ಬಿಜೆಪಿಗೆ ಹೊಸ ಚೈತನ್ಯ ತಂದೀತೇ ಈ ಯಾತ್ರೆ?

ಬಿಬಿಎ೦ಪಿ ಚುನಾವಣೆಯಲ್ಲಿ ಅಧಿಕ ಸ್ಥಾನ ಗಳಿಸಿದರೂ ಅಧಿಕಾರ ಹಿಡಿಯಲಾಗದ ಪರಿಸ್ಥಿತಿ ಮಾಜಿಡಿಸಿಎ೦ ಅಶೋಕ್ಗೆ ಪೀಕಲಾಟ ತ೦ದಿದೆ. ಅತ್ತ ಬಿಜೆಪಿಯಲ್ಲಿ ಮೂಲೆಗು೦ಪಾದರೆ೦ದೇಭಾವಿಸಲಾಗಿದ್ದ ಯಡಿಯೂರಪ್ಪನವರಿಗೆ ರೈತ ಚೈತನ್ಯ ಯಾತ್ರೆ ವ್ಯಕ್ತಿಗತವಾಗಿಯೂ ಟಾನಿಕ್ ಆಗಿದೆ.

RAJYAKARANA 15.9.2015ರಾಜಕಾರಣ ಅಂದ್ರೆ ಹಾಗೇನೆ. ಎಷ್ಟು ವಿಚಿತ್ರ ನೋಡಿ. ರಾಜ್ಯ ಬಿಜೆಪಿಗೇ ಸಾಮ್ರಾಟನಾಗುವ ಕನಸು ಕಂಡಿದ್ದ ಆರ್.ಅಶೋಕ್ ಇದೀಗ ಅಕ್ಷರಶಃ ಶೋಕಸಾಗರದಲ್ಲಿ ಮುಳುಗುವ ಹಾಗಾಗಿ ಹೋಯಿತು. ಬಿಬಿಎಂಪಿ ಚುನಾವಣಾ ಫಲಿತಾಂಶದ ಕ್ಷಣಗಳನ್ನೊಮ್ಮೆ ಕಣ್ಣಮುಂದೆ ತಂದುಕೊಳ್ಳಿ. ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಫಲಿತಾಂಶದ ಸ್ಪಷ್ಟ ಚಿತ್ರಣ ಸಿಗತೊಡಗಿತ್ತು. ಬಿಜೆಪಿ ಏಕಾಂಗಿಯಾಗಿ ನೂರು ಸ್ಥಾನಗಳನ್ನು ಬುಟ್ಟಿಗೆ ಹಾಕಿಕೊಳ್ಳುವುದೂ ಖಾತ್ರಿ ಆಗಿತ್ತು. ಅದು ಬಿಜೆಪಿ ನಾಯಕರ ಪಾಲಿಗೆ ಅಚ್ಚರಿಯ ಫಲಿತಾಂಶ. ಆ ಪಕ್ಷದ ನಾಯಕರೇ ಹೇಳಿದ ಹಾಗೆ ಬಿಬಿಎಂಪಿಯಲ್ಲಿ ಅಬ್ಬಬ್ಬಾ ಅಂದರೆ ತೊಂಭತ್ತು ಸ್ಥಾನಗಳಲ್ಲಿ ಗೆಲ್ಲುವ ಅಂದಾಜಿತ್ತು. ಅದಕ್ಕೆ ಕಾರಣ ಹಲವು.

ಈ ಹಿಂದಿನ ಅಧಿಕಾರಾವಧಿಯಲ್ಲಿ ಬಿಬಿಎಂಪಿಯಲ್ಲಿ ನಡೆದ ಬ್ರಹ್ಮಾಂಡ ಭ್ರಷ್ಟಾಚಾರ; ಅಧಿಕಾರ ನಡೆಸಲು ಅನಾಯಾಸವಾಗಿ ಸಿಕ್ಕಿದ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲಾಗಲಿಲ್ಲ, ಬೆಂಗಳೂರು ಜನರ ನಿರೀಕ್ಷೆಗೆ ತಕ್ಕಹಾಗೆ ಕೆಲಸ ಮಾಡಲಾಗಲಿಲ್ಲ ಎಂಬ ಬಗ್ಗೆ ಬಿಜೆಪಿ ನಾಯಕರಲ್ಲೇ ಒಳಗೊಳಗೆ ಅಳುಕು, ಬೇಸರ ಕಾಡುತ್ತಿತ್ತು. ಹೀಗಾಗಿ ಹಠಾತ್ತಾಗಿ ಎದುರಾದ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಆತ್ಮವಿಶ್ವಾಸದ ಕೊರತೆ ಇತ್ತು. ಇಷ್ಟೆಲ್ಲ ತಾಪತ್ರಯಗಳ ನಡುವೆ ಬಿಜೆಪಿ ನಾಯಕರು ಒಗ್ಗಟ್ಟಿನಿಂದ ಒಂದು ತಂಡವಾಗಿ ಪ್ರಚಾರಕ್ಕೆ ಹೋಗಲಿಲ್ಲ. ಮತದಾರರನ್ನು ಸೆಳೆಯಬಲ್ಲ ಯಡಿಯೂರಪ್ಪನವರಂತಹ ನಾಯಕರನ್ನು ಉದ್ದೇಶಪೂರ್ವಕವಾಗಿ ಪ್ರಚಾರಕ್ಕೆ ಬಳಸಿಕೊಳ್ಳಲಿಲ್ಲ. ಯಡಿಯೂರಪ್ಪ ಪ್ರಚಾರಕ್ಕೆ ಅಂತ ಬಂದದ್ದು ಅವರ ಆಪ್ತರು ಸ್ಪರ್ಧಿಸಿರುವ ಕೆಲವೇ ಕ್ಷೇತ್ರಗಳಲ್ಲಿ, ಅದೂ ವೈಯಕ್ತಿಕ ನೆಲೆಯಲ್ಲಿ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲೂ ಕೊನೇ ಕ್ಷಣದವರೆಗೂ ಗೊಂದಲವೋ ಗೊಂದಲ. ಇಷ್ಟೆಲ್ಲ ಅಧ್ವಾನ, ಅಪಸವ್ಯಗಳ ನಡುವೆಯೂ ಬೆಂಗಳೂರಿನ ಮತದಾರರು ಬಿಜೆಪಿಗೆ ಬರೋಬ್ಬರಿ ನೂರು ವಾರ್ಡಗಳಲ್ಲಿ ಗೆಲುವು ತಂದುಕೊಟ್ಟರು. ಖರೆ ಹೇಳಬೇಕೆಂದರೆ ಈ ಚಮತ್ಕಾರಕ್ಕೆ ಮೋದಿ ಕೃಪೆಯಲ್ಲದೆ ಬೇರಿನ್ನೇನಿರಲು ಸಾಧ್ಯ ಹೇಳಿ? ಇಷ್ಟೆಲ್ಲ ಇದ್ದೂ ಫಲಿತಾಂಶದ ನಂತರದಲ್ಲೂ ಬಿಜೆಪಿ ನಾಯಕರು ದುಡುಕಿದರು, ಮೈಮರೆತರು. ಅದರ ಪರಿಣಾಮವನ್ನು ಈಗ ಬಿಜೆಪಿಗರು ಅನುಭವಿಸುತ್ತಿದ್ದಾರೆ.

ಚುನಾವಣಾಪೂರ್ವದ ಬೆಳವಣಿಗೆಗಳು ಒತ್ತಟ್ಟಿಗಿರಲಿ. ಅದಕ್ಕಿಂತ ಹೆಚ್ಚಾಗಿ ಗಮನ ಸೆಳೆಯುವುದು ಫಲಿತಾಂಶದ ನಂತರದಲ್ಲಿ ನಡೆದ ಬೆಳವಣಿಗೆಗಳು. ಬಿಜೆಪಿ ನೂರು ಸ್ಥಾನಗಳಲ್ಲಿ ಗೆಲುವು ಸಾಧಿಸುವುದು ಗ್ಯಾರಂಟಿ ಆಗುತ್ತಿದ್ದಂತೆ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ವ್ಯವಹಾರಗಳನ್ನು ಏಕಾಂಗಿಯಾಗಿ ನಿಭಾಯಿಸಿದ್ದ ಮಾಜಿ ಡಿಸಿಎಂ ಆರ್.ಅಶೋಕ್ ದಿಢೀರಾಗಿ ಪತ್ರಿಕಾಗೋಷ್ಠಿ ನಡೆಸಿದರು. ಅಲ್ಲಿ ಅವರ ಮಾತಿನ ವರಸೆ ಹೀಗಿತ್ತು- ‘ನನಗೆ ಗೊತ್ತಿತ್ತು, ಇಷ್ಟು ಸ್ಥಾನ ಬಂದೇ ಬರುತ್ತದೆ ಅಂತ. ಸೋಲು-ಗೆಲುವಿನ ಹೊಣೆಯನ್ನು ನಾನೇ ಹೊರುತ್ತೇನೆ ಅಂತ ಮೊದಲೇ ಮಾತು ಕೊಟ್ಟಿದ್ದೆ’ ಅಂದರು, ಅಂದರೆ ಈ ಗೆಲುವಿನ ಕ್ರೆಡಿಟ್ಟೂ ತನಗೇ ಸೇರಬೇಕು ಅನ್ನುವುದು ಅವರ ಮಾತಿನ ಒಳಮರ್ಮವಾಗಿತ್ತೆಂಬುದು ಎಂಥವನಿಗೂ ಅರ್ಥ ಆಗುವಂತಿತ್ತು. ಆದರೆ ಹಾಗೆ ಬೆನ್ನು ತಟ್ಟಿಕೊಳ್ಳುವ ಮುನ್ನ ಬಿಬಿಎಂಪಿ ಚುಕ್ಕಾಣಿ ಹಿಡಿಯಲು ಬೇಕಿರುವ ಅಂಕಿಸಂಖ್ಯೆಗಳ ನಿಖರ ಲೆಕ್ಕಾಚಾರವೇ ಅಶೋಕ್ ಬಳಿ ಇರಲಿಲ್ಲ. ಎಲ್ಲಾದರೂ ಎಡವಟ್ಟಾದೀತು ಎಂಬ ಅಳುಕು, ಅನುಮಾನ, ಆಲೋಚನೆಯೂ ಇರಲಿಲ್ಲ ಅಂತ ಈಗ ಸ್ಪಷ್ಟವಾಗುವ ವಿಚಾರ. ಹುಮ್ಮಸ್ಸಿನಲ್ಲಿ, ಭಾವಾವೇಶದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅಶೋಕ್, ಮಾಧ್ಯಮದವರ ಪ್ರಶ್ನೆಗೆ ತುಸು ದುಡುಕಿನಿಂದಲೇ ಉತ್ತರ ನೀಡಿದರು. ಜೆಡಿಎಸ್ ಜೊತೆ ಅಧಿಕಾರ ಹಂಚಿಕೊಳ್ಳುತ್ತೀರಾ ಎಂದು ಕೇಳಿದ್ದಕ್ಕೆ, ‘ಯಾವ ಜೆಡಿಎಸ್? ಯಾವ ದೇವೇಗೌಡರು’ ಎಂದು ಕೇಳಿಬಿಟ್ಟರು. ತಗೊಳ್ಳಿ, ಜೆಡಿಎಸ್ನವರಿಗೂ ಇದೇ ಬೇಕಿತ್ತು. ಚುನಾವಣಾಪೂರ್ವದಲ್ಲಿ ಬಿಜೆಪಿ ಜೊತೆಗೆ ಒಳಗೊಳಗೆ ಮಾಡಿಕೊಂಡಿದ್ದ ಹೊಂದಾಣಿಕೆಗೆ ಗುಡ್ ಬೈ ಹೇಳಿ, ಕಾಂಗ್ರೆಸ್ ಜೊತೆ ಖುಲ್ಲಂಖುಲ್ಲ ಗುರುತಿಸಿಕೊಳ್ಳಲು ಒಂದು ನೆಪ ಬೇಕಾಗಿತ್ತಷ್ಟೆ.

ಮುಂದೆ ಆದ ಬೆಳವಣಿಗೆಗಳು, ತಿರುವುಮುರುವುಗಳಿಗೆಲ್ಲ ರಾಜ್ಯ ಸಾಕ್ಷಿಯಾಗಿದೆ. ಬಾಕಿ ಎಲ್ಲ ಯಾತಕ್ಕೆ, ಮೈಸೂರಿನಲ್ಲಿ ಭಾನುವಾರ ಮುಕ್ತಾಯವಾದ ಮೊದಲ ಹಂತದ ರೈತ ಚೈತನ್ಯ ಯಾತ್ರೆಯ ವೇದಿಕೆಯ ಒಂದು ತುದಿಯಲ್ಲಿ ಅಶೋಕ್ ನಿಂತುಕೊಂಡಿದ್ದನ್ನು ನೀವು ನೋಡಿರಬೇಕಲ್ಲ? ಅಂಥ ಜನಸಾಗರದ ನಡುವೆಯೂ ಅಶೋಕ್ ನಿಸ್ತೇಜರಾಗಿದ್ದರು. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಜನರು ಕೊಟ್ಟ ಅವಕಾಶವನ್ನು ಬಳಸಿಕೊಳ್ಳುವ ಜಾಣತನ, ವಿವೇಚನೆ ಮೆರೆಯಲಿಲ್ಲ ಎಂಬ ಬೇಸರ, ಹತಾಶೆ, ಏನನ್ನೋ ಕಳೆದುಕೊಂಡ ಛಾಯೆ ಅವರ ಮುಖಭಾವದಲ್ಲಿ ಎದ್ದು ಕಾಣಿಸುತ್ತಿತ್ತು. ಏನೇ ಆದರೂ ಅವರ ಮುಂದಿನ ಮಹತ್ವಾಕಾಂಕ್ಷೆಗೆ ಈ ಬೆಳವಣಿಗೆ ದೊಡ್ಡ ಹೊಡೆತ ಎಂಬುದರಲ್ಲಿ ಅನುಮಾನವಿಲ್ಲ. ವಿಶೇಷ ಅಂದರೆ ಬಿಬಿಎಂಪಿ ಕೈತಪ್ಪಿದ್ದರ ಕುರಿತು, ಜೆಡಿಎಸ್-ಕಾಂಗ್ರೆಸ್ ಮೈತ್ರಿಯ ವಿಚಾರದ ಕುರಿತು ಬಿಜೆಪಿಯ ಯಾವ ಹಿರಿ-ಕಿರಿಯ ನಾಯಕರೂ ಪೂರ್ಣ ಮನಸ್ಸಿನಿಂದ ಮಾತನಾಡುತ್ತಿಲ್ಲ. ಏನಿದರ ಮರ್ಮ? ಗೆಲುವಿಗೆ ಭುಜ ತಟ್ಟಿಕೊಂಡವರು ಸೋಲಿನ ನೊಗಕ್ಕೂ ಹೆಗಲು ಕೊಡಲಿ ಎಂಬುದು ಎಲ್ಲರ ತರ್ಕ. ಹೇಗಿದೆ ರಾಜಕೀಯದ ವರಸೆ? ಅದೇ ಮಜವಾಗಿರೋದು.

ಇತ್ತ ಅಶೋಕ್ ಶೋಕಸಾಗರದಲ್ಲಿ ಮುಳುಗಿದ್ದರೆ, ಇನ್ನೇನು ನೇಪಥ್ಯಕ್ಕೆ ಸರಿದರು ಎಂಬಂತಿದ್ದ ಯಡಿಯೂರಪ್ಪ ಮತ್ತೊಮ್ಮೆ ಬಿಜೆಪಿಯ ಮುಖ್ಯಭೂಮಿಕೆಗೆ ಬರುವ ಸ್ಪಷ್ಟ ಮುನ್ಸೂಚನೆ ನೀಡತೊಡಗಿದ್ದಾರೆ. ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿ ವಿರುದ್ಧ ಹಾಗೂ ಸಾಲು ಸಾಲು ಆತ್ಮಹತ್ಯೆಗೆ ಶರಣಾಗುತ್ತಿರುವ ರೈತರಲ್ಲಿ ಆತ್ಮವಿಶ್ವಾಸ ತುಂಬಲು ಅಧಿಕೃತ ವಿಪಕ್ಷವಾಗಿರುವ ಬಿಜೆಪಿ ರೈತ ಚೈತನ್ಯ ಯಾತ್ರೆಯನ್ನು ಹಮ್ಮಿಕೊಂಡದ್ದು ಸರಿಯಾಗಿಯೇ ಇತ್ತು. ಆದರೆ ಯಾತ್ರೆಯ ಯೋಜನೆ ಸರಿಯಾಗಿರಲಿಲ್ಲ. ಪ್ರತಿಯೊಂದು ಪಕ್ಷದಲ್ಲೂ ನಾಯಕರು ಹಲವರಿರುತ್ತಾರೆ. ಆದರೆ ಪಕ್ಷವನ್ನು ಮುನ್ನಡೆಸಬಲ್ಲ, ಜನರನ್ನು ತಮ್ಮತ್ತ ಸೆಳೆಯಬಲ್ಲ ನಾಯಕರು ಒಬ್ಬರೋ ಇಬ್ಬರೋ ಇರುತ್ತಾರೆ. ಅವರನ್ನೇ ಜನನಾಯಕರು ಎನ್ನುವುದು. ಯಾತ್ರೆ ನಡೆಸಲು ಹಿರಿಕಿರಿಯ ನಾಯಕರನ್ನೊಳಗೊಂಡ ಆರೋ ಎಂಟೋ ತಂಡಗಳನ್ನೂ ರಚಿಸಲಾಯಿತು ನಿಜ. ಆ ಸಂದರ್ಭದಲ್ಲೂ ಯಡಿಯೂರಪ್ಪ ಅವರನ್ನು ಹತ್ತರಲ್ಲಿ ಮತ್ತೊಬ್ಬ ಎನ್ನುವಂತೆ ಬಿಂಬಿಸಲಾಯಿತು. ಬಿಬಿಎಂಪಿ ಚುನಾವಣೆಯಲ್ಲಿ ಮಾಡಿದ್ದೂ ಅದೇ ಅನ್ನಿ. ಆರ್.ಅಶೋಕ್ ಲಿಂಗಾಯತ ಸಮುದಾಯದ ಕುರಿತು ಹಗುರವಾಗಿ ಮಾತನಾಡಿದರೇ? ಯಡಿಯೂರಪ್ಪ ನಾಯಕತ್ವ ಬೇಕಿಲ್ಲ ಅಂತ ಹೇಳಿದರೇ? ಎಂಬುದಕ್ಕೆ ಎಲ್ಲೂ ಅಧಿಕೃತ ದಾಖಲೆಗಳಿಲ್ಲ. ಆದರೆ ಬಹಿರಂಗ ಪ್ರಚಾರದ ಸಂದರ್ಭದಲ್ಲಿ ಮಾತ್ರ ಯಡಿಯೂರಪ್ಪನವರನ್ನು ದೂರ ಇಟ್ಟಿದ್ದು ಎಲ್ಲರಿಗೂ ಕಾಣಿಸಿತು. ಹಾಗೆ ಮಾಡಿದ್ದು ಅಶೋಕ್ ಅವರೊಬ್ಬರ ತೀರ್ವನವೋ ಅಥವಾ ಒಟ್ಟಾರೆ ರಾಜ್ಯ ಬಿಜೆಪಿಯ ನಿರ್ಣಯವೋ ಗೊತ್ತಿಲ್ಲ. ಆದರೆ, ಬಿಬಿಎಂಪಿ ಚುನಾವಣೆಯಲ್ಲಿ ಆದ ಪರಿಣಾಮವೇ ರೈತ ಚೈತನ್ಯ ಯಾತ್ರೆ ಸಂದರ್ಭದಲ್ಲೂ ಆಯಿತು. ಭರವಸೆ ಕಳೆದುಕೊಂಡ ರೈತರಲ್ಲಿ ಚೈತನ್ಯ ತುಂಬುವುದು ಹೇಗೂ ಇರಲಿ, ಅಧಿಕೃತ ಪ್ರತಿಪಕ್ಷವಾಗಿದ್ದೂ ನಿಸ್ತೇಜವಾಗಿರುವ ಬಿಜೆಪಿಗೆ ಆಕ್ಸಿಜನ್ ತುಂಬುವ ದರ್ದು ಕಾಡತೊಡಗಿತು. ಆಗ ಸೊರಗಿದ ಬಿಜೆಪಿಯ ನೆರವಿಗೆ ಬಂದದ್ದು ಮತ್ತದೇ ಯಡಿಯೂರಪ್ಪ. ಯಾವಾಗ ಅವರು ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡರೋ ಬಿಜೆಪಿ ಯಾತ್ರೆಯಲ್ಲಿ ನಿಜವಾದ ಚೈತನ್ಯ ಕಾಣಿಸಿಕೊಳ್ಳತೊಡಗಿತು. ಕರಾವಳಿ, ಮಲೆನಾಡು, ಬಯಲುಸೀಮೆ, ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮಧ್ಯ ಕರ್ನಾಟಕ, ಹಳೇ ಮೈಸೂರು ಭಾಗ ಎಲ್ಲೇ ಹೋಗಲಿ ಚೈತನ್ಯ ಯಾತ್ರೆಗೆ ಜನಸಾಗರವೇ ಹರಿದು ಬರತೊಡಗಿತು. ಮೈಸೂರಲ್ಲಿ ಮುಕ್ತಾಯವಾದ ಯಾತ್ರೆಯ ಕೊನೇ ಸಭೆಯಂತೂ ವೇದಿಕೆ ಮೇಲಿದ್ದ ನಾಯಕರ ದಂಡಿಗೇ ಪುಳಕವುಂಟು ಮಾಡಿತು. ಹಾಗಾದರೆ ಮುಂದೇನು?

ಅದೇ ಕುತೂಹಲದ ಪ್ರಶ್ನೆ. ಮುಂದಿನ ಹದಿನೈದು ದಿನಗಳಲ್ಲಿ ಎರಡನೇ ಹಂತದ ಯಾತ್ರೆಗೆ ಬಿಜೆಪಿ ನಾಯಕರು ಹುರುಪಿನಿಂದಲೇ ಅಣಿಯಾಗುತ್ತಿದ್ದಾರೆ. ಅಷ್ಟೊತ್ತಿಗೆ ಯಾತ್ರೆ ಸಂಪೂರ್ಣವಾಗಿ ಯಡಿಯೂರಪ್ಪ ಕೈಗೆ ಬರುವುದು ನಿಕ್ಕಿ ಎಂಬ ಸೂಚನೆ ಕಾಣಿಸುತ್ತಿದೆ. ಈ ಬೆಳವಣಿಗೆ ಬಿಬಿಎಂಪಿಯಲ್ಲಿ ಕಾಂಗ್ರೆಸ್ ಪಕ್ಷದಲ್ಲೂ ತುಸು ಸಂಚಲನವುಂಟು ಮಾಡಿದರೆ ಅಚ್ಚರಿಯಿಲ್ಲ. ಕಾರಣ ಇಷ್ಟೆ, ಮುಂದಿನ ಡಿಸೆಂಬರ್ ಅಥವಾ ಜನವರಿಯಲ್ಲಿ ಜಿಲ್ಲಾ ಪಂಚಾಯತಿ ಚುನಾವಣೆ ಎದುರಾಗಲಿದ್ದು, ರೈತರ ಆತ್ಮಹತ್ಯೆ, ಅನಿಯಮಿತ ಲೋಡ್ಶೆಡ್ಡಿಂಗ್, ಮಹದಾಯಿ, ಕಳಸಾ ಬಂಡೂರಿ ಹೋರಾಟ ಇವೆಲ್ಲ ಅಲ್ಲಿ ಪರಿಣಾಮ ಬೀರುವುದು ನಿಶ್ಚಿತ. ಅದರ ಜೊತೆಜೊತೆಗೇ ಈಗಾಗಲೇ ಚಾಲನೆಯಲ್ಲಿರುವ ರೈತ ಚೈತನ್ಯ ಯಾತ್ರೆ ಬಿಜೆಪಿಗೆ ಒಂದು ನಿಶ್ಚಿತ ವೇದಿಕೆಯಾಗಿ ಪರಿವರ್ತನೆ ಆಗುವುದರಲ್ಲಿ ಅನುಮಾನವಿಲ್ಲ. ಒಟ್ಟಾರೆ ನೋಡುವುದಾದರೆ ಬಿಬಿಎಂಪಿ ಚುನಾವಣೆಯಲ್ಲಿ ಜನಾದೇಶದ ದೃಷ್ಟಿಯಿಂದ ಸೋತರೂ, ಕೃತಕ ಸಂಖ್ಯಾಬಲದ ಮೂಲಕ ಅಧಿಕಾರ ಹಿಡಿದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ನೆಮ್ಮದಿಗೆ ಭಂಗವುಂಟಾದರೆ ಅಚ್ಚರಿಯ ಬೆಳವಣಿಗೆಯೇನೂ ಆಗಲಾರದು.

ಚುರುಕ್ ಚಾಟಿ

ಮುದುಡಿದ ತಾವರೆ ಅರಳಿದರೆ ಏನಾಗುತ್ತೆ ಗುರೂ…?

-ಅರಳಿದ ಹಸ್ತ ಮುದುಡುತ್ತದೆ ಮರಿ….!

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top