ವಿಶ್ರಾಂತಿ ಪ್ರಶ್ನೆಯಿಲ್ಲ, ಕೊನೆತನಕ ಜನಸೇವೆಯೇ ಎಲ್ಲ

– ರಾಜ್ಯದಲ್ಲಿ ಪರ್ಯಾಯ ನಾಯಕತ್ವ ಇದ್ದೇ ಇದೆ, ಆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀರ್ಮಾನಿಸುತ್ತಾರೆ.

– ಶಶಿಧರ ಹೆಗಡೆ, ಬೆಂಗಳೂರು.
ನನ್ನ ಸಾರ್ವಜನಿಕ ಜೀವನದಲ್ಲಿ 40-45 ವರ್ಷದಿಂದ ಎಂದೂ ವಿಶ್ರಾಂತಿ ತೆಗೆದುಕೊಂಡಿಲ್ಲ. ವಿಶ್ರಾಂತಿ ತೆಗೆದುಕೊಂಡರೆ ನನ್ನ ಆರೋಗ್ಯ ಕೆಟ್ಟು ಹೋಗುತ್ತದೆ. ಜೀವನದ ಕೊನೆಯ ಉಸಿರು ಇರುವವರೆಗೆ ಕರ್ತವ್ಯ ನಿರ್ವಹಿಸುತ್ತೇನೆ. ಇದಲ್ಲದೆ ಪರ್ಯಾಯ ಎನ್ನುವುದು ಇದ್ದೇ ಇರುತ್ತದೆ. ಈ ಬಗ್ಗೆ ಪ್ರಧಾನಿಯವರು ಯೋಚನೆ ಮಾಡುತ್ತಾರೆ. ರಾಜ್ಯದಲ್ಲಿ ಬಿಜೆಪಿ ಸದೃಢವಾಗಿದ್ದು, ಯಾವುದೇ ಕೊರತೆಯಾಗುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದ್ದಾರೆ.
ಬಿಜೆಪಿ ಸರಕಾರ ಒಂದು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ‘ವಿಜಯ ಕರ್ನಾಟಕ’ಕ್ಕೆ ವಿಶೇಷ ಸಂದರ್ಶನ ನೀಡಿದ ಯಡಿಯೂರಪ್ಪ ಅವರು, ತಮ್ಮ ನೇತೃತ್ವದಲ್ಲೆ ಈ ಸರಕಾರ ಪೂರ್ಣಾವಧಿ ಪೂರೈಸಲಿದೆ ಎಂಬ ಸಂದೇಶ ರವಾನಿಸಿದರು.
ಕೋವಿಡ್‌ನಿಂದ ಆರ್ಥಿಕತೆಗೆ ಹಿನ್ನಡೆಯಾಗಿದ್ದರೂ ಸಂಪನ್ಮೂಲಗಳನ್ನು ಹೊಂದಿಸಿಕೊಂಡು ವಿಕಾಸದತ್ತ ಲಕ್ಷ್ಯಹರಿಸಲಾಗುವುದು. ಎಂದಿಗೂ ದ್ವೇಷ ರಾಜಕಾರಣ ಮಾಡಿಲ್ಲ. ಹಿಂದೂ-ಮುಸ್ಲಿಂ-ಕ್ರೈಸ್ತ ಸೇರಿ ಎಲ್ಲ ಜನಾಂಗದ ಶ್ರೇಯಸ್ಸು ನಮ್ಮ ಆದ್ಯತೆಯಾಗಿದೆ. ಜನರೂ ಇದನ್ನು ಗುರುತಿಸಿ ಲೋಕಸಭೆ ಚುನಾವಣೆಯಲ್ಲಿ 25 ಸೀಟು ನೀಡಿದ್ದಾರೆ. ಉಪ ಚುನಾವಣೆ ಫಲಿತಾಂಶ ಬಂದಾಗ ದಿಲ್ಲಿಯಲ್ಲಿ ನಮ್ಮ ಸಂಸದರ ಸಭೆಯಲ್ಲಿ ಪ್ರಧಾನಿಯವರೇ ಕರ್ನಾಟಕ ಬಿಜೆಪಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಗೌರವ ಸೂಚಿಸಿದ್ದಾರೆ. ಮುಂದಿನ ಮೂರು ವರ್ಷದಲ್ಲಿ ಸುಭದ್ರ ಸರಕಾರದೊಂದಿಗೆ ರಾಜ್ಯದ ಸಮಗ್ರ ಅಭಿವೃದ್ದಿ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.

– ಒಂದು ವರ್ಷದ ಆಡಳಿತ ತೃಪ್ತಿ ತಂದಿದೆಯೇ?
– ಒಂದು ವರ್ಷದಲ್ಲಿ ಮಂತ್ರಿಮಂಡಲದ ಸದಸ್ಯರು, ಶಾಸಕರು, ಪ್ರತಿಪಕ್ಷದವರು ಸೇರಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಕೋವಿಡ್ ಸಂಕಷ್ಟದ ನಡುವೆಯೂ ಕೆಲಸ ಮಾಡಲಾಗುತ್ತಿದೆ. ಅತಿವೃಷ್ಟಿಯಾಗಿ ಸಾವಿರಾರು ಗ್ರಾಮಗಳು ಜಲಾವೃತವಾದಾಗ ಅದನ್ನು ಎದುರಿಸಿ, ಪರಿಹಾರ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಆಗ ಮುಖ್ಯಮಂತ್ರಿಯಾಗಿ ನಾನೊಬ್ಬನೇ ಇದ್ದರೂ ಒಂದು ತಂಡವಾಗಿ ಕೆಲಸ ಮಾಡಿದ್ದೇವೆ. ಯಾವುದೇ ರಾಜಕಾರಣಿಗೆ ಎಂತಹುದೇ ಕೆಲಸ ಮಾಡಿದಾಕ್ಷಣ ತೃಪ್ತಿಯಾಗಬಾರದು. ಕೊರತೆಯೂ ಬೇಕಾದಷ್ಟಿರುತ್ತದೆ. ಅದನ್ನು ಸರಿಪಡಿಸಿಕೊಂಡು ಪುನಃ ತಪ್ಪಾಗದಂತೆ ನೋಡಿಕೊಳ್ಳುವುದು ಸರಕಾರದ ಕರ್ತವ್ಯ. ಕೊರೊನಾ ಬಂದಾಗ ದೇಶದಲ್ಲೆ ಮೊದಲು ನಾವು ಲಾಕ್‌ಡೌನ್‌ ಘೋಷಿಸಿದ್ದೆವು. ಈಗಿನ ಪರಿಸ್ಥಿತಿ ನೋಡಿದರೆ ಕೊರೊನಾ ಜತೆಗೇ ಬದುಕುವುದು ಅನಿವಾರ್ಯವಾಗಿದೆ.

– ಹಾಗಿದ್ದರೆ ಕೊರೋನೋತ್ತರ ಫೋಕಸ್ ಏನು?
– ಸಂಪುಟದ ಸಹೋದ್ಯೋಗಿಗಳು, ಶಾಸಕರ ಸಹಕಾರದಿಂದ ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಇನ್ನು ಮೂರು ವರ್ಷ ಸುಭದ್ರ ಸರಕಾರ ನೀಡಬೇಕಾಗಿದೆ. ಈ ಸವಾಲು ನಮ್ಮ ಮುಂದಿದೆ. ರಾಜ್ಯದ ಪ್ರಗತಿ ಹಾಗೂ ಹಿತದೃಷ್ಟಿಯಿಂದ ಸುಭದ್ರ ಆಡಳಿತ ನೀಡಬೇಕಿದೆ. ಪ್ರತಿಪಕ್ಷ ಗಳ ಸಹಕಾರವನ್ನೂ ಅಪೇಕ್ಷಿಸುತ್ತೇವೆ.

– ಕೋವಿಡ್ ಸಂಕಟದ ಕಾಲದಲ್ಲಿ ಪ್ರತಿಪಕ್ಷಗಳ ಸಹಕಾರ ಹೇಗಿದೆ?
– ಕೊರೊನಾ ಬಂದಾಗ ಆರಂಭದಲ್ಲಿ ಪ್ರತಿಪಕ್ಷಗಳು ಸಹಕಾರ ನೀಡಿವೆ. ಮೊನ್ನೆ ಮೊನ್ನೆವರೆಗೂ ಈ ವಿಚಾರದಲ್ಲಿ ಸಮಸ್ಯೆ ಇರಲಿಲ್ಲ. ಆದರೆ, ಇತ್ತೀಚೆಗೆ ಯಾಕೋ ಸಿದ್ದರಾಮಯ್ಯನವರು ಬಹಳ ಅವ್ಯವಹಾರವಾಗಿದೆ ಎಂದು ಆರೋಪಿಸುತ್ತಿದ್ದಾರೆ. ಅವರ ಆಪಾದನೆಗೆ ಅಂಕಿ, ಅಂಶ ಸಹಿತ ದಾಖಲೆ ನೀಡಿ ಸ್ಪಷ್ಟೀಕರಣ ನೀಡಲಾಗಿದೆ.

– ಸ್ಪಷ್ಟೀಕರಣದ ಬಳಿಕವೂ ಸಿದ್ದರಾಮಯ್ಯ ಮತ್ತಷ್ಟು ಪ್ರಶ್ನೆ ಎತ್ತಿದ್ದಾರಲ್ಲ?
– ಸಿದ್ದರಾಮಯ್ಯ ಹಣಕಾಸು ಸಚಿವರಾಗಿ, ಮುಖ್ಯಮಂತ್ರಿಯಾಗಿ ಕೆಲಸ ಮಾಡಿದವರು. ಅವರ ಕಾಲದಲ್ಲಿ ಹೇಗೆ ನಡೆದುಕೊಂಡಿದ್ದಾರೆಂಬ ಪರಿವೆಯಿಲ್ಲದೆ ಈ ಸರಕಾರದ ಬಗ್ಗೆ ಜನರಲ್ಲಿ ಸಂಶಯ, ಗೊಂದಲ ಮೂಡಿಸುತ್ತಿದ್ದಾರೆ. ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ತಿಳಿದುಕೊಳ್ಳುವ ಶಕ್ತಿ ಜನರಿಗಿದೆ. ಐವರು ಸಚಿವರು ಸಮರ್ಪಕ ಉತ್ತರ ಕೊಟ್ಟ ಬಳಿಕವೂ ಟೀಕಿಸುವುದು ಎಷ್ಟು ಸರಿ ಎಂದು ಸಿದ್ದರಾಮಯ್ಯ ಅವರೇ ಪ್ರಶ್ನಿಸಿಕೊಳ್ಳಲಿ.

– ಎಲ್ಲ ಸಚಿವರ ಕಾರ್ಯವೈಖರಿ ನಿಮಗೆ ತೃಪ್ತಿಕರವೇ?
– ನೂರಕ್ಕೆ ನೂರರಷ್ಟು ತೃಪ್ತಿಯಿದೆ. ನಮ್ಮ ಎಲ್ಲ ಸಚಿವರು, ಶಾಸಕರು ಒಂದಾಗಿ ಸಹಕಾರ ಕೊಡುತ್ತಿರುವುದರಿಂದ ಜನ ಮೆಚ್ಚುವ ರೀತಿಯಲ್ಲಿ ಕೋವಿಡ್ ಎದುರಿಸಲು ಸಾಧ್ಯವಾಗಿದೆ. ಇದರ ನಡುವೆ ಅಭಿವೃದ್ಧಿ ಕಾಮಗಾರಿ ಕಡೆಗೂ ಗಮನ ಹರಿಸಲಾಗಿದೆ.

– ಆರ್ಥಿಕ ಸ್ಥಿತಿ ಸುಧಾರಣೆಗೆ ತಕ್ಷಣದ ಕ್ರಮಗಳೇನು?
– ಆರ್ಥಿಕ ಸ್ಥಿತಿ ಸುಧಾರಿಸುವ ಉದ್ದೇಶದಿಂದಲೇ ಇನ್ನು ಮುಂದೆ ಲಾಕ್‌ಡೌನ್‌ ಇಲ್ಲವೆಂಬ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಸಂಪನ್ಮೂಲ ಕ್ರೋಡೀಕರಣಕ್ಕೆ ಅನುಕೂಲವಾಗಲಿದೆ. ದೇಶದ ಹಲವು ರಾಜ್ಯಗಳಲ್ಲಿ ಸರಕಾರಿ ನೌಕರರ ಸಂಬಳ ಕೊಡುವುದು ಕಷ್ಟವಾಗಿದೆ. ನಾವು ಮಾತ್ರ ನೌಕರರ ಸಂಬಳ ನಿಲ್ಲಿಸಿಲ್ಲ. ನೀರಾವರಿ, ರಸ್ತೆ ಅಭಿವೃದ್ಧಿ, ಪರಿಶಿಷ್ಟರ ಅಭ್ಯುದಯ ಕಾರ್ಯಕ್ರಮ ಮುಂದುವರಿಸಲಾಗಿದೆ.

– ಇಂಥ ಸಂಕಷ್ಟದ ಸನ್ನಿವೇಶದಲ್ಲಿ ಅಧಿಕಾರದಲ್ಲಿರುವ ನಿಮಗೆ ಇದೆಲ್ಲ ಸಾಕು. ವಿಶ್ರಾಂತಿ ತೆಗೆದುಕೊಳ್ಳೋಣ ಎನಿಸಿಲ್ಲವಾ?
– ಇಲ್ಲ, ವಿಶ್ರಾಂತಿ ತೆಗೆದುಕೊಳ್ಳಬೇಕೆಂದು ಎನಿಸಿಲ್ಲ. ಸವಾಲುಗಳನ್ನು ಎದುರಿಸಿ ಮುಂದೆ ಹೋಗಬೇಕು ಎನ್ನುವುದೇ ನನಗೆ ಹೆಚ್ಚು ಸಂತೋಷ, ಸಮಾಧಾನ ತರುತ್ತದೆ. ವಿಶ್ರಾಂತಿ ತೆಗೆದುಕೊಂಡರೆ ನನ್ನ ಆರೋಗ್ಯ ಕೆಟ್ಟು ಹೋಗುತ್ತದೆ. ಎಂದೂ ಕೂಡ ಇದೆಲ್ಲ ಸಾಕಾಯಿತಪ್ಪಾ ಎನಿಸಿಲ್ಲ; ಹಾಗನಿಸುವುದೂ ಇಲ್ಲ. ಜೀವನದ ಕೊನೆಯ ಉಸಿರಿರುವ ವರೆಗೂ ಕರ್ತವ್ಯ ಮುಂದುವರಿಸಿಕೊಂಡು ಹೋಗುತ್ತೇನೆ.

– ನಿಮ್ಮ ಹಾಗೆಯೇ ಸಮರ್ಥರನ್ನು ತಯಾರು ಮಾಡುವ ನಿಟ್ಟಿನಲ್ಲಿ ಯೋಚಿಸಿದ್ದೀರಾ?
– ಪ್ರಧಾನಿ ನರೇಂದ್ರ ಮೋದಿ ಅವರು ಈ ನಿಟ್ಟಿನಲ್ಲಿ ಯೋಚಿಸುತ್ತಾರೆ. ಅವರ ನಾಯಕತ್ವದಲ್ಲಿ ನಾವು ಮುಂದೆ ಹೋಗುತ್ತಿದ್ದೇವೆ. ಪರ್ಯಾಯ ನಾಯಕತ್ವ ಸಿಕ್ಕೇ ಸಿಗುತ್ತದೆ. ಈ ವಿಚಾರದಲ್ಲಿ ಯಾವುದೇ ಕೊರತೆಯಾಗುವುದೆಂದು ನನಗೆ ಎನಿಸುವುದಿಲ್ಲ.

ಸಂಪುಟ ವಿಸ್ತರಣೆ?
– ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ಮಾಡುತ್ತೀರಾ?
– ಈ ಬಗ್ಗೆ ಆಗಸ್ಟ್‌ನಲ್ಲಿ ವಿಚಾರ ಮಾಡುತ್ತೇವೆ. ರಾಷ್ಟ್ರೀಯ ನಾಯಕರೊಂದಿಗೆ ಸಮಾಲೋಚಿಸಿದ ಬಳಿಕ ಈ ತೀರ್ಮಾನವಾಗಲಿದೆ.

– ಸಂಪುಟ ಪುನಾರಚನೆ ಸಾಧ್ಯತೆಯಿದೆಯಾ?
– ಅದರ ಬಗ್ಗೆಯೇನೂ ಯೋಚಿಸಿಲ್ಲ. ಆಗಸ್ಟ್‌ನಲ್ಲಿ ಚರ್ಚಿಸಿದ ಬಳಿಕವೇ ಈ ಬಗ್ಗೆ ಚಿತ್ರಣ ಸಿಗಲಿದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top