ಬಿಎಸ್‌ವೈ ಎದುರು ಆರೋಗ್ಯ ಕ್ಷೇತ್ರಕ್ಕೆ ಕಾಯಕಲ್ಪ ನೀಡುವ ಸವಾಲು

ರಾಜ್ಯಕಾರಣ : ಬಿಎಸ್‌ವೈ ಎದುರು ಆರೋಗ್ಯ ಕ್ಷೇತ್ರಕ್ಕೆ ಕಾಯಕಲ್ಪ ನೀಡುವ ಸವಾಲು – ಶಶಿಧರ ಹೆಗಡೆ.
ರಾಮರಾಜ್ಯ ನಿರ್ಮಾಣವೆನ್ನುವುದು ಸುಂದರ ಕನಸು. ವಾಸ್ತವದಲ್ಲಿ ರಾಮರಾಜ್ಯ ಕಟ್ಟಿ ನಿಲ್ಲಿಸುವುದು ಸುಲಭ ಸಾಧ್ಯವಲ್ಲ. ಆದರೆ, ಅಧಿಕಾರದ ಗದ್ದುಗೆಯೇರಿದವರಿಗೆ ದೂರ­ದರ್ಶಿತ್ವ ಅವಶ್ಯಕ. ರಾಮನಂತೆ ರಾಜ್ಯವಾಳಲು ಆಗದಿದ್ದರೂ ತುಘಲಕ್‌ ದರ್ಬಾರು ಸಲ್ಲ ಎಂಬ ವಿವೇಕ ಜಾಗೃತವಾಗಿರಬೇಕು. ಯಾಕೆಂದರೆ ಶ್ರೀರಾಮ ಯಾವತ್ತಿಗೂ ರಾಜಾರಾಮ ಎನಿಸಿ­ಕೊಂಡಿದ್ದ. ಪ್ರಜಾರಂಜಕನೂ ಆಗಿದ್ದ ರಾಮ ಭಾರತೀಯ ಪರಂಪರೆಯಲ್ಲಿ ಆದರ್ಶಪ್ರಾಯ ವ್ಯಕ್ತಿ. ನಮ್ಮ ಮುಂದಿರುವ ಉತ್ಕೃಷ್ಟ ಪ್ರತಿಮೆ ರಾಮನಾದರೆ ಲಂಗುಲಗಾಮಿಲ್ಲದ ನಿರ್ಧಾರ ಕೈಗೊಂಡು ಪ್ರಜಾಪೀಡಕನೆನಿಸಿದ್ದವನು ತುಘಲಕ್‌. ಹಾಗಾಗಿ ಅಧಿಕಾರಸ್ಥರು ರಾಮನ ದಾರಿಯನ್ನು ಅನುಸರಿಸಬೇಕು.
ಹಾಗಂತ ಅಧಿಕಾರ ಶಾಶ್ವತವೂ ಅಲ್ಲ. ಎಷ್ಟು ದಿನ ಅಧಿಕಾರ­ದಲ್ಲಿದ್ದರು ಎನ್ನುವುದು ಮುಖ್ಯವಲ್ಲ. ಆಡುಭಾಷೆಯಲ್ಲಿ ಜನಜನಿತವಿರುವಂತೆ ಅಧಿಕಾರದಲ್ಲಿದ್ದಷ್ಟು ದಿನ ಏನೇನು ಕಡಿದು ಕಟ್ಟೆ ಹಾಕಿದರು ಎನ್ನುವುದೇ ಪ್ರಧಾನವಾದುದು. ರಾಜ್ಯದಲ್ಲಿ ಆಡಳಿತ ನಡೆಸಿರುವ ಈ ಹಿಂದಿನ ಮುಖ್ಯಮಂತ್ರಿಗಳನ್ನು ಜನರು ಒಂದಲ್ಲ ಒಂದು ಕಾರಣಕ್ಕೆ ನೆನಪಿಸಿಕೊಳ್ಳುತ್ತಾರೆ. ಅವರಲ್ಲಿ ಕೆಲವರು ವಿಶೇಷ ಕಾರಣಕ್ಕಾಗಿ ಸ್ಮರಣೆಯಲ್ಲಿದ್ದಾರೆ. ದೇವರಾಜ ಅರಸರು ಎಂದಾಕ್ಷ ಣ ಉಳುವವನೇ ಹೊಲದೊಡೆಯ ಎಂಬ ಕಲ್ಪನೆಯನ್ನು ಸಾಕಾರ­ಗೊಳಿಸಿದವರು ಎನ್ನುವುದು ಪಕ್ಕನೆ ನೆನಪಿಗೆ ಬರುತ್ತದೆ. ಅಧಿಕಾರ ವಿಕೇಂದ್ರೀಕರಣವೆಂದಾಗ ರಾಮಕೃಷ್ಣ ಹೆಗಡೆಯವರ ಚಿತ್ರ ಕಣ್ಣು ಮುಂದೆ ಹಾಯ್ದು ಹೋಗುತ್ತದೆ. ಖಡಕ್‌ ಆಡಳಿತವೆಂದರೆ ವೀರೇಂದ್ರ ಪಾಟೀಲರು. ಐಟಿ, ಬಿಟಿಯೆಂದರೆ ಎಸ್‌.ಎಂ.ಕೃಷ್ಣ. ಸಿದ್ದರಾಮಯ್ಯ ಅವರೂ ಹತ್ತು ಹಲವು ಜನಪ್ರಿಯ ಕಾರ್ಯಕ್ರಮ ಜಾರಿ­ಗೊಳಿಸುವ ಮೂಲಕ ಜನರ ಸ್ಮೃತಿಪಟಲದಲ್ಲಿ ಸ್ಥಾನ ಪಡೆದಿದ್ದಾರೆ. ಎಚ್‌.ಡಿ.ಕುಮಾರಸ್ವಾಮಿ­ಯವರೂ ಪ್ರಥಮ ಬಾರಿಗೆ ಸಿಎಂ ಆದಾಗ ಹೊಸ ಭರವಸೆಯಾಗಿ ಹೊರಹೊಮ್ಮಿ­ದ್ದರು. ಹಾಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿ­ಯೂರಪ್ಪ 2008ರಲ್ಲಿ ಮೊದಲ ಸಲ ರಾಜ್ಯ ಬಿಜೆಪಿ ಸರಕಾರದ ನೇತೃತ್ವ ವಹಿಸಿಕೊಂಡಾಗ ನೀಡಿದ ಯೋಗದಾನವೂ ಉಲ್ಲೇಖನೀಯ.
ಶಾಪವಲ್ಲ, ವರ!: ಇಷ್ಟರ ಹೊರತಾಗಿಯೂ ‘Public memory is short’ ಎನ್ನುವಂತೆ ಜನರು ಎಷ್ಟೋ ಸಂಗತಿಗಳನ್ನು ಬೇಗ ಮರೆತು ಬಿಡುತ್ತಾರೆ. ಧನಾತ್ಮಕ ವಿಚಾರಗಳು ಮನಸ್ಸಿನ ಆಳಕ್ಕಿಳಿಯು­ವುದು ವಿರಳ. ಋುಣಾತ್ಮಕವಾದರೆ ತಕ್ಷಣವೇ ವಿಜೃಂಭಿಸಲಾರಂಭಿ­ಸುತ್ತದೆ. ಸದ್ಯಕ್ಕೆ ಕೊರೊನಾ ಆಘಾತದಿಂದ ರಾಜ್ಯದ ಆರ್ಥಿಕ ಸ್ಥಿತಿ ಸಂಕಷ್ಟದಲ್ಲಿದೆ. 2020-21ರ ವಿತ್ತ ವರ್ಷಕ್ಕೆ ಸಿಎಂ ಮಂಡಿಸಿರುವ ಬಜೆಟ್‌ ಲೆಕ್ಕಾಚಾರವೂ ತಲೆಕೆಳಗಾಗಿದೆ. ಬಜೆಟ್‌ ಘೋಷಿತ ಯೋಜನೆಗಳನ್ನು ಬದಿಗಿರಿಸಿ ಕೊರೊನಾ ನಿರ್ವಹಣೆ ಕೈಗೊಳ್ಳು­ವುದು ಸರಕಾರದ ಆದ್ಯತೆಯಾಗಿದೆ. ಈ ಸಂದರ್ಭ ಬಳಸಿಕೊಂಡು ಆರೋಗ್ಯ ಕ್ಷೇತ್ರಕ್ಕೆ ಕಾಯಕಲ್ಪ ನೀಡುವುದಾಗಿ ಮುಖ್ಯಮಂತ್ರಿಯ­ವರು ಹೇಳಿದ್ದಾರೆ. ಇದು ಸರಿಯಾದ ತೀರ್ಮಾನವೂ ಹೌದು. ಪ್ರಸಕ್ತ ಸನ್ನಿವೇಶದಲ್ಲಿ ಆಸ್ಪತ್ರೆಗಳನ್ನು ಸುಧಾರಣೆಗೆ ಒಳಪಡಿಸುವ ತುರ್ತು ಇದೆ. ಜನರ ಪ್ರಾಣ ಉಳಿಸಬೇಕಿರುವ ಆರೋಗ್ಯ ಕೇಂದ್ರಗಳಿಗೇ ‘ಜೀವದಾನ’ ಮಾಡಬೇಕು ಎನ್ನುವುದು ಸರಕಾರಕ್ಕೂ ಮನದಟ್ಟಾಗಿದೆ. ಅಷ್ಟರ ಮಟ್ಟಿಗೆ ವಿಧಿಯಿಲ್ಲದೆ ಕೊರೊನಾ ಮಹಾಮಾರಿಯನ್ನು ಅಭಿನಂದಿಸಬೇಕಾಗುತ್ತದೆ. ಪ್ರಾಯಶಃ ಈ ನೆಲೆಯಲ್ಲೇ ಮುಖ್ಯಮಂತ್ರಿಯವರು ಆಸ್ಪತ್ರೆಗಳಿಗೆ ಅಗತ್ಯ ಸೌಕರ್ಯ ನೀಡುವ ನಿಲುವು ತಳೆದಿದ್ದಿರಬಹುದು.
ಅರಸು ಮಾದರಿ: ಆಸ್ಪತ್ರೆಗಳಿಗೆ ಕಾಯಕಲ್ಪ ಕಲ್ಪಿಸುವುದು ಮುಖ್ಯ­ಮಂತ್ರಿಯವರ ನೈಜ ಕಾಳಜಿಯೂ ಆಗಿರಬಹುದು. ಆದರೆ, ಜಡ್ಡುಗಟ್ಟಿದ ಆಡಳಿತ ವ್ಯವಸ್ಥೆಯಲ್ಲಿ ಇದು ಅಂದುಕೊಂಡಷ್ಟು ವೇಗದಲ್ಲಿ ಕೈಗೂಡುವುದಿಲ್ಲ. ಹಾಗಾಗಿ ಇದಕ್ಕೊಂದು ಬಲವಾದ ಸಂಕಲ್ಪ ಶಕ್ತಿ ಅಗತ್ಯ. ಮುಖ್ಯಮಂತ್ರಿ ಅಂತಹ ಇಚ್ಛಾಶಕ್ತಿಯನ್ನೂ ಪ್ರದರ್ಶಿಸಬೇಕಾಗುತ್ತದೆ. ಅದಕ್ಕೆ ದೇವರಾಜ ಅರಸರ ಮಾದರಿ ಸಹಕಾರಿಯಾಗಬಹುದು. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ತುರ್ತು ಪರಿಸ್ಥಿತಿ ಹೇರಿದ್ದು ನಮಗೆ ತಿಳಿದಿದೆ. ಇದರ ವಿರುದ್ಧ ಹರತಾಳ ನಡೆಸಿದವರನ್ನು ಜೈಲಿಗಟ್ಟಲಾಗಿತ್ತು. ಹಾಗಾಗಿ ರಾಷ್ಟ್ರದಲ್ಲಿ ಭಯದ ವಾತಾವರಣ ನೆಲೆಸಿತ್ತು. ಇದೇ ಸಂದರ್ಭವನ್ನು ವಿಭಿನ್ನವಾಗಿ ಸ್ವೀಕರಿಸಿದ್ದ ರಾಜ್ಯದ ಅಂದಿನ ಮುಖ್ಯಮಂತ್ರಿ ದೇವರಾಜ ಅರಸರು ಭೂಸುಧಾರಣೆ ಕಾಯಿದೆ ಜಾರಿಗೆ ತರಲು ಸಂಕಲ್ಪ ತೊಟ್ಟಿದ್ದರು. ಜಮೀನ್ದಾರರ ಪ್ರತಿರೋಧದ ನಡುವೆಯೂ ಅರಸು ಸರಕಾರ ಗೇಣಿ ಪದ್ಧತಿ ರದ್ದುಗೊಳಿಸಿ ಭೂಸುಧಾರಣಾ ಕಾಯಿದೆ ಅನುಷ್ಠಾನಗೊಳಿಸಿದ್ದರು. ಬಡವರು, ದೀನ, ದಲಿತರಿಗೆ ಭೂಮಿಯ ಒಡೆತನ ಕೊಡಿಸಿದ ಭಾಗ್ಯ ವಿಧಾತಾ ಎನಿಸಿಕೊಂಡಿ­ದ್ದರು. ಈ ಕಾರಣಕ್ಕಾಗಿ ಅರಸರನ್ನು ಈಗಲೂ ಜನ ಕೊಂಡಾಡುತ್ತಾರೆ. ದೇಶಾದ್ಯಂತ ಕರಾಳತೆ ಸೃಷ್ಟಿಸಿದ್ದ ತುರ್ತು ಪರಿಸ್ಥಿತಿಗೆ ಕರ್ನಾಟಕದಲ್ಲಿ ಬೇರೆಯದೇ ಸ್ವರೂಪ ನೀಡಿದ ಅರಸು ಅವರದ್ದು ವಿಪತ್ತಿನ ಕಾಲದಲ್ಲಿ ಆಡಳಿತಗಾರ ತೋರಿದ ಜಾಣ್ಮೆಗೆ ಶ್ರೇಷ್ಠ ನಿದರ್ಶನ.
ಪ್ರತ್ಯೇಕ ಸಚಿವರ ಅಗತ್ಯ: ಭೂಸುಧಾರಣಾ ಕಾಯಿದೆ ತರಲು ದೇವರಾಜ ಅರಸು ತಮ್ಮ ಸಂಪುಟದ ಸದಸ್ಯರಾಗಿದ್ದ ಸುಬ್ಬಯ್ಯ ಶೆಟ್ಟರನ್ನು ಭೂಸುಧಾರಣಾ ಮಂತ್ರಿಯಾಗಿ ನೇಮಿಸುತ್ತಾರೆ. ಸ್ವತಃ ಜಮೀನುದಾರಿಕೆ ಕುಟುಂಬದ ಹಿನ್ನೆಲೆಯವರಾದರೂ ಅರಸರು ಕೊಟ್ಟ ಜವಾಬ್ದಾರಿಯನ್ನು ಸುಬ್ಬಯ್ಯ ಶೆಟ್ಟರು ಶ್ರದ್ಧೆ ಮತ್ತು ಪ್ರಾಮಾ­ಣಿಕತೆಯಿಂದ ನಿರ್ವಹಿಸುತ್ತಾರೆ. ಅರಸರ ಕಾಲದಲ್ಲಿ ಪಾಳೇಗಾರಿ­ಕೆಯ ಪರಾಕಾಷ್ಠೆಯಿತ್ತು. ಅದನ್ನು ಮೆಟ್ಟಿ ನಿಲ್ಲಲು ತುರ್ತು ದಿನಗಳ ವಿಷಮ ಪರಿಸ್ಥಿತಿಯನ್ನು ಅವರು ನಾಜೂಕಾಗಿ ಉಪ­ಯೋಗಿಸಿ­ಕೊಂಡಿದ್ದರು. ತುರ್ತು ದಿನಗಳನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳಲಾ­ಯಿತು ಎಂಬ ಬಗ್ಗೆ ಮಾಜಿ ಸಚಿವ ಅಡಗೂರು ಎಚ್‌.ವಿಶ್ವನಾಥ್‌ ತಮ್ಮ ‘ಆಪತ್‌ ಸ್ಥಿತಿಯ ಆಲಾ­ಪಗಳು’ ಪುಸ್ತಕದಲ್ಲಿ ಸೊಗಸಾಗಿ ವಿವರಿಸಿದ್ದಾರೆ.

ಬಿಎಸ್‌ವೈ ಅಂಗಳಕ್ಕೇ ಬಂದ ಚೆಂಡು: ಇಡೀ ವಿಶ್ವವೇ ಕೊರೊನಾ ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮಹತ್ವದ ಅರಿವಾಗತೊಡಗಿದೆ. ಭಾರತದಂತಹ ದೇಶದಲ್ಲಿ ನಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಚಿಂತಾಜನಕ ಸ್ಥಿತಿಯಲ್ಲಿದೆ. ನಮ್ಮ ರಾಜ್ಯದ ಸರಕಾರಿ ಆಸ್ಪತ್ರೆಗಳೂ ವೆಂಟಿಲೇಟರ್‌ ಮೇಲೆ ಜೀವ ಹಿಡಿದುಕೊಂಡಿವೆಯೆಂದರೆ ಅತಿಶಯವಾಗದು. ಈ ನಡುವೆಯೂ ಕೋವಿಡ್‌-19 ಸೋಂಕು ತಗುಲಿದವರ ಯೋಗಕ್ಷೇಮ ನೋಡಿಕೊಳ್ಳಲು ಸರಕಾರಿ ಆರೋಗ್ಯ ವ್ಯವಸ್ಥೆಯೇ ಹಗಲಿರುಳೂ ಶ್ರಮಿಸುತ್ತಿದೆ. ಇದರ ಅರ್ಥ ಸರಳ. ಹೋಬಳಿ ಮಟ್ಟದವರೆಗಿನ ಆರೋಗ್ಯ ಕೇಂದ್ರಗಳನ್ನು ನಾವು ಯಾವಾಗಲೂ ಯುದ್ಧ ಸನ್ನದ್ಧ ಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. ಅದಕ್ಕೆ ಬೇಕಾದ ಮೂಲಸೌಕರ್ಯ, ತಜ್ಞರ ವೈದ್ಯರು ಹಾಗೂ ಇನ್ನಿತರ ಸಿಬ್ಬಂದಿ ಒದಗಿಸಬೇಕು. ಯಡಿಯೂರಪ್ಪನವರು ಈ ದಿಸೆಯಲ್ಲಿ ಕಾರ್ಯೋನ್ಮುಖರಾಗಲು ಅರಸು ಅವರಂತೆಯೇ ದಿಟ್ಟ ಹೆಜ್ಜೆಯಿಡ­ಬೇಕು. ತಮ್ಮ ಸಂಪುಟದಲ್ಲಿ ಬದ್ಧತೆ, ಪ್ರಾಮಾಣಿಕತೆಯಿರುವ ವಿಶ್ವಾಸಾರ್ಹ ಸದಸ್ಯರು ಯಾರೆನ್ನುವುದು ಯಡಿಯೂರಪ್ಪ ಅವ­ರಿಗೇ ಚೆನ್ನಾಗಿ ತಿಳಿದಿರುತ್ತದೆ. ಅಂಥವರನ್ನು ಗುರುತಿಸಿ ಆಸ್ಪತ್ರೆಗಳ ಸಮಗ್ರ ಸುಧಾರಣೆಯ ಹೊಣೆ ವಹಿಸಬಹುದು. ಜತೆಗೆ ತಾವೇ ಖುದ್ದಾಗಿ ಮೇಲುಸ್ತುವಾರಿ ನೋಡಿಕೊಳ್ಳಬಹುದು. ಮುಂದಿನ ಮೂರು ವರ್ಷದಲ್ಲಿ ಜನಮಾನಸದಲ್ಲಿ ಅಚ್ಚಳಿಯದೇ ಉಳಿಯುವ ಯೋಜನೆ ಕೊಡುವ ತುಡಿತ ಅವರಲ್ಲಿರುವುದು ಸುಳ್ಳಲ್ಲ. ಕೊರೊನಾ ಅದಕ್ಕೆ ಅಡ್ಡಿಯಾಗಿದೆ. ಆದರೇನಂತೆ? ಆರೋಗ್ಯ ಕ್ಷೇತ್ರಕ್ಕೆ ಕಾಯಕಲ್ಪ ನೀಡುವ ಮಹತ್ಕಾರ್ಯ ಕೈಗೊಳ್ಳುವ ಸದವಕಾಶ ಅಯಾಚಿತವಾಗಿ ಅವರಿಗೆ ದೊರಕಿದೆ. ಇದರಲ್ಲಿ ಅವರು ಯಶಸ್ವಿಯಾದರೆ ಯಡಿಯೂರಪ್ಪ ಅವರು ಈ ರಾಜ್ಯದ ಜನರ ಮನಸ್ಸಿನಲ್ಲಿ ಎಂದೂ ಮರೆಯದ ನಾಯಕರಾಗಿ ಪ್ರತಿಷ್ಠಾಪಿತರಾಗುವುದು ನಿಶ್ಚಿತ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top