ಬಸವ ಜಯಂತಿಯ ಶುಭಾಶಯಗಳು

12ನೆಯ ಶತಮಾನದಲ್ಲೇ ಸಮ ಸಮಾಜ, ಸರ್ವೋದಯದ ಸಮಾಜದ ಕನಸು ಕಂಡ ಬಸವಣ್ಣ ಕ್ರಾಂತಿಯನ್ನು ಮೊಳಗಿಸಿ, ಇಡೀ ಜಗತ್ತಿಗೇ ಬೆಳಕಾದರು. ಅಂದು ಬಸವಾದಿ ಶರಣರು ಬಿತ್ತಿದ ವಿಚಾರಗಳು ಇಂದಿನ ಸಮಸ್ಯೆಗಳಿಗೂ ಪರಿಹಾರವನ್ನು ಕಲ್ಪಿಸುವ ಆದರ್ಶದ ಮಾರ್ಗಗಳಾಗಿವೆ. ವರ್ತಮಾನದ ಬಿಕ್ಕಟ್ಟುಗಳು, ತಲ್ಲಣಗಳಿಗೆ ಬಸವಣ್ಣ ಹೇಗೆ ಪ್ರಸ್ತುತ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ನಾಡನ್ನು ಕಟ್ಟುವ ಕಲ್ಯಾಣದ ಪ್ರಜ್ಞೆ ಬಸವಣ್ಣ

– ಡಾ. ಬಿ.ವಿ.ವಸಂತಕುಮಾರ್
ಬಸವಣ್ಣ ಎಂಬುದು ಒಂದು ವ್ಯಕ್ತಿಯ ಹೆಸರು ಮಾತ್ರವಲ್ಲ, ಬಸವಣ್ಣ ಎಂಬುದು ಅವಿನಾಶಿಯಾದ ಅನಂತತೆಯ ಘನ ವ್ಯಕ್ತಿತ್ವವದ ಹೆಸರು. ಛಿದ್ರಗೊಂಡ ಮನಸ್ಸನ್ನು, ಸಮಾಜವನ್ನು, ದೇಶವನ್ನು ಒಂದುಗೂಡಿಸುವ ಕೂಡಲಸಂಗಮದ ಮತ್ತೊಂದು ಹೆಸರು ಬಸವಣ್ಣ. ಬಾಧೆಗೊಂಡ ತನು ಮನಗಳನ್ನು ಜಾತಿ, ಮತ, ಪಂಥಗಳನ್ನು, ಸಾಮಾಜಿಕ, ಆರ್ಥಿಕ, ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ ಬದಕುನ್ನು ನಿರ್ಬಾಧೆಗೊಳ್ಳುವಂತೆ ಮಾಡುವ ಸಮಾಜ ಚಿಕಿತ್ಸಕ ಬಸವಣ್ಣ. ಹಾಗಾಗಿ, ಬಸವಣ್ಣ ಎಂದರೆ, ಕಲ್ಯಾಣ ಕಟ್ಟುವ ಕಲ್ಯಾಣದ ಪ್ರಜ್ಞೆ. ‘‘ತನ್ನಾತ್ಮ ತನಗೆ ಹಗೆಯಾದ ಮತ್ತೆ ಬಿನ್ನಾಣವುಂಟೆ, ಮಹಾದಾನಿ ಕೂಡಲಸಂಗಮದೇವಾ?’’ ಎಂದು ಪ್ರಶ್ನಿಸುವ ಮೂಲಕ ನಾವೇ ನಮ್ಮ ಆತ್ಮವೇ ನಮಗೆ ಹಗೆಯಾದರೆ, ‘ಬಿನ್ನಾಣ’ ಇರುವುದೇ? ಎಂಬ ಪ್ರಶ್ನೆ ಅಂದಿಗೆ ಎಷ್ಟು ಪ್ರಸ್ತುತವಾದುದೋ ಇಂದಿಗೂ ಅಷ್ಟೇ ಪ್ರಸ್ತುತ. ಬಿನ್ನಾಣ ಎಂಬ ಪದಕ್ಕೆ ವಿಶೇಷವಾದ ಜ್ಞಾನ, ಗಾಢವಾದ ತಿಳಿವಳಿಕೆ, ಕೌಶಲ್ಯ, ನೈಪುಣ್ಯ, ಚಮತ್ಕಾರದಿಂದ ದೊರಕಿದುದು, ಸೊಬಗು, ವಿನೋದ ಎಂಬರ್ಥಗಳಿವೆ. ನಮ್ಮ ಆತ್ಮವೇ ನಮಗೆ ವೈರಿಯಾದರೆ, ಜ್ಞಾನವಾಗಲೀ, ಕೌಶಲ್ಯವಾಗಲೀ, ಸೌಂದರ್ಯವಾಗಲೀ, ಒಣಪು ವೈಯ್ಯಾಗಳಾಗಲೀ, ಸಂತೋಷವಾಗಲೀ ಇರುವುದು ಸಾಧ್ಯವೇ ಎಂಬ ಪ್ರಶ್ನೆ, ಇಂದು ನಾವೆಲ್ಲರೂ ಕೊರೊನಾ ಮಹಾಮಾರಿ ಸಂಕಟವನ್ನು ಅನುಭವಿಸುತ್ತಿರುವಾಗ ತೀವ್ರವಾಗಿ ಕಾಡುತ್ತಿದೆ. ನಮ್ಮ ವೈರಿ ಕೊರೊನಾ ಅಲ್ಲ. ನಮ್ಮ ವೈರಿ ನಾವೇ ಆಗಿದ್ದೇವೆ. ಇಂದು ನಾವು ಏನನ್ನು ಅನುಭವಿಸುತ್ತಿದ್ದೇವೆಯೋ ಅದಕ್ಕೆ ಕಾರಣ ನಾವು ಮಾಡಿದ ಆತ್ಮವಿನಾಶದ, ಪ್ರಕೃತಿ ವಿನಾಶದ ಜೀವನಮಾರ್ಗವಾಗಿದೆ. ಇಂದು ನಾವು ನಮ್ಮ ಆತ್ಮವೇ ನಮಗೆ ವೈರಿಯಾಗಿದೆ. ಇದನ್ನು ಗೆದ್ದು ಸರಿದಾರಿಗೆ ತರಬಲ್ಲ ಏಕೈಕ ದಾರಿ ಎಂದರೆ, ಜಾತಿ, ಮತ, ಪ್ರಾಂತ, ಭಾಷೆ, ಬಣ್ಣ, ಲಿಂಗ, ಹಣ, ಅಂತಸ್ತು, ವಿದ್ಯೆ ಇನ್ನೂ ತರತಮಗಳಿಂದ ಛಿದ್ರಛಿದ್ರಗೊಂಡು ದ್ವೇಷಾಸೂಯಗಳಿಂದ ಪರಸ್ಪರ ಕಾಲೆಳೆದುಕೊಳ್ಳುತ್ತಾ ಪತನಗೊಂಡು ನೋವನ್ನು ಅನುಭವಿಸುತ್ತಿರುವ ನಾವು ಒಂದಾಗಿ ‘‘ಇವ ನಮ್ಮ ಇವ ನಮ್ಮವ’’ ಎಂದು ದುಡಿದು ಗಳಿಸಿ, ಹಂಚಿ, ಉಂಡು ಸುಖ, ನಿತ್ಯ ಸುಖಪಡುವುದೊಂದೇ ದಾರಿ. ಅದು ಕಲ್ಯಾಣದ ಹೆದ್ದಾರಿ.
ಹಾಗಾಗಿ ಬಸವಣ್ಣ ‘‘ಹೆರರ ಬಾಧಿಸುವುದನು ತನು ಕೆಡೆವನ್ನಕ್ಕ ಮಾಣದು, ಹೆರರ ಛಿದ್ರಿಸುವುದನ್ನು ಮನ ಕೆಡೆವನ್ನಕ್ಕ ಮಾಣದು, ಅಕಟಕಟಾ, ಸಂಸಾರಕ್ಕೆ ಆಸತ್ತೋ ಕೂಡಲಸಂಗಮದೇವ’’ ಎಂದು ಈ ಶರೀರ ಬೀಳುವವರೆಗೂ ಇತರರನ್ನು ಹಿಂಸಿಸುವುದನ್ನು ಬಿಡುವುದಿಲ್ಲ. ಈ ಮನಸ್ಸು ಉರುಳಿ ಹೋಗುವವರೆಗೂ ಇತರರ ಬದುಕನ್ನು ತುಂಡು ಮಾಡುವುದನ್ನು ಬಿಡುವುದಿಲ್ಲ. ಅಯ್ಯೊಯ್ಯೊಇಂಥ ಸಂಸಾರಕ್ಕೆ ಬೇಸರಗೊಂಡೇ ಜುಗುಪ್ಸೆಪಟ್ಟೆ ಎಂದಿದ್ದಾರೆ. ಇತರರನ್ನು ಹಿಂಸಿಸುವ, ಇತರರನ್ನು ಛಿದ್ರಿಸುವ ತನು, ಮನ, ಸಂಸಾರಗಳಿಗೆ, ತುಕ್ಡೇ ಗ್ಯಾಂಗ್‌ಗಳಿಗೆ, ದಿಕ್ಕಾರ ಹೇಳಿದ ಬಸವಣ್ಣನವರು ಹಿಂಸೆ ಹಾಗೂ ಬೇಧ ಭಾವಗಳನ್ನು ದಿಕ್ಕರಿಸಿ ‘‘ಶೂಲದ ಮೇಲಣ ವಿಭೋಗ ವೇನಾದದೇನೋ?’’ ಎಂದು ‘ಶೂಲದ ಮೇಲಿನ ವೈಭವದ’ ಹುಸಿತನವನ್ನು ಗುರುತಿಸಿ, ಸಾವು-ನೋವು-ಸಂಕಟಗಳಿಗೆ ಕಾರಣವಾಗುವ ಎಂಥಾ ಸುಖವೇ ಆದರೂ ಅದು ಬೇಡ ಎಂದು ನಿರಾಕರಿಸಿ, ಸರ್ವರ ಕಲ್ಯಾಣಕ್ಕೆ ಕಾರಣವಾಗುವ ‘ಶಿವನ ಮೇಲಣ ವಿಭೋಗ’ದ ಕಲ್ಯಾಣವನ್ನು ಸೃಷ್ಟಿಸುತ್ತಾರೆ. ಮಾನವ ಬಾಂಬು, ಕೊರೊನಾ ಬಾಂಬು ಎಂಬ ಪದಗಳನ್ನು ಕೇಳುವಾಗ, ಅವುಗಳನ್ನು ಕಾಣುವಾಗ, ‘‘ಶೂಲದ ಮೇಲಿನ ವಿಭೋಗ’’ ‘‘ಹೆರರ ಬಾಧಿಸುವುದು’’ ‘‘ಹೆರರ ಛಿದ್ರಿಸುವುದು’’ ಎಂಬ ವಾಕ್ಯಗಳನ್ನು ನಮ್ಮ ಕಾಲಕ್ಕೆ ಹೇಳಿದಂತೆ ಎನಿಸುತ್ತದೆ. ಹಾಗಾಗಿ, ಬಸವಣ್ಣನ ಪ್ರಜ್ಞೆ, ಪ್ರೀತಿ, ಕ್ರಿಯೆ ಅವು ಸಾರ್ವಕಾಲಿಕವಾದುವುಗಳಾಗಿವೆ. ಸರ್ವ ದೇಶಗಳ ಕಲ್ಯಾಣವು ಬಸವಣ್ಣನ ಕಲ್ಯಾಣದ ಪ್ರಜ್ಞೆ ಹಾಗೂ ಕಲ್ಯಾಣದ ಮಾರ್ಗದಲ್ಲಿ ಅಡಕವಾಗಿದೆ. ಎಂದು ನಾವು ಲೌಕಿಕ ಜೀವನವೇ ಸರ್ವಸ್ವ ಎಂದು ತಿಳಿದು ಸಂಪೂರ್ಣ ಲೌಕಿಕರಾದೆವೋ, ಜಡರಾದೆವೋ, ಅನಾತ್ಮವಾದಿಗಳಾಗದೆವೋ ಅಂದೇ ನಮ್ಮ ಆತ್ಮ ನಮಗೇ ಹಗೆಯಾಯಿತು. ‘‘ಹಗೆ ಪುಟ್ಟಿದಂದೇ ಕೈದುಗಳು ಮಸೆದಿರ್ದವು ಕಣಾ,’’ ಎಂಬ ಧರ್ಮರಾಜ ಮಾತಿನಂತೆ ನಮ್ಮ ತನ, ಮನಗಳ ತುಂಬ ಶಸಾಸಗಳೇ ವಿಜೃಂಭಿಸುತ್ತಿವೆ. ಕೊರೊನಾದಂಥ ವೈರಾಣುವನ್ನೂ ಒಂದು ಆಯುಧ ಎಂದು ತಿಳಿಯುತ್ತಿರುವ ಮನುಷ್ಯರು, ದೇಶಗಳು ನಮ್ಮ ನಡುವೆ ಇರುವಾಗ ಕಲ್ಯಾಣದ ನಾಡನ್ನು ಕಟ್ಟುವುದಾದರೂ ಹೇಗೆ?, ನಾವಿಂದು ಗಂಭೀರವಾಗಿ ಯೋಚಿಸಬೇಕಾಗಿದೆ. ಶೂಲದ ಮೇಲಣದ ವಿಭೋಗ ಎಂಬುದು ಸುಖದ ಹೆಸರಿನಲ್ಲಿರುವ ಸಾವ ಅಲ್ಲದೇ ಮತ್ತೇನೂ ಅಲ್ಲ. ಸಾವು ಯಾರನ್ನೂ ಬಿಟ್ಟಿಲ್ಲ.
ವಿಧಿ ಅಥವಾ ಮಾಯೆ ‘‘ನಾನೊಂದು ನೆನೆದೊಡೆ ತಾನೊಂದು ನೆನವುದೆ’’ ‘‘ಕೂಡಲಸಂಗನ ಕೂಡಿಹೆನೆಂದಡೆ ತಾನೆನ್ನ ಮುಂದುಗೆಡಿಸಿತ್ತು ಮಾಯೆ’’ ಎಂಬ ಬಸವಣ್ಣನವರ ವಚನದ ಸಾಲುಗಳನ್ನು ಓದುವಾಗ ‘ಮಾಯೆ’ ಪದದ ಬದಲು ‘ಕೊರೊನಾ’ ಎಂಬ ಪದ ಹಾಕಿದಾಗ ನಾವೊಂದು ಬಗೆದರೆ ಅದೊಂದು ಬಗೆದಿರುವುದು ಇಡೀ ವಿಶ್ವದ ಭವಿಷ್ಯವನ್ನು ಕೆಡಿಸಿರುವುದು ನಿಚ್ಚಳವಾಗುತ್ತದೆ. ಇಂಥ ವಿನಾಶಕಾರಿ ವರ್ತಮಾನಕ್ಕೆ ಬಸವಣ್ಣನವರ ಭಕ್ತಿ ಮಾರ್ಗ, ಅರಿವಿನ ಮಾರ್ಗ, ಕಲ್ಯಾಣದ ನಾಡು ನಮ್ಮನ್ನು ವಿಕಾಸದತ್ತ ಕೊಂಡೊಯ್ಯುತ್ತದೆ. ಇಡೀ ವಿಶ್ವದ ಶಾಂತಿ ಎಂಬುದು ಮನುಷ್ಯನ ಮನಸ್ಸಿನ ಶಾಂತಿಯಲ್ಲಿ ಅಡಗಿದೆ. ಅಶಾಂತವಾದ ಮನಸ್ಸು ಅಶಾಂತವಾದ ಬದುಕು ಮತ್ತು ಅಶಾಂತವಾದ ಜಗತ್ತಿಗೆ ಕಾರಣವಾಗುತ್ತದೆ. ಶಾಂತವಾದ ಮನಸ್ಸುಗಳು ಪ್ರಶಾಂತವಾದ ಬದುಕು ಹಾಗೂ ಜಗತ್ತಿಗೆ ಕಾರಣವಾಗುತ್ತವೆ. ಹಾಗಾಗಿ, ಬಸವಣ್ಣ ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ ಎಂದಿದ್ದಾರೆ. ನಮ್ಮ ನಮ್ಮ ತನುಮನಗಳು ಸಮಾಧಾನದಲ್ಲಿ ಇರದಿದ್ದರೆ ಇತರ ತನುಮನಗಳಿಗೆ ಸಮಾಧಾನ ನೀಡಲಾರೆವು. ಇಂದು ಎಲ್ಲೆಲ್ಲೂ ಅಸಮಾಧಾನದ ತನು ಮನಗಳು, ಅಸಮಾಧಾನದ ಜಾತಿ, ಮತ, ಪಂಥ, ಪಕ್ಷ, ದೇಶಗಳು. ಹೀಗಿರುವಾಗ ಯಾರು ಯಾರಿಗೆ ಸಮಾಧಾನ ಹೇಳುವುದು? ಅವರವರು ಅವರವರ ತನು ಮನ, ಮನೆ, ಜಾತಿ, ಮತ, ಪಕ್ಷ, ಪಂಥ, ದೇಶಗಳನ್ನು ಸ್ವಯಂ ನಿಯಂತ್ರಿಸಿಕೊಂಡು ಸಂತೈಸಿಕೊಂಡು ಬದುಕದಿದ್ದರೆ ಕಲ್ಯಾಣ ರಾಜ್ಯವನ್ನಾಗಲೀ, ಕಲ್ಯಾಣದ ಮನುಷ್ಯರನ್ನಾಗಲೀ ನಾವು ಕಾಣುವುದಕ್ಕೆ ಸಾಧ್ಯವಾಗುವುದಿಲ್ಲ. ಆದ್ದರಿಂದ ‘‘ಲೋಕದಲಿ ಹುಟ್ಟಿದ ಬಳಿಕ ಸ್ತುತಿ ಬಂದಡೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿಬೇಕು’’ ಎಂಬ ಅಕ್ಕ ಮಹಾದೇವಿಯ ಮಾತು ‘‘ಆಹಾ ಮನವೇ ಸಂತೈಸಿಕೋ ನಿನ್ನ ನೀನೇ’’ ಎಂಬ ನೀಲಮ್ಮನ ಮಾತು ಮನನೀಯ.
– ಮೇಲಾಗಿ ನರಕದಲ್ಲಿ ಓಲಾಡಲಾರೆನು –
ಇಂದು ವಿಶ್ವವು ತೀವ್ರವಾಗಿ ನರಳುತ್ತಿರುವುದು ನಾನು ಮೇಲು, ನಾನೇ ಶ್ರೇಷ್ಠ, ನನ್ನ ದೇವರು, ಮತ, ದೇಶಗಳೇ ಶ್ರೇಷ್ಠ ಎಂದು ಕರೆಸಿಕೊಳ್ಳುವ ಹುಚ್ಚು ಕುದುರೆಯ ಯುದ್ಧದಾಹಿ ಓಟದಿಂದ! ಒಬ್ಬ ಮನುಷ್ಯನಿಂದ ಹಿಡಿದು ಒಂದು ಜಾತಿ, ಮತ, ದೇಶಗಳೂ, ‘ಮೇಲರಿಮೆಯ’ ರೋಗಕ್ಕೆ ಸಿಲುಕಿ ನರಳುತ್ತಿವೆ. ಹಿಂದೂಗಳಲ್ಲಿ ಬ್ರಾಹ್ಮಣ- ಅಸ್ಪೃಸ್ಯರಾಗಿ ಬಲಗೈ-ಎಡಗೈವರೆಗೆ ಶ್ರೇಣೀಕರಣಗೊಂಡ ಜಾತಿ ಪರಸ್ಪರನ್ನೂ ಛಿದ್ರಗೊಳಿಸಿ ಬಾಧಿಸುತ್ತಿದೆ. ಇದಕ್ಕೆ ಬಸವಣ್ಣ 12ನೆಯ ಶತಮಾನದ ಮಹಾಮನೆಯಲ್ಲಿ ಮಹಾಮನಸ್ಸುಗಳನ್ನು ನಿರ್ಮಿಸುವ ಮೂಲಕ ಚಿಕಿತ್ಸೆ ನೀಡಿದರು. ಸ್ವತಃ ಬ್ರಾಹ್ಮಣರ ಮನೆಯಲ್ಲಿ ಹುಟ್ಟಿ, ಅಗ್ರಹಾರದ ಪರಿಸರದಲ್ಲಿ ಬೆಳೆದು ಬಂದು ಒಂದು ಕಡೆ ಉತ್ತರ ಭಾರತದಲ್ಲಿ ಘಜ್ನಿ ಮಹಮ್ಮದನಂಥವರು ಕ್ರೂರದಾಳಿಗಳನ್ನು ಮತ್ತೊಂದೆಡೆ ಜಾತಿವಾದಿಗಳ ಕ್ರೂರ ನಡವಳಿಕೆಗಳನ್ನು ಕಂಡ ಬಸವಣ್ಣ ಎರಡಕ್ಕೂ ಏಕಕಾಲದಲ್ಲಿ ಪರಿಹಾರ ಒದಗಿಸಿದ್ದಾರೆ. ಅನ್ಯರ ಆಕ್ರಮಣಗಳನ್ನು ತಡೆಯುವುದಕ್ಕೆ ಸ್ವಧರ್ಮೀಯರ ಐಕ್ಯತೆ, ಅತ್ಯಗತ್ಯ. ಅಂಥ ಐಕ್ಯತೆಯನ್ನು ಸಾಧಿಸಲು ಸರ್ವಜಾತಿ ಮತದವರ ನಡುವೆ ಸೋದರತ್ವ ಭಾವವೂ ಅತ್ಯಗತ್ಯ. ಹಾಗಾಗಿ 12ನೆಯ ಶತಮಾನದ ಶರಣರು ಇಷ್ಟಲಿಂಗ ಧಾರಣೆಯ ಮೂಲಕ ಜಾತಿ ಜಾತಿಗಳ ನಡುವಿನ ಅಡ್ಡಗೋಡೆಗಳನ್ನು ಕೆಡವಿದರು. ಅದೇ ಹೊತ್ತಿನಲ್ಲಿ ದೇಹವನ್ನೇ ದೇವಾಲಯವನ್ನಾಗಿಸುವ ಮೂಲಕ ಯಾವ ಆಕ್ರಮಣಕಾರಿ ವಿಗ್ರಹ ಭಂಜಕನೂ ತುಂಡು ಮಾಡಲಾಗದ ಲಕ್ಷಾಂತರ ನಡೆದಾಡುವ ದೇವರು, ದೇವಾಲಯಗಳನ್ನು ನಿರ್ಮಿಸಿದರು. ಅದೇ ಹೊತ್ತಿನಲ್ಲಿ ದೇವರು ಮತ್ತು ಭಕ್ತರ ನಡುವಿನ ಮಧ್ಯವರ್ತಿ ಪೂಜಾರಿ, ಮುಲ್ಲಾ, ಪಾದ್ರಿಗಳ ಅಗತ್ಯವಿಲ್ಲದಂತೆ ಮಾಡಿದರು. ಭಕ್ತ ಮತ್ತು ದೇವರ ನಡುವೆ ನೇರ ಸಂಬಂಧ ಏರ್ಪಡುವಂತೆ ಮಾಡಿದ್ದರಿಂದ ಪ್ರತಿಯೊಬ್ಬ ಶರಣ ತನ್ನದೇ ಆದ ಇಷ್ಟದೇವನನ್ನು ಹೊಂದಲು ಸಾಧ್ಯವಾಯಿತು. ಕೂಡಲಸಂಗಮ, ಗುಹೇಶ್ವರ, ಚೆನ್ನಮಲ್ಲಿಕಾರ್ಜುನ ಹೀಗೆ ಯಾವ ಹೆಸರಿನಿಂದ ಕರೆದರೂ ಅದು ಶಿವ ಎಂದು ತಿಳಿಯಲಾಯಿತು. ‘‘ಬಹುರೂಪಿ ಏಕಾತ್ಮ’’ ಪ್ರಜ್ಞೆ ಕಲ್ಯಾಣದ ನಾಡನ್ನು ನಿರ್ಮಿಸಿತು. ಇಲ್ಲಿ ಯಾವದೂ ಮೇಲಲ್ಲ, ಯಾವದೂ ಕೀಳಲ್ಲ. ‘ಭಕ್ತಿ’ ಒಂದು ಇರಲೇಬೇಕಾದ ನಿಯಮ. ಹಾಗಾಗಿ ಇಲ್ಲಿ ಜಡರು, ನರರು, ಲೌಕಿಕರದು ಒಂದು ವರ್ಗ, ಅವರನ್ನು ಭವಿಗಳು ಎಂದು ಕರೆದಿದ್ದಾರೆ. ಚೇತನರು, ಶರಣರು, ಶಿವಪಂಥದವರದು ಮತ್ತೊಂದು ವರ್ಗ, ಅವರನ್ನು ಭಕ್ತರು ಎಂದಿದ್ದಾರೆ. ಆ ಭಕ್ತರು ಲಿಂಗವನ್ನು ದೈವವೆಂದು ನಂಬಿದ್ದಾರೆ. ಜಂಗಮ ‘ಲಿಂಗದ ಬಾಯಿ’ ಎಂದು ವ್ಯವಹರಿಸಿದ್ದಾರೆ. ಜಂಗಮ ಎಂದರೆ ಚಲನಶೀಲವಾದದ್ದು, ಚೈತನ್ಯವಾದದದು. ಲಿಂಗ ಬೇರೆಯಲ್ಲ ಜಂಗಮ ಬೇರೆಯಲ್ಲ. ಗುರುಲಿಂಗಜಂಗಮಕ್ಕೆ ಅರ್ಥ ಪ್ರಾಣ ಅಭಿಮಾನಗಳನ್ನು ಕೊಟ್ಟು ಕಲ್ಯಾಣ ನಾಡನ್ನು ಕಟ್ಟಿದ್ದಾರೆ. ಜಡವಾದಿಗಳು ಮತ್ತು ಎಡವಾದಿಗಳು ಎಂದೂ ಕಲ್ಯಾಣ ನಾಡನ್ನು ಕಟ್ಟಲಾರರು. ಏಕೆಂದರೆ ಅವರಿಗೆ ಆತ್ಮದ ಅನಂತತೆಯಲ್ಲಿ ನಂಬಿಕೆಯಲ್ಲ. ಅವರು ಲೌಕಿಕರಾಗಿಯೇ ಹುಟ್ಟಿ ಲೌಕಿಕರಾಗಿಯೇ ಬದುಕಿ ಲೌಕಿಕರಾಗಿಯೇ ಸಾಯುತ್ತಾರೆ. ಶರಣರ ದೃಷ್ಟಿಯಲ್ಲಿ ಅವರು ಭವಿಗಳು, ಜಡರು, ನರರು! ನಾವು ಸ್ವಾತಂತ್ರ್ಯೋತ್ತರ ಭಾರತವನ್ನು ‘ಧರ್ಮ ನಿರಪೇಕ್ಷ’ ದೇಶವೆಂದು(ಸೆಕ್ಯುಲರ್) ಕರೆದೆವು. ಅದರ ಅರ್ಥ ‘‘ಸರ್ವಧರ್ಮ ಸಮಭಾವ’’ ಎಂದು ಅರಿಯುವಲ್ಲಿ ಸೋತೆವು. ಹಾಗಾಗಿ ಧರ್ಮವನ್ನು ತೊರೆದು ಅಧರ್ಮಿಗಳಾದೆವು ಅಥವಾ ನನ್ನ ದೇವರು, ಪೂಜಾ ಪದ್ಧತಿ, ಪುಸ್ತಕ, ಮತವೇ ಶ್ರೇಷ್ಠ ಅದನ್ನು ನಂಬದವರನ್ನು ಸಹಿಸುವುದಿಲ್ಲ ಮುಗಿಸುತ್ತೇವೆ ಎಂದು ಮತಾಂಧ ಮಾನವ ಬಾಂಬುಗಳು, ಕೊರೊನಾ ಬಾಂಬುಗಳು ಆದೆವು. ‘ಕಲ್ಯಾಣವನ್ನು’ ಕೆಡಿಸಿದೆವು. ಇಂಥ ಕಿಡಗೇಡಿಗಳ ವರ್ತಮಾನಕ್ಕೆ ಬಸವಣ್ಣನ ಕಲ್ಯಾಣದ ಪ್ರಜ್ಞೆ ಮತ್ತು ಪ್ರೀತಿ, ಕ್ರಿಯೆಗಳು ಸರ್ವ ಜಾತಿ-ಮತ-ಪ್ರಾಂತ-ಪಂಥ-ದೇಶದವರಿಗೂ ಅತ್ಯಗತ್ಯ. ಬಸವಣ್ಣನ ‘‘ಮೇಲಾಗಲೊಲ್ಲೆನು ಕೀಳಾಗಲಲ್ಲದೆ/ ಕೀಳಿಂಗಲ್ಲದೆ ಹಯನು ಕರೆವುದೆ?/ ಮೇಲಾಗಿ ನರಕದಲೋಲಾಡಲಾರೆನು/ ನಿಮ್ಮ ಶರಣರ ಪಾದಕ್ಕೆ ಕೀಳಾಗಿರಿಸು / ಮಹಾದಾನಿ ಕೂಡಲಸಂಗಮದೇವಾ’’ ಎಂಬ ಒಂದೇ ಒಂದು ವಚನದ ತತ್ತ್ವವನ್ನು ಸತ್ವವನ್ನು ನಾವು ಅಳವಡಿಸಿಕೊಂಡರೆ ಖಂಡಿತಾ ಕ್ಷಣಾರ್ಧದಲ್ಲಿ ಕಲ್ಯಾಣದ ನಾಡು ನಿರ್ಮಾಣವಾಗುತ್ತದೆ. ಇಂದು ವ್ಯಕ್ತಿಯಿಂದ ಹಿಡಿದು ಅಮೆರಿಕ, ಚೀನಾದಂಥ ದೇಶಗಳವರೆಗೆ ಎಲ್ಲರೂ ‘‘ಮೇಲಾಗಿ ನರಕದಲ್ಲಿ ಓಲಾಡು’’ತ್ತಿದ್ದೇವೆ. ಪ್ರತಿಯೊಬ್ಬರೂ ಇತರರನ್ನು ‘‘ತಮ್ಮ ಪಾದಕ್ಕೆ ಕೀಳಾಗಿಸಿಕೊಳ್ಳುವ’’ ಮೇಲಾಟದಲ್ಲಿ ಮೃಗಗಳಾಗುತ್ತಿದ್ದೇವೆ. ಅಹಂಕಾರದಿಂದ ತುಂಬಿತುಳುಕಾಡುತ್ತ ವಿಚಾರವಾದದ ಮದದಲ್ಲಿ ನಿರಹಂಕಾರದ ಬಗ್ಗೆ ಉಪನ್ಯಾಸ ನೀಡುತ್ತಿದ್ದೇವೆ. ಅವಿವೇಕದಿಂದ ತುಂಬಿ ತುಳುಕಾಡುತ್ತ ವಿದ್ಯಾಮದದಿಂದ ವಿವೇಕದ ಬಗ್ಗೆ ಪುಸ್ತಕ ಬರೆಯುತ್ತಿದ್ದೇವೆ. ನಮ್ಮದು ನಡೆನುಡಿ ಬೇರೆ ಬೇರೆಯಾದ ಬದುಕಿನ ಸಿದ್ಧಾಂತ. ಕನ್ನಡದಲ್ಲಿ ಕೆಲವರು ‘‘ನಮ್ಮ ಬದುಕನ್ನು ನೋಡಬೇಡಿ, ನಮ್ಮ ಬರಹವನ್ನು ಮಾತ್ರ ನೋಡಿ’’ ಎಂದು ಹೇಳಿಕೊಂಡರು. ಇವರು ನನಗೆ ಧರ್ಮ ಗೊತ್ತು ಆಚರಿಸಲಾರೆ, ಅಧರ್ಮವೂ ಗೊತ್ತು. ಆದರೆ ಆಚರಿಸದೇ ಇರಲಾರೆ ಎಂಬ ದುರ್ಯೋಧನನ ಮಾತನ್ನು ನೆನಪಿಸಿದರು. ಇಂಥ ನಡೆ-ನುಡಿ ಬೇರೆಬೇರೆಯಾಗಿದ್ದ ಅಂದಿನ ವಿಚಾರವಾದಿಗಳ, ವಿದ್ಯಾವಂತರ ‘ವಾಗದ್ವೈತ’ವನ್ನು ಬಸವಣ್ಣ ಖಂಡಿಸಿದರು. ಅದರಿಂದ ಹೊರಬಂದು ನುಡಿದರೆ ಮುತ್ತಿನಹಾರದಷ್ಟು ಸುಂದರ, ಮಾಣಿಕ್ಯದ ದೀಪ್ತಿಯಷ್ಟು ಕಾಂತಿಮಯ, ಸ್ಪಟಿಕದ ಸಲಾಕೆಯಷ್ಟು ನೇರ ಮತ್ತು ಪಾರದರ್ಶಕ ಪ್ರಾಮಾಣಿಕವಾಗಿದ್ದು ಲಿಂಗಮೆಚ್ಚಿ ಅಹುದು ಅಹುದು ಎನ್ನುವಂತಿರಬೇಕು. ಆದರೆ ‘‘ನುಡಿಯೊಳಗಾಗಿ ನಡೆಯದಿದ್ದಡೆ ಕೂಡಲ ಸಂಗಮನನದೇವನೆಂತೊಲಿವನಯ್ಯಾ’’ ಎಂಬ ಅತ್ಯಂತ ಶ್ರೇಷ್ಠ ಎಚ್ಚರಿಕೆಯನ್ನೂ ನೀಡಿದ್ದಾರೆ. ಹಾಗಾಗಿ ಬಸವಣ್ಣ ನಮಗೆ ‘‘ನಡೆನುಡಿ ಸಿದ್ಧಾಂತ’’ವನ್ನು ‘‘ಕೃತಿಯ ಅದ್ವೈತ’’ವನ್ನೂ ನೀಡಿದ್ದಾರೆ. ಅಯ್ಯಾ ಎಂದರೆ ಸ್ವರ್ಗ, ಆಚಾರವೇ ಸ್ವರ್ಗ, ಮೃದ ವಚನಗಳೇ ಜಪ. ಇಲ್ಲಿ ಸಲ್ಲುವವನು ಅಲ್ಲಿಯೂ ಸಲ್ಲುವನಯ್ಯಾ ಇಂಥ ಮಾತುಗಳು ನಮ್ಮ ನಮ್ಮ ವಾಟ್ಸ್ಆ್ಯಪ್, ಫೇಸ್‌ಬುಕ್, ದೂರದರ್ಶನ, ಪತ್ರಿಕೆ, ವಿಚಾರ ಸಂಕಿರಣ, ರಾಜಕೀಯ ಹೇಳಿಕೆ, ಮನೆ-ಮನಸ್ಸಿನ ಮಾತಾಡುವ ವಿಧಾನಗಳನ್ನು ಬದಲಿಸಿದ್ದೇ ಆದರೆ ಬಸವಣ್ಣ ನಮ್ಮ ಒಳಗೆ ಪ್ರವೇಶಿಸಿದ್ದಾರೆ ಎಂದರ್ಥ.
‘‘ಅರುಸು ವಿಚಾರ, ಸಿರಿಯು, ಶೃಂಗಾರ, ಸ್ಥಿರವಲ್ಲ ಮಾನವಾ
ಕೆಟ್ಟಿತ್ತು ಕಲ್ಯಾಣ, ಹಾಳಾಯಿತ್ತು ನೋಡಾ
ಒಬ್ಬ ಜಂಗಮದ ಅಭಿಮಾನದಿಂದ
ಚಾಳುಕ್ಯರಾಯನ ಆಳಿಕೆ ತೆಗೆಯಿತ್ತು’’(625)
ಎಂಬ ವಚನದ ಸಾಲುಗಳು ಇಂದಿಗೂ ಅನ್ವಯಿಸುವಂತಿವೆ. ಯಾವುದು ಸ್ಥಿರ, ಯಾವುದು ಸ್ಥಿರವಲ್ಲ ಎಂಬುದು ಇಲ್ಲಿದೆ. ಕಲ್ಯಾಣ ಕೆಟ್ಟರೆ ಅದು ಹೊರಗಿನವರಿಂದಲ್ಲ ಒಳಗಿನವರಿಂದ. ಅದೂ ಒಳಗಿನ ಅಹಂಕಾರದಿಂದ ಹಾಗೂ ಅಭಿಮಾನದಿಂದ! ಎಂಬ ಎಚ್ಚರವೂ ಇಲ್ಲಿದೆ. ‘‘ನಾವೇ ಶ್ರೇಷ್ಠ ನೀವು ಕನಿಷ್ಠ’’ ಎಂದು ಯಾವ ಮನುಷ್ಯ, ಜಾತಿ, ಮತ, ದೇಶ ಯೋಚಿಸುತ್ತದೆಯೋ ಅವು ‘‘ಕಲ್ಯಾಣದ ಕೇಡಿಗೆ’’ ಕಾರಣವಾಗುತ್ತವೆ. ‘‘ಭಕ್ತ ಜಂಗಮರ ನಡುವೆ ಅರ್ಥ ಪ್ರಾಣ ಅಭಿಮಾನದ’’ ಸಿಗುರು ಹುಟ್ಟಿ ಕಾಡಿರುವುದೂ ಬಸವಣ್ಣನಲ್ಲಿ ದಾಖಲಾಗಿದೆ. ಸ್ವಾರ್ಥ ಅವಿವೇಕಗಳು ನಮ್ಮನ್ನು ದುರಹಂಕಾರದ ಕುರುಡರನ್ನಾಗಿಸುತ್ತದೆ. ಈ ಅಜ್ಞಾನದ ಅಂಧಕಾರ ನಮ್ಮನ್ನು ಕ್ರೂರಿಗಳನ್ನಾಗಿಸುತ್ತದೆ. ಹಾಗಾಗಿ ಬಸವಣ್ಣನವರು,
‘‘ಮಾರಿ ಮಸಣಿಯೆಂಬವು ಬೇರಿಲ್ಲ ಕಾಣಿರೋ
ಮಾರಿಯೆಂಬುದೇನು?
ಕಂಗಳು ತಪ್ಪಿ ನೋಡಿದಡೆ ಮಾರಿ
ನಾಲಗೆ ತಪ್ಪಿ ನುಡಿದಡೆ ಮಾರಿ
ನಮ್ಮ ಕೂಡಲ ಸಂಗಮದೇವರ ನೆನಹ ಮರೆದಡೆ ಮಾರಿ’’ (630) ಎಂದಿದ್ದಾರೆ. ನಮ್ಮ ಕಂಗಳ ನೋಟ, ನಾಲಿಗೆಯ ಮಾತು ಸರಿಹೋದರೆ ಕಲ್ಯಾಣ ಸಾಧ್ಯವಾಗುತ್ತದೆ.

(ಲೇಖಕರು ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top