ಮೋದಿ ಅಲೆಯಲ್ಲಿ ಹಾಯಾಗಿ ತೇಲುತ್ತಿದ್ದ ಬಿಜೆಪಿಗೆ ದೆಹಲಿಯಲ್ಲಿ ಕೇಜ್ರಿವಾಲ್ ಮೊದಲ ಆಘಾತ ನೀಡಿದರೆ, ಎರಡನೇ ಆಘಾತ ಬಿಹಾರದಲ್ಲಿನ ಮಹಾಮೈತ್ರಿ. ಸಾಲದೆಂಬಂತೆ ನಿತೀಶ್ ಕುಮಾರ್ ಅವರು ಕೇಜ್ರಿವಾಲ್ ನೆರವು ಪಡೆಯಲು ಮುಂದಾಗಿರುವುದು ಬಿಜೆಪಿಗೆ ಮತ್ತೊಂದು ತಲೆಬೇನೆಯೇ ಸರಿ.
‘ಮಾತು ಬೆಳ್ಳಿ ಮೌನ ಬಂಗಾರ’ ಅನ್ನುವುದನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಅರ್ಥಮಾಡಿಕೊಂಡು ಬಿಟ್ಟರೋ ಹೇಗೆ ಅಂತ ಆಮ್ ಆದ್ಮಿ ಪಕ್ಷದವರು ಇತ್ತೀಚೆಗೆ ಟ್ವೀಟ್ ಮಾಡಿದ್ದರು. ಮಾತಿನಿಂದಲೇ ಮೋಡಿ ಮಾಡುವ ಮೋದಿ, ಬಿಜೆಪಿ ಸರ್ಕಾರಕ್ಕೆ ಮುಜುಗರದ ಸನ್ನಿವೇಶ ಎದುರಾದಾಗ ಯಾಕೆ ಮೌನ ವಹಿಸುತ್ತಾರೆ ಎಂದು ಕೆಣಕುವುದು ಆ ಟ್ವೀಟ್ನ ಮರ್ಮವಾಗಿತ್ತು.
ಹಿಂದೆ ಮನಮೋಹನ ಸಿಂಗ್ ಮೌನ ಕೂಡ ಟೀಕೆಗೆ ಗುರಿಯಾಗಿದ್ದು ಗೊತ್ತೇ ಇದೆ. ‘ಮೌನಮೋಹನ ಸಿಂಗ್’ ಎಂದು ನರೇಂದ್ರ ಮೋದಿ ಆದಿಯಾಗಿ ಬಿಜೆಪಿ ನಾಯಕರೇ ಟೀಕಿಸುತ್ತಿದ್ದರು. ಸುದೀರ್ಘ ಹತ್ತು ವರ್ಷ ದೇಶವನ್ನಾಳಿದ ನಂತರವೂ ನೆನಪಿನಲ್ಲಿ ಉಳಿದದ್ದು ಅವರ ಮೌನವೊಂದೇ ಎಂದರೆ ತಪ್ಪಲ್ಲ. ಮೋದಿ ವಿಷಯದಲ್ಲಿ ಹಾಗಾಗಲಿಕ್ಕಿಲ್ಲ ಅನ್ನಿ. ಏಕೆಂದರೆ ಮೋದಿ ಮಾತನಾಡಲು ಬಾರದವರಲ್ಲ, ಮಾತನಾಡುವ ಸ್ವಾತಂತ್ರ್ಯಂದ ವಂಚಿತರಾದವರೂ ಅಲ್ಲ. ಇಲ್ಲಿ ಮಾತು ಮತ್ತು ಮೌನ ಎರಡೂ ಚರ್ಚೆಯ ವಸ್ತುವಲ್ಲ. ಮಾತನಾಡಬೇಕಾದಲ್ಲಿ ಮಾತಾಡಿದರೆ ಚೆನ್ನ. ಮೌನ ವಹಿಸಬೇಕಾದಲ್ಲಿ ಮೌನಿಯಾದರೆ ಚೆನ್ನ ಎಂಬುದನ್ನಷ್ಟೇ ಹೇಳಲು ಹೊರಟದ್ದು. ಆದರೆ ಈಗಿನ ಸನ್ನಿವೇಶದಲ್ಲಿ ಮೌನಕ್ಕೆ ಶರಣಾಗುವುದಕ್ಕಿಂತ ಮಾತಾಡಿದರೇ ಉಚಿತವಾಗುತ್ತಿತ್ತು.
ಯಾವ ವಿಚಾರದಲ್ಲಿ? ಅದೇ ಸುಷ್ಮಾ, ವಸುಂಧರಾ, ಪಂಕಜಾ, ಮತ್ತು ಶಿವರಾಜ್ ಸಿಂಗ್ ಚೌಹಾಣ್ ವಿಷಯದಲ್ಲಿ. ಕನಿಷ್ಠಪಕ್ಷ ಪ್ರಧಾನಿಗೆ ನೇರವಾಗಿ ಸಂಬಂಧಿಸಿದ ಕೇಂದ್ರ ಸಂಪುಟದ ಹಿರಿಯ ಸಚಿವೆ ಸುಷ್ಮಾ, ಮತ್ತು ಲಲಿತ್ ಮೋದಿ ವಿವಾದದ ವಿಚಾರದಲ್ಲಾದರೂ ಮೋದಿ ಮೌನ ಮುರಿಯಬಹುದಿತ್ತು. ಹೀಗೆನ್ನುವುದರ ಅರ್ಥ ಸುಷ್ಮಾ ತಪ್ಪು ಮಾಡಿದ್ದಾರೆಂದಲ್ಲ. ವಾಸ್ತವ ಏನೆಂಬುದನ್ನು ಪ್ರಧಾನಿ ಸಂಸತ್ತಿನ ಮುಂದಿಡ
ಬಹುದಿತ್ತು. ಮಾಧ್ಯಮದವರ ಮುಂದೆ ಹೇಳಿಕೊಳ್ಳಬಹುದಿತ್ತು. ಯಾವು ದನ್ನೂ ಮಾಡದೆ ಸ್ವಾತಂತ್ರ್ಯೊತ್ಸವ ಭಾಷಣದ ಸಂದರ್ಭ ದಲ್ಲಿ ಕಳಂಕ ರಹಿತವಾಗಿ ಆಡಳಿತ ನಡೆಸಿದ್ದೇ ಸರ್ಕಾರದ ಒಂದು ವರ್ಷದ ಸಾಧನೆ ಎಂದು ಮೋದಿ ಹೇಳಿದ್ದು ಮತ್ತಷ್ಟು ಅನುಮಾನಗಳನ್ನು ಹುಟ್ಟುಹಾಕಿತು.
ಮೌನದ ಬೆಲೆಯೇನು ಕಡಿಮೆಯೇ? ಸಂಸತ್ತಿನ ಈ ಸಲದ ಮುಂಗಾರು ಅಧಿವೇಶನ ಸಂಪೂರ್ಣವಾಗಿ ವ್ಯರ್ಥವಾಯಿತು. ಲೋಕಸಭೆ ಸಚಿವಾಲಯದ ಪ್ರಕಾರ, ಸಂಸತ್ತಿನ ಅಧಿವೇಶನದ ಒಂದು ನಿಮಿಷಕ್ಕೆ ಸರ್ಕಾರ 29 ಸಾವಿರ ರೂಪಾಯಿಗಳನ್ನು ವಿನಿಯೋಗಿಸುತ್ತದೆ. ಒಂದು ದಿನ, ಒಂದು ತಿಂಗಳು ಹೀಗೆ ಲೆಕ್ಕ ಹಾಕಿ ನೋಡಿ. ಒಟ್ಟಾರೆ ಹೊರೆ ಎಷ್ಟು ಎಂಬುದರ ಲೆಕ್ಕ ಸಿಗುತ್ತದೆ. ಮತ್ತೊಂದೆಡೆ ಮಹತ್ವದ ಭೂಸ್ವಾಧೀನ ಮಸೂದೆ, ಜಿಎಸ್ಟಿ ಮಸೂದೆಯ ಕುರಿತು ಚರ್ಚೆಗೆ ಆಸ್ಪದ ಆಗಲೇ ಇಲ್ಲ. ಸರ್ಕಾರದ ಚುಕ್ಕಾಣಿ ಹಿಡಿದವರಿಗೆ ಇದು ತಿಳಿಯದ ವಿಚಾರವೇ? ಮೌನದ ಹಿಂದಿನ ಮರ್ಮ ನಿಗೂಢ.
ಒಟ್ಟಾರೆ ಪರಿಣಾಮವನ್ನು ನಾವು ಸುಲಭದಲ್ಲಿ ಊಹಿಸಿಬಿಡಬಹುದು. ವಿಕಾಸದ ಮಹತ್ವಾಕಾಂಕ್ಷೆಯೊಂದಿಗೆ ಅಧಿಕಾರದ ಗದ್ದುಗೆ ಏರಿದ ಪ್ರಧಾನಿಯ ಮೇಲೆ ದಿನದಿಂದ ದಿನಕ್ಕೆ ಒತ್ತಡ ಹೆಚ್ಚುತ್ತಿದೆ. ಒಂದೆಡೆ ಕಳಂಕದ ಕಳವಳ. ಮತ್ತೊಂದೆಡೆ ಒಂದು ವರ್ಷ ಕಳೆದರೂ ಈ ಸರ್ಕಾರ ದಿಂದ ಕಣ್ಣಿಗೆ ಕಾಣಿಸುವಂಥ ಕಾರ್ಯಕ್ರಮಗಳು ಜಾರಿಯಾಗುತ್ತಿಲ್ಲ ಎಂಬ ಆಂತರಿಕ ವಲಯದ ವಿಮರ್ಶೆ. ಹೀಗೆ ಅಡಕತ್ತರಿಯಲ್ಲಿ ಸಿಲುಕಿರುವ ಮೋದಿ ಒಂದೇ ವರ್ಷದಲ್ಲಿ ಬಹಳ ಬಳಲಿದವರಂತೆ, ಹತ್ತು ಹದಿನೈದು ವರ್ಷ ಹೆಚ್ಚು ವಯಸ್ಸಾದವರಂತೆ ಕಾಣಿಸತೊಡಗಿದ್ದಾರೆ. ಹೆಗಲೇರಿಸಿಕೊಂಡ ನೊಗವನ್ನು ಮುಂದೆ ಎಳೆಯಲೇಬೇಕಾದ ಅನಿವಾರ್ಯತೆ ಮುಂಚೂಣಿಯಲ್ಲಿ ನಿಂತ ನಾಯಕತ್ವದ್ದು.
ಆಗ ದೆಹಲಿ-ಈಗ ಬಿಹಾರ: ಚಿಕ್ಕ ರಾಜ್ಯ ದೆಹಲಿ ಚುನಾವಣಾ ಫಲಿತಾಂಶ ಮೋದಿ ಸರ್ಕಾರದ ಸಾಧನೆ, ಜನಪ್ರಿಯತೆ ಇತ್ಯಾದಿಗಳ ಮಾನದಂಡವಲ್ಲ ಎಂಬ ಸಮರ್ಥನೆ ಸ್ವಲ್ಪಮಟ್ಟಿಗೆ ನಿಜವೂ ಇರಬಹುದು. ಆದರೆ ಇಲ್ಲೊಂದು ಪ್ರಶ್ನೆ, ಒಂದು ರಾಜಕೀಯ ಪಕ್ಷವಾಗಿ ಬಿಜೆಪಿಯ ಜನಪ್ರಿಯತೆ, ಸಂಘಟನಾ ಸಾಮರ್ಥ್ಯ ಮತ್ತು ಪ್ರಧಾನಿ ಮೋದಿಯ ನಂಟನ್ನು ಬಿಡಿಸುವುದು ಹೇಗೆ? ಇರಲಿ, ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಹೊಸತರಲ್ಲಿ ನಡೆದ ಚುನಾವಣೆ ಅಂತ ವಿನಾಯಿತಿ ನೀಡಬಹುದು. ಆದರೆ ಮುಂದೆ ಎದುರಾಗುವ ಬಿಹಾರ ಚುನಾವಣೆ ಯನ್ನು ಹಾಗೆ ಹೇಳಲಾಗದು.
ಬಿಜೆಪಿ ನಾಯಕತ್ವ ಏನು ಬೇಕಾದರೂ ಹೇಳಲಿ, ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆ ಪಕ್ಷ ಸೋತದ್ದು ಅತಿಯಾದ ಆತ್ಮ ವಿಶ್ವಾಸದಿಂದಲೇ ವಿನಾ ಬೇರೆಯದರಿಂದಲ್ಲ ಎಂಬುದು ಸಮೀಪವರ್ತಿಗಳ ವಿಶ್ಲೇಷಣೆ. ಮೋದಿ ಹೆಸರಲ್ಲಿ ಏನು ಬೇಕಾದರೂ ಮಾಡಬಹುದು ಎಂಬ ಹುಂಬ ಆತ್ಮವಿಶ್ವಾಸವೇ ಆ ಪರಿ ಮುಖಭಂಗಕ್ಕೆ ಕಾರಣವಾಯಿತು ಎಂಬುದು ಬಲವಾದ ಅಭಿಪ್ರಾಯ. ಅದು ಅಮಿತ್ ಷಾರಿಂದ ಹಿಡಿದು ಬಿಜೆಪಿ ನಾಯಕರೆಲ್ಲರಿಗೂ ಗೊತ್ತಿರುವಂಥದ್ದೆ. ಅದರ ಪರಿಣಾಮವೇ ಬಿಹಾರ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಬೇರೆಲ್ಲರಿಗಿಂತ ಮುಂಚಿತವಾಗಿ ಕಣಕ್ಕೆ ಧುಮುಕುವಂತೆ ಮಾಡಿದೆ.
ಪಕ್ಷಾಂತರ ಪರ್ವ: ಹಾಗೆ ನೋಡಿದರೆ ಬಿಹಾರದಲ್ಲಿ ಜೆಡಿಯು, ಆರ್ಜೆಡಿ ಮತ್ತು ಕಾಂಗ್ರೆಸ್ ಪಕ್ಷವನ್ನೊಳಗೊಂಡ ಮಹಾಮೈತ್ರಿಕೂಟದ ನಾಯಕರು ಇನ್ನೂ ಅಧಿಕೃತವಾಗಿ ಚುನಾವಣಾ ಪ್ರಚಾರಕ್ಕೆ ಚಾಲನೆ ಕೊಟ್ಟಿಲ್ಲ. ಸೆಪ್ಟೆಂಬರ್ ಎರಡನೇ ವಾರದ ಹೊತ್ತಿಗೆ ನಿತೀಶ್ಕುಮಾರ್ ನೇತೃತ್ವದ ಮೈತ್ರಿಕೂಟ ಚುನಾವಣಾ ಪ್ರಚಾರ ಆರಂಭಿಸುತ್ತದೆ ಎನ್ನಲಾಗುತ್ತಿದೆ. ಆದರೆ ಶತಾಯಗತಾಯ ಗೆಲ್ಲಲೇಬೇಕೆಂದು ನಿರ್ಧರಿಸಿರುವ ಬಿಜೆಪಿ ನಾಯಕರು ಈಗಾಗಲೇ ವ್ಯವಸ್ಥಿತವಾಗಿ ಚುನಾವಣಾ ಕಣಕ್ಕೆ ಧುಮುಕಿದ್ದಾರೆ. ಒಂದೆಡೆ ಇನ್ನೂರಕ್ಕೂ ಹೆಚ್ಚು ‘ಮೋದಿ ರಥ’ಗಳಿಗೆ ಚಾಲನೆ ನೀಡಿದ್ದರೆ ಮತ್ತೊಂದೆಡೆ ಜೆಡಿಯು ಮತ್ತು ಆರ್ಜೆಡಿ ಶಾಸಕರನ್ನು ದೊಡ್ಡ ಪ್ರಮಾಣದಲ್ಲಿ ಪಕ್ಷಾಂತರ ಮಾಡಿಸುವ ಕೆಲಸಕ್ಕೆ ಭರದ ಚಾಲನೆ ನೀಡಿದ್ದಾರೆ. ಆರ್ಜೆಡಿ, ಜೆಡಿಯುನಿಂದ ಅಧಿಕಾರಕ್ಕಾಗಿ ಪಕ್ಷಾಂತರ ಮಾಡುತ್ತಿರುವ ಶಾಸಕರು ಮೋದಿ ಕಲ್ಪನೆಯ ಬಿಹಾರ ನಿರ್ವಣಕ್ಕೆ ಸಾಥ್ ನೀಡುತ್ತಾರಾ ಎಂಬುದು ಯಕ್ಷಪ್ರಶ್ನೆ.
ಇಲ್ಲಿ ಸೋತರೆ ಇನ್ನಿಲ್ಲ: ದೆಹಲಿ ಚುನಾವಣಾ ಸೋಲಿಗೆ ಬಿಜೆಪಿ ಕಾರಣ ಹೇಳಬಹುದು. ಆದರೆ ಬಿಹಾರದ ಚುನಾವಣೆಯಲ್ಲಿ ಲೆಕ್ಕಾಚಾರ ತಲೆಕೆಳಗಾದರೆ ಸಮರ್ಥನೆಗೆ ಆಸ್ಪದ ಇರದು. ಅಷ್ಟೇ ಅಲ್ಲ, ಕೇಂದ್ರದಲ್ಲಿ ಮೋದಿ ಸರ್ಕಾರದ ಮುಂದಿನ ಹಾದಿಯನ್ನು ಮತ್ತಷ್ಟು ದುರ್ಗಮಗೊಳಿಸುವುದರಲ್ಲೂ ಅನುಮಾನ ಬೇಡ. ಈ ಸಂಗತಿ ಬೇರೆಲ್ಲರಿಗಿಂತ ಬಿಜೆಪಿ ನಾಯಕರಿಗೆ ಹೆಚ್ಚು ಚೆನ್ನಾಗಿ ಗೊತ್ತಿರುವುದರಿಂದ ಆರೆಸ್ಸೆಸ್ ನಾಯಕರು, ಪ್ರಧಾನಿ ಮೋದಿ ಆದಿಯಾಗಿ ಇಡೀ ಸಂಘ ಪರಿವಾರ ಬಿಹಾರ ಚುನಾವಣೆಯ ಧ್ಯಾನದಲ್ಲಿ ಮುಳುಗಿಬಿಟ್ಟಿದೆ.
ಶುರುವಾಗಿದೆ ಪ್ಯಾಕೇಜ್ ರಾಜಕಾರಣ: ಬಿಹಾರ ಚುನಾವಣೆಯ ಹಿನ್ನೆಲೆಯಲ್ಲಿ ಸಾಧ್ಯವಿರುವ ಎಲ್ಲಾ ದಾಳಗಳನ್ನು ಪ್ರಯೋಗಿಸಲು ಬಿಜೆಪಿ ಅಣಿಯಾಗಿರುವುದು ಸ್ಪಷ್ಟಗೋಚರ. ಪ್ರಧಾನಿ ನರೇಂದ್ರ ಮೋದಿ ಬಿಹಾರ ಅಭಿವೃದ್ಧಿಗೆ 1.25 ಲಕ್ಷ ಕೋಟಿ ರೂಪಾಯಿಗಳ ಕೇಂದ್ರದ ವಿಶೇಷ ಪ್ಯಾಕೇಜನ್ನು ಘೊಷಣೆ ಮಾಡಿರುವುದು ಅದರ ಒಂದು ರೂಪ ಮಾತ್ರ. ಹಾಗಂತ ಇದೇನೂ ಹೊಸ ಪ್ರಯೋಗ ಅನ್ನುವ ಹಾಗಿಲ್ಲ. ಏಕೆಂದರೆ ಈ ತಂತ್ರಗಾರಿಕೆಯನ್ನು ಕಾಂಗ್ರೆಸ್ ಹಿಂದೆ ಅದೆಷ್ಟೋ ಬಾರಿ ಪ್ರಯೋಗ ಮಾಡಿದೆ. ಸೋನಿಯಾ ಗಾಂಧಿ ಬಳ್ಳಾರಿಯಿಂದ ಲೋಕಸಭೆಗೆ ಸ್ಪರ್ಧಿಸಿದ ಸಂದರ್ಭದಲ್ಲಿ ಇಂಥದ್ದೇ ಭರ್ಜರಿ ಪ್ಯಾಕೇಜನ್ನು ಘೊಷಿಸಿದ್ದರು. ಅದರ ಪರಿಣಾಮ ಏನು ಎಂಬುದು ಬಳ್ಳಾರಿ ಜನತೆಗೆ ಚೆನ್ನಾಗಿ ಗೊತ್ತಿದೆ. ಕಾರಣ ಇಷ್ಟೆ, ಯೋಜನೆಯೇ ಇಲ್ಲದ ಘೊಷಣೆ ದಡ ಸೇರುವ ಸಾಧ್ಯತೆ ತೀರಾ ಕಡಿಮೆ. ಇಂಥ ತಂತ್ರಗಾರಿಕೆಯನ್ನು ಬಿಜೆಪಿ ಕೂಡ ಪ್ರಯೋಗಿಸಲು ಮುಂದಾಗಿರುವುದೊಂದೇ ಈ ಸಲದ ವಿಶೇಷ ಎನ್ನಬಹುದು.
ಬಿಜೆಪಿ ನಿದ್ದೆಗೆಡಿಸಿದ ಮಹಾಮೈತ್ರಿ: ಮೋದಿ ಅಲೆಯಲ್ಲಿ ಹಾಯಾಗಿ ತೇಲುತ್ತಿದ್ದ ಬಿಜೆಪಿಗೆ ದೆಹಲಿಯಲ್ಲಿ ಕೇಜ್ರಿವಾಲ್ ಮೊದಲ ಆಘಾತ ನೀಡಿದರೆ, ಎರಡನೇ ಆಘಾತ ಬಿಹಾರದಲ್ಲಿ ನಿತೀಶ್, ಲಾಲು ಹಾಗೂ ಕಾಂಗ್ರೆಸ್ನ ಮಹಾಮೈತ್ರಿ. ಮೊದಮೊದಲು ಲಾಲು ಮತ್ತು ನಿತೀಶ್ ಒಂದಾಗುವುದಿಲ್ಲ ಎಂದೇ ಎಲ್ಲರೂ ಭಾವಿಸಿದ್ದರು. ಯಾವಾಗ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ಗೆ ನಡೆದ ದ್ವೈವಾರ್ಷಿಕ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಆಯಿತೋ ಮರುಕ್ಷಣದಲ್ಲೇ ಭಿನ್ನಾಭಿಪ್ರಾಯ ಮರೆತು ಒಗ್ಗೂಡಿ ಮುಂದಿನ ವಿಧಾನಸಭಾ ಚುನಾವಣೆ ಎದುರಿಸುವ ತೀರ್ವನವನ್ನು ಈ ಮೂರೂ ಪಕ್ಷಗಳು ತೆಗೆದುಕೊಂಡವು. ಅದು ಬಿಜೆಪಿ ನಾಯಕರ ನಿದ್ದೆಗೆಡಿಸುವುದಕ್ಕೂ ಕಾರಣವಾಯಿತು.
ದೆಹಲಿ ಚಿತ್ರಣವೇ ಇದೆ: ಮೋದಿ ವರ್ಚಸ್ಸು ಲೋಕಸಭಾ ಚುನಾವಣೆಗೆ ಮಾತ್ರ ಸೀಮಿತ, ವಿಧಾನಸಭಾ ಚುನಾವಣೆಯಲ್ಲಿ ಮೋದಿ ಮೋಡಿ ನಡೆಯುವುದಿಲ್ಲ ಎಂದು ಹೇಳಿದ್ದು ದೆಹಲಿ ಮತದಾರರು. ಅದಕ್ಕೆ ಮುಖ್ಯ ಕಾರಣ ಕೇಜ್ರಿವಾಲ್ ನಾಯಕತ್ವ. ಅವರ ಸವಾಲನ್ನು ಜಯಿಸುವ ನಾಯಕತ್ವವೇ ಬಿಜೆಪಿ ಬಳಿ ಇರಲಿಲ್ಲ. ಅದೇ ಸ್ಥಿತಿ ಬಿಹಾರದಲ್ಲೂ ಇದೆ. ನಿತೀಶ್ಕುಮಾರ್ ನಾಯಕತ್ವದ ಎದುರು ಸುಶೀಲ್ ಕುಮಾರ್ ಮೋದಿ ಸಾಟಿಯಲ್ಲ. ಈ ಸವಾಲನ್ನು ಜಯಿಸುವುದು ಸಹ ಬಿಜೆಪಿಗೆ ಕಠಿಣವಾಗಬಹುದು.
ನಿತೀಶ್ಗೆ ಕೇಜ್ರಿವಾಲ್ ಸಾಥ್: ಮೋದಿ ಸವಾಲನ್ನು ಸಮರ್ಥವಾಗಿ ಎದುರಿಸಲು ಒಂದೊಂದೇ ಪಟ್ಟನ್ನು ಪ್ರಯೋಗಿಸುತ್ತಿರುವ ನಿತೀಶ್ಕುಮಾರ್, ಕೇಜ್ರಿವಾಲ್ ನೆರವು ಪಡೆಯಲು ಮುಂದಾಗಿರುವುದು ವಿಶೇಷ. ಅದಕ್ಕೆ ಕೇಜ್ರಿವಾಲ್ ಕೂಡ ಪೂರಕ ಸ್ಪಂದನೆ ನೀಡಿದ್ದಾರೆ. ದೆಹಲಿಯಲ್ಲಿ ಒಂದು ಸುತ್ತಿನ ಮಾತುಕತೆ ನಡೆದಿದೆ. ಇಷ್ಟರಲ್ಲೇ ಪಟನಾದಲ್ಲಿ ನಿತೀಶ್ ಆಯೋಜಿಸುವ ಸಭೆಯಲ್ಲಿ ಕೇಜ್ರಿವಾಲ್ ವೇದಿಕೆ ಹಂಚಿಕೊಳ್ಳುತ್ತಾರೆ ಎನ್ನಲಾಗುತ್ತಿದೆ. ಅದು ನಿಜವಾದಲ್ಲಿ ಬಿಹಾರ ರಾಜಕೀಯದಲ್ಲಿ ಹೊಸ ಸಂಚಲನ ನಿರೀಕ್ಷಿತ.
ಒಟ್ಟಾರೆ ಹೇಳುವುದಾದರೆ ಬಿಹಾರ ಗೆದ್ದರೆ ಮೋದಿ ಮತ್ತು ಬಿಜೆಪಿ ಹಾದಿ ಸುಗಮ. ಇಲ್ಲವಾದರೆ ದುರ್ಗಮ.
ಇಡೀ ದೇಶದಲ್ಲಿ ಸಂಚಲನ ಉಂಟುಮಾಡಿದ ವ್ಯಾಪಂ ಹಗರಣದ ಬಿರುಗಾಳಿಯ ನಡುವೆಯೂ ಮಧ್ಯಪ್ರದೇಶದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷ ಮೇಲುಗೈ ಸಾಧಿಸಿದ್ದು ಬಿಜೆಪಿ ನಾಯಕರನ್ನು ನಿರಾಳ ಮಾಡಿರಲಿಕ್ಕೂ ಸಾಕು. ಆದರೆ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ವನ್ನೇ ಜನತಾ ಜನಾರ್ದನ ನೀಡಿದ ಕ್ಲೀನ್ಚಿಟ್ ಅಂತ ಬೀಗಬಹುದೇ ಎಂಬುದು ಮುಖ್ಯ ಪ್ರಶ್ನೆ.