ನ್ಯಾಯ ನಿರ್ಣಯದ ವಿಚಾರ ಬಂದಾಗ ಸರ್ವಶ್ರೇಷ್ಠ ಹೋಲಿಕೆಗಾಗಿ ‘ಹಂಸಕ್ಷೀರ ನ್ಯಾಯ’ವೆಂದು ಹೇಳುವುದುಂಟು. ಹಂಸವೆಂದರೆ ಪಕ್ಷಿ. ಕ್ಷೀರವೆಂದರೆ ಹಾಲು. ಹಾಗಾಗಿ ಈ ಹೋಲಿಕೆಯೇ ವಿಚಿತ್ರವೆನಿಸಬಹುದು. ಹಂಸ ಪಕ್ಷಿ, ಕ್ಷೀರ ಮತ್ತು ನ್ಯಾಯಕ್ಕೆ ಎಲ್ಲಿಂದೆಲ್ಲಿಯ ಸಂಬಂಧವೆಂದು ಕೇಳಬಹುದು. ಪ್ರಾಯಶಃ ಇದೇ ಕಾರಣದಿಂದ ಈ ನುಡಿಕಟ್ಟು ಒಗಟಾಗಿಯೇ ಉಳಿದುಬಿಟ್ಟಿರಬಹುದು. ಹಂಸಪಕ್ಷಿಯ ಎದುರು ಕ್ಷೀರ ತುಂಬಿದ ಪಾತ್ರೆಯನ್ನು ಇಟ್ಟರೆ ಅದು ಕ್ಷೀರಪಾನವೊಂದನ್ನೇ ಮಾಡುತ್ತದೆ! ಅಂದರೆ ಹಾಲಿಗೆ ನೀರು ಬೆರೆಸಿ ಕೊಟ್ಟಿದ್ದಾರೆ ಎಂದುಕೊಳ್ಳಿ. ಹಂಸಪಕ್ಷಿಯು ಹಾಲನ್ನಷ್ಟೇ ಹೀರಿಕೊಳ್ಳುತ್ತದೆ. ಅರ್ಥಾತ್ ಹಾಲಿನೊಂದಿಗೆ ಬೆರೆತುಕೊಂಡಿದ್ದ ನೀರು ಪಾತ್ರೆಯಲ್ಲಿ ಹಾಗೆಯೇ ಉಳಿಯುತ್ತದೆ. ಹಂಸಪಕ್ಷಿ ಈ ಬಗೆಯಲ್ಲಿ ಹಾಲು ಕುಡಿಯುತ್ತದೆ ಎನ್ನುವುದು ಪರಂಪರಾನುಗತ ನಂಬಿಕೆ. ಇದನ್ನೇ ಹಂಸಕ್ಷೀರ ನ್ಯಾಯವೆಂದು ಕರೆಯಲಾಗುತ್ತದೆ. ಹಂಸಕ್ಷೀರ ನ್ಯಾಯವನ್ನು ಲಕ್ಷ ್ಯದಲ್ಲಿ ಇರಿಸಿಕೊಂಡು ‘ದೂದ್ ಕಾ ದೂದ್-ಪಾನೀ ಕಾ ಪಾನೀ’ ಎಂದು ಹೇಳುವುದೂ ಇದೆ. ಈ ಎಲ್ಲದರ ಅರ್ಥವೂ ಒಂದೇ ಮತ್ತು ಸರಳವಾದುದು. ಪರಿಶುದ್ಧವಾದ ಹಾಲಿಗೆ ನೀರು ಸೇರಿದಾಗ ಬೆರಕೆಯಾಗುತ್ತದೆ. ಒಟ್ಟಿನಲ್ಲಿ ಸ್ವೀಕಾರಾರ್ಹವಾದುದನ್ನು ಪ್ರತಿನಿಧಿಸುವುದು ಹಂಸಕ್ಷೀರ ನ್ಯಾಯ. ಈ ವಿಷಯವನ್ನು ಲಂಬಿಸಿದ ಕಾರಣವಿಷ್ಟೇ; ರಾಜ್ಯಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಭಾಜಪಾ ವರಿಷ್ಠರು ಇದೇ ದಾರಿಯಲ್ಲಿ ಸಾಗಿದ್ದಾರೆ. ಇಬ್ಬರು ಉಮೇದುವಾರರ ಹೆಸರು ಅಂತಿಮಗೊಳಿಸುವಾಗ ಬಿಜೆಪಿ ನಾಯಕರು ಪಕ್ಷ ನಿಷ್ಠೆಗೆ ಮಾನ್ಯತೆ ನೀಡಿ ಬೆದರಿಕೆಯ ತಂತ್ರ ಅನುಸರಿಸುವವರನ್ನು ಪಕ್ಕಕ್ಕೆ ತಳ್ಳಿದ್ದಾರೆ. ಹಾಗಾಗಿ ಹಂಸಕ್ಷೀರ ನ್ಯಾಯದಾನದ ವಿಷಯದಲ್ಲಿ ಇದೊಂದು ಉತ್ತಮ ನಿದರ್ಶನ.
ಬದಲಾವಣೆ ಗಾಳಿಯ ಮುನ್ಸೂಚನೆ
ರಾಜ್ಯಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಿಂದ ರಾಜ್ಯ ಬಿಜೆಪಿಯಲ್ಲಿ ಬದಲಾವಣೆ ಗಾಳಿ ಬೀಸುವ ಮುನ್ಸೂಚನೆ ಸಿಕ್ಕಿದೆ. ಹಾಗೆ ಹೊಸ ಬಗೆಯ ಗಾಳಿ ಬೀಸಲು ಭಾಜಪಾ ವರಿಷ್ಠರೇ ಪಂಖ ಜೋಡಿಸಿದ್ದಾರೆ. ಯಾರೂ ಊಹಿಸದ ರೀತಿಯಲ್ಲಿ ಈರಣ್ಣ ಕಡಾಡಿ, ಅಶೋಕ ಗಸ್ತಿ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲಾಗಿದೆ. ಇದರಿಂದ ಪಕ್ಷ ದ ನಿಷ್ಠಾವಂತ ಕಾರ್ಯಕರ್ತರಿಗೆ ಭರ್ಜರಿ ಗಿಫ್ಟ್ ದೊರಕಿತೆಂದು ವಿಶ್ಲೇಷಿಸಲಾಗಿದೆ. ವರಿಷ್ಠರ ಈ ನಿರ್ಧಾರದಿಂದ ಸಾಮಾನ್ಯ ಕಾರ್ಯಕರ್ತರಂತೂ ಸಂಭ್ರಮೋಲ್ಲಾಸದಲ್ಲಿ ಮುಳುಗಿ ಎದ್ದಿದ್ದಾರೆ. ಸ್ಥಾನಮಾನದ ವಿಚಾರ ಬಂದಾಗ ಭವಿಷ್ಯದಲ್ಲೂ ಇದೇ ಮಾದರಿಯ ತೀರ್ಮಾನ ಹೊಮ್ಮಬಹುದು ಎಂಬ ಆಶಾಭಾವವೂ ಕಾರ್ಯಕರ್ತರ ವಲಯದಲ್ಲಿ ಮೂಡಿದೆ. ಈ ದೃಷ್ಟಿಯಿಂದ ಖಂಡಿತವಾಗಿಯೂ ಒಳ್ಳೆಯ ಸಂದೇಶ ರವಾನೆಯಾಗಿದೆ. ಭಾರತೀಯ ಜನತಾ ಪಕ್ಷ ದ ದಿಲ್ಲಿ ನಾಯಕರೂ ಸರ್ವತ್ರ ಪ್ರಶಂಸೆಗೆ ಒಳಗಾಗಿದ್ದಾರೆ. ಇತರ ರಾಜಕೀಯ ಪಕ್ಷ ಗಳೂ ಈ ದಿಸೆಯಲ್ಲಿ ಯೋಚಿಸಲು ಸಕಾಲವೆಂಬ ಸಲಹೆಯೂ ಬರುತ್ತಿದೆ.
ಪ್ರಾಬಲ್ಯವಲ್ಲ, ದೂರದೃಷ್ಟಿ
ಇದರ ಹೊರತಾಗಿಯೂ ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸುವಾಗ ಹೈಕಮಾಂಡ್ ಪ್ರಾಬಲ್ಯ ಸಾಧಿಸಿತು. ಎಲ್ಲವನ್ನೂ ದಿಲ್ಲಿ ನಾಯಕರೇ ನಿರ್ಣಯಿಸುವುದಾದರೆ ರಾಜ್ಯ ಘಟಕಕ್ಕೇನು ಕೆಲಸ? ರಾಜ್ಯದ ಕೋರ್ ಕಮಿಟಿಯ ಪ್ರಾಶಸ್ತ್ಯದ ಕತೆಯೇನು? ಎಂಬ ಪ್ರಶ್ನೆಗಳೂ ತೂರಿ ಬಂದಿವೆ. ಅದು ಪ್ರತ್ಯೇಕ ಚರ್ಚೆಗೆ ಯೋಗ್ಯವಾದ ವಿಷಯವೆಂದು ಇಟ್ಟುಕೊಳ್ಳೋಣ. ಆದರೆ, ಹೈಕಮಾಂಡ್ ಇರಲಿ. ಲೋಕಮಾಂಡ್ ಇರಲಿ. ಮೇಲ್ಮಂಕ್ತಿ ಹಾಕಿಕೊಡುವಂತಹ ಮಾದರಿ ನಡೆ ಅನುಸರಿಸಿದಾಗ ಮುಕ್ತ ಮನಸ್ಸಿನಿಂದ ನೋಡಬೇಕು. ಜತೆಗೆ ಇದರ ಬೇರೆ ಬೇರೆ ಆಯಾಮಗಳ ಬಗ್ಗೆಯೂ ತರ್ಕಿಸಬೇಕು. ಈ ನೆಲೆಯಲ್ಲಿ ನೋಡಿದಾಗ ಇದು ಸ್ವಾಗತಾರ್ಹ ಬೆಳವಣಿಗೆ. ಒಂದು ಅರ್ಥದಲ್ಲಿ ರಾಜ್ಯ ಬಿಜೆಪಿ ಹಾಗೂ ಇಲ್ಲಿನ ಸರಕಾರಕ್ಕೂ ಸುರಕ್ಷ ತಾ ಕವಚ ತೊಡಿಸುವ ದೂರದೃಷ್ಟಿಯನ್ನು ಇದರಲ್ಲಿ ಕಾಣಬಹುದು.
ಬೆದರಿಕೆ ಒಡ್ಡಿದವರಿಗೆ ಪಾಠ
ಅನುಮಾನವೇ ಬೇಡ. ರಾಜ್ಯಸಭೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಭಾಜಪಾ ವರಿಷ್ಠರು ಒಂದೇ ಸೂಜಿಯ ಮೊನೆಯಿಂದ ಹಲವು ಮಗ್ಗುಲ ಮುಳ್ಳುಗಳನ್ನು ಕಿತ್ತೆಸೆದಿದ್ದಾರೆ. ಜಾತಿಬಲ, ಹಣಬಲ, ಭುಜಬಲ ಸೇರಿದಂತೆ ಏನೆಲ್ಲ ಬಲಗಳಿವೆಯೋ ಅದರ ಆಧಾರದಲ್ಲಿ ಒತ್ತಡ ತರುತ್ತಿದ್ದವರ ಹೆಡೆಮುರಿ ಕಟ್ಟಿದ್ದಾರೆ. ಬಿಜೆಪಿ ಕೇಡರ್ ಬೇಸ್ ಪಾರ್ಟಿಯಾದರೂ ಅಧಿಕಾರ ಬಂದಾಗ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತದೆ ಎಂಬ ಆರೋಪವಿತ್ತು. ಬೇರುಮಟ್ಟದಿಂದ ಬೆಳೆದು ಬಂದಿರುವ ಇಬ್ಬರು ಕಾರ್ಯಕರ್ತರನ್ನೇ ರಾಜ್ಯಸಭೆಗೆ ಕಳುಹಿಸಿದ್ದರಿಂದ ಈ ಆಪಾದನೆಯಿಂದ ಹೊರಬರಲು ಬಿಜೆಪಿಗೆ ಸಹಾಯಕವಾಗಬಹುದು. ಬಹಳ ಮುಖ್ಯವಾಗಿ ರಾಜ್ಯಸಭೆ ಟಿಕೆಟ್‌ಗಾಗಿ ಬೆಳಗಾವಿ ಜಿಲ್ಲೆಯ ಘಟಾನುಘಟಿಗಳು ಪೈಪೋಟಿಗೆ ಬಿದ್ದಿದ್ದರು. ಅವರಲ್ಲಿ ಯಾರಿಗೇ ಅವಕಾಶ ನೀಡಿದ್ದರೂ ಮತ್ತೊಂದು ಬಣ ತಿರುಗಿ ಬೀಳುತ್ತಿತ್ತು. ರಾಜಕಾರಣದಲ್ಲಿ ಜಾತಿ ಮತ್ತು ಹಣಬಲವೇ ಪ್ರಧಾನವೆಂಬ ಭ್ರಮೆಯಲ್ಲಿರುವ ಅಂಥವರನ್ನು ಸಂಭಾಳಿಸುವುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೂ ಕಷ್ಟವಾಗುತ್ತಿತ್ತು. ಹಾಗಾಗಿ ವರಿಷ್ಠರ ಅಚ್ಚರಿಯ ನಿಲುವಿನಿಂದ ಮುಖ್ಯಮಂತ್ರಿಯವರಿಗೆ ಅನುಕೂಲವೇ ಆಯಿತೆಂದು ಹೇಳಬಹುದಲ್ಲ? ದಿನ ಬೆಳಗಾದರೆ ರಾಜ್ಯಸಭೆ ಸ್ಥಾನ, ಮಂತ್ರಿ ಪದವಿಗಾಗಿ ಒತ್ತಡ ತರುತ್ತಿದ್ದವರನ್ನು ನಿಯಂತ್ರಣದಲ್ಲಿ ಇಡಲು ಸಾಧ್ಯವಾಯಿತಲ್ಲಾ? ಎಂದು ಸಿಎಂ ನಿಟ್ಟುಸಿರು ಬಿಡಬಹುದು. ಈ ನಿರ್ಣಯದ ಹಿಂದೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಲೆಕ್ಕಾಚಾರ ಇರುವುದನ್ನು ತಳ್ಳಿಹಾಕುವಂತಿಲ್ಲ. ಇಷ್ಟಲ್ಲದೆ ರಾಜ್ಯಸಭೆಗೆ ಇಬ್ಬರ ಹೆಸರನ್ನು ಅಂತಿಮಗೊಳಿಸುವಾಗ ಮುಖ್ಯಮಂತ್ರಿ ಅವರೊಂದಿಗೂ ವರಿಷ್ಠರು ಸಮಾಲೋಚಿಸಿದ್ದರು. ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದರು ಎಂಬ ಖಚಿತ ವರ್ತಮಾನವಿದೆ. ಹಾಗಿರುವಾಗ ರಾಜ್ಯಸಭೆ ಚುನಾವಣೆ ವಿದ್ಯಮಾನದಿಂದ ಯಡಿಯೂರಪ್ಪ ಅವರಿಗೆ ಯಾವ ಪ್ರಮಾಣದ ಹಿನ್ನಡೆಯಾಯಿತೆಂದು ಅಳತೆ ಮಾಡಲು ಹೊರಡುವುದೇ ಆತುರಗೇಡಿತನವಾದೀತು.
ಬಿಜೆಪಿಯೇತರ ಪಕ್ಷ ಗಳಿಗೂ ಮಾದರಿ
ನೇರ ಚುನಾವಣೆಯ ಚಿತ್ರಣವೇ ಬೇರೆ. ಅಖಾಡದ ರಾಜಕಾರಣದಲ್ಲಿ ಎಲ್ಲವೂ ಕರಾರುವಾಕ್ ಆಗಿರಬೇಕಾಗುತ್ತದೆ. ಜಾತಿ ಸಮೀಕರಣ ಸರಿ ಹೊಂದಬೇಕಾಗುತ್ತದೆ. ಎದುರಾಳಿಯ ಪ್ರಾಬಲ್ಯ, ದೌರ್ಬಲ್ಯದ ಸ್ಪಷ್ಟ ಅರಿವು ಇರಬೇಕಾಗುತ್ತದೆ. ಈ ಎಲ್ಲವನ್ನೂ ಅಳೆದೂ ತೂಗಿ ಉಮೇದುವಾರರನ್ನು ಆಯ್ಕೆ ಮಾಡಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಕ್ಷೇತ್ರದ ಪರಿಸ್ಥಿತಿಗೆ ಅನುಗುಣವಾಗಿ ಜಾತಿಬಲವೇ ಮೇಲುಗೈ ಪಡೆಯುತ್ತದೆ. ಹಾಗೆಯೇ ಚುನಾವಣೆ ಗೆಲ್ಲಲು ಹಣದ ಥೈಲಿ ಹರಿಸುವುದು ಇವತ್ತಿನ ರಾಜಕಾರಣದ ಅನಿವಾರ್ಯತೆಯಾಗಿದೆ. ರಾಜ್ಯಸಭೆ, ವಿಧಾನ ಪರಿಷತ್ ಚುನಾವಣೆಗಳಲ್ಲಿ ಹಾಗಲ್ಲ. ನಾಮ ನಿರ್ದೇಶನ ಮಾಡುವಂತಹ ಇಂತಹ ಚುನಾವಣೆಗಳಲ್ಲಿ ನಿಷ್ಠಾವಂತರು, ಕಾರ್ಯಕರ್ತರಿಗೆ ರತ್ನಗಂಬಳಿ ಹಾಸಬೇಕು. ರಾಜಕೀಯ ಪ್ರಾತಿನಿಧ್ಯದಿಂದ ದೂರವಿರುವ ಸಣ್ಣಪುಟ್ಟ ಜಾತಿಯವರನ್ನೂ ಗುರುತಿಸಬೇಕು. ಅದು ಕಾರ್ಯಕರ್ತರಲ್ಲಿ ಹೊಸ ಚೈತನ್ಯ ತುಂಬುತ್ತದೆ. ಸಾರ್ವಜನಿಕವಾಗಿಯೂ ಒಳ್ಳೆಯ ಮೆಸ್ಸೇಜ್ ಪಾಸಾಗುತ್ತದೆ. ಬದಲಾಗಿ ಹಣಬಲ, ಜಾತಿಬಲದ ರಾಜಕಾರಣದ ಹಳೆಯ ತಲೆಗಳೇ ರಾಜ್ಯಸಭೆ, ವಿಧಾನ ಪರಿಷತ್ ಪ್ರವೇಶಿಸಿದರೆ ಅಂತಹ ನೇಮಕಕ್ಕೆ ಅರ್ಥವಿರುವುದಿಲ್ಲ. ಈ ದೃಷ್ಟಿಯಿಂದ ಈ ಬಾರಿ ಬಿಜೆಪಿ ಕೈಗೊಂಡ ತೀರ್ಮಾನ ಯಥಾಯೋಗ್ಯವೆನಿಸಿದೆ. ಇದು ಇತರ ಪಕ್ಷ ಗಳಿಗೂ ಮಾದರಿಯಾಗಬೇಕು. ಬಿಜೆಪಿಯೇತರ ಪಕ್ಷ ಗಳೂ ಈ ನಿಟ್ಟಿನಲ್ಲಿ ಗಂಭೀರ ಯೋಚನೆ ಮಾಡಿದರೆ ಅದು ಸ್ವೀಕಾರಯೋಗ್ಯವಾಗಲಿದೆ.
ಕಾಲ ಪಕ್ವವಾಗಿಲ್ಲ
ಈ ಬಾರಿಯ ರಾಜ್ಯಸಭೆ ಚುನಾವಣೆಯ ವಿದ್ಯಮಾನವನ್ನು ಬೇರೆ ಬೇರೆ ವಿಚಾರಗಳಿಗೆ ತಳುಕು ಹಾಕಲಾಗುತ್ತಿದೆ. ಪಾರ್ಲಿಮೆಂಟ್ ಎಲೆಕ್ಷ ನ್‌ನಲ್ಲಿ ಬೆಂಗಳೂರು ದಕ್ಷಿಣದಿಂದ ತೇಜಸ್ವಿನಿ ಅನಂತಕುಮಾರ ಅವರ ಹೆಸರನ್ನು ರಾಜ್ಯ ಘಟಕ ಶಿಫಾರಸು ಮಾಡಿತ್ತು. ಬದಲಾಗಿ ತೇಜಸ್ವಿ ಸೂರ್ಯ ಅವರನ್ನು ಕಣಕ್ಕಿಳಿಸಲಾಯಿತು. ಯಡಿಯೂರಪ್ಪ ಸಂಪುಟದಲ್ಲಿ ಮೂರು ಡಿಸಿಎಂ ಹುದ್ದೆ ಸೃಷ್ಟಿಸಲಾಯಿತು. ಇದೀಗ ರಾಜ್ಯಸಭೆ ಚುನಾವಣೆಯಲ್ಲಿ ಹೈಕಮಾಂಡ್ ತನ್ನದೇ ನಿರ್ಣಯ ಅಂತಿಮವೆಂದಿದೆ. ಒಬ್ಬ ವ್ಯಕ್ತಿ ಇಷ್ಟಕ್ಕೆಲ್ಲ ಕಾರಣ. ಸಂತೋಷ್‌ಜೀ ಅವರೇ ಮೋದಿ, ಅಮಿತ್ ಶಾ ಮೂಲಕ ಇಂತಹ ತೀರ್ಮಾನ ಪ್ರಕಟವಾಗುವಂತೆ ನೋಡಿಕೊಳ್ಳುತ್ತಿದ್ದಾರೆ. ಈ ವಿಚಾರದಲ್ಲಿ ಸಂತೋಷ್ ಅವರು ಚಾಣಾಕ್ಯ ತಂತ್ರವನ್ನೇ ರೂಪಿಸುತ್ತಿದ್ದಾರೆ. ಇದರ ದ್ಯೋತಕವೇನು? ಎನ್ನುವ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ಕಾವು ಪಡೆದುಕೊಂಡಿದೆ. ಸ್ವಲ್ಪ ವಿವೇಚಿಸಿ ಗ್ರಹಿಸಿದರೆ ಇವೆಲ್ಲವೂ ಪಕ್ಷ ದ ಸಾಂಸ್ಥಿಕ ಸಂಘಟನೆಗಾಗಿ ಕೈಗೊಳ್ಳುತ್ತಿರುವ ಕ್ರಮಗಳು ಎನ್ನುವುದು ವೇದ್ಯವಾಗುತ್ತದೆ. ಇದರ ಹೊರತಾಗಿ ತಕ್ಷ ಣಕ್ಕೆ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ದೂರವಿಡುವ ಸಂಕೇತಗಳು ಇದರಲ್ಲಿ ಇಲ್ಲ. ಅದಕ್ಕೆ ಕಾಲವೂ ಪಕ್ವವಾಗಿಲ್ಲ. ಭೀಷ್ಮನಿಗೆ ನಿವೃತ್ತಿಯಿದೆ. ಆದರೆ, ಸ್ವತಃ ಭೀಷ್ಮನೇ ಶಸ್ತ್ರಸನ್ಯಾಸ ಪಡೆಯುವ ವರೆಗೆ ಕಾಯಬೇಕಾಗುತ್ತದೆ. ಭೀಷ್ಮನಾದರೋ ಹಸ್ತಿನಾವತಿಗೆ ಸಮರ್ಥ ಉತ್ತರಾಧಿಕಾರಿ(ಯುಧಿಷ್ಠಿರ) ಸಿಕ್ಕಿದ ತೃಪ್ತಿಯಿಂದಲೇ ಶಸ್ತ್ರ ಕೆಳಗಿಟ್ಟಿದ್ದ. ಈ ದೃಷ್ಟಿಯಿಂದ ರಾಜ್ಯ ಬಿಜೆಪಿಯ ಈಗಿನ ಸ್ಥಿತಿಗೆ ಭೀಷ್ಮನ ಉದಾಹರಣೆ ಸರಿಹೊಂದಬಹುದು. ವರಿಷ್ಠರು ಈ ಧರ್ಮಸೂಕ್ಷ ್ಮವನ್ನು ಅರಿಯದಷ್ಟು ದಡ್ಡರಂತೂ ಅಲ್ಲ. ಹಾಗಾಗಿ ಲೋಕಸಭೆ ಚುನಾವಣೆಯಿಂದ ಪ್ರಾರಂಭವಾಗಿ ರಾಜ್ಯಸಭೆ ಚುನಾವಣೆ ವರೆಗಿನ ಅಚ್ಚರಿಯ ಬೆಳವಣಿಗೆಗಳನ್ನು ಸಂಘಟನಾತ್ಮಕ ದೃಷ್ಟಿಯಿಂದ ನೋಡುವುದೇ ಔಚಿತ್ಯಪೂರ್ಣ.
ಸುಧಾರಣೆಗೂ ಸಕಾಲ
ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಯಾದರೆ ಮಾತ್ರ ಭ್ರಷ್ಟಾಚಾರಕ್ಕೆ ಕಡಿವಾಣಗೊಳ್ಳುತ್ತದೆ ಎಂಬ ಚರ್ಚೆಯೀಗ ಬಲಗೊಳ್ಳುತ್ತಿದೆ. ಚುನಾವಣೆ ಗೆಲ್ಲಲು ಕೋಟ್ಯಂತರ ರೂಪಾಯಿ ವ್ಯಯಿಸಿದವರು ನಂತರ ಅಧಿಕಾರಕ್ಕೆ ಬಂದಾಗ ಬಡ್ಡಿ ಸಮೇತ ವಸೂಲಿಗಿಳಿಯುತ್ತಾರೆ. ಇದು ಭಾರತದ ರಾಜಕಾರಣದ ಕಟು ವಾಸ್ತವ. ಭ್ರಷ್ಟಾಚಾರದ ಮೂಲ ಬೇರು ಕೂಡ ಇಲ್ಲಿಯೇ ಇದೆ. ಇದರ ಮೂಲೋತ್ಪಾಟನೆ ಆಗಬೇಕಾದರೆ ಚುನಾವಣಾ ನೀತಿ ಸಂಹಿತೆ ಕಟ್ಟುನಿಟ್ಟಾಗಬೇಕು. ಹಣ ಹಂಚಿ ಎಲೆಕ್ಷ ನ್ ಗೆಲ್ಲುವ ಪ್ರವೃತ್ತಿಗೇ ಇತಿಶ್ರೀ ಹಾಡಬೇಕು. ಈ ಮಾರ್ಗದಲ್ಲಿ ಸಾಗುವುದು ಅಸಾಧ್ಯವೇನೂ ಅಲ್ಲ. ಯಾಕೆಂದರೆ, ಟಿ.ಎನ್.ಶೇಷನ್ ಎಂಬ ಖಡಕ್ ಅಧಿಕಾರಿ ಬರುವವರೆಗೆ ಚುನಾವಣಾ ಆಯೋಗದ ಅಸಲಿ ಪವರ್ ಬಗ್ಗೆ ಈ ದೇಶದಲ್ಲಿ ಯಾರಿಗೆ ತಿಳಿದಿತ್ತು ಹೇಳಿ?