ಯಮಂತ್ರಿಯೂ ಆದರು. ಅಸ್ಸಾಂನಲ್ಲಿ ತರುಣ್‌ ಗೋಗೋಯಿ ಅವರಿಂದ ಕಡೆಗಣಿಸಲ್ಪಟ್ಟ ಹಿಮಂತ ಬಿಶ್ವ ಶರ್ಮಾ ನಂತರ ಬಿಜೆಪಿ ಸೇರಿ, ಈಗ ಸಚಿವರೂ ಆಗಿದ್ದಾರೆ.

ಬಿಜೆಪಿ ಪಾತ್ರವೇನು?
ರಾಜಸ್ಥಾನ ಪ್ರಕರಣದಲ್ಲಿ ಬಿಜೆಪಿ ಪಾತ್ರವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಮಧ್ಯಪ್ರದೇಶ ಹಾಗೂ ರಾಜಸ್ಥಾನ ಎರಡೂ ಕಡೆಯಲ್ಲೂ- ಕಾಂಗ್ರೆಸ್‌ನ ಯುವ ನಾಯಕರಿಗೆ ಹಿರಿಯರ ಮೇಲೆ ಇರುವ ಸಿಟ್ಟನ್ನು ಗುರುತಿಸಿ ಅವರನ್ನು ತನ್ನ ಕಡೆಗೆ ಸೆಳೆದುಕೊಂಡದ್ದರಲ್ಲಿ ಬಿಜೆಪಿಯ ಯಶಸ್ಸು ಇದೆ.

ರಾಹುಲ್‌ ಮೇಲಿನ ಕೋಪವೇ?
ಸೋನಿಯಾ ತಲೆಮಾರಿನ ನಾಯಕರಾದ ದಿಗ್ವಿಜಯ್‌ ಸಿಂಗ್‌, ಚಿದಂಬರಂ, ಕಮಲ್‌ನಾಥ್‌, ಅಶೋಕ್‌ ಗೆಹ್ಲೋಟ್‌ ಮುಂತಾದವರು ರಾಹುಲ್‌ ಗಾಂಧಿ ಅವರ ಮೇಲಿರುವ ಸಿಟ್ಟನ್ನು ಅವರ ಆಪ್ತರ ಬಳಗದ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ ಎಂಬ ವಿಶ್ಲೇಷಣೆಯೂ ಇದೆ. ರಾಹುಲ್‌ ತಮ್ಮ ಹಿಡಿತ ಪಕ್ಷದಲ್ಲಿದ್ದ ಕಾಲದಲ್ಲಿ ಯುವ ನಾಯಕರನ್ನು ಹೆಚ್ಚಾಗಿ ಹಚ್ಚಿಕೊಂಡಿದ್ದರು ಹಾಗೂ ಪಕ್ಷದಲ್ಲಿ ಪ್ರಭಾವಿಯಾಗಿ ಬೆಳೆಯಲು ಕಾರಣರಾಗಿದ್ದರು. ಆಗ ಸಚಿನ್‌ ಪೈಲಟ್‌, ಸಿಂದ್ಯಾ ಮುಂತಾದವರು ಕೇಂದ್ರ ಸಚಿವರೂ ಆಗಿದ್ದರು. ಆಗ ಪಕ್ಷದಲ್ಲಿ ಕಡೆಗಣನೆಗೆ ಒಳಗಾಗಿದ್ದ ಈ ಹಿರಿಯ ನಾಯಕರು, ತಮ್ಮ ಸಿಟ್ಟನ್ನು ಈಗ ಈ ಯುವಕರ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top