ರೈತರಿಗೆ ಅನ್ಯಾಯವಾದರೆ ಕ್ಷಣವೂ ಹುದ್ದೆಯಲ್ಲಿರಲಾರೆ

– ರೈತರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅಭಯ
– ನನ್ನ ಬೆಳೆ, ನನ್ನ ಹಕ್ಕು ಎನ್ನುವುದೇ ಕಾಯಿದೆಯ ಆಶಯ

ವಿಕ ಸುದ್ದಿಲೋಕ ಬೆಂಗಳೂರು. 
‘ನನ್ನ ಬೆಳೆ. ನನ್ನ ಹಕ್ಕು’ ಎಂಬ ಆಶಯದಡಿ ರೈತರು ಬೆಳೆದ ಬೆಳೆಯನ್ನು ಮಾರಾಟ ಮಾಡಲು ಸ್ವಾತಂತ್ರ್ಯ ನೀಡುವ ದೃಷ್ಟಿಯಿಂದ ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತರಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪದಂತೆ 2022ರ ಹೊತ್ತಿಗೆ ರೈತರ ಆದಾಯ ದ್ವಿಗುಣಗೊಳಿಸಲು ಇದು ಸಹಾಯಕವಾಗಲಿದೆ. ಇದರಿಂದ ರೈತರಿಗೆ ಅನ್ಯಾಯವಾಗುವ ಪ್ರಶ್ನೆಯೇ ಇಲ್ಲ. ಅಂತಹ ಸಂದರ್ಭ ಬಂದರೆ ಈ ಸ್ಥಾನದಲ್ಲಿಒಂದು ಕ್ಷ ಣವೂ ಮುಂದುವರಿಯುವುದಿಲ್ಲ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಸಮರ್ಥಿಸಿಕೊಂಡಿದ್ದಾರೆ.
ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸೇರಿದಂತೆ ಹಿರಿಯ ಸಚಿವರು, ಮುಖ್ಯ ಕಾರ್ಯದರ್ಶಿ ಹಾಗೂ ಉನ್ನತಾಧಿಕಾರಿಗಳೊಂದಿಗೆ ಸಿಎಂ ಅವರು ವಿಧಾನಸೌಧದಲ್ಲಿಈ ವಿಚಾರವಾಗಿ ಶುಕ್ರವಾರ ಸಭೆ ನಡೆಸಿದರು.
ಇದಾದ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ‘‘ನಾನು ರೈತಪರ ಮುಖ್ಯಮಂತ್ರಿ. ಹಸಿರು ಶಾಲು ಹಾಕಿಕೊಂಡು ಅಧಿಕಾರ ವಹಿಸಿಕೊಂಡವನು. ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ,’’ ಎಂದೇ ಮಾತು ಪ್ರಾರಂಭಿಸಿದರು. ‘‘ರೈತರು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡುವ ಸ್ವಾತಂತ್ರ್ಯ ನೀಡಬೇಕೆಂದು ಒತ್ತಾಯಿಸಿ 45 ವರ್ಷಗಳ ಹಿಂದೆ ಶಿಕಾರಿಪುರ ಎಪಿಎಂಸಿ ಎದುರು ನಾನೇ ಪ್ರತಿಭಟಿಸಿದ್ದೆ,’’ ಎಂದೂ ನೆನಪಿಸಿಕೊಂಡರು.
ಪ್ರಾಂಗಣಕ್ಕೆ ಎಪಿಎಂಸಿ ಸಮಿತಿಗಳ ಅಧಿಕಾರ
‘‘ರೈತರೇ ಮೊದಲು ಎಂಬ ಘೋಷವಾಕ್ಯದ ಅನುಷ್ಠಾನಕ್ಕೆ ಎಪಿಎಂಸಿ ತಿದ್ದುಪಡಿ ಕಾಯಿದೆ ನೆರವಾಗಲಿದೆ. ರೈತರು ಬೆಳೆದ ಉತ್ಪನ್ನವನ್ನು ಮಾರುಕಟ್ಟೆ ಪ್ರಾಂಗಣ ಅಥವಾ ನೇರವಾಗಿ ಮಾರಾಟ ಮಾಡುವ ಅವಕಾಶವನ್ನು ಕಾಯಿದೆ ನೀಡುತ್ತದೆ. ಇದರಿಂದ ರೈತರು ಬೆಳೆದ ಉತ್ಪನ್ನಗಳಿಗೆ ಯೋಗ್ಯ ಧಾರಣೆ ಸಿಗಲಿದೆ. ಈ ಕಾಯಿದೆಯಿಂದ ಎಪಿಎಂಸಿ ಸಮಿತಿಗಳ ಅಸ್ತಿತ್ವಕ್ಕೆ ಧಕ್ಕೆಯಾಗುವುದಿಲ್ಲ. ಅವು ಹಿಂದಿನಂತೆ ಮುಂದುವರಿಯಲಿವೆ,’’ ಎಂದು ಸಿಎಂ ತಿಳಿಸಿದರು.
‘‘ತಿದ್ದುಪಡಿ ಕಾಯಿದೆ ಅನುಸಾರ ಎಪಿಎಂಸಿ ಸಮಿತಿ ಅಧಿಕಾರ ಮಾರುಕಟ್ಟೆ ಪ್ರಾಂಗಣಕ್ಕೆ ಸೀಮಿತಗೊಳ್ಳಲಿದೆ. ರೈತರು ಬೆಳೆದ ಬೆಳೆಗಳಿಗೆ ಸ್ಪರ್ಧಾತ್ಮಕ ಬೆಲೆ ನೀಡುವುದು ಇದರ ಉದ್ದೇಶ. ಮಾರುಕಟ್ಟೆ ಪ್ರಾಂಗಣದ ಹೊರಗೆ ಬೆಳೆ ಮಾರಾಟ ಮಾಡಲು ರೈತರು ಸ್ವತಂತ್ರರು. ಆದರೆ, ಮಾರುಕಟ್ಟೆ ಪ್ರಾಂಗಣದ ಹೊರಗೆ ಅಧಿಸೂಚಿತ ಕೃಷಿ ಉತ್ಪನ್ನಗಳ ವಹಿವಾಟು ನಡೆಸುವುದರ ಬಗ್ಗೆ ಮೇಲ್ವಿಚಾರಣೆ ನಡೆಸುವ ಅಧಿಕಾರ ಕೃಷಿ ಮಾರಾಟ ನಿರ್ದೇಶಕರಿಗೆ ಇರುತ್ತದೆ,’’ ಎಂದರು.

ಶೋಷಣೆಗೆ ಇತಿಶ್ರೀ
‘‘ಕೇಂದ್ರ ಸರಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ರೈತರ ಹಿತಾಸಕ್ತಿಯ ರಕ್ಷಣೆಯೇ ಮುಖ್ಯವಾದುದು. 2022ಕ್ಕೆ ರೈತರ ಆದಾಯ ದ್ವಿಗುಣಗೊಳಿಸುವ ಸಂಬಂಧ ಇಂತಹ ಸುಧಾರಣಾ ಕ್ರಮ ಕೈಗೊಳ್ಳಲಾಗುತ್ತಿದೆ. ಹಾಗಂತ ನಾವು ಎಪಿಎಂಸಿ ಕಾಯಿದೆಯನ್ನು ರದ್ದುಗೊಳಿಸಿಲ್ಲ. ಈ ಕಾಯಿದೆಯ 2 ಸೆಕ್ಷನ್‌ಗಳಿಗೆ ತಿದ್ದುಪಡಿ ತರಲಾಗಿದೆ. ಇದರಿಂದ ರೈತರಿಗೆ ಹೆಚ್ಚಿನ ಅವಕಾಶ ಲಭ್ಯವಾಗಲಿದೆ. ರೈತರು ಎಪಿಎಂಸಿ ಅಥವಾ ಬೇರೆ ಯಾವುದೇ ವರ್ತಕರ ಅಧೀನವಾಗುವುದು ತಪ್ಪಲಿದೆ. ರೈತರು ತಮ್ಮಿಷ್ಟದಂತೆ ಯಾರಿಗೆ ಬೇಕಾದರೂ ಉತ್ಪನ್ನ ಮಾರಾಟ ಮಾಡಬಹುದು. ರೈತರ ಶೋಷಣೆ ತಪ್ಪಿಸಬಹುದು. ಮುಖ್ಯವಾಗಿ ಎಪಿಎಂಸಿಯಲ್ಲಿ ವ್ಯವಹಾರ ನಡೆಸುವ ವರ್ತಕರು ರೈತರನ್ನು ಶೋಷಿಸುವುದು ತಪ್ಪಲಿದೆ,’’ ಎಂದು ಹೇಳಿದರು.

ಖಾಸಗಿಯವರ ಮೇಲೆ ಹದ್ದಿನ ಕಣ್ಣು
ಎಪಿಎಂಸಿ ಪ್ರಾಂಗಣದಿಂದ ಹೊರಗೆ ವ್ಯಾಪಾರ ಮಾಡುವ ಖಾಸಗಿಯವರೂ ಷರತ್ತು ಪಾಲಿಸಬೇಕಾಗುತ್ತದೆ. ಈ ಸಂಬಂಧ ಸರಕಾರದ ಅನುಮತಿ ಪಡೆಯಬೇಕಾಗುತ್ತದೆ. ರೈತರ ಹಿತರಕ್ಷಣೆಗಾಗಿಯೇ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.ಇದರ ಬಗ್ಗೆ ಕೆಲವರು ಅಪಪ್ರಚಾರ ಮಾಡಿ ದಾರಿ ತಪ್ಪಿಸುತ್ತಿದ್ದಾರೆ. ಅಂತಹ ತೊಂದರೆಯಾಗುವುದಿಲ್ಲ, ರೈತರಲ್ಲಿ ನೂರಕ್ಕೆ 99ರಷ್ಟ್ಟು ಜನ ಇದನ್ನು ಇಷ್ಟಪಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗುವುದಿಲ್ಲ. 6 ತಿಂಗಳ ಒಳಗೆ ಇದರ ಪರಿಣಾಮ ತಿಳಿಯಲಿದೆ. ಪ್ರತಿಪಕ್ಷದವರು ಹಾಗೂ ರೈತ ಸಂಘಟನೆಯವರೊಂದಿಗೂ ಈ ಬಗ್ಗೆ ಚರ್ಚಿಸಲಾಗಿದ್ದು, ಆತಂಕ ಬೇಡವೆಂದು ಅಭಯ ನೀಡಿದರು. ಖಾಸಗಿ ಮಾರುಕಟ್ಟೆ 2007ರಲ್ಲೇ ಪ್ರಾರಂಭವಾಗಿದ್ದು ರಿಲಯನ್ಸ್, ಮೋರ್‌ನಂತಹ  ಸಂಸ್ಥೆಗಳು ಭಾಗವಹಿಸುತ್ತಿವೆ. 2007ರಲ್ಲಿ ಇ-ಟ್ರೇಡಿಂಗ್ ಕೂಡ ಆರಂಭವಾಗಿದ್ದು, 2013ರಲ್ಲಿ ಆನ್‌ಲೈನ್‌ ಟ್ರೇಡಿಂಗ್ ಶುರುವಾಗಿದೆ. ಇದರ ನಡುವೆಯೂ ಎಪಿಎಂಸಿ ಕಾಯಿದೆಯ ಕಲಂ 66, 67, 70ರ ಅನ್ವಯ ಪರಿಶೀಲಿಸುವ ಅಧಿಕಾರ ನಿರ್ದೇಶಕರಿಗೆ ಇರುತ್ತದೆ ಎಂದು ಹೇಳಿದರು.

ನಾನು ರೈತಪರ. ಹಸಿರು ಶಾಲು ಹಾಕಿಕೊಂಡು ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದವನು. ಈ ಕಾಯಿದೆಯಿಂದ ರೈತರಿಗೆ ಅನ್ಯಾಯವಾಗದು. ರೈತರ ಹಿತಕ್ಕೆ ಧಕ್ಕೆಯಾದರೆ ಮುಖ್ಯಮಂತ್ರಿ ಸ್ಥಾನದಲ್ಲಿ ಒಂದು ಕ್ಷ ಣವೂ ಮುಂದುವರಿಯುವುದಿಲ್ಲ.
-ಬಿ.ಎಸ್.ಯಡಿಯೂರಪ್ಪ ಸಿಎಂ

ಚರ್ಚೆ ಬೇಡವೆಂದರೆ ವಿಧಾನಸೌಧ ಏತಕ್ಕೆ?
ಎಪಿಎಂಸಿ ಕಾಯಿದೆಗೆ ತರಾತುರಿಯಲ್ಲಿ ತಿದ್ದುಪಡಿ ತರುವ ಸರಕಾರದ ನಿರ್ಧಾರ ತಪ್ಪು. ಯಾವುದೇ ಕಾಯಿದೆಯನ್ನು ಜಾರಿಗೆ ತರುವ ಮುನ್ನ ಎಲಾ ದೃಷ್ಟಿಕೋನಗಳಿಂದಲೂ ಚರ್ಚೆ ಆಗಬೇಕು. ಅದರಲ್ಲೂ ಕೃಷಿ ಹಾಗೂ ರೈತರಿಗೆ ಸಂಬಂಧಿಸಿದ ವಿಚಾರಗಳಲ್ಲಿ ಸಮಗ್ರ ಚರ್ಚೆ ನಡೆಸಿದ ಬಳಿಕವೇ ಕಾನೂನು ರೂಪಿಸಬೇಕು. ಇದಾವುದೂ ಇಲ್ಲದೆ ದಿಢೀರ್ ಸುಗ್ರೀವಾಜ್ಞೆ ಹೊರಡಿಸಲು ಸರಕಾರ ಮುಂದಾಗಿರುವುದು ಸರಿಯಾದ ನಿಲುವಲ್ಲ.
ಚರ್ಚೆ ಮಾಡಿ ನಿರ್ಧಾರ ಪ್ರಕಟಿಸುವ ಬದಲು ಕಾಯಿದೆಯ ತುರ್ತು ಜಾರಿ ಅಗತ್ಯವೇನಿತ್ತು?. ಚರ್ಚೆ ಮಾಡದೆ ತಿದ್ದುಪಡಿ ತರುವಂತಹ ಗಂಭೀರ ಸ್ಥಿತಿಯೇನೂ ನಿರ್ಮಾಣವಾಗಿಲ್ಲ. ಆದರೂ ಸರಕಾರ ಸ್ವಯಂ ನಿರ್ಧಾರ ಕೈಗೊಂಡು ಎಪಿಎಂಸಿ ಕಾಯಿದೆಗೆ ಸುಗ್ರೀವಾಜ್ಞೆ ಹೊರಡಿಸುವುದಾದರೆ ವಿಧಾನಸೌಧ ಇರುವುದು ಏಕೆ?
ಎಪಿಎಂಸಿಗಳಲ್ಲಿ ರೈತರಿಗಿಂತ ಮಧ್ಯವರ್ತಿಗಳಿಗೆ ಹೆಚ್ಚು ಪ್ರಯೋಜನವಾದಂತಿದೆ. ದಲ್ಲಾಳಿಗಳ ಕಪಿಮುಷ್ಟಿಯಿಂದ ರೈತರನ್ನು ಬಿಡಿಸುವ ಮಾತುಗಳು ಸರಕಾರದಿಂದ ಕೇಳಿಬರುತ್ತವೆ. ಆದರೆ, ನಿಜ ಅರ್ಥದಲ್ಲಿ ಸುಧಾರಣಾ ಕ್ರಮಗಳು ಕಾಣುತ್ತಿಲ್ಲ. ಇದರಿಂದ ರೈತಾಪಿ ವರ್ಗವು ಹತಾಶೆಗೆ ಒಳಗಾಗಿದೆ. ರೈತನಿಗೆ ಏನು ಬೇಕು, ಏನು ಬೇಡ ಎಂಬುದರತ್ತ ಸರಕಾರಕ್ಕೆ ವಿವೇಚನೆ ಇರಬೇಕು. ಅನ್ನದಾತನನ್ನು ಕೈಹಿಡಿದು ಮುನ್ನಡೆಸುವ ತೀರ್ಮಾನಗಳನ್ನು ಕೈಗೊಳ್ಳದ ಹೊರತು ಕೃಷಿ ಲಾಭದಾಯಕ ಉದ್ಯೋಗ ಆಗಲಾರದು. ಅದರಲ್ಲೂ ಕೃಷ್ಯುತ್ಪನ್ನಕ್ಕೆ ಸಮರ್ಥ ಮಾರುಕಟ್ಟೆ ಜಾಲ ರೂಪಿಸದಿದ್ದಲ್ಲಿ ಎಪಿಎಂಸಿ ವ್ಯವಸ್ಥೆ ಇದ್ದೂ ವ್ಯರ್ಥವಾದಂತೆ. ಈಗಲೂ ಕಾಲ ಮಿಂಚಿ ಹೋಗಿಲ್ಲ. ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳಬಹುದು.
ಎಪಿಎಂಸಿ ಕಾಯಿದೆ ತಿದ್ದುಪಡಿಯಿಂದ ಲಾಭ ಏನು? ನಷ್ಟ ಏನು? ಎಂಬಿತ್ಯಾದಿ ವಿಚಾರಗಳ ಬಗ್ಗೆ ಸರಕಾರ ಸ್ಪಷ್ಟಪಡಿಸಬೇಕು. ಸರಕಾರ ಹಟಕ್ಕೆ ಬೀಳದೆ ಹಾಲಿ ನಿಲುವಿನ ಕುರಿತು ಪುನರ್‌ ನಿರ್ಧಾರ ಕೈಗೊಳ್ಳುವುದು ಸೂಕ್ತ.
-ಡಾ.ಕೆ.ನಾರಾಯಣಗೌಡ, ವಿಶ್ರಾಂತ ಕುಲಪತಿ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ

ಈ ಕಾಯಿದೆ ರೈತರಿಗೆ ಮರಣಶಾಸನ

ರಾಜ್ಯ ಸರಕಾರ ಕೇಂದ್ರದ ಅನಿಸಿಕೆಯಂತೆ ಎಪಿಎಂಸಿ ಕಾಯಿದೆ ತಿದ್ದುಪಡಿ ತರಲು ಸುಗ್ರೀವಾಜ್ಞೆ ಹೊರಡಿಸಿರುವುದು ರೈತರಿಗೆ ಮರಣ ಶಾಸನವಾಗಿದೆ.
ಉತ್ಪಾದನೆ ಮತ್ತು ಮಾರುಕಟ್ಟೆ ನಿರ್ವಹಣೆ ಕುರಿತು ಸರಕಾರಗಳ ಪಾತ್ರ ಬಹಳ ಪ್ರಮುಖವಾದುದು. ರೈತರ ಉತ್ಪಾದನೆಗೆ ಅನುಕೂಲವಾಗುವಂತೆ ಬ್ರಿಟೀಷರು 107 ವರ್ಷಗಳ ಹಿಂದೆಯೇ ಒಂದು ಕೃಷಿ ಇಲಾಖೆಯನ್ನು ಸ್ಥಾಪಿಸಿದರು. ಅದೇ ರೀತಿಯಲ್ಲಿ 50 ವರ್ಷಗಳ ಹಿಂದೆ ತೋಟಗಾರಿಕೆ ಇಲಾಖೆಯನ್ನು ಪ್ರಾರಂಭಿಸಲಾಯಿತು. ರೈತರ ಉತ್ಪಾದನೆಯನ್ನು ಹೆಚ್ಚಿಸಬೇಕಾದದ್ದು ಈ ಎರಡೂ ಇಲಾಖೆಗಳು ಹಾಗೂ ಸರಕಾರದ ಕೆಲಸ.
ರೈತರಿಗೆ ಸಬ್ಸಿಡಿ, ಸಾಲ ಸೌಲಭ್ಯ ನೀಡುವ ಮೂಲಕ ರೈತರ ಉತ್ಪಾದನೆಯನ್ನು ಹೆಚ್ಚಿಸುವುದಷ್ಟೇ ಇವುಗಳ ಕೆಲಸ. ಇನ್ನು ಮಾರುಕಟ್ಟೆ ವಿಚಾರಕ್ಕೆ ಬಂದರೆ, 1926ರಲ್ಲಿ ಬ್ರಿಟೀಷರು ರೈತರಿಗೆ ಒಂದು ಮಾರುಕಟ್ಟೆಯನ್ನು ಮಾಡಿಕೊಟ್ಟು ಸ್ಪರ್ಧಾತ್ಮಕ ಬೆಲೆ ಬರುವ ರೀತಿ ಅದಕ್ಕೊಂದು ಕಾನ್ಸೆಪ್ಟ್ ಕ್ರಿಯೇಟ್ ಮಾಡಿ, ಶಾಸನಬದ್ಧಗೊಳಿಸಲು ನಿರ್ಧರಿಸಿದರು. ಅದರಂತೆ ರಾಯಲ್ ಕಮಿಷನ್ ಅನ್ನು ನೇಮಕ ಮಾಡಿದರು. ಈ ಕಮಿಷನ್ ಸಾಕಷ್ಟು ಅಧ್ಯಯನ ಮಾಡಿ ಸಂತೆ ಮಾದರಿಯಲ್ಲಿ ಮಾರುಕಟ್ಟೆಗಳನ್ನು ಪರಿಚಯಿಸಿದರು. ಕಾನೂನಾತ್ಮಕವಾಗಿ ಖರೀದಿದಾರರು ಏನು ಪಾಲನೆ ಮಾಡಬೇಕು. ರೈತರಿಗೆ ಯಾವ ರೀತಿ ಅನುಕೂಲ ಆಗಬೇಕು. ನಿಯಮ ಉಲ್ಲಂಘಿಸಿದವರಿಗೆ ಏನು ಕ್ರಮ ಎಂಬ ನೀತಿಗಳನ್ನು ರೂಪಿಸಿದರು. ಕ್ರಮೇಣ ಅದು ಶಾಸನಬದ್ಧ ಸಮಿತಿಯಾಗಿ ಹೊರಹೊಮ್ಮಿತು.
ರೈತರಿಗೆ ಮತದಾನದ ಹಕ್ಕು ಕೊಟ್ಟು ಚುನಾಯಿತ ಸಂಸ್ಥೆಯಾಗಿಸಿತು. ರೈತರು ಅಧ್ಯಕ್ಷ ರು, ಸದಸ್ಯರಾಗುವ ಅವಕಾಶ ಸಿಕ್ಕಿತು. ನಂತರ ಹಂತ- ಹಂತವಾಗಿ ಈ ಸಂಸ್ಥೆ ಅಭಿವೃದ್ಧಿ ಹೊಂದಿತು. ಆದರೆ, 2004ರಲ್ಲಿ ಇದಕ್ಕೆ ಜಾಗತೀಕರಣದ ಒಪ್ಪಂದಗಳಾಗಿ, ಮಾರುಕಟ್ಟೆಗಳಿಗೆ ಎಂಎನ್‌ಸಿ ಕಂಪನಿಗಳು ಪ್ರವೇಶಿಸಲು ತಯಾರಿ ನಡೆಯಿತು. ಆದರೆ, ನಾವು ಸಾಕಷ್ಟು ಹೋರಾಟ ನಡೆಸಿದ ನಂತರ ಆ ಕಾಯಿದೆಯನ್ನು ಕೈಬಿಟ್ಟರು. ಇದೀಗ 2017ರಲ್ಲಿ ರೂಪಿಸಿದ ವಿಧೇಯಕಕ್ಕೆ ತಿದ್ದುಪಡಿ ತರಲು ರಾಜ್ಯ ಸರಕಾರ ಸುಗ್ರೀವಾಜ್ಞೆ ಹೊರಡಿಸಿ ಜಾರಿಗೆ ತರಲು ಮುಂದಾಗಿದೆ. ಇದೆಲ್ಲವೂ ಕೂಡ ಖಾಸಗಿ ಮತ್ತು ಬಹುರಾಷ್ಟ್ರೀಯ ಕಂಪನಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ತಂದುಕೊಡುವ ಹುನ್ನಾರ. ಸಂಪೂರ್ಣವಾಗಿ ರೈತರ ಮಾರುಕಟ್ಟೆಯನ್ನು ನಾಶ ಮಾಡಿ ಕಾರ್ಪೊರೇಟ್ ಕಂಪನಿಗಳಿಗೆ ಅವಕಾಶ ಮಾಡಿಕೊಡಲು ತೆಗೆದುಕೊಂಡ ತೀರ್ಮಾನವೇ ಹೊರತು, ರೈತರಿಗೆ ಸ್ವಾತಂತ್ರ್ಯ ಕೊಟ್ಟಿದ್ದೇವೆ, ಅವನು ವಾಲ್‌ಮಾರ್ಟ್‌ ಮಾರುಕಟ್ಟೆಯಲ್ಲಾದರೂ ಮಾರಬಹುದು, ರಿಲಯನ್ಸ್‌ನಲ್ಲಾದರೂ ಮಾರಬಹುದು ಎಂಬುದೆಲ್ಲ ಸುಳ್ಳು.
ಕಾರ್ಪೊರೇಟ್‌ದಾರರಿಗೆ ಮಾರ್ಕೆಟ್ ಓಪನ್ ಆದ್ರೆ ನಮ್ಮ ಮಾರ್ಕೆಟ್ ಕ್ಲೋಸ್ ಆಗುತ್ತೆ. ರೈತರಿಗೆ ಇದರಿಂದ ದೊಡ್ಡ ಅನ್ಯಾಯವಾಗುತ್ತೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಬ್ಬ ರೈತರ ಮಗನಾಗಿ ಇಂತಹ ತೀರ್ಮಾನ ತೆಗೆದುಕೊಳ್ಳಬಾರದಿತ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ರೈತರಲ್ಲ. ಅವರಿಗೆ ಎಪಿಎಂಸಿ ಕಾಯಿದೆ ತಿದ್ದುಪಡಿಯಿಂದ ಏನೇನು ಅಪಾಯಗಳಿವೆ ಎಂಬುದರ ಬಗ್ಗೆ ತಿಳಿವಳಿಕೆ ನೀಡಬೇಕಾಗಿತ್ತು. ಆದ್ರೆ ಆ ರೀತಿ ಹೇಳುವ ಹಾಗೂ ತಿಳಿವಳಿಕೆ ನೀಡುವ ಸಾಮರ್ಥ್ಯ ಸರಕಾರಕ್ಕಾಗಲಿ, ಸಂಸದರ ಪಡೆಗಾಗಲಿ ಇಲ್ಲಎಂದು ಗೊತ್ತಾದ ನಂತರ ಈ ಅಪಾಯಕಾರಿ ತೀರ್ಮಾನಕ್ಕೆ ಸಹಿ ಹಾಕಿದ್ದಾರೆ. ಇದು ಬಹಳ ಕೆಟ್ಟದ್ದು.
-ಕೋಡಿಹಳ್ಳಿ ಚಂದ್ರಶೇಖರ್, ರೈತಪರ ಹೋರಾಟಗಾರರು ಮತ್ತು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರು

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top