ಬ್ಯಾಂಕ್‌ ಗ್ರಾಹಕರ ವಿಶ್ವಾಸಕ್ಕೆ ಗುನ್ನ

– ಪ್ರೊ. ಬಿ.ಎಂ. ಕುಮಾರಸ್ವಾಮಿ.

ಬ್ಯಾಂಕಿಂಗ್‌ ವ್ಯವಸ್ಥೆಯ ಅತ್ಯಂತ ಅಮೂಲ್ಯ ಆಸ್ತಿ ಎಂದರೆ, ಗ್ರಾಹಕರು ಅದರ ಮೇಲೆ ಇಟ್ಟಿರುವ ನಂಬಿಕೆ. ತಾವು ಬ್ಯಾಂಕಿನಲ್ಲಿ ಇಟ್ಟಿರುವ ಹಣ ಸುರಕ್ಷಿತವಾಗಿರುತ್ತದೆ ಹಾಗೂ ತಾವು ಕೇಳಿದಾಗ ಅದು ತಮಗೆ ದೊರೆಯುತ್ತದೆ ಎಂಬ ಗ್ರಾಹಕರ ವಿಶ್ವಾಸವೇ ಬ್ಯಾಂಕಿನ ಅಮೂಲ್ಯ ಆಸ್ತಿ. ಗ್ರಾಹಕರ ನಂಬಿಕೆಯನ್ನು ಉಳಿಸಿಕೊಳ್ಳುವುದು ಬ್ಯಾಂಕಿನ ಆದ್ಯ ಕರ್ತವ್ಯ. ಏಕೆಂದರೆ ಗ್ರಾಹಕರ ಠೇವಣಿ ಹಣವೇ ಬ್ಯಾಂಕಿನ ಪ್ರಧಾನ ಬಂಡವಾಳ. ಗ್ರಾಹಕರ ನಂಬಿಕೆಗೆ ಧಕ್ಕೆ ಬಂದಾಗ ಬ್ಯಾಂಕಿನ ಅವನತಿ ಪ್ರಾರಂಭ. ಅಂಥ ದುರ್ಗತಿ ಈಗ ಬಂದಿದೆ.
ಬೇಲ್‌ ಇನ್‌
ಕೇಂದ್ರ ಸರಕಾರ F.R.D.I. (Financial Resolution and Deposit Insurance)
ಮಸೂದೆಯನ್ನು 10.08.2017ರಂದು ಸಂಸತ್ತಿನಲ್ಲಿ ಮಂಡಿಸಿತು. ಇದರಲ್ಲಿ ಇದ್ದ ‘‘ಬೇಲ್ ಇನ್’’ ಎಂಬ ಕ್ಲಾಸ್‌ನಿಂದ ಜನಗಳಿಗೆ ಬ್ಯಾಂಕುಗಳಲ್ಲಿ ತಮ್ಮ ಹಣ ಸುರಕ್ಷಿತವಲ್ಲ ಎಂಬ ಭಯ ಹುಟ್ಟಿತು. ಒಂದು ಬ್ಯಾಂಕು ಮುಳುಗಿಹೋಗುವ ಪರಿಸ್ಥಿತಿಯಲ್ಲಿದ್ದಾಗ ಆ ಬ್ಯಾಂಕಿನಲ್ಲಿರುವ ಜನಗಳ ಠೇವಣಿ ಹಣದಲ್ಲಿ ಡಿಪಾಸಿಟ್‌ ಇನ್ಷೂರೆನ್ಸ್‌ ಮೊತ್ತಕ್ಕಿಂತ ಹೆಚ್ಚುವರಿಯಾದ ಹಣವನ್ನು ಹಿಂದಿರುಗಿಸಲು ನಿರಾಕರಿಸಬಹುದು ಅಥವಾ ಆ ಹಣವನ್ನು ಕಡ್ಡಾಯವಾಗಿ ಬ್ಯಾಂಕಿನ ಶೇರುಗಳಾಗಿ ಪರಿವರ್ತಿಸಬಹುದಾಗಿತ್ತು. ಇದೇ ಬೈಲ್‌-ಇನ್‌ ಕ್ಲಾಸ್‌. ಅದು ಒಂದು ಲಕ್ಷ ರೂ. ಮಾತ್ರ. ಅಂದರೆ ಬ್ಯಾಂಕಿನಲ್ಲಿ ನಿಮ್ಮ ಠೇವಣಿ 10 ಲಕ್ಷ ರೂ. ಇದ್ದರೂ, ನಿಮಗೆ ಸಿಗುವುದು 1 ಲಕ್ಷ ರೂ. ಮಾತ್ರ. ಉಳಿದ ಹಣವನ್ನು ಬ್ಯಾಂಕು ಹಿಂತಿರುಗಿಸಲು ನಿರಾಕರಿಸಬಹುದು ಅಥವಾ ನಿಮ್ಮನ್ನು ಕೇಳದೆಯೇ ಬ್ಯಾಂಕಿನ ಶೇರುಗಳಾಗಿ ಪರಿವರ್ತಿಸಬಹುದು. ಇದರಿಂದ ಜನಗಳಿಗೆ ಬ್ಯಾಂಕುಗಳಲ್ಲಿ ತಮ್ಮ ಹಣ ಸುರಕ್ಷಿತವಲ್ಲ ಎಂಬುದು ಖಾತ್ರಿಯಾಯಿತು. ದೇಶಾದ್ಯಂತ ಜನ ಆಕ್ರೋಶ ವ್ಯಕ್ತಪಡಿಸಿದರು. 2018ರ ಆಗಸ್ಟ್‌ನಲ್ಲಿ ಕೇಂದ್ರ ಮಸೂದೆಯನ್ನು ವಾಪಾಸು ಪಡೆಯಿತು.
ಹೋದೆಯಾ ಪಿಶಾಚಿ ಅಂದ್ರೆ…
ಜನ ಸಮಾಧಾನದ ನಿಟ್ಟುಸಿರು ಬಿಡುವ ಹೊತ್ತಿಗೆ, ‘ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕಿಯಲ್ಲಿ’ ಎಂಬಂತೆ, ಕೇಂದ್ರ ಸರಕಾರ ಅದಕ್ಕಿಂತಲೂ ಪ್ರಬಲವಾದ
F.S.D.R. (Financial Sector Development and Regulation) Bill
ಅಂದರೆ ‘ಹಣಕಾಸು ಕ್ಷೇತ್ರದ ಅಭಿವೃದ್ಧಿ ಮತ್ತು ನಿಯಂತ್ರಣ ಮಸೂದೆ’ಯನ್ನು 2021ರ ಬಜೆಟ್‌ ಅಧಿವೇಶನದಲ್ಲಿ ಸಂಸತ್ತಿನಲ್ಲಿ ಮಂಡಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಬ್ಯಾಂಕ್‌ ಗ್ರಾಹಕರು ಮತ್ತೊಂದು ಶಾಕ್‌ಗೆ ಸಿದ್ಧರಾಗಬೇಕಾಗಿದೆ.
ಮಸೂದೆಯ ಪ್ರಮುಖ ಅಂಶಗಳು
ಈ ಮಸೂದೆಯ ಪ್ರಧಾನ ಅಂಗವೆಂದರೆ, ‘ಪರಿಹಾರ ಪ್ರಾಧಿಕಾರ’(resolution authority)ದ ಸ್ಥಾಪನೆ. ದೇಶದ ಎಲ್ಲಾ ಹಣಕಾಸು ಸಂಸ್ಥೆಗಳ ಸಮಸ್ಯಾ ಪರಿಹಾರ ಜವಾಬ್ದಾರಿ ಪರಿಹಾರ ಪ್ರಾಧಿಕಾರಕ್ಕೆ ಸೇರಿರುತ್ತದೆ. ಸಾರ್ವಜನಿಕ ಹಾಗೂ ಖಾಸಗಿ ಕ್ಷೇತ್ರದ ಎಲ್ಲಾ ವಾಣಿಜ್ಯ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಇನ್ಷೂರೆನ್ಸ್‌ ಕಂಪೆನಿಗಳು, ಶೇರು ವಿನಿಮಯ ಸಂಸ್ಥೆಗಳು- ಸೆಬಿ ಇತ್ಯಾದಿ- ಪ್ರಾಧಿಕಾರದ ನಿಯಂತ್ರಣಕ್ಕೆ ಒಳಪಡುತ್ತವೆ. ಹಣಕಾಸು ಕ್ಷೇತ್ರದ ವಿವಿಧ ನಿಯಂತ್ರಕರಾದ ರಿಸರ್ವ್‌ ಬ್ಯಾಂಕು, ಸೆಬಿ, ಇನ್ಷೂರೆನ್ಸ್‌ ಕ್ಷೇತ್ರದ ನಿಯಂತ್ರಕರು ಎಲ್ಲರೂ ಪ್ರಾಧಿಕಾರದ ಸದಸ್ಯರಾಗಿರುತ್ತಾರೆ.
ಇದುವರೆಗೆ ಬ್ಯಾಂಕ್‌ ಠೇವಣಿಗಳ ವಿಮೆಗೆ ಸಂಬಂಧಿಸಿದಂತೆ ಡಿಪಾಸಿಟ್‌ ಇನ್ಷೂರೆನ್ಸ್‌ ಆ್ಯಂಡ್‌ ಕ್ರೆಡಿಟ್‌ ಗ್ಯಾರಂಟಿ ಕಾಪೊರ್‍ರೇಷನ್‌ ಎಂಬ ಸಂಸ್ಥೆ ಇತ್ತು. ಹೊಸ ಮಸೂದೆ ಪ್ರಕಾರ ಬ್ಯಾಂಕ್‌ ಠೇವಣಿಗಳ ಮೇಲೆ ಎಷ್ಟು ಇನ್ಷೂರೆನ್ಸ್‌ ನೀಡಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರವೂ ಪರಿಹಾರ ಪ್ರಾಧಿಕಾರಕ್ಕೆ ಸೇರುತ್ತದೆ. ಪ್ರಾಧಿಕಾರವನ್ನು ‘ಸೂಪರ್‌ ರೆಗ್ಯುಲೇಟರಿ ಅಥಾರಿಟಿ’ ಎಂದು ಕರೆಯಬಹುದು.
‘ಬೇಲ್‌-ಇನ್‌’ ಹೊಸ ರೂಪದಲ್ಲಿ
ಎಫ್‌ಆರ್‌ಡಿಐ ಮಸೂದೆಯಲ್ಲಿದ್ದ ಜನವಿರೋಧಿ ಅಂಶ ‘ಬೇಲ್‌-ಇನ್‌’ ಹೊಸ ಮಸೂದೆಯಲ್ಲಿಯೂ ಬಂದಿದೆ; ಆದರೆ ಬೇರೆ ರೂಪದಲ್ಲಿ. ಯಾವುದಾದರೂ ಬ್ಯಾಂಕು ಮುಳುಗಡೆ ಸಮಸ್ಯೆಗೆ ಸಿಕ್ಕಿಕೊಂಡಾಗ ಆ ಸಮಸ್ಯೆಯ ಪರಿಹಾರಕ್ಕೆ ಪ್ರಾಧಿಕಾರ 7 ಮಾರ್ಗಗಳನ್ನು ಅನುಸರಿಸಬಹುದು. ಅವುಗಳಲ್ಲಿ ಒಂದು, Cancellation / Modification of liabilities- ಹೊಣೆಗಾರಿಕೆಗಳ ನಿರಾಕರಣೆ/ ಪರಿವರ್ತನೆ.
ಗ್ರಾಹಕರಿಂದ ಪಡೆದ ಠೇವಣಿಗಳನ್ನು ಅವರು ಕೇಳಿದಾಗ ಹಿಂದಿರುಗಿಸಬೇಕಾದ್ದು ಒಂದು ಬ್ಯಾಂಕಿನ ಅತಿ ಮುಖ್ಯ ಹೊಣೆಗಾರಿಕೆ. ಹೊಣೆಗಾರಿಕೆಗಳ ನಿರಾಕರಣೆ/ ಪರಿವರ್ತನೆ ಎಂದರೆ ಮುಳುಗುತ್ತಿರುವ ಬ್ಯಾಂಕಿನ ಆಡಳಿತ ವರ್ಗ ಡಿಪಾಸಿಟ್‌ ಇನ್ಷೂರೆನ್ಸ್‌ ಮೊತ್ತ ಹೊರತುಪಡಿಸಿ ಹೆಚ್ಚುವರಿ ಠೇವಣಿಯನ್ನು ವಾಪಾಸು ಕೊಡುವುದಕ್ಕೆ ನಿರಾಕರಿಸಬಹುದು ಅಥವಾ ಮುಳುಗುತ್ತಿರುವ ಬ್ಯಾಂಕಿನ ಶೇರುಗಳಾಗಿ ಪರಿವರ್ತಿಸಬಹುದು. ಇದು ಹಳೆ ಮಸೂದೆಯಲ್ಲಿದ್ದ ಬೇಲ್‌-ಇನ್‌ ಕ್ಲಾಸ್‌ನ ಹೊಸ ರೂಪ. ಅಂದರೆ ಹೊಸ ಮಸೂದೆಯಲ್ಲೂ ಬ್ಯಾಂಕ್‌ನಲ್ಲಿ ನಾವಿಟ್ಟಿರುವ ಹಣ ಸುರಕ್ಷಿತವಲ್ಲ.
ಈ ಮಸೂದೆಯಲ್ಲಿ ಠೇವಣಿಗಳ ಮೇಲಿನ ವಿಮೆ ಮೊತ್ತ ನಿರ್ಧರಿಸುವುದೂ ಪ್ರಾಧಿಕಾರವೇ. ಅದು ಅಪಾಯದ ಪರಿಸ್ಥಿತಿಗೆ ತಕ್ಕಂತೆ ವಿಮೆ ಮೊತ್ತವನ್ನು ಏರಿಸಬಹುದು ಅಥವಾ ಇಳಿಸಲೂಬಹುದು. ಹೊಸ ಮಸೂದೆ ಮುಳುಗುತ್ತಿರುವ ಬ್ಯಾಂಕುಗಳಿಗೆ ಎರಡು ಅಧಿಕಾರಗಳನ್ನು ನೀಡುತ್ತದೆ. 1) ಒಪ್ಪಂದಗಳನ್ನು ಮುಕ್ತಾಯಗೊಳಿಸುವ ಅಧಿಕಾರ (Power to Terminate Contracts) ಮತ್ತು 2) ಸಾಲಗಳನ್ನು ಕಡಿತಗೊಳಿಸುವ ಅಧಿಕಾರ (Write down debts).
ಗ್ರಾಹಕರ ದೃಷ್ಟಿಯಿಂದ ಇವೆರಡೂ ಅಪಾಯಕಾರಿ.
ಬ್ಯಾಂಕುಗಳು ಗ್ರಾಹಕರಿಂದ ಪಡೆದ ಠೇವಣಿ ಹಣವನ್ನು ನಿರ್ದಿಷ್ಟ ಬಡ್ಡಿ ದರದಲ್ಲಿ ನಿರ್ದಿಷ್ಟ ಸಮಯದಲ್ಲಿ ಹಿಂದಿರುಗಿಸುವ ಒಪ್ಪಂದ ಮಾಡಿಕೊಂಡಿರುತ್ತವೆ. ಮುಳುಗಡೆ ಸಂದರ್ಭದಲ್ಲಿ ತನ್ನನ್ನು ರಕ್ಷಿಸಿಕೊಳ್ಳಲು ಬ್ಯಾಂಕು ಗ್ರಾಹಕರ ಠೇವಣಿ ಹಣವನ್ನು ಹಿಂದಿರುಗಿಸಲು ನಿರಾಕರಿಸಬಹುದು. ಎರಡನೆಯದು, ನೀಡಿದ ಸಾಲಗಳನ್ನು ಕಡಿತಗೊಳಿಸುವ ಅಧಿಕಾರ. ಬ್ಯಾಂಕು ದೊಡ್ಡ ಕುಳಗಳಿಗೆ ನೀಡಿದ ದೊಡ್ಡ ಮೊತ್ತದ ಸಾಲವನ್ನು ವಜಾ ಮಾಡಬಹುದು.
2008ರ ನಂತರ ಭಾರತೀಯ ಬ್ಯಾಂಕುಗಳು ದಿನೇ ದಿನೆ ಅವನತಿಯ ಹಾದಿ ಹಿಡಿಯುತ್ತಿವೆ. ವಿಜಯ್‌ ಮಲ್ಯನ 9000 ಕೋಟಿ ರೂ. ಹಗರಣ, ನೀರವ್‌ ಮೋದಿಯ 13,000 ಕೋಟಿ ರೂ. ಹಗರಣ ಎಲ್ಲರಿಗೂ ತಿಳಿದದ್ದೇ. 31.03.2018ಕ್ಕೆ ಸಾರ್ವಜನಿಕ ಬ್ಯಾಂಕುಗಳ ವಸೂಲಾಗದ ಸಾಲ 9 ಲಕ್ಷ ಕೋಟಿ ರೂ. ಮುಟ್ಟಿತ್ತು. 2019ರ ಸೆಪ್ಟೆಂಬರ್‌ ಹೊತ್ತಿಗೆ 8 ಲಕ್ಷ ಕೋಟಿ ರೂ. ಆಗಿತ್ತು. ಜೊತೆಗೆ ಪಂಜಾಬ್‌ ಆ್ಯಂಡ್‌ ಮಹಾರಾಷ್ಟ್ರ ಸಹಕಾರ ಬ್ಯಾಂಕ್‌ ಹಾಗೂ ಬೆಂಗಳೂರಿನ ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್‌ಗಳ ಮುಳುಗಡೆ ಹಾಗೂ ಅಲ್ಲಿ ಠೇವಣಿ ಇಟ್ಟು, ಹಣ ಪಡೆಯಲಾರದ ಗ್ರಾಹಕರ, ವಯೋವೃದ್ಧರ ಸಾವು ನೋವು ಎಲ್ಲವೂ ಜನಸಾಮಾನ್ಯರಲ್ಲಿ ಬ್ಯಾಂಕುಗಳ ಬಗ್ಗೆ ನಂಬಿಕೆಯೇ ಹೋಗುವಂತೆ ಮಾಡಿವೆ. ಪ್ರತಿ ವರ್ಷ ಬ್ಯಾಂಕ್‌ಗಳು ಕೋಟ್ಯಂತರ ರೂ. ವಸೂಲಾಗದ ಕಾಪೊರ್‍ರೇಟ್‌ ಸಾಲಗಳನ್ನು ರೈಟಾಫ್‌ ಮಾಡುತ್ತವೆ. ಉದಾಹರಣೆಗೆ ಏಪ್ರಿಲ್‌ 2014ರಿಂದ ಸೆಪ್ಟೆಂಬರ್‌ 2017ರ ಮೂರು ವರ್ಷಗಳ ಅವಧಿಯಲ್ಲಿ 2.41 ಲಕ್ಷ ಕೋಟಿ ರೂ. ವಸೂಲಾಗದ ಸಾಲ ರೈಟಾಫ್‌ ಮಾಡಿವೆ ಎಂದು ವಿತ್ತ ಮಂತ್ರಿಗಳು ಏಪ್ರಿಲ್‌ 2018ರಲ್ಲಿ ಸಂಸತ್ತಿಗೆ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಳುಗುವ ಬ್ಯಾಂಕುಗಳನ್ನು ಬಚಾವು ಮಾಡಲು ಗ್ರಾಹಕರ ಠೇವಣಿ ಹಣವನ್ನೇ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ನೀಡುವಂಥ ಜನವಿರೋಧಿ ಮಸೂದೆಯನ್ನು ಎಲ್ಲರೂ ಒಕ್ಕೊರಲಿನಿಂದ ವಿರೋಧಿಸಬೇಕು. ಮಸೂದೆ ಮಂಡನೆಯೇ ಆಗದಂತೆ ನೋಡಿಕೊಳ್ಳಬೇಕು. ಭ್ರಷ್ಟ ರಾಜಕಾರಣಿಗಳು, ಹೊಣೆಗೇಡಿ ಬ್ಯಾಂಕ್‌ ಅಧಿಕಾರಿಗಳು ಹಾಗೂ ಮೋಸಗಾರ ಉದ್ಯಮಿಗಳು ಸೇರಿ ನಡೆಸಿದ ಹಗರಣಗಳಿಗೆ ಮುಗ್ಧ ಠೇವಣಿದಾರರು ಬೆಲೆ ತೆರಬೇಕು ಎಂಬುದು ಯಾವ ನ್ಯಾಯ?

(ಲೇಖಕರು ಸ್ವದೇಶಿ ಆರ್ಥಿಕ ಚಿಂತಕರು)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top