ಗುರ್ ಎಂದ ಚೀನಾ
59 ಚೀನಾ ಆ್ಯಪ್‌ಗಳನ್ನು ಬ್ಯಾನ್ ಮಾಡಿದ ಭಾರತದ ಕ್ರಮ ತನಗೆ ಕಳವಳ ಉಂಟುಮಾಡಿದೆ ಎಂದು ಚೀನಾ ಹೇಳಿದೆ. ಅಂತಾರಾಷ್ಟ್ರೀಯ ಹೂಡಿಕೆದಾರರ ಹಿತ ಹಾಗೂ ಕಾನೂನಾತ್ಮಕ ಹಕ್ಕುಗಳನ್ನು ರಕ್ಷಿಸುವ ಹೊಣೆ ಭಾರತ ಸರಕಾರದ ಮೇಲೆ ಇದೆ ಎಂದು ಚೀನಾ ಗುರುಗುಟ್ಟಿದೆ. ಚೀನದ ಕಂಪನಿಗಳು ಯಾವಾಗಲೂ ಅಂತಾರಾಷ್ಟ್ರೀಯ ಹಾಗೂ ಸ್ಥಳೀಯ ಸರಕಾರಗಳ ಕಾನೂನುಗಳಿಗೆ ಬದ್ಧವಾಗಿರುವಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಚೀನಾ ವಿದೇಶಾಂಗ ಖಾತೆ ವಕ್ತಾರ ಝಾವೊ ಲಿಜಿಯನ್ ಹೇಳಿದ್ದಾರೆ. ಇದು ಅಂತಾರಾಷ್ಟ್ರೀಯ ವ್ಯಾಪಾರ ನಿಯಮಗಳಿಗೆ ವಿರುದ್ಧವಾಗಿದೆ, ತಾರತಮ್ಯದ ನಡೆಯಾಗಿದೆ ಎಂದು ಚೀನಾದ ರಾಯಭಾರಿ ಹೇಳಿದ್ದಾರೆ.
ಭಾರತದ ಸ್ಟಾರ್ಟಪ್‌ಗಳಿಗೆ ಏನಾಗಬಹುದು?
ಭಾರತದ ನೂರಕ್ಕೂ ಹೆಚ್ಚು ಸ್ಟಾರ್ಟಪ್‌ಗಳಲ್ಲಿ ಚೀನಾದ ದೊಡ್ಡ ದೊಡ್ಡ ಕಂಪನಿಗಳು ಹೂಡಿಕೆ ಮಾಡಿವೆ. ಚೀನಾದ ಅಲಿಬಾಬಾ ಕಂಪನಿ, ನಮ್ಮ ದೇಶದ ಪೇಟಿಎಂ ಹಾಗೂ ಸ್ನ್ಯಾಪ್‌ಡೀಲ್‌ಗಳಲ್ಲಿ ಶೇರುಗಳನ್ನು ಹೊಂದಿದೆ. ಟೆನ್ಸೆಂಟ್ ಕಂಪನಿಯು ನಮ್ಮ ಫ್ಲಿಪ್‌ಕಾರ್ಟ್, ಸ್ವಿಗ್ಗಿ, ಓಲಾಗಳಲ್ಲಿ ಸಾಕಷ್ಟು ಹೂಡಿಕೆ ಮಾಡಿದೆ. ಶುನ್‌ವೆಯಿ ಕ್ಯಾಪಿಟಲ್ ಎಂಬ ಸಂಸ್ಥೆಯು ನಮ್ಮ ಜೊಮ್ಯಾಟೋ, ಮೀಶೂ, ಶೇರ್‌ಚಾಟ್‌ಗಳಲ್ಲಿ ಹೂಡಿಕೆ ಮಾಡಿದೆ. ಬಹುದೊಡ್ಡ ಹಾಗೂ ಜನಪ್ರಿಯ ಮೊಬೈಲ್ ಕಂಪನಿ ಕ್ಸಿಯೋಮಿ, ಭಾರತದ ನೂರು ಸ್ಟಾರ್ಟಪ್‌ಗಳಲ್ಲಿ ಹಣ ಹೂಡಿದೆ. ಟಿಆರ್ ಕ್ಯಾಪಿಟಲ್ ಎಂಬ ಸಂಸ್ಥೆಯು ಫ್ಲಿಪ್‌ಕಾರ್ಟ್, ಲೆನ್ಸ್‌ಕಾರ್ಟ್, ಅರ್ಬನ್ ಲ್ಯಾಡರ್, ಬಿಗ್‌ಬಾಸ್ಕೆಟ್‌ಗಳಲ್ಲಿ ಹಣ ಹಾಕಿದೆ. ಪ್ರಸ್ತುತ ನಿಷೇಧದಿಂದ ಈ ಸ್ಟಾರ್ಟಪ್‌ಗಳಿಗೆ ಹೂಡಿಕೆಯಲ್ಲಿ ಆರಂಭದಲ್ಲಿ ಕೊಂಚ ತೊಂದರೆಯಾದರೂ ನಂತರ ಚೇತರಿಸಿಕೊಳ್ಳಬಹುದು. ಭಾರತದ ಸ್ಟಾರ್ಟಪ್‌ಗಳು ಈ ನಿಷೇಧದಿಂದ ಲಾಭ ಮಾಡಿಕೊಳ್ಳುವ ಸಾಧ್ಯತೆ ಸಾಕಷ್ಟಿದೆ.
ಚೀನಾದಲ್ಲಿ ವಿಪಿಎನ್ ನಿರ್ಬಂಧ
ಭಾರತದಲ್ಲಿ ಚೀನಾದ ಆಪ್‌ಗಳನ್ನು ನಿಷೇಧಿಸಿದ ಕ್ರಮಕ್ಕೆ ಪ್ರತೀಕಾರವಾಗಿ, ಭಾರತದ ವೆಬ್‌ಸೈಟ್‌ಗಳನ್ನು ವೀಕ್ಷಿಸದಂತೆ ಚೀನಾದ ಕಮ್ಯುನಿಸ್ಟ್ ಸರಕಾರ ವಿಪಿಎನ್ (ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್) ಬ್ಯಾನ್ ಮಾಡಿದೆ. ದಿನಪತ್ರಿಕೆಗಳನ್ನೂ ನಿಷೇಧಿಸಿದೆ. ಈವರೆಗೆ ಭಾರತೀಯ ಟಿವಿ ಚಾನೆಲ್‌ಗಳನ್ನು ಐಪಿ ಟಿವಿ ಮೂಲಕ ವೀಕ್ಷಿಸಬಹುದಿತ್ತು. ಆದರೆ ಕಳೆದೆರಡು ದಿನಗಳಿಂದ ಅದು ಕಾರ್ಯ ನಿರ್ವಹಿಸುತ್ತಿಲ್ಲ. ಇದರ ಮೇಲೆ ಸೆನ್ಸಾರ್‌ಶಿಪ್ ಸಾಧಿಸಬಲ್ಲ ಅತ್ಯಾಧುನಿಕ ತಂತ್ರಜ್ಞಾನದ ಫೈರ್‌ವಾಲ್ ಅನ್ನು ಚೀನಾ ತಯಾರಿಸಿದೆ. ಸಿಎನ್‌ಎನ್ ಅಥವಾ ಬಿಬಿಸಿಗಳು ಚೀನಾ ವಿರುದ್ಧದ ಯಾವುದೇ ಸುದ್ದಿ ಪ್ರಸಾರ ಮಾಡುತ್ತಿದ್ದರೂ ತಕ್ಷಣವೇ ಸ್ಕ್ರೀನ್‌ಗಳು ಆಫ್ ಆಗುವಂತೆ ವ್ಯವಸ್ಥೆಯನ್ನು ಚೀನಾದ ಕುಖ್ಯಾತ ಸರ್ವಾಧಿಕಾರಿ ಸರಕಾರ ಮಾಡಿಕೊಂಡಿದೆ.
ನಿರ್ಬಂಧಕ್ಕೆ ಕಾರಣ
ಭಾರತ ಚೀನಾ ಆ್ಯಪ್‌ಗಳನ್ನು ನಿರ್ಬಂಧಿಸಲು ನೀಡಿರುವ ಕಾರಣ- ದೇಶದ ಭದ್ರತೆ, ಸಾರ್ವಭೌಮತೆ, ಐಕ್ಯತೆಗೆ ಆತಂಕ ಒಡ್ಡಬಲ್ಲ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದು. ದೇಶದ ತಂತ್ರಜ್ಞಾನ ಕಾಯಿದೆಯ 69ಎ ಸೆಕ್ಷನ್ ಪ್ರಕಾರ, (ಯಾವುದೇ ಮಾಹಿತಿಯನ್ನು ಸಾರ್ವಜನಿಕ ಲಭ್ಯತೆಯಿಂದ ನಿಷೇಧಿಸಬಹುದು) ಈ ನಿರ್ಬಂಧ ವಿಧಿಸಲಾಗಿದೆ. ಹಲವಾರು ಚೀನಾ ಆ್ಯಪ್‌ಗಳ ಬಗೆಗೆ ಭದ್ರತೆಯ ಆತಂಕವನ್ನು ಈ ಹಿಂದೆಯೇ ಭಾರತದ ತಜ್ಞರು ವ್ಯಕ್ತಪಡಿಸಿದ್ದರು. ಈಗ ನಿಷೇಧ ಮಾಡಿದ್ದರೂ, ದೇಶದ ಕೋಟ್ಯಂತರ ಗ್ರಾಹಕರ ಸೂಕ್ಷ್ಮ ಡೇಟಾಗಳು ಈಗಾಗಲೇ ಚೀನಾದ ಸರ್ವರ್‌ಗಳಲ್ಲಿ ನಿಕ್ಷೇಪವಾಗಿದೆ. ರಕ್ಷಣಾ ವ್ಯವಸ್ಥೆಯ ಡೇಟಾ ಸೋರಿಹೋಗದಂತೆ ಹೆಚ್ಚಿನ ಎಚ್ಚರವನ್ನು ಭಾರತೀಯ ಮಿಲಿಟರಿ ವಹಿಸಿದ್ದು, ಸೈನಿಕರು ಹಾಗೂ ಅಧಿಕಾರಿಗಳು ಚೀನಾ ಆ್ಯಪ್ ಬಳಸದಂತೆ ಹಿಂದೆಯೇ ನಿರ್ದೇಶನ ನೀಡಿತ್ತು.
ಚೀನಾಗೆ ಇದರಿಂದ ಏನಾಗಬಹುದು?
ಚೀನಾ ಭಾರತ ಸೇರಿದಂತೆ ಏಷ್ಯಾದ ಹಲವು ಬಡ ಹಾಗೂ ಮಧ್ಯಮ ವರ್ಗದ ದೇಶಗಳನ್ನು ತಂತ್ರಜ್ಞಾನ ವಲಯದಲ್ಲಿ ಬುಟ್ಟಿಗೆ ಹಾಕಿಕೊಳ್ಳಲು ನೋಡುತ್ತಿದೆ. ಆದರೆ ಭಾರತದ ದಿಟ್ಟ ನಡೆಯ ಪರಿಣಾಮವಾಗಿ, ಭಾರತದ ನೂರಮೂವತ್ತು ಕೋಟಿ ಗ್ರಾಹಕರ ಪಡೆಯನ್ನು ಚೀನಾ ಕಳೆದುಕೊಳ್ಳಲಿದೆ. ಹಾಗೆಯೇ ಚೀನಾದ ಆ್ಯಪ್‌ಗಳಿಂದ ಕಿರುಕುಳ ಅನುಭವಿಸುತ್ತಿರುವ ಇತರ ಸಣ್ಣ ದೇಶಗಳೂ ಇಂಥದೇ ನಡೆಗೆ ಮುಂದಾಗಬಹುದು. ಬೀಜಿಂಗ್ ಮೂಲದ ಟಿಕ್‌ಟಾಕ್ ಆ್ಯಪ್ ಭಾರತದಲ್ಲಿ 61.10 ಕೋಟಿ ಡೌನ್‌ಲೋಡ್‌ಗಳನ್ನು ಕಂಡಿದೆ. ಆ ಕಂಪನಿಯ ಶೇ.30 ಮಾರುಕಟ್ಟೆ ಭಾರತದಲ್ಲಿದೆ. ಈ ನಿಷೇಧದಿಂದ ಆ ಕಂಪನಿಗೆ ಮರ್ಮಾಘಾತವಾಗಲಿದೆ. ಅಮೆರಿಕದಲ್ಲೂ ಇತ್ತೀಚೆಗೆ ಟಿಕ್‌ಟಾಕ್ ನಿಷೇಧ ಮಾಡಲಾಗಿದೆ. ಅಲ್ಲೂ ಕೂಡ ದೊಡ್ಡ ಪ್ರಮಾಣದ ಮಾರುಕಟ್ಟೆಯನ್ನು ಟಿಕ್‌ಟಾಕ್ ಕಳೆದುಕೊಂಡಿದೆ. ಇನ್ನೂ ಕೆಲವು ದೇಶಗಳು ಇಂಥದೇ ಕ್ರಮ ತೆಗೆದುಕೊಂಡರೆ ಚೀನಾದ ಆ್ಯಪ್‌ಗಳು ಗ್ರಾಹಕರಿಗಾಗಿ ಪೇಚಾಡಬೇಕಾಗುತ್ತದೆ. ಇನ್ನು ಮುಂದೆ ಭಾರತದಲ್ಲಿ ಖಾತೆ ತೆರೆಯಲು ಮುಂದಾಗುವ ಚೀನಾ ಕಂಪನಿಗಳು ಇದರಿಂದ ಭೀತಗೊಂಡು ಹಿಂದೆಗೆಯಬಹುದು. ಇದರಿಂದ ಭಾರತದ್ದೇ ಆದ ತಂತ್ರಜ್ಞಾನ ಮಾರುಕಟ್ಟೆ ಬೆಳೆಯಬಹುದು.
ನಿರ್ಬಂಧ ಹೇಗೆ ಜಾರಿ?
ಮೊದಲು ಇಂಟರ್‌ನೆಟ್ ಸೇವಾದಾತರು ಈ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಬೇಕಾಗುತ್ತದೆ. ನಂತರ ಗೂಗಲ್ ಪ್ಲೇಸ್ಟೋರ್, ಆ್ಯಪಲ್ ಸ್ಟೋರ್‌ಗಳು ಈ ಆ್ಯಪ್‌ಗಳನ್ನು ತೆಗೆದುಹಾಕಬೇಕು. ಆದರೆ ಇವುಗಳ ಅನಧಿಕೃತ ಆವೃತ್ತಿಗಳು ಹುಟ್ಟಿಕೊಂಡು ಅವುಗಳೆಡೆಗೆ ಗ್ರಾಹಕರು ಹೋಗಬಹುದು. ಇದು ಹ್ಯಾಕರ್‌ಗಳಿಗೆ ಹಾಗೂ ಸೈಬರ್ ಕ್ರಿಮಿನಲ್‌ಗಳಿಗೆ ಅನುಕೂಲ ನೆಲೆ ಕಲ್ಪಿಸಬಹುದು. ಇದನ್ನು ತಡೆಯಲು ಭಾರತ ಸೈಬರ್ ಕಾನೂನುಗಳನ್ನು ಹಾಗೂ ನಿಗಾವನ್ನು ಇನ್ನಷ್ಟು ಕಠಿಣ ಮಾಡಬೇಕಾಗುತ್ತದೆ. ಈಗಾಗಲೇ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡಿದ್ದವರು ಅದರ ಬಳಕೆಯನ್ನು ಮುಂದುವರಿಸಬಹುದು. ಆದರೆ ಹೊಸದಾಗಿ ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯವಿಲ್ಲ.
ಮಕ್ಕಳ ಪೀಡನೆ
ಚೀನಾದ ಕೆಲವು ಮನರಂಜನಾ ಆ್ಯಪ್‌ಗಳು ಮಕ್ಕಳನ್ನು ಲೈಂಗಿಕ ಪ್ರಚೋದನೆ ಹಾಗೂ ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದೂ ದೂರು ಕೇಳಿಬಂದಿತ್ತು. ಟಿಕ್‌ಟಾಕ್ ಅನ್ನು ಹೋಲುವ ಇಂಥ ಕಳಪೆ ಆ್ಯಪ್‌ಗಳು ಮಕ್ಕಳನ್ನು ಅಭಿರುಚಿಯ ಕುಣಿತ ಹಾಡುಗಳ ವರ್ಗಾವಣೆಗೆ ಹಾಗೂ ಮಕ್ಕಳ ಪೀಡನೆಗೆ ಬಳಸಿಕೊಳ್ಳುತ್ತಿದ್ದು, ಅವುಗಳ ನಿಷೇಧಕ್ಕೆ ಬೇಡಿಕೆಯಿತ್ತು.
ಮಾರಕವಾದ ಟಿಕ್‌ಟಾಕ್
ಚೀನಾದ ಮನರಂಜನಾ ಆ್ಯಪ್ ಟಿಕ್‌ಟಾಕ್ ಭಾರತದಲ್ಲಿ ಬಲು ಜನಪ್ರಿಯವಾಗಿತ್ತು. ಟಿಕ್‌ಟಾಕ್ ಆ್ಯಪ್‌ನ್ನು ಬಳಸಿಕೊಂಡು ಭಾರತದಲ್ಲಿ ಕೆಲವು ಪ್ರತಿಭೆಗಳು, ಅಪ್ರಾಪ್ತ ವಯಸ್ಕರು ಕೂಡ ಸ್ಟಾರ್‌ಗಳೂ ಆಗಿಬಿಟ್ಟಿದ್ದಾರೆ. ಟಿಕ್‌ಟಾಕ್ ಸ್ಟಾರ್‌ಗಳಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಸುಮಾರು 61 ಲಕ್ಷ ಮಂದಿ ಭಾರತದಲ್ಲಿ ಟಿಕ್‌ಟಾಕ್ ಬಳಸುತ್ತಿದ್ದಾರೆ. ಆದರೆ ಕಳೆದ ಹದಿನೈದು ದಿನಗಳಲ್ಲಿ ಒಬ್ಬ ಟಿಕ್‌ಟಾಕ್ ಸ್ಟಾರ್ ಆತ್ಮಹತ್ಯೆ ಮಾಡಿಕೊಂಡಿದ್ದು, ಇನ್ನೊಬ್ಬಾಕೆ ಕೊಲೆ ಆಗಿದ್ದಾಳೆ. ಇದು ಟಿಕ್‌ಟಾಕ್‌ನಿಂದ ಲಭ್ಯವಾಗುವ ಜನಪ್ರಿಯತೆ ದುರ್ಬಳಕೆ ಆಗುತ್ತಿರುವುದನ್ನು ಸ್ಪಷ್ಟವಾಗಿ ಸೂಚಿಸಿದೆ. ಟಿಕ್‌ಟಾಕ್‌ಗೆ ಹಲವು ಪರ್ಯಾಯಗಳು ಲಭ್ಯವಿವೆ. ಭಾರತೀಯ ಕಂಪನಿಗಳಾದ ಮಿತ್ರೋಂ ಹಾಗೂ ಚಿಂಗಾರಿಗಳು ಲಭ್ಯವಿವೆ. ಮಿತ್ರೋಂ ಆ್ಯಪ್ ಕಳೆದ ಒಂದೇ ವಾರದಲ್ಲಿ ಭಾರತದಲ್ಲಿ ಒಂದು ಕೋಟಿ ಮೊಬೈಲ್‌ಗಳಿಗೆ ಡೌನ್‌ಲೋಡ್ ಆಗಿದೆ. ಚಿಂಗಾರಿ ಆ್ಯಪ್ 25 ಲಕ್ಷ ಡೌನ್‌ಲೋಡ್ ಕಂಡಿದೆ. ಇವೆರಡೂ ಗುರುಗ್ರಾಮ ಮೂಲದ ಸ್ಟಾರ್ಟಪ್‌ಗಳಾಗಿದ್ದು ಸಣ್ಣ ವಿಡಿಯೋಗಳ ನಿರ್ಮಾಣ, ಎಡಿಟಿಂಗ್, ಹಂಚುವಿಕೆಗೆ ಆಸ್ಪದ ನೀಡುತ್ತಿದ್ದು, ಯುವಜನತೆಯಲ್ಲಿ ಜನಪ್ರಿಯವಾಗುತ್ತಿವೆ.
ಪರ್ಯಾಯ ಆ್ಯಪ್‌ಗಳು
ನಿಷೇಧಿತ ಆ್ಯಪ್‌ಗಳು-ವರ್ಗ-ಪರ್ಯಾಯ ಆ್ಯಪ್‌ಗಳು
ಟಿಕ್‌ಟಾಕ್, ಹೆಲೋ, ವಿಗೊ ವಿಡಿಯೊ, ವಿಮೇಟ್, ಕ್ವೆಯಿ-ಸೋಶಿಯಲ್ ತಾಣ-ಮಿತ್ರೋಂ, ಚಿಂಗಾರಿ, ಇನ್‌ಸ್ಟಗ್ರಾಂ, ಯುಟ್ಯೂಬ್, ಡಬ್‌ಮ್ಯಾಶ್, ಬೊಲೊ ಇಂಡ್ಯಾ, ರೊಪೊಸೊ,
ಬೈದು-ಅನುವಾದ-ಗೂಗಲ್ ಟ್ರಾನ್ಸ್‌ಲೇಟ್, ಹೈ ಟ್ರಾನ್ಸ್‌ಲೇಟ್
ವಿ ಮೀಟ್, ವಿ ಚಾಟ್-ಸೋಶಿಯಲ್ ತಾಣ-ಫೇಸ್‌ಬುಕ್, ಇನ್‌ಸ್ಟಗ್ರಾಮ್, ವಾಟ್ಸ್ಯಾಪ್
ಶೇರ್‌ಇಟ್, ಕ್ಸೆಂಡರ್, ಎಸ್ ಫೈಲ್ ಎಕ್ಸ್‌ಫ್ಲೋರರ್-ಫೈಲು ವರ್ಗಾವಣೆ-ಫೈಲ್ಸ್ ಗೋ, ಗೂಗಲ್ ಡ್ರೈವ್, ಸೆಂಡ್ ಎನಿವೇರ್, ಡ್ರಾಪ್‌ಬಾಕ್ಸ್, ಜಿಯೊ ಸ್ವಚ್, ಶೇರ್‌ಆಲ್, ಸ್ಮಾರ್ಟ್‌ಶೇರ್
ಯುಸಿ ಬ್ರೌಸರ್, ಡಿಸಿ ಬ್ರೌಸರ್, ಸಿಎಂ ಬ್ರೌಸರ್-ಬ್ರೌಸರ್-ಗೂಗಲ್ ಕ್ರೋಮ್, ಮೋಜಿಲ್ಲಾ ಫೈರ್‌ಫಾಕ್ಸ್, ಮೈಕ್ರೊಸಾಫ್ಟ್ ಎಡ್ಜ್, ಒಪೆರಾ, ಜಿಯೊ ಬ್ರೌಸರ್
ಆ್ಯಪ್‌ಲಾಕ್-ಆ್ಯಪ್ ಕೀ-ನೋರ್ಟಾನ್ ಆ್ಯಪ್‌ಲಾಕ್
ಕ್ಯಾಮ್‌ಸ್ಕ್ಯಾನರ್-ಸ್ಕ್ಯಾನಿಂಗ್-ಪಿಡಿಎಫ್ ಸ್ಕ್ಯಾನರ್
ಬೈದು ಮ್ಯಾಪ್- ಮ್ಯಾಪ್-ಗೂಗಲ್ ಮ್ಯಾಪ್
ಕ್ಲಾಶ್ ಆಫ್ ಕಿಂಗ್ಸ್-ಆಟ-ಲುಡೊ ಕಿಂಗ್