ಠೇವಣಿ ಬಡ್ಡಿ ಇಳಿಯದಿರಲಿ: ಸಂಕಷ್ಟದ ದಿನಗಳಲ್ಲಿ ಉಳಿತಾಯವೇ ಆಸರೆ

ಲಾಕ್‌ಡೌನ್‌ ವಿಸ್ತರಣೆಯಾಗಿರುವ ಹಿನ್ನೆಲೆಯಲ್ಲಿ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ, ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸಲು ಒಟ್ಟು 1 ಲಕ್ಷ ಕೋಟಿ ರೂ.ಗಳ ನಾನಾ ನೆರವಿನ ಪ್ಯಾಕೇಜ್‌ ಅನ್ನು ಶುಕ್ರವಾರ ಘೋಷಿಸಿದೆ. ಇದರ ಪರಿಣಾಮ ಬ್ಯಾಂಕ್‌ಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಹೆಚ್ಚಿನ ಸಾಲ ವಿತರಿಸಲು ಹಣಕಾಸು ಸಿಗಲಿದೆ. ರೈತರು, ಸಣ್ಣ ವ್ಯಾಪಾರಿಗಳು, ಉದ್ದಿಮೆದಾರರಿಗೆ ಬ್ಯಾಂಕ್‌ ಸಾಲ ಸೌಲಭ್ಯ ಹೆಚ್ಚಲಿದೆ. ವಿಶೇಷ ಹಣಕಾಸು ಸಂಸ್ಥೆಗಳಿಗೂ ಹಣ ನೀಡಲಾಗಿದ್ದು, ಕಾಮಗಾರಿಗಳಿಗೆ ನೆರವಾಗಲಿದೆ. ಇದು ಶ್ಲಾಘನೀಯ ಕ್ರಮ. ಇಂಥದೊಂದು ನೆರವಿನ ನಿರೀಕ್ಷೆಯಲ್ಲಿ ದೇಶದ ಆರ್ಥಿಕ ಸನ್ನಿವೇಶ ಇತ್ತು. ಆದರೆ, ಇದೇ ಸಂದರ್ಭದಲ್ಲಿ ಆರ್‌ಬಿಐ ತನ್ನ ರಿವರ್ಸ್‌ ರೆಪೊ ದರವನ್ನು ಶೇ.4ರಿಂದ ಶೇ.3.75ಕ್ಕೆ, ಅಂದರೆ ಶೇ.0.25ರಷ್ಟು ಕಡಿತಗೊಳಿಸಿದೆ. ಇದು ಬ್ಯಾಂಕ್‌ಗಳಿಗೆ ಆರ್‌ಬಿಐ ನೀಡಬೇಕಾಗಿರುವ ಸಾಲದ ಬಡ್ಡಿ ಹಣವಾಗಿದ್ದು, ಇದರ ನೇರ ಪರಿಣಾಮವಾಗಿ ಉಳಿತಾಯ ಖಾತೆಗಳು ಹಾಗೂ ನಿಶ್ಚಿತ ಠೇವಣಿಗಳ ಬಡ್ಡಿಯೂ ಕಡಿತವಾಗಲಿದೆ. ಇದರಿಂದ ಬಡ್ಡಿ ಆದಾಯವನ್ನು ಅವಲಂಬಿಸಿರುವವರಿಗೆ ಆದಾಯ ಖೋತಾ ಆಗಲಿದೆ.

ಆರ್‌ಬಿಐ ಭರವಸೆಯಿಂದ ಬ್ಯಾಂಕ್‌ಗಳು ತಮ್ಮ ಲಾಭಾಂಶವನ್ನೇನೋ ತಗ್ಗಿಸಿಕೊಳ್ಳಬಹುದು. ಆದರೆ, ಠೇವಣಿ ಬಡ್ಡಿದರಗಳಲ್ಲಿ ಇನ್ನೊಮ್ಮೆ ಇಳಿಕೆಯಾಗುವುದು ನಿಶ್ಚಿತ. ಇದು ಉಳಿತಾಯದ ಹಣವನ್ನು ಅವಲಂಬಿಸಿರುವವರಿಗೆ ಬೀಳುವ ಹೊಡೆತ. ಕಳೆದ ಒಂದು ವರ್ಷದಲ್ಲಿ ಆರ್‌ಬಿಐ ಅನೇಕ ಬಾರಿ ಬಡ್ಡಿದರಗಳ ಇಳಿಕೆಗೆ ಕಾರಣವಾಗಿದೆ. ನಿವೃತ್ತಿಯ ನಂತರದ ಜೀವನೋಪಾಯಕ್ಕೆ ಹಲವರು ಅವಲಂಬಿಸಿರುವ ಪಿಪಿಎಫ್‌, ಎನ್‌ಪಿಎಸ್‌ಗಳಿಗೆ ದೊರೆಯುವ ಬಡ್ಡಿಯನ್ನು ಈ ಹಿಂದೆಯೇ ಕಡಿಮೆ ಮಾಡಲಾಗಿತ್ತು. ಈಗ ಇನ್ನೊಮ್ಮೆ ಕಡಿಮೆಯಾದರೂ ಆಶ್ಚರ‍್ಯವಿಲ್ಲ. ಇದನ್ನು ನೋಡಿದರೆ, ಆರ್‌ಬಿಐ ದುಡಿಯುವವರ ಜೀವನದ ಭದ್ರತೆಯ ಹೆಸರಿನಲ್ಲಿ ಇತರ ಠೇವಣಿದಾರರು, ಮಧ್ಯಮ ವರ್ಗದವರ ಬದುಕಿಗೆ ಕೊಳ್ಳಿ ಇಡಲು ಹವಣಿಸುತ್ತಿರುವಂತಿದೆ. ಈ ಹಿಂದೆ ಹೆಚ್ಚಿನ ಸಂಬಳದಾರರಿಗೆ ಇಪಿಎಫ್‌ ಪಾವತಿಯನ್ನು ಐಚ್ಛಿಕ ಮಾಡಿರುವ ಕ್ರಮ ಕೂಡ ಒಟ್ಟು ಅರ್ಥಿಕತೆಗೆ ಹಾಗೂ ಉದ್ಯೋಗಿಯ ಭವಿಷ್ಯಕ್ಕೆ ಆತಂಕ ತಂದಿಟ್ಟಿರುವಂಥದ್ದೇ.

ಭಾರತದಲ್ಲಿದೊಡ್ಡ ಪ್ರಮಾಣದ ಪಿಂಚಣಿದಾರರಿದ್ದಾರೆ. ನಿವೃತ್ತಿಯ ಬಂದ ಬಳಿಕ ಹಣವನ್ನು ಅಥವಾ ತಮ್ಮ ಗಳಿಕೆಯಿಂದ ಉಳಿಸಿದ ಹಣವನ್ನು ಬ್ಯಾಂಕ್‌ನಲ್ಲಿಟ್ಟು, ಅದರಿಂದ ಬರುವ ಬಡ್ಡಿಯನ್ನು ಆಧರಿಸಿ ಜೀವನ ಸಾಗಿಸುವವರಿದ್ದಾರೆ. ಬಡ್ಡಿ ದರಗಳು ಸತತ ಇಳಿಯುತ್ತ ಹೋದರೆ ಇವರ ಬದುಕು ದುರ್ಭರವಾಗುತ್ತದೆ. ಇವರ ಆದಾಯ ಕುಸಿದರೆ ಅದೇ ಪ್ರಮಾಣದಲ್ಲಿ ದಿನಸಿ ವಸ್ತುಗಳು, ಅಗತ್ಯ ಸೇವೆಗಳ ವೆಚ್ಚವೇನೂ ಕಡಿಮೆಯಾಗುವುದಿಲ್ಲ. ಹಿರಿಯ ನಾಗರಿಕರಿಗೆ ಆರೋಗ್ಯ ವೆಚ್ಚಗಳೂ ಅಧಿಕವಾಗಿರುತ್ತವೆ. ಬೆಲೆ ಏರಿಕೆ ಮತ್ತು ಹಣದುಬ್ಬರ ಈ ದಿನಗಳ ಅನಿವಾರ‍್ಯ ಕಂಟಕವಾಗಿದ್ದು, ಕೊರೊನಾ ಲಾಕ್‌ಡೌನ್‌ನಿಂದಾಗಿ ಪರಿಸ್ಥಿತಿ ಮತ್ತಷ್ಟು ವಿಷಮಿಸಿದೆ. ಮುಂದಿನ ದಿನಗಳು ದುಡಿಯುವವರಂತೆಯೇ ಹಿರಿಯ ನಾಗರಿಕರಿಗೂ ಕಷ್ಟದಾಯಕವಾಗಿದ್ದು, ತಮ್ಮ ಉಳಿತಾಯಕ್ಕೆ ನ್ಯಾಯಯುತ ಬಡ್ಡಿಯನ್ನು ಅವರು ನಿರೀಕ್ಷಿಸುತ್ತಿದ್ದಾರೆ.
ಈ ನಡುವೆ ಅನೇಕ ಆತಂಕಗಳು ಕೊರೊನಾ ನಂತರದ ದೇಶದ ಆರ್ಥಿಕ ಸ್ಥಿತಿಯಲ್ಲಿ ಸಂಭವಿಸಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಉದ್ಯೋಗಗಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಕಡಿತವಾಗಬಹುದು. ಇರುವ ಉದ್ಯೋಗಿಗಳೇ ಕೆಲಸ ಕಳೆದುಕೊಳ್ಳಬೇಕಾದೀತು. ಇಂಥ ಸನ್ನಿವೇಶದಲ್ಲಿ ಜನ ನೆಚ್ಚುವುದು, ತಮ್ಮ ಅಳಿದುಳಿದ ಉಳಿತಾಯದ ಹಣವನ್ನೇ. ಬ್ಯಾಂಕುಗಳು ತಮ್ಮ ಉಳಿತಾಯದ ಹಣಕ್ಕೆ ಸುರಕ್ಷಿತ ಎಂದೇ ಜನತೆ ಭಾವಿಸಿದ್ದಾರೆ. ಆದರೆ, ಅಲ್ಪ ಬಡ್ಡಿಗೆ ಯಾರೂ ಹಣವನ್ನು ಇಡಲಾರರು. ಅದರ ಬದಲು ಖಾಸಗಿ ಸಾಹಸಗಳ ಮೊರೆ ಹೋಗಬಹುದು. ಇದು ವಂಚನೆಗಳ ಸಾಧ್ಯತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಜನತೆ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ವಿಶ್ವಾಸವನ್ನು ಕಳೆದುಕೊಳ್ಳಬಹುದು. ಮುಂಬರುವ ಕಷ್ಟದ ದಿನಗಳಲ್ಲಿ ಎಲ್ಲರ ಹಿತ ಕಾಪಾಡಿಕೊಳ್ಳಲು ಆರ್‌ಬಿಐ ಮುಂದಾಗಬೇಕು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top