ಸಾರ್ವಜನಿಕ ಜೀವನದಲ್ಲಿ ನಡವಳಿಕೆ ಮುಖ್ಯ

– ಶಶಿಧರ ಹೆಗಡೆ.  

‘ಹೇಳುವುದು ಕಾಶಿ ಕಾಂಡ. ತಿನ್ನುವುದು ಮಶಿ ಕೆಂಡ’ ಎಂಬ ಮಾತೊಂದಿದೆ. ಅಂದರೆ ವೇದಾಂತ ಹೇಳುವುದಕ್ಕೆ-ಬದನೆಕಾಯಿ ತಿನ್ನುವುದಕ್ಕೆ ಅನ್ನುತ್ತಾರಲ್ಲ. ಇದೂ ಹಾಗೆಯೇ! ಎಷ್ಟೋ ಬಾರಿ ನುಡಿಗೂ ನಡೆಗೂ ಹೊಂದಾಣಿಕೆ ಇರುವುದಿಲ್ಲ. ಸಾಮಾನ್ಯವಾಗಿ ರಾಜಕಾರಣಿಗಳು ಇಂತಹ ಆರೋಪಕ್ಕೆ ಗುರಿಯಾಗುತ್ತಾರೆ. ರಾಜಕಾರಣಿಗಳೆಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗುವುದೂ ಸರಿಯಲ್ಲ. ಯಾಕೆಂದರೆ ಸಾರ್ವಜನಿಕ ಬದುಕಿನಲ್ಲಿ ಹೇಗಿರಬೇಕೆಂದು ತೋರಿಸಿಕೊಟ್ಟ ಆದರ್ಶಪ್ರಾಯರು ಅನೇಕರಿದ್ದಾರೆ. ಗುಲಗಂಜಿಯಷ್ಟು ಪ್ರಾಮಾಣಿಕತೆ, ಬದ್ಧತೆ ಹೊಂದಿದವರು ನಮ್ಮ ನಡುವೆ ಇನ್ನೂ ಇದ್ದಾರೆ. ಮೆದುಳಿಗೂ ನಾಲಿಗೆಗೂ ಲಿಂಕ್‌ ತಪ್ಪಿ ಹೋದಂತೆ ಬಡಬಡಿಸುವವರೂ ಇದ್ದಾರೆ. ಪುಡಿ ರಾಜಕಾರಣಿ ಬಾಯಿಗೆ ಬಂದಂತೆ ಮಾತನಾಡಿದರೆ ಉದಾಸೀನ ಮಾಡಬಹುದು. ಪ್ರಾಜ್ಞರಂತೆ ಪೋಸು ಕೊಡುವವರು ಅನಾಗರಿಕರಂತೆ ವರ್ತಿಸುವುದು ಇದೆಯಲ್ಲ? ಅದು ಸಹನೀಯವಲ್ಲ. ಅಧಿಕಾರಸ್ಥರಿಗೆ ಸದಾ ಈ ಜಾಗೃತೆ ಇರಬೇಕಾಗುತ್ತದೆ. ಅಂತಹ ಸಹನಶೀಲರು ಸಾರ್ವಜನಿಕ ಜೀವನದಲ್ಲಿರಲು ಲಾಯಕ್ಕಾಗಿರುತ್ತಾರೆ. ಅದಿಲ್ಲದವರು ಉಳಿಯುವುದು ಕಷ್ಟ. 
ವಾಜಪೇಯಿ ಮೇಲ್ಪಂಕ್ತಿ : ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗ ಭಾರತೀಯ ಜನತಾ ಪಕ್ಷ ಒಂದು ದೋಷಾರೋಪ ಪಟ್ಟಿ ಸಿದ್ಧಪಡಿಸುತ್ತದೆ. ಈ ಸಂಬಂಧ ಕಿರು ಪುಸ್ತಕವನ್ನು ಅಚ್ಚಿಗೆ ಹಾಕಿಸಿದ ಬಳಿಕ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಪಕ್ಷದ ಮುಖಂಡರು ಅದನ್ನು ತೋರಿಸುತ್ತಾರೆ. ‘ಇಂದಿರಾ ಜವಾಬ್‌ ದೋ’ ಎನ್ನುವುದು ಪುಸ್ತಕದ ಶೀರ್ಷಿಕೆ. ಅದನ್ನು ಓದುತ್ತಿದ್ದಂತೆ ಪಕ್ಷದ ಮುಖಂಡರಿಗೆ ಕ್ಲಾಸ್‌ ತೆಗೆದುಕೊಂಡ ಅಟಲ್‌ಜಿ, ‘‘ಇಂದಿರಾ ಗಾಂಧಿಯವರು ನಮ್ಮ ಪ್ರಧಾನಿ. ಅವರನ್ನು ನಾವು ಗೌರವದಿಂದ ಕಾಣಬೇಕು. ಹಾಗಾಗಿ ಈ ಶೀರ್ಷಿಕೆಯನ್ನು ‘ಇಂದಿರಾಜೀ ಜವಾಬ್‌ ದೀಜೀಯೇ’ ಎಂದು ಬದಲಿಸಿ,’’ ಎಂಬ ಸೂಚನೆ ಕೊಡುತ್ತಾರೆ. ಸಾವಿರಾರು ಪ್ರತಿ ಪ್ರಿಂಟ್‌ ಆಗಿರುವುದರಿಂದ ನಷ್ಟವಾಗುತ್ತದೆ ಎಂದು ಮುಖಂಡರು ಗೊಣಗುತ್ತಾರೆ. ತಮ್ಮ ನಿಲುವಿಗೆ ಖಡಾಖಡಿ ಅಂಟಿಕೊಂಡ ವಾಜಪೇಯಿ, ಈ ತಿದ್ದುಪಡಿ (ಇಂದಿರಾಜೀ ಜವಾಬ್‌ ದೀಜೀಯೇ ಎಂದು) ಆಗಲೇಬೇಕು. ಇಲ್ಲದಿದ್ದರೆ ಈ ಪುಸ್ತಕ ಬಿಡುಗಡೆಯ ಪ್ರಸಂಗವೇ ಉದ್ಭವಿಸದು ಎಂದು ತಮ್ಮ ಮಾತಿಗೆ ವಿರಾಮ ಹಾಕಿದರಂತೆ. ಸಾರ್ವಜನಿಕ ಜೀವನದ ರೀತಿ ರಿವಾಜಿನ ವಿಚಾರದಲ್ಲಿ ಮೇರು ನಾಯಕರು ಹೇಗೆ ಮೇಲ್ಪಂಕ್ತಿ ಹಾಕಿಕೊಡುತ್ತಿದ್ದರು ಎನ್ನುವುದಕ್ಕೆ ಇದೊಂದು ನಿದರ್ಶನ.
ವಾಜಪೇಯಿ ಅವರಂಥವರು ರಾಜಕೀಯ ಎದುರಾಳಿಗಳನ್ನು ಗೌರವಾದರದಿಂದ ನೋಡುವುದರ ಜತೆಗೆ ಜನಸಾಮಾನ್ಯರ ಬಗ್ಗೆಯೂ ಅಷ್ಟೇ ಕಳಕಳಿ ಹೊಂದಿದ್ದರು. ರಾಜ್ಯದಲ್ಲೂ ಅಷ್ಟೇ. ವಿಭಿನ್ನ ಪಕ್ಷವೆಂದೇ ಬಿಂಬಿಸಿಕೊಂಡು ಬಂದ ಬಿಜೆಪಿ ತನ್ನ ಕಾರ್ಯಕರ್ತರಿಗೆ ಶಿಸ್ತಿನ ಪಾಠವನ್ನೂ ಹೇಳುತ್ತದೆ. ಆದರೆ, ರಾಜ್ಯದ ಬಿಜೆಪಿ ಸರಕಾರದಲ್ಲಿ ಪ್ರಮುಖ ಹೊಣೆಗಾರಿಕೆ ಹೊಂದಿರುವ ಜೆ.ಸಿ.ಮಾಧುಸ್ವಾಮಿ ಸಲ್ಲದ ಕಾರಣಕ್ಕೆ ಸುದ್ದಿಯಾಗಿದ್ದಾರೆ. ವಾಜಪೇಯಿ, ಲಾಲ್‌ಕೃಷ್ಣ ಆಡ್ವಾಣಿ ಅವರಷ್ಟೇ ಅಲ್ಲ. ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೂ ಸುದೀರ್ಘ ರಾಜಕೀಯ ಜೀವನದಲ್ಲಿ ಹದ್ದು ಮೀರಿದ ವರ್ತನೆ ತೋರಿದವರಲ್ಲ. ಯಾವಾಗಲೂ ರೈತರ ಹಿತಚಿಂತನೆ ಮಾಡುವ ಅವರ ಸಾರ್ವಜನಿಕ ಜೀವನ ಸ್ಪಟಿಕದಷ್ಟು ಶುಭ್ರವಾಗಿದೆ. ಮಾಧುಸ್ವಾಮಿಯವರು ಯಡಿಯೂರಪ್ಪನವರ ನಾಯಕತ್ವವನ್ನು ಮೆಚ್ಚಿ ಬಿಜೆಪಿಗೆ ಬಂದವರು. ಹಾಗಾಗಿ ಮಾಧುಸ್ವಾಮಿಯವರು ವಾಜಪೇಯಿ, ಆಡ್ವಾಣಿ, ಮೋದಿ ಅವರನ್ನು ಅನುಸರಿಸುವಷ್ಟು ದೂರ ಹೋಗುವ ಅಗತ್ಯವಿರಲಿಲ್ಲ. ತಾವು ನಿರಂತರ ಭೇಟಿಯಾಗುವ ಯಡಿಯೂರಪ್ಪ ಅವರನ್ನು ನೋಡಿ ಕಲಿತುಕೊಂಡಿದ್ದರೂ ಸಾಕಾಗುತ್ತಿತ್ತು. ಒಂದು ವೇಳೆ ಅವರು ಬಿಎಸ್‌ವೈ ಅವರಿಂದ ಪ್ರಭಾವಿತರಾಗಿದ್ದರೆ ಖಂಡಿತವಾಗಿಯೂ ಕೋಲಾರದ ರೈತ ಮಹಿಳೆಗೆ ರೇಗುವ ಪ್ರಮೇಯವೇ ಬರುತ್ತಿರಲಿಲ್ಲ.
ನಿರಕ್ಷರ ಕುಕ್ಷಿಯಲ್ಲವಲ್ಲ?
ಮಾಧುಸ್ವಾಮಿ ಸಾರ್ವಜನಿಕ ಜೀವನದ ಶಿಷ್ಟಾಚಾರದ ಅರಿವಿಲ್ಲದವರಲ್ಲ. ಅವರು ನಿರಕ್ಷರ ಕುಕ್ಷಿಯೂ ಅಲ್ಲ. ಒಂದು ವೇಳೆ ಹಾಗಾಗಿದ್ದರೆ ಈ ವಿವಾದವಿಷ್ಟು ಸದ್ದು ಮಾಡುತ್ತಿರಲಿಲ್ಲ. ಯತಾರ್ಥದಲ್ಲಿ ಮಾಧುಸ್ವಾಮಿ ಕಾನೂನು ಪಂಡಿತರು. ವೈಯಕ್ತಿಕವಾಗಿಯೂ ಪಂಡಿತರು ಪಂಡಿತೋತ್ತಮರ ಸಾಲಿನಲ್ಲಿ ಗುರುತಿಸಿಕೊಳ್ಳುವ ಹುಕಿಯೂ ಅವರಿಗಿದೆ. ಲಾ ಪಾಯಿಂಟ್‌ಗಳನ್ನು ಹಾಕುತ್ತ ಮಾಧುಸ್ವಾಮಿ ಅಸೆಂಬ್ಲಿಯಲ್ಲಿ ಮಾತನಾಡುತ್ತಿದ್ದರೆ ಹಾಯಾಗಿ ಕೇಳಿಸಿಕೊಳ್ಳೋಣ ಎನಿಸುತ್ತದೆ. ಹಾಗೆ ನೋಡಿದರೆ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದ ಸಂದರ್ಭದಲ್ಲಿ ಅಂದಿನ ಪ್ರತಿಪಕ್ಷ ಬಿಜೆಪಿಯಿಂದ ಪ್ರೌಢಿಮೆಯಿಂದ ಮಾತನಾಡಿದ್ದವರು ಇದೇ ಮಾಧುಸ್ವಾಮಿ. ಈ ಮೂಲಕ ಯಡಿಯೂರಪ್ಪ ಅವರ ವಿಶ್ವಾಸವನ್ನೂ ಗಳಿಸಿದ್ದರು. ಈ ಹಿನ್ನೆಲೆಯಲ್ಲಿ ಹೊಸ ಸರಕಾರ ರಚನೆಯಾಗುತ್ತಿದ್ದಂತೆ ಮಾಧುಸ್ವಾಮಿ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡ ಬಿಎಸ್‌ವೈ ಕಾನೂನು ಮತ್ತು ಸಂಸದೀಯ ಖಾತೆ ಕೊಟ್ಟು ಪಕ್ಕಕ್ಕಿಟ್ಟುಕೊಂಡರು. ಜನರೊಂದಿಗೆ ನೇರ ಸಂಪರ್ಕವಿಟ್ಟುಕೊಳ್ಳುವ ಖಾತೆಯನ್ನು ಬಯಸಿದಾಗ ಸಣ್ಣ ನೀರಾವರಿ ಇಲಾಖೆಯನ್ನು ಮಾಧುಸ್ವಾಮಿ ಅವರಿಗೆ ಬಿಎಸ್‌ವೈ ವಹಿಸಿದ್ದರು. ಈ ವಿಶ್ವಾಸ ಉಳಿಸಿಕೊಳ್ಳುವ ವಿಷಯದಲ್ಲೂ ಮಾಧುಸ್ವಾಮಿ ಹೆಜ್ಜೆ ಹೆಜ್ಜೆಗೆ ಎಡವಿದ್ದಾರೆ. ಹಾಗಾಗಿ ಮಾಧುಸ್ವಾಮಿ ಹೆಸರು ಕೇಳಿದರೆ ಸಿಎಂ ಅವರಿಗೆ ಚೇಳು ಮುಟ್ಟಿದ ಅನುಭವವಾಗುತ್ತಿರಬಹುದು? ಎಂಬ ಮಾತು ಸರಕಾರದ ವಲಯದಲ್ಲಿ ಕೇಳಿ ಬರುತ್ತದೆ. ಬಹುಬೇಗ ಸಹನೆ ಕಳೆದುಕೊಳ್ಳುವ ಮಾಧುಸ್ವಾಮಿ ಸಂಪುಟ ಸಭೆಯಲ್ಲೂ ತಮ್ಮ ಸಹೋದ್ಯೋಗಿಗಳ ವಿರುದ್ಧ ರೇಗುತ್ತಾರೆಂಬ ವರ್ತಮಾನವಿದೆ. ವಿಧಾನಸಭೆ ಉಪ ಚುನಾವಣೆ ವೇಳೆ ತುಮಕೂರು ಬಳಿಯ ಹುಳಿಯಾರ್‌ ವೃತ್ತದಲ್ಲಿ ಕನಕ ಪ್ರತಿಮೆ ಸ್ಥಾಪಿಸುವ ವಿಚಾರದಲ್ಲಿ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು. ಪರಿಸ್ಥಿತಿಯ ಗಾಂಭೀರ್ಯವರಿತ ಮುಖ್ಯಮಂತ್ರಿ ಅವರೇ ಮಧ್ಯೆ ಪ್ರವೇಶಿಸಿ ಕ್ಷಮೆ ಕೇಳಿದ್ದರು. ಸ್ವಭಾವತಃ ಮಾಧುಸ್ವಾಮಿ ಅವರಲ್ಲಿ ಇಂತಹ ನಡವಳಿಕೆಯಿದ್ದಂತೆ ತೋರುತ್ತದೆ. ಆದರೆ, ಇದು ಸಾರ್ವಜನಿಕ ಬದುಕಿಗೆ ಖಂಡಿತ ಭೂಷಣವಲ್ಲ. ಕೋಲಾರದ ಘಟನೆಯನ್ನು ತೆಗೆದುಕೊಂಡರೆ ರೈತ ಮಹಿಳೆಯ ಎದುರು ಮಾಧುಸ್ವಾಮಿ ನಡೆದುಕೊಂಡ ರೀತಿ ಕ್ಷಮಾರ್ಹವಲ್ಲ. ಒಂದಷ್ಟೂ ಲೋಕಲಜ್ಜೆ ಇಲ್ಲದವರಂತೆ ಈ ಘಟನೆಯನ್ನು ಸಮರ್ಥಿಸಿಕೊಳ್ಳುವುದು ಸಾಧುವೂ ಅಲ್ಲ.
ಟಿ.ಜಾನ್‌ ಪ್ರಕರಣದ ಪಾಠ
ಮಾಧುಸ್ವಾಮಿ ರಾಜೀನಾಮೆಗೆ ಪ್ರತಿಪಕ್ಷಗಳು ಆಗ್ರಹಿಸಿವೆ. ಬಿಜೆಪಿ ಆಂತರಿಕ ವಲಯದಲ್ಲೂ ಇಂತಹ ಒತ್ತಡವಿರುವ ವರದಿಯಾಗಿದೆ. ಸಂಪುಟದ ಸದಸ್ಯರ ರಾಜೀನಾಮೆ ಪಡೆಯುವುದು ಮುಖ್ಯಮಂತ್ರಿಯವರ ವಿವೇಚನಾಧಿಕಾರ. ಸಚಿವರೇ ಖುದ್ದಾಗಿ ರಾಜೀನಾಮೆ ನೀಡುವುದಾದರೂ ಅದು ಅವರ ನೈತಿಕತೆಗೆ ಬಿಟ್ಟದ್ದು. ಅದೇನೇ ಇರಲಿ. ಮಂತ್ರಿ ಸ್ಥಾನದಂತಹ ಹೊಣೆಗಾರಿಕೆಯ ಹುದ್ದೆಯಲ್ಲಿದ್ದವರು ಆಡಬಾರದ್ದನ್ನು ಆಡಿದ ಪರಿಣಾಮ ಅಧಿಕಾರ ಕಳೆದುಕೊಂಡ ನಿದರ್ಶನ ರಾಜ್ಯದಲ್ಲೆ ಇದೆ. ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಕೊಡಗಿನ ಟಿ.ಜಾನ್‌ ಸಚಿವರಾಗಿದ್ದರು. ಸಮಾರಂಭವೊಂದರಲ್ಲಿ ಭಾಗಿಯಾಗಿದ್ದ ಜಾನ್‌, ‘‘ಗುಜರಾತ್‌ನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ಏಸುಕ್ರಿಸ್ತ ಕೊಟ್ಟ ಶಾಪವೇ ಕಾರಣ. ಕ್ರೈಸ್ತರಿಗೆ ಕಿರುಕುಳ ಕೊಟ್ಟದ್ದರ ಫಲ ಇದಾಗಿದೆ,’’ ಎಂಬರ್ಥದ ಹೇಳಿಕೆ ನೀಡಿದ್ದರು. ಅದರ ಬೆನ್ನಿಗೇ ಜಾನ್‌ ರಾಜೀನಾಮೆಗೆ ವ್ಯಾಪಕ ಒತ್ತಡ ಬರತೊಡಗಿತು. ಈ ಸನ್ನಿವೇಶವನ್ನು ಕೃಷ್ಣ ಬಹಳ ಚಾಕಚಕ್ಯತೆಯಿಂದ ನಿಭಾಯಿಸಿದ್ದರು. ಜಾನ್‌ ಅವರನ್ನು ಕರೆಯಿಸಿಕೊಂಡ ಕೃಷ್ಣ, ‘‘ಯಾಕೆ ಇಂತಹ ಹೇಳಿಕೆ ನೀಡಿದಿರಿ?,’’ ಎಂದು ಕೇಳಿದರು. ಆಗ ಈಗಿನಷ್ಟು ಟಿವಿ ಮಾಧ್ಯಮಗಳಿರಲಿಲ್ಲ. ಹಾಗಾಗಿ ಹುಲ್ಲುಕಡ್ಡಿ ಹಿಡಿಯಲು ಹೊರಟ ಜಾನ್‌ ತಾವು ಹಾಗೆ ಹೇಳಿಯೇ ಇಲ್ಲವೆಂದರು. ಜಾನ್‌ ಅವರನ್ನು ಪಾಟೀಸವಾಲಿಗೆ ಗುರಿ ಮಾಡುವಾಗ ಅವರ ಹೇಳಿಕೆ ಪ್ರಸಾರವಾಗಿದ್ದ ಸುದ್ದಿವಾಹಿನಿಯೊಂದರಿಂದ ಕೃಷ್ಣ ಕ್ಲಿಪಿಂಗ್ಸ್‌ ತರಿಸಿಕೊಂಡಿದ್ದರು. ಸಂಪುಟದ ಹಿರಿಯ ಸದಸ್ಯರ ಮಧ್ಯೆ ಜಾನ್‌ರನ್ನು ಕುಳ್ಳಿರಿಸಿಕೊಂಡು ವಿಡಿಯೊ ಪ್ಲೇ ಮಾಡಿಸಿದ್ದರು. ಅದನ್ನು ನೋಡುತ್ತಿದ್ದಂತೆ ಜಾನ್‌ ಮುಖ ಕಪ್ಪಿಟ್ಟಿತ್ತು. ಜಾನ್‌ ಕೂಡಲೇ ರಾಜೀನಾಮೆ ಕೊಡಬೇಕೆಂದು ಸಂಪುಟದ ಹಿರಿಯರು ಸ್ಥಳದಲ್ಲೇ ತಾಕೀತು ಮಾಡಿದ್ದರು. ಅಷ್ಟು ಹೊತ್ತಿಗೆ ದಿಲ್ಲಿಯ ಹೈಕಮಾಂಡ್‌ನಿಂದಲೂ ಫೋನ್‌ ಬಂದಿತ್ತು. ತಕ್ಷಣವೇ ರಾಜೀನಾಮೆ ಪತ್ರ ಸಲ್ಲಿಸುವಂತೆ ಅಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿಯಾಗಿದ್ದ ಗುಲಾಂ ನಬಿ ಆಜಾದ್‌ ಫೋನ್‌ ಮೂಲಕ ಜಾನ್‌ ಅವರಿಗೆ ಆದೇಶಿಸಿದ್ದರು. ಜಾನ್‌ ಫೋನ್‌ ರಿಸೀವರ್‌ ಕೆಳಗಿಡುತ್ತಿದ್ದಂತೆ ರಾಜೀನಾಮೆ ಪತ್ರಕ್ಕೆ ಸಹಿ ಹಾಕುವಂತೆ ಮುಖ್ಯಮಂತ್ರಿ ಸೂಚಿಸಿದ್ದರು. ಹಾಗಾಗಿ ಕಣ್ಣು ಮಿಟುಕಿಸುವಷ್ಟರಲ್ಲಿ ಜಾನ್‌ ಮಾಜಿ ಸಚಿವರಾಗಿ ಹೋಗಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ಸರಕಾರ ಮತ್ತು ಪಕ್ಷಕ್ಕೆ ಮುಜುಗರ ತಂದ ಸಚಿವರ ರಾಜೀನಾಮೆ ತೆಗೆದುಕೊಳ್ಳಲು ಕೃಷ್ಣ ಯೋಜಿತವಾಗಿ ಖೆಡ್ಡಾ ತೋಡಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದು ಜಾನ್‌ ಸಂಪುಟದಿಂದ ನಿರ್ಗಮಿಸಿದ್ದರು. ನಂತರ ಜಾನ್‌ ಕಡೆಯಿಂದಲೇ ರಾಜೀನಾಮೆ ನಿರ್ಧಾರವನ್ನು ಮಾಧ್ಯಮದೆದುರು ಕೃಷ್ಣ ಪ್ರಕಟ ಮಾಡಿಸಿದ್ದರು. ಈ ಮೂಲಕ ಜಾನ್‌ ಪ್ರಕರಣದಲ್ಲಿ ಅಂದಿನ ಸಿಎಂ ಒಳ್ಳೆಯ ಸಂದೇಶ ರವಾನಿಸಿದ್ದರು. ಸಂಪುಟದಲ್ಲಿದ್ದ ಘಟಾನುಘಟಿ ಸಚಿವರುಗಳೂ ಕೃಷ್ಣ ಅವರಿಗೆ ಸಹಕರಿಸಿದ್ದರಿಂದ ಅವರು ಅಂತಹ ದೃಢ ನಿಲುವು ತಳೆಯಲು ಸಾಧ್ಯವಾಗಿತ್ತೆಂದು ಅಂದಿನ ರಾಜಕೀಯವನ್ನು ಮೆಲುಕು ಹಾಕುವವರು ಹೇಳುತ್ತಾರೆ.
ಆತ್ಮಸಾಕ್ಷಿಗಿಂತ ಬೇರೇನು ಬೇಕು?
ತೀರ ಇತ್ತೀಚೆಗೆ ರಾಜ್ಯ ವಿಧಾನಸಭೆಯಲ್ಲೇ ಕಹಿ ಘಟನೆಯೊಂದು ನಡೆದಿತ್ತು. ಹೊಸದಾಗಿ ಸಂಪುಟ ಸೇರ್ಪಡೆಯಾದ ಯುವ ಸಚಿವರು ಮಾತನಾಡುತ್ತಿದ್ದಾಗ ಮಧ್ಯೆ ಪ್ರವೇಶಿಸಿದ್ದ ಹಿರಿಯ ಸದಸ್ಯರು ಕೋಪತಾಪ ಪ್ರದರ್ಶಿಸಿದ್ದರು. ಅಂದು ಅವರು ಸಭಾಧ್ಯಕ್ಷರ ಪೀಠದೆದುರು ಧಾವಿಸಿ ಬಂದು ಬಳಸಿದ ಭಾಷೆ ಅತ್ಯಂತ ಕೆಳದರ್ಜೆಯದ್ದಾಗಿತ್ತು. ಎಲ್ಲವೂ ಅನ್‌ಪಾರ್ಲಿಮೆಂಟರಿ ಪದಗಳು. ವಾಸ್ತವದಲ್ಲಿ ಆ ಸದಸ್ಯರು ನ್ಯಾಯ, ನೀತಿ, ಧರ್ಮ ಹಾಗೂ ಸಾರ್ವಜನಿಕ ಜೀವನದಲ್ಲಿನ ಭೂಷಣಪ್ರಾಯ ನಡವಳಿಕೆಯ ಬಗ್ಗೆ ಪುಂಖಾನುಪುಂಖ ಉಪದೇಶ ಕೊಡುವುದರಲ್ಲಿ ಪ್ರಸಿದ್ಧರು. ಸದನದ ಸದಸ್ಯರು ತಮ್ಮ ಆಸನದಿಂದ ಎದ್ದು ನಿಂತು ಮಾತನಾಡಿದಾಗ ರೆಕಾರ್ಡ್‌ ಆಗುತ್ತದೆ. ಧರಣಿಯಲ್ಲಿದ್ದಾಗ ಹೇಳುವುದು ಕಡತಕ್ಕೆ ಹೋಗುವುದಿಲ್ಲ. ಹಾಗಾಗಿ ತಾವು ಸಾಕ್ಷಾತ್‌ ಸತ್ಯ ಹರಿಶ್ಚಂದ್ರನ ವಂಶಸ್ಥರಂತೆ ಭ್ರಮಾವಲಯ ಸೃಷ್ಟಿಸುವ ಬುದ್ಧಿವಂತರಾದ ಆ ಹಿರಿಯ ಸದಸ್ಯರು ಆಡಿದ ಕೀಳಭಿರುಚಿಯ ಮಾತುಗಳು ವಿಧಾನಸಭೆಯ ಕಡತದಲ್ಲಿ ದಾಖಲಾಗಲಿಲ್ಲ. ಹಾಗಾಗಿ ಅವರು ತಾಂತ್ರಿಕವಾಗಿ ಲೋಕಾಪವಾದದಿಂದ ಪಾರಾದರು. ಆದರೆ, ಅವರ ಆತ್ಮಸಾಕ್ಷಿ ಬೇರೆಯದನ್ನೇ ಹೇಳಿರಬಹುದು. ಇದಲ್ಲದೆ ಸದನದಲ್ಲಿ ಮೇಧಾವಿಯಾದ ಹಿರಿಯ ಸದಸ್ಯರು ಸಾರ್ವಜನಿಕ ಜೀವನಕ್ಕೆ ತಕ್ಕುದಲ್ಲದ ಪದ ಪ್ರಯೋಗ ಮಾಡಿದ್ದನ್ನು ಕಿವಿಯಾರೆ ಕೇಳಿಸಿಕೊಂಡವರು ಇದ್ದಾರಲ್ಲ? ಅಂಥವರ ದೃಷ್ಟಿಯಲ್ಲಾದರೂ ಈ ಮಹಾನುಭಾವರು ಚೊನ್ನ ಕಳಚಿಕೊಂಡು ಮರ್ಯಾದೆ ಕಳೆದುಕೊಂಡಂತೆ ಆಗುವುದಿಲ್ಲವಾ? ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಬೆಳಗಾವಿಯ ಸುವರ್ಣಸೌಧದ ಎದುರು ಪ್ರತಿಭಟಿಸಿದ್ದ ರೈತ ಮಹಿಳೆಯನ್ನು ಉದ್ದೇಶಿಸಿ ಇಷ್ಟು ದಿನ ಎಲ್ಲಿ…. ಅಮ್ಮಾ? ಎಂದು ವ್ಯಂಗ್ಯವಾಡಿದ್ದರು. ಎಚ್‌ಡಿಕೆಯವರ ಅದೊಂದು ಹೇಳಿಕೆ ಅವರ ಘನತೆಗೆ ಭಾರಿ ಕುಂದು ತಂದಿತ್ತು.
ಸಚಿವರು, ಶಾಸಕರು ಅಥವಾ ಇನ್ಯಾರೇ ಗಣ್ಯಮಾನ್ಯರಾಗಲಿ. ಸಾರ್ವಜನಿಕ ಜೀವನದಲ್ಲಿ ಇರುವವರು ಸಮಾಜಕ್ಕೆ ಮಾದರಿಯಾಗಬೇಕು. ವಿಶೇಷವಾಗಿ ಜನಸಾಮಾನ್ಯರ ನಡುವೆ ಇರುವಾಗ ತಮ್ಮ ಪ್ರಾಮಾಣಿಕ ಮತ್ತು ಕಾಳಜಿಪೂರತ ನಡವಳಿಕೆಯಿಂದಲೇ ಪ್ರಕಾಶಿತರಾಗಬೇಕು. ರೈತರು, ಬಡವರು ಹಾಗೂ ಇನ್ನಿತರ ಕಷ್ಟನಷ್ಟ ಅನುಭವಿಸುತ್ತಿರುವವರು ನಮ್ಮ ವ್ಯವಸ್ಥೆಯಲ್ಲಿ ಮಂತ್ರಿಗಳು, ಅಧಿಕಾರಿಗಳ ಎದುರು ಅಹವಾಲು ಹೇಳಿಕೊಳ್ಳುವುದು ಸಹಜ. ಅದನ್ನು ಕೇಳಿಸಿಕೊಳ್ಳುವ ತಾಳ್ಮೆಯೂ ಅಧಿಕಾರಸ್ಥರಲ್ಲಿ ಇಲ್ಲವೆಂದಾದರೆ ಅಂಥವರು ಮುಂದುವರಿಯಲು ಯೋಗ್ಯಾರಾ? ಎಂದು ಅವರೇ ಆತ್ಮಾವಲೋಕನ ಮಾಡಿಕೊಳ್ಳಬೇಕು. ಮಾಧುಸ್ವಾಮಿಯವರ ವಿವಾದಾತ್ಮಕ ಹೇಳಿಕೆಯ ಪ್ರಕರಣ ಇಷ್ಟನ್ನೆಲ್ಲ ಕೆದಕಬೇಕಾಯಿತು. ಸಾರ್ವಜನಿಕ ಬದುಕಿನಲ್ಲಿ ಮಾಡಬಾರದ್ದನ್ನು ಮಾಡಿದ, ಆಡಬಾರದ್ದನ್ನು ಆಡಿದ ಎಷ್ಟೋ ಮಂದಿ ಹೇಳ ಹೆಸರಿಲ್ಲದೇ ಚರಿತ್ರೆಯ ಕೆಸರಿನಲ್ಲಿ ಕಾಲವಾಗಿ ಹೋಗಿದ್ದಾರೆ. ಕೆಲವರು ಬೇರೆ ಬೇರೆ ಕಾರಣದಿಂದ ಭಂಡತನಕ್ಕೆ ಬಿದ್ದು ದಕ್ಕಿಸಿಕೊಂಡಿದ್ದಾರೆ. ಆದರೆ, ಅದು ಸ್ವೀಕಾರಾರ್ಹವಲ್ಲ. ಅನುಮಾನವೇ ಬೇಡ. ಮಾಧುಸ್ವಾಮಿ ಉತ್ತಮ ಸಂಸದೀಯ ಪಟು. ಸಮಾಜವಾದಿಯಾದ ಅವರು ರಾಮಕೃಷ್ಣ ಹೆಗಡೆ, ಎಸ್‌.ಆರ್‌.ಬೊಮ್ಮಾಯಿ, ಜೆ.ಎಚ್‌.ಪಟೇಲರಂತಹ ದಿಗ್ಗಜರ ಒಡನಾಟ ಹೊಂದಿದ್ದರು. ಈ ನಾಯಕರ ಚಿಂತನೆ, ನಡವಳಿಕೆಯನ್ನೊಮ್ಮೆ ನೆನಪಿಸಿಕೊಂಡರೆ ಅದು ಮಾಧುಸ್ವಾಮಿಯವರ ನೆರವಿಗೆ ಬರಬಹುದು. ಮಾಧುಸ್ವಾಮಿ ಘಟನೆ ಹಿನ್ನೆಲೆಯಲ್ಲಿ ಸಾರ್ವಜನಿಕ ಜೀವನದಲ್ಲಿರುವ ಇತರರೂ ತಮ್ಮ ನಡವಳಿಕೆಯನ್ನು ಜನಪರವಾಗಿ ಪರಿಷ್ಕರಿಸಿಕೊಳ್ಳಲು ಇದು ಸಕಾಲ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top